Friday, 20th September 2024

ಸಾಲಿ ರಾಮಚಂದ್ರರಾಯರು ಮತ್ತು ಅವರ ಮೊಮ್ಮಗ

ತಿಳಿರುತೋರಣ

ಶ್ರೀವತ್ಸ ಜೋಶಿ

ಅಪರಿಗ್ರಹ ಅಂತೊಂದು ಜೀವನಮೌಲ್ಯ. ಬದುಕು ಸಾಗಿಸಲು ಕನಿಷ್ಠ ಪ್ರಮಾಣದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಸಂಪನ್ಮೂಲವನ್ನು ಹೊಂದಿರುವುದು; ಅದಕ್ಕಿಂತ ಒಂದು ನೂಲೆಳೆಯಷ್ಟೂ ಹೆಚ್ಚು ಸಂಗ್ರಹಿಸಿಡದಿರುವುದು; ಅದೂ ಬೇಕು ಇದೂ ಬೇಕು ಎಲ್ಲವೂ ತನ್ನದಾಗಬೇಕು ಎಂದು ದುರಾಸೆ ತೋರದಿರುವುದು – ಇದು ಅಪರಿಗ್ರಹ.

‘ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್| ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್| ಎಂದು
ಉಪನಿಷತ್ ವಾಕ್ಯ ಹೇಳುವುದು ಇದನ್ನೇ. ಈ ಜಗತ್ತಿನಲ್ಲಿ ಏನೆಲ್ಲ ಇದೆಯೋ ಅದೆಲ್ಲವೂ ಈಶ್ವರನಿಗೆ ಸೇರಿದ್ದು. ಆದ್ದರಿಂದ ತ್ಯಾಗ
ಮಾಡಿ ಉಣ್ಣಬೇಕು ಬದುಕಬೇಕು. ಅತಿಯಾಸೆ ಒಳ್ಳೆಯದಲ್ಲ. ಧನದಾಹವಂತೂ ಬೇಡವೇ ಬೇಡ. ನಮ್ಮ ಭಾರತೀಯ ಸಂಸ್ಕೃತಿ ಯಲ್ಲಿ ಯೋಗಿಗಳು, ಜೈನಮುನಿಗಳು, ಬುದ್ಧ, ಬಸವಣ್ಣ, Gandhiji ಇವರೆಲ್ಲ ಈ ಮೌಲ್ಯವನ್ನು ಮಾದರಿಯಾಗಿಟ್ಟುಕೊಂಡೇ ಬದುಕಿ ತೋರಿಸಿದವರು.

ವೇದಾಂತ ದೇಶಿಕರೆಂಬ ತಮಿಳು ಸಂತಶ್ರೇಷ್ಠರು ಕೂಡ ಹೀಗೆಯೇ. ಅವರು ಊಂಛವೃತ್ತಿ(ಭಿಕ್ಷಾಟನೆ) ನಡೆಸಿ ಸಂಸಾರ ಸಾಗಿಸು ತ್ತಿದ್ದರು. ಒಮ್ಮೆ ಅವರ ದೀನಸ್ಥಿತಿಯನ್ನು ಕಂಡು ಮರುಗಿದ ಶ್ರೀಮಂತ ಗೃಹಿಣಿಯೊಬ್ಬಳು ಬೇಕಂತಲೇ ಧಾನ್ಯದೊಂದಿಗೆ ಒಂದಿಷ್ಟು ಮುತ್ತುರತ್ನಗಳನ್ನೂ ಸೇರಿಸಿ ಜೋಳಿಗೆಗೆ ಸುರಿದಿದ್ದಳಂತೆ. ದೇಶಿಕರು ಮನೆಯಲ್ಲಿ ಹೆಂಡತಿಗೆ ಹೀಗೆಂದರಂತೆ: ಈದಿನ ಸಿಕ್ಕಿದ ಅಕ್ಕಿಯಲ್ಲಿ ಹುಳಗಳಿವೆ. ಅವನ್ನೆಲ್ಲ ಬಿಸಾಡಿ ಅಕ್ಕಿಯನ್ನಷ್ಟೇ ತೊಳೆದು ಬಳಸು.

ಆಕೆ ಅದನ್ನೇ ಮಾಡಿದಳು. ಹಾಗಿತ್ತು ಅವರ ನಡೆ – ನುಡಿಗಳಲ್ಲಿ ಅಪರಿಗ್ರಹ! ‘ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ’ ಎಂದ ಅಪ್ಪಟ ಕನ್ನಡಪ್ರೇಮಿ, ಅಪ್ರತಿಮ ದೇಶಬಂಧು, ಬಡತನದಲ್ಲೇ ಬೆಂದು ಬದುಕಿದ ಸಾಲಿ ರಾಮಚಂದ್ರರಾಯರೂ ಇದೇ ಸಾಲಿ ನಲ್ಲಿ ನಿಲ್ಲುವವರು. ಜಮೀನ್ದಾರರಿಂದ ಆಹಾರಧಾನ್ಯ ಸಂಗ್ರಹಿಸಿ ಜೀವನ ಸಾಗಿಸಬೇಕಾದ ಬಡತನ. ಆ ಧನಿಕರೇನೋ ಧಾರಾಳಿ
ಯಾಗಿಯೇ ಇರುತ್ತಿದ್ದರು. ಆದರೆ ರಾಮಚಂದ್ರರಾಯರು ಪ್ರತಿದಿನವೂ ಅವರಲ್ಲಿಗೆ ಹೋಗಿ ಆವತ್ತಿಗೆ ಎಷ್ಟು ಬೇಕೋ ಅಷ್ಟು
ಮಾತ್ರ ಧಾನ್ಯ ಪಡೆಯುವರು.

ಒಂದು ದಿನ ಜಮೀನ್ದಾರರು ಕೇಳಿಯೇಬಿಟ್ಟರು: ‘ಅಲ್ಲಯ್ಯಾ, ಪ್ರತಿದಿನವೂ ಇಷ್ಟು ದೂರ ನಡೆದು ಬಂದು ಧಾನ್ಯ ಪಡೆದು ಕೊಂಡು ಹೋಗುತ್ತೀ. ಅದಕ್ಕಿಂತ, ನಿನಗೆ ಒಂದು ತಿಂಗಳಿಗೆ ಎಷ್ಟು ಬೇಕಾಗುತ್ತದೋ ಹೇಳಬಹುದಲ್ವಾ? ಅಷ್ಟನ್ನೂ ಕಳುಹಿಸಿ ಕೊಡುವ ವ್ಯವಸ್ಥೆ ನಾನೇ ಮಾಡುತ್ತೇನೆ.’ ಆಗ ರಾಮಚಂದ್ರರಾಯರು ಹೀಗೆ ನುಡಿದಿದ್ದರಂತೆ: ‘ಸ್ವಾಮೀ, ನಿಮ್ಮ ಔದಾರ್ಯಕ್ಕೆ ನಾನು ಆಭಾರಿ. ಆದರೆ ಮನೆಯಲ್ಲಿ ಸಂಗ್ರಹಿಸಿಟ್ಟರೆ ಧಾನ್ಯ ಹಾಳಾಗದಂತೆ ನಾನೇ ನೋಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಬೇರೆ
ಸಲಕರಣೆಗಳು ಅಗತ್ಯ. ಧಾನ್ಯವನ್ನು ಹುಳಹುಪ್ಪಟೆ ತಿನ್ನದಂತೆ ಎಚ್ಚರವಹಿಸಬೇಕು.

ಅದಕ್ಕೆ ಮತ್ತೊಂದಿಷ್ಟು ಸಮಯ, ಶ್ರಮ. ಈಗ ನನಗಿಲ್ಲದಿರುವ ಚಿಂತೆಗಳನ್ನು ವೃಥಾ ಏಕೆ ಮೈಮೇಲೆ ಎಳೆದುಕೊಳ್ಳಲಿ?’ ಸಾಲಿ ರಾಮಚಂದ್ರರಾಯರು ಹುಟ್ಟಿದ್ದು 1880ರ ಅಕ್ಟೋಬರ್ 10ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ. ಅವರ ಹೆಸರಿನಲ್ಲಿ ರುವ ‘ಸಾಲಿ’ ಅಂದರೆ ಶಾಲೆ. ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಸಾಲಿ ಎಂದಾಗಿರುವುದು. ತಂದೆ ಸುಬ್ಬರಾಯರು ಶಿಕ್ಷಕರಾಗಿದ್ದವರು, ಹಾಗೆ ಹೆಸರಿನ ಮುಂದೆ ಸಾಲಿ ಅಂಟಿಕೊಂಡಿತು. ಬಾಲಕ ರಾಮಚಂದ್ರನಿಗಿನ್ನೂ ಒಂದೂವರೆ ವರ್ಷ ಆಗಿದ್ದಾಗ ತಂದೆ ತೀರಿಕೊಂಡರು. ವಯಸ್ಸು ಹತ್ತಾದಾಗ ತಾಯಿ ಮತ್ತು ಅಜ್ಜಿಯೂ ಹೋಗಿಬಿಟ್ಟರು.

‘ಆಮೇಲೆ ರಾಮಚಂದ್ರರಾಯರು ವಾರಾನ್ನದಿಂದ ವಿದ್ಯಾಭ್ಯಾಸ ಸಾಗಿಸಿದರು. ಯಾರೋ ಪುಣ್ಯಾತ್ಮರು ದಯವುಳ್ಳವರು ಈ
ತಬ್ಬಲಿ ಬಾಲಕನನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡರು. ಆದರೇನು ಆ ಅನ್ನದಾತನಿಗೆ ನಿತ್ಯ ರಾತ್ರಿ ಸೆರೆಯ ಅಂಗಡಿಗೆ
ಹೋಗಿ ಈ ಮುಗ್ಧ ಬಾಲಕ ಸೆರೆ ತಂದು ಸುರಿಯಬೇಕು. ಈ ಬಾಲ್ಯದ ಅಸಹಾಯಕ ನೋವನ್ನೆಲ್ಲ ಯದುಪತಿ ಎಂಬ
ಕಾದಂಬರಿಯಲ್ಲಿ ಚಿತ್ರಿಸಿದರು’ ಎಂದು ಎನ್ಕೆ ಬರೆದಿದ್ದಾರೆ ಒಂದುಕಡೆ. ವಾರಾನ್ನದ ಕೃಪೆಯಿಂದ ರಾಮಚಂದ್ರರಾಯರು
ಬಿಜಾಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅಂಚೆಕಛೇರಿಯ ನೌಕರಿಯೊಂದಿಗೆ ಬದುಕು ಆರಂಭಿಸಿದರು.

ಉದ್ಯೋಗ ಒಗ್ಗದೆ ಪುಣೆಯಲ್ಲಿ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಅದು ಸ್ವಾತಂತ್ರ್ಯಸಂಗ್ರಾಮದ ಕಾಲ. ತಿಲಕರ ಬಂಧನ ವಾಗಿತ್ತು. ರಾಮಚಂದ್ರರಾಯರು ಕಾಲೇಜು ತೊರೆದು ಚಳವಳಿಗೆ ಧುಮುಕಿದರು. ಮತ್ತೆ ಪುಣೆಯಲ್ಲೇ ಡೆಕ್ಕನ್ ಕಾಲೇಜು ಸೇರಿ ಬಿ.ಎ. ಪದವಿ. ಅಷ್ಟು ಹೊತ್ತಿಗಾಗಲೇ ‘ನವರತ್ನಮಂಡಲ’ ಎಂಬ ಸಾಹಿತಿಮಿತ್ರರ ಬಳಗ ಕಟ್ಟಿಕೊಂಡು ಕಾವ್ಯಕೃಷಿ ಪ್ರಾರಂಭ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ Gandhiji ಯವರ ಹಿಂದಿ ಭಾಷಣವನ್ನು ಕನ್ನಡಕ್ಕೆ ಅನುವಾದಿ ಸಿದ್ದು ರಾಮಚಂದ್ರರಾಯರೇ.

ಮಗ ಶ್ರೀಕೃಷ್ಣನನ್ನು Gandhijiಯ ಸೇವಕನಾಗಿ ದಂಡಿಯಾತ್ರೆಗೆ ಕಳುಹಿಸಿದರು. ಆತ ಪ್ಲೇಗ್ ಮಹಾಮಾರಿಗೆ ಬಲಿಯಾದನು. ಪುತ್ರಶೋಕದಿಂದ ಬರೆದ ‘ತಿಲಾಂಜಲಿ’ ನೀಳ್ಗವಿತೆ ಕನ್ನಡದ ಮೊತ್ತಮೊದಲ ಶೋಕಗೀತೆ ಎನ್ನುತ್ತಾರೆ ವಿಮರ್ಶಕರು. ಆಮೇಲೆ ರಾಮಚಂದ್ರರಾಯರು ಹೆಂಡತಿಯನ್ನೂ ಕಳೆದುಕೊಂಡು, ಉಳಿದ ಮಕ್ಕಳಿಗೆ ತಾಯಿಯೂ ತಂದೆಯೂ ಆಗಬೇಕಾಯಿತು.
ಸಾವು ನೋವುಗಳನ್ನೇ ಸಂಗಾತಿಯಾಗಿ ಸ್ವೀಕರಿಸಿ ಬಾಳಿನುದ್ದಕ್ಕೂ ಕಡುಕಷ್ಟದಲ್ಲಿ ಬಾಳಿದ ರಾಮಚಂದ್ರರಾಯರು ಅಕ್ಷರ ಕೃಷಿ ಯಲ್ಲಿ ಸಾಂತ್ವನ ಕಂಡರು.

ಕನ್ನಡ ಮಾತ್ರವಲ್ಲದೆ ಹಿಂದೀ, ಗುಜರಾತಿ, ಮರಾಠಿ, ಸಂಸ್ಕೃತ ಹಾಗೂ ರಷ್ಯನ್ ಭಾಷೆಗಳಲ್ಲಿ ಪಾಂಡಿತ್ಯವಿತ್ತು. ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ಅನುವಾದಕರಾಗಿ 200ಕ್ಕೂ ಹೆಚ್ಚು ಕೃತಿಗಳ ರಚನೆ. ಹೊಟ್ಟೆಪಾಡಿಗಾಗಿ ಬಿಜಾಪುರದಲ್ಲಿ, ಹುಬ್ಬಳ್ಳಿಯಲ್ಲಿ, ಆಮೇಲೆ ಧಾರವಾಡದ ಕರ್ನಾಟಕ ಹೈಸ್ಕೂಲ್‌ನಲ್ಲಿ ಶಿಕ್ಷಕನಾಗಿ ಸೇವೆ. ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಡುತ್ತಿದ್ದರು. ರಾಮಚಂದ್ರರಾಯರು ಕೆಲಕಾಲ ಜಯಕರ್ನಾಟಕ ಪತ್ರಿಕೆಯ ಉಪಸಂಪಾದಕರಾಗಿಯೂ ದುಡಿದರು.

ಸರಳಗನ್ನಡದಲ್ಲಿ ರಾಮಾಯಣ ರಚಿಸತೊಡಗಿ ಬಾಲಕಾಂಡ ಮತ್ತು ಅಯೋಧ್ಯಾಕಾಂಡ ಬರೆದಾಗಿತ್ತು. ವಿಮರ್ಶಕರೊಬ್ಬರ
ಚುಚ್ಚುಮಾತಿನಿಂದ ಮನನೊಂದು ಆಮೇಲಿನ ಭಾಗಗಳನ್ನು ಸಂಸ್ಕೃತದಲ್ಲಿ ಬರೆದರು. ಅಷ್ಟಾದರೂ ಕನ್ನಡದ ಮೇಲಿನ
ಪ್ರೀತಿಗೇನೂ ಕುಂದೆನಿಸಲಿಲ್ಲ. ‘ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ| ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ|
ಕನ್ನಡದ ನೆಲದ ಕಲ್ಲೆನಗೆ ಶಾಲಗ್ರಾಮ ಶಿಲೆ ಕನ್ನಡಂ ದೈವಮೈ| ಕನ್ನಡದ ಶಬ್ದಮೆನಗೋಂಕಾರ ಮೀಯೆನ್ನ| ಕನ್ನಡದ ನುಡಿಯೆ
ಗಾಯತ್ರಿಯದ್ಭುತ ಮಂತ್ರ-| ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳೆನಗೆ|’ ಎಂಬ ನುಡಿ ಸಾಲಿ ರಾಮ ಚಂದ್ರರಾಯರ ಉತ್ಕಟ ಕನ್ನಡಪ್ರೇಮಕ್ಕೆ ಹಿಡಿದ ಕನ್ನಡಿ.

ಹಾಗೆಯೇ, ‘ನಿನ್ನಿನದು ನುಡಿಯಲ್ಲ ಮೊನ್ನಿನದು ನುಡಿಯಲ್ಲ, ಕನ್ನಡವು ನುಡಿದರಿದನಾಪುರಾತ ನರೊಸೆದು| ಇದು ಶಕ್ತಿ ಇದು
ವೀರವಾಣಿಯೀ ಕನ್ನಡವು, ಇದು ಗೆಯ್ದಗೆಯ್ಮೆ ವಿಶ್ವಕ್ಕೆ ವಿಸ್ಮಯಕರವು| ಇದಕೊಂದು ರೂಪುಂಟು ಬಗೆಯುಂಟು ಚಲ್ವುಂಟು, ಇದಕೆ ಮಾರ್ದವವುಂಟು ಕಾರುಣ್ಯವಿದಕುಂಟು| ಇದು ನೃಪೋತ್ತುಂಗ ನೃಪತುಂಗನಿಗೆ ಮೆಚ್ಚಿನದು, ಇದು ಜಗದ್ವಂದ್ಯ ಕವಿ ಪಂಪನಿಗೆ ಮೆಚ್ಚಿನದು| ಇದು ಭಕ್ತ ಬಸವೇಶನೊಲಿದೊಲಿದು ನುಡಿದ ನುಡಿ, ಇದು ಪೂಜ್ಯ ದಾಸರಾದರದಿಂದ ನುಡಿದ ನುಡಿ|’ – ಇಷ್ಟು ಗಾಢ ಪ್ರೀತಿ ರಾಮಚಂದ್ರರಾಯರಿಗೆ ಕನ್ನಡದ ಮೇಲೆ! ಕನ್ನಡನಿಷ್ಠೆ ಅಲ್ಲದೆ ಪ್ರಕೃತಿಪ್ರೇಮ, ದೇಶಪ್ರೇಮ, ಆದರ್ಶ ಜೀವನ ತತ್ತ್ವಗಳನ್ನು ಬದುಕಿನ ಅತ್ಯಂತ ದುರ್ಭರ ಪ್ರಸಂಗಗಳಲ್ಲಿಯೂ ಅವರು ಉಳಿಸಿಕೊಂಡು ಬಂದರು.

90 ವರ್ಷಗಳ ತುಂಬುಜೀವನ ನಡೆಸಿ 31 ಅಕ್ಟೋಬರ್ 1978ರಂದು ಇಹಲೋಕ ತ್ಯಜಿಸಿದರು. 1968ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಬಿಟ್ಟರೆ ಅವರ ವ್ಯಕ್ತಿಚಿತ್ರಣದಲ್ಲಿ ಪ್ರಶಸ್ತಿ ಪುರಸ್ಕಾರಗಳಾವುವೂ ಇಲ್ಲ. ಈಗಿನವ ರಂತೆ ಪ್ರಶಸ್ತಿಗಾಗಿ ಅವರು ಬರೆದವರಲ್ಲ ಬದುಕಿದವರಲ್ಲ. ‘ಇನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳೆನಗೆ’ ಎಂದು ಧನ್ಯತೆ ಕಂಡುಕೊಂಡ ಅಪರಿಗ್ರಹ ಆತ್ಮಕ್ಕೆ ಬೇರೆ ಬಿರುದುಸಮ್ಮಾನಗಳೇಕೆ!

ಹೀಗೆ ಬೆಂಕಿಯಲ್ಲಿ ಅರಳಿದ ಹೂವಾಗಿ ಬಾಳಿದ್ದ ಸಾಲಿ ರಾಮಚಂದ್ರರಾಯರ ಮೊಮ್ಮಗ, ಡಾ. ಶ್ರೀವತ್ಸ ದೇಸಾಯಿ, ನನ್ನೊಬ್ಬ ಓದುಗಮಿತ್ರರು ಮತ್ತು ಹಿರಿಯ ಹಿತೈಷಿ. ಅವರು ಯುನೈಟೆಡ್ ಕಿಂಗ್‌ಡಮ್‌ನ ಡೊಂಕಾಸ್ಟರ್ ಎಂಬಲ್ಲಿ ವಾಸಿಸುತ್ತಾರೆ. ವೈದ್ಯ ವೃತ್ತಿ ನಡೆಸಿ ಈಗ ನಿವೃತ್ತ. ಕನ್ನಡಬಳಗದ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತ. ಇಂಗ್ಲೇಂಡ್‌ನಲ್ಲಿರುವ ನನ್ನಣ್ಣನಿಗೂ ಡಾ.ದೇಸಾಯಿ ಪರಿಚಿತರು, ಆತ್ಮೀಯರು. ಅವರ ಆಪ್ತ ಆರ್ದ್ರ ಸೌಮ್ಯ ಸ್ವಭಾವವೇ ಅಂಥದ್ದು. ಯಾರನ್ನೇ ಆದರೂ ಸೆಳೆಯುತ್ತದೆ. ಡಾ.ದೇಸಾಯಿಯವರು ನನ್ನ ಪ್ರತಿಯೊಂದು ಲೇಖನವನ್ನೂ ಓದುತ್ತಾರೆ. ಆಗಾಗ ಪ್ರತಿಕ್ರಿಯೆ ಬರೆಯುತ್ತಾರೆ.

ಪ್ರತಿಕ್ರಿಯೆಯೆಂದರೆ ಹಸ್ತಮುದ್ರೆಗಳಲ್ಲ. ಲೇಖನದಲ್ಲಿದ್ದ ವಿಚಾರಗಳು ತನಗೆ ಹೇಗೆ ಅನ್ವಯವಾದುವು, ತನ್ನ ಅನುಭವಗಳೇನು ಎಂದು ಸವಿವರ ಇಮೇಲ್. ಕೆಲವೊಮ್ಮೆ ಸ್ವಾರಸ್ಯಕರ ಪೂರಕ ಮಾಹಿತಿ. ಅಜ್ಜ ರಾಮಚಂದ್ರರಾಯರ ರೆಫರೆನ್ಸ್ ಏನಾದರೂ ಇದ್ದರಂತೂ ದೇಸಾಯಿಯವರಿಗೆ ಎಲ್ಲಿಲ್ಲದ ಆನಂದ ಅಭಿಮಾನ. ಕಳೆದವಾರ ಆರ್.ಕೆ.ಲಕ್ಷ್ಮಣ್ ಕಾಗೆಕಥನ ಮತ್ತು ಸಂದರ್ಶಕ ಎಚ್.ಕೆ.ರಂಗನಾಥ್ ಪ್ರಸ್ತಾವವೂ ಇತ್ತಷ್ಟೆ? ಅದನ್ನೋದಿದ ದೇಸಾಯಿಯವರ ಪ್ರತಿಕ್ರಿಯೆ: ‘ಹೆಚ್.ಕೆ.ರಂಗನಾಥ್ ಧಾರವಾಡದಲ್ಲಿ ಆರಂಭದ ವರ್ಷಗಳಲ್ಲಿ ನಮ್ಮ ಮನೆಯ ಎದುರುಗಡೆಯಲ್ಲೇ ವಾಸಿಸುತ್ತಿದ್ದರು.

ಆಗ ನಾನು ಶಾಲಾವಿದ್ಯಾರ್ಥಿ. ಅವರಿಗೆ ನಮ್ಮಜ್ಜ ಸಾಲಿ ರಾಮಚಂದ್ರರಾಯರ ಮೇಲೆ ಬಹಳ ಭಕ್ತಿ ಮತ್ತು ಆದರ. ರಂಗನಾಥರ ಮದುವೆಯ ಸಂದರ್ಭದಲ್ಲಿ ನನ್ನ ಅಜ್ಜನೂ ಅದರ ವ್ಯವಸ್ಥೆಗೆ ಸಹಾಯ ಮಾಡಿದ್ದರು. ಅವರ ಆತ್ಮಕಥನ ‘ನೆನಪಿನ ನಂದನ’ ದಲ್ಲಿ ಧಾರವಾಡ ದಿನಗಳನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಅವರದು ಸಹೋದ್ಯೋಗಿ ಶಾಂತಿ ಅವರೊಂದಿಗೆ ಲವ್‌ಮ್ಯಾರೇಜ್. ಮನೆಯಲ್ಲಿ ಸಮ್ಮತಿಯಿರಲಿಲ್ಲ. ಶ್ರೀರಂಗರು ಧಾರೆಯೆರೆದು ಕೊಟ್ಟರಂತೆ. ನಾನು ಶಾಂತಿಯವರನ್ನು ಬೆಂಗಳೂರಲ್ಲಿ ಭೇಟಿಯಾ ದಾಗ, ಅವರೇ ಈ ಪುಸ್ತಕ ಕೊಟ್ಟರು.

ಅದರ ಒಂದು ಪುಟವನ್ನು ಲಗತ್ತಿಸಿರುವೆ, ಅಜ್ಜನ ಬಗ್ಗೆ ಸುಂದರವಾಗಿ ಬರೆದಿದ್ದಾರೆ.’ ಅದೇ ಇಮೇಲ್‌ನಲ್ಲಿ ‘ನೆನಪಿನ ನಂದನ’ ಪುಸ್ತಕದ ಒಂದು ಪುಟದ ಪಿಡಿಎಫ್ ಕಳಿಸಿದ್ದರು ಡಾ.ದೇಸಾಯಿ. ಅದರಲ್ಲಿ ರಂಗನಾಥ್ ವ್ಯಾಖ್ಯಾನ: ‘ಶಾಂತಿ ನನ್ನ ಮನೆಗೆ ಮೊದಲಸಲ ಬಂದ ಸಂದರ್ಭ. ಅಂಥದೊಂದು ಸುಮುಹೂರ್ತಕ್ಕಾಗಿ ಅದೆಷ್ಟು ಸಿದ್ಧತೆ ಮಾಡಿಕೊಂಡಿದ್ದೆ! ನಮ್ಮೆದುರು ಮನೆಯ ಹಿರಿಯರಾದ ಸಾಲಿ ರಾಮಚಂದ್ರರಾಯರನ್ನು ಆ ಸಮಯಕ್ಕೆ ಬರಲು ಪ್ರಾರ್ಥಿಸಿದ್ದೆ.

ಬಾಲರಾಮಾಯಣದ ಕವಿ ಅವರು, ಸಜ್ಜನಿಕೆಯ ಸಾಕಾರಮೂರ್ತಿ. ಗಟ್ಟಿಯಾಗಿ ಹೆಜ್ಜೆಯೂರಿದರೆ ನೆಲಕ್ಕೆ ನೋವಾದೀತು ಎಂದು ಅಳುಕಿ ನಡೆದವರು. ಅವರ ಮೃದು ಮಾತು, ಮುಗುಳುನಗೆ ಎಂಥವರನ್ನೂ ಬರಸೆಳೆದು ತಕ್ಕೈಸುತ್ತಿದ್ದವು. ಪತ್ನಿಯನ್ನೂ, ಬೆಳೆದ ಒಬ್ಬನೇ ಮಗನನ್ನೂ ಕಳೆದುಕೊಂಡು ವೃದ್ಧಾಪ್ಯದಲ್ಲಿ ಒಂಟಿಯಾಗಿ ಇರುತ್ತಿದ್ದರು. ಸ್ವಂತ ಕೈಯಡುಗೆ. ನಿತ್ಯತೃಪ್ತಿ. ಕರ್ನಾಟಕ ಹೈಸ್ಕೂಲಿನಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಅಧ್ಯಾಪಕರಾಗಿ ಅನೇಕ ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದವರು. ಹೋಲಿಕೆ ಯಲ್ಲಿ, ಗಡ್ಡ ತೆಗೆದು ಮುಚ್ಚುಕೋಟು ಧರಿಸಿದ ವಿನೋಬಾ ಭಾವೆ!

ಪ್ರವೃತ್ತಿಯಲ್ಲಿಯೂ ಹಾಗೆಯೇ. ತಮ್ಮ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅವರಿಗೆಂದೂ ಶಿಕ್ಷೆ ಕೊಡದೆ ಆ ಶಿಕ್ಷೆಯನ್ನು ಸ್ವತಃ
ತಾವು ಅನುಭವಿಸಿದವರು. ‘ಅಷ್ಟು ಹೇಳಿದರೂ ನೀನು ಮನೆಯ ಪಾಠ ಬರೆಯಲಿಲ್ಲವಪ್ಪ! ಆಗಲಿ, ಆ ಶಿಕ್ಷೆ ನನಗಾಗಲಿ’ ಎಂದು
ತಾವೇ ಅರ್ಧಗಂಟೆ ಬೆಂಚ ಮೇಲೆ ನಿಲ್ಲುವುದು ವಾಡಿಕೆ! ಶಾಂತತೆ, ಅಹಿಂಸೆ, ಔದಾರ್ಯ, ಅಪರಿಗ್ರಹ, ವಿನೋದಪ್ರಜ್ಞೆಗಳ ಪ್ರತೀಕವೆನಿಸಿದ್ದ ಅವರು ಅಂದಿಗೂ ಇಂದಿಗೂ ಒಬ್ಬ ಜೀವಂತ ದಂತಕಥೆ! ಶಾಂತಿ ನನ್ನ ಬಿಡಾರಕ್ಕೆ ಮೊದಲ ಸಲ ಬರುವ ಅಮೃತಮುಹೂರ್ತದಲ್ಲಿ ಸಾಲಿಯವರೂ ಅಲ್ಲಿದ್ದರೆ ಎಷ್ಟು ಚೆನ್ನ ಎಂದುಕೊಂಡಿದ್ದೆ. ಏನು ಏತಕ್ಕೆ ಎಂದು ತಿಳಿಸದೆ ಅವರನ್ನು ಕರೆದೆ. ಏಕೆ-ಏನು ಎಂದು ಕೇಳದೆ ಅವರೂ ಹತ್ತು ನಿಮಿಷ ಮುಂದಾಗಿ ಬಂದರು.’

ಹಿಂದೊಮ್ಮೆ ಒಂದು ಲೇಖನದಲ್ಲಿ ನಾನು ಕಿಟ್ಟೆಲ್ ಬಗ್ಗೆ ಬರೆದಿದ್ದಾಗಲೂ ದೇಸಾಯಿಯವರು ಕಿಟ್ಟೆಲ್ ಕೋಶದ ಪ್ರಥಮ
ಮುದ್ರಣದ ಪ್ರತಿಯು ಅಜ್ಜ ಸಾಲಿ ರಾಮಚಂದ್ರರಾಯರ ಹಸ್ತಾಕ್ಷರದ ಸಮೇತ ಧಾರವಾಡದಲ್ಲಿ ಇರುವುದನ್ನು  ನೆನಪಿಸಿ ಕೊಂಡಿದ್ದರು. ಹಾಗೆಯೇ, ಕಾಳಿದಾಸನ ಮೇಘದೂತದ ಬಗ್ಗೆ ಬರೆದಿದ್ದ ಲೇಖನದಲ್ಲಿ ‘ಆಷಾಢಸ್ಯ ಪ್ರಥಮದಿವಸೇ…’ ಜಿಜ್ಞಾಸೆ ಯನ್ನು ಮನಗಂಡು, ಸಾಲಿ ರಾಮಚಂದ್ರರಾಯರ ಕನ್ನಡ ಮೇಘದೂತದಲ್ಲಿ ಅದರ ಉಲ್ಲೇಖ ಹೇಗಿದೆ ಎಂದು ಪುಸ್ತಕದ ಪುಟವನ್ನು ಇಮೇಲ್‌ನಲ್ಲಿ ಕಳಿಸಿದ್ದರು.

ಆಷಾಢ ಪದದ ತದ್ಭವ ಆಸಡಿ ಎಂದು ಬಳಸಿ ‘ಎದೆಯಳಲು ಬಳಲುಸುತ್ತಿರೆ ಕಂಡನಾಸಡಿಯ| ಮೊದಲ ದಿನದಂದು ಕಾರ್ಮುಗಿ ಲೊಂದನು| ಇದನೆಂತು ಬಣ್ಣಿಪೆನೊ ಕಾರ ಮುಗಿಲಾಗಿರಿಯ| ತುದಿಯಾಂತು ನಿಂತ ಪಾಂಗಿನ ಸೊಬಗನು’ ಅಂತ ಅಜ್ಜ ಬರೆದ ಪದ್ಯವನ್ನು ತೋರಿಸಿದ್ದರು. ‘ಕಾಳಿದಾಸನ ಅಂತರಂಗ ಮತ್ತು ಕಾವ್ಯರಂಗವನ್ನು ಸಂವೇದನಶೀಲ ಸಾಲಿಯವರು ಏಕಹೃದಯ ರಾಗಿ ಅರಿತಿದ್ದರು. ಕವಿಗೌರವ, ಕಾವ್ಯಪ್ರೇಮ, ಸಂಸ್ಕೃತಜ್ಞಾನ, ಕನ್ನಡನಿಷ್ಠೆ, ಗೀತಾತ್ಮಕತೆಗಳನ್ನು ಮೇಳವಿಸಿ ಸಾಲಿಯವರು ನೀಡಿದ ಈ ಮೇಘದೂತವು 1944ರಲ್ಲಿಯೇ ಪ್ರಕಟವಾಗಿದ್ದರೆ ಸಾಹಿತ್ಯಚರಿತ್ರೆಯಲ್ಲಿ ಒಂದು ಮಹತ್ವದ ದಾಖಲೆಯಾಗಿ ಉಳಿಯುತ್ತಿತ್ತು. ವೈಯಕ್ತಿಕ ಬದುಕು ಹಾಗೂ ಸಾಹಿತ್ಯಿಕ ಜೀವನ ಎರಡರಲ್ಲೂ ದುರ್ದೈವಿಯಾಗಿದ್ದ ಸಾಲಿಯವರ ಕೃತಿ ಆಗಲೇ ಬಂದಿದ್ದರೆ ಅವರನ್ನು ಟೀಕಿಸುತ್ತಿದ್ದ ಎಲ್ಲ ಕೀಟಲೆಗಳು ತಾವಾಗಿ ತಣ್ಣಗಾಗುತ್ತಿದ್ದವು.’ ಎಂದು ಮುನ್ನುಡಿಯಲ್ಲಿ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಬರೆದಿದ್ದನ್ನೂ ಡಾ.ದೇಸಾಯಿ ನನಗೆ ತೋರಿಸಿದ್ದರು.

ಇನ್ನೊಂದು ಲೇಖನದಲ್ಲಿ ನಾನು ಧಾರವಾಡದ ಕೌಲಗಿ ಟೀಚರ್ ಬಗ್ಗೆ ಬರೆದಾಗಂತೂ ದೇಸಾಯಿಯವರಿಗೆ ಹಿಗ್ಗೋಹಿಗ್ಗು. ‘ಧಾರವಾಡವೆಂದರೆ ಕುಣಿದಾಡುವುದೆನ್ನೆದೆ, ಕೆ.ಇ.ಬೋರ್ಡ್ ಎಂದರೆ ಕಿವಿ ನಿಮಿರುವುದು! ಇಂದು ಅಂಕಣದಲ್ಲಿ ಅವೆರಡೂ ಬಂದವು. ನೀವು ಕೊನೆಯಲ್ಲಿ ಕೊಟ್ಟ ನಂಬರಿಗೆ ಫೋನು (ನಮ್ಮ ಧಾರವಾಡ ಭಾಷೆಯಲ್ಲಿ ಹೇಳುವಂತೆ) ಹಚ್ಚಿಯೇ ಬಿಟ್ಟೆ! ಮಾತಾಡಲಿಕ್ಕೆ ಸಿಕ್ಕಿದರು.

ಇಬ್ಬರೂ ಧಾರವಾಡದವರೆಂದ ಮೇಲೆ ಕೇಳಬೇಕೇ! ಮಾತೇ ಮುಗಿಯಲಿಲ್ಲ. ಅಷ್ಟು ವಿಷಯಗಳು ನಮ್ಮಿಬ್ಬರಲ್ಲಿ ಕಾಮನ್.
ಅಂದರೆ ನೀವು ನಂಬಲಿಕ್ಕಿಲ್ಲ! ನನ್ನ ಕಸಿನ್ನಿನ ಜಾನೀ ದೋಸ್ತ್  ಅಂತೆ. ನನ್ನಜ್ಜ ಸಾಲಿ ರಾಮಚಂದ್ರರಾಯ, ನನ್ನ ತಂದೆ ಎಲ್ಲ
ಆಕೆಗೆ ಗೊತ್ತು! ಆತ್ಮೀಯರಂತೆ ನಮ್ಮ ಮಾತು. ಆಕೆಯ ಪುಸ್ತಕದ ಪ್ರಕಾಶಕ ಸಹ ನನ್ನಣ್ಣನ ಕ್ಲಾಸ್‌ಮೇಟ್ ಮತ್ತು ಫ್ರೆಂಡ್!
ನನಗೊಂದು ಪ್ರತಿ ಬೇಕೆಂದು ಹೇಳಿ ಫೋನು ಕೆಳಗಿಟ್ಟೆ’ ಎಂದು ನನ್ನ ಬಳಿ ಖುಷಿ ಹಂಚಿಕೊಂಡಿದ್ದರು. ಮೂರು ವರ್ಷಗಳ ಹಿಂದೆ
‘ಮಾನಸ ಸಂಚರರೇ…’ ಕೀರ್ತನೆಯನ್ನು ವಿವರಿಸಿದ್ದ ಬರಹಕ್ಕೆ ದೇಸಾಯಿಯವರ ಪ್ರತಿಕ್ರಿಯೆ ಭಾವುಕತೆಯ ಸರೋವರದಲ್ಲಿ
ಮಿಂದೆದ್ದು ಬಂದ ಅನುಭವ. ‘ಈ ಲೇಖನ ನೇರವಾಗಿ ನನ್ನ ಜೀವದಾಳಕ್ಕೂ ಹೋಗಿ ತಲುಪಿತು. ಅಲುಗಾಡಿಸಿತು, ಅಳು
ತರಿಸಿತು. ನನಗೆ ಕೀರ್ತನೆಯ ಪದಗಳೇ ಗೊತ್ತಿರಲಿಲ್ಲ.

ಅರ್ಥವಂತೂ ದೂರವಾಗಿತ್ತು. ಆದರೂ ಪಾಯಸದ ಗಂಗಾಳದಲ್ಲಿ ಸೌಟಾಗಿದ್ದೆ, ಅದನ್ನೆತ್ತಿ ನಾಲಗೆಗೆ ಹತ್ತಿಸಿದ ನಿಮಗೆ ಕೋಟಿ ಪುಣ್ಯ! ಆ ಕೀರ್ತನೆಯು ನನ್ನ ಜೀವನದ ಎರಡು ಘಟನೆಗಳಲ್ಲಿ ಅತಿ ಮಹತ್ವದ್ದು. ಮೊದಲನೆಯದು ನಮ್ಮ ಮಗಳ ಮದುವೆ. ನನ್ನ ಪತ್ನಿ ವಾಣಿ ಅದಾಗಲೇ ಅನಾರೋಗ್ಯ ದಿಂದಿದ್ದವಳು ಮಗಳ ಮದುವೆಯ ಸಮಯದಲ್ಲಿ ಬದುಕಿರುವುದು, ಇದ್ದರೆ ಇಲ್ಲಿಂದ ಲಂಡನ್‌ಗೆ ಮದುವೆಗೆ ಹೋಗುವುದು ಎರಡೂ ಖಾತ್ರಿಯಿರಲಿಲ್ಲ.

ಮದುವೆಯ ಹಾಲ್‌ನಲ್ಲಿ ಕಾಲಿಡುತ್ತಲೇ ನಾದಸ್ವರದವರು ನುಡಿಸುತ್ತಿದ್ದ ‘ಮಾನಸ ಸಂಚರರೇ…’ ಕೇಳಿ ಮಿಂಚಿನ ಸಂಚಾರ ಅವಳ ದೇಹದಲ್ಲಿ. ಅಯ್ಯೋ, ಇದು ಮಾನಸ ಸಂಚರರೇ… ಅಮ್ಮನಿಗೆ ಬಹಳ ಇಷ್ಟ ಎಂದು ತನ್ನ ಅಮ್ಮನನ್ನು ನೆನಪಿಸಿ ಕೊಂಡಳು. ಅದೊಂದು ಮರೆಯಲಾರದ ಅನುಭವ. ಅದಾದಮೇಲೆ ಆರು ವಾರಗಳಲ್ಲೇ ಎರಡನೆಯ ಘಟನೆ. ವಾಣಿ ನಮ್ಮೆಲ್ಲ ರನ್ನೂ ಅಗಲಿದಳು. ಅವಳ ಅಂತ್ಯಸಂಸ್ಕಾರದ ವಿಧಿವಿಧಾನಗಳು ಇಲ್ಲಿನ ಫ್ಯೂನರಲ್ ವ್ಯವಸ್ಥೆಯಲ್ಲಿ. ಮೃತ ವ್ಯಕ್ತಿಗೆ ಇಷ್ಟದ ಮ್ಯೂಸಿಕ್ ನಾವು ಪ್ಲೇ ಮಾಡಲಿಕ್ಕೆ ಬಿಡುತ್ತಾರೆ.

ವಾಣಿಯ ಇಷ್ಟದ ‘ಮಾನಸ ಸಂಚರರೇ…’ ವಯಲಿನ್‌ನಲ್ಲಿ ಕೇಳಿಬರುವಂತೆ ಪ್ಲೇ ಮಾಡಿಸಲಾಗಿತ್ತು. ಅವಳ ಅಮ್ಮ ಸ್ವರ್ಗ ದಿಂದಲೇ ಕರೆಯುತ್ತಿದ್ದರೇನೋ ಎಂಬಂತೆ. ಆ ದಿವ್ಯವಾದ ಕೃತಿ ಮೂರು ತಲೆಮಾರುಗಳನ್ನು ಹೇಗೆ ಬೆಸೆಯಿತು ನೋಡಿ! ಆದ್ದರಿಂದಲೇ ನಿಮ್ಮ ಲೇಖನ ಓದುತ್ತಿದ್ದಂತೆ ನನಗೆ ಕಣ್ಣೀರಕೋಡಿ.’ ಮನಸ್ಸಿನ ಸಾಗರದಲ್ಲಿ ಅಕ್ಷರಗಳು ಯಾವರೀತಿ ಅಲೆ ಯೆಬ್ಬಿಸುತ್ತವೆಂದು ಹೇಳಲಿಕ್ಕಾಗದು. ನುಡಿಗಷ್ಟೇ ಅಲ್ಲ, ಬರಹಕ್ಕೂ ಅನ್ವಯ: ಇದಕೊಂದು ರೂಪುಂಟು ಬಗೆಯುಂಟು
ಚಲ್ವುಂಟು… ಇದಕೆ ಮಾರ್ದವವುಂಟು ಕಾರುಣ್ಯವಿದಕುಂಟು…