ಮೂರ್ತಿ ಪೂಜೆ
ಆರ್.ಟಿ.ವಿಠ್ಠಲ್ ಮೂರ್ತಿ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದ್ದಕ್ಕಿದ್ದಂತೆ ಆರೆಸ್ಸೆಸ್ ವಿರುದ್ಧ ಧ್ವನಿ ಎತ್ತುತ್ತಿರುವ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿ ಸಿದೆ. ಹಾಗೆ ನೋಡಿದರೆ ಸಂಘಪರಿವಾರದ ಟೊಂಗೆ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರದ ರುಚಿ ತೋರಿಸಿದವರೇ ಕುಮಾರಸ್ವಾಮಿ.ಅಷ್ಟೇ ಯಾಕೆ?ತೀರಾ ಇತ್ತೀಚೆಗೂ ಅವರು ಬಿಜೆಪಿ ಪರವಾದ ತಮ್ಮ ನಿಲುವನ್ನು ಹೊರಹಾಕಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ವಿಸ್ಮಿತಗೊಳಿಸಿದ್ದರು.
ಅಂತವರು ಈಗ ಇದ್ದಕ್ಕಿದ್ದಂತೆ ಆರೆಸ್ಸೆಸ್ ವಿರುದ್ಧ ಮುಗಿಬಿದ್ದಿರುವುದು, ಒಂದೇ ಸಮನೆ ಟೀಕೆಯ ಮಳೆಗರೆಯತೊಡಗಿರುವುದು ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಷವೇನಲ್ಲ. ಯಾಕೆಂದರೆ, ಕೆಲವೇ ದಿನಗಳ ಹಿಂದೆ ಕಾಂಗ್ರೆಸ್ ಜತೆಗಿನ ಮೈತ್ರಿ ಕಾಲಕ್ಕಿಂತ, ಬಿಜೆಪಿ ಜತೆಗಿನ ಮೈತ್ರಿ ಕಾಲ ಚೆನ್ನಾಗಿತ್ತು
ಎಂದವರು ಈಗ ಇದ್ದಕ್ಕಿದ್ದಂತೆ ಆರ್ಎಸ್ಎಸ್ ಬಗ್ಗೆ ಟೀಕಿಸಲು ಅವರ ರಾಜಕೀಯ ಲೆಕ್ಕಾಚಾರಗಳೇ ಕಾರಣ. 2023 ರ ವಿಧಾನಸಭಾ ಚುನಾವಣೆಗೆ ಹೋಗುವ ಮುನ್ನ ಅವರು ಜೆಡಿಎಸ್ ದಾರಿಯಲ್ಲಿ ಬಿದ್ದಿರುವ ಸೈಜು ಗಲ್ಲುಗಳನ್ನು ಪಕ್ಕಕ್ಕೆ ಸರಿಸದೆ ಅವರಿಗೆ ಬೇರೆ ದಾರಿಯಿಲ್ಲ ಎಂಬ ವಸ್ತುಸ್ಥಿತಿಯನ್ನು ಗ್ರಹಿಸಿದರೆ ಇದರ ಹಿಂದಿನ ಸತ್ಯಗಳು ಬಯಲಾಗುತ್ತಾ ಹೋಗುತ್ತವೆ. ಅಂದ ಹಾಗೆ ಸದ್ಯದ ಸ್ಥಿತಿಯಲ್ಲಿ ಯಾರೇನೇ ಹೇಳಿದರೂ ರಾಜ್ಯ ಕಾಂಗ್ರೆಸ್ ದಿನದಿಂದ ದಿನಕ್ಕೆ ಬಲಿಷ್ಠವಾ
ಗುತ್ತಿರುವುದು ನಿಜ.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಡುತ್ತಿರುವ ಹೆಜ್ಜೆ ಇದಕ್ಕೆ ಮುಖ್ಯ ಕಾರಣ. ಅದೇ ರೀತಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಆಡಳಿತಾರೂಢ ಬಿಜೆಪಿಯ ಬಲ ಕುಸಿದಿದೆ. ಸದ್ಯಕ್ಕೆ ಆ ಜಾಗಕ್ಕೆ ಬಸವರಾಜ ಬೊಮ್ಮಾಯಿ ಬಂದು ಕುಳಿತಿದ್ದರೂ, ಅವರಿಗೆ ಕೂಲ್ ಸಿಎಂ ಬಿರುದು ಸಿಕ್ಕಿದೆಯೇ ಹೊರತು ಪಕ್ಷವನ್ನು ಮುನ್ನಡೆಸುವ ವಿಷಯದಲ್ಲಿ ಅವರಿಗೆ ದೊಡ್ಡ ಯಶಸ್ಸು ಸಿಗುತ್ತದೆ ಎನ್ನಲು ಕಾರಣಗಳಿಲ್ಲ. ಖುದ್ದು ಅವರೇ, ಹಾನಗಲ, ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಪಕ್ಷ ನನ್ನ ನೇತೃತ್ವದಲ್ಲಿ ಅಲ್ಲ, ಬದಲಿಗೆ ಸಾಮೂಹಿಕ ನಾಯಕತ್ವದಡಿ ಎದುರಿಸುತ್ತದೆ ಎಂದು ಹೇಳಿರುವುದು ಅವರು ಎಷ್ಟು ಬಲಿಷ್ಠ ನಾಯಕರು ಎಂಬುದಕ್ಕೆ ಸಾಕ್ಷಿ.
ವಸ್ತುಸ್ಥಿತಿ ಎಂದರೆ, ಬಸವರಾಜ ಬೊಮ್ಮಾಯಿ ಅವರು ಏನೇ ಮಾಡಲಿ, ಸಾಮೂಹಿಕ ನಾಯಕತ್ವದ ಬಗ್ಗೆ ಏನೇ ಹೇಳಲಿ. ಆದರೆ ಮುಂದಿನ ಬಿಜೆಪಿಯ ಮೂಲ ಶಕ್ತಿ ಎನ್ನಿಸಿಕೊಂಡ ಲಿಂಗಾಯತ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್ ಕಡೆ ಚೆದುರಿ ಹೋಗಲಿವೆ. ಹಾಗಾದಾಗ ಸಹಜವಾಗಿಯೇ ಬಿಜೆಪಿಯ ಬಲ ಕುಸಿಯುತ್ತದೆ. ಖುದ್ದು ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಉಳಿದುಕೊಂಡರೆ ಕೆಲ ಸೀಟುಗಳು ಹೆಚ್ಚಾಗಿ ಬರಬಹುದೇ ವಿನಃ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಯಡಿಯೂರಪ್ಪ ಅವರ ಸಾರಥ್ಯವಿದ್ದರೂ ನೂರಾ ನಾಲ್ಕರಷ್ಟು ಸ್ಥಾನಗಳು ಮಾತ್ರ ದಕ್ಕಿದ್ದವು. ಆದರೆ ಮುಂದಿನ ಬಾರಿ ಬಿಜೆಪಿಯ ಗಳಿಕೆ ಕುಸಿಯುವುದು ನಿಶ್ಚಿತ.
ಆದರೆ ಇಂತಹ ಕುಸಿತದ ನಡುವೆ ಅದು ಎಂಭತ್ತರಷ್ಟು ಸೀಟುಗಳನ್ನು ಗಳಿಸಿದರೆ ಮೈತ್ರಿ ಸರಕಾರದ ಭಾಗವಾಗಲು ಅದಕ್ಕೆ ಸಾಧ್ಯವಿದೆ. ಯಾವಾಗ ಅದಕ್ಕೆ ಇಂತಹ ಸಾಧ್ಯತೆ ಇರುತ್ತದೋ? ಆಗ ಅದು ಮೈತ್ರಿಗಾಗಿ ಮೊದಲು ನೋಡುವುದು ಜೆಡಿಎಸ್ ಕಡೆ. ಒಂದು ವೇಳೆ ಅದರ ಗಳಿಕೆ ಅರವತ್ತು ಸ್ಥಾನಗಳಿಗಿಂತ ಕಡಿಮೆಯಾದರೆ, ಮೈತ್ರಿಗಾಗಿ ಅದು ಬೇರೆ ಪಕ್ಷದ ಕಡೆ ತಿರುಗಿ ನೋಡುವುದೂ ಕಷ್ಟವಾಗಬಹುದು. ಈ ವಾತಾವರಣ ಏನನ್ನು ಸೂಚಿಸುತ್ತದೆ? ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ ಮಾತ್ರವಲ್ಲ, ಹೆಚ್ಚು ಕಡಿಮೆಯಾದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಅನಿವಾರ್ಯ ಎಂಬುದನ್ನಲ್ಲವೇ? ಆದರೆ ಬಿಜೆಪಿಗೆ ಇಂತಹ ಸ್ಥಿತಿ ಬರುವುದು ಜೆಡಿಎಸ್ಗೆ ಬೇಕಿಲ್ಲ.
ಯಾಕೆಂದರೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಕುಸಿದರೆ, ಮೈತ್ರಿ ಸರಕಾರ ರಚಿಸುವ ಕಡೆ ಗಮನ ಹರಿಸಲೂ ಅದಕ್ಕೆ ಶಕ್ತಿ ಇಲ್ಲದೆ ಹೋದರೆ ಅದರಿಂದ ಜೆಡಿಎಸ್ ಪಕ್ಷಕ್ಕೆ
ಸಮಸ್ಯೆ ಎದುರಾಗುತ್ತದೆ. ಇವತ್ತಿನ ಸ್ಥಿತಿಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಕುಮಾರಸ್ವಾಮಿ ಅದೇನೇ ಪ್ರಯತ್ನ ನಡೆಸುತ್ತಿರಬಹುದು. ಆದರೆ ಜೆಡಿಎಸ್ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುವುದು ಕಷ್ಟ. ಹೀಗಿzಗ ಅದು ಮೈತ್ರಿ ಸರಕಾರದಲ್ಲಿ ಪಾಲುದಾರನಾಗುವ ಬಗ್ಗೆಯೇ ಯೋಚಿಸಬೇಕಾಗುತ್ತದೆ. ಹೀಗೆ ಯೋಚಿಸು ವಾಗ ಅದಕ್ಕೆ ಸಿದ್ದರಾಮಯ್ಯ ಅವರಿರುವ ಕಾಂಗ್ರೆಸ್ ಪಕ್ಷ ಬೇಕಿಲ್ಲ. 2018 ರಲ್ಲಿ ಹೀಗೆ ಕಾಂಗ್ರೆಸ್ ಜತೆ ಕೈ ಜೋಡಿಸಿ ರಚಿಸಿದ ಸರಕಾರದ ಕತೆ ಏನಾಯಿ ತೆಂಬುದು ಗೊತ್ತೇ ಇದೆ.
ಹೀಗೆ ಗೊತ್ತಿದ್ದೂ, ಗೊತ್ತಿದ್ದೂ ಕಾಂಗ್ರೆಸ್ ಪಕ್ಷದ ಜತೆ ಕೈ ಜೋಡಿಸುವ ಆಸೆ ಅದಕ್ಕಿಲ್ಲ. ಹೀಗಾಗಿ ಅದರ ಕಣ್ಣ ಮುಂದಿರುವ ಏಕೈಕ ಶಕ್ತಿ ಎಂದರೆ ಬಿಜೆಪಿ. ಎಲ್ಲಿಯವರೆಗೆ ಯಡಿಯೂರಪ್ಪ ಅವರು ಆ ಪಕ್ಷದ ಮುಂಚೂಣಿಯಲ್ಲಿದ್ದರೋ?ಅಲ್ಲಿಯ ತನಕ ಅದರೊಂದಿಗೆ ಕೈ ಜೋಡಿಸುವುದು ಕಷ್ಟ ಎಂಬ ಸತ್ಯ ಜೆಡಿಎಸ್
ಗೂ ಗೊತ್ತಿದೆ. ಯಾಕೆಂದರೆ 2018 ರ ವಿಧಾನಸಭಾ ಚುನಾವಣೆಯ ನಂತರ ಯಡಿಯೂರಪ್ಪ ಅವರು ಸ್ವಲ್ಪ ಹೊಂದಾಣಿಕೆಗೆ ತಯಾರಾಗಿದ್ದರೆ, ಆಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಅಽಕಾರಕ್ಕೆ ಬರುತ್ತಿತ್ತು. ಅಂದ ಹಾಗೆ ಈ ಎರಡು ಶಕ್ತಿಗಳು ಕೈಗೂಡಿಸುವ ಅವಕಾಶ ಏಕಿತ್ತು ಎಂದರೆ, ವಿಧಾನಸಭಾ ಚುನಾವಣೆಯಲ್ಲಿ ಆ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿದ್ದವು. ಅದರ ಪ್ರಕಾರ, ಜೆಡಿಎಸ್ ಪಕ್ಷಕ್ಕೆ ಇಪ್ಪತ್ತೊಂಭತ್ತು ಕ್ಷೇತ್ರಗಳಲ್ಲಿ ಬಿಜೆಪಿಯ ಸಹಕಾರ ಇತ್ತು.
ಅದೇ ರೀತಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಅನು ಕೂಲ ಮಾಡಿಕೊಡುವ ಅಭ್ಯರ್ಥಿಗಳನ್ನು ಜೆಡಿಎಸ್ ಹೂಡಿತ್ತು. ಆದರೆ ಫಲಿತಾಂಶ ಬಂದಾಗ ಯಾವ ಪಕ್ಷಗಳಿಗೂ ಬಹುಮತ ಬಂದಿರಲಿಲ್ಲ. ಈ ಸಂದರ್ಭದಲ್ಲಿ ನೂರಾ ನಾಲ್ಕು ಸ್ಥಾನಗಳೊಂದಿಗೆ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ನೆಲೆಯಾಗಿತ್ತಾದರೆ, ಜೆಡಿಎಸ್ ಮೂರನೇ ಸ್ಥಾನದಲ್ಲಿತ್ತು. ಹೀಗೆ ನೂರಾ ನಾಲ್ಕು ಸ್ಥಾನಗಳನ್ನು ಗೆದ್ದು ಪಕ್ಷ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದರಿಂದ ಯಡಿಯೂರಪ್ಪ, ಸ್ವಯಂ ಆಗಿ ಸರಕಾರ ರಚಿಸಲು ಬಯಸಿದರು.
ಒಂದು ವೇಳೆ ಜೆಡಿಎಸ್ ಜತೆ ಸೇರಿ ಸರಕಾರ ರಚಿಸಿದರೆ ಅದಕ್ಕೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ. ಹಾಗೆ ಬಿಟ್ಟುಕೊಡುವುದಕ್ಕಿಂತ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ಒಳ್ಳೆಯದು ಎಂದವರು ಭಾವಿಸಿದರು. ಇಂತಹ ಭಾವನೆಗೆ ಮತ್ತೊಂದು ಕಾರಣವೂ ಇತ್ತು. ಅದೇನೆಂದರೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಕೆಲವೇ ಕಾಲದಲ್ಲಿ ಉರುಳಿಸಬಹುದು ಎಂಬ ನಂಬಿಕೆ ಅವರಿಗಿತ್ತು, ಹೀಗಾಗಿ ಉಪಮುಖ್ಯಮಂತ್ರಿ ಹುzಗೆ ತಲುಪಿಕೊಳ್ಳುವ ಬದಲು, ಕೆಲ ಕಾಲ ಕಾಯ್ದು ಮುಖ್ಯಮಂತ್ರಿ ಹುದ್ದೆಗೇರುವುದು ಒಳ್ಳೆಯದು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಈ ಲೆಕ್ಕಾಚಾರ ಮರು ವರ್ಷ ಈಡೇರಿತು ಎಂಬುದು ಈಗ ಇತಿಹಾಸ. ಈ ಅನುಭವವನ್ನು ಕಣ್ಣ ಮುಂದಿಟ್ಟುಕೊಂಡು ನೋಡಿದರೆ ಯಡಿಯೂರಪ್ಪ ಅವರ ನೇತೃತ್ವ ವಿಲ್ಲದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇಲ್ಲ. ಅದರ ಗಳಿಕೆ ಎಂಭತ್ತರ ಆಸುಪಾಸಿಗೆ ಸೀಮಿತವಾದರೆ ಅನಿವಾರ್ಯ ವಾಗಿ ಅದು ಜೆಡಿಎಸ್ ಜತೆ ಕೈಗೂಡಿಸಲು ಮುಂದಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಪಕ್ಷ ಈಗ ಯಡಿಯೂರಪ್ಪ ಅವರ ಹಿಡಿತದಲ್ಲಿಲ್ಲ. ಹೀಗಾಗಿ ಮುಂದಿನ ಚುನಾವಣೆಯ ನಂತರ ಮೈತ್ರಿ ಸರಕಾರ ಅನಿವಾರ್ಯವಾದರೆ ಜೆಡಿಎಸ್ ಜತೆ ಕೈಗೂಡಿಸಲು ಬಿಜೆಪಿ ಹಿಂದೆ ಸರಿಯುವುದಿಲ್ಲ. ಇದು ಕುಮಾರಸ್ವಾಮಿಯವರ ಸದ್ಯದ ಲೆಕ್ಕಾಚಾರ. ಆದರೆ ಬಿಜೆಪಿಯ ಗಳಿಕೆ ಎಂಭತ್ತರ ಆಸುಪಾಸಿನಲ್ಲಿದ್ದರೆ ಬೇರೆ ಮಾತು.
ಒಂದು ವೇಳೆ ಅಂತಹ ನಿರೀಕ್ಷೆ ಸುಳ್ಳಾಗಿ 2013 ರ ಪರಿಸ್ಥಿತಿ ಅದಕ್ಕೆ ಬಂದು ಬಿಟ್ಟರೇ? ಎಂಬುದು ಕುಮಾರಸ್ವಾಮಿ ಅವರ ಆತಂಕ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರೇನೋ ಬಿಜೆಪಿಯಲ್ಲಿರಬಹುದು. ಆದರೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗಿ, ಪಕ್ಷವನ್ನು ಅಧಿಕಾರಕ್ಕೆ ತರುವ ಅವರ ಕನಸು ಬಿದ್ದು ಹೋಗಿ ಹಲ ದಿನಗಳೇ ಆಗಿವೆ. ಅದೇ ರೀತಿ ಯಡಿಯೂರಪ್ಪ ಅವರನ್ನು ಬಲ್ಲವರಿಗೆ, ಅವರು ಇದೇ ಸ್ಥಿತಿಯಲ್ಲಿ ಬಹುಕಾಲ ಮುಂದುವರಿಯಲು ಬಯಸುವುದಿಲ್ಲ ಎಂಬುದೂ ಗೊತ್ತಿರು ತ್ತದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿ ಕೂಡಾ ಅಳತೆ ಮೀರಿ ಕುಸಿಯುವುದು ಕುಮಾರಸ್ವಾಮಿ ಅವರಿಗೆ ಬೇಕಿಲ್ಲ. ಇದೇ ಕಾರಣಕ್ಕಾಗಿ ಅವರು ಬಿಜೆಪಿಯ ಮರ್ದ್ ಇಂಡಿಯಾ ಆರೆಸ್ಸೆಸ್ ವಿರುದ್ಧ ಮುಗಿಬಿದ್ದಿದ್ದಾರೆ.
ಅಂದ ಹಾಗೆ ಸಂಘಪರಿವಾರದ ವಿಷಯದಲ್ಲಿ ಕುಮಾರಸ್ವಾಮಿ ಅವರ ತಂದೆ ಎಚ್.ಡಿ.ದೇವೇಗೌಡರೂ ದೊಡ್ಡ ಮಟ್ಟದಲ್ಲಿ ವಿರೋಧ ಮಾಡಿದವರಲ್ಲ. ಆದರೆ ಕುಮಾರಸ್ವಾಮಿ ಅವರು ಆರ್ಎಸ್ಎಸ್ ವಿರುದ್ಧ ಮುಗಿಬೀಳುವುದರ ಹಿಂದೆ ಒಂದು ತಂತ್ರವಿದೆ. ಅದೇನೆಂದರೆ, ಇಂತಹ ಟೀಕೆಯ ಮೂಲಕ ರಾಜ್ಯದ ಮುಸ್ಲಿಮ ರನ್ನು ಓಲೈಸುವುದು. ಸದ್ಯದ ಸ್ಥಿತಿಯಲ್ಲಿ ಬಿಜೆಪಿಯ ಧರ್ಮ ರಾಜಕಾರಣದ ವಿರುದ್ಧ ಇರುವ ಮುಸ್ಲಿಂ ಸಮುದಾಯ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜತೆ ನಿಂತಿದೆ. ಹೀಗೆ ಕಾಂಗ್ರೆಸ್ ಜತೆ ನಿಂತಿರುವ ಮುಸ್ಲಿಂ ಸಮುದಾಯದ ಮತಗಳನ್ನು ಒಡೆಯುವುದು ಕುಮಾರಸ್ವಾಮಿ ಅವರ ತುರ್ತು ಆದ್ಯತೆ.
ಹೀಗೆ ಮುಸ್ಲಿಮರ ಮತಗಳು ಒಡೆದರೆ ಅದರಿಂದ ಹಾನಿಯಾಗುವುದು ಕಾಂಗ್ರೆಸ್ ಪಕ್ಷಕ್ಕೆ. ಮತ್ತು ದೊಡ್ಡ ಮಟ್ಟದಲ್ಲಿ ಅದರ ಲಾಭವಾಗುವುದು ಬಿಜೆಪಿಗೆ. ಉತ್ತರ ಕರ್ನಾಟಕ ಭಾಗದ ಬಹುತೇಕ ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಇಂತಹ ಹಣಾಹಣಿಯ ಸಂದರ್ಭದಲ್ಲಿ ಜೆಡಿಎಸ್ ಮಧ್ಯೆ ನುಗ್ಗಿ, ಮುಸ್ಲಿಮರು ಮತ್ತು ಹಿಂದುಳಿದವರ ಮತಗಳನ್ನು ಪಡೆದರೆ, ನಿಶ್ಚಿತವಾಗಿ ಅದು ಕಾಂಗ್ರೆಸ್ಗೆ ಆಪತ್ತು ತರುತ್ತದೆ. ಮತ್ತು ಬಿಜೆಪಿಗೆ ಅನುಕೂಲಕರವಾಗುತ್ತದೆ.
ಹಾಗಾಗಲಿ ಎಂಬುದು ಕುಮಾರಸ್ವಾಮಿ ಅವರ ಬಯಕೆ. ಅಂದ ಹಾಗೆ ಅವರ ಈ ಲೆಕ್ಕಾಚಾರದ ಒಳಮರ್ಮ ಬಲ್ಲ ಬಿಜೆಪಿ ಕೂಡಾ ಕಳೆದ ಚುನಾವಣೆಯಂತೆ ಜೆಡಿಎಸ್ ಜತೆ ಒಳ ಒಪ್ಪಂದಕ್ಕೆ ಸಜ್ಜಾಗುತ್ತದೆ. ಎಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಣಾಹಣಿ ಇದೆಯೋ? ಅಂತಲ್ಲಿ ಕಾಂಗ್ರೆಸ್ಗೆ ಓಟಕ್ಕೆ ಧಕ್ಕೆಯಾಗುವ ಕ್ಯಾಂಡಿಡೇಟುಗಳನ್ನು ಅದು ಕಣಕ್ಕಿಳಿಸುತ್ತದೆ.
ಅರ್ಥಾತ್, ನೀ ನನಗಾದರೆ, ನಾ ನಿನಗೆ ಎಂಬ ಸೂತ್ರದಡಿ ರೂಪುಗೊಂಡಿರುವ ಗೇಮ್ ಪ್ಲಾನ್ ಇದು. ಅಂದ ಹಾಗೆ ಗಮನಿಸಬೇಕಾದ್ದೆಂದರೆ, ಕುಮಾರಸ್ವಾಮಿ ಅವರು ಆರ್ಎಸ್ ಎಸ್ ವಿರುದ್ಧ ಹಲವು ಬಾರಿ ಟೀಕಾ ಪ್ರಹಾರ ನಡೆಸಿದರೂ, ಬಿಜೆಪಿಯ ನಾಯಕರು ದೊಡ್ಡ ಮಟ್ಟದಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿಲ್ಲ.
ಯಾಕೆಂದರೆ ಕುಮಾರಸ್ವಾಮಿ ಅವರ ಆರ್ಎಸ್ಎಸ್ ಕುರಿತ ಟೀಕೆಯಿಂದ ಹಾನಿಯಾಗುವುದು ಕಾಂಗ್ರೆಸ್ಗೆ ಹೊರತು,ತಮಗಲ್ಲ ಎಂಬುದು ಬಿಜೆಪಿ ನಾಯಕರಿಗೆ
ಗೊತ್ತಿದೆ. ಯಾವ ದೃಷ್ಟಿಯಿಂದ ಗಮನಿಸಿದರೂ ಇದು ಕುತೂಹಲಕಾರಿ ಬೆಳವಣಿಗೆ.