Wednesday, 11th December 2024

ಚೆಡ್ಡಿಯಂತೆ ಧೋರಣೆಯೂ ಬದಲಾಗಬೇಕಿದೆ !

rss

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಸಂಘ ‘ಮಾರ್ಕೆಟಿಂಗ್’ಗೆ ಇಳಿಯಲೇ ಬೇಕಿದೆ. ಮಕ್ಕಳಿಗೆ ಆರೆಸ್ಸೆಸ್ ಎಂದರೇನೆಂದು ಅಪ್ಪ-ಅಮ್ಮ ಹೇಳುವುದಲ್ಲ, ಮಕ್ಕಳೇ ಪೋಷಕರಿಗೆ ಹೇಳುವಂತಾಗಬೇಕಿದೆ. ಸಂಘ ತನ್ನೆಲ್ಲ ಚಟುವಟಿಕೆಗಳ ನ್ನೊಳಗೊಂಡ ಮಾಹಿತಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ತೆರೆದಿಡಲಿ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ನಡೆಸುತ್ತಿರುವ ಸಮಾಜಮುಖಿ ಸೇವೆಗಳು, ಸಾಂಸ್ಕೃತಿಕ ಸಂವೇದನಾ ಕಾರ್ಯಗಳ ಕುರಿತು ನೂರರಲ್ಲಿ ಇಪ್ಪತ್ತು ಮಂದಿಗಷ್ಟೇ ತಿಳಿದಿದೆ. ಸಂಪೂರ್ಣ ತಿಳಿದುಕೊಂಡಿರುವವರು ನೂರರಲ್ಲಿ ಒಂದಿಬ್ಬರಷ್ಟೇ.

ಇನ್ನುಳಿದವರಿಗೆ ಆರೆಸ್ಸೆಸ್ ಅಂದರೇನು? ಅದು ಏನು ಮಾಡುತ್ತಿದೆ ಎಂಬುದರ ಅರಿವಿಲ್ಲ. ಮೈದಾನದಲ್ಲಿ ಸಾಂಕ್ ಗಮನಿಸುವ ಸಾಮಾನ್ಯರು ‘ಆರೆಸ್ಸೆಸ್ ಅಂದರೆ ಇದೇನಾ?’ ಎಂದುಕೊಳ್ಳುತ್ತಾರೆ. ಹೊರತು ಬಹುಮಂದಿಗೆ ಅದರ ಉದ್ದೇಶ, ವ್ಯಾಪ್ತಿಯ ಪರಿಚಯವೇ ಇಲ್ಲ. ಆರೆಸ್ಸೆಸ್‌ನ ದೌರ್ಭಾಗ್ಯವೆಂದರೆ ಅದರ ಕುರಿತು ತಿಳಿದುಕೊಳ್ಳುವ ಮನಸ್ಸಾಗುವ ಮೊದಲೇ ಅದರ ಬಗೆಗಿನ ಅವಿವೇಕಿಗಳ ಅಪಪ್ರಚಾರ ಕಿವಿ ತಲುಪಿರುತ್ತದೆ.

ರ್ಶರೀಕೃಷ್ಣ ಹುಟ್ಟುವ ಮೊದಲೇ, ಆತನನ್ನು ಕೊಲ್ಲಲು ಸಿದ್ಧನಾಗಿದ್ದ ಕಂಸನಂತೆ ಆರೆಸ್ಸೆಸ್ ಹುಟ್ಟುವಾಗಲೇ ಅದನ್ನು ವಿರೋಧಿ ಸುವವರೂ ಹುಟ್ಟಿಕೊಂಡಿದ್ದರು. ಎಪ್ಪತ್ತು ವರ್ಷಗಳಿಂದ ದೇಶಾದ್ಯಂತ ಇದ್ದ ಬಿಜೆಪಿಯೇತರ ಸರಕಾರದ ಭಾಗವಾಗಿದ್ದವ ರೆಲ್ಲರೂ ಸಂಘ ಪರಿವಾರದ ವಿರೋಧಿಗಳೇ ಆಗಿದ್ದರು. ಹೀಗಾಗಿ ಆರೆಸ್ಸೆಸ್‌ನ ಕಾರ್ಯಗಳು ದೇಶದ ಎಲ್ಲ ವರ್ಗದ ಜನರಿಗೆ ಇಂದಿಗೂ ತಲುಪಲೇ ಇಲ್ಲ. ಹೀಗಾಗಿ ಸಂಘವನ್ನು ಪ್ರಶಂಸಿಸುವುದಿರಲಿ, ಅದರ ಹೆಸರೆತ್ತುವುದೇ ಒಂದು ಅಪರಾಧ ಎಂಬಂತೆ ಮಾಡಲಾಗಿದೆ.

ಇದೀಗ ದೇಶದ ಬಹುತೇಕ ಕಡೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಮಾಜದಲ್ಲಿ ಸಂಘ ಪರಿವಾರದ ಅನುಭೂತಿ ಹೆಚ್ಚಾಗುತ್ತಿದೆ. ಇದು ವಿರೋಧಿಗಳಲ್ಲಿ ಕಳವಳ ಮೂಡಿಸುತ್ತಿದೆ. ಈ ಸಂಗಳು ಮಾತೃಭೂಮಿ, ದೇಶಾಭಿಮಾನ, ರಾಷ್ಟ್ರೀಯತೆಯ ಬೀಜವನ್ನು ಮತದಾರರಲ್ಲಿ ಬಿತ್ತಿ ಸಂಪೂರ್ಣ ದೇಶವನ್ನು ಆವರಿಸಿಕೊಂಡು ಬಿಡುತ್ತಾರೆಂಬ ಆತಂಕ ದೇಶಗೇಡಿ ಪಕ್ಷಗಳಲ್ಲಿ ಕಾಡಲಾರಂಭಿ
ಸಿದೆ.

ಈಗಾಗಲೇ ಮಲೆನಾಡು-ಕರಾವಳಿ ಭಾಗದಲ್ಲಿ ಆರೆಸ್ಸೆಸ್ ವೈಚಾರಿಕತೆಯಿಂದಾಗಿ ಅಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಉತ್ತರ ಕರ್ನಾಟಕ ದಲ್ಲೂ ಸಂಘದ ಸಂವೇದನೆಯಿಂದಾಗಿ ಬಿಜೆಪಿ ಗಟ್ಟಿಯಾಗಿ ಬೆಳೆಯುತ್ತಿದೆ. ಹೀಗಾಗಿ ಆರೆಸ್ಸೆಸ್ ಜನಪ್ರಿಯ ವಾದಷ್ಟೂ ಬಿಜೆಪಿ ಬೆಳೆಯುತ್ತದೆ. ಆದರೆ, ಜೋಕರ್‌ಗಳಂಥ ನಾಯಕರನ್ನಿಟ್ಟುಕೊಂಡು ಮಣ್ಣು ತಿನ್ನುತ್ತಿದ್ದರೂ ಬಿಜೆಪಿಯನ್ನು ಸೋಲಿಸ ಬೇಕಾದರೆ ಮೊದಲು ಸಂಘಪರಿವಾರವನ್ನು ಬಡಿಯಬೇಕೆಂಬ ಧಾವಾಂತ ರಾಜಕಾರಣಿಗಳಿಗೆ, ಅವರ ಎಡಗೈ ನೆಕ್ಕುವ ಗೂಬೆ ಮುಖಗಳ ಸೋಗಲಾಡಿಗಳಿಗೆ ಹೆಚ್ಚಾಗುತ್ತಿದೆ.

ಪರಿಣಾಮವೇ ಇಂದು ಪಠ್ಯಪುಸ್ತಕ ವಿಚಾರವನ್ನು ವಿವಾದ ಮಾಡಿ ಕೂರಿಸಲಾಗಿದೆ. ಇವರ ಇಂಥ ಅಸಹನೆಗಳೇ ಸಂಘವನ್ನು ರಕ್ಕಸ ತಾಲಿಬಾನಿಗಳಿಗೆ, ಭಯೋತ್ಪಾದಕರಿಗೆ ಹೋಲಿಸುವಷ್ಟು ಜ್ಞಾನಹೀನರನ್ನಾಗಿಸಿದೆ. ಇಂಥವರಿಗೆ ಸಂಘದ ಶಿಸ್ತನ್ನು ತೋರಿಸಬೇಕಾದರೆ ಆರೆಸ್ಸೆಸ್ ಕಾರ್ಯಕರ್ತರು ಹೊರಗೆ ಬಿಟ್ಟಿರುವ ಚಪ್ಪಲಿಗಳ ಸಾಲನ್ನು ತೋರಿಸಿದರೂ ಸಾಕು. ನೋಡಿ, ಕರ್ನಾಟಕದ ಸಂಘಪರಿವಾರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಜನಸೇವಾದಂಥ ಅನೇಕ ವಿದ್ಯಾಸಂಸ್ಥೆಗಳಿವೆ. ರಕ್ತನಿಧಿ, ವೈದ್ಯಕೀಯ ಸಂಸ್ಥೆ, ತಪಸ್ಸ್ ಎಂಬ ಅನಾಥ ವಿದ್ಯಾರ್ಥಿಗಳ ಆಶಾಕಿರಣ, ಜ್ಞಾನಹರಿಸುವ ಪುಸ್ತಕ ಪ್ರಕಾಶನ, ಯೋಗ ಧ್ಯಾನ ವ್ಯಾಯಾಮ ಶಾಲೆಗಳು, ದೀನದಲಿತರಿಗೆ ನೆರವಾಗುವ ಯೋಜನೆ, ಸಂರಕ್ಷ-ಸಂಕಲ್ಪ ಎಂಬ ಜಾತಿಧರ್ಮ ಭೇದಗಳಿಲ್ಲದ ವೈದ್ಯ ಕೀಯ ಸೇವಾ ಸಂರ್ಸತೆಗಳಿವೆ.

ಇನ್ನು ರಾಷ್ಟ್ರಮಟ್ಟದಲ್ಲಿ ಲಕ್ಷಾಂತರ ರಕ್ತನಿಧಿಗಳು, ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾಮಂದಿರಗಳು, ಐದು ಲಕ್ಷಕ್ಕೂ ಮಿಗಿಲು ಶಿಕ್ಷಕರು, ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಎರಡು ಕೋಟಿಗೂ ಹೆಚ್ಚು ಭಾರತೀಯ ಕಾರ್ಮಿಕರ ಸಂಘ ಸದಸ್ಯರು, ಒಂದು ಕೋಟಿಗೂ ಮಿಗಿಲಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು, ಸಾವಿರದ ಇನ್ನೂರಕ್ಕೂ ಹೆಚ್ಚು
ಪ್ರಕಾಶನ ಕೇಂದ್ರಗಳು, ಏಳು ಲಕ್ಷಕ್ಕೂ ಹೆಚ್ಚಿನ ಸೈನಿಕರ ತರಬೇತಿ ಶಿಬಿರಗಳು, ಹದಿನೈದು ಕೋಟಿಗೂ ಹೆಚ್ಚು ಬಿಜೆಪಿ ಕಾರ್ಯ ಕರ್ತರು, ಒಂದು ಕೋಟಿಗೂ ಹೆಚ್ಚು ವಿಶ್ವಹಿಂದೂ ಪರಿಷತ್ ಸದಸ್ಯರು, ಮೂವತ್ತು ಲಕ್ಷಕ್ಕೂ ಮೀರಿ ಬಜರಂಗ ದಳದ ಕಾರ್ಯಕರ್ತರು, ಒಂದೂವರೆ ಲಕ್ಷದಷ್ಟು ಜನಸೇವಾ ಯೋಜನಾ ಕೇಂದ್ರಗಳಲ್ಲದೇ, ಬುಡಕಟ್ಟು ಜನಾಂಗದ ಉದ್ಧಾರಕ್ಕಾಗಿಯೇ ಭಾರತೀಯ ವನವಾಸಿ ಕಲ್ಯಾಣ ಆಶ್ರಮ, ವನಬಂಧು ಪರಿಷತ್, ಸಂಸ್ಕಾರ ಭಾರತೀ, ವಿಜ್ಞಾನ ಭಾರತೀ, ನಿರುದ್ಯೋಗಿ ಗಳಿಗಾಗಿಯೇ ಲಘು ಉದ್ಯೋಗ ಭಾರತೀ, ಸೇವಾ ಸಹಯೋಗ ಪರಿಷತ್, ಅಂತಾರಾಷ್ಟ್ರಿಯ ಮಟ್ಟದ ಸೇವಾ ಇಂಟರ್ನ್ಯಾಷನಲ್, ಮಹಿಳೆಯರ ರಾಷ್ಟ್ರ ಸೇವಿಕಾ ಸಮಿತಿ, ಆರೋಗ್ಯ ಭಾರತಿ, ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಸಾಮರಸ್ಯ ಮಂಚ್, ಮುಸ್ಲಿಂ ರಾಷ್ಟ್ರೀಯ ಮಂಚ್, ಪರಿಶಿಷ್ಟ ವರ್ಗ-ಜಾತಿ ಅಭ್ಯುದಯದ ಪರಿಷತ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತೀಯ ವಿಚಾರ ಸಾಧನ, ಸಂಸ್ಕೃತ ಭಾರತೀ, ಭಾರತ ವಿಕಾಸ ಪರಿಷತ್, ಜಮ್ಮು- ಕಾಶ್ಮೀರ ಕ್ರೀಡಾ ಸಂಸ್ಥೆಗಳು, ದೃಷ್ಟಿ ಸಂಸ್ಥೆ, ಹಿಂದೂ ಸಹಾಯವಾಣಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಭಾರತೀಯ ರೈತಸಂಘ, ಸ್ವಾಮಿ ವಿವೇಕಾನಂದ ಕೇಂದ್ರ, ತಮಿಳುನಾಡಿನ ಹಿಂದೂ ಮುನ್ನಾನಿ ಸಂಸ್ಥೆ, ತರುಣ ಭಾರತ, ಅಖಿಲ ಭಾರತ ಗ್ರಾಹಕರ ಪರಿಷತ್, ಮಾಹಿತಿ ತಂತ್ರಜ್ಞಾನ ಮತ್ತು
ಮಾಧ್ಯಮದಲ್ಲಿನ ಹಿಂದೂಸ್ತಾನ ಸಮಾಚಾರ್, ವಿಶ್ವ ಸಂವಾದ ಕೇಂದ್ರಗಳು, ಭಾರತೀಯ ಇತಿಹಾಸ ಸಂಕಲನ ಸಮಿತಿ, ಸಮಾ  ನತೆ ಮತ್ತು ಸಾಮಾಜಿಕ ಬದ್ಧತೆಯ ಗ್ರಾಮೀಣ ಹಳ್ಳಿಗಳ (ಇನ್ ಸ್ಟ್ರಕ್ಚರ್) ಅಭಿವೃದ್ಧಿ ದ್ಯೇಯ ಹೊಂದಿರುವ ಏಕಲ್ ವಿದ್ಯಾಲಯ ಗಳು, ಧರ್ಮ ಜಾಗರಣ, ಭಾರತ ಭಾರತೀ, ಸಾವರ್ಕರ್ ಭವನ, ಶಿವಾಜಿ ಅಧ್ಯಾಯನ ಪೀಠ, ಹಿಂದೂ ಏಕತಾ ಮಂದಿರಗಳು, ರಾಷ್ಟ್ರೀಯ ಸಿಖ್ ಸಂಘ, ಸರ ಸ್ವತಿ ಶಿಶು ಮಂದಿರಗಳೆಂಬ ಗುರುಕುಲಗಳು, ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣ ನ್ಯಾಸ.

ಇವಿಷ್ಟನ್ನೂ ನಿಭಾಯಿಸುತ್ತಿರುವುದು ಅದೇ ಆರೆಸ್ಸೆಸ್ ಎಂಬ ವಿಶ್ವದ ಅತಿದೊಡ್ಡ ಸಾಮಾಜಿಕ ಸ್ವಯಂಸೇವಕ ಸಂಸ್ಥೆ. ಹೀಗೆ ಎಲ್ಲ ಜಾತಿಧರ್ಮಗಳು, ಶಿಕ್ಷಣದಿಂದ ಉದ್ಯೋಗದವರೆಗೂ, ದೀನದಲಿತರಿಂದ ಸೈನಿಕರವರೆಗೂ ಇಡೀ ದೇಶವನ್ನು ಕಟ್ಟುವ ಸಂಕಲ್ಪ ಹೊಂದಿರುವ ದೇಶವ್ಯಾಪಿ ಸಂಘ ಪರಿವಾರದ ಧ್ಯೇಯ ರಾಷ್ಟ್ರೀಯತೆಯೊಂದೇ. ದೇಶದ ಸ್ವಾಭಿಮಾನ, ಘನತೆ-ಗೌರವ, ಪರಂಪರೆ ಸಂಸ್ಕೃತಿ, ಸಂಸ್ಕಾರ, ನಾಗರಿಕತೆ, ಮಾನವೀಯ ಮೌಲ್ಯಗಳನ್ನು ಕಾಪಾಡುವ  ಸೈದ್ಧಾಂತಿಕತೆಯಿದೆಯೇ ಹೊರತು ಅನ್ಯ ಧರ್ಮವನ್ನು ದ್ವೇಷಿಸುವ, ವಿರೋಧಿಸುವ, ಅನ್ಯ ಧರ್ಮದ ಮೇಲೆ ಆಕ್ರಮಣ ಮಾಡುವ ಯಾವುದೇ ಸಿದ್ಧಾಂತಗಳಿಲ್ಲ.

ಕೊಳಚೆ ಪ್ರದೇಶಗಳಲ್ಲಿ, ದಲಿತಕೇರಿಗಳಲ್ಲಿ ಸಂಚರಿಸುವ ಸ್ವಯಂಸೇವಕರ ಅಂತಃಕರಣವಿದೆ. ಇದಕ್ಕಾಗಿ ಹಲವರು ತಂದೆ-ತಾಯಿ, ಸಂಸಾರವನ್ನು ತೊರೆದು ಸಹಜ ಸುಖಗಳನ್ನು ತ್ಯಾಗಮಾಡಿ ಸ್ವಯಂಸೇವಕರಾಗಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಂಡು ಎಲ್ಲರನ್ನೂ ಪ್ರೀತಿಸುವ ಅನಂತ ಮನೋಭಾವರಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದರೂ ಸೈನಿಕರಂತೆ ಧಾವಿಸಿ ಧರ್ಮಜಾತಿ ರಹಿತ ಸೇವೆ ನೀಡುವ ಸ್ವಯಂಸೇವಕರನ್ನು ಇಡೀ ಜಗತ್ತೇ ಶ್ಲಾಘಿಸುತ್ತಿದೆ.

ಅಸಲಿಗೆ ಪಠ್ಯದೊಳಗಿನ ಒಂದು ಭಾಗವಲ್ಲ, ಆರೆಸ್ಸೆಸ್ಸೇ ಒಂದು ಪಠ್ಯವಾಗಬೇಕಿದೆ. ಹೀಗಿದ್ದರೂ ಅವಿವೇಕಿಗಳಿಂದ ದೇಶದ್ರೋಹಿ
ಸಂಘಟನೆ ಎಂಬಂತೆ ಅಪಪ್ರಚಾರಕ್ಕೆ ಒಳಗಾಗುತ್ತಿರುವುದು ದುರ್ದೈವ. ಯಾಕೆ ಆರೆಸ್ಸೆಸ್ ಇನ್ನೂ ಮೌನವಾದೆ? ನಾವು ಮಾಡುವ ಕೆಲಸಕ್ಕೆ ಪ್ರಚಾರ ಬೇಕಿಲ್ಲ, ನಮ್ಮ ಕಾರ್ಯಗಳನ್ನು ಯಾರ ಮುಂದೆಯೂ ತೋರಿಸಿಕೊಳ್ಳುವ ಅವಶ್ಯಕತೆಯಿಲ್ಲ. ನಮಗೆ ಯಾರ ಪ್ರಮಾಣಪತ್ರವೂ ಬೇಕಿಲ್ಲ, ಯಾರಿಗೂ ತಲೆಬಾಗಬೇಕಿಲ್ಲ. ನಮ್ಮ ದೃಷ್ಟಿ ಏನಿದ್ದರೂ ದೇಶದ ಕಡೆಗೆ ಎಂಬ ಅತಿಯಾದ ಆತ್ಮ ವಿಶ್ವಾಸ, ಕಠೋರ ಬಿಗುಮಾನ, ಕಡುಪ್ರತಿಷ್ಠೆಯನ್ನು ಆರೆಸ್ಸೆಸ್ ಸದಸ್ಯರು ಹೊಂದಿರುವುದರಿಂದಲೇ ಇಂದು  ಕಂಡ ಕಂಡವರೆಲ್ಲ ಅದರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತ ತಪ್ಪು ಅಭಿಪ್ರಾಯ ಮೂಡಿಸಿ ರಾಜಕೀಯ ಮಾಡಲು ಅವಕಾಶವಾಗಿದೆ.

ಕಾಲಕ್ಕೆ ತಕ್ಕಂತೆ ಸಂಘವು ತನ್ನ ಸಮವಸವನ್ನು ಬದಲಿಸಿದೆ. ಹಾಗೆಯೇ ಅದರ ಧೋರಣೆಯೂ ಬದಲಾಗಲೇಬೇಕಿದೆ. ತನ್ನ ಲಾಭಕ್ಕಾಗಿ, ತೆವಲಿಗಾಗಿ, ಕುಟುಂಬಕ್ಕಾಗಿ, ಗುಲಾಮಗಿರಿಗಾಗಿ ಮತದಾರರಿಗೆ ಸುಳ್ಳುಗಳನ್ನು ಹೇಳುತ್ತ, ಗೂಬೆಯನ್ನು ನವಿಲೆಂದು ನಂಬಿಸುತ್ತ, ನಕಲಿ ಕಣ್ಣೀರಿಡುತ್ತ ಮತದಾರನಿಗೆ ಟೋಪಿ ಹಾಕುತ್ತಾ ಸಂವಿಧಾನಾತ್ಮಕ ಪದವಿಯಲ್ಲಿ ಕೂತು ಶಾಸಕಾಂಗವನ್ನು ಅಪಮೌಲ್ಯಗೊಳಿಸುತ್ತಿದ್ದಾರೆ.

ವ್ಯಾಪಾರಕ್ಕಾಗಿ ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳ ಅತಿಶಯ ಬಾಲಿಶ ಜಾಹೀರಾತುಗಳನ್ನು ನೀಡಿ ಸಮಾಜಕ್ಕೆ ದ್ರೋಹ ವೆಸಗುತ್ತಿವೆ. ಇಂಥದರಲ್ಲಿ ಆರೆಸ್ಸೆಸ್ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳ ಕುರಿತು ಶ್ರೀಸಾಮಾನ್ಯನಿಗೆ ತಿಳಿಸ ಬೇಕಾದರೆ ಪ್ರಚಾರವೆಂಬ ಅಸವನ್ನು ಬಳಸಲೇಬೇಕಿದೆ. ಸಂಘ ‘ಮಾರ್ಕೆಟಿಂಗ್’ಗೆ ಇಳಿಯಲೇಬೇಕಿದೆ. ಮಕ್ಕಳಿಗೆ ಆರೆಸ್ಸೆಸ್ ಎಂದರೇನೆಂದು ಅಪ್ಪ- ಅಮ್ಮ ಹೇಳುವುದಲ್ಲ, ಮಕ್ಕಳೇ ಪೋಷಕರಿಗೆ ಹೇಳುವಂತಾಗಬೇಕಿದೆ. ಸಂಘ ತನ್ನೆಲ್ಲ ಚಟುವಟಿಕೆಗಳ ನ್ನೊಳಗೊಂಡ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತೆರೆದಿಡಲಿ. ತನ್ನ ವೈದ್ಯಕೀಯ ಸೇವೆಯನ್ನು ದೊಡ್ಡದೊಡ್ಡ ಹೋಲ್ಡಿಂಗ್ಸ್ ಮೂಲಕ ಜನರಿಗೆ ತಿಳಿಯುವಂತೆ ಪ್ರಚಾರ ಮಾಡಬೇಕಿದೆ.

ಸಂಘದ ಕುರಿತು ಕಿರುಚಿತ್ರ ಚಲನಚಿತ್ರ ಧಾರವಾಹಿಗಳು ನಿರ್ಮಾಣವಾಗಿ ಜನಸಾಮಾನ್ಯರಿಗೆ ತಾಯಂದಿರಿಗೆ ತಲುಪುವಂತಾಗಲಿ. ಜಾತ್ಯತೀತ ಸೇವೆಯಲ್ಲಿರುವ ಕಾರ್ಯಗಳು ಮಾಧ್ಯಮಗಳ ಮೂಲಕ ಜಾಹೀರಾತಾಗಲಿ. ಪ್ರತಿ ಶಾಲೆಯ ಪಕ್ಕದಲ್ಲಿ ಸಂಘದಿಂದ ಮಕ್ಕಳಿಗೆ ಸಾಮಾಜಿಕ ಬದ್ಧತೆಗಳ ಸಂವಿಧಾನದ ಅರಿವು ಕರ್ತವ್ಯಗಳ ಕುರಿತ ವಿಶೇಷ ಕಾರ್ಯಗಾರವನ್ನು ನಡೆಸುವಂತಾಗಲಿ. ದೇಶಾಭಿಮಾನಿಗಳಾರು ದೇಶದ್ರೋಹಿಗಳಾರು ಎಂಬುದನ್ನು ಸುಲಭವಾಗಿ ಮಕ್ಕಳು ತಿಳಿಯುವಂತಾಗಲಿ.

ಒಂದು ಕೆಜಿ ಪೌಷ್ಟಿಕ ಆಹಾರ ಪದಾರ್ಥವನ್ನು ಮಾರಲು ನೂರಾರು ಸರ್ಕಸ್ ಮಾಡಿ ನಿಮ್ಮ ಆರೋಗ್ಯಕ್ಕಾಗಿಯೇ ಇದೆಂದು ಜಾಹೀರಾತು ಪ್ರಸಾರವಾಗುವ ಕಾಲವಿದು. ಹೀಗಿರುವಾಗ ದೇಶಕ್ಕಾಗಿ ದುಡಿಯುತ್ತಿರುವ, ದೇಶದ ಭವಿಷ್ಯದ ಭದ್ರತೆಗಾಗಿ
ಶ್ರಮಿಸುತ್ತಿರುವ ಆರೆಸ್ಸೆಸ್‌ಗೆ ತಾನೇನೆಂಬುದನ್ನು ಖಚಿತಪಡಿಸುವ ಅನಿವಾರ್ಯ ಇಲ್ಲವೇ? ಸರ್ವಜ್ಞರ ‘ಶ್ವಾನ ಬೊಗಳುತಿರಲಾನೆ ಯದನೊಂದು ಗಾನವೆಂದಂತೆ’ ಎಂದು ಸುಮ್ಮನಿರುವ ಕಾಲ ಇದಲ್ಲ.

ನಾಯಿ ಬೊಗಳುತ್ತಿದ್ದರೆ ಕೊಂಚ ನಿಂತು ಬುಟ್ಟಿಯೊಳಗಿನ ಬಿಸ್ಕತ್ತನ್ನು ಎಸೆದು ತಲೆಸವರಿ ಸುಮ್ಮನಾಗಿಸಬೇಕು. ಆಗ ಉಳಿದ ನಾಯಿಗಳೂ ಬಾಲ ಅಡಿಸುತ್ತವೆ. ಇಲ್ಲದಿದ್ದರೆ ಸಾರ್ವಜನಿಕರೇ ಆ ನಾಯಿಗಳನ್ನು ಗದರಿಸಿ ಅಟ್ಟುವಂತೆ ಜನರೊಂದಿಗೆ ತೆರೆದು ಕೊಳ್ಳಬೇಕು. ಇನ್ನು ಸಂಘ ಎಲ್ಲ ಕಡೆ ಶಿವಾಜಿಯನ್ನು ಹೆಚ್ಚಾಗಿ ವೈಭವಿಕರಿಸುತ್ತಿದೆ. ಸತ್ಯವೇನೆಂದರೆ ಶಿವಾಜಿ ಪ್ರೇರಣೆ
ಪಡೆದದ್ದೇ ವಿದ್ಯಾರಣ್ಯ ಹರಿಹರಬುಕ್ಕ, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯರನ್ನೊಳಗೊಂಡ ವಿಜಯನಗರ ಸಾಮ್ರಾಜ್ಯದ ಇತಿಹಾಸದಿಂದ.

೧೩೩೬ರಲ್ಲಿ ಸಾಮ್ರಾಜ್ಯ ಸ್ಥಾಪನೆಯಾಗದೇ ಇದ್ದಿದ್ದರೆ ಇಂದು ಈ ಸಿದ್ದರಾಮ, ಶಿವಕುಮಾರ, ರಾಮಚಂದ್ರಪ್ಪ ಎಂಬ ಹೆಸರುಗಳೇ ಇರುತ್ತಿರಲಿಲ್ಲ. ಒಬ್ಬ ಪರಿಪೂರ್ಣ ರಾಜ ಹೇಗಿರಬೇಕೆಂಬುದಕ್ಕೆ ರಾಜಾಧಿರಾಜನಾಗಿದ್ದ ಶ್ರೀಕೃಷ್ಣದೇವರಾಯನನ್ನು ಮೊದಲು
ಸಂಘವು ಸ್ಮರಿಸಬೇಕು. ಸ್ಥಳೀಯ ಇತಿಹಾಸ ಭಾಷೆಗೆ ಅನುಗುಣವಾಗಿ ಕನ್ನಡ ರಾಜರನ್ನು ಆರಾಧಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಹೊಟ್ಟೆಪಾಡಿನ ಹಾರಾಟಗಾರರು ಪೇಮೆಂಟ್ ಗಿರಾಕಿಗಳು ಸಂಘವನ್ನು ಹಿಂದಿವಾಲಗಳೆಂದು ಜರಿದು ಮತ್ತಷ್ಟು
ರಾದ್ಧಾಂತ ಮಾಡುವುದು ಖರೆ.

ಮೊದಲಿಗೆ ದಲಿತರ ವರ್ಗಕ್ಕೆ ಸಂಘವು ಹತ್ತಿರವಾಗಬೇಕಿದೆ. ಏಕೆಂದರೆ ಕೆಲ ಮುಸಲ್ಮಾನ ಸಂಘಟನೆಗಳು ದಲಿತರನ್ನೂ ತಮ್ಮೊಂದಿಗೆ ಸೇರಿಸಿಕೊಂಡು ಹಿಂದುತ್ವದ ವಿರುದ್ಧವೇ ಎತ್ತಿಕಟ್ಟುವ ಪ್ರಯತ್ನದಲ್ಲಿದೆ. ಆದ್ದರಿಂದ ಸಂಘವು ಈ ಕೂಡಲೇ ದಲಿತಕೇರಿಗಳಲ್ಲಿ ಸಂಚರಿಸಿ ಅವರಲ್ಲಿ ವಿಶ್ವಾಸ ಸ್ವಧರ್ಮದ ಮಹತ್ವ ಮತ್ತು ಬ್ರಾತೃತ್ವವನ್ನು ತುಂಬಿ ಅಶ್ಪೃಶ್ಯತೆಯ ಭಾವ ವನ್ನು ಹೋಗಲಾಡಿಸುವ ಕೆಲಸ ತುರ್ತಾಗಿ ಮಾಡಬೇಕಿದೆ. ಕನಿಷ್ಠ ಸಂಘ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ದಲಿತ ಮಕ್ಕಳಿಗೆ
ಒಂದಷ್ಟು ಕಾಲದವರೆಗೆ ಉಚಿತ ಶಿಕ್ಷಣ ನೀಡುವುದನ್ನು ಆರಂಭಿಸಬೇಕಿದೆ.

ಮಹಾಪತಿವ್ರತೆಯೊಬ್ಬಳು ಬೆಂಕಿಗೆ ಸಮಾನ. ಆಕೆಯ ಬಗ್ಗೆ ಸಿಕ್ಕಸಿಕ್ಕವರು ಅಯೋಗ್ಯರು ಹೀನಾಯವಾಗಿ ಮಾತನಾಡುತ್ತ ಆಕೆಯ ಬಗ್ಗೆ ಅಪಪ್ರಚಾರ ಮಾಡಿದರೆ ಏನಾಗುತ್ತದೆ? ಮಕ್ಕಳು ತನ್ನ ತಾಯಿಯ ಪರವಾಗಿ ಮಾತನಾಡಲೇ ಬೇಕು. ಆಕೆಯ ಬಗ್ಗೆ ಲೋಕಕ್ಕೆ ತಿಳಿಸಲೇ ಬೇಕು. ಇಲ್ಲದಿದ್ದರೆ ಆಕೆಯ ಮೊಮ್ಮಗನೇ ಆಕೆಯನ್ನು ಅವಮಾನಿಸುತ್ತಾನೆ. ಹಾಗೆಯೇ ಆರೆಸ್ಸೆಸ್ ಅನ್ನು ನಿಂದಿಸಿದಾಗ ಮೊದಲು ಸಾರ್ವಜನಿಕರೇ ನಿಂತು ಖಂಡಿಸಿ ಉತ್ತರಿಸುವಂತಾಗಬೇಕು. ಅದಕ್ಕಾಗಿ ಸಂಘ ಚೆಡ್ಡಿ ಬದಲಿಸಿದಂತೆ ಇಲ್ಲಿಯವರೆಗೂ ಇದ್ದ ಧೋರಣೆ ಮಡಿವಂತಿಕೆ ಅಂತರ್ಮುಖಿತನದಿಂದ ಹೊರಬಂದು ಸಾರ್ವ ಜನಿಕರಿಗೆ ಹತ್ತಿರವಾಗಬೇಕು. ಕಳೆದುಕೊಂಡ ಮೇಲೆ ಕೊಂಡಾಡುವುದು ಜನಗಳಿಗೆ ಇದ್ದೇ ಇರುತ್ತದೆ!