ಸಂಗತ
ವಿಜಯ್ ದರಡಾ
ವಿಶ್ವದ ಕುರಿತಾದ ನಮ್ಮ ಪರಿಕಲ್ಪನೆಯನ್ನೇ ಅಂತರ್ಜಾಲ ಬದಲಿಸಿದೆ ಮತ್ತು ಅದು ಜ್ಞಾನನಿಧಿಯಾಗಿ ನಮ್ಮ ಮುಂದಿದೆ. ಆದರೆ ಜನರ ಮುಂದೆ ಏನನ್ನು ಒದಗಿಸಲಾಗಿದೆ ಮತ್ತು ಜನರು ಏನನ್ನು ನೋಡಿ ಯಾವ್ಯಾವ ರೀತಿಯಲ್ಲಿ ಪ್ರಭಾವಿತರಾಗು ತ್ತಿದ್ದಾರೆಂಬುದನ್ನೂ ನಾವು ಗಮನಕ್ಕೆ ತೆಗೆದುಕೊಳ್ಳ ಬೇಕಲ್ಲವೇ?
ಈವಾರದ ನನ್ನ ಅಂಕಣ ಬರೆಯಲು ಕುಳಿತಾಗ ಹಲವು ಸಂಗತಿಗಳು ನನ್ನ ತಲೆಯೊಳಗೆ ಕೊರೆಯತೊಡಗಿದವು. ನನಗಾಗ ಅಚ್ಚರಿ ಎನಿಸಿತು. ಚಿತ್ರನಟ ಅಭಿಷೇಕ್ ಮತ್ತು ಐಶ್ವರ್ಯ ರೈ ಬಚ್ಚನ್ ಮಗಳು ಆರಾಧ್ಯಳ ಅನಾರೋಗ್ಯದ ಕುರಿತಾಗಿ ಅಷ್ಟೇ ಅಲ್ಲ, ಆಕೆಯ ಮರಣದ ಸುದ್ದಿಯನ್ನೂ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದ ವ್ಯಕ್ತಿಯ ಮಾನಸಿಕತೆಯ ಬಗ್ಗೆ ನನಗೆ ಹೇವರಿಕೆ ಉಂಟಾಯಿತು.
ವಿಕೃತ ಮನಸ್ಸು ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತದೆ ಮತ್ತು ಅನೇಕರು ಇಂತಹ ವಿಚಾರಗಳಿಗೆ ತಮಗರಿವಿಲ್ಲದೇ ಪ್ರಚಾರ ಕೊಡುತ್ತಾರೆ. ಶುಭಾಶೀರ್ವಾದ ಕೋರುವುದು ನಮ್ಮ ಸಂಸ್ಕೃತಿ. ಯಾರದೇ ಸಾವನ್ನು ಬಯಸುವ ಸಂಸ್ಕೃತಿ ನಮ್ಮದಲ್ಲ. ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಇಂತಹ ವಿಕೃತ ಮನಸ್ಸುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿವೆ.
ಬಚ್ಚನ್ ಕುಟುಂಬಕ್ಕೆ ಇದೇನೂ ಮೊದಲಲ್ಲ. ಅವರು ಕೋರ್ಟಿನ ಮೆಟ್ಟಿಲೇರಿದ್ದಾರೆ. ಆದರೆ ಅಲ್ಲಿ ಅಂತಹ ಹಲವು ಕಥೆಗಳಿವೆ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧದ ಅಪಕ್ವ ಹೇಳಿಕೆಗಳು ಅಪರಾಧಿಕವಾಗಿದ್ದು, ಅಂತಹ ಹಲವು ಪ್ರಕರಣಗಳು ನ್ಯಾಯಾಲಯಗಳ ಮುಂದಿವೆ. ಇದೊಂದು ಬಗೆಯಲ್ಲಿ ಗಾಸಿಪ್ ಹರಡುವ ಕೆಲಸ. ರಾಜಕೀಯ ರಂಗದಲ್ಲೂ ಇದು ಸರ್ವೇಸಾಮಾನ್ಯ. ಇನ್ನೊಬ್ಬರನ್ನು ಗುರಿಮಾಡಿ, ಪೇಚಿಗೀಡುಮಾಡಿ ವಿಕೃತ ಖುಷಿ ಅನುಭವಿಸುವ ಪರಿಪಾಠ. ಅದೊಂದು ಬಗೆಯ ರೋಗ. ಇಂತಹ ಅಪರಾಧ ಎಸಗುವವರು ಮತ್ತೊಬ್ಬರ ಮೇಲಾಗುವ ಪರಿಣಾಮದ ಬಗ್ಗೆ, ಅವರ ಕುಟುಂಬ ಅನುಭವಿಸುವ ನೋವಿನ ಬಗ್ಗೆ ಚಿಂತನೆ ಮಾಡಿರುವುದಿಲ್ಲ.
ಪ್ರಸ್ತುತ ಆರಾಧ್ಯ ಪ್ರಕರಣದಲ್ಲಿ ಎಲ್ಲ ವಿಡಿಯೋಗಳನ್ನು ಗೂಗಲ್ ಮತ್ತು ಯೂಟ್ಯೂಬ್‌ನಿಂದ ಅಳಿಸಿಹಾಕಲು ಮತ್ತು
ನಿಷ್ಕ್ರಿಯ ಗೊಳಿಸಲು ದೆಹಲಿ ಹೈಕೋರ್ಟು ಆದೇಶ ಜಾರಿ ಮಾಡಿದೆ. ಅಷ್ಟೇ ಅಲ್ಲ, ಹೊಸದಾಗಿ ಯಾರಾದರೂ ಅಂತಹ
ವಿಡಿಯೋ ಅಪ್ಲೋಡ್ ಮಾಡಿದರೆ ಅದು ಕೂಡ ಆರಾಧ್ಯಾಳ ಖಾಸಗಿತನಕ್ಕೆ ಧಕ್ಕೆ ತರುವಂತಹದಾಗುತ್ತದೆ ಮತ್ತು ಶಿಕ್ಷಾರ್ಹ
ಅಪರಾಧವಾಗುತ್ತದೆ. ಗೂಗಲ್ ಮತ್ತು ಯೂಟ್ಯೂಬುಗಳಲ್ಲಿ ಇಂತಹ ಮಾಹಿತಿ ಪಡೆಯಲು ಹೆಚ್ಚೇನೂ ಕಷ್ಟವಿಲ್ಲ. ಚಿಟಿಕೆ
ಹೊಡೆದರೆ ಸಾಕು, ಎಲ್ಲವೂ ಕಣ್ಮುಂದೆ ಪ್ರತ್ಯಕ್ಷ ವಾಗುತ್ತದೆ.
ಯಾರೇ ಆಗಿರಲಿ, ಅಪರಾಽಗಳಿಗೆ ಶಿಕ್ಷೆಯಾಗಬೇಕು ಎಂಬುದಷ್ಟೇ ನನ್ನ ಅಪೇಕ್ಷೆ. ಗೂಗಲ್ ಮತ್ತು ಯೂಟ್ಯೂಬುಗಳಿಗೂ ಕೋರ್ಟು ಎಚ್ಚರಿಕೆಯನ್ನು ಕೊಟ್ಟಿದೆ. ಈ ಜಾಲತಾಣ ಮಾಧ್ಯಮಗಳು ಹೀಗೇಕೆ ಮಾಡುತ್ತಿವೆ. ಕೋರ್ಟುಗಳಿಂದ ಅನೇಕ ಬಾರಿ ಎಚ್ಚರಿಕೆ ಕೊಡಲ್ಪಟ್ಟಿದ್ದರೂ ಅವು ಜಾರಿಕೊಳ್ಳುವ ಮನಸ್ಥಿತಿಯಲ್ಲಿಯೇ ಇವೆ. ಇದೇಕೆಂದು ನನಗೆ ಅರ್ಥವಾಗುತ್ತಿಲ್ಲ.
ನಾವು ಏನು ಬೇಕಾದರೂ ಮಾಡಬಹುದು, ಕಾನೂನಿನಿಂದ ಅತೀತರು ಎಂದೇನಾದರೂ ಇವರು ಭಾವಿಸಿದ್ದಾರೆಯೇ? ನೆನಪಿಡಿ, ಈ ಎಲ್ಲ ಮಾಧ್ಯಮಗಳು ಪರಸ್ಪರ ಸಂವಹನದ ವೇದಿಕೆಗಳೆಂದು ಶುರುವಾಗಿ, ಕ್ರಮೇಣ ತಮ್ಮನ್ನು ಸಾಮಾಜಿಕ
ಮಾಧ್ಯಮಗಳೆಂದು ಬಿಂಬಿಸಿಕೊಂಡಿವೆ. ಮಾಧ್ಯಮ ಎಂಬುದಕ್ಕೆ ಪೂರಕವಾದ ಯಾವುದಾದರೂ ಅಂಶ ಅದರಲ್ಲಿದೆಯೇ? ಮಾಧ್ಯಮ ಎಂದರೆ ಸುದ್ದಿ ಮತ್ತು ಘಟಿತ ಪ್ರಕರಣಗಳ ವಿಶ್ಲೇಷಣೆಗೆ ಇರುವ ವೇದಿಕೆ.
ವೃತ್ತಪತ್ರಿಕೆ, ಟಿವಿ ಮಾಧ್ಯಮ ಮತ್ತು ವೆಬ್ ಸೈಟುಗಳಲ್ಲಿ ತನಿಖೆ ನಡೆಸುವುದಕ್ಕೆ ಮತ್ತು ಸುದ್ದಿಯ ಸತ್ಯಾಸತ್ಯತೆ ಪರಾಮರ್ಶೆ ಮಾಡುವುದಕ್ಕೆ ಅವಕಾಶವಿದೆ. ಇಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಅಸಮ್ಮತ ಸಂಗತಿಗಳಾವುವೂ ಪ್ರಕಟವಾಗಿಲ್ಲ ಎಂಬುದನ್ನು ಖಾತ್ರಿಪಡಿಸುತ್ತಾರೆ. ಆದರೆ ಸಾಮಾಜಿಕ ಮಾಧ್ಯಮಗಳಿಗೆ ಅಂತಹ ಯಾವ ಅಂಕುಶವೂ
ಇಲ್ಲ. ಅವರು ಏನು ಬೇಕಾದರೂ ಪ್ರಕಟ ಮಾಡಬಹುದು. ಗೂಗಲ್, ಯೂಟ್ಯೂಬ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ, ಫೇಸ್ ಬುಕ್
ಇವೆಲ್ಲವುಗಳಲ್ಲಿ ಯಾರು ಏನು ಬೇಕಾದರೂ ಅಪ್ಲೋಡ್ ಮಾಡಬಹುದು ಎಂಬಂತಹ ಪರಿಸ್ಥಿತಿ ಇದೆ.
ನೀವು ಫೇಸ್ ಬುಕ್ ನೋಡುತ್ತಿದ್ದರೆ ಥಟ್ಟಂತ ನಿಮ್ಮನ್ನು ನಾಚಿಕೆಗೀಡು ಮಾಡಬಲ್ಲ ಒಂದು ವಿಡಿಯೋ ಪ್ರತ್ಯಕ್ಷವಾಗುತ್ತದೆ. ಅದು ಅಶ್ಲೀಲವೂ, ನಿಂದನಾತ್ಮಕವೂ, ಲೈಂಗಿಕ ಸಂಬಂಧಿ ತುಣುಕೂ ಆಗಿರಬಹುದು. ಅವೆಲ್ಲಕ್ಕೂ ಒಂದು ಹತೋಟಿ ಇರಬೇಕಲ್ಲ, ಅದು ಇಲ್ಲವೇ ಇಲ್ಲ. ಸರಕಾರ ಕ್ರಮಕ್ಕೆ ಮುಂದಾದಾಗ ಎಲ್ಲರೂ ಜೋರಾಗಿ ಅರಚಿ ಗುಲ್ಲೆಬ್ಬಿಸುತ್ತಾರೆ. ಆದರೆ ಇಲ್ಲಿ
ತಮ್ಮದೇ ಆದ ತೀರ್ಪನ್ನು ಅಂಥವರು ಕೊಡುವುದಿಲ್ಲ.
ಸರಕಾರ ನಿಮ್ಮದೇ, ಪ್ರಜಾಪ್ರಭುತ್ವವೂ ನಿಮ್ಮದೇ ಅಲ್ಲವೇ? ಹಾಗಿರುವಾಗ ಇಂತಹ ವಿಷಯ ಬಂದಾಗ ಅದರ ಕುರಿತಾಗಿ
ಕ್ರಮಕ್ಕೆ ಮುಂದಾಗಬೇಕಾದವರೂ ನಾವೇ ಅಲ್ಲವೇ? ಮಾಹಿತಿ ತಂತ್ರಜ್ಞಾನದ ಕುರಿತಾದ ಸಂಸದೀಯ ಸಮಿತಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ಈ ವಿಚಾರಗಳು ಹೇಗೆ ಮುನ್ನೆಲೆಗೆ ಬರುತ್ತದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ವಿಶ್ವದ ಕುರಿತಾದ ನಮ್ಮ ಪರಿಕಲ್ಪನೆಯನ್ನೇ ಅಂತರ್ಜಾಲ ಬದಲಿಸಿದೆ ಮತ್ತು ಅದು ಜ್ಞಾನನಿಧಿಯಾಗಿ ನಮ್ಮ ಮುಂದಿದೆ. ಆದರೆ ಜನರ ಮುಂದೆ ಏನನ್ನು ಒದಗಿಸಲಾಗಿದೆ ಮತ್ತು ಜನರು ಏನನ್ನು ನೋಡಿ ಯಾವ್ಯಾವ ರೀತಿಯಲ್ಲಿ ಪ್ರಭಾವಿತರಾಗುತ್ತಿದ್ದಾರೆಂಬುದನ್ನೂ ನಾವು
ಗಮನಕ್ಕೆ ತೆಗೆದುಕೊಳ್ಳಬೇಕಲ್ಲವೇ? ಪ್ರತಿಯೊಂದು ಸಂಗತಿಗೂ ಸಕಾರಾತ್ಮಕ ಮತ್ತು ನಕಾರಾತ್ಮಕ ಮಗ್ಗುಲುಗಳಿರುತ್ತವೆ.
ನಾವು ಎಲ್ಲವನ್ನೂ ತಕ್ಕಡಿಯಲ್ಲಿ ಅಳೆದುತೂಗಿ ನೋಡಬೇಕು. ಯಾರೋ ಮಾಡಿದ ತಪ್ಪಿಗೆ ಸಭ್ಯ ಜನಸಮುದಾಯವೂ ಒಮ್ಮೊಮ್ಮೆ ತಲೆತಗ್ಗಿಸಬೇಕಾಗುತ್ತದೆ. ಬಿಹಾರದಿಂದ ತಮಿಳುನಾಡಿಗೆ ವಲಸೆ ಹೋಗಿರುವ ವಲಸಿಗ ಕಾರ್ಮಿಕರನ್ನು ಅಟ್ಟಾಡಿಸಿಕೊಂಡು ಹೊಡೆಯುವ ದೃಶ್ಯಾವಳಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹರಿದಾಡತೊಡಗಿತು. ಬಿಹಾರದ ಜನ ರೊಚ್ಚಿಗೆದ್ದರು. ಆದರೆ ತಮಿಳುನಾಡಿನ ಸರಕಾರ ಇಂತಹದೊಂದು ಪ್ರಕರಣ ತಮ್ಮ ಗಮನಕ್ಕೆ ಯಾಕೆ ಬಂದಿಲ್ಲವೆಂದು ಅಚ್ಚರಿಗೊಳಗಾಯಿತು.
ತನಿಖೆಯ ನಂತರ ಇದೊಂದು ನಕಲಿ ವಿಡಿಯೋ, ಇದನ್ನು ತಯಾರಿಸಿದ ಬಿಹಾರದ ಯೂಟ್ಯೂಬರ್ ಮನೀಶ್ ಕಶ್ಯಪ್
ಎಂಬುದು ಸಾಬೀತಾಯಿತು. ತಮಿಳುನಾಡಿನಲ್ಲಿ ಅಂತಹ ಪ್ರಕರಣ ನಡೆದೇ ಇರಲಿಲ್ಲ. ಅವೆಲ್ಲವೂ ತಮಿಳುನಾಡಿನ
ಹೊರಗಡೆ ಯಾವುದೋ ಕಾಲದಲ್ಲಿ ನಡೆದ ವಿದ್ಯಮಾನಗಳ ವಿಡಿಯೋ ಫೂಟೇಜ್ ಆಗಿದ್ದವು. ಹೋಳಿ ಹಬ್ಬದ ಸಮಯದಲ್ಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸಾಗುತ್ತಿರುವ ದೃಶ್ಯಾವಳಿಗಳನ್ನೂ ಅದೇ ಯೂಟ್ಯೂಬರ್ ತೋರಿಸಿದ್ದ.
ಮೊದಲಿಗೆ ಜನರು ಆತನನ್ನು ನಂಬಿದ್ದರು. ಮನೀಶ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆದರೆ ಇಲ್ಲೇಳುವ ಪ್ರಶ್ನೆ ಯೂಟ್ಯೂಬ್ ಅಂತಹದೊಂದು ವಿಡಿಯೋವನ್ನು ಪರಿಶೀಲನೆ ಮಾಡದೇ ಅಪ್ಲೋಡ್ ಮಾಡುವುದಕ್ಕೆ ಏಕೆ ಅವಕಾಶ ಕೊಡುತ್ತದೆ. ಅಂತಹ ನಿಯಂತ್ರಣ ವ್ಯವಸ್ಥೆ ಅಲ್ಲಿ ಇಲ್ಲವೇ ಇಲ್ಲ. ಟ್ವಿಟ್ಟರ್ ತನ್ನದೇ ಆದ ನಂಬಿಕೆ ಮತ್ತು ಸುರಕ್ಷತೆ ಸಮಿತಿಯನ್ನು ರಚಿಸಿಕೊಂಡಿದೆ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಯಾವುದೇ ಸುದ್ದಿ ಪ್ರಸಾರವಾದ ನಂತರದಲ್ಲಿ ಅದರ ಸತ್ಯಾಸತ್ಯತೆಯ ಬಗ್ಗೆ ಅವರು ಹೆಚ್ಚಾಗಿ ಮಂಡೆಬಿಸಿ ಮಾಡಿಕೊಳ್ಳುವುದಿಲ್ಲ.
ಯು. ಎನ್ ವಕ್ತಾರ ಸ್ಟೆ-ನ್ ಡುಜಾರಿಕ್ ಪ್ರಕಾರ ದ್ವೇಷಭಾವನೆ ಹರಡುವ ಸುದ್ದಿಗಳಿಗೆ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ
ಹೆಚ್ಚಿನ ಬೆಂಬಲ ಸಿಗುತ್ತದೆ. ಭಾರತದ ಮಟ್ಟಿಗಂತೂ ನಾವಿದನ್ನು ನೋಡುತ್ತಿದ್ದೇವೆ ಮತ್ತು ಅದರ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಇದು ನಮ್ಮದೇ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ.
ಎಚ್ಚೆತ್ತುಕೊಳ್ಳುವುದಕ್ಕೆ ಇದು ಸಕಾಲ. ಕೆಲವು ಸಂಗತಿಗಳು ಬಹುಬೇಗ ನಿಮ್ಮನ್ನು ತಲುಪಿಬಿಟ್ಟಾಗ ಗಲಿಬಿಲಿಗೆ ಒಳಗಾಗುವುದು ಸಹಜ. ನಿಮ್ಮ ಮಿದುಳನ್ನು ಸರಿಯಾಗಿ ಬಳಸಿ, ಅನ್ಯಥಾ ಇಂತಹ ಗಾಳಿಸುದ್ದಿಗಳೇ ಬಿರುಗಾಳಿಯಾಗಿ
ನಮಗೆ ನೋವನ್ನುಂಟು ಮಾಡುವುದನ್ನು ತಪ್ಪಿಸಲಾಗದು.