ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
1893ರ ಸೆಪ್ಟೆಂಬರ್ 11ರಂದು ಪ್ರಪಂಚದ ಮೊಟ್ಟ ಮೊದಲ ಸರ್ವಧರ್ಮ ಸಮ್ಮೇಳನವು ಅಮೆರಿಕ ದೇಶದ ಚಿಕಾಗೊ ನಗರದಲ್ಲಿ ನಡೆದಿತ್ತು. ಭಾರತದ ಬಿರುಗಾಳಿಯ ಸಂತ ‘ಸ್ವಾಮಿ ವಿವೇಕಾನಂದ’ರು ಈ ಸಮ್ಮೇಳನದಲ್ಲಿ ಹಿಂದೂ ಧರ್ಮದ ಮಹತ್ವವನ್ನು ಪಾಶ್ಚಿಮಾತ್ಯ ಜಗತ್ತಿಗೆ ಸಾರಿ ಹೇಳಿದ್ದರು.
ಹಾವು ಹಿಡಿಯುವವರ ನಾಡೆಂದು ಭಾರತವನ್ನು ಆಡಿಕೊಳ್ಳುತ್ತಿದ್ದಂಥ ಪಾಶ್ಚಿಮಾತ್ಯರ ಮುಂದೆ ಭಾರತದ ಹಿಂದೂ ಧರ್ಮದ ಮಹತ್ವವನ್ನು ಸ್ವಾಮಿಗಳು ವಿವರವಾಗಿ ಮಂಡಿಸಿ ಇಡೀ ಸಭಾಂಗಣವೇ ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಮಾಡಿದ್ದರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಭಾರತದ ಮಿತ್ರತ್ವವನ್ನು ಪರಿಚಯಿಸಿ, ಜಗತ್ತಿನ ಜನರೆಲ್ಲರೂ ಅಣ್ಣ ತಮ್ಮಂದಿರಂತಿರಬೇಕೆಂದು ಸ್ವಾಮಿಗಳು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಭಾರತದ ಕೀರ್ತಿಯನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದರು.
ಹಿಂದೂ ಧರ್ಮವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸುವಾಗ ಜಗತ್ತಿನ ಅತ್ಯಂತ ಸಹಿಷ್ಣುತ ಧರ್ಮವೆಂದರೆ ‘ಹಿಂದೂ’ ಧರ್ಮ ವೆಂದು ಹೇಳಿದ್ದರು. ಸ್ವಾಮಿಗಳು ಮೂಲತಃ ಪಶ್ಚಿಮ ಬಂಗಾಳದವರು, ಕೋಲ್ಕತ್ತಾ ನಗರದಲ್ಲಿ 1863ರ ಜನವರಿ 12ರಲ್ಲಿ ಜನಿಸಿದ ‘ಬಿರುಗಾಳಿಯ ಸಂತ’ನಿಗೆ ಚಿಕ್ಕ ವಯಸ್ಸಿನಲ್ಲಿಯೇ ಸದೃಢ ಭಾರತ ಕಟ್ಟುವ ಕಲ್ಪನೆಯಿತ್ತು. ಸ್ವಾಮೀಜಿಯ ಉದ್ದೇಶ, ದೂರದೃಷ್ಟಿ, ಆಲೋಚನೆಗಳು ಇಂದಿಗೂ ಸದೃಢ ಭಾರತದ ಕಲ್ಪನೆಯ ಪ್ರಮುಖ ವಿಷಯಗಳಾಗಿವೆ.
ಹಿಂದೂ ಧರ್ಮದ ಮಹತ್ವವನ್ನು ಪಾಶ್ಚಿಮಾತ್ಯರಿಗೆ ಸಾರಿದ ಸ್ವಾಮಿಗಳು ಹುಟ್ಟಿದ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಹಿಂದೂ ಧರ್ಮವನ್ನು ವಿನಾಶದೆಡೆಗೆ ಕೊಂಡೊಯ್ಯುವ ಕೆಲಸಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ನಡೆಯುತ್ತಿದೆ. ಸ್ವತಂತ್ರ್ಯಾನಂತರ
ಮೊಟ್ಟಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮವನ್ನು ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ನಂತರ ಅಧಿಕಾರಕ್ಕೆ ಬಂದಂಥ ‘ಕಮ್ಯುನಿಸ್ಟ್’ ಪಕ್ಷವು ಮೂರು ದಶಕಗಳ ಕಾಲ ಬಂಗಾಳವನ್ನು ಹಾಳುಗೆಡವಿತ್ತು, ಈಗ ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ಮಮತಾ ಬ್ಯಾನರ್ಜಿಯ ಸರಕಾರದಲ್ಲಿ ಹಿಂದೂಗಳು ಶ್ರೀರಾಮನ ಹೆಸರನ್ನು ಹೇಳಲು ಭಯಬೀಳುವ ಪರಿಸ್ಥಿತಿ ಎದುರಾಗಿದೆ.
‘ಸ್ವಾಮಿ ವಿವೇಕಾನಂದರು ತಮ್ಮ ಭಾಷಣದಲ್ಲಿ ಜಗತ್ತಿನ ಪುರಾತನ ಸಂತರ ಸಮುದಾಯದ ಪರವಾಗಿ ಹಿಂದೂ ಧರ್ಮದ ಹೆಸರಿನಲ್ಲಿ ಸಭಾಂಗಣದಲ್ಲಿ ನೆರೆದಿದ್ದಂಥ ಸಭಿಕರಿಗೆ ಕೃತಜ್ಞತೆಯನ್ನು ತಿಳಿಸಿದ್ದರು. ಜಗತ್ತಿನೆಡೆ ಹಂಚಿ ಹೋಗಿರುವ ಲಕ್ಷಾಂತರ ಹಿಂದೂ ಧರ್ಮದ ಅನುಯಾಯಿಗಳ ಪರವಾಗಿ, ನೆರೆದಿದ್ದಂಥ ಪಾಶ್ಚಿಮಾತ್ಯದ ಸಭಿಕರಿಗೆ ಹಿಂದೂ ಧರ್ಮದ ಪರವಾಗಿ ಭಾಷಣ ಮಾಡಲು ಕರೆಯಿಸಿದ್ದಕ್ಕೆ ಕೃತಜ್ಞತೆಯನ್ನು ತಿಳಿಸಿದ್ದರು’.
ಕೇವಲ ಸಮನ್ವಯವೊಂದೇ ಅಲ್ಲದೇ ಸ್ವೀಕಾರದ ಪಾಠವನ್ನು ಇಡೀ ವಿಶ್ವಕ್ಕೆ ಸಾರಿದ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ
ಪಾಲಿನ ಅಭಿಮಾನವೆಂದು ಸ್ವಾಮಿಗಳು ಹೇಳಿದ್ದರು. ಎಂಥ ವಿಪರ್ಯಾಸ ನೋಡಿ, ಜಗತ್ತಿನ ಪುರಾತನ ಸಂತ ಸಮುದಾಯದ ಪರವಾಗಿ ಕೃತಜ್ಞತೆಯನ್ನು ತಿಳಿಸಿದ್ದಂಥ ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಇಂದು ಸಂತರು ಭಯದಿಂದ ತಮ್ಮ ಜೀವ ಉಳಿಸಿಕೊಳ್ಳಲು, ಸಂತವಸಗಳನ್ನು ತೊಡಲು ಭಯ ಬೀಳುವ ಪರಿಸ್ಥಿತಿ ಎದುರಾಗಿದೆ.
ಕೇಸರಿ ಬಣ್ಣದ ವಸಗಳನ್ನು ಕಂಡರೆ ಸಾಕು ‘ಮಮತಾ ಬ್ಯಾನರ್ಜಿ’ ಬೆಂಬಲಿಗರು ಉರಿದು ಬೀಳುವ ಪರಿಸ್ಥಿತಿ ಎದುರಾಗಿದೆ. ಸಂತರ ವಸ್ತ್ರ ಬಣ್ಣವೆಲ್ಲವೂ ಇಂದು ಹಸಿರಿನ ಬಣ್ಣವಾಗಿ ಬದಲಾಗಿದೆ. ಬೀದಿ ಬೀದಿಗಳಲ್ಲಿ ಹಸಿರು ಬಣ್ಣದ ಭಾವುಟಗಳು ರಾರಾಜಿಸುತ್ತಿವೆ, ಬಂಗಾಳದಲ್ಲಿ ಹಸಿರು ಬಣ್ಣಕ್ಕೆ ಸಿಕ್ಕಿರುವ ಪ್ರಾಶಸ್ತ್ಯ ಸಂತರ ವಸಗಳಿಗೆ ಸಿಗುವುದಿಲ್ಲ. ಮೂರು ದಶಕಗಳ ಆಡಳಿತ ನಡೆಸಿದ ಕಮ್ಯುನಿಸ್ಟ್ ನಾಯಕರು ಬಂಗಾಳದಲ್ಲಿ ಹಲವೆಡೆ ಹಿಂದೂ ಧರ್ಮದ ಕುರುಹುಗಳೇ ನಾಶವಾಗುವಂಥ ಕೆಲಸ ಮಾಡಿದ್ದಾರೆ.
ಜಗತ್ತಿಗೆ ಹಿಂದೂ ಧರ್ಮವನ್ನು ಸಾರಿದ ಸಂತನ ನಾಡಿನಲ್ಲಿ, ಚೀನಾ ಹಾಗೂ ರಷ್ಯಾ ದೇಶಗಳಿಂದ ಆಮದು ಮಾಡಿಕೊಂಡಂಥ
ಸತ್ತು ಹೋಗಿರುವ ಕಮ್ಯುನಿಸ್ಟ್ ಸಿದ್ಧಾಂತವನ್ನು ಮೂರು ದಶಕಗಳ ಕಾಲ ಬಂಗಾಳದಲ್ಲಿ ಪ್ರತಿಪಾದಿಸಿ, ಹಿಂದೂ ಧರ್ಮದ ಆಚರಣೆಗಳಿಗೆ ಧಕ್ಕೆಯನ್ನು ತಂದಿಟ್ಟಿದ್ದರು. ಚೀನಾ ದೇಶದ ‘ಮಾವೋ’ನ ಸಿದ್ಧಾಂತಗಳನ್ನು ಬೆಂಬಲಿಸಿ ಈಶಾನ್ಯ ರಾಜ್ಯಗಳಲ್ಲಿ ದೇಶದ್ರೋಹಿ ಕೃತ್ಯಗಳನ್ನು ನಡೆಸಲು ಬೆಂಬಲಿಸಿದ ಕಮ್ಯುನಿಸ್ಟರಿಗೆ, ಬಂಗಾಳದ ಸಂತ ‘ಸ್ವಾಮಿ ವಿವೇಕಾನಂದರ’ ಸಿದ್ಧಾಂತಗಳು ಕಾಣಿಸಲೇ ಇಲ್ಲ.
1893ರ ಭಾಷಣದಲ್ಲಿ ಇಡೀ ಜಗತ್ತೇ ಸ್ವಾಮಿಗಳ ಹಿಂದೂ ಧರ್ಮದ ಸಹಿಷ್ಣುತೆಯ ವಿಚಾರಧಾರೆಯ ಆಳವನ್ನು ಮೆಚ್ಚಿ ಎದ್ದು
ನಿಂತು ಎರಡು ನಿಮಿಷಗಳ ಕಾಲ ಕರತಾಡನ ಮಾಡಿದ್ದನ್ನು ಮರೆತ ಕಮ್ಯುನಿಸ್ಟರು, ಬಂಗಾಳದಲ್ಲಿ ಧರ್ಮವನ್ನೇ ಬೆಂಬಲಿಸದ ಟೊಳ್ಳು ಸಿದ್ಧಾಂತವನ್ನು ಮೂರು ದಶಕಗಳ ಕಾಲ ಪ್ರಸರಿಸಿದರು. ಕಮ್ಯುನಿಸ್ಟರ ಚಾಳಿಯನ್ನು ಮುಂದುವರಿಸಿದ ‘ಮಮತಾ ಬ್ಯಾನರ್ಜಿ’ ಸಹಿಷ್ಣುತೆಯ ಹೆಸರಿನಲ್ಲಿ ದಶಕಗಳಿಂದ ಮುಸಲ್ಮಾನಾರ ಓಲೈಕೆಯಲ್ಲಿ ತೊಡಗಿದ್ದಾರೆ.
‘ಜೈ ಶ್ರೀರಾಮ’ ಘೋಷಣೆಯು ಮಮತಾ ಬಾನರ್ಜಿಗೆ’ ಅಸಹಿಷ್ಣುತೆಯಾಗಿ ಕಾಣುತ್ತದೆ. ಬಿರುಗಾಳಿಯ ಸಂತ ವಿವೇಕಾನಂದರು ಹಿಂದೂ ಧರ್ಮವನ್ನು ಜಗತ್ತಿನ ಅತ್ಯಂತ ‘ಸಹಿಷ್ಣುತೆ’ಯ ಧರ್ಮವೆಂದು ಹೇಳಿದ್ದನ್ನು ದುರುಪಯೋಗ ಪಡಿಸಿಕೊಂಡಂಥ ಮಮತಾ ಬ್ಯಾನರ್ಜಿ ಹಿಂದೂಗಳಿಗೆ ಏನು ಮಾಡಿದರೂ ಸಹಿಸಿಕೊಳ್ಳುತ್ತಾರೆಂಬ ಭ್ರಮೆಯಲ್ಲಿ ನೂರಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಿಗೆ ಪರೋಕ್ಷವಾಗಿ ಪ್ರಚೋದಿಸಿದರು.
ಕೋಲ್ಕತಾದಲ್ಲಿ ಪ್ರತಿ ವರ್ಷವೂ ಉಚ್ಚ ನ್ಯಾಯಾಲಯದ ಆದೇಶದಡಿಯಲ್ಲಿಯೇ ದುರ್ಗಾ ಪೂಜೆಯ ಮೆರವಣಿಗೆಯನ್ನು ನಡೆಸ ಬೇಕಾದಂಥ ಪರಿಸ್ಥಿತಿ ಎದುರಾಗಿದೆ. ಮೊಹರಂ ಮೆರವಣಿಗೆಯ ವಿಚಾರದಲ್ಲಿ ತುಟಿ ಬಿಚ್ಚದ ಮಮತಾ ಬ್ಯಾನರ್ಜಿ ದುರ್ಗಾ ಪೂಜೆಯ ಮೆರವಣಿಗೆಯ ವಿಚಾರದಲ್ಲಿ ಮಾತ್ರ ಇಲ್ಲಸಲ್ಲದ ರಾಜಕೀಯ ಮಾಡುತ್ತಾರೆ. ಹಿಂದೂ ಧರ್ಮದ ಬಗ್ಗೆ ಪಾಶ್ಚಿಮಾತ್ಯ ರೆದುರು ಭಾಷಣ ಮಾಡಿದ ಬಿರುಗಾಳಿಯ ಸಂತನ ರಾಜ್ಯದಲ್ಲಿ ಅದೆಂಥ ಅನ್ಯಾಯ ನೋಡಿ, ಶ್ರೀರಾಮನ ಘೋಷಣೆ ಕೂಗುವ ಯುವಕರನ್ನು ಕೊಲೆ ಮಾಡಿಸುವ ಹಂತಕ್ಕೆ ‘ಟಿ.ಎಂ.ಸಿ’ ಪಕ್ಷದ ಕಾರ್ಯಕರ್ತರು ನಿಂತಿರುತ್ತಾರೆಂದರೆ ಅಲ್ಲಿನ ಅಟ್ಟಹಾಸದ ಪ್ರಭಾವವನ್ನು ಊಹಿಸಿಕೊಳ್ಳಿ. ಮಮತಾ ಬ್ಯಾನರ್ಜಿಯ ಆಪ್ತನನ್ನು ‘ಸಿ.ಬಿ.ಐ’ ಬಂಧಿಸಿ ವಿಚಾರಣೆಗೆಂದು ಕರೆದೊಯ್ದರೆ, ಪಕ್ಷದ ಕಾರ್ಯಕರ್ತರು ಕಚೇರಿಯ ಮೇಲೆ ದಾಳಿ ನಡೆಸುತ್ತಾರೆ, ಪ್ರಧಾನಮಂತ್ರಿಗಳು ಚಂಡಮಾರುತದ ವಿವರ ಪಡೆಯಲು ಬಂಗಾಳಕ್ಕೆ ಭೇಟಿ ನೀಡಿದರೆ, ರಾಜಕೀಯವನ್ನು ಪಕ್ಕಕ್ಕಿಟ್ಟು ಚಂಡಮಾರುತದ ವಿವರಣೆ ನೀಡದೆ ಮುಖ ತಿರುಗಿಸಿಕೊಂಡು ಸಭೆಯಿಂದ
ಹೊರನಡೆಯುವ ಅಹಂಕಾರವನ್ನು ಮಮತಾ ಬ್ಯಾನರ್ಜಿ ಪ್ರದರ್ಶಿಸಿದ್ದರು.
‘ಭೂಮಿಯ ಮೇಲಿನ ಎಲ್ಲಾ ಧರ್ಮಗಳ, ಎಲ್ಲಾ ದೇಶಗಳ ಪೀಡಿತರು ಹಾಗೆ ಅನಾಥರಿಗೆ ಆಶ್ರಯ ನೀಡಿದ ಧರ್ಮ ನನ್ನದೆಂದು, ಸ್ವಾಮಿ ವಿವೇಕಾನಂದರು ಚಿಕಾಗೊ ಭಾಷಣದಲ್ಲಿ ಹೇಳಿದ್ದರು, ಸಹಾಯಹಸ್ತಕ್ಕಾಗಿ ಕೈಚಾಚಿ ಬಂದಂಥ ಹಲವು ಧರ್ಮಗಳಿಗೆ ಆಶ್ರಯ ನೀಡಿದ ದೇಶ ನಮ್ಮದು, ರೋಮನ್ನರ ಆಕ್ರಮಣಕ್ಕೆ ತುತ್ತಾಗಿ ತಮ್ಮ ನೆಲೆಯಿಂದ ಓಡಿ ಹೋದಂಥ ಯಹೂದಿಗಳಿಗೆ ಆಶ್ರಯ ನೀಡಿದ್ದು ದಕ್ಷಿಣದ ಭಾರತದವರೆಂದು ಸ್ವಾಮಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು’.
1950ರ ದಶಕದಲ್ಲಿ ಟಿಬೆಟಿಯನ್ನರ ಮೇಲೆ ಚೀನಾ ದೇಶವು ದಾಳಿ ಮಾಡಿದಾಗ ತಪ್ಪಿಸಿಕೊಂಡು ಬಂದಂಥ ಬೌದ್ಧರಿಗೆ ಆಶ್ರಯ ನೀಡಿದ ದೇಶ ನಮ್ಮದು, ಟಿಬೆಟಿಯನ್ನರ ಪರಮೋಚ್ಛ ನಾಯಕ ‘ದಲೈಲಾಮ’ರಿಗೆ ಆಶ್ರಯ ನೀಡಿದ ದೇಶ ನಮ್ಮ ಭಾರತ. ಆದರೆ ವಿಪರ್ಯಾಸ ನೋಡಿ ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋದ ಹಿಂದೂಗಳು, ಇಂದು ಅಲ್ಪಸಂಖ್ಯಾತರಾಗಿ ಪ್ರತಿನಿತ್ಯ ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇಂಥ ನೊಂದ ಹಿಂದುಗಳನ್ನು ಭಾರತಕ್ಕೆ ವಾಪಾಸ್ ಕರೆಸಿಕೊಂಡು ಭಾರತೀಯ ಪೌರತ್ವ ನೀಡುವ ಕಾನೂನನ್ನು ಜಾರಿಗೆ ತಂದಾಗ ವಿರೋಧಿಸಿದ ಮೊಟ್ಟಮೊದಲ ಮಹಿಳೆ ‘ಮಮತಾ ಬ್ಯಾನರ್ಜಿ’. ಪ್ರಪಂಚದ ಅಸಂಖ್ಯಾತ ಅನಾಥರಿಗೆ ಆಶ್ರಯ ನೀಡಿದ ಭಾರತದಲ್ಲಿ, ಇತರ ದೇಶಗಳಲ್ಲಿ ನೊಂದ ಹಿಂದೂಗಳಿಗೆ ಆಶ್ರಯ ನೀಡಲು ಮಮತಾ ಬ್ಯಾನರ್ಜಿ ಒಪ್ಪುವುದಿಲ್ಲ. ಸ್ವಾಮಿ ವಿವೇಕಾನಂದರ ನಾಡಿನಲ್ಲಿಯೇ ಜನ್ಮ ತಾಳಿ, ಆಡಳಿತ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಸ್ವಾಮೀಜಿಯ ಆದರ್ಶಗಳಿಗೆ
ಬೆಲೆಯೇ ಇಲ್ಲದಂತೆ ಮಾಡಿದ್ದಾರೆ.
ಪಕ್ಕದ ಬಾಂಗ್ಲಾದೇಶಿ ವಲಸಿಗರಿಗೆ ಅಕ್ರಮವಾಗಿ ಆಶ್ರಯ ನೀಡುವ ಮೂಲಕ ತನ್ನ ಮತಬ್ಯಾಂಕ್ ರಾಜಕೀಯ ಮಾಡುವುದರಲ್ಲಿ ನಿರತರಾಗಿರುವ ಮಮತಾ ಬ್ಯಾನರ್ಜಿಗೆ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ನೀಡಿದ ಹಿಂದೂಗಳು ಕಾಣಿಸುವುದಿಲ್ಲ. ತಾನು ವಿರೋಧ ಪಕ್ಷದಲ್ಲಿದಂಥ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಕೂಗಾಡಿ, ಕಡತಗಳನ್ನು ಎಸೆದಾಡಿದಂಥ ಮಮತಾ ಬ್ಯಾನರ್ಜಿ ಇಂದು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಅದೇ ಅಕ್ರಮ ವಲಸಿಗರನ್ನು ಪೋಷಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಅಕ್ರಮ ವಲಸಿಗರನ್ನು ಪೋಷಿಸುವ ಮೂಲಕ ಬಂಗಾಳದ ಭೌಗೋಳಿಕ ಚಿತ್ರಣವನ್ನೇ ಬದಲಿಸಿರುವ ಕಮ್ಯುನಿಸ್ಟ್ ಹಾಗೂ ಮಮತಾ ಬ್ಯಾನರ್ಜಿ, ಬಂಗಾಳದ ಹಿಂದೂಗಳ ಪಾಲಿಗೆ ಮರಣ ಶಾಸನ ಬರೆಯಲು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. 1893ರ ಚಿಕಾಗೊ ಭಾಷಣದಲ್ಲಿ ಸ್ವಾಮೀಜಿ ತಮ್ಮ ಭಾಷಣದಲ್ಲಿ ಯಹೂದಿಗಳಿಗೆ ಭಾರತವು ಆಶ್ರಯ ನೀಡಿದ ವಿಚಾರವನ್ನು ಇಂದಿಗೆ ತಾಳೆ ಮಾಡಿ ನೋಡಿದರೆ, ಕರೋನಾ ಎರಡನೇ ಅಲೆಯ ಸಂಕಷ್ಟದಲ್ಲಿ ಇಸ್ರೇಲಿನ ಯಹೂದಿಗಳು ಭಾರತಕ್ಕೆ ಮಾಡಿದ ಸಹಾಯಹಸ್ತದ ನೆನಪಾಗುತ್ತದೆ.
ಇದಲ್ಲವೇ ಒಬ್ಬರನ್ನೊಬ್ಬರು ಅರಿತುಕೊಂಡು ಸಹಾಯಮಾಡುವ ಪರಿ, ಅದನ್ನು ಬಿಟ್ಟು ಸಹಾಯ ಮಾಡುವ ನೆಪದಲ್ಲಿ ಅಕ್ರಮ ವಾಗಿ ಶತ್ರುಗಳನ್ನು ಒಳಬಿಟ್ಟುಕೊಂಡು ಬಂಗಾಳದ ಹಿಂದುಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುದು ಸರಿಯಲ್ಲ. ‘ಮತ ಬೇಧಗಳು, ಅಂಧಶ್ರದ್ಧೆ ಹಾಗೂ ಅದರ ಭಯಾನಕ ಮೂಲಭೂತವಾದಗಳು, ಈ ಸುಂದರ ಪೃಥ್ವಿಯನ್ನು ತುಂಬಾ ಹಿಂದಿ ನಿಂದಲೇ ಆಕ್ರಮಿಸಿಕೊಂಡಿವೆ. ಅವು ಧಾರೆಯನ್ನು ಹಿಂಸಾಚಾರದ ವಿಷದಿಂದ ತುಂಬಿಸಿವೆ,
ಮಾನವ ರಕ್ತದಿಂದ ಪದೇ ಪದೆ ತೋಯಿಸಿ ನಾಗರಿಕತೆಯನ್ನು ನಾಶಗೊಳಿಸಿವೆ, ದೇಶಗಳನ್ನೇ ಸರ್ವನಾಶಕ್ಕೆ ದೂಡಿವೆ’ ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೊ ಭಾಷಣದ ಮುಂದುವರಿದ ಭಾಗವಾಗಿ ಹೇಳಿದ ಮಾತುಗಳಿವು. ಅಂದು ಸ್ವಾಮೀಜಿ ಹೇಳಿದ ಮಾತುಗಳು ಇಂದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ನೇತೃತ್ವದಲ್ಲಿ ನಡೆಯುತ್ತಿರುವ ಘಟನೆಗಳಿಗೂ ಎಷ್ಟು
ಸಾಮ್ಯತೆಯಿದೆಯೆಂದು ನೀವೇ ಗಮನಿಸಿ. ಮುಸಲ್ಮಾನರ ಮೇಲಿನ ಅಂಧಶ್ರದ್ಧೆಯಿಂದ ಕುರುಡಾಗಿರುವ ಮಮತಾ ಬ್ಯಾನರ್ಜಿಗೆ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಅನಾಹುತಗಳ ಅರಿವಿಲ್ಲ, ಅಕ್ರಮ ವಲಸಿಗರ ಮೇಲಿನ ಅಂಧಶ್ರದ್ಧೆಯ ಪರಿಣಾಮವಾಗಿ ಬಂಗಾಳ ಮತ್ತೊಂದು ಕಾಶ್ಮೀರವಾದರೂ ಅಚ್ಚರಿಪಡಬೇಕಿಲ್ಲ.
ಬಾಂಗ್ಲಾದೇಶದ ಅಕ್ರಮ ಮುಸಲ್ಮಾನರು ಕಟ್ಟರ್ ಮೂಲಭೂತವಾದಿಗಳು, ಇವರ ಜತೆಗೆ ಸೇರಿಕೊಂಡಿರುವ ರೋಹಿಂಗ್ಯಾ
ಮುಸಲ್ಮಾನರು ಮತ್ತೂ ಹೆಚ್ಚಿನ ಮೂಲಭೂತವಾದಿಗಳು. ಇಂಥ ಭಯಾನಕ ಮೂಲಭೂತವಾದಿಗಳು ಆಕ್ರಮಿಸಿಕೊಂಡ ಭೌಗೋಳಿಕ ಪ್ರದೇಶಗಳೆಲ್ಲವೂ ಹಿಂಸಾಚಾರದ ವಿಷದಿಂದ ತುಂಬಿವೆ. ಮೂಲಭೂತವಾದಿಗಳ ಹಿಂಸಾಚಾರದ ವಿಷಯವನ್ನು
ಬಿರುಗಾಳಿಯ ಸಂತನು 1893ರಲ್ಲಿಯೇ ಹೇಳಿದ್ದನು, ಅಂದು ಆತ ಹೇಳಿದ ಮಾತು ಇಂದು ಬಂಗಾಳದಲ್ಲಿ ಮತ್ತಷ್ಟು ಜೀವಂತವಾಗುವತ್ತ ಸಾಗಿದೆ. ಅಂದು ಸ್ವಾಮೀಜಿಯು ಹೇಳಿದ ಹಾಗೆ ಅಂಧಶ್ರದ್ಧೆ ಹಾಗೂ ಮೂಲಭೂತವಾದಿಗಳ ಹಿಂಸಾಚಾರದ ವಿಷದ ಪರಿಣಾಮದ ಜತೆಗೆ ಮಾನವನ ರಕ್ತವೂ ಸೇರಿ ನಾಗರಿಕತೆಯು ಪದೇ ಪದೆ ತೋಯುತ್ತಿದೆ.
ಬಂಗಾಳದಲ್ಲಿ ಕಳೆದ ದಶಕದಲ್ಲಿ ನಡೆದ ಹಿಂಸಾಚಾರಗಳೇ ಇಸ್ಲಾಂ ಮೂಲಭೂತವಾದದ ಭಯಾನಕತೆಗೆ ಸಾಕ್ಷಿ. ಮೂಲಭೂತ ವಾದ ಹೆಸರಿನಲ್ಲಿ ಹಲವಾರು ಹಿಂದೂ ಕಾರ್ಯಕರ್ತರ ಕಗ್ಗೊಲೆಗಳು ನಡೆದುಹೋಗಿವೆ. ‘ಲ್ಯಾಂಡ್ ಜಿಹಾದ್’ನ ಮೂಲಕ
ಹಿಂದೂ ಪ್ರಾಬಲ್ಯದ ಜಿಗಳೆಲ್ಲವೂ ಅಕ್ರಮ ಬಾಂಗ್ಲಾ ಮುಸಲ್ಮಾನರ ಅಡಗುತಾಣವಾಗಿವೆ. ಆಶ್ರಯ ನೀಡಿದ ದೇಶಕ್ಕೆ (ಅಕ್ರಮವಾಗಿ ) ಆಭಾರಿಯಾಗಿ ದೇಶ ಸೇವೆ ಮಾಡಬೇಕಿರುವಂಥ ಬಾಂಗ್ಲಾ ವಲಸಿಗರು ಹೆಚ್ಚಾಗಿ ಕಾನೂನುಬಾಹಿರ ಕೆಲಸಗಳಲ್ಲಿ ತೊಡಗಿದ್ದಾರೆ.
ಇಸ್ಲಾಂ ಮೂಲಭೂತವಾದಿಗಳ ಉಪಟಳದಿಂದ ಬಂಗಾಳದ ಮೂಲ ನಿವಾಸಿಗಳು ತಮ್ಮ ಹಕ್ಕುಗಳ ವಿರುದ್ಧ ಹೋರಾಡ ಬೇಕಾದಂಥ ಪರಿಸ್ಥಿತಿ ಎದುರಾಗಿದೆ. ಯೂರೋಪಿನ ಫ್ರಾನ್ಸ್, ಸ್ಪೇನ್, ಇಟಲಿ ದೇಶಗಳು ಈಗಾಗಲೇ ಮೂಲಭೂತವಾದಿಗಳ
ಉಪಟಳದಿಂದ ನಲುಗಿಹೋಗಿವೆ, ಈ ದೇಶಗಳ ಉದಾಹರಣೆಗಳು ಕಣ್ಣ ಮುಂದಿರುವಾಗಲೇ ಮಮತಾ ಬ್ಯಾನರ್ಜಿ ಬಂಗಾಳ ವನ್ನು ಮತ್ತೊಂದು ಇಸ್ಲಾಂ ಮೂಲಭೂತವಾದಿಗಳ ಸ್ವರ್ಗ ಮಾಡಲು ಹೊರಟಿದ್ದಾರೆ.
ಕಾಶ್ಮೀರ ಕಣಿವೆಯ ಸಮಸ್ಯೆಯನ್ನು ಸರಿಪಡಿಸಲು ಏಳು ದಶಕಗಳು ಬೇಕಾಯಿತು, ಈಗ ಮತ್ತೊಂದು ಕಾಶ್ಮೀರವಾಗುವತ್ತ ಬಂಗಾಳ ದಾಪುಗಾಲಿಟ್ಟಿದೆ. ‘ಒಂದು ಧರ್ಮದ ದಿಗ್ವಿಜಯ ಉಳಿದ ಧರ್ಮದ ಸರ್ವನಾಶವಾಗುತ್ತದೆಯೆಂದು ಭಾವಿಸುವವರು ಇಲ್ಲಿದ್ದಾರೆ, ಅವರಿಗೆ ನನ್ನದೊಂದು ಕಿವಿಮಾತು. ಸೋದರರೇ ನಿಮ್ಮದು ಅಸಂಭವನೀಯ ನಂಬಿಕೆ ಕ್ರೈಸ್ತನೊಬ್ಬ ಹಿಂದೂ ಆಗಬೇಕೆಂದು ನಾನು ಬಯಸಲೇ ? ಹಿಂದೂ ಅಥವಾ ಭೌದ್ಧನೊಬ್ಬ ಕ್ರೈಸ್ತನಾಗಬೇಕೆಂದು ನಾನು ಬಯಸಲೇ? ಹಾಗೆ ಮಾಡಿದರೆ ದೇವರು ನನ್ನನ್ನು ತಡೆಯಲಿ, ಬೀಜವೊಂದು ಗಾಳಿ, ಬೆಳಕು, ಸಿಲುಕಿ ಬದಲಾಗದೆ ತನ್ನ ಸ್ವಂತ ಬೆಳವಣಿಗೆಯ ನಿಯಮದಂತೆಯೇ ಸಸ್ಯವಾಗಿ ಬೆಳೆಯುತ್ತದೆ.
ಕ್ರೈಸ್ತನು ಹಿಂದುವಾಗಿ ಬದಲಾಗಬೇಕಿಲ್ಲ, ಹಿಂದೂ ವ್ಯಕ್ತಿಯು ಕ್ರೈಸ್ತನಾಗಿ ಬದಲಾಗಬೇಕಿಲ್ಲ. ಪ್ರತಿಯೊಬ್ಬರೂ ಇತರರ ಶಕ್ತಿ ಯನ್ನು ಗೌರವಿಸಿ ಸ್ವಂತಿಕೆಯನ್ನು ಉಳಿಸಿಕೊಂಡು ತನ್ನದೇ ಬೆಳವಣಿಗೆಯ ನಿಯಮದಂತೆ ವೃದ್ಧಿಸಬೇಕು’ ಸ್ವಾಮಿ ವಿವೇಕಾ ನಂದರು ತಮ್ಮ ಭಾಷಣದಲ್ಲಿ ಮತಾಂತರದ ಬಗ್ಗೆ ಹೇಳಿದ ಹೇಳಿದ ಮಾತುಗಳಿವು. ಯೂರೋಪಿನಲ್ಲಿ ಹುಟ್ಟಿ ಕೋಲ್ಕತಾದಲ್ಲಿ ನೆಲೆಸಿ ಯೇಸು ಕ್ರಿಸ್ತನ ಸೇವೆಯ ಹೆಸರಿನಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಹಿಂದುಗಳ ಮತಾಂತರವನ್ನು ಮಾಡಿದ ‘ಮದರ್ ತೆರೇಸಾ’ ರನ್ನು ಹೇಗೆ ತಾನೇ ಮರೆಯಲಾದೀತು? ಸ್ವಾಮೀಜಿಯ ಹುಟ್ಟೂರಿನಲ್ಲಿ ‘ಮದರ್ ತೆರೇಸಾ’ ಮಾಡಿದ ಮತಾಂತರದ ಅವಧಿ ಯಲ್ಲಿದ್ದ ಸರಕಾರಗಳು ಮತ್ತದೇ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಟಿಎಂಸಿ ಹಿಂದೂ ಧರ್ಮದ ಸಂತನೊಬ್ಬ ಚಿಕಾಗೊ ಭಾಷಣ ದಲ್ಲಿ ಮತಾಂತರದ ಬಗ್ಗೆ ಅಷ್ಟು ಸ್ಪಷ್ಟವಾಗಿ ವಿವರಣೆಯನ್ನು ನೀಡಿರಬೇಕಾದರೆ, ಆತನದ್ದೇ ನಾಡಿನಲ್ಲಿ ರಾಜಕೀಯ ಪ್ರೇರಿತ ವಾಗಿ ಲಕ್ಷಾಂತರ ಹಿಂದೂಗಳ ಮತಾಂತರ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಮಾತ್ರ ವಿಪರ್ಯಾಸದ ಪರಮಾವಧಿ.
ಅತ್ತ ಬಾಂಗ್ಲಾದೇಶಿ ಮುಸಲ್ಮಾನರು ಲವ್ ಜಿಹಾದಿನ ಮೂಲಕ ಬಂಗಾಳದಲ್ಲಿ ಮತಾಂತರಕ್ಕೆ ಚಾಲನೆಯನ್ನು ನೀಡಿಯಾಗಿದೆ. ಇವರ ಕಪಿಮುಷ್ಠಿಯಲ್ಲಿ ಸಿಕ್ಕಂಥ ಹೆಣ್ಣುಮಕ್ಕಳು ತಾವು ಅನುಭವಿಸುತ್ತಿರುವ ನೋವನ್ನು ಸಮಾಜದಲ್ಲಿ ಹೇಳಲಾಗದೇ ಪ್ರತಿನಿತ್ಯ ಕಣ್ಣೀರಿಡುತ್ತಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಚುನಾವಣೆಯ ಫಲಿತಾಂಶದ ನಂತರ ಹಾದಿ ಬೀದಿಯಲ್ಲಿ ಸಿಕ್ಕ ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರಗಳನ್ನು ನಡೆಸಲಾಗುತ್ತಿದೆ.
ಹಿಂದೂಗಳ ಪರವಾಗಿ ನಿಂತಂಥ ಯುವಕ, ಯುವತಿಯರ ಮನೆಗಳಿಗೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಬಂಗಾಳದಲ್ಲಿ ಅನ್ಯ ಧರ್ಮವನ್ನು ಓಲೈಸುವ ಸಲುವಾಗಿ ನಮ್ಮೊಳಗಿನವರೇ ಹಿಂದೂ ಧರ್ಮವನ್ನು ವಿನಾಶದೆಡೆಗೆ ಕೊಂಡೊಯ್ಯುವಲ್ಲಿ
ಮುನ್ನಡೆಯುತ್ತಿದ್ದಾರೆ. ಬಿರುಗಾಳಿಯ ಸಂತನಾಗಿ, 128 ವರ್ಷಗಳ ಹಿಂದೆಯೇ ಪಾಶ್ಚಿಮಾತ್ಯರ ಮುಂದೆ ಹಿಂದೂ ಧರ್ಮದ ಬಗ್ಗೆ ಇಡೀ ಸಭಾಂಗಣವೇ ಎದ್ದು ನಿಂತು ಕರತಾಡನ ಮಾಡುವಂತೆ ಮಾತನಾಡಿದ ಸ್ವಾಮಿ ವಿವೇಕಾನಂದರ ಬಂಗಾಳದಲ್ಲಿ
ಸ್ವಾರ್ಥ ರಾಜಕೀಯದ ಉದ್ದೇಶದಿಂದ ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು ಹಾಗೂ ಮಮತಾ ಬಾನರ್ಜಿ, ಮತಾಂಧರು,
ಮೂಲಭೂತವಾದಿಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳನ್ನು ಪೋಷಿಸುತ್ತಾ ಬಂದಿರುವುದು ಭಾರತೀಯರ ವಿಪರ್ಯಾಸ.