Sunday, 15th December 2024

ಶತಮಾನದ ಸಂಭ್ರಮದಲ್ಲಿ ಆರೆಸ್ಸೆಸ್‌

ವೀಕೆಂಡ್ ವಿತ್ ಮೋಹನ್

ವಿರೋಧಿಗಳ ಟೊಳ್ಳು ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸತತವಾಗಿ ೯೯ ವರ್ಷಗಳಿಂದ ಸೇವೆ ಮಾಡುತ್ತಲೇ ಬಂದಿದೆ. ಉದ್ದೇಶ ಸ್ಪಷ್ಟವಿದ್ದಾಗ ಯಾವುದೇ ಸಂಘಟನೆಯು ನೂರಾರು ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲಬಹುದೆಂಬುದಕ್ಕೆ ಸಂಘವೇ ಸಾಕ್ಷಿ.

ಬರೋಬ್ಬರಿ ೯೯ ವರ್ಷಗಳ ಹಿಂದೆ, ನಾಗಪುರದ ಮನೆಯೊಂದರಲ್ಲಿ ಸ್ವಯಂಸೇವಕರ ತಂಡದೊಂದಿಗೆ ರಾಷ್ಟ್ರದ ಸೇವೆಯನ್ನೇ ಮೂಲೋದ್ದೇಶವಾಗಿಸಿಕೊಂಡು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ (ಆರೆಸ್ಸೆಸ್) ಸ್ಥಾಪನೆಯಾಯಿತು. ಸಣ್ಣದೊಂದು ತಂಡ
ದೊಂದಿಗೆ ಸ್ಥಾಪನೆಯಾದ ಸಂಘವಿಂದು ದೊಡ್ಡ ಆಲದಮರವಾಗಿ ಬೆಳೆದಿದೆ. ಅದರ ಶಾಖೆಗಳು ದೇಶಾದ್ಯಂತ ಹಬ್ಬಿವೆ.

ಆಲದಮರದ ಬೇರಿನಂತೆ ಸಂಘದ ಬೇರುಗಳು ಗಟ್ಟಿಯಾಗಿವೆ. ಆಲದಮರ ವಿಶಾಲವಾಗಿ ಹರಡಿ ಆಶ್ರಿತರಿಗೆ ತಂಪು ನೆರಳು ನೀಡುವಂತೆ, ಸಂಘ ಹಲವರಿಗೆ ಆಶ್ರಯ ನೀಡಿದೆ. ದೇಶಸೇವೆಯ ಏಕೈಕ ಉದ್ದೇಶದಿಂದ ಸ್ಥಾಪಿತವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುದೀರ್ಘ ಪಯಣದ ಹಿಂದಿನ ಶಕ್ತಿಯೆಂದರೆ- ಶಿಸ್ತು. ಸಂಘದ ಕಾರ್ಯಗಳನ್ನು ತಡೆಯುವಲ್ಲಿ ವಿರೋಧಿಗಳು ನಿರಂತರ ವಾಗಿ ವ್ಯಸ್ತರಾಗಿದ್ದರೂ, ಸಂಘವು ಆನೆಯಂತೆ ನಡೆಯುತ್ತಾ ತನ್ನ ಕೆಲಸವನ್ನು ತಾನು ಮಾಡುವಲ್ಲಿ ಕಳೆದ ೯೯ ವರ್ಷಗಳಿಂದ ನಿರತವಾಗಿದೆ.

೧೯೪೮ರಲ್ಲಿ ಹಾಗೂ ೧೯೭೫ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಘವನ್ನು ನಿಷೇಧಿಸಲಾಗಿತ್ತು. ನಂತರ ೧೯೯೨ರ ಬಾಬ್ರಿ ಮಸೀದಿ ಧ್ವಂಸದ ಸಂದರ್ಭದಲ್ಲೂ ಸಂಘದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ, ವಿರೋಧಿಗಳು ನಡೆಸಿದ ಷಡ್ಯಂತ್ರಗಳು ವಿಫಲವಾದವೇ ಹೊರತು, ಸಂಘದ ರಾಷ್ಟ್ರವ್ಯಾಪಿ ಕಾರ್ಯಗಳನ್ನು ನಿಲ್ಲಿಸಲಾಗಲಿಲ್ಲ. ಸಂಘದ ಉದ್ದೇಶದಲ್ಲಿ ಸ್ಪಷ್ಟತೆಯಿದೆ. ಕಳೆದ ೯೯ ವರ್ಷಗಳಿಂದಲೂ ಸಂಘದ ಪ್ರಮುಖ ಗಮನವು ರಾಷ್ಟ್ರವನ್ನು ಕಟ್ಟುವುದರೆಡೆಗಿದೆ.

ವಿರೋಧಿಗಳು ಅಪಪ್ರಚಾರ ನಡೆಸಿ ಸಂಘವನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುವ ವಿಫಲ ಪ್ರಯತ್ನಗಳನ್ನು
ನಡೆಸುತ್ತಲೇ ಇದ್ದಾರೆ. ಇವರು ಮಾತುಮಾತಿಗೂ ಮನುಸ್ಮೃತಿಯನ್ನು ಮುನ್ನೆಲೆಗೆ ತಂದು ಸಂಘದ ವಿರುದ್ಧ ಅಪಪ್ರಚಾರ ನಡೆಸುತ್ತಲೇ ಇರುತ್ತಾರೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಿಗೆ ತನ್ನ ಜತೆಗಿದ್ದವನ ಜಾತಿಯ ಅರಿವೇ ಇರುವುದಿಲ್ಲ. ಒಮ್ಮೆ ಮಹಾತ್ಮ ಗಾಂಧಿಯವರು ನಾಗಪುರದಲ್ಲಿ ನಡೆಯುತ್ತಿದ್ದ ಸಂಘದ ಕಾರ್ಯಕ್ರಮಕ್ಕೆ ಬಂದು ಅಲ್ಲಿನ ಯುವಕರಲ್ಲಿ ಮಾತನಾಡುತ್ತಿರುವಾಗ ಜಾತಿಯ ಬಗ್ಗೆ ವಿಚಾರಿಸಿದರು; ಆದರೆ ಅಲ್ಲಿರುವ ಯುವಕರು ತಮ್ಮ ಜಾತಿಯ ಬಗ್ಗೆ ಹೇಳದೆ ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನು ಕಂಡು ಅವರು ಆಶ್ಚರ್ಯಪಟ್ಟಿದ್ದರು.

ಮಾತ್ರವಲ್ಲದೆ, ಜಾತಿಯನ್ನು ಮೀರಿದ ಸಂಘವನ್ನು ಕಟ್ಟಿದ್ದರ ಬಗ್ಗೆ ಕಾರ್ಯಕ್ರಮದ ನಂತರ ಡಾ.ಹೆಡ್ಗೆವಾರ್ ಅವರ ಬಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಲ್ಲಿನ ಯುವಕರ ಶಿಸ್ತನ್ನು ಹೊಗಳಿದ್ದರು. ಮಹಾತ್ಮ ಗಾಂಧಿಯವರು ಬಳಸುತ್ತಿದ್ದಂಥ ‘ಹರಿಜನ’ ಪದಕ್ಕೆ ಡಾ.ಹೆಡ್ಗೆವಾರ್ ಮತ್ತು ಬಾಬಾಸಾಹೇಬರ ವಿರೋಧವಿತ್ತು.

ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿದ್ದರ ಹಿಂದೆ ಸಂಘದ ಕಾರ್ಯಕರ್ತರ ಕೊಡುಗೆ ಬಹಳಷ್ಟಿದೆ. ಆ ಕಾಲಘಟ್ಟದಲ್ಲಿ ದೇಶಾದ್ಯಂತದ ಸಂಘದ ಕಾರ್ಯಕರ್ತರನ್ನು ಜೈಲಿಗಟ್ಟ ಲಾಗಿತ್ತು, ಇಂದಿರಾರ ಸ್ವಾರ್ಥಕ್ಕಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿ ದೇಶಾದ್ಯಂತ ಹಾಹಾಕಾರವನ್ನು ಸೃಷ್ಟಿಸಲಾಗಿತ್ತು. ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದವರಲ್ಲಿ ಸಂಘದ ಕಾರ್ಯ ಕರ್ತರು ಮುಂಚೂಣಿಯಲ್ಲಿದ್ದರು.

ಸಂಘದ ಕಾರ್ಯಕರ್ತರ ಪೈಕಿ ಸಾವಿರಾರು ಪ್ರಚಾರಕರು ಸಣ್ಣ ವಯಸ್ಸಿನಲ್ಲೇ ತಮ್ಮ ಕುಟುಂಬಗಳನ್ನು ತೊರೆದು ದೇಶಸೇವೆ ಮಾಡಲು ತಮ್ಮ ಸಂಪೂರ್ಣ ಜೀವನವನ್ನು ಮೀಸಲಿಟ್ಟಿದ್ದಾರೆ. ಸಂಘದೊಳಗಿರುವ ಸಾಮರಸ್ಯ ವೇದಿಕೆಯ ಮೂಲಕ ಹಲವು ಪ್ರಚಾರಕರು ಸಮಾಜದಲ್ಲಿ ರುವ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಹಿಂದುಳಿದ ಜನಾಂಗಗಳನ್ನು ಗುರುತಿಸಿ, ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತಿದ್ದಾರೆ.

ಈಶಾನ್ಯ ಭಾರತದ ಬುಡಕಟ್ಟು ಜನಾಂಗದ ಹಲವು ಕುಟುಂಬಗಳನ್ನು ಮುನ್ನೆಲೆಗೆ ತರುವಲ್ಲಿ ದಶಕಗಳ ಕಾಲ ಕೆಲಸ ಮಾಡಿದ
ಸಂಘದ ಪೂರ್ಣಾವಧಿ ಪ್ರಚಾರಕರಿದ್ದಾರೆ. ಕೇರಳ ರಾಜ್ಯದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ೨೫ ಯುವಕರಿಗೆ ಎರಡು ವರ್ಷಗಳ ಕಾಲ ವೇದಗಳ ಅಧ್ಯಯನ ಮಾಡಿಸಿ, ಕಂಚಿ ಕಾಮಕೋಟಿ ಪೀಠದ ಪರಮಪೂಜ್ಯರ ಸಮ್ಮುಖದಲ್ಲಿ ಪ್ರಮಾಣಪತ್ರ ನೀಡಿದ್ದರ ಹಿಂದಿನ ಪರಿಶ್ರಮ ಸಂಘದ ಸ್ಥಳೀಯ ಪ್ರಚಾರಕರದ್ದು. ಹೀಗೆ ಸಂಘವು ಸತತ ೯೯ ವರ್ಷಗಳಿಂದಲೂ ತನ್ನ ಮೂಲೋದ್ದೇಶಕ್ಕನುಗುಣವಾಗಿ ಕೆಲಸ ಮಾಡುತ್ತಲೇ ಬಂದಿದೆ.

ಸಂಘವು ಬ್ರಿಟಿಷರ ವಿರುದ್ಧ ಹೋರಾಡಲಿಲ್ಲವೆಂಬ ಸುಳ್ಳನ್ನು ಅದರ ವಿರೋಽಗಳು ಆಗಾಗ ಹೇಳುತ್ತಿರುತ್ತಾರೆ. ಇವರಿಗೆ ವಸ್ತುಸ್ಥಿತಿ ಗೊತ್ತಿಲ್ಲ. ನಾಗಪುರ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದ ಡಾ.ಹೆಡ್ಗೆವಾರ್ ಅವರು ತಮ್ಮ ವಲಯದಲ್ಲಿ ಬ್ರಿಟಿಷರ ವಿರುದ್ಧ ಯುವಕರನ್ನು ಒಂದುಗೂಡಿಸುವುದರಲ್ಲಿ ಯಶಸ್ವಿಯಾಗಿದ್ದರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹೆಡ್ಗೆವಾರ್ ಹೆಸರು ನೋಡನೋಡುತ್ತಲೇ ಎತ್ತರಕ್ಕೆ ಬೆಳೆಯಲು ಪ್ರಾರಂಭವಾಯಿತು. ೧೯೨೦ರವರೆಗೆ ಬ್ರಿಟಿಷರ ಆಡಳಿತದ ಕೆಳಗೆ ‘ಸ್ವಯಂ ನಿಯಮ’ ಬೇಕೆಂದು ಮಾತ್ರವೇ ಆಗ್ರಹಿಸುತ್ತಿದ್ದಂಥ ಕಾಂಗ್ರೆಸ್ ಪಕ್ಷಕ್ಕೆ ಬ್ರಿಟಿಷರಿಂದ ‘ಸಂಪೂರ್ಣ ಸ್ವಾತಂತ್ರ್ಯ’ ಬೇಕೆಂದು ಮೊಟ್ಟ ಮೊದಲ ಬಾರಿಗೆ ಹೇಳಿದ್ದೇ ಹೆಡ್ಗೆವಾರ್; ಕಾಂಗ್ರೆಸ್ಸಿಗರಿಗೆ, ತಾವು ಪ್ರಸ್ತಾಪಿಸಿದ ಅನುಸೂಚಿಯಲ್ಲಿನ ಮೂಲೋದ್ದೇಶ ‘ಬ್ರಿಟಿಷರಿಂದ
ಸಂಪೂರ್ಣ ಸ್ವಾತಂತ್ರ್ಯ’ ಎಂದು ಹೇಳಿದ್ದರು.

ಹೆಡ್ಗೆವಾರ್ ಅವರ ಮಾತನ್ನು ಅಂದು ಗಂಭೀರವಾಗಿ ತೆಗೆದುಕೊಳ್ಳದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ೧೯೨೯ರಲ್ಲಿ ಹೆಡ್ಗೆವಾರ್ ಹೇಳಿದ್ದನ್ನೇ ಲಾಹೋರ್ ಸಮ್ಮೇಳನದಲ್ಲಿ ತಮ್ಮ ಉದ್ದೇಶವನ್ನಾಗಿ ಘೋಷಿಸಿದರು. ಆದರೆ, ಬ್ರಿಟಿಷರನ್ನು ಸಂಪೂರ್ಣ ವಾಗಿ ಓಡಿಸಬೇಕೆಂಬ ಸ್ಪಷ್ಟ ಉದ್ದೇಶವನ್ನು ೯ ವರ್ಷಗಳ ಹಿಂದೆಯೇ ಹೆಡ್ಗೆವಾರ್ ಹೊಂದಿದ್ದರು. ೧೯೨೦ರಲ್ಲಿ ಮಹಾತ್ಮ ಗಾಂಧಿ ಯವರು ಮುಸಲ್ಮಾನರ ಪರವಾಗಿದ್ದಂಥ ಖಿಲಾಫತ್ ಚಳವಳಿಯನ್ನು ಹೆಡ್ಗೆವಾರ್ ವಿರೋಧಿಸದಿದ್ದರೂ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರಿಗೆ ನೆರವಾಗುವುದನ್ನು ಬಿಡಲಿಲ್ಲ.

ಗಾಂಧೀಜಿಯ ‘ಅಸಹಕಾರ ಚಳವಳಿ’ಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸುವ ಮೂಲಕ ಮಾದರಿಯಾದ
ಹೆಡ್ಗೆವಾರ್, ಈ ಘಟ್ಟದಲ್ಲಿ ಅತ್ಯುತ್ಸಾಹದಿಂದ ಗಾಂಧಿಯವರ ಪರವಾಗಿ ನಿಂತರು. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಭಾಷಣ ಗಳನ್ನು ಮಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸಿದರು. ಬ್ರಿಟಿಷ್ ಸರಕಾರವು ೩ ಬಾರಿ ನೋಟಿಸ್ ನೀಡಿದರೂ ತಲೆಕೆಡಿಸಿಕೊಳ್ಳದೆ, ಬ್ರಿಟಿಷರ ವಿರುದ್ಧ ಭಾಷಣ ಗಳನ್ನು ಮಾಡುತ್ತಲೇ ಇದ್ದರು ಹೆಡ್ಗೆವಾರ್. ಕೊನೆಗೆ ಬ್ರಿಟಿಷ್ ನ್ಯಾಯಾಲಯ ಹೆಡ್ಗೆವಾರ್ ಅವರಿಗೆ, ಇಂಥ ಭಾಷಣಗಳನ್ನು ಮಾಡಬಾರದು, ಜಾಮೀನಿನ ಹಣವಾಗಿ ೧,೦೦೦ ರುಪಾಯಿಯನ್ನು ಕಟ್ಟಬೇಕೆಂದು ಆದೇಶ ಹೊರಡಿಸಿತ್ತು.

ಈ ಆದೇಶಕ್ಕೂ ಕ್ಯಾರೇ ಅನ್ನದ ಹೆಡ್ಗೆವಾರ್ ಭಾಷಣಗಳನ್ನು ಮಾಡುತ್ತಲೇ ಇದ್ದರು. ಆದರೆ ಅವರನ್ನು ಬ್ರಿಟಿಷರು ಬಿಡಲಿಲ್ಲ, ಬಂಧಿಸಿ ಒಂದು ವರ್ಷದವರೆಗೆ ಜೈಲಿನಲ್ಲಿರಿಸಿದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಜೈಲಿಗೆ ಹೋಗಲಿಲ್ಲ’ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲಿ ಹೇಳಿದ್ದನ್ನು ಕೇಳಿಸಿಕೊಂಡಾಗ, ಹೆಡ್ಗೆವಾರ್ ಅವರನ್ನು ಬ್ರಿಟಿಷರು ಜೈಲಿಗೆ ಕಳಿಸಿದ ಈ ವಿಷಯ ನೆನಪಾಯಿತು. ಜೈಲಿಗೆ ಹೋಗುವುದರಿಂದ ಮಾತ್ರವೇ ನಮಗೆ ಸ್ವಾತಂತ್ರ್ಯ ಸಿಗುವುದಿಲ್ಲವೆಂಬ ವಿಷಯ ಹೆಡ್ಗೆವಾರ್ ಅವರಿಗೆ ಚೆನ್ನಾಗಿ ಗೊತ್ತಿತ್ತು.

‘ದೇಶಕ್ಕಾಗಿ ಸೇವೆ ಸಲ್ಲಿಸಲು ಜೈಲಿನಿಂದ ಹೊರಗಡೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ’ ಎಂದು ಅವರು ತಮ್ಮನ್ನು ನೋಡಲು ಜೈಲಿಗೆ ಬರುವವರಿಗೆ ಹೇಳುತ್ತಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಹೆಡ್ಗೆವಾರ್ ತಮ್ಮ ಛಲವನ್ನು ಬಿಡಲಿಲ್ಲ, ಹಿಂದಿ ಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ೧೮.೩.೧೯೨೨ರಂದು ಮಹಾತ್ಮ ಗಾಂಧಿ ಯವರಿಗೆ ೬ ವರ್ಷಗಳ ಸೆರೆವಾಸವಾದಾಗ, ಹೆಡ್ಗೆವಾರ್ ಪ್ರತಿ ತಿಂಗಳ ೧೮ನೆಯ ದಿವಸದಂದು ‘ಗಾಂಧಿ ದಿನ’ವೆಂದು ಆಚರಿಸುತ್ತಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿರೋಧಿಗಳ ಅಪಪ್ರಚಾರ, ನಿಷೇಧ, ಬೈಗುಳಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಮೊದಲು ಸೇವೆಗೆ ನಿಲ್ಲುವುದು ಸಂಘದ ಕಾರ್ಯಕರ್ತರು. ಚೆನ್ನೈ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ, ವಿಶಾಖಪಟ್ಟಣದಲ್ಲಿ ಚಂಡಮಾರುತ ಅಪ್ಪಳಿಸಿದಾಗ, ಉತ್ತರಾಖಂಡದಲ್ಲಿ ಭೀಕರ ಜಲಪ್ರಳಯವಾದಾಗ ಹಾಗೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗಲೂ ಸಂಘದ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ
ನಿಂತಿದ್ದರು.

ಕೋವಿಡ್ ಮಹಾಮಾರಿ ಅಪ್ಪಳಿಸಿದಾಗ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆಯ ವೇಳೆ ವೈದ್ಯರ ಜತೆಯಲ್ಲಿ ಸಂಘದ ಕಾರ್ಯ ಕರ್ತರೂ ತಮ್ಮ ಜೀವದ ಹಂಗನ್ನು ತೊರೆದು ನಿಂತಿದ್ದರು. ದೇಶಸೇವೆಯೆಂದರೆ ಸದಾ ಮುಂದಿರುವ ನಿಸ್ವಾರ್ಥಿ ಕಾರ್ಯಕರ್ತ ರನ್ನು ಹೊಂದಿರುವ ಸಂಘಟನೆಯೇ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ಸಂಘದಲ್ಲಿ ಕಲಿತ ಲಕ್ಷಾಂತರ ಯೋಧರು ಭಾರತೀಯ ಸೈನ್ಯದಲ್ಲಿದ್ದಾರೆ.

ಸಂಘದಲ್ಲಿ ಕಲಿತ ಲಕ್ಷಾಂತರ ವೈದ್ಯರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಘಮೂಲದವರು ಪೊಲೀಸ್ ಇಲಾಖೆಯಲ್ಲಿದ್ದಾರೆ, ಮುಖ್ಯಮಂತ್ರಿ-ಪ್ರಧಾನ ಮಂತ್ರಿ-ರಾಷ್ಟ್ರಪತಿಗಳಾಗಿದ್ದಾರೆ. ಸಂಘವು ದೇಶಾದ್ಯಂತ ನೂರಾರು ಶಾಲೆಗಳನ್ನು ನಡೆಸುವ ಮೂಲಕ ಗಣನೀಯ ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುತ್ತಿದೆ, ಸಾವಿರಾರು ಆಸ್ಪತ್ರೆಗಳನ್ನು ನಿರ್ಮಿಸಿ ಜನಸೇವೆ ಮಾಡುತ್ತಿದೆ. ಕೋಟ್ಯಂತರ ಜನರು ಸಂಘದ ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆಂದರೆ, ಅದು ಸಂಘದಲ್ಲಿರುವ ನಿಸ್ವಾರ್ಥತೆ ಮತ್ತು ದೇಶಸೇವೆಯ ಪ್ರಜ್ಞೆಯಿಂದಾಗಿ ಮಾತ್ರ.

ಸಂಘದ ಪ್ರಮುಖರು ಇಂದಿಗೂ, ಕೆಳ ಮಧ್ಯಮವರ್ಗದ ಸಾಮಾನ್ಯ ಜನರ ರೀತಿಯಲ್ಲೇ ಸರಳ ಜೀವನವನ್ನು ನಡೆಸುತ್ತಾರೆ,
ಸಂಘದ ಕಚೇರಿಗಳಲ್ಲೇ ಉಳಿದುಕೊಂಡು ತಮ್ಮ ಕೆಲಸ- ಕಾರ್ಯಗಳನ್ನು ಮಾಡುತ್ತಾರೆ. ಒಟ್ಟಾರೆ ಹೇಳುವುದಾದರೆ, ವಿರೋಧಿ ಗಳ ಟೊಳ್ಳು ಹೇಳಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸತತವಾಗಿ ೯೯ ವರ್ಷಗಳಿಂದ ಸೇವೆ ಮಾಡುತ್ತಲೇ ಬಂದಿದೆ. ಉದ್ದೇಶ ಸ್ಪಷ್ಟವಿದ್ದಾಗ ಯಾವುದೇ ಸಂಘಟನೆಯು ನೂರಾರು ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲಬಹು ದೆಂಬುದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಸಾಕ್ಷಿ.

ವಿರೋಧಿಗಳ ಟೀಕೆ ಹೆಚ್ಚಾದಷ್ಟೂ ಸಂಘದಲ್ಲಿನ ಒಗ್ಗಟ್ಟು ಹೆಚ್ಚಾಗುತ್ತದೆ. ಈ ಒಗ್ಗಟ್ಟಿನ ಫಲವಾಗಿಯೇ, ಮುಂದಿನ ವರ್ಷ ಸಂಘಕ್ಕೆ ೧೦೦ ವಸಂತಗಳು ತುಂಬಲಿವೆ. ೧೦೦ ವರ್ಷಗಳ ಕಾಲ ಸಮಾಜದ ನಿಸ್ವಾರ್ಥ ಸೇವೆಯಲ್ಲೇ ತೊಡಗಿಸಿಕೊಂಡಿರುವ ಬೃಹತ್ ಸಂಘಟನೆಯಿದು. ಸಂಘವು ವರ್ಷದಿಂದ ವರ್ಷಕ್ಕೆ ತನ್ನ ಸಂಘಟನಾಬಲ ಹಾಗೂ ಸೇವಾಧ್ಯೇಯವನ್ನು ವಿಸ್ತರಿಸಿ
ಕೊಂಡು ಬರುತ್ತಿರುವುದರ ಹಿಂದಿನ ಗುಟ್ಟು ಸ್ವಾರ್ಥರಹಿತ ಸಮಾಜಸೇವೆಯ ಧ್ಯೇಯವೇ ಎಂಬುದರಲ್ಲಿ ಎರಡು ಮಾತಿಲ್ಲ.