Monday, 9th December 2024

ರಮ್ಮಿ ಕೌಶಲ್ಯ ಆಟದ ಹೆಸರಿನಲ್ಲಿ ಜೂಜಾಟವೇ ?

ಅಭಿಮತ

ಉಮಾ ಮಹೇಶ ವೈದ್ಯ

ರಮ್ಮಿ ಇಸ್ಪೀಟು ಎಲೆಗಳಿಂದ ಆಡುವ ಒಂದು ವಿಧದ ಆಟ. ಈ ಐವತ್ತೆರಡು ಎಲೆಗಳ ಆಟವನ್ನು ಮೋಜಿಗಾಗಿಯೋ, ಮನರಂಜನೆಗಾಗಿಯೋ, ಅಥವಾ ಕಾಲ ಕಳೆಯಲೋ ತಮ್ಮ ಆತ್ಮೀಯ ಬಳಗ ಕೂಡಿದಾಗ ಆಡುತ್ತಾರೆ. ಈ ಆಟದಲ್ಲಿ ಕೆಲವು ಬಾರಿ
ಆಟಗಾರನ ನೈಪುಣ್ಯತೆ, ಆಟವಾಡುವ ಕಲೆ ಗೆಲುವನ್ನು ತಂದು ಕೊಟ್ಟರೆ, ಕೆಲವು ಬಾರಿ ಆಟಗಾರ ಸೆಳೆಯುವ ಎಲೆಗಳ ಮೇಲೆ ಆಟದ ಮುಕ್ತಾಯ ಹಾಗೂ ಗೆಲುವು ಅವಲಂಬಿತವಾಗಿರುತ್ತದೆ.

ಹಾಗಿದ್ದಾಗ, ಈ ರಮ್ಮಿ ಆಟವನ್ನು ಕೌಶಲ್ಯಯುತ ಆಟವೆನ್ನಬೇಕೋ? ಅಥವಾ ಜೂಜಾಟವೆನ್ನಬೇಕೋ? ಎನ್ನುವ ಗೊಂದಲ
ಉಂಟಾಗುತ್ತದೆ. ಈ ವಿಷಯವನ್ನು ಇನ್ನಷ್ಟು ಸರಳೀಕರಿಸಿ ಹೇಳಬೇಕೆಂದರೆ, ಜೂಜಾಟವೆಂದರೆ, ಆಟವಾಡುವ ಆಟಗಾರರಿಗೆ ಕೇವಲ ಆಟದಲ್ಲಿ ಪಾಲ್ಗೊಳ್ಳುವ ಹಾಗೂ ನಿಯಮಾನುಸಾರ ಆಟವಾಡುವ ಅವಕಾಶವಿರುತ್ತದೆಯೇ ಹೊರತು ಆ ಆಟದ ಚಲನೆ ಹಾಗೂ ಫಲಿತಾಂಶದ ಮೇಲೆ ಹಿಡಿತವಿರುವುದಿಲ್ಲ.

ಉದಾಹರಣೆಗೆ, ತೀನ ಪತ್ತಿ ಆಟ, ಅಂದರ ಬಾಹರ ಆಟ. ಈ ಆಟಗಳಲ್ಲಿ ಆಟಗಾರ ಒಂದು ನಿರ್ದಿಷ್ಟ ಎಲೆಯನ್ನು ತೆಗೆದಿರಿಸಿ ಇದು ಅಂದರ್ ಅಥವಾ ಬಾಹರ್ ಬೀಳುತ್ತದೆ ಎಂದು ಹೇಳುತ್ತಾನೆ. ಆಗ  ನ್ನೋರ್ವ ಆಟಗಾರ ಉಳಿದ ಎಲೆಗಳನ್ನು ಕ್ರಮವಾಗಿ
ಅಂದರ – ಬಾಹರ ಎಸೆಯುತ್ತಾ ಹೋಗುತ್ತಾನೆ, ಇಬ್ಬರಿಗೂ ಗೊತ್ತಿರುವುದಿಲ್ಲ, ಆ ನಿರ್ದಿಷ್ಟ ಎಲೆ ಯಾವ ಕಡೆ ಬೀಳುತ್ತದೆ ಎಂದು. ಆ ಆಯ್ಕೆ ಮಾಡಿದ ಎಲೆ ಮೊದಲಿನ ಆಟಗಾರ ಹೇಳಿದಂತೆ ಅಂದರ್ ಬಿದ್ದರೆ ಆತ ಗೆದ್ದಂತೆ, ಒಂದು ವೇಳೆ ಬಾಹರ್ ಬಿದ್ದಲ್ಲಿ ಆತ ಸೋತಂತೆ.

ಇಂಥ ಆಟಗಳು ಅವಕಾಶದ ಆಟ ಅಥವಾ ಜೂಜಾಟವೆನಿಸಿಕೊಳ್ಳುತ್ತವೆ. ಇನ್ನು ಕೌಶಲ್ಯಯುತ ಆಟವೆಂದರೆ, ಆಟಗಾರರಿಗೆ
ಆಟದ ನಿಯಮಾವಳಿಗಳು ಚೆನ್ನಾಗಿ ಗೊತ್ತಿದ್ದು, ಅವರು ತಮ್ಮ ಜಾಣ್ಮೆ, ಆಟದ ಮೇಲಿನ ನಿಪುಣತೆ ಹಾಗೂ ಅನುಭವದ ಆಧಾರದ ಮೇಲೆ ಆಟದ ಮೇಲೆ ಹಿಡಿತವನ್ನು ಸಾಧಿಸುತ್ತ ಗೆಲುವನ್ನು ಪಡೆದುಕೊಳ್ಳುತ್ತಾರೆ. ಉದಾಹರಣೆಗೆ ಚೆಸ್ ಆಟ. ಈ ಆಟದಲ್ಲಿ ಚದುರಂಗದ ಮೇಲೆ ಎಲ್ಲಾ ಕಾಯಿಗಳಿದ್ದು, ಅವುಗಳನ್ನು ಚಲಾಯಿಸುವ ಹಾಗೂ ಗಮ್ಯವನ್ನು ತಲುಪುವ ಸಾಧ್ಯತೆ ಕೇವಲ ಆ ಆಟಗಾರನ ಕೌಶಲ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಇಂಥ ಆಟಗಳಲ್ಲಿ ಯಾವುದೂ ಮುಚ್ಚು ಮರೆ ಇರುವುದಿಲ್ಲ ಎಲ್ಲವೂ ಪಾರದರ್ಶಕ. ಈ ಎರಡು ರೀತಿಯ ಆಟಗಳ ಸ್ವರೂಪ ವನ್ನು ಗಮನಿಸಿದ ನಂತರ ಮನದಲ್ಲಿ ಮೂಡುವ ಪ್ರಶ್ನೆಯೇ  ರಮ್ಮಿ ಆಟ ಕೌಶಲ್ಯಯುತ ಆಟವೋ ?ಅಥವಾ ಜೂಜಾಟವೋ? ಎನ್ನುವುದು. ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಕಂಡು ಬರುವುದು ಕರ್ನಾಟಕ ಪೊಲೀಸ್‌ ಅಧಿನಿಯಮ 1963 ಕಲಂ 2 ಸಹ ಕಲಂ 7 ರ ವಿವರಣೆಯಲ್ಲಿ (ii) game of chance’ includes a game of chance and skill combined and a pretended game of chance or of chance and skill combined, but does not include any athletic game or sport;; ಸ್ಪಷ್ಟಪಡಿಸಲಾಗಿದೆ.

ಈ ವಿವರಣೆಯ ಅರ್ಥವೆಂದರೆ, ಅವಕಾಶದ ಆಟ (ಜೂಜಾಟ)ದ ಜತೆ ಕೌಶಲ್ಯವೂ ಸಹ ಮಿಳಿತವಾಗಿದ್ದರೆ, ಅಥವಾ ಆಟದಲ್ಲಿ ಜೂಜಾಟ ಒಂದು ಭಾಗವಾಗಿದ್ದು, ಕೌಶಲ್ಯವೂ ಸಹ ಇನ್ನೊಂದು ಭಾಗವಾಗಿ ಎರಡೂ ಸೇರಿದಾಗ ಆ ಆಟವನ್ನು ಒಟ್ಟಾರೆ ಅವಕಾಶದ ಆಟ ಅಥವಾ ಜೂಜಾಟವೆಂದು ಪರಿಗಣಿಸಬೇಕಾಗುತ್ತದೆ. ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯ ಗಳ ದೃಷ್ಟಿಯಲ್ಲಿ ಈ ರಮ್ಮಿ ಆಟದ ಬಗ್ಗೆ ಇರುವ ತೀರ್ಪುಗಳನ್ನು ಗಮನಿಸಿದಾಗ ನಮಗೆ ಇಂದು ಸ್ಪಷ್ಟ ಚಿತ್ರಣ ದೊರೆಯುತ್ತದೆ-
State Of Andhra Pradesh vs K. Satyanarayana Ors on 22 November, 1967 ಪ್ರಕರಣದಲ್ಲಿ The game of Rummy is
not a game entirely of chance like the ‘three&card’ game mentioned in the Madras case to which we were referred.
The ‘three card’ game which goes under different names such as ‘flush’, ‘brag’ etc. is a game of pure chance. Rummy,
on the other hand, requires certain amount of skill because the fall of the cards has to be memorized and the
building up of Rummy requires considerable skill in holding and discarding cards. We cannot, therefore, say that the game of Rummy is a game of entire chance. It is mainly and preponderantly a game of skill. The chance in Rummy is of the same character as the chance in a deal at a game of bridge.

In fact in all games in which cards are shuffled and dealt out, there is an element of chance, because the distribution of the I cards is not according to any set pattern but is dependent upon how the cards find their place in the
shuffled pack. From this alone it cannot be said that Rummy is a game of chance and thereis, no skill involved
in it. Of course, if there is evidence of gambling in some other way or that the owner of the house or the club is
making a profit or gain from the game of Rummy or any other game played for stakes, the offence may be brought
home. In this case, these elements are missing and therefore we think that the High Court was right in accepting the
reference it did.

ಈ ತೀರ್ಪನ್ನೇ ಆಧರಿಸಿ ಹತ್ತು ಹಲವಾರು ತೀರ್ಪುಗಳು ಹೊರ ಬಂದು ರಮ್ಮಿ ಆಟವನ್ನು ಹಣದ ಮೇಲೆ ಅಥವಾ ಮೌಲ್ಯದ ಪಣದ ಮೇಲೆ ಪಂದ್ಯದ ರೀತಿಯಲ್ಲಿ ಆಡಿದರೆ ಅದು ಜೂಜಾಟವಾಗುತ್ತದೆ ಆದರೆ ಕೇವಲ ಮನೋರಂಜನೆ ಗಾಗಿ ತಮ್ಮ ಕೌಶಲ್ಯದ ಪ್ರದರ್ಶನಕ್ಕೆ ಆಡಿದರೆ ಅದು ಜೂಜಾಟವಾಗುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ.

ನಾವು ನೀವು ನೋಡಿದಂತೆ ಈ ರಮ್ಮಿ ಆಟವನ್ನು ಆಡಿಸುವ ಕ್ಲಬ್ ಮಾಲೀಕರು ಪೊಲೀಸರ ಹಾಗೂ ನ್ಯಾಯಾಲಯದ ಕಣ್ಣು ಗಳಿಗೆ ಮಣ್ಣೆರೆಚಲು ತಾವು ಕ್ಲಬ್ಬಿನ ಸದಸ್ಯರ ಮನೋರಂಜನೆಗಾಗಿ ರಮ್ಮಿಯನ್ನು ಆಡಿಸುತ್ತೇವೆ. ಇಲ್ಲಿ ಯಾವುದೇ ಪಣಕ್ಕೆ ಪಂದ್ಯದ ರೀತಿಯಲ್ಲಿ ಆಡಿಸುವುದಿಲ್ಲವೆಂದು ಹೇಳಿ ತೆರೆ ಮರೆಯಲ್ಲಿ ರಮ್ಮಿ ಆಟದ ಪಂದ್ಯಗಳ ಸರಮಾಲೆಗಳನ್ನೇ ಆಯೋಜಿಸಿ
ಅವುಗಳಿಂದ ಕೋಟ್ಯಾಂತರ ಕಮಿಷನ್, ಆದಾಯ ಇತ್ಯಾದಿಗಳನ್ನು ವಾಮ ಮಾರ್ಗದಲ್ಲಿ ಗಳಿಸುತ್ತಿದ್ದಾರೆ.

ಈ ರೀತಿಯಾಗಿ ರಮ್ಮಿ ಆಡಿಸುವುದು ಅಪರಾಧವೆಂದು ಪೊಲೀಸರು ದಾಳಿ ಮಾಡಿ ಪಂದ್ಯದ ಹಣವನ್ನು ಜಪ್ತಿ ಮಾಡಿ ನ್ಯಾಯಾ ಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದಾಗ ಸರ್ವೋಚ್ಛ ನ್ಯಾಯಾಲಯದ ತೀರ್ಪೀನ ಮೊದಲ ಭಾಗವನ್ನೇ ಮಾತ್ರ ಪರಿಗಣಿಸಿ ರಮ್ಮಿ ಆಟ ಅವಕಾಶದ ಆಟವಾಗದೇ ಕೌಶಲ್ಯದ ಆಟವಾಗುವುದರಿಂದ ಯಾವುದೇ ಅಪರಾಧವಾಗುವುದಿಲ್ಲ ಎಂದು ಆರೋಪಿತರನ್ನು ಬಿಡುಗಡೆಗೊಳಿಸುವ ಅಥವಾ ದೋಷಾರೋಪಣ ವರದಿಗಳನ್ನೇ ರದ್ದು ಮಾಡಿದ ಅನೇಕ ತೀರ್ಪು ಗಳನ್ನು ನಾವು ಕಾಣಬಹುದು.

ಕಾನೂನಿನ ಕಬಂಧ ಬಾಹುಗಳಿಗೂ ಸಿಗದ ಈ ರಮ್ಮಿ ಆಟ ಲಕ್ಷಾಂತರ ಕುಟುಂಬಗಳನ್ನು ಬೀದಿಗೆ ತಂದಿದೆ. ಅನೇಕ ಪ್ರತಿಭಾವಂತ ಯುವಕರು ಈ ಮೋಹಕ ಆಟದ ಬೆನ್ನು ಹತ್ತಿ ತಮ್ಮ ಭವಿಷ್ಯವನ್ನೇ ಹಾಳುಗೆಡೆವಿಕೊಂಡಿದ್ದಾರೆ. ಇತ್ತ ರಮ್ಮಿ ಆಟದ ಮೂಲಕ ಕೋಟಿಗಟ್ಟಲೇ ಹಣಗಳಿಸಿದವರು ಸಮಾಜದಲ್ಲಿ ರಾಜಾ ರೋಷವಾಗಿ ತಮ್ಮ ವ್ಯವಹಾರಗಳನ್ನು ಮನೋರಂಜನಾ ಕ್ಲಬ್ ಹೆಸರಿ ನಲ್ಲಿ ನಡೆಸುತ್ತ, ಅಕ್ರಮ ಹಣದಲ್ಲಿಯೇ ತಮ್ಮ ಭವಿಷ್ಯವನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಉನ್ನತೀಕರಣಗೊಳಿ
ಸುತ್ತಿದ್ದಾರೆಂಬುದನ್ನು ಅಲ್ಲಗಳೆಯುವಂತಿಲ್ಲ.

ಇನ್ನು ಆನ್‌ಲೈನ್ ರಮ್ಮಿ ಆಟದ ಬಗ್ಗೆ ಹೇಳಲೇಬಾರದು. ಪ್ರತಿಯೊಬ್ಬರ ಮೊಬೈಲ್‌ಗೆ ರಮ್ಮಿ ಸರ್ಕಲ್ ಹೆಸರಿನಲ್ಲಿ ಒಂದು ಮೆಸೇಜ್ ಬರುತ್ತಿರುವುದನ್ನು ನೀವು ಗಮನಿಸಿರಬಹುದು. ಆ ಸಂದೇಶದಲ್ಲಿ ಒಂದು ವೆಬ್‌ಸೈಟ್‌ನ್ನು ಪ್ರವೇಶಿಸುವ ಲಿಂಕ್ ಇರುತ್ತದೆ ಅಥವಾ ಪ್ಲೇಸ್ಟೋರ್ ಮೂಲಕ ಆ ಆನ್‌ಲೈನ್ ರಮ್ಮಿ ಆಟದ ಅಪ್ಲಿಕೇಷನ್‌ನ್ನು ಮೊಬೈಲ್‌ಗೆ ಹಾಕಿಕೊಳ್ಳುವ ಅವಕಾಶದ ಕಿಂಡಿ ಇರುತ್ತದೆ.

ಜತೆಗೆ ಆಟದ ಮೊದಲ ಹಂತವಾಗಿ ನಿಮ್ಮ ಖಾತೆಗೆ ರುಪಾಯಿ ಎರಡು ಸಾವಿರ ಜಮೆ ಮಾಡಲಾಗಿದೆ, ಆಡಿ ಹಣ ಗಳಿಸಿ ಎನ್ನುವ ಪ್ರಚೋದಾನತ್ಮಕ ಮಾಹಿತಿಗಳಿರುತ್ತವೆ. ಇದೇ ರೀತಿಯಾಗಿ ನಿಮ್ಮ ಇ-ಮೇಲ್, ಫೇಸ್‌ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ ಖಾತೆಗಳಲ್ಲಿ ಈ ಆನ್‌ಲೈನ್ ರಮ್ಮಿ ಆಡಲು ಪ್ರೇರೇಪಿಸುವ ಸಂದೇಶಗಳು ಕಾಣುತ್ತಿರುವುದನ್ನು ನೋಡಿರಬಹುದು, ಇಂಥವುಗಳನ್ನು ಗಮನಿಸಿಯೇ Amit M Nair vs State Of Gujarat on 29 September, 2020 ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಹೀಗೆ ಹೇಳಿದೆ “Internet gambling presents essentially many of the same concerns that the traditional gambling activities have raised throughout the years: uneasiness about the morality of the activity; the likelihood of addiction; the possibility of fraud; and the conflict between the state versus central regulations.

The questions of morality primarily surface in connection with the Internet gambling’s accessibility to children because children have potentially unlimited access to the computers and the Internet. It is ossible that without proper monitoring they may access to the gambling Websites as readily as they could access the indecent materials. The supporters of a ban of Internet gambling maintain that outlawing the activity for all individuals is the only
way to ensure that a segment of the population,children, will be adequately protected from corruption.”

ಈ ಆನ್‌ಲೈನ್ ರಮ್ಮಿ ಆಟ ಕೌಶಲ್ಯದಾಟವೋ ಅಥವಾ ಜೂಜಾಟವೋ ಎನ್ನುವುದರ ಬಗ್ಗೆ ನ್ಯಾಯಾಂಗದಲ್ಲಿಯೂ ಗೊಂದಲ ವಿದ್ದು, ಆ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಸೂಕ್ತವಾದ ಕಾನೂನು ಜಾರಿಗೆ ತರುವುದು ಅಗತ್ಯತೆಯ ಬಗ್ಗೆ ತಮ್ಮ ತೀರ್ಪು ಗಳಲ್ಲಿ ಉಲ್ಲೇಖಿಸಿರುವುದು ಕಂಡು ಬರುತ್ತದೆ.

ಅಂದರೆ ಈಗ ಚೆಂಡು ಸರಕಾರದ ಅಂಗಳದಲ್ಲಿದೆ. ಸರಕಾರಗಳು ಈ ರಮ್ಮಿ ಆಟದ ಬಗ್ಗೆ ಸದ್ಯ ಇರುವ ಕರ್ನಾಟಕ ಪೊಲೀಸ್ ಅಧಿನಿಯಮದಲ್ಲಿಯಾದರೂ ಸೂಕ್ತ ತಿದ್ದುಪಡಿ ತರಲಿ ಅಥವಾ ನ್ಯಾಯಾಂಗ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಅನಗತ್ಯ
ವ್ಯಾಖ್ಯಾನಗಳಿಗೆ, ಅರ್ಥೈಸುವಿಕೆಗೆ ಅವಕಾಶ ಕೊಡದೇ ನಿಖರವಾದ ಅಭಿಪ್ರಾಯ ನೀಡುವುದು ಸೂಕ್ತ.

ಇಲ್ಲದಿದ್ದಲ್ಲಿ ಪಣವಿಟ್ಟು ಆಡಿದರೆ ಜೂಜಾಟ, ಇಲ್ಲದಿದ್ದರೆ ಅದು ಕೌಶಲ್ಯದಾಟ ಎಂಬ ಈ ಸಣ್ಣ ಬಿರುಕಿನಲ್ಲಿಯೇ ದೊಡ್ಡ ದೊಡ್ಡ ಅಪರಾಧಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವ ದಾರಿ ಕಂಡು ಕೊಳ್ಳುತ್ತಾರೆ. ಆದ್ದರಿಂದ ಈ ರಮ್ಮಿ ಆಟದ ಸ್ವರೂಪ ಹಾಗೂ ಗುಣ ಲಕ್ಷಣಗಳನ್ನು ಅವಲೋಕಿಸಿದಾಗ, ಈ ಆಟದ ಚಲನೆ ಕೌಶಲ್ಯ ಬಯಸಿದರೂ ಫಲಿತಾಂಶ, ಅಂದಾಜು ಹಾಗೂ ಸೆಳೆಯುವ ಎಲೆಯ ಪರಿಣಾಮದ ಮೇಲೆ ಅವಲಂಬಿತವಾಗುವುದರಿಂದ ಇದನ್ನು ಅವಕಾಶದ ಆಟ ಅಥವಾ ಜೂಜಾಟ ವೆಂದೇ ಪರಿಗಣಿಸುವುದು ಸೂಕ್ತವೆಂದು ಅಭಿಪ್ರಾಯಪಡುವುದು ಲೇಸು.