Sunday, 15th December 2024

ಮನೆಯಲ್ಲಿ ತಯಾರಿಸಿದ ಆಹಾರ ಸುರಕ್ಷಿತ

ತನ್ನಿಮಿತ್ತ

ಬಸವರಾಜ ಶಿವಪ್ಪ ಗಿರಗಾಂವಿ

ಪ್ರಪಂಚದಲ್ಲಿರುವ ಎಲ್ಲ ಜೀವಿಗಳು ತಮಗರಿವಿಲ್ಲದೆ ಹಲವಾರು ರೋಗ – ರುಜಿನಗಳಿಗೆ ಅನಿರೀಕ್ಷಿತವಾಗಿ ಬಲಿಯಾಗುತ್ತಿವೆ. ಇಂದು ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಆಹಾರದ ಬಗ್ಗೆ ಅವಲೋಕನ ಮುಖ್ಯವೆನಿಸುತ್ತದೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಇಂಥ ಅನಾಮಧೇಯ ಕಾಯಿಲೆಗಳಿಗೆ ತಕ್ಷಣವೇ ಔಷಧಿ ಪೂರೈಸಲು ಕಷ್ಟಸಾಧ್ಯ ವಾಗುತ್ತಿದೆ.

ಇದರಿಂದಾಗಿ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ಜೀವನವು ನೀರಿನ ಮೇಲಿನ ಗುಳ್ಳೆಯಂತಾಗಿದೆ. ಅದರಲ್ಲೂ ಕಳೆದ ಎರಡು ವರ್ಷದಿಂದ ಕಾಡುತ್ತಿರುವ ಕರೋನಾ ರೋಗದಿಂದಾಗಿ ಪ್ರತಿಯೊಬ್ಬರಿಗೂ ಜೀವದ ಮೇಲಿನ ಆಸೆಯೇ ಇಲ್ಲದಂತಾಗಿದೆ. ಈ ರೀತಿಯಾದ ಅಸಮತೋಲನ ವಾತಾವರಣಕ್ಕೆ ಪ್ರತಿಯೊಂದು ಜೀವಿಗಳು ಸ್ವೀಕರಿಸುವ ಸುರಕ್ಷಿತವಲ್ಲದ ಆಹಾರವೇ ಕಾರಣ ವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಆಹಾರವು ಪ್ರತಿಯೊಂದು ಜೀವಿಗಳ ಪ್ರಮುಖ ಜೀವನಾವಶ್ಯಕ ವಸ್ತುವಾಗಿದೆ.

ಅದರಲ್ಲೂ ಮುಖ್ಯವಾಗಿ ಮಾನವರ ಆಹಾರ ಪದ್ಧತಿಯು ಅವರವರ ಹಕ್ಕಾಗಿದೆ. ವಿಶ್ವದಾದ್ಯಂತ ಮನುಕುಲದ ಆಹಾರ ಕ್ರಮವು
ಬೇರೆಬೇರೆಯಾಗಿದ್ದರೂ ಒಟ್ಟಾರೆ ಆಹಾರವು ಬದುಕಿನ ಅತ್ಯಂತ ಪ್ರಮುಖ ಭಾಗ. ಹೀಗಾಗಿ ಮಾನವನು ತನಗಿಷ್ಟದಂತೆ
ರಸ ಪಾಕದಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಕೈಗೊಳ್ಳುತ್ತ ಪ್ರಭುತ್ವ ಸಾಽಸುತ್ತಿದ್ದಾನೆ. ಇದರ ಘೋರ ಪರಿಣಾಮದಿಂದಾಗಿ
ಮಾನವನು ಆರೋಗ್ಯಕರ ಆಹಾರಗಳನ್ನು ಬಲಿಕೊಟ್ಟು ಕೇವಲ ಬಾಯಿರುಚಿ ಅಥವಾ ಬಾಹ್ಯ ಬಣ್ಣದ ರುಚಿಗೆ ಮನ ಸೋತು ಸಮುದಾಯದ ಆರೋಗ್ಯವನ್ನು ಹಾಳು ಮಾಡುತ್ತಿದ್ದಾನೆ.

ಋತುಮಾನಕ್ಕನುಗುಣವಾಗಿ ಮಾನವನು ಶರೀರ ಸಧೃಢತೆಗಾಗಿ ಪ್ರತಿಯೊಂದು ಪೋಷಕಾಂಶಯುಕ್ತ ಆಹಾರ ಸ್ವೀಕರಿಸುವುದು ಅಗತ್ಯವಾಗಿವೆ. ಆದರೆ ಮಾನವನು ಸಮತೋಲನದಲ್ಲಿ ಆಹಾರವನ್ನು ಸ್ವೀಕರಿಸದೇ ಕೆಲವೊಂದನ್ನು ಮಾತ್ರ ಹೇರಳವಾಗಿ ಸ್ವೀಕರಿಸಿ ಕೆಲವೊಂದನ್ನು ಸ್ವೀಕರಿಸದೇ ಇರುವುದರಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ‘ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎಂಬಂತೆ ಬಾಯಲ್ಲಿ ನೀರೂರಿಸುವ ಹಲವು ಆಹಾರ ಖಾದ್ಯಗಳು ಶರೀರದ ಸದೃಢತೆಗೆ ವಿರುದ್ಧವಾಗಿವೆ. ಆದರೆ ಇಂದಿನ ಯುವಜನಾಂಗ ಇಂಥ ಆಹಾರಗಳಿಗೆ ಮನಸೋತು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಭವಿಷ್ಯದಲ್ಲಿ ಮಾರಕವಾಗುತ್ತಿದೆ.

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬಂತೆ ಹೊತ್ತು ಗೊತ್ತಿಲ್ಲದ ಆಹಾರ ಸೇವನೆ ದುರಂತಕ್ಕೆ ಎಡೆ ಮಾಡಿಕೊಡುತ್ತಿದೆ. ಮಾರುಕಟ್ಟೆಯಲ್ಲಿ ದೊರೆಯುವ ಇಂದಿನ ಪ್ರತಿಯೊಂದು ಸಂಸ್ಕರಣಾ ಆಹಾರಗಳು ಎಷ್ಟು ಸುರಕ್ಷಿತವಾಗಿವೆ ಎಂಬುದು ದೇವರೆ ಬಲ್ಲ. ಇಂಥ ಆಹಾರಗಳಿಗೆ ಚಿಕ್ಕ ಮಕ್ಕಳು ಸೇರಿದಂತೆ ಪ್ರತಿಯೊಬ್ಬರ ದಿನನಿತ್ಯದ ಮೋಜಿನ ಸಾಧನಗಳಾಗಿರುವುದು ದುರಂತ. ಹಿಂದಿನ ಕಾಲದಲ್ಲಿ ಹವಾಮಾನಕ್ಕನುಗುಣವಾಗಿ ಆರೋಗ್ಯಕರ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ತಿನ್ನುತ್ತಿದ್ದರು.

ಇದರಿಂದಾಗಿ ನಮ್ಮ ಪೂರ್ವಜರು ನೂರಾರು ವರ್ಷಗಳ ಕಾಲ ಆರೋಗ್ಯಕರವಾಗಿ ಬದುಕಿದ್ದರು ಎಂಬುದನ್ನು ಗಮನಿಸಬೇಕಾದ ವಿಷಯವಾಗಿದೆ. ಆ ದಿನಗಳಲ್ಲಿ ಆಹಾರ ತಯಾರಿಕೆಯ ಪ್ರತಿಯೊಂದು ಕಚ್ಚಾ ವಸ್ತುಗಳು ತಾಜಾ ಹಾಗೂ ರಾಸಾಯನಿಕ ರಹಿತವಾಗಿ ದೊರಕುತ್ತಿದ್ದುದು ವಿಶೇಷ. ಆದರೆ ಇಂದು ಫ್ರಿಡ್ಜ್‌ಗಳ ಸಾಮ್ರಾಜ್ಯದಲ್ಲಿ ತಾಜಾ ಎನ್ನುವ ಶಬ್ದ ಮಂಗಮಾಯವಾಗಿದೆ. ವಿಷಯುಕ್ತವಾಗಿರುವ ಇಂದಿನ ಬಹುತೇಕ ಬಾಯಿರುಚಿಯ ಆಹಾರಗಳಲ್ಲಿ ವಿಷಮುಕ್ತ ಎನ್ನುವುದು ಅಸಾಧ್ಯದ ಮಾತಾಗಿದೆ. ಒಟ್ಟಾರೆ ಇಂದು ಆಹಾರ ತಯಾರಿಕೆಗೆ ಅವಶ್ಯವಿರುವ ಕಾಯಿಪಲ್ಲೆ, ಹಾಲು, ಖಾದ್ಯತೈಲ, ಹಣ್ಣು, ದವಸ – ಧಾನ್ಯಗಳು, ನೀರು ಮತ್ತು ಮಾಂಸಗಳು ಸೇರಿದಂತೆ ಬಹುತೇಕ ಪದಾರ್ಥಗಳು ರಾಸಾಯನಿಕಗಳಿಂದ ಸಂಸ್ಕರಿತವಾಗಿರುವುದು ತಮಗೆಲ್ಲ ತಿಳಿದ
ವಿಷಯ.

‘ಭಾರತವು ಕೃಷಿ ಪ್ರಧಾನ ದೇಶವಾಗಿದ್ದರಿಂದ ಪ್ರತಿಯೊಬ್ಬರು ತಮ್ಮ ದಿನನಿತ್ಯದ ಉಪಯೋಗಕ್ಕೆ ಅವಶ್ಯಕತೆಯಿರುವಷ್ಟು ಆಹಾರ ಪದಾರ್ಥಗಳನ್ನು ಋತುಮಾನಕ್ಕನುಗುಣವಾಗಿ ನಾಟಿ ಮಾಡಿ ಶೇಖರಿಸಿಟ್ಟುಕೊಂಡಿರಬೇಕು. ಮನೆಯಲ್ಲಿಯೇ ಆಹಾರ ತಯಾರಿಸಿ ಉಪಯೋಗಿಸಬೇಕು. ಸಾಧ್ಯವಾದಷ್ಟು ಹೊರಗಿನ ಆಹಾರಗಳಿಗೆ ಕಡಿವಾಣ ಹಾಕಬೇಕು. ಋತುಮಾನಕ್ಕನುಗುಣವಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಕಡ್ಡಾಯವಾಗಿ ಇರಬೇಕು. ಆಹಾರ ಸೇವನೆಯಲ್ಲಿ ಮಿತಿ ಇರಬೇಕು. ಆಹಾರ ತಯಾರಿಕೆ ಯಲ್ಲಿ ಶುಚಿತ್ವ ಪಾಲನೆಯಾಗಬೇಕು. ಇದುವೆ ಇಂದಿನ ಆಹಾರ ಸುರಕ್ಷತಾ ದಿನದ ಧ್ಯೇಯವಾಗಬೇಕು.