ಅಭಿಮತ
ಎ.ಬಿ.ಶೆಟ್ಟಿ
ಕೋವಿಡ್ ಸೋಂಕನ್ನು ತಡೆಯಲು ಸರಕಾರವು ತೆಗೆದುಕೊಂಡ ಕ್ರಮಗಳ ಬಗೆಗೆ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಸರಕಾರದ ಕೆಲವು ಕಠಿಣ ಹೆಜ್ಜೆಗಳು ಸಮಾಜದ ಕೆಲವು ವರ್ಗದ ಮತ್ತು ವ್ಯಾಪಾರ ಉದ್ಯಮಗಳಿಗೆ ತೊಂದರೆ ಅನಿಸಿದರೂ, ಈ ನಿಟ್ಟಿನಲ್ಲಿ ಅನಿವಾರ್ಯತೆ ಸರಕಾರದ ಕೈ ಕಟ್ಟಿತ್ತು.
ಜೀವ ಉಳಿದರೇ ಜೀವನ ಎನ್ನುವ ಸಿದ್ಧಾಂತವನ್ನು ಅದು ಮನಸ್ಸಿಲ್ಲದಿದ್ದರೂ ಜನತೆಯ ಹಿತದ ದೃಷ್ಟಿಯಲ್ಲಿ ಕೈಕೊಳ್ಳಬೇಕಾಯಿತು. ಕರೋನಾ ಉಪಟಳ ಮೊದಲ ಸುತ್ತಿನಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳನ್ನು ಆವರಿಸಿದ್ದು, ಹಿರಿಯ ನಾಗರಿಕರು ಮತ್ತು ಮಧ್ಯಮವರ್ಗದವರು ಹೆಚ್ಚು ಬಲಿಯಾಗಿದ್ದರು. ಆದರೆ, ಎರಡನೆ ಅಲೆ ಹೆಚ್ಚು ಪ್ರಮಾಣದಲ್ಲಿ ದೊಡ್ಡವರನ್ನು ಮತ್ತು ಸೆಲೆಬ್ರಿಟಿಗಳನ್ನು ಬಲಿತೆಗೆದುಕೊಳ್ಳುವುದರೊಂದಿಗೆ ಗ್ರಾಮಾಂತರ ಪ್ರದೇಶಗಳನ್ನೂ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದ್ದು, ಸಾವು ನೋವುಗಳು ಕಂಡುಬಂದವು.
ಕರೋನಾಕ್ಕೆ ಹೆದರಿ ನಗರ – ಪಟ್ಟಣ ಪ್ರದೇಶದಿಂದ ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದು ಸುರಕ್ಷತೆಯ ದೃಷ್ಟಿಯಿಂದ. ಮೊದಲ ಅಲೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಹಾವಳಿ ಮಾಡದಿರುವುದರಿಂದ ಜನರು ಎರಡನೆ ಲೆಯೂ ತಮ್ಮನ್ನು ತಾಗದಿರಬಹುದು ಎನ್ನುವ ದೃಢ ವಿಶ್ವಾಸ ಮತ್ತು ಭ್ರಮೆಯಲ್ಲಿ ಇದ್ದರು.
ಕರೋನಾವನ್ನು ತಡೆಯಲು ಲಸಿಕೆಯನ್ನು ತೆಗೆದುಕೊಳ್ಳಬೇಕು ಎನ್ನುವ ಇಚ್ಛಾಶಕ್ತಿ ಕೇವಲ ಮೇಲುಸ್ತರದಲ್ಲಿ ಇತ್ತೇ ವಿನಃ ಒತ್ತಾಸೆ ಇರಲಿಲ್ಲ.
ಲಸಿಕೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುವುದರಲ್ಲಿ ಸರಕಾರವಾಗಲಿ ಸಂಬಂಧಪಟ್ಟ ಇಲಾಖೆಯಾಗಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಲಸಿಕೆ ಬಗೆಗೆ ಮಾಧ್ಯಮದಲ್ಲಿ ಹರಿದಾಡುವ ಗೊಂದಲಕಾರಿ ಸುದ್ದಿಗಳಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಕಾಣುತ್ತಿತ್ತು. ಕೆಲವು ಹಳ್ಳಿ ಗಳಲ್ಲಿ ಜನರು, ನಿಮ್ಮ ಲಸಿಕೆಯೂ ಬೇಡ, ನಿಮ್ಮ ಸೌಲಭ್ಯಗಳೂ ಬೇಡ ಎಂದು ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯಾವಳಿಗಳು
ದೃಶ್ಯ ಮಾಧ್ಯಮದಲ್ಲಿ ಕಾಣುತ್ತದೆ.
ಲಸಿಕೆಗಾಗಿ ಕೋವಿನ್‌ನಲ್ಲಿ ನೋಂದಣಿಮಾಡಿಕೊಳ್ಳಬೇಕೆನ್ನುವ ನಿಬಂಧನೆ ಕೂಡಾ ಹಳ್ಳಿಗಳಲ್ಲಿ ಲಸಿಕೆ ಕಾರ್ಯಕ್ರಮ ಹಿನ್ನಡೆ ಕಾಣಲು ಕಾರಣ ಎಂದು ಹೇಳ ಲಾಗುತ್ತದೆ. ಹಳ್ಳಿಗಳಲ್ಲಿ ಶೇ.60 ಜನರಿಗೆ ಕೋವಿನ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯದು. ಬೋಸ್ಟನ್ ಕನ್ಸಲ್ಟಿಂಗ್ ಫಾರ್ಮ್ ಪ್ರಕಾರ ಸುಮಾರು ಶೇ.63 ಹಳ್ಳಿಗಳಲ್ಲಿ ಮತ್ತು ಶೇ.43 ಸಣ್ಣ ಪಟ್ಟಣಗಳಲ್ಲಿ ಲಸಿಕೆಗಾಗಿ ನೋಂದಣಿ ಮಾಡಿಸಿಕೊಳ್ಳುವುದು ತಿಳಿಯದು. ಕರೋನಾ ವಿಚಾರದಲ್ಲಿ ಒಂದು ಸ್ವಾಗತಾರ್ಹ ಬೆಳವಣಿಗೆ ಎಂದರೆ ಜನರು ಜಾಗೃತಗೊಂಡಿದ್ದಾರೆ.
ಎರಡನೇ ಅಲೆಯ ತೀವ್ರತೆ ಅವರ ದೃಷ್ಟಿಕೋನ ಮತ್ತು ಚಿಂತನೆಯನ್ನು ಬದಲಾಯಿಸಿದಂತೆ ಕಾಣುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಮಾರ್ಚ್ 2021ರಲ್ಲಿ ಶೇ.62 ಜನರು ಲಸಿಕೆಗೆ ಒಲವು ತೋರಿಸಿದರೆ ಮೇ ತಿಂಗಳಿನಲ್ಲಿ ಶೇ 78 ಜನರು ಲಸಿಕೆ ತೆಗೆದುಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಸರಕಾರ ಕೂಡಾ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಪಡೆಯಲು ನೋಂದಣಿ ಕಡ್ಡಾಯ ಎನ್ನುವುದನ್ನು ಹಿಂತೆಗೆದುಕೊಂಡಿದೆ. ಸರಕಾರ ಕರೋನಾ ವಿರುದ್ಧ ಹೋರಾಡಲು ಸಕಲ ಸೌಲಭ್ಯವನ್ನು ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಅದು ಅನುಷ್ಠಾನವಾಗದಿರುವುದು ದುರದೃಷ್ಟಕರ. ಗ್ರಾಮಾಂತರ ಪ್ರದೇಶಗಳಲ್ಲಿ ಇಂಥ ವಿಷಯಗಳ ನಿಟ್ಟಿನಲ್ಲಿ ಇನ್ನೂ ಮೂಢ ನಂಬಿಕೆಗಳು ಪ್ರಚಲಿತವಿದ್ದು, ಮುಗ್ದರು ಇದಕ್ಕೆ ಬಲಿಯಾಗ ದಂತೆ ಎಚ್ಚರ ವಹಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ಡಾಕ್ಟರ್ ಮತ್ತು ಸಿಬ್ಬಂದಿ ಕೊರತೆ ಕಾಣುತ್ತಿದ್ದು, ಇದನ್ನು ಆದ್ಯತೆಯ ಆಧಾರದ ಮೇಲೆ ಸರಿಪಡಿಸುವ ಕಾರ್ಯ ಶೀಘ್ರಗತಿಯಲ್ಲಿ ಆಗಬೇಕು. ಇದಕ್ಕೂ ಹೆಚ್ಚಾಗಿ ಕರೋನಾ ಲಾಕ್ ಡೌನ್ ನಿಯಮಾವಳಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ತೆಗೆದುಕೊಳ್ಳಬೇಕು.
ದೇಶದ ಭವಿಷ್ಯ ಇರುವುದು ಅನ್ನ ನೀಡುವ ಹಳ್ಳಿಗಳಲ್ಲಿ. ಇವರ ಬದುಕು ಹಸನಾದಾಗ ಮಾತ್ರ ದೇಶದ ಬದುಕು ಹಸನ್ಮುಖಿಯಾಗಿರುತ್ತದೆ.