ವಿದ್ಯಮಾನ
ಗಣೇಶ್ ಭಟ್, ವಾರಣಾಸಿ
ಭಾರತವಿಂದು ತನ್ನ ಗಡಿ ಹಾಗೂ ಜನರ ರಕ್ಷಣೆಗೆ ಇನ್ನೊಂದು ದೇಶವನ್ನು ಅವಲಂಬಿಸಿಲ್ಲ. ಗಡಿದಾಟಿ ಒಳನುಗ್ಗುವ ಚೀನಾದ ದುಸ್ಸಾಹಸ ಗಳನ್ನು ಭಾರತ ಮಟ್ಟಹಾಕಿ ಆಗಿದೆ. ತನ್ನ ಶತ್ರುಗಳು ಯಾವ ದೇಶದಲ್ಲಿ ಎಲ್ಲೇ ಅಡಗಿರಲಿ, ಅಲ್ಲಿಗೇ ಹೋಗಿ ಅವರನ್ನು ದಮನಿಸುವ ಛಾತಿಯನ್ನು ಭಾರತ ಬೆಳೆಸಿಕೊಂಡಿದೆ. ಮಿಲಿಟರಿ ವಿಭಾಗದಲ್ಲೂ ಬಲಿಷ್ಠವಾಗುತ್ತಿರುವ ಭಾರತ, ಹೊರಗಿನ ಯಾವುದೇ ಬೆದರಿಕೆಗೆ ಬಗ್ಗುತ್ತಿಲ್ಲ.
ಸೊಮಾಲಿಯಾದ ಕಡಲ್ಗಳ್ಳರು ಕಳೆದ ಡಿಸೆಂಬರ್‌ನಲ್ಲಿ, ಐರೋಪ್ಯ ಒಕ್ಕೂಟಕ್ಕೆ ಸೇರಿದ ಬಲ್ಗೇರಿಯಾ ದೇಶದ ‘ಎಂವಿರುಯೆನ್’ ಹೆಸರಿನ ಸರಕುನೌಕೆ ಯನ್ನು ಅಪಹರಿಸಿ, ಅದರ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡು, ಆ ಹಡಗನ್ನು ಕಡಲ್ಗಳ್ಳತನದ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದರು. ಇಂಥವರ ಮತ್ತು ಹೌತಿ ಉಗ್ರರ ದಾಳಿಗಳಿಂದ ಸರಕುಸಾಗಣೆ ಹಡಗುಗಳನ್ನು ರಕ್ಷಿಸಲು ಭಾರತವು ೧೨ ಯುದ್ಧ ನೌಕೆಗಳನ್ನು ಕಳೆದ ಕೆಲ ತಿಂಗಳಿಂದ ಉತ್ತರ ಅರಬ್ಬೀ ಸಮುದ್ರ ಹಾಗೂ ಏಡನ್ ಕೊಲ್ಲಿಯ ಭಾಗದಲ್ಲಿ ನಿಯೋಜಿಸಿತ್ತು.
ಐಎನ್‌ಎಸ್ ಕೋಲ್ಕೊತಾ ಮತ್ತು ಐಎನ್‌ಎಸ್ ಸುಭದ್ರಾ ಎಂಬ ನಮ್ಮ ಯುದ್ಧನೌಕೆಗಳು ರುಯೆನ್ ನೌಕೆಯನ್ನು ಕಡಲ್ಗಳ್ಳರಿಂದ ಬಿಡಿಸಲು ಜಂಟಿ ಕಾರ್ಯಾಚರಣೆ ನಡೆಸಿದವು. ಇದು ಭಾರತದ ಸಮುದ್ರತಟದಿಂದ ೨,೬೦೦ ಕಿ.ಮೀ. ದೂರದಲ್ಲಿ ನಡೆಯಿತು. ೪೦ ಗಂಟೆಗಳ ಕಾರ್ಯಾಚರಣೆ ನಡೆಸಿದ
ಕಮಾಂಡೊ ಪಡೆ ಮಾರ್ಚ್ ೧೬ರಂದು ರುಯೆನ್ ನೌಕೆಯನ್ನು ನಿಯಂತ್ರಣಕ್ಕೆ ಪಡೆದು ಅದರಲ್ಲಿ ಒತ್ತೆಯಾಳುಗಳಾಗಿದ್ದ ಬಲ್ಗೇರಿಯಾ, ಮ್ಯಾನ್ಮಾರ್ ದೇಶಗಳ ಸಿಬ್ಬಂದಿಯನ್ನು ಬಿಡಿಸಿತು ಹಾಗೂ ೩೫ ಕಡಲ್ಗಳ್ಳರನ್ನು ಹೆಡೆಮುರಿಕಟ್ಟಿ ವಿಚಾರಣೆಗೆಂದು ಭಾರತಕ್ಕೆ ಕರೆತಂದಿತು.
ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಅವರು, ‘ಏಳು ಮಂದಿ ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹೃತ ಹಡಗನ್ನೂ ಅದರ ಸಿಬ್ಬಂದಿ ಯನ್ನೂ ರಕ್ಷಿಸಿದ ಭಾರತೀಯ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ಕೃತಜ್ಞತೆಗಳು’ ಎಂದು ‘ಎಕ್ಸ್’ (ಟ್ವಿಟರ್)ನಲ್ಲಿ ಬರೆದುಕೊಂಡರು. ಇದಕ್ಕೆ ಮೋದಿಯ ವರು, ‘ಸಮುದ್ರಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು, ಹಿಂದೂ ಮಹಾಸಾಗರ ವ್ಯಾಪ್ತಿ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತವು ಬದ್ಧವಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಇಲ್ಲಿ ಮತ್ತಿಬ್ಬರ ಅಭಿಪ್ರಾಯಗಳನ್ನು ಉಲ್ಲೇಖಿಸಬೇಕು. ‘ಈ ಕಾರ್ಯಾಚರಣೆಯ ಯಶಸ್ಸು, ಭಾರತೀಯ ನೌಕಾಪಡೆಯನ್ನು ತರಬೇತಿ, ಕಮಾಂಡ್, ನಿಯಂತ್ರಣ ಹಾಗೂ ಇತರ ಸಾಮರ್ಥ್ಯಗಳ ವಿಷಯದಲ್ಲಿ ಉನ್ನತ ದರ್ಜೆಯ ಪಡೆ ಎಂದು ಗುರುತಿಸುವಂತೆ ಮಾಡಿದೆ’ ಎಂದು ‘ಕೌನ್ಸಿಲ್ ಆನ್
ಫಾರಿನ್ ರಿಲೇಶನ್ಸ್’ನ ಹಿರಿಯ ಅಧಿಕಾರಿ ಜಾನ್ ಬ್ರಾಡ್ -ರ್ಡ್ ಹೇಳಿದ್ದಾರೆ. ಮತ್ತೊಂದೆಡೆ ರುಯೆನ್ ಹಡಗಿನ ಮಾಲೀಕರು, ‘ಈ ಪ್ರಕರಣವು ನಮಗೆ ಮಾತ್ರವಲ್ಲ, ಇಡೀ ಜಗತ್ತಿನ ಕಡಲ ಸಮುದಾಯಕ್ಕೆ ಸಿಕ್ಕಿದ ಪ್ರಮುಖ ಯಶಸ್ಸು’ ಎಂದು ಕೊಂಡಾಡಿದ್ದಾರೆ.
ಇಂಥದೇ ಸಾಕಷ್ಟು ಕಾರ್ಯಾಚರಣೆಗಳನ್ನು ನಮ್ಮ ನೌಕಾ ಪಡೆ ನಡೆಸಿದ್ದಿದೆ. ಮೊನ್ನೆ ಮಾರ್ಚ್ ೭ರಂದು, ಇರಾನ್ ಬೆಂಬಲಿತ ಯೆಮನ್ ದೇಶದ ಹೌತಿ ಉಗ್ರರು ಏಡನ್ ಕೊಲ್ಲಿ ಯಲ್ಲಿ ಬಾರ್ಬಡೋಸ್ ಮೂಲದ ಸರಕುಸಾಗಣೆ ಹಡಗಿನ ಮೇಲೆ ಕ್ಷಿಪಣಿದಾಳಿ ನಡೆಸಿದರು. ಆ ವೇಳೆ ಕಾರ್ಯಾಚರಣೆಗಿಳಿದ ಭಾರತದ ಐಎನ್‌ಎಸ್ ಕೋಲ್ಕೊತಾ ಯುದ್ಧನೌಕೆಯು, ಗಾಯಗೊಂಡ ಹಡಗಿನ ೨೧ ಸಿಬ್ಬಂದಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ಗಳ ಮೂಲಕ ಜಿಬೂಟಿಗೆ ಕಳುಹಿಸಿತ್ತು. ಹೌತಿ ಉಗ್ರರು ಜನವರಿ ೨೬ರಂದು ಏಡನ್ ಕೊಲ್ಲಿಯಲ್ಲಿ ‘ಮರ್ಲಿನ್ ಲುವಾಂಡಾ’ ಹೆಸರಿನ ತೈಲಸಾಗಣೆ ಹಡಗಿನ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದಾಗ ಅದು ಹೊತ್ತಿ ಉರಿಯಲಾರಂಭಿಸಿತು. ಆಗಲೂ ರಕ್ಷಣೆಗೆ ಧಾವಿಸಿದ್ದು ನಮ್ಮ ಯುದ್ಧನೌಕೆಯೇ. ಹೀಗೆ, ಕಳೆದ ಡಿಸೆಂಬರ್ ನಂತರ ನಮ್ಮ ನೌಕಾಪಡೆಯು ಉಗ್ರರ ಕ್ಷಿಪಣಿ ಮತ್ತು ಡ್ರೋನ್ ದಾಳಿಗೆ ಸಿಲುಕಿದ ೬ ವಾಣಿಜ್ಯ ನೌಕೆಗಳು ಹಾಗೂ ಸೊಮಾಲಿಯಾ
ಕಡಲ್ಗಳ್ಳರ ದಾಳಿಗೆ ಸಿಲುಕಿದ ೭ ಹಡಗುಗಳನ್ನು ರಕ್ಷಿಸಿದೆ.
ಭಾರತವಿಂದು ತನ್ನ ಗಡಿಗಳನ್ನು ಭದ್ರಗೊಳಿಸಿ ತನ್ನ ಪ್ರಜೆಗಳನ್ನಷ್ಟೇ ರಕ್ಷಿಸುತ್ತಿಲ್ಲ, ಪರದೇಶಗಳ ಜನರ ರಕ್ಷಣೆಗೂ ಬದ್ಧವಾಗಿದೆ ಎಂಬುದಕ್ಕೆ ಈ ಘಟನೆ ಗಳೇ ಸಾಕ್ಷಿ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಒಂದು ಘಟ್ಟದಲ್ಲಿ ಉಕ್ರೇನಿನ ರಾಜಧಾನಿ ಕೀವ್‌ನ ಮೇಲೆ ಪರಮಾಣು ಬಾಂಬ್ ದಾಳಿಗೆ ರಷ್ಯಾ ಸಜ್ಜಾಗಿತ್ತು. ಆದರೆ ಪ್ರಧಾನಿ ಮೋದಿಯವರು ರಷ್ಯಾ ಅಧ್ಯಕ್ಷ ಪುಟಿನ್ ಜತೆಗೆ ಮಾತುಕತೆ ನಡೆಸಿ ಈ ಯೋಜನೆಯಿಂದ ಹಿಂದೆ
ಸರಿಯು ವಂತೆ ಮಾಡಿದರು. ಇಂಥದೊಂದು ಪರಮಾಣು ದಾಳಿ ನಡೆದರೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂಬ ಚಿಂತೆಯಲ್ಲಿದ್ದ ಅಮೆರಿಕದ ಜೋ ಬೈಡನ್ ಸರಕಾರ, ಈ ದಾಳಿಯಿಂದ ಹಿಂದೆ ಸರಿಯುವಂತೆ ರಷ್ಯಾದ ಮನವೊಲಿಸಲು ಮೋದಿಯವರನ್ನು ಕೋರಿತ್ತು.
ಮೋದಿಯವರ ಸಕಾಲಿಕ ಮಧ್ಯಪ್ರವೇಶದಿಂದ ಭೀಕರ ಯುದ್ಧವೊಂದು ತಪ್ಪುವಂತಾಯಿತು. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಸಮ್ಮೇಳನದಲ್ಲಿ ‘ಇದು ಯುದ್ಧಮಾಡುವ ಕಾಲವಲ್ಲ’ ಎಂದು ಮೋದಿಯವರು ಹೇಳಿದ್ದ ಕಿವಿಮಾತಿಗೆ ಪುಟಿನ್ ಸಕಾರಾತ್ಮಕ ವಾಗಿ ಮತ್ತು ಗೌರವಯುತವಾಗಿ ಸ್ಪಂದಿಸಿ ದ್ದರು. ಇಲ್ಲಿ ಇನ್ನೊಂದು ಸಂಗತಿಯನ್ನು ಉಲ್ಲೇಖಿಸಬೇಕು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ತಾರಕಕ್ಕೇರಿದಾಗ, ವಿಶ್ವದ ಮಿಕ್ಕ ರಾಷ್ಟ್ರಗಳು ಸುಮ್ಮನೆ ತಮಾಷೆ ನೋಡುತ್ತ ಕುಳಿತಿದ್ದರೆ, ಭಾರತ ಮಾತ್ರವೇ ಈ ಸಮರವನ್ನು ತಡೆಯುವ ಅಥವಾ ತೀವ್ರತೆಯನ್ನು ತಗ್ಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದು. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ‘ಇಂಡಿಯಾ ಟುಡೆ’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ‘ಎರಡೂ ದೇಶಗಳ ನಡುವಿನ ಉದ್ವೇಗವನ್ನು ಕಡಿಮೆ ಮಾಡಲು ನಾವು ನಿರಂತರವಾಗಿ ಯತ್ನಿಸುತ್ತಿದ್ದೆವು’ ಎಂದು ಹೇಳಿರುವುದು ಈ ಮಾತಿಗೆ ಪುಷ್ಟಿನೀಡುತ್ತದೆ.
ಅಮೆರಿಕದ ಕಾಂಗ್ರೆಸ್‌ಮನ್ ರಿಚ್ ಮೆಕ್ ಕೋರ್ಮಿಕ್ ಅವರು, ಅಣುಯುದ್ಧದಿಂದ ಆಗುತ್ತಿದ್ದ ಜಾಗತಿಕ ವಿಪತ್ತನ್ನು ತಪ್ಪಿಸಿದ್ದಕ್ಕೆ ಭಾರತವನ್ನು ಹೊಗಳಿ ದ್ದಾರೆ. ಭಾರತದ ಲೋಕಸಭಾ ಚುನಾವಣೆಯ ಬಳಿಕ ತಮ್ಮ ದೇಶಗಳಿಗೆ ಭೇಟಿ ನೀಡುವಂತೆ ರಷ್ಯಾ ಮತ್ತು ಉಕ್ರೇನ್‌ಗಳ ಅಧ್ಯಕ್ಷರಿಬ್ಬರೂ ಮೋದಿ ಯವರನ್ನು ಆಹ್ವಾನಿಸಿರುವುದು, ರಷ್ಯಾ-ಉಕ್ರೇನ್ ಸಂಘರ್ಷವನ್ನು ತಿಳಿಗೊಳಿಸುವಲ್ಲಿ ಭಾರತವು ವಹಿಸಿದ ಪಾತ್ರಕ್ಕಿರುವ ಮಹತ್ವವನ್ನು ತೋರಿಸುತ್ತದೆ. ಜಾಗತಿಕ ಸಮಾವೇಶಗಳು ನಡೆದಾಗೆಲ್ಲ ಮೋದಿಯವರು ‘ದಕ್ಷಿಣ ಜಗತ್ತಿನ’ (ಗ್ಲೋಬಲ್ ಸೌತ್) ಬಗ್ಗೆ ಪ್ರಸ್ತಾಪಿಸುತ್ತಲೇ ಇರುತ್ತಾರೆ. ದಕ್ಷಿಣಾರ್ಧ ಗೋಳದಲ್ಲಿ ಬರುವ ದಕ್ಷಿಣ ಅಮೆರಿಕ ಖಂಡದ ಮೆಕ್ಸಿಕೋ, ಬ್ರೆಜಿಲ್, ಆಫ್ರಿಕಾ ಖಂಡದ ದೇಶಗಳು, ಏಷ್ಯಾ ಖಂಡದ ದೇಶಗಳನ್ನು ‘ಗ್ಲೋಬಲ್ ಸೌತ್’ ಎಂದು ಕರೆಯಲಾಗುತ್ತದೆ. ವಿಶ್ವಸಂಸ್ಥೆ, ಜಿ-೨೦ರಂಥ ಜಾಗತಿಕ ಸಂಸ್ಥೆ/ಸಂಘಟನೆಗಳಲ್ಲಿ ಈ ಖಂಡಗಳ ದೇಶಗಳಿಗೆ ಪ್ರಾತಿನಿಧ್ಯ ಕಡಿಮೆ. ಜಾಗತಿಕ ಸಂಘಟನೆಗಳಲ್ಲಿ ‘ಗ್ಲೋಬಲ್ ಸೌತ್’ ವಲಯಕ್ಕೆ ಪ್ರಾತಿನಿಧ್ಯ ಕೊಡಿಸುವ ನಿಟ್ಟಿನಲ್ಲಿ ಭಾರತ ಪ್ರಯತ್ನಿಸುತ್ತಲೇ ಇದೆ.
೨೦೨೩ರಲ್ಲಿ, ಜಿ-೨೦ ಶೃಂಗಸಭೆಯ ಅಧ್ಯಕ್ಷತೆಯ ಅವಕಾಶ ಲಭಿಸಿದ್ದಾಗ ಭಾರತವು, ಆಫ್ರಿಕಾ ದೇಶಗಳ ಒಕ್ಕೂಟಕ್ಕೆ ಜಿ-೨೦ ಒಕ್ಕೂಟದಲ್ಲಿ ಸದಸ್ಯ ಸ್ಥಾನ
ಒದಗಿಸಲು ಪ್ರಯತ್ನಿಸಿ ಕೊನೆಗೆ ಯಶಸ್ವಿಯೂ ಆಯಿತು. ಭಯೋತ್ಪಾದನೆಯಂತೆ ಜಾಗತಿಕ ತಾಪಮಾನ ಏರಿಕೆ ಕೂಡ ಜಗತ್ತನ್ನು ವಿನಾಶದಂಚಿಗೆ ತಳ್ಳುತ್ತಿರುವ ಅನಪೇಕ್ಷಿತ ಬೆಳವಣಿಗೆಯಾಗಿದೆ. ಪ್ಯಾರಿಸ್ ಒಪ್ಪಂದದ ಅನುಸಾರ ಜಾಗತಿಕ ತಾಪಮಾನದ ಹೆಚ್ಚಳವನ್ನು ತಡೆಯುವಲ್ಲಿ ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟ ಸೇರಿದಂತೆ ಬಹುತೇಕ ದೇಶಗಳು ಸೋತಿವೆ, ಉದ್ದೇಶಿತ ಗುರಿಸಾಧನೆಯಲ್ಲಿ ವಿಫಲವಾಗಿವೆ.
ಜಿ-೨೦ ರಾಷ್ಟ್ರಗಳ ಪೈಕಿ ಭಾರತವಷ್ಟೇ ಈ ಒಪ್ಪಂದದ ಭರವಸೆಗಳನ್ನೆಲ್ಲಾ ಪೂರೈಸಿದೆ. ೨೦೩೦ರ ಒಳಗಾಗಿ, ದೇಶಕ್ಕೆ ಅಗತ್ಯವಿರುವ ಶೇ.೫೦ರಷ್ಟು ಇಂಧನ-ಶಕ್ತಿಯನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯವುದು ಸೇರಿದಂತೆ ಹಲವು ಗುರಿಗಳನ್ನು ಸಾಧಿಸುವೆಡೆಗೆ ಭಾರತ ದಾಪುಗಾಲು
ಹಾಕುತ್ತಿದೆ. ಇದರ ಅಂಗವಾಗಿ, ೫೦೦ ಗಿಗಾವ್ಯಾಟ್ ವಿದ್ಯುತ್ತನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಿದೆ. ಈ ಎಲ್ಲಾ ನಡೆಗಳ ಮೂಲಕ ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು ೧೦೦ ಕೋಟಿ ಟನ್ ಗಳಷ್ಟು ಕಡಿಮೆ ಮಾಡಿಕೊಂಡು, ಜಾಗತಿಕ ತಾಪಮಾನದ ಹೆಚ್ಚಳದ ತಡೆಗೆ ತನ್ನ ಕೊಡುಗೆಯನ್ನು ನೀಡಲಿದೆ.
‘ನೆರೆ ಹೊರೆಗೆ ಮೊದಲ ಆದ್ಯತೆ’ ಎಂಬ ತತ್ವವನ್ನು ಪರಿಪಾಲಿಸುತ್ತಿರುವ ಭಾರತವು, ಸಂಕಷ್ಟಕ್ಕೆ ಸಿಲುಕಿರುವ ನೆರೆಹೊರೆಯ ದೇಶಗಳಿಗೆ ಸದಾ ಸಹಾಯ ಹಸ್ತವನ್ನು ಚಾಚುತ್ತದೆ. ಕಷ್ಟದಲ್ಲಿರುವ ದೇಶಗಳಿಗೆ ನೆರವಾಗಲೆಂದು ಈ ವರ್ಷದ ಬಜೆಟ್‌ನಲ್ಲಿ ೨೨,೧೫೪ ಕೋಟಿ ರುಪಾಯಿಗಳನ್ನು ತೆಗೆದಿರಿಸ ಲಾಗಿದೆ. ನಮ್ಮ ವಿಶ್ವಾಸಾರ್ಹ ನೆರೆರಾಷ್ಟ್ರ ಭೂತಾನ್‌ಗೆ ೧೦ ಸಾವಿರ ಕೋಟಿ ರು. ಗಳ ನೆರವನ್ನು ಘೋಷಿಸಲಾಗಿದೆ. ಎರಡು ವರ್ಷಗಳ ಹಿಂದೆ ತೀವ್ರ ಆರ್ಥಿಕ ಕುಸಿತವನ್ನು ಕಂಡಿದ್ದ ಶ್ರೀಲಂಕಾಗೆ ವಿಶ್ವ ಬ್ಯಾಂಕ್, ಚೀನಾ, ಅಮೆರಿಕಗಳು ಯಾವುದೇ ನೆರವು ನೀಡದಿದ್ದುದನ್ನು ಕಂಡ ಭಾರತ, ೪ ಶತಕೋಟಿ ಡಾಲರ್ ನಷ್ಟು (ಸುಮಾರು ೩೨,೮೦೦ ಕೋಟಿ ರುಪಾಯಿ) ನೆರವು ನೀಡಿ ಶ್ರೀಲಂಕಾವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರುಮಾಡಿತು.
ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲದೆ ಆಫ್ರಿಕಾದ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೂ ಭಾರತ ಆರ್ಥಿಕ ನೆರವು ನೀಡುತ್ತಿದೆ. ಕೋವಿಡ್ ಪಿಡುಗು ಎರಗಿದಾಗ ಅಮೆರಿಕ, ಚೀನಾ, ಐರೋಪ್ಯ ಒಕ್ಕೂಟಗಳಂಥ ಮುಂದುವರಿದ ದೇಶಗಳೇ ಕೈ ಚೆಲ್ಲಿದಾಗ, ೯೮ಕ್ಕೂ ಹೆಚ್ಚಿನ ದೇಶಗಳಿಗೆ ಭಾರತವು ಕೋವಿಡ್
ಲಸಿಕೆಯನ್ನು ಪೂರೈಸಿತ್ತು. ಭಾರತವಿಂದು ತನ್ನ ಗಡಿ ಹಾಗೂ ಜನರ ರಕ್ಷಣೆಗೆ ಇನ್ನೊಂದು ದೇಶವನ್ನು ಅವಲಂಬಿಸಿಲ್ಲ. ಭಾರತಕ್ಕೆ ಪಾಕಿಸ್ತಾನ ವೀಗ ಲೆಕ್ಕಕ್ಕೇ ಇಲ್ಲ. ಗಡಿದಾಟಿ ಒಳ ನುಗ್ಗುವ ಚೀನಾದ ದುಸ್ಸಾಹಸಗಳನ್ನು ಭಾರತ ಮಟ್ಟಹಾಕಿ ಆಗಿದೆ. ತನ್ನ ಶತ್ರುಗಳು ಯಾವ ದೇಶದಲ್ಲಿ ಎಲ್ಲೇ ಅಡಗಿರಲಿ,
ಅಲ್ಲಿಗೇ ಹೋಗಿ ಅವರನ್ನು ದಮನಿಸುವ ಛಾತಿಯನ್ನು ಭಾರತ ಬೆಳೆಸಿ ಕೊಂಡಿದೆ. ಮಿಲಿಟರಿ ವಿಭಾಗದಲ್ಲೂ ಬಲಿಷ್ಠ ವಾಗುತ್ತಿರುವ ಭಾರತ, ಹೊರಗಿನ ಯಾವುದೇ ಬೆದರಿಕೆಗೆ ಬಗ್ಗುತ್ತಿಲ್ಲ; ವಿದೇ ಶಾಂಗ ವ್ಯವಹಾರಗಳಲ್ಲೂ ಚಾಣಾಕ್ಷತೆಯಿಂದ ವರ್ತಿಸುತ್ತ ‘ಸತ್ಯದ ಬಾಂಬು’ಗಳನ್ನು ಸಿಡಿಸುವ ಮೂಲಕ ಎದುರಾಳಿಗಳ ಬಾಯಿಮುಚ್ಚಿಸುತ್ತಿದೆ.
ದೇಶವೊಂದು ಸ್ವತಃ ಬಲಿಷ್ಠವಾಗದೆ ಇನ್ನೊಂದು ದೇಶದಿಂದ ಗೌರವವನ್ನು ಪಡೆಯಲಾರದು. ಅಂತೆಯೇ ಬಲಿಷ್ಠವಾಗಿರುವ ಭಾರತವು ಜಾಗತಿಕ ಮನ್ನಣೆಗೆ ಪಾತ್ರವಾಗುತ್ತಿದೆ. ಭಾರತದಲ್ಲಿ ಕಾಣಬರುತ್ತಿರುವ ಸಮರ್ಥ ಹಾಗೂ ನಿರ್ಣಾಯಕ ನಾಯಕತ್ವ, ಸ್ಥಿರ ಸರಕಾರ, ಸುಸ್ಥಿರ ಆರ್ಥಿಕ ಅಭಿವೃದ್ಧಿ,
ಸಕಾಲಿಕ ಮತ್ತು ಕುಶಲ ವಿದೇಶಾಂಗ ನೀತಿ ಮೊದಲಾದ ವಿಚಾರಗಳು ಜಾಗತಿಕ ಮಟ್ಟದಲ್ಲಿ ನಮಗೆ ಪ್ರಾಧಾನ್ಯವನ್ನು ತಂದುಕೊಟ್ಟಿವೆ. ಒಂದೆಡೆ, ಅಭಿವೃದ್ಧಿ ಹೊಂದಿದ ಅಮೆರಿಕವು ಜಗತ್ತೆಲ್ಲಾ ತನ್ನ ತಾಳಕ್ಕೆ ಕುಣಿಯ ಬೇಕೆಂದು ಬಯಸುತ್ತಿದ್ದರೆ, ಮತ್ತೊಂದೆಡೆ ಜಾಗತಿಕವಾಗಿ ೨ನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿರುವ ಚೀನಾ ದೇಶವು ಇತರ ರಾಷ್ಟ್ರಗಳನ್ನು ತನ್ನ ಸಾಲದ ಬಲೆಯಲ್ಲಿ ಸಿಲುಕಿಸಿ ಅಡಿಯಾಳುಗಳನ್ನಾಗಿಸಿಕೊಂಡಿದೆ.
ಆದರೆ, ನವಸಂಕ್ರಮಣ ವನ್ನು ಕಾಣುತ್ತಿರುವ ಭಾರತವು ವಿಶ್ವಕ್ಕೇ ರಕ್ಷಾಭರಣವಾಗಿ ರೂಪುಗೊಳ್ಳುತ್ತಿದೆ.
(ಲೇಖಕರು ಹವ್ಯಾಸಿ ಬರಹಗಾರರು)