Thursday, 12th December 2024

ಸಮುದಾಯ ಸೇವೆ ಎಂಬ ಸುಧಾರಿತ ಶಿಕ್ಷಾ ವಿಧಾನ

ನಾಡಿಮಿಡಿತ

ವಸಂತ ನಾಡಿಗೇರ

ನಾನು ನನ್ನ ಠಾಣೆ ಎದುರಿನ ರಸ್ತೆಯನ್ನು ಗುಡಿಸುತ್ತೇನೆ. ಅದೂ ಒಂದು ವಾರ ಕಾಲ.’ ಹೀಗೆ ಆ ಅಧಿಕಾರಿಯ ಪರ ವಕೀಲರು ಹೇಳುತ್ತಿರು ವಾಗ ಕೋರ್ಟ್‌ನಲ್ಲಿ ಅರೆಕ್ಷಣ ನಿಶ್ಶಬ್ದ. ತಪ್ಪು ಮಾಡಿದ ಅಧಿಕಾರಿಗಳಿಗೆ ಕೋರ್ಟ್‌ಗಳು ಶಿಕ್ಷೆ ನೀಡಿದ ಉದಾಹರಣೆ ಗಳಿವೆ.

ಇವು ಸಾಮಾನ್ಯವಾಗಿ ಭ್ರಷ್ಟಾಚಾರ ಸಂಬಂಧಿ ಆರೋಪಗಳಾಗಿರುತ್ತವೆ. ಆದರೆ ಈ ಪ್ರಕರಣದ ಆರೋಪಿ ಸ್ವತಃ ಪೊಲೀಸ್ ಅಧಿಕಾರಿ. ಅಂದರೆ ಆರಕ್ಷಕರಿಗೇ ಶಿಕ್ಷೆ. ಈ ಕಾರಣಕ್ಕಾಗಿ ಇದು ವಿಶೇಷ. ಅಲ್ಲದೆ ಶಿಕ್ಷೆಯ ಸ್ವರೂಪವೂ ವಿಶೇಷವಾದುದು.
ಹೀಗಾಗಿಯೂ ಗಮನ ಸೆಳೆಯುವಂಥದ್ದು. ಹಾಗಾದರೆ ಯಾರೀ ಅಧಿಕಾರಿ? ಅವರೊಬ್ಬ ಸ್ಟೇಶನ್  ಹೌಸ್ ಆಫೀಸರ್(ಎಸ್‌ಎಚ್‌ಒ). ಕಲಬುರ್ಗಿಯ ಸ್ಟೇಶನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸೇವೆ.

ಇನ್ಸ್‌ಪೆಕ್ಟರ್ ಅಥವಾ ಸಬ್ ಇನ್ಸ್‌ಪೆಕ್ಟರ್ ರ‍್ಯಾಂಕ್ ಉಳ್ಳವರು. ಇಡೀ ಠಾಣೆಯ ಉಸ್ತುವಾರಿ. ಇಂತಿಪ್ಪ ಈ ಅಧಿಕಾರಿಗೆ ಹೈಕೋರ್ಟ್‌ನ ಕಲಬುರ್ಗಿ ನ್ಯಾಯಪೀಠ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದೆ. ಇಷ್ಟಕ್ಕೂ ಏನಿದು ಪ್ರಕರಣ ಎಂಬುದನ್ನು  ಗಮನಿಸೋಣ. ಆಕೆ ೫೫ ವರ್ಷದ ಮಹಿಳೆ. ತಾರಾಬಾಯಿ ಎಂದು ಹೆಸರು. ಕಲಬುರಗಿ ಜಿಲ್ಲೆಯ ಮಿಣಜಗಿ ತಾಂಡಾ ನಿವಾಸಿ. ಅವರ ಮಗ ಸುರೇಶ್ ಅಕ್ಟೋಬರ್ ೨೦ರಿಂದ ಕಾಣೆಯಾಗಿರುತ್ತಾನೆ.

ಸದರಿ ಠಾಣೆಗೆ ಹೋಗಿ ಅಪಹರಣದ ದೂರು ಸಲ್ಲಿಸುತ್ತಾರೆ. ಆದರೆ ಎಫ್‌ಐಆರ್ ದಾಖಲಿಸಿಕೊಳ್ಳುವುದಿಲ್ಲ. ಆಗ ವಿಽ ಇಲ್ಲದೆ
ಅವರು ಹೈಕೋರ್ಟ್ ಕದ ತಟ್ಟುತ್ತಾರೆ. ಆಕೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ವಿಭಾಗೀಯ ಪೀಠದ ಮುಂದೆ ಬರುತ್ತದೆ. ‘ತಮ್ಮ ಮಗ ಕಾಣೆಯಾಗಿದ್ದು ಹುಡುಕಿಕೊಡಿ ಎಂದು ಕೋರಿ ಬಂದ ಅಸಹಾಯಕ ಹೆಣ್ಣುಮಗಳ ಅಳಲು ಕೇಳದೆ

ಇಂಥ ಸಂದರ್ಭದಲ್ಲಿ ಮೊದಲು ಎಫ್ಐ‌ಆರ್ ದಾಖಲಿಸಬೇಕು. ಸಿಆರ್‌ಪಿಸಿಯಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಉಲ್ಲೇಖಿಸ ಲಾಗಿದೆ. ನಿಮ್ಮ ಠಾಣಾ ವ್ಯಾಪ್ತಿಯಲ್ಲೇ ಈ ಘಟನೆ ನಡೆದಿದೆ ಎಂದ ಮೇಲೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು
ನಿರ್ಲರ್ಕ್ಷ್ಯ ಮಾಡಿದ್ದೆಕೆ ? ತಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದಾದರೂ ಕೂಡ ಎಫ್ಐಆರ್ ದಾಖಲಿಸಿಕೊಂಡು ಅನಂತರ ಅದನ್ನು ಸಂಬಂಧಿದ ಠಾಣೆಗೆ ವರ್ಗಾಯಿಸಬೇಕು. ನೀವು ಇದಾವುದನ್ನೂ ಮಾಡಿಲ್ಲ.

ಠಾಣೆಯ ಡೈರಿಯಲ್ಲಿ ಇದನ್ನೆಲ್ಲ ದಾಖಲಿಸಬೇಕಿತ್ತು. ಅದನ್ನೂ ಮಾಡಿಲ್ಲ. ಇದು ಗಂಭೀರವಾದ ಕರ್ತವ್ಯಲೋಪ. ಅಲ್ಲದೆ ತಾಯಿ ಮಗ ಇಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಹರಣ ಅಥವಾ ಸ್ವಾತಂತ್ರ್ಯದ ಹಕ್ಕು ನಿರಾಕರಿಸಿದಂತಾಗುತ್ತದೆ’ ಎಂದು ತರಾಟೆಗೆ ತೆಗೆದುಕೊಳ್ಳುತ್ತದೆ. ಆಗ ತನ್ನ ತಪ್ಪಿನ ಅರಿವಾಗಿಯೋ, ಇಲ್ಲವೆ ನ್ಯಾಯಾಲಯದಲ್ಲಿ ಇನ್ನು ತಮಗೆ ರಕ್ಷಣೆ ಸಿಗದು ಎಂಬ ಕಾರಣಕ್ಕೋ ಪೊಲೀಸ್ ಅಧಿಕಾರಿಯ ಪರ ವಕೀಲರು ಕಾರ್ಯಪ್ರವೃತ್ತರಾಗುತ್ತಾರೆ.

ಕಾಣೆಯಾಗಿದ್ದ ಸುರೇಶನನ್ನು ಹುಡುಕಿ ತಂದು ಕೋರ್ಟ್‌ಗೆ ಹಾಜರುಪಡಿಸುತ್ತಾರೆ. ಇಷ್ಟು ಮಾತ್ರವಲ್ಲದೆ ತಾವು ತಪ್ಪು
ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಅಲ್ಲದೆ ಈ ಸಂಬಂಧ ತಮ್ಮ ಕಕ್ಷಿಗಾರರ ಪರವಾಗಿ ವಿವರವಾದ ಅಫಿಡವಿಟ್ ಸಲ್ಲಿಸುತ್ತಾರೆ. ‘ನನಗೆ ನನ್ನ ತಪ್ಪಿನ ಅರಿವಾಗಿದೆ. ಈ ತಪ್ಪಿಗೆ ಪ್ರಾಯಶ್ಚಿತ್ತ ಮತ್ತು ಶಿಕ್ಷೆಯಾಗಿ ನಾನು ಸಮುದಾಯದ ಸೇವೆ ಮಾಡುತ್ತೇನೆ. ನನ್ನ
ಠಾಣೆಯ ಮುಂದಿನ ರಸ್ತೆಯನ್ನು ಒಂದು ವಾರ ಕಾಲ ಗುಡಿಸುತ್ತೇನೆ’ ಎಂಬ ಹೇಳಿಕೆ ಅದರಲ್ಲಿತ್ತು.

ಇದು ಅಪರೂಪದ ಪ್ರಕರಣ ಮತ್ತು ಶಿಕ್ಷೆ. ಆದರೆ ಈ ಕಮ್ಯುನಿಟಿ ಸರ್ವಿಸ್ ಶಿಕ್ಷೆ ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅಲ್ಲಲ್ಲಿ ಇಂಥ ಶಿಕ್ಷೆಗಳನ್ನು ನೀಡಲಾದ ಉದಾಹರಣೆಗಳಿವೆ. ಧಾರ್ಮಿಕ ಭಾವನೆ ಕೆರಳಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪ ರಾಂಚಿಯ ಯುವಕನೊಬ್ಬನ ಮೇಲೆ ಬಂದಿತ್ತು. ವಿಚಾರಣೆ ನಡೆಸಿದ ಸ್ಥಳೀಯ
ನ್ಯಾಯಾಲಯವು ಆತನಿಗೆ ಕುರಾನ್‌ನ ಐದು ಪ್ರತಿ ಗಳನ್ನು ಹಂಚಲು ಆದೇಶ ನೀಡಿತು. ಇದೇ ಅವನಿಗೆ ವಿಧಿಸಿದ ಶಿಕ್ಷೆ. ಮತ್ತೊಂದು ಪ್ರಕರಣದಲ್ಲಿ,  ವೈದ್ಯರೊಬ್ಬರಿಗೆ ಒಂದು ವರ್ಷದ ಅವಧಿಯಲ್ಲಿ ಒಂದು ಸಾವಿರ ಗಿಡ ನೆಡುವಂತೆ ನ್ಯಾಯಾಲಯ ವೊಂದು ಆದೇಶ ನೀಡಿದೆ.

ಅದೇ ರೀತಿ ಬೀದಿ ಕಾಮಣ್ಣರ ಹಾವಳಿ ಸಾರ್ವತ್ರಿಕ. ಮುಂಬೈನ ಪೋಲಿ ಯುವಕರ ಗುಂಪೊಂದು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ರಸ್ತೆಯ ಕಸ ಗುಡಿಸುವಂತೆ ಐದು ಯುವಕರಿಗೆ ಆದೇಶ ನೀಡಿತು. ಇಂಥ ಶಿಕ್ಷೆ ನ್ಯಾಯಾಲಯ ಮಾತ್ರವಲ್ಲ ಸಮುದಾಯಗಳಲ್ಲೂ ಇದೆ. ಇದಕ್ಕೆ ಒಳ್ಳೆಯ
ಉದಾಹರಣೆ ಎಂದರೆ ಸಿಖ್ಖರ ಅತ್ಯುಚ್ಚ ಧಾರ್ಮಿಕ ಸಂಸ್ಥೆ ಅಕಾಲ್ ತಖ್ತ್ ಹಾಗೂ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್‌ಜಿಪಿಸಿ). ಅಕಾಲ್ ತಖ್ತ್, ಅತ್ಯಂತ ಪ್ರಭಾವಿ ಸಂಸ್ಥೆ.

ಎಷ್ಟೇ ಪ್ರಭಾವಿ ಗಳಾಗಿದ್ದರೂ ಈ ಸಮಿತಿ ನೀಡುವ ಆದೇಶಕ್ಕೆ ತಲೆಬಾಗಲೇಬೇಕು. ತಮ್ಮ ಸಮುದಾಯದವರು ತಪ್ಪು ಮಾಡಿದ್ದಾರೆ ಎಂದು ಕಂಡುಬಂದಲ್ಲಿ, ವಿಶೇಷವಾಗಿ ತಮ್ಮ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ, ಅಥವಾ ಅಪಚಾರ ಎಸಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಕಂಡುಬಂದಲ್ಲಿ ಅಂಥವರಿಗೆ ಶಿಕ್ಷೆ ನೀಡುವುದುಂಟು. ಈ ಶಿಕ್ಷೆ ಸಮುದಾಯ ಸೇವೆಯ ರೂಪದಲ್ಲಿ ಇರುತ್ತದೆ.

ಅಕಾಲ್‌ತಖ್ತ್ ಇಂಥ ಶಿಕ್ಷೆಯನ್ನು ೧೯೮೪ರ ಬ್ಲೂಸ್ಟಾರ್ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖರಿಗೆ ವಿಧಿಸಿದೆ. ಅಮೃತಸರದ ಸ್ವರ್ಣಮಂದಿರದಲ್ಲಿ ಅಡಗಿದ್ದ ಉಗ್ರರನ್ನು ಹೊರಹಾಕಲು ಸೈನಿಕರನ್ನು ದೇಗುಲದೊಳಕ್ಕೆ ಕಳಿಸಿದ ಕಾರ್ಯಾ ಚರಣೆ ಇದು. ಸಿಖ್ಖರ ಪರಮೋಚ್ಚ ಧಾರ್ಮಿಕ ಸಂಸ್ಥೆಗಳ ಪ್ರಕಾರ ಇದೊಂದು ಅಪಚಾರ. ಇಂಥ ಶಿಕ್ಷೆ ಅನುಭವಿಸಿದವರಲ್ಲಿ
ಪ್ರಮುಖರೆಂದರೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಸುರ್ಜಿತ್‌ಸಿಂಗ್ ಬರ್ನಾಲಾ. ಈ ಘಟನೆ ನಡೆದಾಗ ಅವರು ಮುಖ್ಯಮಂತ್ರಿ ಯಾಗಿದ್ದರು. ಹೀಗಾಗಿ ಅವರನ್ನು ಸಮುದಾಯದಿಂದ ಹೊರಹಾಕಲಾಯಿತು.

ತಪ್ಪನ್ನು ಒಪ್ಪಿಕೊಂಡು ಶಿಕ್ಷೆ ಅನುಭವಿಸಿದರೆ ಮತ್ತೆ ಸಮುದಾಯದೊಳಕ್ಕೆ ಪ್ರವೇಶ. ಶಿಕ್ಷೆ ಅನುಭವಿಸಲು ಬರ್ನಾಲಾ ಒಪ್ಪಿಕೊಂಡರು. ಶಿಕ್ಷೆ ಏನು ಗೊತ್ತಾ? ಸಮುದಾಯ ಸೇವೆ. ಅಂದರೆ ಸ್ವರ್ಣಮಂದಿರಕ್ಕೆ ಬರುವ ಯಾತ್ರಿಗಳ ಪಾದರಕ್ಷೆಗಳನ್ನು ಸ್ವಚ್ಛ ಮಾಡುವುದು; ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು ಇತ್ಯಾದಿ. ಅದನ್ನು ಬರ್ನಾಲಾ ಶಿರಸಾವಹಿಸಿ ಪಾಲಿಸಿದರು. ಆಗ ಕೇಂದ್ರ ಸಚಿವರಾಗಿದ್ದ ಸರ್ದಾರ್ ಬೂಟಾಸಿಂಗ್ ಅವರೂ ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದರು. ಅವರ ಮೇಲೂ ಕ್ರಮ
ಕೈಗೊಳ್ಳಲಾಯಿತು. ಬೂಟಾಸಿಂಗ್ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರು.

ಹೆಸರೇ ತಿಳಿಸುವಂತೆ ಗುರುದ್ವಾರಗಳ ಉಸ್ತುವಾರಿ ಮತ್ತು ನಿರ್ವಹಣೆಯ ಹೊಣೆ ಎಸ್‌ಜಿಪಿಸಿಗಿದೆ. ಗುರುಗ್ರಂಥ ಸಾಹಿಬ್‌ನ ಕೆಲವು ಪ್ರತಿಗಳು ಕಣ್ಮರೆಯಾದ ಪ್ರಕರಣದಲ್ಲಿ ಎಸ್‌ಜಿಪಿಸಿ ಸಮಿತಿಯ ಸದಸ್ಯರೆಲ್ಲರೂ ಅದರ ಹೊಣೆ ಹೊರಬೇಕು ಎಂದು ಜಾಥೇದಾರ (ಇವರು ಎಸ್‌ಜಿಪಿಸಿ ಮುಖ್ಯಸ್ಥರು) ಸೂಚನೆ ನೀಡಿದರು. ಆ ಪ್ರಕಾರ ಸದಸ್ಯರೆಲ್ಲ ರಸ್ತೆ ಗುಡಿಸಿದರು.

ಪಂಜಾಬ್, ಹರಿಯಾಣಾ ಮುಂತಾದ ರಾಜ್ಯಗಳಲ್ಲಿ ಖಾಪ್ ಪಂಚಾಯ್ತಿಗಳಿವೆ. ಇವುಗಳ ಮುಖ್ಯ ಕೆಲಸ ಪಂಚಾಯ್ತಿ ಮಾಡಿ ಶಿಕ್ಷೆ ವಿಧಿಸುವುದು. ಬಹಳ ಹಿಂದೆ ವಿದೇಶಗಳಲ್ಲಿ ಲಿಂಚ್ ನ್ಯಾಯ ಎಂಬುದೊಂದಿತ್ತು. ನಮ್ಮ ಗ್ರಾಮಗಳಲ್ಲೂ ಪಂಚಾಯಿತಿ ನಡೆಯುವುದುಂಟು. ಆದರೆ ಇವುಗಳಿಗೆ ಕಾನೂನು ಮಾನ್ಯತೆ ಇಲ್ಲ. ಅನಧಿಕೃತವಾಗಿ, ಅನೌಪಚಾರಿಕವಾಗಿ ಇವು ನಡೆಯುತ್ತವೆ. ಸಮುದಾಯ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ನ್ಯಾಯದಾನಕ್ಕಾಗಿ ಮಾಡಿಕೊಂಡ ಒಂದು ವ್ಯವಸ್ಥೆ ಅಷ್ಟೆ. ಈ ಪೈಕಿ ಬಹುತೇಕ ಕಡೆಗಳಲ್ಲಿ ಏಕಪಕ್ಷೀಯ ನ್ಯಾಯನಿರ್ಣಯ ಆಗುವ ಸಾಧ್ಯತೆ ಇರುತ್ತದೆ.

ಶಿಕ್ಷೆಯ ಸ್ವರೂಪವೂ ವಿಚಿತ್ರ, ಕೆಲವೊಮ್ಮೆ ವಿಪರೀತ ಮತ್ತು ವಿಕ್ಷಿಪ್ತವಾಗಿರುತ್ತದೆ. ಉದಾಹರಣೆಗೆ ಕಳ್ಳನನ್ನು ಮರಕ್ಕೆ ಕಟ್ಟಿ ಹೊಡೆಯುವುದು; ತಲೆ ಬೋಳಿಸುವುದು ಇತ್ಯಾದಿ. ಆದರೆ ಸಿಖ್ಖರಲ್ಲಿ ಮಾತ್ರ ಸಮುದಾಯ ಸೇವೆಯ ರೂಪದ ಶಿಕ್ಷೆ ಇರುತ್ತದೆ.
ಸಮುದಾಯ ಶಿಕ್ಷೆಯೊಡನೆ ನಮ್ಮಲ್ಲಿ ಈಗಿರುವ ನ್ಯಾಯದಾನ ವ್ಯವಸ್ಥೆ ಹಾಗೂ ಶಿಕ್ಷೆಯನ್ನು ಹೋಲಿಸಿ ನೋಡೋಣ. ಯಾವು ದಾದರೂ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ, ‘ಜೈಲೂಟ ಫಿಕ್ಸ್, ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ’ ಎಂಬಿತ್ಯಾದಿ ಶೀರ್ಷಿಕೆಗಳನ್ನು ಕೊಡುವುದುಂಟು.

ಹೀಗಾಗಿ ನಮ್ಮಲ್ಲಿ ಕೆಲವು ಕಾಯಂ ಅಪರಾಧಿಗಳಿಗೆ ಜೈಲೆಂದರೆ ತವರು ಮನೆ ಇದ್ದಂತೆ. ಅಲ್ಲಿಗೆ ಹೋದರೂ ಎಲ್ಲ ಬಗೆಯ ಸುಖ
ಸಂತಸ, ಸೌಲಭ್ಯಗಳನ್ನು ಅನುಭವಿಸುತ್ತಾರೆ. ಜೈಲು ಸೇರಿದರೇ ಹಿತ, ಸುರಕ್ಷಿತ ಎಂಬ ಭಾವನೆ ಬೆಳೆದುಬಂದಿದೆ. ನಮ್ಮ ವ್ಯವಸ್ಥೆಯ ಲೋಪದೋಷಗಳು ಇದಕ್ಕೆ ಕಾರಣ ಇದ್ದಿರಲೂಬಹುದು. ಆದರೆ ಅಪರಾಧ ಕೃತ್ಯ ಎಸಗುವುದು; ಜೈಲು ಸೇರುವುದು.
ಅನಂತರ ಬೇಲ್ ಮೆಲೆ ಹೊರಬರುವುದು – ಹೀಗೆ ಸಾಗುತ್ತದೆ ನಮ್ಮ ವ್ಯವಸ್ಥೆ. ಸಜಾಬಂದಿಗಳಿಗೂ ಪೆರೋಲ್ ಮೇಲೆ ಬಿಡುಗಡೆಯ ಅವಕಾಶ ಉಂಟು.

ಹೀಗೆ ಬಿಡುಗಡೆ ಆದ ಸಮಯದಲ್ಲೆ ಮತ್ತೆ ಪಾತಕ ಕೃತ್ಯ ಎಸಗಿದ ಉದಾಹರಣೆಗಳೂ ಸಾಕಷ್ಟಿವೆ. ಈ ಹಿನ್ನೆಲೆಯಲ್ಲೂ ಶಿಕ್ಷೆಯ
ಸ್ವರೂಪ ಮತ್ತು ವಿಧಾನವನ್ನು ಬದಲಾವಣೆ ಮಾಡಬೆಕಾದ ಅಗತ್ಯ ಕಂಡುಬಂದಿದೆ. ಹಾಗೆಂದು ನಮ್ಮಲ್ಲಿ ಈ ರೀತಿಯ ಹೊಸಬಗೆಯ ಶಿಕ್ಷೆ ವಿಧಿಸಲು ಪ್ರತ್ಯೇಕ ಕಾನೂನುಗಳು ಇದ್ದಂತಿಲ್ಲ. ಅಥವಾ ಆ ರೀತಿಯ ಉಲ್ಲೇಖಗಳಿಲ್ಲ. ಉದಾಹರಣೆಗೆ
ನಮ್ಮ ಐಪಿಸಿ, ಸಿಆರ್‌ಪಿಸಿಯಲ್ಲಿ ನಿರ್ದಿಷ್ಟ ಅಪರಾಧಕ್ಕೆ ನಿರ್ದಿಷ್ಟ ಸ್ವರೂಪ ಮತ್ತು ಪ್ರಮಾಣದ ಶಿಕ್ಷೆ ಎಂದು ನಮೂದಿಸ ಲಾಗಿದೆ. ಸಾದಾ ಶಿಕ್ಷೆ, ಸಶ್ರಮ ಶಿಕ್ಷೆ, ಜಾಮೀನು ಸಹಿತ, ಜಾಮೀನುರಹಿತ, ಜೀವಾವಧಿ ಶಿಕ್ಷೆ, ಮರಣ ದಂಡನೆ – ಇತ್ಯಾದಿ ಇತ್ಯಾದಿ
ಜೈಲಿನಲ್ಲಿ ಇದ್ದಾಗ ಕೆಲವು ಕೆಲಸಗಳನ್ನು ಕೊಡುತ್ತಾರೆ. ಆ ಮಾತು ಬೇರೆ.

ಆದರೆ ಈ ರೀತಿಯ ಸಾಂಪ್ರದಾಯಿಕ ಶಿಕ್ಷೆ ನೀಡುವುದಕ್ಕೆ ಕೆಲವು ವಲಯದಲ್ಲಿ ಅಸಮಾಧಾನ, ಆಕ್ಷೇಪ ಇದೆ. ಮೇಲೆ ತಿಳಿಸಿದಂತೆ ಅಪರಾಧಿಗಳಿಗೆ ಜೈಲಿಗೆ ಹೋಗುವುದು ರೂಢಿಯಾಗಿರುವ ಕಾರಣ ಅವರು ಯಾವುದಕ್ಕೂ ಅಂಜುವುದಿಲ್ಲ, ಹೇಸುವುದಿಲ್ಲ.
ಬದಲಾಗಿ ಜೈಲಿನಿಂದ ಹೊರಬಬಂದ ಬಳಿಕ ಮತ್ತೆ ಹೊಸ ಹುರುಪು, ಹೊಸ ಸೇಡು ಕೇಡಿನಿಂದ ಕ್ರಿಮಿನಲ್ ಕೃತ್ಯಗಳಿಗೆ ಮುಂದಾ ಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಪರಾಧಿಗಳಿಗೆ ಶಿಕ್ಷೆಯ ಬದಲು ಅವರ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ.

ಅಂದರೆ ಸಮಾಜ , ಸಮುದಾಯ ಸೇವೆಯ ಶಿಕ್ಷೆ ನೀಡಿದರೆ ಅವರಿಗೆ ತಮ್ಮ ತಪ್ಪಿನ ಅರಿವು ಮಾಡಿಕೊಟ್ಟಂತಾಗುತ್ತದೆ. ಸುಧಾ ರಣೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಇಲ್ಲದಿದ್ದರೆ ಅವರು ಸಮಾಜದಿಂದ ವಿಮುಖರಾಗುತ್ತಾರೆ. ಸಮಾಜದ ಬಗ್ಗೆ ಅವರಲ್ಲಿ ದ್ವೇಷಾಸೂಯ ಭಾವನೆ ಬೆಳೆಯುತ್ತದೆ ಎಂಬುದು ಇವರ ವಾದ. ಯಾವುದೊ ಕೆಟ್ಟ ಗಳಿಗೆಯಲ್ಲಿ ಅಪರಾಧ ಕೃತ್ಯ ಎಸಗಿದ ಅನೇಕ ರಿಗೆ ಅದಕ್ಕಾಗಿ ಪಶ್ಚಾತ್ತಾಪ ಇರುತ್ತದೆ. ಒಂದು ಅವಕಾಶ ಸಿಕ್ಕರೆ ಅವರು ಬದಲಾಗಲು, ಸುಧಾರಣೆ ಹೊಂದಲು ಇಷ್ಟಪಡುತ್ತಾರೆ.
ಅಂಥವರಿಗೆ ಈ ಸಮುದಾಯ ಸೇವೆಯ ಶಿಕ್ಷೆ ಸೂಕ್ತವಾಗಬಲ್ಲದು.

ನಮ್ಮ ದೇಶಕ್ಕಿಂತ ವಿದೇಶಗಳಲ್ಲಿ ಈ ಸಮುದಾಯ ಸೇವೆಯ ಶಿಕ್ಷೆಯ ಪದ್ಧತಿ ಹೆಚ್ಚು ಚಾಲ್ತಿಯಲ್ಲಿದೆ. ಬ್ರಿಟನ್ ಮತ್ತು ಅಮೆರಿಕ ದಲ್ಲಿ ಅದರ ಬಳಕೆ ಹೆಚ್ಚು. ಆದರೆ ಅಲ್ಲಿ ಅದಕ್ಕೆ ಸ್ಪಷ್ಟ ಮಾರ್ಗಸೂಚಿಗಳೂ, ನೀತಿ ನಿಯಮಗಳೂ ಇವೆ. ಉದಾಹರಣೆಗೆ
ಸಮುದಾಯ ಶಿಕ್ಷೆ ಇದ್ದರೂ ಮಾಮೂಲಿ ಶಿಕ್ಷೆ ಇರುತ್ತದೆ. ಹಾಗೆಯೇ ಸಮುದಾಯ ಶಿಕ್ಷೆ, ಜೈಲು ಶಿಕ್ಷೆ ಸೇರಿದರೆ ಅದು ಒಟ್ಟು ಶಿಕ್ಷೆಯ ಪ್ರಮಾಣವನ್ನು ಮೀರುವಂತಿಲ್ಲ ಇತ್ಯಾದಿ ಪರಿಗಣನೆ ಇದೆ.

ನನಗೆ ಈ ಸಂದರ್ಭದಲ್ಲಿ ಹಿಂದೊಮ್ಮೆ ನೋಡಿದ ವಿಡಿಯೊ ಕಣ್ಮುಂದೆ ಬರುತ್ತದೆ. ಅದು ಅಮೆರಿಕ ಕೋರ್ಟ್ ಒಂದರಲ್ಲಿ ನಡೆದ ಪ್ರಕರಣವೊಂದರ ವಿಚಾರಣೆಯ ದೃಶ್ಯ. ಅಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣದ ವಿಚಾರಣೆ ನಡೆದಿರುತ್ತದೆ. ಈ
ವ್ಯಕ್ತಿಗೆ ಪೊಲೀಸ್ ಅಧಿಕಾರಿ ಟಿಕೆಟ್ ನೀಡಿರುತ್ತಾನೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುತ್ತದೆ. ವ್ಯಕ್ತಿಯನ್ನು ನ್ಯಾಯಾ ಧೀಶರು ಪ್ರಶ್ನೆ ಕೇಳುತ್ತ ಹೋಗುತ್ತಾರೆ. ಆ ಸಂಭಾಷಣೆಯಿಂದ ತಿಳಿದುಬರುವ ವಿಷಯ ಏನೆಂದರೆ ಆ ವ್ಯಕ್ತಿ ಬಹಳ ವರ್ಷ ಗಳಿಂದಲೂ ವಾಹನ ಚಾಲನೆ ಮಾಡುತ್ತಿದ್ದು ಈ ಹಿಂದೆ ಒಮ್ಮೆಯೂ  ನಿಯಮ ಉಲ್ಲಂಘನೆಗಾಗಿ ಸಿಕ್ಕಿಬಿದ್ದ ಅಥವಾ ಟಿಕೆಟ್
ಪಡೆದ ಉದಾಹರಣೆಗಳಿರಲಿಲ್ಲ.

ಆದರೆ ಈಗೇಕೆ ಹೀಗೆ ಎಂದರೆ ಆತ ಹೇಳಿದ್ದು ‘ನಾನು ಈ ನಡುವೆ ಹೆಚ್ಚಾಗಿ ವಾಹನ ಚಾಲನೆ ಮಾಡುವುದಿಲ್ಲ. ಆದರೆ ನನ್ನ ಮಗನಿಗೆ ಹುಷಾರಿಲ್ಲದ ಕಾರಣ ನಾನೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ನನ್ನ ಕಣ್ಣು ಬೇರೆ ಸರಿ ಯಾಗಿಲ್ಲ’ ಈ ಮಾತು ಕೇಳುತ್ತಿದ್ದಂತೆ ಜಡ್ಜ್ ಅವರು ಅವರ ಮೇಲಿನ ಎಲ್ಲ ಆರೋಪಗಳನ್ನು ರದ್ದುಗೊಳಿಸುತ್ತಾರೆ. ಮಾತ್ರವಲ್ಲ. ಅವರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡುವಂತೆ ತಿಳಿಸುತ್ತಾರೆ.

ಆರಂಭದಲ್ಲಿ ವಿವರಿಸಿದ ಪ್ರಕರಣದಲ್ಲಿ, ಆ ಪೊಲೀಸ್ ಅಧಿಕಾರಿ ಕಸ ಗುಡಿಸಿದರೋ ಇಲ್ಲವೋ. ಗುಡಿಸಿದರೆ ಎಷ್ಟು ಚೆನ್ನಾಗಿ ಎಂಬುದು ಬೇರೆ ಮಾತು. ದಂಡ ಕಟ್ಟು ಎಂದು ಹೇಳಿದ್ದರೆ ಅಥವಾ ವಾಗ್ದಂಡನೆ ವಿಧಿಸಿದ್ದಿದ್ದರೆ ಅವರ ಮನಸ್ಸಿಗೆ ಅಷ್ಟು ನಾಟುತ್ತಿರಲಿಲ್ಲವೋ ಏನೋ. ಆದರೆ ಈ ಶಿಕ್ಷೆಯನ್ನು ಅವರು ಜೀವನ ಪರ್ಯಂತ ಮರೆಯಲಿಕ್ಕಿಲ್ಲ. ಮನದಲ್ಲಿ ಬಹುಕಾಲ ಉಳಿಯುವುದಂತೂ ನಿಜ. ಆದರೆ ಈ ರೀತಿಯ ಶಿಕ್ಷೆಗಳು ನಮ್ಮ ನ್ಯಾಯದಾನದ ವ್ಯವಸ್ಥೆಯಲ್ಲಿ ಸ್ವಲ್ಪ ಅಪರೂಪವೇ.

ಇತ್ತೀಚೆಗೆ ಯಾವುದೋ ಒಂದು ಪ್ರಕರಣದಲ್ಲಿ ರಾಜಕಾರಣಿಯೊಬ್ಬರಿಗೆ ಕೋರ್ಟ್ ಐದು ಲಕ್ಷ ರುಪಾಯಿ ದಂಡ ವಿಧಿಸಿತು. ಐದೇನು, ಐವತ್ತು ಲಕ್ಷವನ್ನಾದರೂ ಅವರು ಕೊಡುತ್ತಾರೆ. ಎಷ್ಟೆಂದರೂ ಕೋಟ್ಯಧೀಶರವರು. ಈಗ ಜೈಲು ಶಿಕ್ಷೆ ಅನುಭವಿಸು
ತ್ತಿರುವ, ಜಯಲಲಿತಾ ಆಪ್ತೆ ಶಶಿಕಲಾ ಅವಧಿಗೆ ಮುನ್ನ ಬಿಡುಗಡೆ ಆಗುತ್ತಿದ್ದಾರಂತೆ. ಇದಕ್ಕಾಗಿ ಅವರು ಹತ್ತು ಕೋಟಿ ರು. ದಂಡ ಕಟ್ಟಬೇಕಂತೆ. ಅದನ್ನವರು ಕಟ್ಟುತ್ತಾರೆ. ಹತ್ತು ಕೋಟಿ ಅವರಿಗೆ ದೊಡ್ಡ ಮೊತ್ತ ಆಗಿರಲಿಕ್ಕಿಲ್ಲ. ಆದರೆ ಶಶಿಕಲಾಗೆ ಅಷ್ಟು ಹಣ ಕಟ್ಟುವ ತಾಕತ್ತಿದೆ. ಕಟ್ಟಿ ಬಿಡುಗಡೆಯಾಗುತ್ತಾರೆ.

ಉಳಿದವರು ಏನು ಮಾಡಬೇಕು? ಅಲ್ಲದೆ ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಹತ್ತು ಕೋಟಿಯ ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಲು ತಯಾರಾಗಿರುವವವರ ಬಳಿ ಇನ್ನೆಷ್ಟು ಆಸ್ತಿ ಇರಬಹುದು? ಇದೆಲ್ಲ ಹೇಗೆ ಬಂತು? ಇದರ ಮೂಲವೇನು? ಸೋಜಿಗದ ವಿಷಯ ಎಂದರೆ ಭ್ರಷ್ಟಾಚಾರ ಪ್ರಕರಣದಲ್ಲೇ ಅವರು ತಪ್ಪಿತಸ್ಥರಾಗಿ ಜೈಲು ಸೇರಿರುವುದು. ಈಗ ಇದೇ ಹಣಬಲದ ಮೆಲೆ ಬೇಗ ಬಂಧಮುಕ್ತಿ. !

ಕಲಬುರಗಿಯ ಪೊಲೀಸ್ ಅಧಿಕಾರಿಗೆ ನೀಡಿದ ಶಿಕ್ಷೆಯ ಸ್ವರೂಪವನ್ನು ನೋಡಿದ ಮೇಲೆ ಕೆಲವು ಪ್ರಶ್ನೆಗಳು ಏಳುತ್ತವೆ. ಹಾಗೆ ನೋಡಿದರೆ ಈ ಅಧಿಕಾರಿಗಿಂತ ಇನ್ನೂ ಗಂಭಿರ ಸ್ವರೂಪದ ತಪ್ಪನ್ನು ಮಾಡಿದ , ಲೋಪದೋಷಗಳನ್ನು ಎಸಗಿದ ಪ್ರಕರಣ
ಗಳು ಹೇರಳವಾಗಿರುತ್ತವೆ. ಆದರೆ ಅವರ ತಪ್ಪುಗಳು ಬಹಳಷ್ಟು ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮುಚ್ಚಿ ಹೋಗುತ್ತವೆ. ರಸ್ತೆ ಬದಿ ತರಕಾರಿ, ಹಣ್ಣು ಹೂವು, ತಿಂಡಿ ಮಾರುವವರಿಂದ ಹಣ ವಸೂಲಿ ಮಾಡುವ ಪೊಲೀಸರಿಗೆ ಕಡಿಮೆ ಏನಿಲ್ಲ. ಟ್ರಾಫಿಕ್ ಪೊಲೀಸರ ದರ್ಪವೂ ಎಲ್ಲರಿಗೂ ಗೊತ್ತಿರು ವಿಚಾರವೇ.

ಹಣ ಅಧಿಕಾರ ಇದ್ದಾಗ ಏನು ಬೇಕಾದರೂ ಮಾಡಬಹುದು ಎಂಬ ದರ್ಪ, ದುರಹಂಕಾರವೇ ಈ ರೀತಿಯ ಕೃತ್ಯ ಎಸಗಲು ಅವರಿಗೆ ಪ್ರೇರಣೆ ಆಗುವುದು ಹೆಚ್ಚು. ಆದರೆ ಇಂಥವರ ಮೇಲೆ ಸಮುದಾಯ ಸೇವೆಯಂಥ ಚಾಟಿ ಬೀಸಿದರೆ ಒಳ್ಳೆಯದು.
ಉದಾಹರಣೆಗೆ ಕೆಟ್ಟ ರಸ್ತೆಗಳು. ಈ ರೀತಿಯ ರಸ್ತೆ ನಿರ್ಮಿಸಿರುವ ಗುತ್ತಿಗೆದಾರರಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ. ಅದೇ ರಸ್ತೆ ಯಲ್ಲಿ ಹದಿನೈದು ದಿನಗಳ ವರೆಗೆ ವಾಹನಚಾಲನೆ ಮಾಡು ಎಂದು ಹೇಳಬಹುದು.

ಅಥವಾ ಇಂಥ ಕಳಪೆ ರಸ್ತೆ ಮಾಡಿದ ತಪ್ಪಿನ ಪ್ರಾಯಶ್ಚಿತ್ತವಾಗಿ ಬೇರೆ ಕಡೆ ಒಳ್ಳೆ ರಸ್ತೆಯನ್ನು ಉಚಿತವಾಗಿ ನಿರ್ಮಾಣ ಮಾಡ ಬೇಕು. ಅದೇ ರೀತಿ ರಸ್ತೆ ನಿರ್ವಹಣೆಯಲ್ಲಿ ಕಾಳಜಿ ತೋರದ ಕಾರ್ಪೊರೇಶನ್ ಅಧಿಕಾರಿಗಳಿಗೆ ಅವರು ಮರೆಯದಂಥ ಒಂದು ಶಿಕ್ಷೆ ನೀಡಬೇಕು. ಟ್ರಾಫಿಕ್ ಪೊಲೀಸರು, ನಿರ್ಲಕ್ಷ್ಯ ತೋರುವ ವೈದ್ಯರು, ಲಂಚ ಕೇಳುವ ನೌಕರರು ಇವರಿಗೆಲ್ಲ ಸಮುದಾಯ ಸೇವೆಯಂಥ ಶಿಕ್ಷೆಯನ್ನು ವಿಧಿಸಿದರೆ ಅವರಿಗೂ ಬುದ್ಧಿ ಬರಬಹುದು. ಕಲಬುರಗಿಯ ಪೊಲೀಸ್ ಅಧಿಕಾರಿಗೆ ಸಮುದಾಯ ಸೇವೆಯ ಶಿಕ್ಷೆ ನೀಡಿದ ಹೈಕೋರ್ಟ್ ಆದೇಶ ಮತ್ತು ಅಮೆರಿಕದ ಈ ಜಡ್ಜ್ ಅವರ ಆದೇಶಗಳ ಸಂಖ್ಯೆ ಹೆಚ್ಚಾಗಲಿ.

ನಾಡಿಶಾಸ್ತ್ರ
ದೂರು ಕೊಟ್ಟರೆ ದೂರ್ವಾಸರಾಗುವರು
ನಮ್ಮ ರಕ್ಷಕರೇ ಆಗುತ್ತಾರೆ ಭಕ್ಷಕರು
ಇವರಿಗೆ ದಂಡ ವಿಧಿಸುವುದೇ ದಂಡ
ಬೇರೆ ಶಿಕ್ಷೆಯೇ ಆಗಬೇಕು ಮಾನದಂಡ