ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
ಈ ಕೋವಿಡ್ ಮಹಾಮಾರಿ ಇನ್ನೂ ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿಕ್ಕಿದೆಯೋ ಏನೋ? ಈ ಚೀನಾ ವೈರಸ್ಸಿನ ಕರಾಳ ಮುಷ್ಟಿಯಲ್ಲಿ ಇನ್ನೂ ಅದೆಷ್ಟು ಜೀವ ನಲುಗಿ ಹೋಗಬೇಕೋ ಗೊತ್ತಿಲ್ಲ. ಇದರ ರೌದ್ರಾವತಾರಕ್ಕೆ ಹೊಸತಾಗಿ ಬಲಿಯಾದವರು ಯಕ್ಷಗಾನ ಮತ್ತು ತಾಳಮದ್ದಲೆಯ ಕ್ಷೇತ್ರದಲ್ಲಿ ಮಾತಿನ ಮಲ್ಲ ಎಂದೇ ಖ್ಯಾತರಾದ ಮಲ್ಪೆ ರಾಮದಾಸ ಸಾಮಗರ ಮಗ
ವಾಸುದೇವ ಸಾಮಗರು.
ಬೆಳಗ್ಗೆ ಏಳುವಾಗಲೇ ಮಗ ಪ್ರದೀಪ ಸಾಮಗರ ಫೇಸ್‌ಬುಕ್‌ನಲ್ಲಿ ‘ಉಳಿಸಿಕೊಳ್ಳುವ ಸತತ ಪ್ರಯತ್ನಗಳ ತರುವಾಯವೂ ಅಪ್ಪಯ್ಯನನ್ನು ಕೋವಿಡ್ ಬಲಿ ಪಡೆದಿದೆ’ ಎಂಬ ಸಂದೇಶ ಕಾಣುತ್ತಲೇ ಹೃದಯ ಭಾರವಾಯಿತು, ಕಣ್ಣುಗಳು ಮಂಜಾದವು. ನಾನು ಇಷ್ಟಪಟ್ಟ ಒಬ್ಬ ಯಕ್ಷಗಾನ ದಿಗ್ಗಜನ ಅಂತ್ಯ ಈ ರೀತಿಯಾಗಬಹುದು ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ.
ನಾನು ವಾಸುದೇವ ಸಾಮಗರನ್ನು ಮೊದಲು ಕಂಡದ್ದು ಸುಮಾರು ನಾಲ್ಕು ದಶಕಗಳ ಹಿಂದೆ ಸಾಲಿಗ್ರಾಮ ಮೇಳದ ಟೆಂಟಿನಲ್ಲಿ. ದಿವಂಗತ ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಶುಭ್ರಾಾಂಗನ ಪಾತ್ರದಲ್ಲಿದ್ದ ಸಾಮಗರು ಅಂದು ರಂಗಸ್ಥಳದಲ್ಲಿ
ನ್ಯಾಯಾಲಯವನ್ನೇ ಸೃಷ್ಟಿಸಿದ್ದರು. ಶಿಥಿಲನೆಂಬ ರಾಜನಿಂದ ವಂಚನೆಗೊಳಗಾದ ಅಂಬಿಗ ಜನಾಂಗದ ನಾಗಶ್ರೀಗೆ ನ್ಯಾಯ ಒದಗಿಸಿಕೊಡುವ ಪಾತ್ರವದು. ಆ ದಿನ ನ್ಯಾಯಾಲಯದ ಸನ್ನಿವೇಶ ಸುಮಾರು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯವರೆಗೆ
ನಡೆದ ನೆನಪು. ಸಾಮಗರು ತಮ್ಮ ವಾಗೆ ್ವ ಖರಿಯಿಂದ ಅಂದೇ ನನ್ನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದರು. ಆ ದಿನಗಳಲ್ಲಿ ಘಟ್ಟದ ಕೆಳಗೆ ನಡೆಯುವಷ್ಟು ಯಕ್ಷಗಾನ ಕಾರ್ಯಕ್ರಮಗಳು ಘಟ್ಟದ ಮೇಲೆ ನಡೆಯುತ್ತಿರಲಿಲ್ಲವಾದ್ದರಿಂದ (ಈ ಮಾತು ಇಂದಿಗೂ ಅನ್ವಯ) ವರ್ಷಕ್ಕೆ ಎರಡರಿಂದ ಮೂರು ಬಾರಿ ಮಾತ್ರ ಸಾಮಗರನ್ನು ನೋಡುವ ಭಾಗ್ಯ ಒದಗಿ ಬರುತ್ತಿತ್ತು.
ಅದಾಗಿ ಏಳೆಂಟು ವರ್ಷವಾಗಿರಬಹುದು, ಶಿರಸಿಯ ಸಮೀಪದ ಭೈರುಂಬೆಯಲ್ಲಿ ಶ್ವೇತಕುಮಾರ ಚರಿತ್ರೆ ಯಕ್ಷಗಾನವಿತ್ತು. ಶ್ವೇತ ಕುಮಾರನ ಪಾತ್ರವನ್ನು ಸಾಮಗರು ಅದ್ಭುತವಾಗಿ ಕಟ್ಟಿಕೊಟ್ಟಿದ್ದರೂ ಡೇರೆಯ ಒಳಗೆ ನಡೆಯುತ್ತಿದ್ದ ಯಕ್ಷಗಾನ ಆಟಕ್ಕಿಿಂತಲೂ ಹೊರಗೆ ನಡೆಯುತ್ತಿದ್ದ ಕುಟಿ ಕುಟಿ ಮಂಡಲ, ಇಸ್ಪೀಟಿನಂಥ ಜೂಜಿನ ಆಟಕ್ಕೆ ಹೆಚ್ಚಿನ ಜನ ಸೇರಿದ್ದರು.
‘ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಘಟ್ಟದ ಮೇಲಿನ ನಿಜವಾದ ಯಕ್ಷಗಾನ ಪ್ರೇಮಿಗಳು ಆಟ ನೋಡಲು ಘಟ್ಟದ ಕೆಳಗೆ ಬರಬೇಕಾದೀತು’ ಎಂದು ಯಕ್ಷಗಾನದ ನಡುವೆ ಪ್ರೇಕ್ಷಕರನ್ನುದ್ದೇಶಿಸಿ ಆಡಿದ್ದ ಸಾಮಗರ ನುಡಿ ಇಂದಿಗೂ ನೆನಪಿದೆ.
ಸಾಮಗರ ಮಾತೇ ಹಾಗೆ, ಹೃದಯಕ್ಕೂ, ನಾಲಿಗೆಗೂ ನಡುವೆ ಯಾವುದೇ ತಡೆಯಿಲ್ಲದೆ, ಕಂಡದ್ದನ್ನು ಕಂಡಂತೆ, ಇದ್ದದ್ದನ್ನು ಇದ್ದಂತೆ ನೇರವಾಗಿ ನುಡಿಯುವುದು. ಸಾಮಗರು ‘ಸಂಯಮಂ’ ಹೆಸರಿನಲ್ಲಿ ಸಮಯ ಮಿತಿಯ ತಾಳಮದ್ದಲೆ ಕೂಟವನ್ನು ಕಟ್ಟಿಕೊಂಡು ತಿರುಗಾಟ ಆರಂಭಿಸಿದ್ದರು. ಅವರ ಇಡೀ ಕೂಟದ ತಿರುಗಾಟ ಟೆಂಪೋ ಟ್ರ್ಯಾಕ್‌ಸ್‌ನಲ್ಲಿ ಸದಸ್ಯರೊಂದಿಗೆ
ಚೆಂಡೆ ಮದ್ದಲೆ, ಧ್ವನಿವರ್ಧಕ ಎಲ್ಲವೂ ಇದರಲ್ಲೇ ಸಾಗುತ್ತಿದ್ದವು. ಕೆಲವು ಸಮಯ ಅದಕ್ಕೆ ಸಾರಥಿಯೂ ಸಾಮಗರೇ ಆಗಿದ್ದರು. ಅದು ಎಲ್ಲಿಯಾದರೂ ಕೆಟ್ಟು ನಿಂತರೆ ಸಣ್ಣ ಪುಟ್ಟ ರಿಪೇರಿಯೂ ಸಾಮಗರದ್ದೇ.
ಕಾರ್ಯಕ್ರಮದ ಆರಂಭದಲ್ಲಿ ಧ್ವನಿವರ್ಧಕ ಜೋಡಿಸುವುದರಿಂದ ಹಿಡಿದು ಕಾರ್ಯಕ್ರಮದ ನಂತರ ಅದನ್ನು ಪುನಃ ಪೆಟ್ಟಿಗೆಗೆ ಸೇರಿಸುವವರೆಗೆ ಎಲ್ಲವನ್ನೂ ಸಾಮಗರೇ ಮಾಡುತ್ತಿದ್ದರು. ಇದಕ್ಕೆಲ್ಲ ಬೇರೆ ಜನರನ್ನು ಇಡಬಾರದೇ ಎಂದು ಒಮ್ಮೆ ಕೇಳಿದ್ದಕ್ಕೆ, ‘ಅದಕ್ಕಂತಲೇ ಬೇರೆ ಜನರನ್ನಿಟ್ಟರೆ ಅವರಿಗೆ ಸಂಬಳ ಕೊಡಬೇಕು, ಅದರಿಂದ ನನಗೂ ಹೊರೆ, ಕಾರ್ಯಕ್ರಮವನ್ನು ಆಯೋಜಿಸು ವವರಿಗೂ ಹೊರೆಯಾಗುತ್ತದೆ. ನಮ್ಮದು ಸಮಯ ಮಿತಿ ಮಾತ್ರವಲ್ಲ, ಖರ್ಚಿನಲ್ಲೂ ಮಿತಿ’ ಎಂದು ಹೇಳುತ್ತಿದ್ದರು. ಅವರು
ಯಕ್ಷಗಾನಕ್ಕಾಗಿ ಯಕ್ಷಗಾನ, ತಾಳಮದ್ದಲೆಗಾಗಿ ತಾಳಮದ್ದಲೆ ಎನ್ನುವ ಸಿದ್ಧಾಾಂತವನ್ನಿಟ್ಟುಕೊಂಡಿದ್ದರು.
ಮದುವೆ ಮನೆಯ ಚಪ್ಪರದಲ್ಲಿ, ಉಪನಯನದ ಸಂದರ್ಭದಲ್ಲಿ, ಗೃಹ ಪ್ರವೇಶ, ಸಭೆ ಸಮಾರಂಭಗಳ ನಡುವೆ ತಾಳಮದ್ದಲೆ ಕಾರ್ಯಕ್ರಮ ತೂರಿಸುವುದು ಅವರಿಗೆ ಇಷ್ಟವಿರಲಿಲ್ಲ. ಈ ಮಾತನ್ನು ಅವರು ತಮ್ಮ ಕಾರ್ಯಕ್ರಮದ ನಡುವೆ ಆಗಾಗ ಹೇಳುತ್ತಿದ್ದರು. ಸಾಮಗರ ಅರ್ಥ ಕೇಳಲು ಅದೆಷ್ಟೋ ಬಾರಿ ಅವರ ತಾಳಮದ್ದಲೆಯ ಬೆನ್ನು ಹತ್ತಿ ಹೋದದ್ದಿದೆ. ಪಾತ್ರಧಾರಿ ಯಾಗಿ ಅವರ ಮಾತಂತೂ ಇಷ್ಟವೇ, ಕಾರ್ಯಕ್ರಮದ ಕೊನೆಯ ಹಂತದಲ್ಲಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುವ ಅವರ ಮಾತುಗಳೂ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ.
ತಾಳಮದ್ದಳೆಯಲ್ಲಿ ಸಾಮಗರಷ್ಟು ಅಭಿನಯ ಮಾಡುವವರನ್ನು ನಾನು ಇದುವರೆಗೆ ಕಂಡಿಲ್ಲ. ಅವರಂತೆ ಪಾತ್ರದಲ್ಲಿ ಲೀನವಾಗುವವರನ್ನೂ ಕಂಡಿಲ್ಲ. ಹಾಸ್ಯವಾಗಲೀ, ವೀರ ರಸವಾಗಲೀ, ಕರುಣಾರಸವಾಗಲೀ, ಸಾಮಗರು ಅದರೊಳಗೆ ಇಳಿದು
ಬಿಡುತ್ತಿದ್ದರು. ವಿಡಂಬನೆ, ಹಾಸ್ಯದ ಕ್ಷಣಗಳಲ್ಲಿ ಹೊಟ್ಟೆ ಬಿರಿಯುವಂತೆ ನಕ್ಕಿದ್ದನ್ನೂ, ದುಃಖದ ಸನ್ನಿವೇಶದಲ್ಲಿ ನಿಮಿಷಾರ್ಧ ದಲ್ಲಿ ಅವರ ಕಣ್ಣುಗಳಲ್ಲಿ ನೀರಾಡಿದ್ದನ್ನೂ ಕಂಡಿದ್ದೇನೆ.
ಎಲ್ಲಕ್ಕಿಿಂತ ಮಿಗಿಲಾಗಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಮಾನ್ಯವಾಗಿ ಸಯಮಂ ಕಾರ್ಯಕ್ರಮ ಸಾಯಂಕಾಲ ಆರು ಗಂಟೆಗೆ ಆರಂಭವಾಗಿ ರಾತ್ರಿ ಒಂಬತ್ತು ಗಂಟೆಗೆ ಮುಗಿಯುತ್ತಿತ್ತು. ಕೆಲವೊಮ್ಮೆ ಒಂದರ್ಧ ಗಂಟೆ ಹೆಚ್ಚು. ಒಮ್ಮೆ ಶಿರಸಿಯ ಸಾಲ್ಕಣಿಯ ಬಳಿ ಓಣಿಕೆರೆಯಲ್ಲಿ ಸಾಮಗರ ಕೃಷ್ಣಾರ್ಜುನ
ತಾಳಮದ್ದಳೆಯಿತ್ತು. ಅಂದು ಸಭೆಯೂ ತುಂಬಿತ್ತು, ಸಾಮಗರೂ ಉಮೇದಿನಲ್ಲಿದ್ದರು. ಕಾರ್ಯಕ್ರಮ ಮುಗಿಯಲು ಇನ್ನು ಅರ್ಧ ಮುಕ್ಕಾಲು ಗಂಟೆ ಬಾಕಿ ಇರುವಾಗ ಮಧ್ಯದಲ್ಲಿ ನಿಲ್ಲಿಸಿ ಸಾಮಗರು ಸಭೆಯನ್ನುದ್ದೇಶಿಸಿ ‘ಇವತ್ತು ತಾಳಮದ್ದಲೆಯನ್ನು ಸ್ವಲ್ಪ
ತಡವಾಗಿ ಮುಗಿಸಿದರೆ ಆದೀತಾ?’ ಎಂದರು.
ಸಾಮಗರಿಂದ ಬೋನಸ್ ಸಿಗುತ್ತದೆ ಎಂದಾದರೆ ಪ್ರೇಕ್ಷಕ ಬೇಡ ಎನ್ನಲುಂಟೆ?’ ಆಯೋಜಕರು ಪ್ರೇಕ್ಷಕರಿಗೆ ಅವಲಕ್ಕಿ, ಚಹಾ ಒದಗಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿ ಮುಂದುವರಿಸಿದ್ದರು. ಅಂದು ಕೃಷ್ಣಾರ್ಜುನರ ಕಾಳಗ ಮುಗಿಯುವ
ಹೊತ್ತಿಗೆ ನಡುವಿರುಳ್ ಕಳೆದಿತ್ತು. ಸಾಮಗರು ವೇದಿಕೆಯಲ್ಲಿರುವಷ್ಟು ಹೊತ್ತು ಸಭೆಯಿಂದ ಒಬ್ಬರೂ ಎದ್ದು ಹೋಗುತ್ತಿರಲಿಲ್ಲ. ಅದಕ್ಕೆ ಕಾರಣ ಅವರ ಮಾತಿನ ಮೋಡಿಯ ಪ್ರಭಾವಲಯ.
ಅವರ ಅರ್ಥದಲ್ಲಿ ಇಂದಿನ ದಿನಮಾನಗಳಲ್ಲಿನ ಆಗುಹೋಗುಗಳು ಬರುತ್ತಿದ್ದವು. ಚಲನಚಿತ್ರದ ಹೆಸರುಗಳು, ಚಲನಚಿತ್ರದ ಹಾಡುಗಳು, ದಿನಪತ್ರಿಕೆ ಮತ್ತು ಅದರಲ್ಲಿ ಬರುವ ಸುದ್ದಿಗಳೆಲ್ಲ ಸಾಮಗರ ಪೌರಾಣಿಕ ಪಾತ್ರದಲ್ಲಿ ಬಂದು ಹೋಗುತ್ತಿದ್ದವು.
ಎಳೆಯ ಬೊಂಡದಿಂದ ಹಳೆಯ ಹೆಂಡದವರೆಗಿನ ವಿಷಯಗಳನ್ನು ಅವರು ಮಾತಾಡುತ್ತಿದ್ದರು. ಆದರೆ ಇದು ತೀರಾ ಅಭಾಸ ಎನಿಸದಂತೆ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳುತ್ತಿದ್ದರು. ಸಾಮಗರ ಕೆಲವು ಮಾತುಗಳು ಕಟ್ಟಾ ಸಂಪ್ರದಾಯಸ್ಥ ಯಕ್ಷಗಾನ ಪ್ರೇಕ್ಷಕರಿಗೆ ಅಷ್ಟು ಇಷ್ಟವಾಗುತ್ತಿರಲಿಲ್ಲವಾದರೂ ಉಳಿದವರಿಗೆ ಸಾಮಗರೆಂದರೆ ಭರಪೂರ ಮನರಂಜನೆ. ಹಾಗಂತ ಕಟ್ಟಾ ಸಂಪ್ರದಾಯಸ್ಥರಿಗೆ ಬೇಕಾಗುವ ಹಾಗೆ ಮಾತನಾಡುವ ವಿದ್ವತ್ತು ಅವರಲ್ಲಿತ್ತು ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ.
ಕೆಲವು ವರ್ಷಗಳ ಹಿಂದೆ ಅವರ ಕಾರ್ಯಕ್ರಮದ ನಂತರ ತಾಳಮದ್ದಲೆಗೆ ಅನುಕೂಲವಾಗಲು ಅವರೇ ಸಂಸ್ಕರಿಸಿ, ಜೋಡಿಸಿದ ‘ಎಪ್ಪತ್ತು ಪ್ರಸಂಗಗಳು’ ಪುಸ್ತಕವನ್ನು ಕೊಂಡುಕೊಳ್ಳಲು ಅವರ ಬಳಿ ಹೋಗಿದ್ದೆ. (ತಮ್ಮ ಕೊನೆಯ ಕಾಲದಲ್ಲೂ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಹಲವು ತಾಳಮದ್ದಲೆಗಳನ್ನು ಅರ್ಥ ಸಹಿತ ಬರೆದು ಮುದ್ರಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಕೇಳ್ಪಟ್ಟೆ.) ಪುಸ್ತಕದಲ್ಲಿ ಹಸ್ತಾಕ್ಷರ ಹಾಕಿಕೊಡಬೇಕೆಂದು ವಿನಂತಿಸಿಕೊಂಡಾಗ ನೀವು ಇರುವುದು ಎಲ್ಲಿ ಎಂದು ನನ್ನಲ್ಲಿ ಕೇಳಿದರು. ಸೌದಿ ಅರೇಬಿಯಾ ಎಂದೆ. ಅಲ್ಲೇ ಇದ್ದ ಧರ್ಮಶಾಲೆ ಗಜಾನನ ಭಾಗವತರು ‘ಅವರು
ಎಲ್ಲಿರುವುದಂತೆ?’ಎಂದು ಸಾಮಗರಲ್ಲಿ ಕೇಳಿದಾಗ, ‘ಅವರು ಸೌದಿ ಅರೇಬಿಯಾದಲ್ಲಿ ಇಪ್ಪುದಂತೆ, ಅಲ್ಲಿ ನಮ್ಮದೊಂದು ಕಾರ್ಯಕ್ರಮ ಕೊಡುಕ್ಕಾತ್ತಾ ಅಂತ ಕೇಳ್ತಾ ಇದ್ರು, ಹೋಪುದಾ?’ ಎಂದು ತಮಾಷೆಗೆ ನುಡಿದರು.
ಗಜಾನನ ಭಾಗವತರು ‘ಖಂಡಿತ ಹೋಪ’ ಎಂದಾಗ ‘ಆದರೆ ಅಲ್ಲಿ ಅರಬ್ಬೀ ಭಾಷೆಲಿ ತಾಳಮದ್ದಲೆ ಮಾಡಕ್ಕಂತೆ, ನಂಗೆ ಆ ಭಾಷೆ ಬತ್ತಿಲ್ಲೆ ಮಾರಾಯಾ, ನಿಂಗೆ ಅರಬ್ಬಿ ಬತ್ತಾ? ಅದೇ ಭಾಷೆಯಲ್ಲಿ ಪದ್ಯ ಹೇಳ್ತಿಯ ಎಂದು ಜೋರಾಗಿ ನಕ್ಕಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ತೆಂಕು ಮತ್ತು ಬಡಗು ಉಭಯ ತಿಟ್ಟಿನಲ್ಲೂ ಸೈ ಎನಿಸಿಕೊಂಡ ಸಾಮಗರು ನಿಜಕ್ಕೂ ಯಕ್ಷಗಾನದ ಸವ್ಯಸಾಚಿ ಕಲಾವಿದ. ದೊಡ್ಡಪ್ಪ ಶಂಕರನಾರಾಯಣ ಸಾಮಗರು, ತಂದೆ ರಾಮದಾಸ ಸಾಮಗರು ಯಕ್ಷಗಾನ ಮತ್ತು ತಾಳಮದ್ದಲೆ ಕ್ಷೇತ್ರದ ತಾರೆಯರು. ಕೀರ್ತನೆ, ಹರಿಕಥೆಗಳಿಗೆ ಹೆಸರುವಾಸಿಯಾದ ದಿಗ್ಗಜರು. ವಾಸುದೇವ ಸಾಮಗರಿಗೂ ಇದು ರಕ್ತಗತವಾಗಿಯೇ ಬಂದದ್ದು ಎಂದರೆ ತಪ್ಪಾಗಲಾರದು. ಅವರ ಉತ್ತರ ಕುಮಾರ, ಬಲಿ ಚಕ್ರವರ್ತಿ, ಭೀಷ್ಮ, ವಿಶ್ವಾಮಿತ್ರ ನನಗೆ ಅತ್ಯಂತ ಇಷ್ಟವಾದ ಪಾತ್ರಗಳು.
‘ನನ್ನ ಕೈಗೆ ಒಮ್ಮೆ ಖಡ್ಗ ಸಿಕ್ಕಿತ್ತು, ಕ್ಷಣಾರ್ಧದಲ್ಲಿ ನಮ್ಮ ತೋಟದಲ್ಲಿರುವ ಬಾಳೆ ಗಿಡಗಳನ್ನೆೆಲ್ಲ ಕತ್ತರಿಸಿ ಎಸೆದಿದ್ದೇನೆ, ಅಡಿಕೆ
ಸಸಿಯ ಶಿರಚ್ಛೇದನ ಮಾಡಿದ್ದೇನೆ, ಇನ್ನು ಕೌರವರ ಸೈನ್ಯ ಯಾವ ಲೆಕ್ಕ?’ ಇದು ಉತ್ತರ ಕುಮಾರನಾಗಿ ಬೃಹನ್ನಳೆಯ ಎದುರು
ಬಡಾಯಿ ಕೊಚ್ಚಿಕೊಳ್ಳುವ ಮಾತುಗಳು. ‘ಇಂದು ಒಂದೇ ಕಿವಿಗೆ ಗುಬ್ಬಿ ಮೊಳೆ ತೊಡುವ ಯುವಕರೆಲ್ಲ ಬಲರಾಮನ ಅನುಯಾ ಯಿಗಳು, ಬಲರಾಮನೂ ತನ್ನ ಒಂದೇ ಕಿವಿಗೆ ಗುಬುಟು ತೊಡುತ್ತಿದ್ದ.’ ಎಂದು ಬಲರಾಮನ ಪಾತ್ರಮಾಡುತ್ತಿದ್ದಾಗ ಅವರು
ಹೇಳುತ್ತಿದ್ದ ಮಾತು.
ಅವರ ಪ್ರಕಾರ ಬಲರಾಮ ಪ್ರಪಂಚದ ಮೊದಲ ಮುಸಲ್ಮಾನ. ‘ಹನುವನ್ನು ಹೊಂದಿದವನು ಹನುಮಾನನಾದರೆ ಮುಸಲ
(ಬಲರಾಮನ ಆಯುಧ)ವನ್ನು ಹೊಂದಿದವನು ಮುಸಲಮಾನ ಎಂಬುದು ಸಾಮಗರು ನೀಡುತ್ತಿದ್ದ ಸಮಜಾಯಿಷಿ! ಕಚ ದೇವಯಾನಿಯರ ಪ್ರಸಂಗದಲ್ಲಿ, ಶುಕ್ರಾಚಾರ್ಯರಲ್ಲಿ ವಿದ್ಯಾಭ್ಯಾಸಕ್ಕೆೆಂದು ಬಂದ ಕಚನನ್ನು ಕಂಡು ಮೋಹಗೊಂಡ ದೇವಯಾನಿ, ‘ನೀವು ಒಪ್ಪಿದರೆ ಇವನಿಗೆ ವಿದ್ಯೆಯನ್ನು ನಾನು ಹೇಳಿಕೊಡುತ್ತೇನೆ’ ಎಂದಾಗ ‘ಇವನಿಗೆ ನಾನು ಎಲ್ಲಾ ವಿದ್ಯೆ
ಹೇಳಿಕೊಡಬಹುದು. ಆದರೆ ಲವ್ ಕಿಕ್ (ಲೌಕಿಕ) ಮಾತ್ರ ನೀನೇ ಹೇಳಿಕೊಡಬೇಕು’ ಎಂದು ಶುಕ್ರಾಚಾರ್ಯನಾಗಿ ಸಾಮಗರ ಮಾತುಗಳು ಅವರು ಅಕ್ಷರಗಳೊಂದಿಗೆ ಆಡುವ ಸರಸಕ್ಕೆ ಉದಾಹರಣೆ.
ವಿಶ್ವಾಮಿತ್ರ ಮೇನಕೆಯ ಪ್ರಸಂಗದಲ್ಲಿ, ಮೇನಕೆಯು ‘ತನ್ನನ್ನು ಉಪಯೋಗಿಸಿಕೊಂಡು ಹೀಗೆ ಮಧ್ಯದಲ್ಲಿ ಬಿಡುವುದು ಸರಿಯೇ?’ ಎಂದು ಕೇಳಿದಾಗ ವಿಶ್ವಾಮಿತ್ರನಾಗಿ ಸಾಮಗರ ಮಾತುಗಳು; ‘ನದಿಯನ್ನು ದಾಟಲು ಒಬ್ಬ ದೋಣಿಯನ್ನು ಬಳಸಿಕೊಳ್ಳುತ್ತಾನೆ, ನದಿ ದಾಟಿದ ನಂತರ ಅದನ್ನು ಅಲ್ಲಿಯೇ ಇರುವ ಗೂಟಕ್ಕೆ ಬಿಗಿದು ಬರುತ್ತನೆ ವಿನಃ ನದಿ ದಾಟಲು ಉಪಕಾರ ಮಾಡಿದೆಯೆಂದು ಅದನ್ನು ಬೆನ್ನಿಗೆ ಕಟ್ಟಿಕೊಂಡು ಪೇಟೆಯಲ್ಲಿ ತಿರುಗಾಡುವುದಿಲ್ಲ.
ಊಟಕ್ಕೆೆಂದು ಎಲೆಯನ್ನು ಉಪಯೋಗಿಸುತ್ತೇವೆ, ನಂತರ ಎಸೆಯುತ್ತೇವೆ. ಊಟ ಮಾಡಲು ಉಪಯೋಗಿಸಿದ್ದೇವೆ ಎಂದ ಮಾತ್ರಕ್ಕೆ ಊಟವಾದ ನಂತರವೂ ಎಲೆಯನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳುವುದಿಲ್ಲ. ಅಡವಿಯಲ್ಲಿ ನಡೆಯುವಾಗ
ಕಾಲಿಗೆ ಮುಳ್ಳೊೊಂದು ತಾಗುತ್ತದೆ, ಅಲ್ಲಿ ಅದನ್ನು ತೆಗೆಯಲಾಗದಿದ್ದ ಕಾರಣ ಮನೆಗೆ ಬಂದು ಅದನ್ನು ತೆಗೆದು ಬಿಸಾಡುತ್ತೇವೆ. ಅಡವಿಯಿಂದ ಮನೆಗೆ ಬರುವವರೆಗೂ ನೀನು ನನ್ನ ಕಾಲಿನಲ್ಲಿಯೇ ಇದ್ದೆ ಎಂದು ಅದಕ್ಕೆ ಧನ್ಯವಾದ ಹೇಳಿ ಬಳಿಯಲ್ಲಿ
ಇಟ್ಟುಕೊಳ್ಳುವ ಕ್ರಮ ಇಲ್ಲ. ನೀನು ನನ್ನ ಪಾಲಿಗೆ, ನನ್ನ ಬಾಳಿಗೆ ಮುಳ್ಳು, ಈಗ ತೆಗೆದು ಎಸೆಯುತ್ತಿದ್ದೇನೆ, ಮೊದಲು ಇಲ್ಲಿಂದ ತೆರಳು. ‘ಹೆತ್ತ ಮಗುವನ್ನು ಬಿಟ್ಟು ಹೋಗುತ್ತೇನೆಂದು ಹೇಳುವ ಮೇನಕೆ, ನಿನ್ನೊಟ್ಟಿಗೆ ಕರೆದುಕೊಂಡು ಹೋಗು ಎನ್ನುವ ವಿಶ್ವಾಮಿತ್ರನ ನಡುವಿನ ಸಂಭಾಷಣೆ ಮುಂದುವರಿಯುತ್ತದೆ; ವಿಶ್ವಾಮಿತ್ರ: ಈ ಮಗುವನ್ನು ನಾನು ಪೆಟ್ಟಿಗೆಯಿಂದ ತೆಗೆದು ಕೊಟ್ಟದ್ದಲ್ಲ, ಈ ಮಗು ನಿನ್ನದು, ನಿನ್ನ ಜೊತೆ ತೆಗೆದುಕೊಂಡು ಹೋಗು.
ಮೇನಕೆ: ಇದನ್ನು ನಾನು ಬರುವಾಗ ನನ್ನೊಟ್ಟಿಗೆ ತಂದದ್ದಲ್ಲ, ನಿಮ್ಮಿಿಂದಾದದ್ದು, ನೀವೇ ಇಟ್ಟುಕೊಳ್ಳಿ.
ವಿ: ಲೋಕದಲ್ಲಿ ದನದ ಕರು ಎನ್ನುತ್ತರೆಯೇ ವಿನಃ ಎತ್ತಿನ ಕರು ಎಂದು ಹೇಳುವ ಕ್ರಮ ಇಲ್ಲ.
ಮೇ: ಒಬ್ಬ ಕೃಷಿಕ ಹೊಲದಲ್ಲಿ ಬೀಜ ಬಿತ್ತಿ ಫಲ ಬಂದಾಗ ಅದನ್ನು ಅವನೇ ಅನುಭವಿಸಬೇಕು. ಆದ್ದರಿಂದ ಈ ಮಗು ನಿಮ್ಮದು.
ವಿ: ಕ್ಷೇತ್ರಫಲ ನ್ಯಾಯೇನ ನೀನಾಡುವ ಮಾತು ಸರಿ, ಆದರೆ ಇಲ್ಲಿ ಕೃಷಿಕ ತನ್ನದಲ್ಲದ, ಬೇರೆಯವರ ಹೊಲದಲ್ಲಿ ಬೀಜ ಬಿತ್ತಿ ದ್ದಾನೆ, ಆದ್ದರಿಂದ ನಿಜವಾಗಿ ಫಲ ಉಣ್ಣಬೇಕಾದವನು ಹೊಲದ ಒಡೆಯ, ನಿನ್ನೊಟ್ಟಿಗೆ ಕರೆದುಕೊಂಡು ಹೋಗು.
ಮೇ: ಅಂದು ಮಗು ಹುಟ್ಟಿದಾಗ ಕಣ್ಣು ಮೂಗು ಬಾಯಿ ಎಲ್ಲ ನನ್ನಂತೆಯೇ ಎಂದಿದ್ದಿರಿ.
ವಿ: ಮೇಲಿಂದ ಕೆಳಗೆ ಬರುವಾಗ ಹೊಕ್ಕುಳಿನವರೆಗೆ ನನ್ನಂತೆಯೇ ಎಂದಿದ್ದೆ, ಅದರ ಕೆಳಗೆ ನಿನ್ನಂತೆಯೇ ಎಂದು ಅಂದೇ ಒಪ್ಪಿಕೊಂಡಿದ್ದೆನಲ್ಲ.
ಇದು ಸಾಮಗರ ತುಂಟತನದ ಮಾತುಗಳು. (ಇದರಲ್ಲಿ ಕೆಲವನ್ನು ಅವರ ತಂದೆ ರಾಮದಾಸ ಸಾಮಗರೂ ಬಳಸುತ್ತಿದ್ದರೆಂದು ಕೇಳಿದ್ದೇನೆ.) ಅದೇ ತುಂಟ ಸಾಮಗರು ಬಲಿ ಚಕ್ರವರ್ತಿಯಾದಾಗ ಸಂಪೂರ್ಣ ಬದಲಾಗುತ್ತಾರೆ. ವಾಮನನಿಗೆ ಕೊಟ್ಟ ಒಂದು ಮಾತಿಗೆ ತಪ್ಪಿ ನಡೆದರೆ ಏನೂ ಆಗುವುದಿಲ್ಲ, ನೀನು, ನಿನ್ನ ಸಾಮ್ರಾಜ್ಯ, ನಿನ್ನ ಕುಲದವರೆಲ್ಲರೂ ಸುಖವಾಗಿರುತ್ತೀರಿ ಎಂದು ಗುರು ಶುಕ್ರಾಚಾರ್ಯರು ಹೇಳಿದಾಗ, ಬಲಿ ಚಕ್ರವರ್ತಿಯಾಗಿ ಸಾಮಗರು ಸುಖದ ಬಗ್ಗೆ ಹೇಳುತ್ತಾರೆ; ನಮಗೆ ಹಸಿವಾದಾಗ ದುಃಖವಾಗುತ್ತದೆ, ಆ ಹಸಿವಿನ ನಿವಾರಣೆಗೆ ಒಂದಿಷ್ಟು ತಿನ್ನುತ್ತೇವೆ. ಹೊಟ್ಟೆ ತುಂಬಿದಾಗ ಸುಖ ಎನಿಸುತ್ತದೆ. ಆದರೆ ಅಲ್ಲಿ ಆದದ್ದು ದುಃಖ ನಿವಾರಣೆಯೇ ಹೊರತು ಸುಖ ಪ್ರಾಪ್ತಿಯಲ್ಲ.
ನಾವು ದುಃಖ ನಿವಾರಣೆಯನ್ನೇ ಸುಖ ಪ್ರಾಪ್ತಿ ಎಂದು ತಿಳಿದಿದ್ದೇವೆ. ಶ್ವಾನವೊಂದು ಎಲುಬಿನ ತುಂಡನ್ನು ಅಗೆಯುತ್ತಿರುತ್ತದೆ, ಅದಕ್ಕೆ ಅದರಲ್ಲಿ ಏನೋ ಸುಖ ಸಿಗುತ್ತದೆ. ಅಗೆಯುತ್ತಿರುವಾಗ ಅದೇ ಎಲುಬು ತನ್ನ ದಾಡೆಗೆ ರಕ್ತ ಜಿನುಗುತ್ತದೆ. ಶ್ವಾನಕ್ಕೆ ಅದು ತನ್ನ ದಾಡೆಯಿಂದ ಬಂದ ರಕ್ತವೆಂದು ತಿಳಿಯುವುದಿಲ್ಲ, ಎಲುಬಿನಿಂದಲೇ ಬಂದ ರಕ್ತವೆಂದು ಭ್ರಮಿಸಿ ಇನ್ನಷ್ಟು ಜಗಿಯುತ್ತದೆ. ದಾಡೆಯ ನೋವು ಹೆಚ್ಚಾಗುವವರೆಗೂ ಈ ಕ್ರಿಯೆ ಮುಂದುವರಿಯುತ್ತದೆ. ಮನುಷ್ಯನೂ ಹಾಗೆಯೇ, ಹೆಂಡತಿ, ಮಕ್ಕಳು, ಸಂಸಾರ, ಸುಖದ ಭ್ರಮೆಯಲ್ಲಿ ಸಿಲುಕಿ ಸುತ್ತುತ್ತಿರುತ್ತಾನೆ. ತನ್ನ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಇರುವು ದರಿಂದಲೇ ಮನುಷ್ಯನನ್ನು ಬುದ್ಧಿಜೀವಿ ಎಂದು ಕರೆಯುತ್ತಾರೆ.
ನಾಲ್ಕು ಕಾಲಿನ ಪ್ರಾಣಿಗಳಿಗೆ ತಲೆ ಮುಂದೆ, ಎರಡು ಕಾಲಿನ ಪ್ರಾಣಿಗಳಿಗೆ ತಲೆ ಮೇಲೆ. ಸಾಮಾನ್ಯವಾಗಿ ತಲೆ ಮೇಲಿರುವ ಜೀವಿಯ ಬುದ್ಧಿ ತಲೆ ಮುಂದಿರುವ ಜೀವಿಗಳಿಗಿಂತ ಹೆಚ್ಚು. ಇತರ ಜೀವಿಗಳಿಗೆ ಹೋಲಿಸಿದರೆ ಮನುಷ್ಯನ ಮಿದುಳಿನ ಗಾತ್ರ ದೊಡ್ದದು.
ಮಿದುಳಿನ ಗಾತ್ರ ಅಳೆಯುವುದು ಅದರಲ್ಲಿರುವ ಮಡಿಕೆಯಿಂದ. ಮನುಷ್ಯನ ಮಿದುಳಿನಲ್ಲಿ ಮಡಿಕೆಗಳು ಹೆಚ್ಚಾಗಿರುವು ದರಿಂದಲೇ ಗ್ರಹಿಸುವ, ಗ್ರಹಿಸಿದ್ದನ್ನು ಹಿಡಿದಿಟ್ಟುಕೊಳ್ಳುವ, ಬೇಕಾದಾಗ ಉಪಯೋಗಿಸುವ ಕ್ಷಮತೆ ಉಳಿದವರಿಗಿಂತ ಹೆಚ್ಚಾಗಿರು ವುದು. ಇದನ್ನು ತಿಳಿದೂ ಲೌಕಿಕವಾದ ಸುಖವನ್ನೇ ಅರಸಿ ಮನುಷ್ಯ ಹೋಗುತ್ತಾನೆ ಎಂದರೆ ಅವನು ತನ್ನ ಬುದ್ಧಿಯನ್ನು ಸರಿಯಾಗಿ ವಿನಿಯೋಗಿಸಿಕೊಳ್ಳುತ್ತಿಲ್ಲ ಎಂದೇ ಹೇಳಬೇಕು.
ಹದಿನಾಲ್ಕು ಲೋಕದ ಅಧೀಶತ್ವವೂ ಶಾಶ್ವತವಾದುದಲ್ಲ. ಈಗ ಬಂದವನು ಶ್ರೀಮನ್ ನಾರಾಯಣ. ಈಗ ಬಂದ ಹರಿ, ಲೋಕದ ಪ್ರಭು ಎಂಬುದನ್ನು ಅರಿ. ವಾಮನ ರೂಪದಲ್ಲಿ ಬಂದ ಹರಿ ಮುನಿದರೆ ಸುಮ್ಮನಿದ್ದಾನೆಯೇ? ಅದಕ್ಕಿಿಂತ ಹರಿಯ ಪ್ರಸನ್ನತೆಗೆ ಒಳಗಾಗಿ ಶಾಶ್ವತ ಸುಖವನ್ನು ಅಪ್ಪಿಕೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ‘ನನಗೆ ಇಷ್ಟವಾದ, ಎಂದೂ
ಮರೆಯದ, ಸದಾ ನನ್ನ ಮನದಲ್ಲಿರುವ ಸಾಮಗರ ಕೆಲವು ಮಾತುಗಳು, ತರ್ಕಗಳಿವು.
ಕಳೆದ ವರ್ಷದ ಕಾರ್ಯಕ್ರಮವೊಂದರಲ್ಲಿ ‘ಮುಂದಿನ ವರ್ಷದಿಂದ ಸಂಯಮಂ ತಿರುಗಾಟ ನಿಲ್ಲಿಸಲಿದೆ. ಕಾರಣ ಪ್ರೇಕ್ಷಕರ ಕೊರತೆಯೂ ಅಲ್ಲ, ಆಯೋಜಕರ ಅಭಾವವೂ ಅಲ್ಲ. ನನಗೆ ವರ್ಷ ಎಪ್ಪತ್ತಾಯಿತು ಎಂಬುದೇ ಕಾರಣ’ ಎಂದಿದ್ದರು. ಅಂದು ಸಾಮಗರ ಮಾತು ಕೇಳಿ ಬೇಸರವಾಗಿತ್ತಾದರೂ ಇಷ್ಟು ಬೇಗ ತಮ್ಮ ಮಾತನ್ನು ಶಾಶ್ವತವಾಗಿ ನಿಲ್ಲಿಸುತ್ತಾರೆಂದು ಖಂಡಿತ ಅಂದು ಕೊಂಡಿರಲಿಲ್ಲ. ಅಗಲಿದ ವಾಗ್ಮಿಗೆ ಅಭಿಮಾನದ ಅಕ್ಷರ ನಮನ.