Thursday, 21st November 2024

Sandeep Sharma Muteri Column: ಅಭಿವೃದ್ಧಿ ನೆಪದಲ್ಲಿ ಅಪಸವ್ಯ!

ಒಡಲಾಳ

ಸಂದೀಪ್‌ ಶರ್ಮಾ ಮೂಟೇರಿ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಭಿವೃದ್ಧಿಯ ನೆಪದಲ್ಲಿ ಹಲವು ಅನಾಹುತಗಳಾಗುತ್ತಿವೆ. ಇಷ್ಟಾಗಿಯೂ ಆಳುಗರು ಕಣ್ಣಿದ್ದೂ ಕುರುಡರಂತಿರುವುದು, ಇನ್ನೂ ಎಚ್ಚೆತ್ತುಕೊಂಡಿಲ್ಲದಿರುವುದು ಖೇದಕರ. ನಂದಿಬೆಟ್ಟ ಒಂದು ಗಿರಿಧಾಮ. ಇದು ಒಂದು ಕಾಲದಲ್ಲಿ ಅರ್ಕಾವತಿ, ಕುಮುದ್ವತಿ, ಪಾಪಾಗ್ನಿ, ಪಾಲಾರ್, ಪೆನ್ನಾರ್ ನದಿಗಳ ಉಗಮಸ್ಥಾನವಾಗಿತ್ತು. ಅವು ಸಮೃದ್ಧವಾಗಿ ಹರಿದು, ಹಲವು ಉಪನದಿಗಳನ್ನು ಜತೆಗೂಡಿಸಿಕೊಂಡು ಬಂಗಾಳ ಕೊಲ್ಲಿಯನ್ನು ಸೇರುತ್ತಿದ್ದವು ಎಂದು ಹೇಳಿದರೆ, ಇಂದಿನ ಪೀಳಿಗೆಯವರಿಗೆ ಅದು ಹುಬ್ಬೇರಿಸುವ ಸಂಗತಿ
ಯಾಗುತ್ತದೆ !

ನಂದಿಬೆಟ್ಟ ಸೇರಿದಂತೆ ಪರಿಸರದ ಸಮಸ್ತ ಅಸ್ತಿತ್ವಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಅವುಗಳನ್ನು ತುಂಡರಿಸುವ ಮೂಲಕ
ನಾವೇ ವಿಪತ್ತನ್ನು ಆಹ್ವಾನಿಸುತ್ತಿದ್ದೇವೆ. ನಂದಿಬೆಟ್ಟದ ತಪ್ಪಲಿನಲ್ಲಿ ಅದೆಷ್ಟೋ ರೆಸಾರ್ಟುಗಳು, ಹೋಮ್‌ಸ್ಟೇಗಳು ನಿರ್ಮಾಣವಾಗಿವೆ. ರಸ್ತೆ ನಿರ್ಮಾಣ, ಅಭಿವೃದ್ಧಿಯ ನೆಪದಲ್ಲಿ ಪರಿಸರಭಂಜನೆ ನಿತ್ಯವೂ ಆಗುತ್ತಲೇ ಇದೆ. ಇದು ಹೀಗೇ ಮುಂದುವರಿದಲ್ಲಿ, ಕೇರಳದ ವಯನಾಡಿನಲ್ಲಾದ ದುರಂತ ನಮ್ಮಲ್ಲೂ ಸಂಭವಿಸಬಹುದು.

ನಂದಿಬೆಟ್ಟದ ಆಸುಪಾಸಿನಲ್ಲಿ ನಡೆಯುತ್ತಿರುವ ಅನಪೇಕ್ಷಿತ ಚಟುವಟಿಕೆ ಗಳಿಂದ ಆ ಬೆಟ್ಟಕ್ಕೆ ಹೇಗೆ ಅಪಾಯ ಒದಗಲಿದೆ ಎಂಬುದರ ಕುರಿತು
ಸಮಾನಮನಸ್ಕರು ಮತ್ತು ಪರಿಸರದ ಬಗ್ಗೆ ಕಾಳಜಿಯುಳ್ಳವರ ಸಭೆಯೊಂದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ನಂದಿಬೆಟ್ಟದ ಸಂರಕ್ಷಣೆ ಸೇರಿದಂತೆ, ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸುವ ದಿಸೆಯಲ್ಲಿ ನಾವೇನು ಮಾಡಬೇಕು? ಈಗ ಆಗುತ್ತಿರುವ ವಿಧ್ವಂಸಕ ಕೃತ್ಯಗಳಿಗೆ ಕಡಿವಾಣ ಹಾಕಬೇಕಿರುವುದು ಎಷ್ಟು ಅನಿವಾರ್ಯ? ಅದಕ್ಕಿರುವ ಮಾರ್ಗೋಪಾಯಗಳೇನು? ಎಂಬುದರ ಬಗ್ಗೆ ಆ ವೇಳೆ ವಿಸ್ತೃತ ಮತ್ತು ಆರೋಗ್ಯಪೂರ್ಣ ಚರ್ಚೆ ನಡೆಯಿತು. ನಂದಿಬೆಟ್ಟವನ್ನು ಭೌಗೋಳಿಕ, ಜೈವಿಕ ಮತ್ತು ಜಲಸಂಪತ್ತಿನ ಮೂಲತಾಣವೆಂದು ಪರಿಗಣಿಸಿ, ಅಲ್ಲಿ
ಯಾವುದೇ ಪರಿಸರ-ವಿರೋಽ ಕೃತ್ಯಗಳಿಗೆ ಅವಕಾಶ ಕೊಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಂದು ಕೈಗೊಳ್ಳಲಾಯಿತು.

ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಮರಳು ಇಂದು ಎಲ್ಲೂ ಸಿಗುತ್ತಿಲ್ಲ. ಹೀಗಾಗಿ, ಮೊದಮೊದಲು ಹೆಣ್ಣೂರು
ಬಂಡೆಯನ್ನು ನಾಶಮಾಡಿ, ತದನಂತರ ನಂದಿಬೆಟ್ಟದ ತಪ್ಪಲಿನ ಬಂಡೆ ಗಳನ್ನು ಪುಡಿಗಟ್ಟಿ ‘ಎಂ.ಸ್ಯಾಂಡ್’ ತಯಾರಿಸಿ, ಅದನ್ನು ಬೆಂಗಳೂರಿಗೆ
ಸಾಗಿಸಿ, ಅಲ್ಲಿನ ನಿರ್ಮಿತಿಗಳಿಗೆ ಬಳಸುವ ದೊಡ್ಡ ದಂಧೆ ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ. ಇದರ ಹಿಂದೆ ಸ್ಥಾಪಿತ
ಹಿತಾಸಕ್ತಿಗಳು, ಲಾಭಬಡುಕರಿದ್ದಾರೆ. ಪಾರಂಪರಿಕ ಇತಿಹಾಸವುಳ್ಳ ಬೆಟ್ಟದ ಆಸುಪಾಸಿನಲ್ಲಿ ಹೀಗೆ ಡೈನಮೈಟ್ ಇಟ್ಟು ಧ್ವಂಸಮಾಡಿ, ಅಲ್ಲಿನ ಸಂಪನ್ಮೂಲವನ್ನು ಬಳಸಿಕೊಂಡು ಬೆಂಗಳೂರನ್ನು ‘ಬ್ರ್ಯಾಂಡ್ ಬೆಂಗಳೂರು’, ‘ಸ್ಮಾರ್ಟ್ ಸಿಟಿ’ ಮಾಡುವುದೆಂದರೆ ಅದು ಖಂಡಿತವಾಗಿ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ.

ಅದು ಬೆಂಗಳೂರಿಗರ ಪಾಲಿಗೆ ಶಾಪವಾಗುವುದೇ ವಿನಾ, ವರದಾನವಾಗುವುದಿಲ್ಲ. ಮೂರು ದಶಕಗಳಿಂದ, ಬೆಂಗಳೂರಿನಲ್ಲಿ ‘ಅಭಿ
ವೃದ್ಧಿ’ ಎಂಬ ವಿಷಯ ಬಂದಾಗಲೆಲ್ಲ ರಿಯಲ್ ಎಸ್ಟೇಟ್ ಉದ್ದಿಮೆ ಮುಂಚೂಣಿಯಲ್ಲಿ ನಿಲ್ಲುತ್ತದೆ. ಅಂದರೆ ರಸ್ತೆ, ಕಟ್ಟಡ, ಸೇತುವೆಯಂಥ
ಮೂಲಸೌಕರ್ಯಗಳ ನಿರ್ಮಾಣ. ಅದಕ್ಕೆ ಬೇಕಾದ ಕಚ್ಚಾವಸ್ತುಗಳನ್ನು, ನಂದಿಬೆಟ್ಟ, ರಾಮನಗರದ ಬೆಟ್ಟ, ಕನಕಪುರದ ಬೆಟ್ಟದ ಹೃದಯಭಾಗ
ವನ್ನುಛಿದ್ರಮಾಡಿ ತರಲಾಗುತ್ತದೆ. ಪರಿಸರವನ್ನು ಹಾಳುಗೆಡಹುವ ಈ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳವರೂ ಕೈಜೋಡಿಸಿದ್ದಾರೆ. ಇವರಿಗೆ
ಪರಿಸರದ ಬಗ್ಗೆ ಇಂಥ ಅನಾದರವೇಕೋ ಗೊತ್ತಾಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು/ರಾಜಕಾರಣಿಗಳು, ಕಂಪನಿಗಳ ಪಾತ್ರ ಇರುತ್ತದೆ. ಹೀಗಾಗಿ, ಉಸಿರಾಡಲು ಯೋಗ್ಯವಾದ ಪ್ರಾಣವಾಯು, ಪಾನಯೋಗ್ಯ ಶುದ್ಧನೀರು
ಸಿಗುವುದೇ ದುಸ್ತರವಾಗಿದೆ. ಮಣ್ಣು ಕೂಡ ಮಾಲಿನ್ಯದಿಂದ ಹೊರತಾಗಿಲ್ಲ- ಬಹುರಾಷ್ಟ್ರೀಯ ಕಂಪನಿಗಳ ಮೂಲಕ ಬರುವ ಕಳೆನಾಶಕಗಳಿಂದ ಮಣ್ಣು ಮತ್ತು ಸೂಕ್ಷ್ಮ ಜೀವಜಾಲ ನಶಿಸಿಹೋಗಿವೆ.

ಪರಾಗಸ್ಪರ್ಶದ ಕೆಲಸ ಮಾಡುವ ಜೇನ್ನೊಣಗಳು ಕೂಡ ಅಳಿವಿನ ಅಂಚಿಗೆ ಬರುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಮಾರಾಟ ಮಾಡುವ ‘ರೌಂಡಪ್’ ಎಂಬ ಕಳೆನಾಶಕವು ವಿಶ್ಬದ ಹಲವೆಡೆ ನಿಷೇಧಕ್ಕೆ ಒಳಗಾಗಿದೆ. ಅದೊಂದು ಕಾರ್ಕೋಟಕ ವಿಷ, ಅದರಿಂದಾಗುವ ಹಾನಿ ಅಷ್ಟು ಘೋರವಾದದ್ದು. ಹೀಗಾಗಿ ರೋಗ-ರುಜಿನಗಳು ಹೆಚ್ಚಿವೆ. ಬೆಂಗಳೂರಿನಲ್ಲಿ ನಾವು ಸೇವಿಸುತ್ತಿರುವ ಗಾಳಿಯಲ್ಲಿರುವ ವಿಷಕಾರಕ ಅಂಶಗಳ ಪ್ರಮಾಣವನ್ನು ಲೆಕ್ಕಿಸಲು ವಿಜ್ಞಾನಿಗಳ ವಿಶ್ಲೇಷಣೆ ಬೇಕಿಲ್ಲ, ಎಲ್ಲವೂ ನಮ್ಮ ಅನುಭವಕ್ಕೇ ಬರುತ್ತಿವೆ. ಆದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜೋರುನಿದ್ರೆ!

ಬೆಂಗಳೂರಿನಲ್ಲಿ ಇತ್ತೀಚೆಗೆ ಮೆಟ್ರೋ ಕಾಮಗಾರಿ ಭರದಿಂದ ಸಾಗಿದ್ದು, ನೂರಾರು ಕಿ.ಮೀ.ಗಳಷ್ಟು ಸುರಂಗ ಮಾರ್ಗಗಳನ್ನು ಕೊರೆಯ ಲಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಇವೆಲ್ಲವೂ ಮುಂದುವರಿದರೆ ಪ್ರಳಯಕಾಲ ಸನ್ನಿಹಿತವಾಗುತ್ತದೆ ಎಂಬುದನ್ನು ನಾವು ನೆನಪಿಡಬೇಕು. ಹಾಗೆಂದ ಮಾತ್ರಕ್ಕೆ ಅಭಿವೃದ್ಧಿ ಕಾರ್ಯಗಳು ನಡೆಯಲೇಬಾರದು ಅಂತಲ್ಲ; ಆದರೆ ಅದು ಪ್ರಕೃತಿಗೆ ಪೂರಕವಾಗಿರಬೇಕು. ತೀರಾ ಅತಿಯಾದರೆ ಅದರ ಪರಿಣಾಮ ವಿನಾಶವೇ ವಿನಾ ಮತ್ತೇನಲ್ಲ. ಆದ್ದರಿಂದ ಅಭಿವೃದ್ಧಿಯ ಹುಕಿಗೆ ಬಿದ್ದವರು ಈ ಸೂಕ್ಷ್ಮವನ್ನು ತಕ್ಷಣ ಗಮನಿಸಿ, ಸಂಭಾವ್ಯ ಅನಾಹುತಗಳನ್ನು ತಪ್ಪಿಸಬೇಕು. ನಂದಿಬೆಟ್ಟ ಸೇರಿದಂತೆ, ಕೊಂಕಣ, ಅರಾವಳಿ, ಸಹ್ಯಾದ್ರಿಯನ್ನೊಳಗೊಂಡ ಪೂರ್ವ ಮತ್ತು ಪಶ್ಚಿಮ ಘಟ್ಟ ಗಳನ್ನು ಕಾಪಾಡುವ ಕೆಲಸಕ್ಕೆ ಮುಂದಾಗದಿದ್ದರೆ, ಮುಂಬರುವ ದಿನಗಳು ಕರಾಳವಾಗಲಿವೆ. ಬೆಂಗಳೂರಿನಲ್ಲಂತೂ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಅಪಸವ್ಯಗಳು ಮೇರೆಮೀರಿವೆ.

ಭೂಮಿಯ ಬೆಲೆ ಗಗನಕ್ಕೇರಿದ್ದು, ಸಣ್ಣ ದುಡಿಮೆಯ ಕುಟುಂಬಿಕರು ಸ್ವಂತದ ಸೂರನ್ನು ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಿದೆ. ಬೆಂಗಳೂರಿನ ಸರಹದ್ದುಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಸ್ಟಾರ್ ಹೋಟೆಲ್‌ಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದು, ಅಲ್ಲಿನ ದರಗಳನ್ನು ಕಂಡು ಮಧ್ಯಮ ವರ್ಗದವರು ಹುಬ್ಬೇರಿಸುವಂಥ ಸ್ಥಿತಿಯಿದೆ. ಅಂದರೆ, ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದೆಲ್ಲವೂ ಸಿರಿವಂತರ ಪ್ರಯೋಜನಕ್ಕೆ ಎಂಬುದು ಗಮನಿಸಬೇಕಾದ ಸಂಗತಿ.

ಕೊಡಗಿನಲ್ಲಿ ‘ಟಿಂಬರ್ ಮಾಫಿಯಾ’ದ ದರ್ಬಾರು ಎಗ್ಗಿಲ್ಲದೆ ನಡೆಯುತ್ತಿದೆ. ಅಲ್ಲಿನ ಕರಡ ಮತ್ತು ಚೆಯ್ಯಂಡಾಣೆ ಗ್ರಾಮಗಳ ಸಮೀಪಕ್ಕೆ ಆತು
ಕೊಂಡಿರುವ ಮಲೆತಿರಿಕೆ ಬೆಟ್ಟದ ಮಡಿಲಲ್ಲಿರುವ ಕಾಡನ್ನು ಸಂಪೂರ್ಣ ನಾಶಮಾಡಲು ಹೊರಟಿದ್ದಾರೆ ಈ ಮಾಫಿಯಾದವರು. ಇವರ ಉಪಟಳ
ದಿಂದಾಗಿ ದಿನದಿಂದ ದಿನಕ್ಕೆ ಆಗುತ್ತಿರುವ ಅನಾಹುತ, ಸರಕಾರಕ್ಕೆ ಆಗುತ್ತಿರುವ ಮೋಸ ಎಲ್ಲವನ್ನೂ ಪತ್ತೆ ಹಚ್ಚಿ ಸಲ್ಲಿಸಿದ ಒಕ್ಕಣೆ ಪತ್ರಗಳು ಗೊತ್ತಿಲ್ಲದಂತೆ ಕಸದಬುಟ್ಟಿ ಸೇರಿವೆ. ಇದು ಟಂಬರ್ ಮಾಫಿಯಾದ ಸ್ಥಾಪಿತ ಹಿತಾಸಕ್ತಿಗಳು ರುಷುವತ್ತು ಕೊಟ್ಟು ಅಧಿಕಾರಿಗಳನ್ನು ಜೇಬಿನಲ್ಲಿ ರಿಸಿಕೊಂಡಿರುವು ದರ ಫಲಶ್ರುತಿ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ.

ವಿಶೇಷ ಭೂಪ್ರದೇಶಗಳಾಗಿರುವ ಕುದುರೆಮುಖ ಮತ್ತು ಗಂಗಡಿಕಲ್ಲು ಪರ್ವತಶ್ರೇಣಿಯಲ್ಲಿ ಸಿಗುವಷ್ಟು ಉತ್ಕೃಷ್ಟ ಕಬ್ಬಿಣದ ಅದಿರು ವಿಶ್ವದ
ಬೇರೆಲ್ಲೂ ಸಿಗುವುದಿಲ್ಲ. ಇಂಥ ಬೆಟ್ಟಸಾಲುಗಳನ್ನು ಕೆಐಒಸಿಎಲ್ ಕಂಪನಿಗೆ ದಶಕಗಳ ಅವಧಿಗೆ ಗುತ್ತಿಗೆಗೆ ಕೊಟ್ಟು, ಅದು ಕೈಗೊಂಡ ಗಣಿಗಾರಿಕೆ ಯಿಂದ ಆಗಿರುವ ಅಪಾರ ಪರಿಸರ ನಾಶಕ್ಕೆ ಯಾರು ಹೊಣೆ? ಇದೀಗ, ಅದಿರು ತೆಗೆಯುವುದಕ್ಕೆಂದು ಅದೇ ಕಂಪನಿಗೆ ಬಳ್ಳಾರಿಯ ಗುಡ್ಡಗಳನ್ನೂ ಗುತ್ತಿಗೆ ಮೇರೆಗೆ ವಹಿಸಿಕೊಡಲು ಮುಂದಾಗಿರುವ ಕುರಿತು ಚರ್ಚೆ ನಡೆಯುತ್ತಿದೆ.

ಇದು ಸಮೃದ್ಧ ಪ್ರದೇಶವನ್ನು ಮರುಭೂಮಿಯಾಗಿಸುವ ಬಾಬತ್ತಲ್ಲದೆ ಮತ್ತೇನು? ಕೆಐಒಸಿಎಲ್‌ಗೆ ತಿಂಗಳಿಗೆ ಅಂದಾಜು 25 ಕೋಟಿ ರುಪಾಯಿ
ನಷ್ಟವಾಗುತ್ತಿರುವ, ಅಲ್ಲಿನ 300 ಕಾರ್ಮಿಕರು ವಜಾಗೊಳ್ಳಲಿರುವ ಸುದ್ದಿ ಇತ್ತೀಚೆಗೆ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಎಲ್ಲರೂ ಆ ಕಂಪನಿಯ ಹಿತಾಸಕ್ತಿ ಮತ್ತು ನಷ್ಟದ ಬಗ್ಗೆಯೇ ಕಾಳಜಿ ವಹಿಸುವವರಾಗಿದ್ದಾರೆಯೇ ವಿನಾ, ಆ ಕಂಪನಿಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಕಳವಳಿಸುತ್ತಿಲ್ಲ. ಪರಿಸರ ನಾಶವು ನರಹತ್ಯೆಗೆ ಸಮನಾದ ಅಪರಾಧ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ, ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ಕರಾಳ ವಾಗಲಿದೆ ಎಂಬುದಂತೂ ಕಟುಸತ್ಯ.

(ಲೇಖಕರು ಸಿವಿಲ್ ಎಂಜಿನಿಯರ್)

ಇದನ್ನೂ ಓದಿ: #Columnist