ಸಂಸ್ಮರಣೆ
ಡಾ.ಅಮಿತ್ ಕುಮಾರ್ ಬಿರಾದಾರ್
ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶತಮಾನದ ಸಂತ, ಜ್ಞಾನದಾಸೋಹಿ ಮತ್ತು ತಮ್ಮ ಮೃದುಮಾತುಗಳಿಂದ ಕೋಟ್ಯಂತರ ಭಕ್ತರ ಹೃದಯದಲ್ಲಿ
ನೆಲೆಸಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಪಂಚಭೂತಗಳಲ್ಲಿ ಲೀನರಾಗಿ (೨೦೨೩, ಜನವರಿ ೨) ಇನ್ನೇನು ಕೆಲವು ದಿನಗಳಿಗೆ ಒಂದು ವರ್ಷವಾಗಲಿದೆ. ತಮ್ಮ ಸರಳ ಜೀವನದ ಮೂಲಕ ಅಸಂಖ್ಯಾತ ಭಕ್ತರ ಪಾಲಿಗೆ ದಾರಿದೀಪವಾಗಿದ್ದ ಸ್ವಾಮೀಜಿಯವರನ್ನು ನೆನೆಯುವುದೇ ನಮ್ಮೆಲ್ಲರ ಸೌಭಾಗ್ಯ.
ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ, ವಿದೇಶಗಳಲ್ಲೂ ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ ಸರಳ ಜೀವನದ ಸಂದೇಶ ನೀಡಿದ ಈ ಮಹಾತ್ಮರ ಸ್ಮರಣಾರ್ಥ ವಾಗಿ ಜ್ಞಾನಯೋಗ ಆಶ್ರಮದ ಭಕ್ತರೆಲ್ಲ ಸೇರಿ ‘ಗುರು ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿರಳ ವ್ಯಕ್ತಿಗಳ ಜೀವನದಲ್ಲಿನ ಕೆಲ ಘಟನೆಗಳು ದಂತಕತೆಯ ರೂಪವನ್ನು ಪಡೆದುಕೊಳ್ಳುತ್ತವೆ ಅಥವಾ ಅವರೇ ದಂತಕತೆಯಾಗಿರುತ್ತಾರೆ. ಆದರೆ ಇವೆಲ್ಲವುಗಳಿಗೆ ಇಲ್ಲಿ ಅವಕಾಶವೇ ಇಲ್ಲ. ‘ಅಂಗಿಗೆ ಜೇಬು ಇಲ್ಲ’, ‘ಕಾವಿ ಹಾಕೋ ದಿಲ್ಲ’, ‘ದಿನಕ್ಕೆ ಇಷ್ಟೇ ಆಹಾರ’, ‘ಪ್ರವಚನದ ವೇಳೆಯಲ್ಲಿ ಸೂಜಿ ಬಿದ್ದರೂ ಸಪ್ಪಳ’, ‘ಟೈಂ ಅಂದ್ರೆ ಟೈಂ, ಬರುತ್ತೇವೆಂದ ಗಣ್ಯರು ಬರಲಿ ಬಿಡಲಿ, ಪ್ರವಚನ ಮಾತ್ರ ಶುರು’, ‘ಎಲ್ಲರಿಗಿಂತ ಎತ್ತರದ ಆಸನದ ಮೇಲೆ ಕೂರೋದಿಲ್ಲ’- ಭಕ್ತಗಣದ ಈ ಎಲ್ಲ ಮಾತುಗಳು ಪೂಜ್ಯರ ನಿತ್ಯದ ಆಚರಣೆಯಲ್ಲಿ ಕಾರ್ಯಗತವಾಗುತ್ತಿದ್ದವು.
ಹಾಗಾಗಿಯೇ ಇವರ ದರ್ಶನ, ಆಶೀರ್ವಾದ ಪಡೆದವರೆಲ್ಲ ಹೇಳುತ್ತಿದ್ದುದು ಒಂದೇ ಮಾತು: ‘ಬಹಿರಂಗದಲ್ಲಿ ಹೇಗೆ ಕಾಣುತ್ತಾರೋ, ಅಂತರಂಗದಲ್ಲೂ ಹಾಗೇ ಬದುಕುತ್ತಾರೆ; ಅದಕ್ಕೇ ಪೂಜ್ಯರು ಅನುಕರಣೀಯರು, ಆದರ್ಶಮಯ ವ್ಯಕ್ತಿ’. ಬದುಕೆಂಬುದು ಅನುಭವಗಳ ಪ್ರವಾಹ. ಪ್ರತಿಕ್ಷಣವೂ ಒಂದಿಲ್ಲೊಂದು ಅನುಭವ ಗಳಿಂದ ನಮ್ಮ ಜೀವನ ತುಂಬಿ ಹೋಗಿರುತ್ತದೆ. ಅದನ್ನು ಸ್ವೀಕರಿಸಿ, ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸುತ್ತಾ ಸಾಗುವುದೇ ಜೀವನ. ಆ ಅನುಭವಗಳ ಸಿರಿವಂತಿಕೆಯು ವಿಶ್ವಚೇತನ ಹಾಗೂ ಸತ್ಯಶೋಧದಿಂದ ತುಂಬಿರುವುದು. ಈ ಸೌಂದರ್ಯದ ಮಧ್ಯೆ ನಾವು ಪ್ರತಿಯೊಬ್ಬರೂ ರಾಗ-ದ್ವೇಷಕ್ಕೆ ಆಸ್ಪದವೀಯದೆ ಪರಸ್ಪರ ಪ್ರೀತಿಯಿಂದ ಬದುಕಬೇಕು ಎಂಬ ಪರಿಕಲ್ಪನೆಯಿತ್ತವರು ಪೂಜ್ಯರು.
‘ಈ ಜೀವನವನ್ನು ಪ್ರೀತಿ-ಪ್ರೇಮ, ಮಮಕಾರ-ವಾತ್ಸಲ್ಯಗಳಿಂದ ಸಮೃದ್ಧಗೊಳಿಸುವುದೇ ಒಂದು ದೊಡ್ಡ ಸಾಧನೆ. ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದೇ ಧರ್ಮ. ಅದು ಎಲ್ಲರ ನೆಮ್ಮದಿಗೆ ಕಾರಣವಾಗುತ್ತದೆ’ ಎಂದು ಪೂಜ್ಯರು ತಮ್ಮ ಅಂತಿಮ ಅಭಿವಂದನ ಪತ್ರ ದಲ್ಲಿ ಹೇಳಿದ್ದಾರೆ. ತಮಗೆ ಕೇಂದ್ರ ಸರಕಾರವು ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಬಯಸಿದಾಗ ನಯವಾಗಿ ತಿರಸ್ಕರಿಸಿ, ‘ಅದನ್ನು ಮತ್ತೊಬ್ಬ ಸಾಧಕರಿಗೆ ನೀಡಿ’ ಎಂದು ಮೃದುವಾಗಿ ಹೇಳಿದವರು ಪೂಜ್ಯರು. ಈ ಕಾರಣಕ್ಕೆ ದೇಶದ ಅಸಂಖ್ಯಾತ ಜನರು ಅವರನ್ನು ಮೆಚ್ಚಿಕೊಳ್ಳುತ್ತಾರೆ.
ಅಂಥ ಒಬ್ಬ ಮಹಾನ್ ತಪಸ್ವಿಯನ್ನು, ಆವೇಗವಿಲ್ಲದ ಬದುಕನ್ನು ಸಾವಧಾನದಿಂದ ಬದುಕಿದ ಯೋಗಸಾಧಕನನ್ನು ನೆನೆಯುವ ಮತ್ತು ಅವರ ಚಿಂತನೆಗಳನ್ನು
ಸಾಕಾರಗೊಳಿಸುವ ಆಶಯದೊಂದಿಗೆ ಆಶ್ರಮದೊಡನೆ ಭಕ್ತರು ಕೈಜೋಡಿಸಿ ‘ಗುರುನಮನ ಮಹೋತ್ಸವ’ವನ್ನು ಆಚರಿಸುತ್ತಿದ್ದಾರೆ. ಇದರ ಪ್ರಯುಕ್ತ ಈಗಾಗಲೇ ನೂರಾರು ಹಳ್ಳಿಗಳಲ್ಲಿ ‘ಜ್ಞಾನ ದಾಸೋಹ’ ಸತ್ಸಂಗ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತಿಯೊಬ್ಬರಿಗೂ ಅನುಕೂಲವಾಗಬೇಕೆಂಬ ಆಶಯದೊಂದಿಗೆ ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಆಧುನಿಕ ಜೀವನಶೈಲಿಯಿಂದಾಗಿ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನರಿಗೆ ದಾರಿದೀಪ ವಾಗಲೆಂದು ಹಾಗೂ ಮೊದಲಿದ್ದ ಪರಿಸರವನ್ನು ಮರುನಿರ್ಮಾಣ ಮಾಡಬೇಕೆಂಬ ಧ್ಯೇಯದೊಂದಿಗೆ ‘ಗ್ರಾಮೀಣ ಜನರ ಬದುಕು’ ಎಂಬ ವಿಷಯದ ಕುರಿತು ಗೋಷ್ಠಿಯನ್ನು ಆಯೋಜಿಸಲಾಗಿದೆ; ಗ್ರಾಮೀಣ ಸೊಗಡನ್ನು ಮೆಲುಕು ಹಾಕುವುದರ ಜತೆಗೆ, ಅದನ್ನು ಅನುಭವಿಸುವುದು ಹೇಗೆ ಎಂಬುದರ ಕುರಿತು ಇದರಲ್ಲಿ ಭಾಗವಹಿಸುವ ಪರಿಣತರು ತಿಳಿಹೇಳಲಿದ್ದಾರೆ.
ಇಂದಿನ ಯುವಜನರಿಗೆ ಅವಶ್ಯಕವಾಗಿರುವ ದೇಶ ಪ್ರೇಮದ ಮೇಲೆ ಬೆಳಕು ಚೆಲ್ಲಲೆಂದು ‘ಯುವಕರು ಮತ್ತು ದೇಶಪ್ರೇಮ’ ಎಂಬ ವಿಷಯದ ಕುರಿತು ಗೋಷ್ಠಿ ಮತ್ತು ಚರ್ಚೆಗಳು ನಡೆಯಲಿವೆ. ಬಲಿಷ್ಠ ಭಾರತವನ್ನು ನಿರ್ಮಾಣ ಮಾಡುವಂಥ ಮಹತ್ತರ ಜವಾಬ್ದಾರಿಯಿರುವುದು ಯುವಕರ ಮೇಲೆಯೇ; ಹಾಗಾಗಿ ಯುವಕರು ಈ ದೇಶಕ್ಕೆ ಏನೆಲ್ಲ ಸೇವೆಯನ್ನು ಮಾಡಬಹುದು, ಏನೆಲ್ಲ ಬದಲಾವಣೆಗಳನ್ನು ತರಬಹುದು ಎಂಬುದರ ಕುರಿತು ಅನೇಕ ಯುವನಾಯಕರು ಉಪನ್ಯಾಸ ನೀಡಲಿದ್ದಾರೆ. ಯುವಕರೊಂದಿಗೆ ಬೆರೆತು ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಯುವಕರು ಈ ಗೋಷ್ಠಿಯಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ
ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಈ ದೇಶದಲ್ಲಿ ಭಾರತೀಯ ಸಂಸ್ಕಾರ, ಪರಂಪರೆ, ಧಾರ್ಮಿಕತೆ, ಸದಾಚಾರ ಹಾಗೂ ಇನ್ನೂ ಅನೇಕ ಉತ್ತಮಿಕೆಗಳು ಉಳಿಯಬೇಕೆಂದರೆ, ಅದಕ್ಕೆ ಪ್ರಮುಖ ಪ್ರೇರಕಶಕ್ತಿಯೇ ಮಹಿಳೆ. ಹಾಗಾಗಿ, ಮರೆತುಹೋದಂಥ ಸಂಸ್ಕೃತಿಯನ್ನು ಮರುಸ್ಥಾಪಿಸಿ, ಭವ್ಯಭಾರತವನ್ನು ಹೇಗೆ ನಿರ್ಮಾಣ ಮಾಡಬೇಕೆಂಬುದರ ಕುರಿತು ಚರ್ಚಿಸಲು ‘ಮಹಿಳೆ ಮತ್ತು ಸಂಸ್ಕೃತಿ’ ಎಂಬ ವಿಚಾರದ ಕುರಿತು ಗೋಷ್ಠಿಗಳು ನಡೆಯಲಿವೆ. ನಾಡಿನ ಪ್ರಖ್ಯಾತ ಸಾಧಕಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಶಿಕ್ಷಣ ಹಾಗೂ ವಿಜ್ಞಾನ, ಜನಪದ ಕಲೆಗಳು, ಕ್ರೀಡೆ, ಯೋಗ, ಆರೋಗ್ಯ, ಜಾಗತಿಕ ಅಧ್ಯಾತ್ಮ ಚಿಂತನೆ, ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಮಯಪಾಲನೆ, ವ್ಯಸನಮುಕ್ತಿ ಹೀಗೆ ಹಲವು ವಿಷಯಗಳ ಕುರಿತಾದ ಚರ್ಚಾಗೋಷ್ಠಿಗಳು ಒಟ್ಟು ೯ ದಿನಗಳವರೆಗೆ ಈ ಸಂದರ್ಭದಲ್ಲಿ ನಡೆಯಲಿವೆ.
ತನ್ಮೂಲಕ ಸಮಾಜದಲ್ಲಿ ಹೊಸ ಚಿಂತನೆಗಳನ್ನು ಮೂಡಿಸಿ, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಸದಾಶಯಗಳನ್ನು ಸಾಕಾರಗೊಳಿಸುವುದರ ಕಡೆ ಹೆಜ್ಜೆ ಹಾಕಲಾಗುವುದು. ಇದೇ ಸಂದರ್ಭದಲ್ಲಿ ಪೂಜ್ಯರ ಪ್ರವಚನಗಳನ್ನು ಆಧರಿಸಿದ ಕನ್ನಡ ಮತ್ತು ಹಿಂದಿ ಗ್ರಂಥಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಜ್ಞಾನ ಯೋಗಾಶ್ರಮದ ‘ಗುರುದೇವ ಗ್ರಂಥಾಲಯ’ದ ನೂತನ ಕಟ್ಟಡದ ಉದ್ಘಾಟನೆ ನೆರವೇರುವುದು. ಈ ಗ್ರಂಥಾಲಯದಲ್ಲಿ ಭಾರತೀಯ ತತ್ತ್ವಶಾಸ್ತ್ರ, ವೇದ, ವೇದಾಂತ ಮತ್ತು ವಚನ ಸಾಹಿತ್ಯಕ್ಕೆ ಸಂಬಂಽಸಿದ ಅನೇಕ ಕೃತಿ ಸಂಗ್ರಹಗಳಿವೆ.
ಜನವರಿ ೧ ಮತ್ತು ೨ರಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರಿಗೆ ಗುರುನಮನ ಸಮರ್ಪಣೆ ಕಾರ್ಯಕ್ರಮ ನಡೆಯುತ್ತದೆ. ಜನವರಿ ೧ರಂದು ಸಾಯಂಕಾಲದ ಸಮಾರಂಭದಲ್ಲಿ ಪ್ರತಿಯೊಬ್ಬರೂ ದೀಪವನ್ನು ಬೆಳಗಿಸುವ ಮೂಲಕ ಗುರುನಮನ ಸಲ್ಲಿಸುವರು. ಜನವರಿ ೨ರಂದು ಬೆಳಗ್ಗೆ ೮ ಗಂಟೆಗೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆ ಪೂಜೆ ನಡೆದ ನಂತರ ನಡೆಯುವ ಸಮಾರಂಭದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ
ಗೀತನಮನ ಮತ್ತು ಸಾಮೂಹಿಕವಾಗಿ ಪುಷ್ಪ ಸಮರ್ಪಿಸುವ ಕಾರ್ಯಕ್ರಮವಿರುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಅನೇಕ ಮಂತ್ರಿ-ಮಹೋದಯರು, ನಾಡಿನ ಅನೇಕ ಪೂಜ್ಯರು, ಗಣ್ಯಮಾನ್ಯರು, ಭಕ್ತಜನರು ಆಗಮಿಸಲಿದ್ದಾರೆ. ಈ ಮಹ್ಸೋವದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಿ ಶ್ರೀ ಗುರುದೇವರ ಕೃಪೆಗೆ ಪಾತ್ರರಾಗುವುದು ನಮ್ಮೆಲ್ಲರ ಪುಣ್ಯವೇ ಸರಿ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸೋಣ.
(ಲೇಖಕರು ಸಹಾಯಕ ಪ್ರಾಧ್ಯಾಪಕರು)