Sunday, 15th December 2024

ಆರ್‌ಎಸ್‌ಎಸ್ ; ತಾಲಿಬಾನ್ ಅಲ್ಲಾ, ಅಲ್ಲಾ ..!

rss

ಹಂಪಿ ಎಕ್ಸ್‌ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ವ್ಯಕ್ತಿತ್ವ ವಿಕಸನದ ಪಾಠದಲ್ಲಿ ಒಂದು ನಕಾರಾತ್ಮಕ ತಂತ್ರವಿದೆ. ವ್ಯಕ್ತಿಯೊಬ್ಬನ ಘನತೆಯನ್ನು ಹಾಳುಮಾಡಲು ವಿರೋಧಿಗಳು ಒಂದು ತಂತ್ರ ಪ್ರಯೋಗಿಸು ತ್ತಾರೆ. ಅದೇನೆಂದರೆ, ಯಾವುದರಿಂದಲೂ ಗೆಲ್ಲಲು ಆಗದಿದ್ದಾಗ ಅಥವಾ ಗೆದ್ದನೆಂದು ತೋರಿಸಲು ಸಂಭಾವಿತ ವ್ಯಕ್ತಿಯನ್ನು ಇನ್ನಾವುದೋ ಒಂದು ಕೆಟ್ಟಕ್ರಿಯೆ ಅಥವಾ ವ್ಯಕ್ತಿಯೊಂದಿಗೆ ಹೋಲಿಸಿ ಪದೇಪದೇ ಆತನನ್ನು ದೂಷಿಸುತ್ತಿದ್ದರೆ ಸಮಾಜದಲ್ಲಿ ಆತನ ಮೇಲೆ ಒಂದಷ್ಟು ಮಂದಿಗಾದರೂ ಕೆಟ್ಟ ಭಾವನೆ ಖಂಡಿತಾ ಮೂಡುತ್ತದೆ.

ಆಗ ಆತನ ಬಗ್ಗೆ ಅರಿವಿಲ್ಲದವರು ಆತನನ್ನು ಅನುಮಾನದಿಂದ ನೋಡಲಾರಂಭಿಸುತ್ತಾರೆ. ಇದು ಹಳ್ಳಿ ಕಡೆ ಕಡ್ಡಿಪುಡಿ ಅಜ್ಜಿಯರು ಬಾಯಿಗೆ ಬಂದಂತೆ ಶಪಿಸುತ್ತಾ ಕೂರುತ್ತಾರಲ್ಲ ಹಾಗೆ. ಇಂದು ಕೆಲ ಮತಿಹೀನರು ಅವಿವೇಕಿಗಳು ಆರ್ ಎಸ್‌ಎಸ್ ಎಂಬ ಸಾತ್ವಿಕ ಸಂಘಟನೆಯನ್ನು ಮನುಕುಲ ವಿರೋಧಿ ತಾಲಿಬಾನ್ ನೊಂದಿಗೆ ಹೋಲಿಸಿ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇವರುಗಳಿಗೆ ತಾಲಿಬಾನಿಗಳನ್ನು ಮನಸೋ ಇಚ್ಛೆ ದೂಷಿಸಲು ಆಗುತ್ತಿಲ್ಲ ಮತ್ತು ಅಂಥ ‘ಮೀಟರೂ’ ಇವರಿಗಿಲ್ಲ.

ಅದಕ್ಕಾಗಿ ಅವೈಜ್ಞಾನಿಕವಾಗಿ ಅಸಂಬದ್ಧವಾಗಿ ಆರ್ ಎಸ್‌ಎಸ್ ಸಂಘಟನೆಯನ್ನು ಎಳೆದು ತಂದು ತಮ್ಮ ಮತಿಭ್ರಮಣೆಯನ್ನು ಪ್ರದರ್ಶಿಸುತ್ತಿದ್ದಾರೆ. ಅಲ್ಲಿಗೆ ಇವರ ಒಂದು ಮಟ್ಟದ ಅನುಭವ, ವಿವೇಕ, ಚಿಂತನೆ, ಜ್ಞಾನದ ಮೇಲೆ ನಾಯಿಯೊಂದು ಕಾಲೆತ್ತಿದಂತ್ತಾಗಿದೆ. ಇವರುಗಳಿಗೆ ತಾಲಿಬಾನ್ ಮತ್ತು ಆರ್‌ಎಸ್‌ಎಸ್ ಒಂದೇ ಎಂದು ಅನಿಸಿದರೆ ತಮ್ಮ ಕುಟುಂಬದ ಒಂದೈದು ಹೆಣ್ಣು ಮಕ್ಕಳನ್ನು ಅಫ್ಘಾನಿಸ್ತಾನಕ್ಕೂ, ಇನ್ನೊಂದೈದು ಹೆಣ್ಣು ಮಕ್ಕಳನ್ನು ಸಂಘ ಪರಿವಾರದ ಕಾರ್ಯಾ ಗಾರಗಳಿಗೆ ಒಂದ್ಹತ್ತು ದಿನ ಕಳುಹಿಸಿಲಿ. ಆ ಹೆಣ್ಣುಮಕ್ಕಳು ವಾಪಸ್ಸು ಯಾವ ಸ್ಥಿತಿಯಲ್ಲಿ ಬರುತ್ತಾರೆ ಎಂಬುದನ್ನು ಮನಗಂಡು ನಂತರ ತಾಲಿಬಾನ್ ಮತ್ತು ಆರ್‌ಎಸ್‌ಎಸ್ ಸಾಮ್ಯತೆ ಗಳನ್ನು ಪಟ್ಟಿಮಾಡಲಿ. ಆಗ ಖಂಡಿತಾ ಎಲ್ಲರೂ ಸೇರಿ ಆಸ್‌ಎಸ್‌ಎಸ್ ನಿಷೇಧಕ್ಕೆ ಪ್ರಯತ್ನಿಸೋಣ.

ನಾಚಿಕೆಯಾಗ ಬೇಕು ಇವರ ಜ್ಞಾನಕ್ಕೆ. ಸಂಘಪರಿವಾರವನ್ನು ತೆಗಳುವ ಮೊದಲು ಅವರು ನಡೆಸುವ ಬೈಠಕ್ ಸ್ಥಳದಲ್ಲಿ ಸ್ವಯಂ ಸೇವಕರು ಇರಿಸುವ ಕೇವಲ ಚಪ್ಪಲಿಗಳನ್ನು ನೋಡಿಯೇ ಇವರು ಅರಿಯಬೇಕಾದ್ದು ಸಾಕಷ್ಟಿದೆ. ಬೇರೇನೂ ಬೇಡ ಬೆಂಗಳೂರಿನ ಗವಿಪುರಂನಲ್ಲಿ ಸಂಘಪರಿವಾರ ನಡೆಸುವ ‘ಸಂರಕ್ಷ’ ಎಂಬ ವೈದ್ಯಕೀಯ ಸಂಸ್ಥೆಯಿದೆ. ಅಲ್ಲಿ ‘ತಲಸ್ಸೇಮಿಯಾ’ ಎಂಬ ರೋಗಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗಿಗಳ ದೇಹದಲ್ಲಿ ರಕ್ತವೇ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ಮೂರು ತಿಂಗಳ ಮಗುವಿನಿಂದ ಹದಿನೈದು ವರ್ಷದ ಮಕ್ಕಳವರೆಗೂ ಇಂತಿಷ್ಟು ದಿನಗಳಿಗೆ ಅಲ್ಲಿಗೆ ಬಂದು ರಕ್ತವನ್ನು ದೇಹಕ್ಕೆ ಸೇರಿಸಿಕೊಂಡು ಹೊರಡುತ್ತಾರೆ. ಇಲ್ಲಿಗೆ ಬರುವ ಬಹುಪಾಲು ರೋಗಿಗಳು ಮುಸಲ್ಮಾನರೇ ಆಗಿರುತ್ತಾರೆ.

ಅವರಿಗೆ ಈ ಸಂರಕ್ಷ ಸಂಸ್ಥೆ ಎಂಬುದು ದೈವಸ್ಥಾನವಾಗಿರುತ್ತದೆ. ಗೋಳಾಡುತ್ತಾ ಬಂದು ತಮ್ಮ ಮಕ್ಕಳಿಗೆ ರಕ್ತವನ್ನು ತುಂಬಿಸಿಕೊಂಡು ಹೋಗುತ್ತಾರಲ್ಲಾ, ಆ ಮುಸ್ಲಿಂರನ್ನು ಕೇಳಿ ನೋಡಿ ತಾಲಿಬಾನ್ ಮತ್ತು ಸಂಘಪರಿವಾರಕ್ಕೆ ಇರುವ ವ್ಯತ್ಯಾಸವೇನೆಂದು. ಟೆಂಟ್‌ನಲ್ಲಿ ಶೋಲೆ ಸಿನಿಮಾ ನೋಡಿ ಬಂದು ಅಮ್ಜದ್ ಖಾನ್ ಡೈಲಾಗ್ ಹೊಡೆದಂತೆ ಸಂಘ ಪರಿವಾರವನ್ನು ತೆಗಳುವುದು ಎಲ್ಎಲ್‌ಬಿ ಮಾಡಿರುವ ಪುಢಾರಿಗಳ, ಮುತ್ಸದ್ದಿಗಳ ಲಕ್ಷಣಗಳಲ್ಲ.

ಅದನ್ನು ಅತ್ಯಾಚಾರಿಗಳು ಪಿಕ್ ಪಾಕೆಟರ್‌ಗಳು ಸಹ ಮಾಡುತ್ತಾರೆ. ಆದರೆ ಕೇವಲ ಅಧಿಕಾರದ ತೆವಲಿಗಾಗಿ, ತಾನೊಬ್ಬ ಮಹಾಮುತ್ಸದ್ದಿ, ದಂಡನಾಯಕ ಎಂದು ತೋರಿಸಿಕೊಳ್ಳುವ ಭರದಲ್ಲಿ ಹತಾಶೆ ಅಜ್ಞಾನದಿಂದ ಮಾತನಾಡುವುದು ನೋಡುಗರ ದೃಷ್ಟಿಯಲ್ಲಿ ಅಧಮನಂತೆ ಕಾಣುತ್ತಾ ರೆಂಬುದನ್ನು ಮನಗಾಣಲಿ. ನಮ್ಮ ಕರ್ನಾಟಕದಲ್ಲೇ ಸಂಘಪರಿವಾರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಜನಸೇವಾದಂಥ ಅನೇಕ ವಿದ್ಯಾಸಂಸ್ಥೆಗಳಿವೆ, ರಕ್ತನಿಧಿಗಳಿವೆ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿವೆ, ತಪಸ್ಸ್ ಎಂಬ ಅನಾಥ ವಿದ್ಯಾರ್ಥಿಗಳ ಆಶಾಕಿರಣಗಳಿವೆ, ಅಮೋಘ ಜ್ಞಾನ ಹರಿಸುವ ಪುಸ್ತಕ ಪ್ರಕಾಶನಗಳಿವೆ.

ಯೋಗ ಧ್ಯಾನ ವ್ಯಾಯಾಮ ಶಾಲೆಗಳಿವೆ, ದೀನದಲಿತರಿಗೆ ನೆರವಾಗುವ ಯೋಜನೆಗಳಿವೆ. ಸಂರಕ್ಷ ಸಂಕಲ್ಪ ಎಂಬ ಜಾತಿಧರ್ಮ ಭೇದಗಳಿಲ್ಲಿದ ಅಪರೂಪದ
ವೈದ್ಯಕೀಯ ವ್ಯವಸ್ಥೆಗಳಿವೆ. ಇನ್ನು ರಾಷ್ಟ್ರಮಟ್ಟದಲ್ಲಿ ಹೇಳಬೇಕೆಂದರೆ ಲಕ್ಷಾಂತರ ರಕ್ತನಿಧಿಗಳು, ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾಮಂದಿರಗಳು, ಐದು ಲಕ್ಷಕ್ಕೂ ಮಿಗಿಲು ಶಿಕ್ಷಕರು, ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು, ಎರಡು ಕೋಟಿಗೂ ಹೆಚ್ಚು ಭಾರತೀಯ ಕಾರ್ಮಿಕರ ಸಂಘ ಸದಸ್ಯರುಗಳು, ಒಂದು ಕೋಟಿಗೂ ಮಿಗಿಲಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿಗಳು, ಹದಿನೈದು ಕೋಟಿಗೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಸಾವಿರದ ಇನ್ನೂರಕ್ಕೂ ಹೆಚ್ಚು
ಪ್ರಕಾಶನ ಕೇಂದ್ರಗಳು, ಏಳು ಲಕ್ಷಕ್ಕೂ ಹೆಚ್ಚಿನ ಸೈನಿಕರ ತರಬೇತಿ ಶಿಬಿರಗಳು, ಒಂದು ಕೋಟಿಗೂ ಹೆಚ್ಚು ವಿಶ್ವ ಹಿಂದೂ ಪರಿಷತ್ ಸದಸ್ಯರು, ಮೂವತ್ತು ಲಕ್ಷಕ್ಕೂ ಮೀರಿ ಬಜರಂಗದಳದ ಕಾರ್ಯಕರ್ತರು, ಒಂದೂವರೆ ಲಕ್ಷದಷ್ಟು ಜನಸೇವಾ ಯೋಜನಾ ಕೇಂದ್ರಗಳಲ್ಲದೇ, ಬುಡಕಟ್ಟು ಜನಾಂಗದ ಉದ್ಧಾರ ಕ್ಕಾಗಿಯೇ ‘ಭಾರತೀಯ ವನವಾಸಿ ಕಲ್ಯಾಣ ಆಶ್ರಮ, ವನಬಂಧು ಪರಿಷತ್, ಸಂಸ್ಕಾರ ಭಾರತೀ, ವಿಜ್ಞಾನ ಭಾರತೀ, ನಿರುದ್ಯೋಗಿಗಳಿಗಾಗಿಯೇ ಲಘು
ಉದ್ಯೋಗ ಭಾರತೀ, ಸೇವಾ ಸಹಯೋಗ ಪರಿಷತ್, ಅಂತಾರಾಷ್ಟ್ರೀಯ ಮಟ್ಟದ ಸೇವಾ ಇಂಟರ್ ನ್ಯಾಷನಲ್, ಮಹಿಳೆಯರ ರಾಷ್ಟ್ರ ಸೇವಿಕಾ ಸಮಿತಿ,
ಆರೋಗ್ಯ ಭಾರತಿ, ಸಮಾಜವನ್ನು ಒಗ್ಗೂಡಿಸುವ ಸಾಮಾಜಿಕ ಸಾಮರಸ್ಯ ಮಂಚ್, ಮುಸ್ಲಿಂ ರಾಷ್ಟ್ರೀಯ ಮಂಚ್, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಯ
ಅಭ್ಯುದಯದ ಪರಿಷತ್, ದೀನದಯಾಳ್ ಸಂಶೋಧನಾ ಸಂಸ್ಥೆ, ಭಾರತೀಯ ವಿಚಾರ ಸಾಧನ, ಸಂಸ್ಕೃತ ಭಾರತೀ, ಭಾರತ ವಿಕಾಸ ಪರಿಷತ್, ಜಮ್ಮ ಕಾಶ್ಮೀರ ಕ್ರೀಡಾ ಸಂಸ್ಥೆಗಳು, ದೃಷ್ಠಿ ಸಂಸ್ಥೆ, ಹಿಂದೂ ಸಹಾಯವಾಣಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಭಾರತೀಯ ರೈತ ಸಂಘ, ಸ್ವಾಮೀ ವಿವೇಕಾನಂದ ಕೇಂದ್ರ, ತಮಿಳುನಾಡಿನ ಹಿಂದೂ ಮುನ್ನಾನಿ ಸಂಸ್ಥೆ, ತರುಣ ಭಾರತ, ಅಖಿಲ ಭಾರತ ಗ್ರಾಹಕರ ಪರಿಷತ್, ಮಾಹಿತಿ ತಂತ್ರಜ್ಞಾನ ಮತ್ತ ಮಾಧ್ಯಮದಲ್ಲಿನ ಹಿಂದೂಸ್ತಾನ ಸಮಾಚಾರ್, ವಿಶ್ವ ಸಂವಾದ ಕೇಂದ್ರಗಳು, ಭಾರತೀಯ ಇತಿಹಾಸ ಸಂಕಲನ ಸಮಿತಿ, ಸಮಾನತೆ ಮತ್ತು ಸಾಮಾಜಿಕ ಬದ್ಧತೆಯ ಗ್ರಾಮೀಣ ಹಳ್ಳಿಗಳ (ಇನ್ರಾಸ್ಟ್ರಕ್ಚರ್) ಅಭಿವೃದ್ಧಿ ದ್ಯೇಯ ಹೊಂದಿರುವ ಏಕಲ್ ವಿದ್ಯಾಲಯಗಳು, ಧರ್ಮ ಜಾಗರಣ, ಭಾರತ ಭಾರತೀ, ಸಾವರ್ಕರ್ ಭವನ, ಶಿವಾಜಿ ಅಧ್ಯಾಯನ ಪೀಠ, ಹಿಂದೂ ಏಕತಾ ಮಂದಿರಗಳು, ರಾಷ್ಟ್ರೀಯ ಸಿಖ್ ಸಂಘ, ಸರಸ್ವತಿ ಶಿಶು ಮಂದಿರಗಳೆಂಬ ಗುರುಕುಲಗಳು. ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನ್ಯಾಸ.

ಇವಿಷ್ಟನ್ನೂ ನಿಭಾಯಿಸುತ್ತಿರುವುದು ಅದೇ ಆರ್‌ಎಸ್‌ಎಸ್ ಎಂಬ ವಿಶ್ವದ ಅತಿದೊಡ್ಡ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆ. ಹೀಗೆ ಸಮಾಜದಲ್ಲಿನ ಎಲ್ಲಾ ಜಾತಿ ಧರ್ಮಗಳು, ಶಿಕ್ಷಣದಿಂದ ಹಿಡಿದು ಉದ್ಯೋಗದವರೆಗೂ, ದೀನದಲಿತರಿಂದ ಸೈನಿಕರವರೆಗೂ ಇಡೀ ದೇಶವನ್ನು ಕಟ್ಟುವ ಸಂಕಲ್ಪ ಹೊಂದಿರುವ ದೇಶವ್ಯಾಪಿ ಸಂಘ ಪರಿವಾರದ ಧ್ಯೇಯ ಒಂದೇ. ಅದು ರಾಷ್ಟ್ರೀಯತೆ. ಈ ರಾಷ್ಟ್ರೀಯತೆಯಲ್ಲಿ ದೇಶದ ಸ್ವಾಭಿಮಾನ ಘನತೆ ಪ್ರತಿಷ್ಠೆ ಪರಂಪರೆ ಸಂಸ್ಕೃತಿ ಸಂಸ್ಕಾರ ಭಾರತೀಯರ ನಾಗರಿಕತೆ ಮಾನವೀಯ ಮೌಲ್ಯಗಳನ್ನು ಸ್ವಯಂ ರಕ್ಷಿಸುವ ತಾತ್ವಿಕತೆಗಳಿದ್ದರೂ ಅದರಲ್ಲಿ ಅನ್ಯ ಧರ್ಮವನ್ನು ದ್ವೇಷಿಸುವ, ಅನ್ಯಧರ್ಮದ ಮೇಲೆ ಆಕ್ರಮಣ ಮಾಡುವ, ವಿರೋಧಿಸುವ ಯಾವುದೇ ಸಿದ್ಧಾಂತಗಳಿಲ್ಲ.

ಕೊಳಚೆ ಪ್ರದೇಶಗಳಲ್ಲಿ ದಲಿತ ಕೇರಿಗಳಲ್ಲಿ ಸಂಚರಿಸುವ ಸ್ವಯಂ ಸೇವಕರು ಅವರ ನೋವಿಗೆ ಸ್ಪಂದಿಸುವ ಅಂತಃಕರಣವಿದೆ. ಇಂಥ ಸೇವಗಳಿಗೆ ಅದೆಷ್ಟೋ ಮಂದಿ ಯುವಕರು ವಿವಾಹವಾಗದೆ ತಂದೆ ತಾಯಿ ಸಂಸಾರವನ್ನು ತೊರೆದು ಸಹಜ ಸುಖಗಳನ್ನು ತ್ಯಾಗ ಮಾಡಿ ಸ್ವಯಂ ಸೇವಕರಾಗಿದ್ದಾರೆ. ತಮ್ಮದನ್ನು ನಾವು
ರಕ್ಷಿಸಿಕೊಂಡು ಎಲ್ಲರನ್ನೂ ಪ್ರೀತಿಸುವ ಅನಂತ ಮನೋಭಾವ ಹೊಂದಿರುವ ದೇಶದಲ್ಲಿ ಯಾವುದೇ ಮೂಲೆಯಲ್ಲಿ ನೆರೆ ಬರ ಪ್ರವಾಹ ಭೂಕಂಪ ಪ್ರಕೃತಿ
ವಿಕೋಪ ಸಂಭವಿಸಿದರೂ ಸೈನಿಕರಂತೆ ಧಾವಿಸಿ ಧರ್ಮ ಜಾತಿ ರಹಿತ ಸೇವೆ ನೀಡುವ ಸ್ವಯಂ ಸೇವಕರನ್ನು ಇಡೀ ಜಗತ್ತೇ ಒಪ್ಪಿಕೊಂಡು ಶ್ಲಾಘಿಸುತ್ತಿದೆ.

ಆದರೆ ಶತಮಾನದಿಂದ ನಡೆದು ಬಂದ ಸೇವೆಯನ್ನು ಇಂದು ಕೆಲ ಮನೋವಿಕೃತಿಗಳು ನರಕವಾಸಿ ಪಾಪಿ ತಾಲಿಬಾನ್‌ಗೆ ಹೋಲಿಸುತ್ತಿದ್ದಾರೆ. ಸಂಘ ಪರಿವಾರದ ತತ್ವಸಿದ್ಧಾಂತಗಳು ನಮ್ಮ ದೇಶದ ಸಂವಿಧಾನದ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸುತ್ತಿದೆ. ಸಂಘ ಪರಿವಾರವು ನಮ್ಮ ದೇಶದ ಪರಂಪರೆಯನ್ನು ಹೇಗೆ ಗೌರವಿಸುತ್ತದೆಯೋ ಅಷ್ಟೇ ನಮ್ಮ ಸಂವಿಧಾನವನ್ನು ಗೌರವಿಸಿಕೊಂಡು ಬರಲಾಗಿದೆ.

ನಮ್ಮ ಪ್ರಜಾಪ್ರಭುತ್ವದಿಂದಲೇ ಹದಿನೈದು ಕೋಟಿಗೂ ಹೆಚ್ಚಿನ ಸ್ವಯಂ ಸೇವಕರುಗಳಿದ್ದು, ಒಂದು ಲಕ್ಷಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಇವರಲ್ಲೇ ಸಂವಿ ಧಾನಾತ್ಮಕ ಚುನಾವಣೆಯನ್ನು ಎದುರಿಸಿಯೇ ಲಕ್ಷಾಂತರ ಗ್ರಾಮ ಪಂಚಾಯಿತಿ ಸದಸ್ಯರುಗಳು, 1430 ಶಾಸಕರು, ಮುನ್ನೂರಕ್ಕು ಹೆಚ್ಚು ಲೋಕಸಭಾ ಸದಸ್ಯರುಗಳು, 97 ರಾಜ್ಯಸಭಾ ಸದಸ್ಯರುಗಳು, 18 ರಾಜ್ಯಗಳಲ್ಲಿ ಸರಕಾರವನ್ನು ರಚಿಸಿ 48 ಮಖ್ಯಮಂತ್ರಿಗಳನ್ನು ಕಂಡಿದ್ದಲ್ಲದೇ, ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹಮಂತ್ರಿ, ಲೋಕಸಭಾ ಅಧ್ಯಕ್ಷರೂ ಸೇರಿ 12 ಮುಖ್ಯ ಮಂತ್ರಿಗಳು, ಇಪ್ಪತ್ತೊಂಬತ್ತು ರಾಜ್ಯಪಾಲರು ಗಳು ಸಾಂವಿಧಾನಿಕ ಪ್ರತಿನಿಽಗಳೆನಿಸಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಸಂಘಪರಿವಾರ ಆಧರಿತ ಇಷ್ಟು ಮಂದಿಜನಾದೇಶದ ಮೇರೆಗೆ ಹಳ್ಳಿಯಿಂದ ದೇಶದವರೆಗೂ ಆಳುತ್ತಿರುವುದ ರಿಂದಲೇ ಇಂದು ನಮ್ಮ ದೇಶಕ್ಕೆ ಇಡೀ ವಿಶ್ವವೇ ಕೈ ಎತ್ತಿ ನಮಿಸು ತ್ತಿದೆ. ಇಂಥ ಆದರ್ಶವನ್ನು ತಾಲಿಬಾನ್‌ಗಳಿಗೆ ಹೋಲಿಸುವುದು ಎಷ್ಟು ದರಿದ್ರ ಮತ್ತು ವಿಕೃತ ಮನಸ್ಥಿತಿಯಲ್ಲವೇ? ಮತ್ತು ಜನಾದೇಶ ನೀಡಿರುವ ದೇಶದ ಪ್ರಜೆಗಳು ತಾಲಿ ಬಾನಿಗಳೇ? ಏನೆಂದು ಹೆಸರಿಸಬೇಕು ಈ ಕುಲಗೆಟ್ಟ ತಲೆಕೆಟ್ಟ ಮನೆಹಾಳು ರಾಜಕಾರಣಿಗಳಿಗೆ ಮತ್ತು ಅವರ ಬಾಲಬಡುಕರಿಗೆ?.

ನೆನಪಿಡಿ, ಇಂಥ ಸಂಘಪರಿವಾರದ ಸಾಂಕಗಳಲ್ಲಿ ಕುಡಿದು ತಿಂದುತೇಗಿಸಾಯಿರಿ ಎಂದು ಪಾಠ ಹೇಳುವುದಿಲ್ಲ, ಮಕ್ಕಳಿಗೆ ವಿದೇಶಕ್ಕೆ ಹೋಗಿ ಬೇಕಾದ್ದಂಗೆ
ಮಜಾ ಉಡಾಯಿಸಿ ಅಲ್ಲೇ ನೆಗೆದುಬಿದ್ದು ಸಾಯುವಂತೆ ಮಾಡಿ ಎನ್ನುವುದಿಲ್ಲ. ಶರವೇಗದಲ್ಲಿ ಅಕ್ರಮ ಆಸ್ತಿ ಮಾಡಿ ತಿಹಾರ್ ಜೈಲಿನಲ್ಲಿ ತಿಗಣೆ ಹೊಡೆದು ಬಾ ಎಂದು ಬೋಧನೆ ಮಾಡುವುದಿಲ್ಲ. ಶಾಸಕನ ಮನೆಗೆ ಮತ್ತು ಪೊಲೀಸ್ ಠಾಣೆಗೆ ಹೋಗಿ ಬೆಂಕಿಹಚ್ಚಿ ಬನ್ನಿ, ಪಾದರಾಯನಪುರಕ್ಕೆ ಹೋಗಿ ಅನಕ್ಷರಸ್ಥರಂತೆ ವರ್ತಿಸಿರೆಂದು ಪ್ರಚೋದಿಸುವುದಿಲ್ಲ. ಸೈದ್ಧಾಂತಿಕ ವಿರೋಧಗಳಿದ್ದರೂ ಮುಖ್ಯಮಂತ್ರಿಯೊಬ್ಬನ ಮಗನ ಹೆಣ ವಿದೇಶದಲ್ಲಿ ಕೊಳೆಯುವ ಮುನ್ನವೇ ರಾಜ್ಯಕ್ಕೆ ತಂದು ಒಪ್ಪಿಸಬೇಡಿ ಎಂದು ಕಿವಿಕಚ್ಚುವುದಿಲ್ಲ, ಎಷ್ಟೇ ಮನುಷ್ಯತ್ವ ತೋರಿದರೂ ಕೇವಲ ರಾಜಕೀಯ ಮೇಲಾಟಕ್ಕೆ ನಿಯತ್ತಿಲ್ಲದ ನಾಯಿಯಂತೆ ವರ್ತಿಸು ಎಂದು
ಆದೇಶಿಸುವುದಿಲ್ಲ. ತನಗೆ ಧರ್ಮಪತ್ನಿ ಇದ್ದರೂ ಸೈಲೆಂಟಾಗಿ ನಟಿಯೊಬ್ಬಳನ್ನು ಮದುವೆಯಾಗಿ ಮಗುಮಾಡುವುದನ್ನು ಕಲಿಸುವುದಿಲ್ಲ.

ಪದವಿಗಾಗಿ ಅಧಿಕಾರದ ಆಸೆಗಾಗಿ ಅದೆಂಥಾ ಗುಲಾಮಗಿರಿಯನ್ನೂ ಒಪ್ಪಿಕೊ ಎಂದು ಅಜ್ಞಾಪಿಸುವುದಿಲ್ಲ, ನಾಲಾಯಕ್ಕು ಮುದಿ ಯುವನಾಯಕನ ಕೈಲಿ ಲಾಲಿ ಪಪ್ ಕೊಟ್ಟು ಹೆಗಲ ಮೇಲೆ ಹೊತ್ತು ನಿನ್ನ ಹಿರಿತನ ಹಾಳು ಮಾಡಿಕೋ ಎಂದು ಆದೇಶಿಸುವುದಿಲ್ಲ. ಮಂತ್ರಿಯಾದರೂ ಅಧಿಕಾರಿಗಳ ಸಾವಿಗೆ ನೇರ ಕಾರಣ ನಾಗಿಯೂ ತಲೆಎತ್ತಿ ನಡೆಯುವುದಕ್ಕೆ ಬೆಂಬಲಿಸುವುದಿಲ್ಲ, ಅಕ್ರಮ ಸಂಬಂಧ, ರಾಸಲೀಲೆಗಳನ್ನು, ಅದ್ಧೂರಿ ಐಷಾರಾಮಿ ಬದುಕನ್ನು ಅನುಭವಿಸು ಎಂದು ಉಪದೇಶಿಸುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ದೇಶದ್ರೊಹಿ ಎಳೆನಿಂಬೆಕಾಯಿಗಳ ಪರ, ದೇಶದ್ರೋಹಿ ಕುನ್ನಿಗಳನ್ನು ಸಮರ್ಥಿಸು ಎಂದು ಕನಸಿನಲ್ಲಿಯೂ ಕಲಿಸು ವುದಿಲ್ಲ.

ನೋಡಿ, ಅಫ್ಘಾನಿಸ್ತಾನದಲ್ಲಿ ಮೊನ್ನೆ ತಾಲಿಬಾನಿಗಳು ಒಂದು ಮಗುವನ್ನು ನೇಣು ಹಾಕಿದ್ದಾರೆ, ಗಂಡಸರು ಗಡ್ಡ ಬೋಳಿಸದಂತೆ ಆದೇಶ ಹೊರಡಿಸಿದ್ದಾರೆ, ಮೊನ್ನೆ
ಒಂದು ವಿಡಿಯೋದಲ್ಲಿ ತಪ್ಪಿತಸ್ಥನೊಬ್ಬನ ಅಂಗೈಯನ್ನು ಕತ್ತರಿಸಿ ಅಷ್ಟಕ್ಕೂ ಬಿಡದೆ ರಕ್ತ ಸೋರುತ್ತಿದ್ದ ಕೈಯನ್ನು ಕುದಿಯುವ ನೀರಿನೊಳಗೆ ಮುಳುಗಿಸುತ್ತಾರೆ.
ಇಂಥವರನ್ನು ಸಂಘ ಪರಿವಾರದೊಂದಿಗೆ ಹೋಲಿಸುವವರ ಮಾನಸಿಕ ಸ್ಥಿತಿ ನಿಜಕ್ಕೂ ಚಿಂತಾಜನಕ ಮತ್ತು ಚಿಕಿತ್ಸಾರ್ಹ. ದೇಶದ ವಿರುದ್ಧ ಘೋಷಣೆ ಕೂಗಿದ,
ದೇಶವನ್ನು ತುಕಡೇ ಮಾಡಿಬಿಡುತ್ತೇನೆಂದು ಜೈಲಿಗೆ ಹೋಗಿಬಂದ ಕನ್ಹಯ್ಯಕುಮಾರ್ ಎಂಬ ದೇಶದ್ರೋಹಿಯನ್ನು ಮೊನ್ನೆಯಷ್ಟೇ ಕಾಂಗ್ರೆಸ್‌ನ ಅಸಾಮಾನ್ಯ
ನಾಯಕ ರಾಹುಲ್ ಗಾಂಧಿಯವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ದೇಶಕ್ಕೆ ‘ಉತ್ತಮ ಸಂದೇಶ’ ನೀಡಿದ್ದಾರೆ. ಆ ಮೂಲಕಯಾವ ಪಕ್ಷ ಯಾರ ಪರ ಎಂಬುದನ್ನು ಜನಸುಲಭವಾಗಿ ನಿರ್ಧರಿಸುವ ಅವಕಾಶ ನೀಡಿದ್ದಾರೆ. ಮುಂದಿನದು ಯಾವ ತಾಲಿಬಾನ್ ಮುಖಂಡನ ಸರದಿಯೋ?!.