ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
‘ದೇವರ ಸ್ವಂತ ನಾಡು’, ‘ಸಾಕ್ಷರತೆಯ ಬೀಡು’ ಎಂದೆಲ್ಲ ಹೆಸರಾಗಿರುವ ಕೇರಳದಲ್ಲಿನ ಇತಿಹಾಸ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪನ ದೇಗುಲಕ್ಕೆ ಕೋಟ್ಯಂತರ
ಭಕ್ತರು ಆಗಮಿಸುವುದುಂಟು. ಕೇರಳದ ಸರಕಾರಿ ಬೊಕ್ಕಸಕ್ಕೆ ಅಯ್ಯಪ್ಪ ದೇಗುಲ ಸೇರಿದಂತೆ ಇನ್ನೂ ಅನೇಕ ದೇವಾಲಯಗಳಿಂದ ಗಣನೀಯ ಪ್ರಮಾಣದ ಆದಾಯ ಹರಿದುಬರುತ್ತಿದೆ.
ಕೇರಳದ ಸರಕಾರ ಬಹುತೇಕವಾಗಿ ನಡೆಯುತ್ತಿರುವುದೇ ಲಾಟರಿ ಟಿಕೆಟ್ ಮಾರಾಟದಿಂದ ಮತ್ತು ದೇಗುಲಗಳ ದುಡ್ಡಿನಿಂದ. ಆದರೆ ಈ ದೇವಸ್ಥಾನಗಳು ಸತತವಾಗಿ ಸರಕಾರಗಳ ದಿವ್ಯನಿರ್ಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿಯಿಲ್ಲದೆ ಸೊರಗಿವೆ. ಇಲ್ಲಿನ ಜನಪ್ರತಿನಿಽಗಳಿಗೆ ಮತ್ತು ಆಡಳಿತಾರೂಢ ಸರಕಾರಗಳಿಗೆ ದೇವರ ಮೇಲೆ ನಂಬಿಕೆಯಿರುವುದು ವಿರಳವಾದರೂ, ಇಂಥ ಹಿಂದೂ ದೇಗುಲಗಳ ಭಕ್ತರ ದುಡ್ಡನ್ನು ಮುಲಾಜಿಲ್ಲದೆ ಬಾಚಿಕೊಳ್ಳುತ್ತ ಬಂದಿವೆ ಅಲ್ಲಿನ ಸರಕಾರಗಳು.
ಈ ಆದಾಯದಿಂದಲೇ ಸದರಿ ದೇಗುಲಗಳ ಜೀಣೋದ್ಧಾರ ಮತ್ತು ಅಭಿವೃದ್ಧಿಗೆ ಮುಂದಾದರೆ, ಅವು ಮತ್ತಷ್ಟು ನಳನಳಿಸಿ ಪ್ರಸಿದ್ಧಿ ಪಡೆಯುವುದರಲ್ಲಿ ಸಂದೇಹವಿಲ್ಲ.
ಆದರೆ, ಕಮ್ಯುನಿಸ್ಟ್, ಎಲ್‌ಡಿಎಫ್, ಯುಡಿಎಫ್ ನಂಥ ಸರಕಾರಗಳು ಹಿಂದೂಗಳನ್ನು ಕಂಡರೆ ವಿಷಕಾರುವ ಸ್ಥಿತಿಯಲ್ಲಿರುವುದರಿಂದ ಇಂಥ ಶ್ರದ್ಧಾಭಕ್ತಿಯ ಕೇಂದ್ರಗಳ ಅಭಿವೃದ್ಧಿ ಮರೀಚಿಕೆಯಾಗಿಬಿಟ್ಟಿದೆ.
ಅಯ್ಯಪ್ಪನ ದೇಗುಲವು ಅವ್ಯವಸ್ಥೆ-ಅಭದ್ರತೆಯಿಂದ ನಲುಗುತ್ತಿರುವುದು ಖೇದಕರ. ಈ ಸನ್ನಿಧಾನದಿಂದ ಸರಕಾರವು ವಾರ್ಷಿಕವಾಗಿ ಬಾಚುವ ಕೋಟಿ ಕೋಟಿ ರುಪಾಯಿ ಹಣದಲ್ಲಿ ಒಂದಂಶವನ್ನು ವಿನಿಯೋಗಿಸಿದರೂ ಈ ಪರಿಸ್ಥಿತಿಯನ್ನು ಸುಧಾರಿಸಬಹುದು. ಶಬರಿಮಲೆ ಯಾತ್ರೆ ಮತ್ತು ಅಯ್ಯಪ್ಪನ ದರ್ಶನಕ್ಕೆ
ತಂಡೋಪತಂಡವಾಗಿ ಆಗಮಿಸುವ ಶ್ರದ್ಧಾವಂತ ಜನರ ವಾಹನಗಳಿಗೆ ಕಲ್ಲು ತೂರುವ, ಪ್ರಯಾಣಕ್ಕೆ ಅಡ್ಡಿಪಡಿಸುವ ಪುಂಡರ ಗುಂಪುಗಳು ಇಲ್ಲಿ ಕಾರ್ಯಾ ಚರಿಸುತ್ತಿದ್ದರೂ ಭಕ್ತರಿಗೆ ಭದ್ರತೆ ಒದಗಿಸುವಲ್ಲಿ ಕೇರಳ ಸರಕಾರ ತಾತ್ಸಾರ ತೋರುತ್ತಿದೆ.
ಅಯ್ಯಪ್ಪ ಮಾಲಾಧಾರಿಗಳಿಗೆ ಇಂಥ ಅವ್ಯವಸ್ಥೆ-ಅಭದ್ರತೆ ಹೊಸದಲ್ಲ. ಕಳೆದ ೨-೩ ದಶಕಗಳಿಂದಲೂ ಅದು ಪುನರಾವರ್ತನೆ ಆಗುತ್ತಿದೆ. ಈ ಕ್ಷೇತ್ರದಲ್ಲಿ ಜನಜಂಗುಳಿಯ ಕಾರಣಕ್ಕೆ ಸುಮಾರು ೧೮ ಗಂಟೆಗೂ ಹೆಚ್ಚು ಕಾಲ ಭಕ್ತಾದಿಗಳು ಸರತಿ ಸಾಲಿನಲ್ಲೇ ಉಳಿಯಬೇಕಾದ ಘಟನೆ ಮತ್ತು ತರುವಾಯದಲ್ಲಿ ಅನೇಕ ಜೀವಗಳು ಅಸ್ವಸ್ಥತೆಗೆ ಬಲಿಯಾಗಿದ್ದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು. ಜನಜಂಗುಳಿಯಲ್ಲಿ ಪೋಷಕರಿಂದ ತಪ್ಪಿಸಿಕೊಂಡ ಪುಟ್ಟ ಮಕ್ಕಳು ಆಕ್ರಂದಿಸುತ್ತಿದ್ದ ದೃಶ್ಯಗಳು ಕಲ್ಲುಹೃದಯಗಳನ್ನೂ ಕಲಕುವಂತಿದ್ದವು.
ಇಂಥ ಕೋಟ್ಯಂತರ ಭಕ್ತರನ್ನು ನಿಯಂತ್ರಿಸಲೆಂದು ಮತ್ತು ಭದ್ರತೆಗೆಂದು ಕೇರಳ ಸರಕಾರ ಅಂದು ನಿಯೋಜಿಸಿದ್ದ ಪೊಲೀಸರ ಸಂಖ್ಯೆ ನಗಣ್ಯವಾಗಿತ್ತು ಎಂದರೆ ಆಳುಗರ ಅಸಡ್ಡೆಯ ಪರಿಯನ್ನು ನೀವೇ ಊಹಿಸಿಕೊಳ್ಳಿ. ಕರ್ನಾಟಕದಲ್ಲಿ ದೇವಾಲಯಗಳ ಅಭಿವೃದ್ಧಿಗೆ ಧಾರ್ಮಿಕ ಪರಿಷತ್ತು ಕಾರ್ಯಾಚರಿಸುತ್ತಿರುವ ರೀತಿ ಯಲ್ಲಿಯೇ ಕೇರಳ ಸರಕಾರವು ‘ದೇವಸ್ವಂ ಬೋರ್ಡ್’ ಅನ್ನು ರಚಿಸಿದೆ. ಆದರೆ ಇದು ದೇವಾಲಯದ ಮತ್ತು ಭಕ್ತರ ರಕ್ಷಣೆಗೆ ಶ್ರಮಿಸುವ ಬದಲು, ಅಲ್ಲಿನ ರಾಜಕೀಯ ಮತ್ತು ಸ್ವಾರ್ಥ ಸಾಧನೆಗಷ್ಟೇ ಸೀಮಿತವಾಗಿರುವುದು ವಿಪರ್ಯಾಸ.
ಕೇರಳದ ಬಹುತೇಕ ದೇಗುಲಗಳಿಗೆ ಮನಬಂದಂತೆ ತೆರಳುವಂತಿಲ್ಲ, ಇಲ್ಲಿ ನಿರ್ದಿಷ್ಟ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಜೀನ್ಸ್ ಪ್ಯಾಂಟ್, ತುಂಡುಡುಗೆಗೆ ಇಲ್ಲಿ ಅವಕಾಶವಿಲ್ಲ; ಪಂಚೆ-ಶರ್ಟ್ ಧರಿಸಿಯೇ ದೇಗುಲ ದರ್ಶನಕ್ಕೆ ತೆರಳಬೇಕು, ಕೆಲ ದೇಗುಲಗಳಲ್ಲಿ ಶರ್ಟ್ ಕಳಚಿ ಒಳಗೆ ಪ್ರವೇಶಿಸಬೇಕಾಗುತ್ತದೆ. ಈ ವಸ್ತ್ರ ಸಂಹಿತೆ ಉಲ್ಲಂಸಿದವರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ನಿರ್ದಾಕ್ಷಿಣ್ಯವಾಗಿ ಆಚೆಗೆ ಕಳಿಸಿದ ಉದಾಹರಣೆಗಳಿವೆ. ಆದರೆ ಈ ಕಟ್ಟುನಿಟ್ಟು ಮಿಕ್ಕ ವಿಷಯಗಳಿಗೆ, ಅಂದರೆ ದೇಗುಲಗಳ ಅಭಿವೃದ್ಧಿಗೆ ಮತ್ತು ಸುವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಅನ್ವಯವಾಗದಿರುವುದು ಅಚ್ಚರಿ ಹುಟ್ಟಿಸುವಂಥ ಸಂಗತಿ. ಕಾರಣ ಮತಬ್ಯಾಂಕ್
ರಾಜಕಾರಣ, ಓಲೈಕೆ ರಾಜಕಾರಣ ಕೇರಳದಲ್ಲಿ ಹಾಸುಹೊಕ್ಕಾಗಿದ್ದು ಕೋಟ್ಯಂತರ ಭಕ್ತರ ಭಾವನೆಯೊಂದಿಗೆ ಅದು ಚೆಲ್ಲಾಟವಾಡುತ್ತಿದೆ. ಇದು ಭಕ್ತರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ರಾಜ್ಯದಲ್ಲಿ ರಾಜಕೀಯ ಕಾರಣಗಳಿಗೆ ನಡೆಯುವ ಹತ್ಯಾಕಾಂಡಗಳಿಗೆ ಅಂತ್ಯವೆಂಬುದೇ ಇರಲಿಲ್ಲ.
ಜತೆಗೆ ದ್ವೇಷ ರಾಜಕಾರಣ, ರಾಜಕೀಯ ಕಾರ್ಯಕರ್ತರ ಮನೆಗಳ ಮೇಲಿನ ಅಮಾನವೀಯ ದಾಳಿಗಳು ನಿರಂತರವಾಗಿದ್ದವು ಮತ್ತು ಇಲ್ಲಿನ ಯಾವ ರಾಜಕೀಯ ಪಕ್ಷವೂ ಈ ಪರಿಪಾಠಕ್ಕೆ ಹೊರತಾಗಿರಲಿಲ್ಲ. ಇಂಥ ರಾಜಕೀಯ ಅತಿರೇಕಗಳಿಗೆ ಬಲಿಯಾಗಿ ಅದೆಷ್ಟೋ ಕುಟುಂಬಗಳು ತಮ್ಮ ಸದಸ್ಯರನ್ನು ಕಳೆದುಕೊಂಡಿವೆ. ಕೇರಳದ ರಾಜಕೀಯ ವಾತಾವರಣ ಹೀಗಿರುವಾಗ ಅಲ್ಲಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಸುವ್ಯವಸ್ಥೆಯನ್ನು ನಿರೀಕ್ಷಿಸಲಾದೀತೇ?
ಕೋಟ್ಯಂತರ ಭಕ್ತರು ಭೇಟಿ ನೀಡುವ ಶಬರಿಮಲೆ ಕ್ಷೇತ್ರದಲ್ಲಿ ಸುಸಜ್ಜಿತ ಶೌಚಾಲಯ, ಕುಡಿಯುವ ನೀರು ಮತ್ತು ಇತರ ಮೂಲಭೂತ ಸೌಲಭ್ಯಗಳ ಕೊರತೆ ಕಣ್ಣಿಗೆ ರಾಚುವಂತಿದೆ. ಆದರೆ ಈ ಅವ್ಯವಸ್ಥೆಯನ್ನು ಪ್ರಶ್ನಿಸುವ ಭಕ್ತರ ಮೇಲೆಯೇ ಪೊಲೀಸರ ಬಲಪ್ರಯೋಗವಾಗುತ್ತದೆ.
ಬದರಿನಾಥ, ಕೇದಾರನಾಥ, ತಿರುಪತಿ ಕ್ಷೇತ್ರಗಳಿಗೂ ದಿನಂಪ್ರತಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲೆಲ್ಲ ಆನ್‌ಲೈನ್ ಬುಕಿಂಗ್ ವ್ಯವಸ್ಥೆಯಿದೆ. ಅವಽ ಮುಗಿದ ಬಳಿಕ ಇದನ್ನು ಕ್ಲೋಸ್ ಮಾಡಲಾಗುತ್ತದೆ; ಆದರೆ ಶಬರಿಮಲೆಯಲ್ಲಿ ಅವಧಿ ಮುಗಿದ ಬಳಿಕವೂ ಬುಕಿಂಗ್ ವ್ಯವಸ್ಥೆಯನ್ನು ಚಾಲ್ತಿಯಲ್ಲಿಟ್ಟು ಗೋಲ್
ಮಾಲ್ ನಡೆಸಲಾಗುತ್ತಿದೆ ಎಂಬ ಆರೋಪಗಳು ಭಕ್ತಸಮೂಹದಿಂದ ಕೇಳಿಬರುತ್ತಿವೆ. ಶ್ರೀಕ್ಷೇತ್ರದಲ್ಲಿನ ಇಂಥ ಅವ್ಯವಸ್ಥೆಯ ಬಗ್ಗೆ ದೇಶವ್ಯಾಪಿಯಾಗಿ ವ್ಯಾಪಕ ಜನಾಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ, ಕೇರಳ ಸರಕಾರದ ವಿರುದ್ಧ ನೆಟ್ಟಿಗರು ಗರಂ ಆದ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಇದು ಆರೆಸ್ಸೆಸ್‌ನ ಪಿತೂರಿ, ಅದು ಸೃಷ್ಟಿಸಿದ ನಾಟಕ’ ಎಂಬ ಉಡಾಫೆಯ ಮಾತುಗಳನ್ನಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಶ್ರೀಮಂತ ಸಂಪ್ರದಾಯ, ಸಂಸ್ಕೃತಿ ಮತ್ತು ಸಾಕ್ಷರತೆಯ ದೃಷ್ಟಿಯಿಂದ ಕೇರಳ ಸಾಕಷ್ಟು ಮುಂಚೂಣಿಯಲ್ಲಿದ್ದರೂ, ಇಲ್ಲಿ ಎದ್ದು ಕಾಣುವಂತಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಸೈದ್ಧಾಂತಿಕ ದ್ವೇಷಸಾಧನೆಗಳಿಂದಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ಶ್ರದ್ಧಾಕೇಂದ್ರಗಳು ಜನರ ಭಕ್ತಿ-ಭಾವನೆಯ ಪ್ರತೀಕ. ತಮ್ಮ
ನಾನಾ ಸಮಸ್ಯೆಗಳು, ಸಂಕಟಗಳು, ನೋವುಗಳ ನಿವಾರಣೆಗೆಂದು ಹರಕೆ ಹೊತ್ತು ಇಲ್ಲಿಗೆ ಬರುವ ಭಕ್ತರ ಭಾವನೆಗಳನ್ನು ಸರಕಾರಗಳು ಗೌರವಿಸಬೇಕು. ಧಾರ್ಮಿಕ ಕ್ಷೇತ್ರದೊಳಗೆ ಯಾವತ್ತೂ ರಾಜಕೀಯವು ನುಸುಳಬಾರದು. ಜತೆಗೆ, ರಾಜಕಾರಣದಲ್ಲಿ ಧಾರ್ಮಿಕ ಕ್ಷೇತ್ರವನ್ನು ಎಳೆದು ತರುವುದು ಯಾವುದೇ ಸರಕಾರ ಅಥವಾ ಜನಪ್ರತಿನಿಧಿಗೆ ಶೋಭೆ ತರುವ ವಿಷಯವಲ್ಲ. ಅನುಕೂಲವಾದರೆ, ಎಲ್ಲರೊಳಗೊಂದಾಗಿ ತಮ್ಮಿಂದಾದ ಸಹಕಾರವನ್ನು ನೀಡಿ ಸುಮ್ಮನಿರಬೇಕು. ಆದರೆ, ದೇವಾಲಯಗಳಲ್ಲಿ ‘ವಿಐಪಿ ದರ್ಶನ’ಕ್ಕೆ ಅವಕಾಶ ಕಲ್ಪಿಸುವ ಮೂಲಕ ಸರಕಾರ ಮತ್ತು ಸಮಾಜ, ಜನಸಾಮಾನ್ಯರ ನಡುವೆ ತಾರತಮ್ಯ ನೀತಿಯನ್ನು ಹುಟ್ಟುಹಾಕುತ್ತಿವೆ ಎಂದರೆ ತಪ್ಪಾಗಲಾರದು. ದೇವಾಲಯಗಳಲ್ಲಿ ಎಲ್ಲರಿಗೂ ದರ್ಶನಕ್ಕೆ ಸಮಾನ ಅವಕಾಶ ಕಲ್ಪಿಸಿದಾಗ ಮಾತ್ರವೇ ಸಾಮಾಜಿಕ ಅಸಮತೋಲನ ಮತ್ತು ಕೀಳರಿಮೆಗಳು ದೂರ ಸರಿಯುತ್ತವೆ.
(ಲೇಖಕರು ಹವ್ಯಾಸಿ ಬರಹಗಾರರು)