Saturday, 14th December 2024

ಅನಿಷ್ಟಕ್ಕೆಲ್ಲ ಸಂಸ್ಕೃತವೇ ಕಾರಣ, ಯಾರಿಗೆ ಬೇಕಿಲ್ಲ ನೈಜ ಚಿತ್ರಣ !

ಸಕಾಲಿಕ

ಜಿತೇಂದ್ರ ಕುಂದೇಶ್ವರ

ದೇಶದಲ್ಲಿ ಶೇ.99ಮಂದಿ ಜನರ ಸಂಕಷ್ಟಗಳಿಗೆ ಶೇ.೧ರಷ್ಟಿರುವ ಬ್ರಾಹ್ಮಣರೇ ಕಾರಣ. ಕೋಟಿ ಕೋಟಿ ಮಾತನಾಡುವ ಕನ್ನಡದ ದುಃಸ್ಥಿತಿಗೆ ನೂರು-ಸಾವಿರ ಲೆಕ್ಕದಲ್ಲಿರುವ ಸಂಸ್ಕೃತ ಭಾಷಿಕರೇ ಕಾರಣ! ಭಾಷೆ, ಧರ್ಮದ ಹೆಸರಲ್ಲಿ ಸಂಪತ್ತು ಕ್ರೋಢೀಕರಣ ಮಾಡುವರ ಮೇಲೂ ಐಟಿ ದಾಳಿ ಆಗಲಿ. ಕನ್ನಡಕ್ಕಾಗಿನ ಹೋರಾಟ ದಾರಿ ಸರಿಯಾಗುವುದು ಯಾವಾಗ?

ಹೌದು, ಇದೊಂದು ದ್ವೇಷ ಸಿದ್ಧಾಂತದ ಸಿದ್ಧ ಸೂತ್ರ. ವೈರಿ ಯಾರೆಂದು ಗೊತ್ತಿದ್ದರೂ ಬೆದರು ಬೊಂಬೆಯತ್ತ ತೋರಿಸಿ ಇದೇ ವೈರಿ ಎಂದು ಬಿಂಬಿಸುವುದು. ಇದನ್ನು ಒಪ್ಪುವವರದು ಅಜ್ಞಾನವೋ/ ಷಡ್ಯಂತ್ರದಲ್ಲಿ ಭಾಗಿಗಳೋ ತಿಳಿಯದು.

ವಾಸ್ತವ ಎಂದರೆ ಕನ್ನಡದ ದುಃಸ್ಥಿಗೆ ಕನ್ನಡ ಶಾಲೆಗಳನ್ನು ಹಾಳು ಕೊಂಪೆಗಳಾಗಿಸಿ, ಖಾಸಗಿ ಶಿಕ್ಷಣ ಮಾಫಿಯಾವನ್ನು ಕಳೆದ 30 ವರ್ಷಗಳಲ್ಲಿ ದೈತ್ಯಾಕಾರ ವಾಗಿ ಬೆಳೆಸಿದ ಈ ರಾಜಕಾರಣಿಗಳು ಮತ್ತು ಅವರಿಗೆ ಸದಾ ಬೆಂಬಲ ಸೂಚಿಸುವ ಕೆಲವು ಭಾಷೆಯ ಸಂಘಟನೆಗಳೇ ಕಾರಣ. ಹೀಗಾಗಿ ರಾಜಕಾರಣಿಗಳನ್ನು ಬೆಂಬಲಿಸುವ ಕನ್ನಡ ಸಂಘಟನೆಗಳ ಮುಖಂಡರನ್ನೆ ಸಂಶಯಿಸುವ ಅಗತ್ಯವಿದೆ.

ಸಹಸ್ರಾರು ಇಂಗ್ಲೀಷ್ ಶಾಲೆಗಳ ನಡುವೆ ಅನೇಕ ಕನ್ನಡ ಶಾಲೆಗಳು ಮುಚ್ಚಿವೆ. ಕೆಲವರ ಭಗೀರಥ ಪ್ರಯತ್ನ ದಿಂದ ಅಂದು ಇಂದು ಸರಕಾರಿ ಶಾಲೆಗಳು ಆಕ್ಸಿಜನ್ ಪಡೆದು ಉಳಿದುಕೊಂಡಿವೆ. ಕನ್ನಡ ಶಾಲೆಗಳನ್ನು ಸರಿಯಾಗಿ ನಡೆಸಿಕೊಂಡಿದ್ದರೆ ಇಂಥ ಪರಿಸ್ಥಿತಿ ಖಂಡಿತಾ ಬರುತ್ತಿರಲಿಲ್ಲ. ಮಕ್ಕಳು ಕಡಿಮೆಯಾದರೆ ಶಿಕ್ಷಕರನ್ನು ಕಡಿತಗೊಳಿಸುವ ಮತ್ತೆ ಶಾಲೆಗಳನ್ನು ಮುಚ್ಚುವ ನಿಯಮ ತಂದು ಶಾಲೆಗಳಿಗೆ ಮರಣಶಾಸನ ರೂಪಿಸಿದ ಈ ನಿಯಮ ಹುಟ್ಟಿದಾಗ ಈ ಕುರಿತು ಕನ್ನಡ ಸಂಘಟನೆಗಳು, ಈಗ ಸಂಸ್ಕೃತವನ್ನು ವಿರೋಧಿಸುವ ಪ್ರಾಜ್ಞರು ಧ್ವನಿ ಎತ್ತಿದ್ದಾರೆಯೇ? ಧನಿ ಎತ್ತಿದ್ದರೆ ಈಗ ಇಂಗ್ಲಿಷ್ ಶಾಲೆಗಳ ಮಾಲೀಕರು ಧಣಿಗಳಾಗುತ್ತಿರಲಿಲ್ಲ. ಕನ್ನಡ ಹೋರಾಗಾರರ ಹೇಳುತ್ತಿರುವ ವಿಚಾರಗಳನ್ನೇ ನೋಡೋಣ, ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತಿನಲ್ಲಿಯೇ ಕೇವಲ 24000!

ಇಷ್ಟು ಜನರ ನುಡಿಗೆ ಹದಿನಾರು ವಿವಿ ಬೇಕಾ? ೭ಕೋಟಿ ಜನರ ಕನ್ನಡ ನುಡಿಗೆ ಒಂದೇ ವಿವಿ ಸಾಕೇ? ಸಂಸ್ಕೃತ ವಿವಿಗೆ 359ಕೋಟಿ ಹಣ! ಕನ್ನಡಿಗರ ಏಕೈಕ ವಿವಿಗೆ ಕೊಡಲು 2 ಕೋಟಿ ಹಣ ಇಲ್ಲವೇ? ಹೀಗೆಲ್ಲ ಹೀಗಳೆಯಲಾಗುತ್ತಿದೆ. ಹೌದು ಸ್ವಾಮಿ ಐಸಿಯುನಲ್ಲಿ ಇರುವವರಿಗೆ ಚಿಕಿತ್ಸೆಗೆ ಖರ್ಚು ಹೆಚ್ಚು. ಅನಾರೋಗ್ಯ ಪೀಡಿತರಿಗೆ ಹೆಚ್ಚು ಆಸ್ಪತ್ರೆಗಳು ಬೇಕು. ಹಾಗೆಂದು ಅನಾರೋಗ್ಯಪೀಡಿತರಿಗೆ ಆಸ್ಪತ್ರೆ ನಿರ್ಮಿಸುವ ಮೂಲಕ ಜನ ಸಾಮಾನ್ಯರಿಗೆ ಏನೂ ನೀಡದೆ ಮಲತಾಯಿ ಧೋರಣೆ ತೋರಲಾಗಿದೆ ಎಂದು ಹೇಳಲು ಸಾಧ್ಯವೇ? ಇಂಗ್ಲಿಷ್ ಭಾಷೆ ಅಭಿವೃದ್ಧಿಗೆ ಹಣವೇ ಬೇಡ.

ಏಕೆಂದರೆ ಇಂಗ್ಲಿಷ್ ಭಾಷೆಯೇ ಕೋಟಿ, ಕೋಟಿ ಸಂಪಾದನೆ ಮಾಡುತ್ತದೆ. ಕನ್ನಡ ಭಾಷೆಯೂ ಕೋಟಿ ಕೋಟಿ ಸಂಪಾದನೆ ಮಾಡಬೇಕಿತ್ತು. ಆದರೆ ಅದರ
ಸಂಘ, ಸಂಸ್ಥೆಗಳಷ್ಟೇ ಒಂದಷ್ಟು ಸಂಪಾದನೆ ಮಾಡುತ್ತಿವೆ, ಭಾಷಾ ಮಾರುಕಟ್ಟೆಯಲ್ಲಿ ಕನ್ನಡಕ್ಕೆ ಇಂಗ್ಲಿಷಿನಷ್ಟು ಮೌಲ್ಯವಿಲ್ಲ. ಕನ್ನಡಕ್ಕೆ ಎರಡು ಏಕರೆ ಜಾಗ ಸಿಗುತ್ತಿಲ್ಲ ಎಂಬ ದುಃಸ್ಥಿತಿಗೆ ತಲುಪಿದೆ ಎಂದಾದರೆ ಇದಕ್ಕೆ ನಾವೆಲ್ಲರೂ ಕಾರಣ. ಆದರೂ ಕನ್ನಡಕ್ಕೆ ಹೆಚ್ಚು ಹೆಚ್ಚು ವಿವಿಗಳಿಂದ ಹೆಚ್ಚಿನ ಸಾಧನೆ ಆಗದು. ಜೀವ ಬಿಟ್ಟ ಕನ್ನಡ ಶಾಲೆಗಳು ಮತ್ತೆ ಉಸಿರಾಡಬೇಕು.

ಈಗ ಪರಿಸ್ಥಿತಿ ಹೇಗಿದೆ. ಪ್ರಥಮ, ದ್ವೀತೀಯ ಭಾಷೆ ಸ್ಥಾನಕ್ಕಾಗಿ ಕನ್ನಡವು ಸಂಸ್ಕೃತದೊಂದಿಗೆ ಹೋರಾಡುವ ಸ್ಥಿತಿಗೆ ತಂದವರು ಯಾರು ಸ್ವಾಮಿ? ಸಂಸ್ಕೃತ ದವರಿಗೆ ಶಾಲೆ- ಕಾಲೇಜುಗಳಲ್ಲಿ ಕನಿಷ್ಠ ಆ ಸ್ಥಾನ ಸಿಕ್ಕಿದರೆ ವೆಂಟಿಲೇಟರ್ ಸಿಕ್ಕ ಹಾಗೆ. ಸಂಸ್ಕೃತ ಶಿಕ್ಷಕರು ತಮ್ಮ ಹುದ್ದೆ ಉಳಿದರೆ ಸಾಕು ಎಂಬ ಪರಿಸ್ಥಿತಿಯಲ್ಲಿ ದ್ದಾರೆ. ಈಗ ಸಂಸ್ಕೃತಕ್ಕೆ ಮಾತ್ರವೆಂಟಿಲೇಟರ್ ಕನ್ನಡಕ್ಕೂ ಬೇಕು ಎಂಬಂತೆ ಹೋರಾಟ ಮಾಡಲಾಗುತ್ತಿದೆ. ಕನ್ನಡಕ್ಕೆ ಇಂಗ್ಲಿಷಿನಿಂದ ಅನಾರೋಗ್ಯ ಬಂದಿರುವು ದಂತೂ ನಿಜ.

ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕಾದರೆ ಎಲ್ಲ ವಿಷಯಗಳನ್ನು ಕಲಿಸಲು ಒಂದೇ ಒಂದು ಕನ್ನಡ ಮಾಧ್ಯಮವಾಗಿ ಬೇಕು ಎಂದು ಹೋರಾಡಬೇಕು. ಆದರೆ ಕನ್ನಡದ ತಾಯಿ ಸ್ಥಾನವನ್ನು ಇಂಗ್ಲಿಷ್ ಶಾಲೆಗಳು ಅತಿಕ್ರಮಿಸಿ ಎಡೆ ಇಂಗ್ಲೀಷ್ ಮಾಧ್ಯಮವೇ ರಾರಾಜಿಸುತ್ತಿದೆ. ಅದು ವೇಗವಾಗಿ ಸಾಗುತ್ತಿದ್ದು, ಮುಂದಿನ ವರ್ಷಗಳಲ್ಲಿ ಕನ್ನಡ ಶಾಲೆಗಳು ಮಾಯವಾಗಬಹುದು.

ಈಗ ಕೋಟಿ ಕೋಟಿ ಮಂದಿ ಕನ್ನಡ ಮಾತನಾಡುತ್ತಿದ್ದರೂ ಮಾಧ್ಯಮಗಳಲ್ಲಿ, ಸಂದರ್ಶನಗಳಲ್ಲಿ ಶೇ.90 ಇಂಗ್ಲಿಷ್ ಪದ ಬಳಕೆಯಾಗುತ್ತಿದೆ. ವ್ಯಾಕರಣ
ಮಾತ್ರ ಇಂಗ್ಲಿಷ್ ಅಲ್ಲ! ಹೀಗಾಗಿ ಕ್ರಮೇಣ ಕನ್ನಡ ಭಾಷೆ ತನ್ನ ಈಗೀನ ಸ್ವರೂಪವನ್ನು ಕಳೆದುಕೊಂಡು ಕಂಗ್ಲಿಷ್ ಕನ್ನಡವಾಗುವುದರಲ್ಲಿ ಸಂಶಯ ಇಲ್ಲ. ಎಲ್ಲರ ಕನ್ನಡ ಎಂದು ವಿಚಿತ್ರ ಹೋರಾಟ ಶುರುವಾಗಿದೆ. ಹೋರಾಟದ ದಾರಿಯಲ್ಲಿ ತಾವೂ ಸ್ವಲ್ಪ ಸಂಪಾದನೆ ಮಾಡಿಕೊಳ್ಳುವ ಮಾಡುವ ದಾರಿ ಇರಬಹುದು. ಇವರು ಕನ್ನಡವನ್ನು ನುಂಗುತ್ತಿರುವ ಇಂಗ್ಲಿಷ್ ಪದಗಳನ್ನು ಹೊರದಬ್ಬಲು ಹೋರಾಡಬೇಕು. ಪಾಪ ಅವರ ಕಾಮಾಲೆ ಕಣ್ಣಿಗೂ ಕಾಣುತ್ತಿರುವುದು ಸಂಸ್ಕೃತ ಎಂಬ ಪೆಡಂ ಭೂತ!

ಸಂಸ್ಕೃತದ ಬಗೆಗಿರುವ ಪೂರ್ವಗ್ರಹ ಇವರನ್ನೆಲ್ಲ ಇಂಗ್ಲಿಷ್ ನುಂಗಿ ನೀರು ಕುಡಿದರೂ ಗೊತ್ತಾಗದಂತೆ ಮಾಡುತ್ತಿದೆ. ಕನ್ನಡ ಮತ್ತು ಸಂಸ್ಕೃತ ಎಂದು ಹೊಡೆದಾಡಿ ಕೊಳ್ಳುವಾಗ ಹೆಬ್ಬಾವಿನಂತಿರುವ ಇಂಗ್ಲಿಷ್ ಕನ್ನಡವನ್ನು ಅರ್ಧ ನುಂಗಿರುವುದು ಯಾರಿಗೂ ಕಾಣಿಸುತ್ತಿಲ್ಲ. ಎಲ್ಲರಿಗೂ ಈಗ ಆಕ್ರೋಶ ಇರುವುದು ಸಂಸ್ಕೃತ ಭಾರತಿ ಸಂಘಟನೆ ಕನ್ನಡ ಕಲಿಕೆ ಕಡ್ಡಾಯ ತಡೆಯಲು ಕೋರ್ಟಿಗೆ ಹೋದ ಕುರಿತು. ಅವರ ಮೂಲ ಉದ್ದೇಶ ಸಂಸ್ಕೃತ ಉಪನ್ಯಾಸಕ ಹುದ್ದೆಗಳನ್ನು ಉಳಿಸಿ ಕೊಳ್ಳುವುದಷ್ಟೇ ಆಗಿದೆ. ಅವರಿಗೆ ಉದ್ಯೋಗ ಭದ್ರತೆ ನೀಡಿದರೆ ಖಂಡಿತಾ ಅವರು ಕೇಸ್ ವಾಪಸ್ ತೆಗೆದುಕೊಳ್ಳಬಹುದು.

ತಕ್ಷಣ ಪದವಿ ಸ್ನಾತಕೋತ್ತರ ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿದರೆ ಆಲ್ಲಿ ಕನ್ನಡ ಕಲಿಕೆ ಕಷ್ಟ. ಪ್ರತ್ಯೇಕ ಶಿಕ್ಷಕರು,ಲೈಬ್ರರಿ, ಪುಸ್ತಕ ಒದಗಿಸಬೇಕು. ಕ್ರಿಯಾತ್ಮಕ ಕನ್ನಡದ ಪಠ್ಯಕ್ರಮ ಕ್ಲಿಷ್ಟಕರವಾಗಿದೆ ಎನ್ನುವುದು ಸಂಸ್ಕೃತ ಭಾರತಿ ಅವರ ವಾದ. ಭಾಷೆಯನ್ನು ಆಯ್ಕೆಯಾಗಿ ಕಲಿಸಬೇಕು, ಕಡ್ಡಾಯಗೊಳಿಸ ಬಾರದು. ನಾನು ಕನ್ನಡಿಗ, ಕನ್ನಡ ಪ್ರೀತಿಸುತ್ತೇನೆ. ಹಾಗೆಂದು ಹೊರಗಿನಿಂದ ಬಂದವರಿಗೂ ಕನ್ನಡ ಕಲಿಯುವಂತೆ ಒತ್ತಾಯಿಸುವುದು ಸರಿಯಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಸುವುದು ಅಷ್ಟು ಸೂಕ್ತವಲ್ಲ. ಆದ್ದರಿಂದ ಸರಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಈ ರೀತಿ ಮನವಿ ಮಾಡಿದ್ದಾರೆ. ಇವರ ವಾದಕ್ಕೆ ನನ್ನ ಪೂರ್ಣ ಸಹಮತವಿಲ್ಲ.

ರಾಜ್ಯ ಸರಕಾರ ಮೊದಲಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡಿ ಬಳಿಕ ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಆಲೋಚನೆಯನ್ನು ಮಾಡಲಿ. ಈಗಿರುವ ಸಂಸ್ಕೃತ ವಿರೋಧ ಅಭಿಯಾನ ಸ್ವರೂಪದಲ್ಲಿ ಪಡೆದಿರುವುದು ಹೇಗೆ? ಕೋಟಿ ಕೋಟಿ ಹಣ ಬಿಡುಗಡೆ ಅಂದರೆ ಅಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ
ಎಂದರ್ಥ! ಆಗ ಅಲ್ಲಿ ಹೋರಾಟ, ಹೊಡೆದಾಟ, ಎಳೆದಾಟ, ಬಕೆಟ್ ಹೊಗಳಿಕೆ ಎಲ್ಲ ಕಡೆಯಿಂದಲೂ ಬರುತ್ತದೆ ಕಾರಣ ಒಂದಷ್ಟು ಪ್ರಸಾದ, ಒಂದಷ್ಟು ಆಹಾರ
ಸಿಗಬಹುದು ಎಂಬ ದೂರದೃಷ್ಟಿ! ಹೀಗಾಗಿ ಸಂಶೋಧನೆ ಹೆಸರಲ್ಲಿ ಆ ಹಣ ನಿಜವಾಗಿಯೂ ಬಳಕೆಯಾಗುತ್ತಿದೆಯೋ ಅಥವಾ ಬಕಾಸುರರ ಹೊಟ್ಟೆ ಸೇರುತ್ತದೆ ಯೋ? ವಿವಿಗಳಲ್ಲಿ ನುಂಗಣ್ಣರು ಸೇರಿಕೊಂಡಿದ್ದಾರೆ.

ಅದಕ್ಕಾಗಿ ಇಷ್ಟೆ ರಾದ್ಧಾಂತವೋ ಎಂಬ ಕುರಿತು ಚರ್ಚಿಸಬೇಕಾಗಿದೆ. ಒಂದೆಡೆ ಸಂಸ್ಕೃತವನ್ನು ಶೂದ್ರರಿಗೆ ಕಲಿಸದೆ ಘೋರ ಅನ್ಯಾಯ ಮಾಡಲಾಗಿದೆ ಇದರಿಂದ ಜ್ಞಾನ ವಂಚಿಸಲಾಯಿತು ಎಂದು ಭೋರ್ಗರೆಯುವ ಅಹಿಂದು ಹೋರಾಟಗಾರರಿಗೆ ಒಂದು ಪ್ರಶ್ನೆ. ಆಯ್ತಪ್ಪಾ ನೀವು ಹೇಳಿದ ಹಾಗೆಯೇ ವಂಚನೆಯಾಗಿದ್ರೆ ಈಗ ಸರಿ ಮಾಡುವ ಕೆಲಸ ಆಗುತ್ತಿದೆ ಅಂದುಕೊಳ್ಳುವುದರನು ಅಡ್ಡಿ? ಅದೂ ಅಲ್ಲದೆ ಭಾರತರತ್ನ ಅಂಬೇಡ್ಕರ್ ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿ ಮಾಡಬೇಕು ಎಂದು ಬಯಸಿದ್ದರು.

ಅಷ್ಟು ಮಾತ್ರವಲ್ಲ ಕಾರ್ಯಾಂಗ ಆರಂಭದಲ್ಲಿ ಸರಾಗವಾಗಿ ಮುನ್ನಡೆಯಲು ಇಂಗ್ಲಿಷ್ ಭಾಷೆಯನ್ನು ಆರಂಭಿಕ 15 ವರ್ಷಗಳ ಕಾಲ ಮಾತ್ರಅಳವಡಿಸಿ, ಬಳಿಕ ಸಂಸ್ಕೃತ ಉಪಯೋಗಿಸಲು ಸಲಹೆ ನೀಡಿದ್ದರು. ಅಂಬೇಡ್ಕರ್ ಅವರಿಂದ ಪ್ರಭಾವಿತರಾಗಿ ವಿದೇಶಾಂಗ ಸಚಿವಾಲಯದ ಉಪಸಚಿವರಾಗಿದ್ದ ಡಾ.ನಾಸಿರುದ್ದೀನ್ ಅಹಮದ್ ಸಚಿವ ವಿಶ್ವನಾಥ ಕೇಸ್ಕರ್ ಮತ್ತು ಬಂಗಾಳದ ಸಂಸದರೂ ಸಹ ಸಂಸ್ಕೃತವನ್ನು ಅಧಿಕೃತ ಭಾಷೆಯನ್ನಾಗಿಸಲು ಬಯಸಿದ್ದರು. ಇದರಿಂದ ಸಂಸ್ಕೃತ ಇಡೀ ದೇಶಕ್ಕೆ ಒಗ್ಗುತ್ತದೆ, ಹೀಗಾಗಿ ಸಂಸ್ಕೃತವನ್ನು ವಿರೋಧಿಸುವುದು ಸರಿಯಲ್ಲ.

ಕನ್ನಡಕ್ಕಾಗಿನ ಹೋರಾಟ ದಾರಿ ಸರಿಯಾಗುವುದು ಯಾವಾಗ ? ಮಾತೆತ್ತಿದ್ದರೆ ಹಿಂದಿ ಉತ್ತರದ ಭಾಷೆ ಹೇರಿಕೆ ಆಗುತ್ತದೆ ಎಂದು ಹೇಳಿ ವಿರೋಧ, ಸಂಸ್ಕೃತ ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ವಿರೋಧ, ಇಂಗ್ಲಿಷ್ ಅನ್ನ ಕೊಡುತ್ತಿದೆ, ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಹೀಗಾಗಿ ವಿರೋಧವಿಲ್ಲ! ನಿಜ ಹೇಳಬೇಕೆಂದರೆ ಇಂಗ್ಲಿಷ್ ಭಾಷೆಯ ವ್ಯಾಮೋಹವು ಕನ್ನಡವನ್ನು ಒಂದು ರೀತಿ ಕೊಲ್ಲುತ್ತಿದೆ. ಸಂಸ್ಕೃತ ಕಲಿತರೆ ಕನ್ನಡಕ್ಕೆ ನಷ್ಟವೇನು? ಉರ್ದು ಕಲಿತರೆ
ಕನ್ನಡಕ್ಕೇನು ಲಾಭ? ಏನೂ ಇಲ್ಲ, ಇದ್ದ ಸ್ವಲ್ಪ ಕನ್ನಡವೂ ಮರೆತೇ ಹೋಗುವ ಸ್ಥಿತಿ.

ಇಂಥ ಪರಿಸ್ಥಿತಿಯಲ್ಲಿ ಕನ್ನಡ ಸಂಘಟನೆಗಳು ಮತ್ತು ಕನ್ನಡಿಗರು ಏನು ಮಾಡಬಹುದು? ಮೊದಲಿಗೆ ಕನ್ನಡ ಮಾಧ್ಯಮ ಶಾಲೆಗಳ ಪುನರುಜ್ಜೀವನಕ್ಕೆ ಗಂಭೀರ
ಹೋರಾಟ ಮಾಡಿ, ಸರ್ಕಾರ ಕನಿಷ್ಠ ೮ನೇ ತರಗತಿವರೆಗೆ ತ್ರಿಭಾಷಾಸೂತ್ರದಡಿಯಲ್ಲಿ ಕನ್ನಡ ಭಾಷೆಯಾಗಿ ಕಡ್ಡಾಯವಾಗಲಿ. ಬ್ಯಾಂಕ್, ಮಾಲ್‌ಗಳಲ್ಲಿ ಕನ್ನಡೇತರರಿಗೆ ಪ್ರೀತಿಯಿಂದ ಕನ್ನಡ ಕಲಿಸಲಿ. ಖ್ಯಾತ ತಾರೆಗಳು, ಯುವ ಸಮುದಾಯದ ನೇತಾರರು ಕಂಗ್ಲಿಷ್ ಬದಲು ಕನ್ನಡ ಮಾತನಾಡಿಸಲು ಒತ್ತಡ ಹೇರಲಿ. ರಾಜ್ಯದೊಳಗಿನ ಎಲ್ಲ ಭಾಷೆಗಳ ವಿವಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವಂತೆ, ರಾಜ್ಯದಲ್ಲಿರುವ ಕನ್ನಡ ಬಾರದ ಅಧಿಕಾರಿಗಳು ಕಡ್ಡಾಯ ಕನ್ನಡ ಕಲಿಯುವಂತೆ ಮಾಡಲು ಸರ್ಕಾರಕ್ಕೆ ಒತ್ತಾಯ ಹೇರಲಿ.

ಕನ್ನಡ ಬರಹಗಾರರ ಪುಸ್ತಕಗಳನ್ನು ಸರಕಾರವೇ ಆಸ್ತೆಯಿಂದ ಪ್ರಕಟಿಸಲು ಒತ್ತಡ ಬೀರಲಿ. ಕನ್ನಡಕ್ಕೆ ಹೋರಾಟ ಮಾಡುತ್ತಿರುವ ಕನ್ನಡ ಸಂಘಟನೆಗಳನ್ನು ಲೇವಡಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಈಗ ಹೋರಾಡಲೇ ಬೇಕಾದ ಸ್ಥಿತಿ ಇದೆ. ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವಂತಾಗಬೇಕು. ಕನ್ನಡ ಶಾಲೆಗಳು ಎಲ್ಲರನ್ನು ಸೆಳೆದುಕೊಳ್ಳುವ ಹಾಗೆ ಗುಣಮಟ್ಟ ಮತ್ತು ಮೌಲ್ಯಯುತವಾಗಿರಬೇಕು. ಸರಕಾರವೇ ಶಿಕ್ಷಣ ವಿಭಾಗವನ್ನು ಖಾಸಗಿಯಿಂದ ಮುಕ್ತಗೊಳಿಸಬೇಕು. ಪಾಪ ಹೋರಾಟಗಾರರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್‌ನಿಂದ ವಂಚಿತರನ್ನಾಗಿ ಮಾಡಬೇಕೇ ಎಂಬ ಪ್ರಶ್ನೆಯೂ ಇದೆ.

ಹೀಗಾಗಿ ಇಂಗ್ಲಿಷ್ ವಿರುದ್ಧ ಹೋರಾಡಲು ಸಾಧ್ಯವಾಗದೆ ಈಗಲೋ ಆಗಲೋ ಎಂಬಂತಿರುವ ಕೇವಲ ಸಂಶೋಧನಾ ವಿದ್ಯಾರ್ಥಿಗಳಷ್ಟೇ ಮಾತನಾಡಬಲ್ಲ ಸಂಸ್ಕೃತದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅದೂ ಟ್ರೆಂಡ್ ಆಗುತ್ತಿರುವುದು ಇಂಗ್ಲೀಷಲ್ಲಿ ಸೇ ನೋ ಟು ಸಂಸ್ಕೃತ್! ಈ ಹಿಂದೆ ವಿದೇಶೀ ದೇಣಿಗೆ ಪಡೆಯುತ್ತಿದ್ದ ಸ್ವಯಂ ಸೇವಾ ಸಂಸ್ಥೆಗಳ ಜನ್ಮ  ಜಾಲಾಡಿದ ಹಾಗೆಯೇ ಭಾಷೆ, ಧರ್ಮದ ಹೆಸರಲ್ಲಿ ಸಂಪತ್ತು ಕ್ರೋಢೀಕರಣ ಮಾಡುವರ ಮೇಲೂ ಐಟಿ
ದಾಳಿ ಆಗಲಿ.