Saturday, 23rd November 2024

ಸಂಕ್ರಾಂತಿಯಂದು ಎಳ್ಳಿನ ಬಗ್ಗೆಯೇ ಒಂದಿಷ್ಟು ಒಳ್ಳೆಯ ಮಾತು

ತಿಳಿರು ತೋರಣ

srivathsajoshi@yahoo.com

ಅಲಿಬಾಬಾ ಮತ್ತು ನಲವತ್ತು ಕಳ್ಳರ ಕಥೆ ನಿಮಗೆ ಗೊತ್ತಿರಬಹುದು. ಅದರಲ್ಲಿ ಕಳ್ಳರು ಒಂದು ಗುಹೆಯಲ್ಲಿ ನಿಧಿ ಬಚ್ಚಿಟ್ಟಿರು ತ್ತಾರೆ. ಆ ಗುಹೆಯ ಬಾಗಿಲು ತೆರೆಯಲು ‘ಓಪನ್ ಸೆಸಮೇ’ ಎಂಬ ರಹಸ್ಯ ಪದ ಕೀಲಿಕೈ. ಅಥವಾ, ಪಾಸ್‌ವರ್ಡ್ ಇದ್ದಹಾಗೆ. ಓಪನ್ ಸೆಸಮೇ ಎಂದು ಹೇಳಿದರೆ ಮಾತ್ರ ಗುಹೆಯ ಬಾಗಿಲು ತೆರೆಯು ವುದು.

ಕ್ಲೋಸ್ ಸೆಸಮೇ ಎಂದೊಡನೆ ಗುಹೆಯ ಬಾಗಿಲು ಮುಚ್ಚುವುದು. ಒಮ್ಮೆ ಕಳ್ಳನೊಬ್ಬನು ಆ ರೀತಿ ಓಪನ್ ಸೆಸಮೇ ಎಂದು ಹೇಳಿ ಗುಹೆಯ ಬಾಗಿಲು ತೆರೆಯುವುದನ್ನು ಅಲಿಬಾಬಾ ಗಮನಿಸುತ್ತಾನೆ. ಕಳ್ಳರಿಲ್ಲದ ವೇಳೆಯಲ್ಲಿ ಕುತೂಹಲದಿಂದ ತಾನೂ ಒಮ್ಮೆ ಆ ಪಾಸ್‌ವರ್ಡ್ ಬಳಸಿ ಗುಹೆಯೊಳಗೆ ಹೊಕ್ಕು ಒಂದೇಒಂದು ಚಿನ್ನದ ನಾಣ್ಯ ತೆಗೆದುಕೊಂಡು ಹೊರಬರುತ್ತಾನೆ.

ಮುಂದೆ ಅಲಿಬಾಬನ ಅಣ್ಣ ಕಡುಲೋಭಿ ಕಾಸಿಂ, ಅಲಿಬಾಬನ ಮೇಲೆ ಒತ್ತಡ ಹೇರಿ ಪಾಸ್‌ವರ್ಡ್ ತಿಳಿದುಕೊಂಡು ನಿಧಿಯ ಆಸೆಯಿಂದ ಗುಹೆಯ ಬಳಿಗೆ ಹೋಗುತ್ತಾನೆ. ನಿಧಿಯನ್ನೆಲ್ಲ ಹೊತ್ತುಕೊಂಡು ಬರಲು ಒಂದು ಕತ್ತೆಯನ್ನೂ ಒಯ್ಯುತ್ತಾನೆ. ಓಪನ್ ಸೆಸಮೇ ಎಂದಾಗ ಗುಹೆಯ ಬಾಗಿಲು ತೆರೆಯುತ್ತದೆ. ಒಳಗೆ ಹೊಕ್ಕಮೇಲೆ ಕ್ಲೋಸ್ ಸೆಸಮೇ ಎಂದು ಹೇಳಿ ಬಾಗಿಲನ್ನು ಭದ್ರವಾಗಿ ಮುಚ್ಚಿಕೊಳ್ಳುತ್ತಾನೆ. ಗುಹೆಯೊಳಗೆ ಅಷ್ಟು ದೊಡ್ಡ ಕೊಪ್ಪರಿಗೆಯೆಂಬಂತೆ ನಿಧಿ ಸಿಕ್ಕಿದ ಸಂತೋಷ ದಿಂದಲೋ ಏನೋ ಹಿಂದಿರುಗಬೇಕೆನ್ನುವಾಗ ಅವನಿಗೆ ಪಾಸ್‌ವರ್ಡ್ ಮರೆತುಹೋಗುತ್ತದೆ.

ಸೆಸಮೇ ಒಂದನ್ನು ಬಿಟ್ಟು ಬೇರೆಲ್ಲ ಧಾನ್ಯಗಳ ಹೆಸರನ್ನು ಒಂದೊಂದಾಗಿ ಪ್ರಯತ್ನಿಸುತ್ತಾನೆ. ಕೊನೆಗೂ ನೆನಪಾಗುವುದಿಲ್ಲ. ಗುಹೆಯಲ್ಲೇ ಬಂದಿಯಾಗಿ ಆಮೇಲೆ ಕಳ್ಳರ ಕೈಗೆ ಸಿಕ್ಕಿ ಸಾಯುತ್ತಾನೆ. ಆ ಬಳಿಕ ಕಾಸಿಂನ ಸೇವಕಿ ಮುರ್ಜಾನಾಳ ಸಮ ಯೋಚಿತ ಚಾತುರ್ಯದಿಂದಾಗಿ ಆ ಕಳ್ಳರೆಲ್ಲ ಒಬ್ಬೊಬ್ಬರಾಗಿ ಸಾಯುತ್ತಾರೆ. ಮಾಡಿದ ಸಹಾಯಕ್ಕೆ ಬಹುಮಾನ ವೆಂಬಂತೆ ಅಲಿಬಾಬನ ಮಗನೊಟ್ಟಿಗೆ ಆಕೆಯ ಮದುವೆಯಾಗುತ್ತದೆ. ಕೊನೆಗೆ ಅಲಿಬಾಬಾ ಒಬ್ಬನಿಗೇ ನಿಧಿ ಇರುವ ಗುಹೆಯ ಪಾಸ್‌ ವರ್ಡ್ ‘ಓಪನ್ ಸೆಸಮೇ’ ಗೊತ್ತಿರುವುದು ಅಂತಾಗುತ್ತದೆ. ಇದಿಷ್ಟು ಕಥೆ.

ಕಥೆಯನ್ನಿಲ್ಲಿ ಉಲ್ಲೇಖಿಸುವಾಗ ನಾನು ಇದರೊಳಗಿನ ಬೇರೆಲ್ಲ ರೋಚಕ ವಿವರಗಳನ್ನು ಬೇಕಂತಲೇ ಓಡಿಸಿದ್ದೇನೆ. ಓಪನ್
ಸೆಸಮೇ ರಹಸ್ಯ ಪದಕ್ಕೆ ಮಾತ್ರ ಪ್ರಾಮುಖ್ಯ ಕೊಟ್ಟಿದ್ದೇನೆ. ಅಲ್ಲದೇ, ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು
ಸಂಬಂಧ? ಎಂಬಂತೆ, ಸಂಕ್ರಾಂತಿಗೂ ಅಲಿಬಾಬನಿಗೂ ಏನು ಸಂಬಂಧ? ಅಂತ ನೀವು ಹುಬ್ಬೇರಿಸುವ ಮೊದಲೇ ‘ಓಪನ್
ಸೆಸಮೇ’ ರಹಸ್ಯ ಪದದತ್ತ ನಿಮ್ಮ ಗಮನ ಸೆಳೆಯುವುದು ನನ್ನ ಉದ್ದೇಶ. ಇಂಗ್ಲಿಷ್‌ನಲ್ಲಿ ಸೆಸಮೇ ಅಂದರೆ ಎಳ್ಳು.

ಓಹೋ! ಸಂಕ್ರಾಂತಿಯ ಎಳ್ಳಿಗೆ ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮದ ಇಂಟ್ರೊ ಬೇಕಿತ್ತೇ ಎಂದು ನೀವಂದುಕೊಂಡರೆ ತಪ್ಪಿದಿರಿ. ಇದು ಬರೀ ಸಂಕ್ರಾಂತಿ ಎಳ್ಳಿನ ವಿಚಾರ ಅಲ್ಲ. ಅಲಿಬಾಬಾ ಮತ್ತು ನಲವತ್ತು ಕಳ್ಳರ ಕಥೆಯಲ್ಲಿ ಆ ರಹಸ್ಯ ಪದ ಓಪನ್ ‘ಸೆಸಮೇ’ ಎಂದೇ ಏಕಿತ್ತು? ಓಪನ್ ಮಸ್ಟರ್ಡ್ ಅಂತಲೋ, ಓಪನ್ ಮಿಲ್ಲೆಟ್ ಅಂತಲೋ ಏಕಿರಲಿಲ್ಲ? ರೈಸ್, ವ್ಹೀಟ್, ಬಾರ್ಲಿ,
ಓಟ್ಸ್… ಅಥವಾ ಈಗಿನ ಫ್ಯಾಷನ್ ಎನಿಸಿರುವ ಕ್ವಿನ್ವಾ ಮುಂತಾದವು ಯಾವುವೂ ಆ ಕಳ್ಳರಿಗೇಕೆ ಹೊಳೆಯಲಿಲ್ಲ? ಸೆಸಮೇ ಒಂದು ಧಾನ್ಯ.

ಗಿಡದಲ್ಲಿ ಬೆಳೆಯುವ ಕೋಡು(ಬೀಜಕೋಶ) ಮಾಗಿದ ಮೇಲೆ ಬಿರಿಯುತ್ತದೆ. ಒಳಗಿಂದ ಧಾನ್ಯ ಸಿಗುತ್ತದೆ. ಕೋಡು ಬಿರಿದಾಗ ಒಳಗೆ ಧಾನ್ಯ ಸಿಗುವುದನ್ನೇ ಗುಹೆಯ ಬಾಗಿಲು ತೆರೆದಾಗ ನಿಧಿ ಕಂಡುಬರುವುದಕ್ಕೆ ಹೋಲಿಸಿದ್ದರಿಂದ ಓಪನ್ ಸೆಸಮೇ
ನುಡಿಗಟ್ಟು ಬಂದದ್ದಿರಬಹುದು ಅಂತ ಕೆಲವರ ಅಭಿಪ್ರಾಯ. ಆದರೆ ಸೆಸಮೇಯಂತೆಯೇ ಕೋಡಿನಲ್ಲಿ ಬೆಳೆಯುವ ಬೇರೆ
ಧಾನ್ಯಗಳೂ ಇವೆಯಲ್ಲ? ಹಾಗಾಗಿ ಆ ಥಿಯರಿ ಅಷ್ಟೇನೂ ಸಮಂಜಸವೆನಿಸುವುದಿಲ್ಲ.

ಇನ್ನೊಂದು ಥಿಯರಿಯ ಪ್ರಕಾರ ಹೀಬ್ರೂ ಭಾಷೆಯಲ್ಲಿ ‘ಸೆಮ್‌ನೇಮ್’ ಅಂದರೆ ದೇವರು; ಯಹೂದ್ಯರು ಪಾಲಿಸುವ ಕಬ್ಬಾಲಾ ಆಚಾರದ ಗ್ರಂಥದಲ್ಲಿ ‘ಶೆಮ್-ಶಮಯಿಮ್’ ಎಂಬ ಪದಕ್ಕೆ ಸ್ವರ್ಗ ಎಂಬ ಅರ್ಥವಿದೆ; ಆದ್ದರಿಂದ ಗುಹೆ ತೆರೆದಾಗ ನಿಽಯೆಂಬ ಸ್ವರ್ಗ ಅಥವಾ ದೇವರು ಕಾಣಿಸುವುದಕ್ಕೆ ಹೋಲಿಸುತ್ತ ‘ಸೆಸಮೇ’ ಬಂದಿರಬಹುದು ಎಂದು ಕೆಲವರ ಅಭಿಪ್ರಾಯ. ಬ್ಯಾಬಿ ಲೋನಿಯನ್ ಇಂದ್ರಜಾಲದಲ್ಲಿ ಸೆಸಮೇ ಆಯಿಲ್ ಬಳಸುತ್ತಿದ್ದರಾದ್ದರಿಂದ ಗುಹೆಯ ಬಾಗಿಲು ತೆರೆದಾಗ ನಿಧಿ ಕಂಡುಬರುವ ಮ್ಯಾಜಿಕ್‌ಗೆ ‘ಸೆಸಮೇ’ ಬಂದಿರಬಹುದು ಎಂದು ಹೇಳುವವರೂ ಇದ್ದಾರೆ.

ಅಂದಹಾಗೆ ಅಲಿಬಾಬ ಮತ್ತು ನಲವತ್ತು ಕಳ್ಳರ ಕಥೆ ಹುಟ್ಟಿಕೊಂಡಿದ್ದು ಕ್ರಿಸ್ತಶಕ ೧೮ನೆಯ ಶತಮಾನದ ಆರಂಭದಲ್ಲಿ,
ಫ್ರೆಂಚ್ ಅನುವಾದಕ ಆಂಟೊನಿ ಗ್ಯಾಲಂಡ್‌ನಿಂದ ಎಂಬುದನ್ನು ಗಮನಿಸಬೇಕು. ಅದಕ್ಕೆ ಮೊದಲೇ ಮಧ್ಯಪ್ರಾಚ್ಯದವರಿಗೆ ಒಂದು ಧಾನ್ಯವಾಗಿ ಸೆಸಮೇ(ಎಳ್ಳು) ಗೊತ್ತಿದ್ದಿರಬೇಕು ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ಎಳ್ಳು ಭಾರತದಿಂದ ಸಿಂಧೂ ಕಣಿವೆಯ ಮೂಲಕ ಈಜಿಪ್ಟ್ ಮತ್ತು ಅರೇಬಿಯನ್ ಪ್ರದೇಶಗಳಿಗೆ ಹೋಯಿತು ಎಂಬೊಂದು ಥಿಯರಿಯೂ ಇದೆ.

ಎಳ್ಳಿನಂತೆಯೇ ಹತ್ತಿ ಮತ್ತು ಕಬ್ಬು ಸಹ. ಇಕ್ಷ್ವಾಕು ವಂಶದ ಹೆಸರಿಗೂ ಇಕ್ಷುದಂಡಕ್ಕೂ (ಕಬ್ಬಿನಜಲ್ಲೆ) ತಳುಕುಹಾಕಿ ಕಬ್ಬಿನ ಭಾರತೀಯ ಮೂಲವನ್ನು ವ್ಯಾಖ್ಯಾನಿಸುವವರೂ ಇದ್ದಾರೆ. ಇರಲಿ, ಎಳ್ಳು ಭಾರತದಿಂದ ಅರೇಬಿಯನ್ ಪ್ರದೇಶಗಳಿಗೆ ಹೋದದ್ದಾದರೆ, ಎಳ್ಳಿನ ಮಹತ್ತ್ವವೂ- ಅದೊಂದು ಅಮರತ್ವದ ಧಾನ್ಯ, ಸತ್ತವರನ್ನು ಸ್ವರ್ಗಕ್ಕೆ ತಲುಪಿಸುವುದಕ್ಕೆ ಸಾಧನ ವಾಗಿ, ಮತ್ತು ಸ್ವರ್ಗದ ಬಾಗಿಲಿಗೆ ಕೀಲಿಕೈ ಇದ್ದಂತೆ ಎಂಬ ನಂಬಿಕೆಯೂ-ಭಾರತದಿಂದಲೇ ಅರೇಬಿಯನ್ ಪ್ರದೇಶಗಳಿಗೆ ಹೋಗಿರಬಾರದೇಕೆ? ಎಳ್ಳು ಸ್ವರ್ಗದ ಬಾಗಿಲನ್ನು ತೆರೆಯಬಲ್ಲದಾದರೆ ನಿಧಿಯಿರುವ ಗುಹೆಯ ಬಾಗಿಲನ್ನೂ ಆರಾಮಾಗಿ ತೆರೆಯಬಹುದಲ್ಲ? ಅಲ್ಲಿಗೆ, ‘ಓಪನ್ ಸೆಸಮೇ’ ರಹಸ್ಯ ಪದದ ಮೂಲ ಯಾವುದಂತಾಯ್ತು!? ಸನಾತನ ಭಾರತೀಯ ಸಂಸ್ಕೃತಿಯಲ್ಲಿ, ವೇದಗಳಲ್ಲೂ ಬಹುಮಾನ್ಯತೆ ಪಡೆದು ಉಲ್ಲೇಖಗೊಂಡಿರುವ ಧಾನ್ಯ ಎಳ್ಳು.

ಅದು ಹುಟ್ಟಿದ್ದು ವಿಷ್ಣುವಿನ ಸ್ವೇದಬಿಂದುಗಳಿಂದ ಅಂತೆ. ಅರೆರೆ! ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ ಶ್ರೀಮನ್ನಾರಾ ಯಣನೂ ಬೆವರುವುದುಂಟೇ!? ಹೌದು, ಪ್ರಹ್ಲಾದನಿಗೆ ಎಲ್ಲಿಲ್ಲದ ಕಾಟ ಕೊಡುತ್ತಿದ್ದ ಹಿರಣ್ಯಕಶಿಪುವಿನ ಮೇಲೆ ಸಿಟ್ಟಿನಿಂದ ಒಮ್ಮೆ ಶ್ರೀಹರಿಯು ಬೆವತಿದ್ದನೆಂದು ಒಂದು ಕಥೆಯಿದೆ; ಸಮುದ್ರಮಥನದಲ್ಲಿ ಕೂರ್ಮನಾಗಿ ಮಂದರಗಿರಿಯನ್ನು ಹೊತ್ತು ಕೊಂಡಾಗ ಒಮ್ಮೆ ಬೆವತಿದ್ದನೆಂದು ಇನ್ನೊಂದು ಕಥೆಯೂ ಇದೆ.

ಅಂತೂ ಹರಿಯ ಬೆವರ ಹನಿಗಳೇ ‘ತಿಲ’(ಎಳ್ಳು) ಎಂದು ನಂಬಿಕೆ. ‘ಮಮ ಸ್ವೇದಸಮದ್ಭೂತಾ ಯತಸ್ತೇ ಪಾವನಾಸ್ತಿಲಾಃ|
ಅಸುರಾ ದಾನವಾ ದೈತ್ಯಾ ವಿದ್ರವಂತಿ ತಿಲೈಸ್ತತಃ||’ (ನನ್ನ ಬೆವರಿನಿಂದ ಎಳ್ಳು ಹುಟ್ಟಿದ್ದು. ಆದ್ದರಿಂದ ಅದು ತುಂಬ
ಪವಿತ್ರವಾದದ್ದು. ಎಳ್ಳನ್ನು ಕಂಡರೆ ಅಸುರರು, ದಾನವರು, ದೈತ್ಯರು ಎಲ್ಲ ಹೆದರಿ ಓಡಿಹೋಗುತ್ತಾರೆ) ಎಂಬ ಶ್ಲೋಕವನ್ನು
ಗರುಡಪುರಾಣದಲ್ಲಿ ಶ್ರೀಹರಿಯೇ ಹೇಳಿದ್ದಾನೆಂದು ಇದೆ.

ಎಳ್ಳಿನಂತೆಯೇ ದರ್ಭೆ ಮತ್ತು ತುಳಸಿಯ ಶ್ರೇಷ್ಠತೆಯ ಬಗ್ಗೆಯೂ- ‘ತಿಲಾಃ ಪವಿತ್ರಾಸ್ತ್ರಿವಿಧಾ ದರ್ಭಾಶ್ಚ ತುಲಸೀರಪಿ’
ಎಂದಿದೆ. ಇರಲಿ, ನಮಗಿಲ್ಲಿ ಸದ್ಯಕ್ಕೆ ಎಳ್ಳಿನ ವಿಚಾರ ಮಾತ್ರ ಮುಖ್ಯ. ನಾನು ಆ ಗ್ರಂಥಗಳನ್ನೆಲ್ಲ ಓದಿದವನಲ್ಲ, ಆದರೆ ಎಳ್ಳಿನ
ಉಲ್ಲೇಖ ಬೌಧಾಯನ ಧರ್ಮಸೂತ್ರ, ಗೃಹ್ಯ ಸೂತ್ರ, ಶಂಖಸ್ಮೃತಿ ಮುಂತಾದ ಪವಿತ್ರ ಗ್ರಂಥಗಳಲ್ಲಿ, ಕೊನೆಗೆ ಪಾಣಿನಿಯ ಅಷ್ಟಾಧ್ಯಾಯಿಯಲ್ಲೂ ‘ಖಲಯವಮಾಷತಿಲವೃಷಬ್ರಹ್ಮಣಶ್ಚ’ ಮುಂತಾದ ಸೂತ್ರಗಳಲ್ಲಿ ಬರುತ್ತದೆಂಬ ವಿಚಾರ ವಿದ್ವಾಂಸರಿಗೆ ಗೊತ್ತಿರುತ್ತದೆ.

ಎಳ್ಳೆಣ್ಣೆಯನ್ನು ಜಾಡಿಗಳಲ್ಲಿ ಶೇಖರಿಸಿಡುವುದು, ಮನುಷ್ಯದೇಹಕ್ಕೆ ಎಳ್ಳೆಣ್ಣೆ ಪೂಸಿಡುವುದು ಇತ್ಯಾದಿ ಅಥರ್ವವೇದದಲ್ಲೂ ಯಜುರ್ವೇದದಲ್ಲೂ ಪ್ರಸ್ತಾವವಾಗಿದೆಯಂತೆ. ಔರ್ಧ್ವದೈಹಿಕ ಕ್ರಿಯೆಗಳಲ್ಲಂತೂ ಎಳ್ಳು ಬೇಕೇಬೇಕು. ತಿಲಾಂಜಲಿ, ತಿಲ ತರ್ಪಣ, ತಿಲದಾನ… ಮೃತನ ಆತ್ಮವನ್ನು ಸ್ವರ್ಗಕ್ಕೊಯ್ಯುವುದಕ್ಕೆ ‘ತಿಲ’ವೇ ಸಾಧನ. ಸ್ವರ್ಗದ ಪಾಸ್‌ವರ್ಡ್ ಎಳ್ಳಿನಲ್ಲಿರು ವುದಕ್ಕೆ ಪೂರಕವಾಗಿ ‘ಷಟ್‌ತಿಲಾ ಏಕಾದಶಿ’ ಆಚರಣೆ ಮತ್ತು ಅದರ ವ್ರತಕಥೆ ಒದಗಿಬರುತ್ತದೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಏಕಾದಶಿಗೆ ಷಟ್ ತಿಲಾ ಏಕಾದಶಿ ಎಂದು ಹೆಸರು.

ವೈಕುಂಠದ ದ್ವಾರ ತೆಗೆಯಲಾಗುತ್ತದೆ ಎಂದು ನಂಬಲಾಗುವ ‘ವೈಕುಂಠ ದ್ವಾದಶಿ’ ಆದಮೇಲೆ ಬರುವ ಮೊದಲ ಏಕಾದಶಿ ಅದು (ಈವರ್ಷ ನಾಡಿದ್ದು ಬುಧವಾರ ಜನವರಿ ೧೮ರಂದು). ಅಂದು ಆರು ಬಗೆಯಲ್ಲಿ ಎಳ್ಳನ್ನು ಉಪಯೋಗಿಸಬೇಕಂತೆ. ಅದಕ್ಕೆ ಸಂಬಂಧಿಸಿದಂತೆ ಒಂದು ಶ್ಲೋಕವೂ ಇದೆ: ‘ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ| ತಿಲಭುಕ್
ತಿಲದಾತಾ ಚ ಷಟ್‌ತಿಲಾಃ ಪಾಪನಾಶನಾಃ||’ ಎಂದು.

ಅಂದರೆ ತಿಲವನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು, ತಿಲದಿಂದ ಕೂಡಿದ ದೀಪ ಹಚ್ಚುವುದು, ತಿಲದ ಹೋಮ ಮಾಡುವುದು, ತಿಲಮಿಶ್ರಿತ ಜಲದಿಂದ ಪಿತೃಗಳಿಗೆ ತರ್ಪಣ ಕೊಡುವುದು, ತಿಲಭಕ್ಷಣ, ಮತ್ತು ತಿಲದಾನ- ಹೀಗೆ ಆರು ವಿಧಗಳಲ್ಲಿ ಎಳ್ಳನ್ನು ಬಳಸಿದರೆ ಅವರು ಭಾಗ್ಯವಂತರಾಗುತ್ತಾರೆಂದು ನಂಬಿಕೆ. ಷಟ್ ತಿಲಾ ಏಕಾದಶಿ ವ್ರತಮಹಾತ್ಮೆಯ ಕಥೆಯನ್ನು ಶ್ರೀಮನ್ನಾರಾಯಣನೇ ನಾರದರಿಗೆ ವಿವರಿಸಿದ್ದು ಹೀಗೆ: ‘ಹಿಂದೆ ಬ್ರಾಹ್ಮಣ ಸ್ತ್ರೀ ಒಬ್ಬಳಿದ್ದಳು. ಅವಳು ನಿತ್ಯವೂ
ಶ್ರೀಹರಿಯನ್ನು ಪೂಜಿಸುತ್ತಿದ್ದಳು. ಕಠಿಣ ವ್ರತಗಳನ್ನೆಲ್ಲ ಮಾಡುತ್ತಿದ್ದಳು. ಆದರೆ ಅವಳೆಂದೂ ಅನ್ನದಾನ ಮಾಡಿದವಳಲ್ಲ.
ಶ್ರೀಹರಿಯ ಭಕ್ತೆಯಾದ್ದರಿಂದ ಅವಳು ಮುಂದೊಮ್ಮೆ ವೈಕುಂಠಕ್ಕೆ ಹೋದರೂ ಅರ್ಧಪುಣ್ಯವಂತೆಯಾಗಿಯೇ ಕೊರಗ ಬೇಕಾಗುತ್ತದೆ, ಆದ್ದರಿಂದ ಅವಳಿಂದ ಅನ್ನದಾನ ಮಾಡಿಸಬೇಕು ಎಂದುಕೊಂಡು ಶ್ರೀಹರಿಯೇ ಭಿಕ್ಷುಕನಾಗಿ ಅವಳಿರುವ ಆಶ್ರಮಕ್ಕೆ ಹೋಗಿ ಭಿಕ್ಷೆ ಬೇಡಿದನು.

ಅನ್ನ, ಧಾನ್ಯ ದಾನ ಮಾಡಿ ಅಭ್ಯಾಸವೇ ಇಲ್ಲದ ಆಕೆ ಆ ಭಿಕ್ಷುಕನಿಗೆ ಮಣ್ಣಿನ ಚಿಕ್ಕ ಹೆಂಟೆಯನ್ನು ದಾನವಾಗಿ ನೀಡಿದಳು. ಶ್ರೀಹರಿಯು ಅದನ್ನೇ ತೆಗೆದುಕೊಂಡು ವೈಕುಂಠಕ್ಕೆ ಮರಳಿದನು. ಕಾಲಾನಂತರ ಅವಳು ದೇಹ ತ್ಯಜಿಸಿ ವೈಕುಂಠದ ದ್ವಾರಕ್ಕೆ ಬಂದಳು. ಅವಳನ್ನು ಒಳಗೆ ಸೇರಿಸಿಕೊಳ್ಳದೆ ಮತ್ತೆ ಭೂಲೋಕಕ್ಕೆ ಹೋಗುವಂತೆ ಸೂಚಿಸಲಾಯಿತು. ಇದರಿಂದ ಅವಳು ಅತೃಪ್ತಳಾಗಿ ‘ಶ್ರೀಹರೀ… ನಾನು ನಿನ್ನನ್ನು ಭಕ್ತಿಯಿಂದ ಪೂಜಿಸಿದ್ದೆ, ನನಗೇಕೆ ಈ ಗತಿ ಬಂತು?’ ಎಂದು ಗೋಳಾಡಿದಳು. ಆಗ ಖುದ್ದಾಗಿ ಶ್ರೀಹರಿಯೇ ಅವಳೆದುರಿಗೆ ಬಂದು ‘ನೀನು ನನ್ನ ಭಕ್ತೆ, ಧರ್ಮಪರಾಯಣೆ ನಿಜ, ಆದರೆ ನೀನು ಎಂದೂ ಅನ್ನದಾನ
ಮಾಡಲಿಲ್ಲ.

ಒಮ್ಮೆ ನಾನೇ ನಿನ್ನಲ್ಲಿಗೆ ಬಂದು ಭಿಕ್ಷೆ ಬೇಡಿದ್ದೆ. ಆಗ ನೀನು ಒಂದು ಚಿಕ್ಕ ಮಣ್ಣ ಹೆಂಟೆಯನ್ನು ನನಗೆ ದಾನವಾಗಿ ಕೊಟ್ಟಿದ್ದೆ ಅಲ್ಲವೇ? ಅದರ ಫಲವೇ ಇದು!’ ಎಂದನು. ಅದಕ್ಕವಳು ‘ಭಗವಂತನೇ, ಈ ಸಂಕಟದಿಂದ ಪಾರಾಗುವ ಬಗೆ ಹೇಗೆ?’ ಎಂದು ಕೇಳಿಕೊಂಡಳು. ಶ್ರೀಹರಿಯು ಅವಳನ್ನು ಸಮಾಧಾನಿಸುತ್ತ ‘ಚಿಂತಿಸಬೇಡ, ನಿನ್ನನ್ನು ನೋಡಲಿಕ್ಕೆಂದು ನಿನ್ನ ಆಶ್ರಮಕ್ಕೆ ದೇವಕನ್ಯೆಯರು ಬರುವರು. ಆಗ ಆಶ್ರಮದ ದ್ವಾರ ತೆಗೆದಿಡು, ಅವರನ್ನು ಉಪಚರಿಸು.

ಅವರು ನಿನಗೆ ಷಟ್‌ತಿಲಾ ಏಕಾದಶಿ ವ್ರತವನ್ನು ಹೇಳುವರು. ಅದರಂತೆ ವ್ರತಾಚರಣೆ ಮಾಡು’ ಎಂದನು. ಅದರಂತೆಯೇ ಅವಳ ಆಶ್ರಮಕ್ಕೆ ದೇವಕನ್ಯೆಯರು ಬಂದರು. ಅವಳಿಗೆ ಷಟ್‌ತಿಲಾ ಏಕಾದಶಿ ವ್ರತದ ಬಗ್ಗೆ ತಿಳಿಸಿದರು. ಅವಳು ವ್ರತ ಆಚರಿಸಿದಳು. ತಿಲದಾನ ಮಾಡಿದಳು. ಆ ಪುಣ್ಯದಿಂದಾಗಿ ಅವಳಿಗೆ ವೈಕುಂಠದ ದ್ವಾರ ತೆರೆಯಿತು. ಆದ್ದರಿಂದ ನಾರದರೇ, ಯಾರು ಈ ಷಟ್‌ತಿಲಾ ಏಕಾದಶಿ ವ್ರತವನ್ನು ಆಚರಿಸುವರೋ ಅವರಿಗೆ ಅಪ್ರತಿಮ ಸಂಪತ್ತು, ಸೌಭಾಗ್ಯ ಮತ್ತು ಅಲಭ್ಯವಾದ ಮುಕ್ತಿ ಲಭಿಸುತ್ತದೆ.’

ಈ ಕಥೆಯ ರೂಪಾಂತರಗಳು, ಬಣ್ಣನೆಯಲ್ಲಿ ಅಷ್ಟಿಷ್ಟು ವ್ಯತ್ಯಾಸಗಳು ಇರಬಹುದು. ಆದರೆ ಇದು ಪುರಾಣಗಳಲ್ಲಿರುವ
ಅಂದರೆ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ಕಥೆ. ತಿಲದಾನವು ಆ ಹೆಂಗಸಿಗೆ ಮುಕ್ತಿ ನೀಡಿತು, ಸ್ವರ್ಗದ ಬಾಗಿಲಿಗೆ
ಕೀಲಿಕೈ ಎನಿಸಿತು ಎಂಬುದನ್ನು ಗಮನಿಸಿದರೆ, ನಿಽ ಇರುವ ಗುಹೆಯ ಬಾಗಿಲನ್ನು ತೆಗೆಯುವ ‘ಓಪನ್ ಸೆಸಮೇ’ ರಹಸ್ಯ
ಪದದ ಮೂಲ ಈ ಕಥೆಯೂ ಆಗಿರಬಹುದಲ್ಲ!? ಅಂತಹ ಧಾರ್ಮಿಕ, ಪೌರಾಣಿಕ ಹಿನ್ನೆಲೆಯಲ್ಲದೆ ಉಳಿದಂತೆಯೂ ಎಳ್ಳಿಗಿರುವ ಮಹತ್ತ್ವ, ನಮ್ಮ ಖಾದ್ಯ ಪೇಯಗಳಲ್ಲಿ ಅದು ಎಷ್ಟು ಹಾಸುಹೊಕ್ಕಾಗಿದೆ ಎಂಬುದೆಲ್ಲ ಗೊತ್ತಿದ್ದದ್ದೇ.

ಇಲ್ಲದಿದ್ದರೆ ‘ಬೆಳಗಾಗ ನಾನೆದ್ದು ಯಾರ್‌ಯಾರ ನೆನೆಯಲಿ… ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನು…’ ಎಂದು ಭೂಮಿತಾಯಿಯನ್ನು ನೆನೆದು ನಮಿಸುವ ಜನಪದಗೀತೆ ಹುಟ್ಟುತ್ತಿರಲಿಲ್ಲ. ನಮ್ಮ ಶರೀರದ ಉಷ್ಣತೆಯ ಮಟ್ಟಿಗೆ ಎಳ್ಳು ಒಂಥರ ಥರ್ಮೊಸ್ಟಾಟ್ ಇದ್ದಂತೆ. ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುವ ಶಕ್ತಿ ಅದಕ್ಕಿದೆ, ಬೇಸಗೆಯಲ್ಲಿ ಅಷ್ಟೇ ತಂಪನ್ನೂ ನೀಡಬಲ್ಲದು.

ಆದ್ದರಿಂದಲೇ, ಚಳಿಗಾಲದಲ್ಲಿ ಬರುವ ಸಂಕ್ರಾಂತಿಗೂ ಎಳ್ಳಿಗೂ ನಂಟು; ಎಳ್ಳು ಬೀರುವುದು, ಎಳ್ಳು-ಬೆಲ್ಲ ತಿನ್ನುವುದು ಇತ್ಯಾದಿ
ಸಂಪ್ರದಾಯಗಳು; ಬೇಸಗೆಯಲ್ಲಿ ಎಳ್ಳಿನ ಜ್ಯೂಸ್ ಕುಡಿದರೆ ಹಾಯೆನಿಸುತ್ತದೆ. ನಾಗರಪಂಚಮಿಗೆ ಎಳ್ಳಿನ ಚಿಗಳಿ, ಚೌತಿಗೆ
ಗಣೇಶನಿಗೆ ಇಷ್ಟವಾದ ಎಳ್ಳುಂಡೆ ಆಗಬೇಕು. ಕರಾವಳಿಯ ದೇವಸ್ಥಾನಗಳಲ್ಲಿ ಪ್ರಸಾದವೆಂದು ವಿತರಿಸುವ ಅವಲಕ್ಕಿ
ಪಂಚಕಜ್ಜಾಯಕ್ಕೆ ಎಳ್ಳು ಸೇರಿಸಿದ್ದಿರುವುದರಿಂದ ಅದರದೊಂದು ಘಮಲೇ ಬೇರೆ. ಹಾಗೆಯೇ ನಮ್ಮಲ್ಲಿ ವಿಶೇಷವಾಗಿ
ಹಾಗಲಕಾಯಿಯಿಂದ ಅಥವಾ ಅನನಾಸಿನಿಂದ ಮಾಡುವ ‘ಕಾಯ್‌ರಸ’ ಎಂಬ ಅತಿರುಚಿಕರ ವ್ಯಂಜನದ ಮಸಾಲೆಗೂ ಎಳ್ಳೇ
ಪ್ರಧಾನ. ಹಲಸಿನ ಹಪ್ಪಳ ಮಾಡುವಾಗ ಹಿಟ್ಟಿಗೆ ಎಳ್ಳು ಸೇರಿಸುವ ಕ್ರಮವೂ ನಮ್ಮಲ್ಲಿದೆ.

ಅದೇ ಎಳ್ಳು ನಮ್ಮ ಭಾಷೆಗಳಲ್ಲಿ, ಪದಭಂಡಾರದಲ್ಲಿ, ಸಾಂಸ್ಕೃತಿಕ ಸಂದರ್ಭದಲ್ಲಿ ಹೇಗೆ ಆಳವಾಗಿ ವ್ಯಾಪಿಸಿದೆ ಎಂದು
ಗಮನಿಸಿದರೆ ಆಶ್ಚರ್ಯವಾಗುತ್ತದೆ. ಪದಾರ್ಥಚಿಂತಾ ಮಣಿಯಲ್ಲಿ ಪಾವೆಂ ಆಚಾರ್ಯರು ವಿವರಿಸಿರುವಂತೆ- ತೈಲ ಎಂದರೆ ತಿಲದಿಂದ ಹುಟ್ಟಿದ್ದು. ಮೂಲತಃ ಎಳ್ಳಿನಿಂದ ತೆಗೆದದ್ದೇ ತೈಲ ಅಥವಾ ಎಣ್ಣೆ. ತೈಲಾಭ್ಯಂಜನ ಅಂದರೆ ಮೈಗೆಲ್ಲ ಎಳ್ಳೆಣ್ಣೆ
ಹಚ್ಚಿಕೊಂಡು ಬಿಸಿನೀರಿನ ಸ್ನಾನ. ಕ್ರಮೇಣ ತೈಲ ಪದ ಎಲ್ಲ ಸಸ್ಯಜನ್ಯ ಜಿಡ್ಡಿಗೆ ಅನ್ವಯವಾಯ್ತು.

ದ್ರಾವಿಡ ಭಾಷೆಗಳಲ್ಲಿ ಇರುವ ಎಣ್ಣೆಯ ಕಥೆಯೂ ಅದೇ. ಎಣ್ಣೆ ಎಂಬುದು ಎಳ್ + ನೆಯ್ ಎಂಬ ಜೋಡಿ ಶಬ್ದ. ನೆಯ್ ಅಂದರೆ ತುಪ್ಪ. ಎಳ್ಳಿನಿಂದ ಮಾಡಿದ ತುಪ್ಪವೇ ಎಣ್ಣೆ. ಆಮೇಲೆ ಕೊಬ್ಬರಿ ಎಣ್ಣೆ, ಕುಸುಬಿ ಎಣ್ಣೆ, ಶೇಂಗಾ ಎಣ್ಣೆ, ಕಡೆಗೆ ಮೀನೆಣ್ಣೆ ಸಹ ಎಣ್ಣೆ ಎಂದೇ ಕರೆಯಲ್ಪಟ್ಟವು. ಎಳ್ಳಿನ ಎಣ್ಣೆಯನ್ನು ಎಳ್ಳೆಣ್ಣೆ ಎಂದು ಪುನರುಕ್ತಿಯಾಗಿ ಹೇಳಬೇಕಾಯ್ತು. ಪಿತೃಗಳಿಗೆ ಅತಿ ಪ್ರಿಯವಾದ ತಿಲ, ಉತ್ತರಕ್ರಿಯೆ ಶ್ರಾದ್ಧಕರ್ಮಗಳಲ್ಲಿ ಅನಿವಾರ್ಯ.

ಸತ್ತವರ ತೃಪ್ತಿಗಾಗಿ ಎಳ್ಳು-ನೀರು ಸೇರಿಸಿ ತರ್ಪಣ ಬಿಡಲಾಗುತ್ತದೆ, ಅದೇ ತಿಲಾಂಜಲಿ. ಇದು ಶುದ್ಧ ವೈದಿಕ ಪದ್ಧತಿಯಾದರೂ ಸಾಮಾನ್ಯ ಕನ್ನಡದಲ್ಲಿ ತ್ಯಾಗಸೂಚಕವಾಗಿ ತಿಲಾಂಜಲಿ, ಎಳ್ಳುನೀರು ಸೇರಿಹೋಗಿವೆ. ಎಳ್ಳು ಶನಿಗ್ರಹಕ್ಕೆ
ಪ್ರಿಯ, ಜೊತೆಗೆ ಕಪ್ಪುಬಣ್ಣದ್ದು, ಆದ್ದರಿಂದ ತಿಲದಾನ ಪಡೆಯುವುದೆಂದರೆ ಅನಿಷ್ಟ ಎಂಬ ಭಾವನೆಯೂ ಇದೆ. ತಿಲದಿಂದಲೇ ಬಂದದ್ದು ತಿಲಕ. ಸೌಂದರ್ಯವರ್ಧನೆಗಾಗಿ ಹಣೆಯಲ್ಲಿ ಧರಿಸುವ ಚುಕ್ಕಿ. ಸಹಜವಾಗಿಯೇ ಶರೀರದಲ್ಲಿರುವ ಚಿಕ್ಕ ಕರಿ ಮಚ್ಚೆ ಕೂಡ ತಿಲ. ಮೊದಲು ಎಳ್ಳಿನಂತೆ ಕರಿದಾಗಿದ್ದ ತಿಲಕ ಬರುಬರುತ್ತ ಬೇರೆ ಬಣ್ಣಗಳ ಬೊಟ್ಟಿಗೂ ಅನ್ವಯಿಸಿತು.

ತಿಲಕವು ಶ್ರೇಷ್ಠತೆಯ ಕುರುಹೂ ಆಯ್ತು. ಆದ್ದರಿಂದ ರಾಜಕುಲತಿಲಕ = ರಾಜಶ್ರೇಷ್ಠ. ಯತಿತಿಲಕ = ಸಂನ್ಯಾಸಿಗಳಲ್ಲಿ
ಉತ್ತಮ. ತದ್ವಿರುದ್ಧವಾಗಿ ಎಳ್ಳು ಬಲು ಚಿಕ್ಕ ಧಾನ್ಯವಾದ್ದರಿಂದ ಅದು ಅಲ್ಪತೆಗೂ ಸಲ್ಲುವ ಪದವಾಯ್ತು. ಉದಾ: ರಾಜ ಕಾರಣಿಗಳ ಭರವಸೆಯಲ್ಲಿ ನಮಗೆ ತಿಲಮಾತ್ರವೂ ವಿಶ್ವಾಸವಿಲ್ಲ. ಸಂಸಾರದಲ್ಲಿ ಎಳ್ಳಿನಿತೂ ಸುಖವಿಲ್ಲ ಇತ್ಯಾದಿ. ಜನಸಂದಣಿ ಎಷ್ಟು ಕಿಕ್ಕಿರಿದಿದೆ ಎಂದು ಹೇಳುವುದಕ್ಕೆ ‘ಒಂದು ಎಳ್ಳು ಹಾಕಲಿಕ್ಕೂ ಜಾಗವಿಲ್ಲ’ ಎಂಬರ್ಥ ಬರುವ ನುಡಿಗಟ್ಟೊಂದು ನಮ್ಮ ಚಿತ್ಪಾವನಿ ಮರಾಠಿ ಭಾಷೆಯಲ್ಲಿದೆ.

ತಿಲೋತ್ತಮೆ ಓರಗೆಯ ಅಪ್ಸರೆಯರಿಗಿಂತ ತಿಲಾಂಶವಾದರೂ ಹೆಚ್ಚು ಸುಂದರಿ ಎಂಬ ಕಾರಣಕ್ಕೆ ಆಕೆಗೆ ಆ ಹೆಸರು. ಅಣುರೇಣು ತೃಣಕಾಷ್ಠದಲ್ಲೂ ಪರಮಾತ್ಮನಿದ್ದಾನೆ ಎನ್ನುವುದನ್ನೇ ಪುರಂದರದಾಸರು ಹೇಳಿದ್ದು ‘ಎಳ್ಳು ಮೊನೆಯ ಮುಳ್ಳುಕೊನೆಯ ಪೊಳ್ಳು ಬಿಡದೆ ಒಳಗೆ ಹೊರಗೆ ಎಲ್ಲ ಠಾವಿನಲ್ಲಿ ಲಕುಮಿ ನಲ್ಲನಿದ್ದಾನೆ’ ಎಂದು. ಇದಿಷ್ಟನ್ನು ಓದಿದಾಗ ನಿಮಗನಿಸಿರಬಹುದು ‘ಓಪನ್ ಸೆಸಮೇ’ ಎಂದರೆ ಸೆಸಮೇ/ತಿಲ/ಎಳ್ಳಿನದೇ ತಿಳಿವಳಿಕೆಯ ತಿಜೋರಿ ತೆರೆಯಿತಲ್ಲಾ ಎಂದು. ಎಲ್ಲರಿಗೂ ಮಕರಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

ಎಳ್ಳು-ಬೆಲ್ಲ ತಿಂದು ಎಲ್ಲರೂ ಒಳ್ಳೆಯ ಮಾತನಾಡೋಣ; ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ ಒಳ್ಳೆಯದನ್ನೇ ಬಯಸೋಣ.