Saturday, 14th December 2024

ಬ್ರಿಟಿಷ್ ಕಲೆಕ್ಟರ್‌ನನ್ನು ಹತ್ಯೆ ಮಾಡಿದ ಸಂತಾಲ್

ಶಶಾಂಕಣ

shashidhara.halady@gmail.com

ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಬುಡಕಟ್ಟು ಸಮುದಾಯಗಳಲ್ಲಿ ಸಂತಾಲ್ ಜನರು ಪ್ರಮುಖರು. 1784ರಷ್ಟು ಹಿಂದೆಯೇ,  ಬ್ರಿಟಿಷ್ ಕಲೆಕ್ಟರ್ ಒಬ್ಬನನ್ನು ಹತ್ಯೆ ಮಾಡಿ ಹುತಾತ್ಮನಾದ ತಿಲಕಾ ಮಾಂಝಿ ಎಂಬಾತನು ಸಂತಾಲ ಬುಡಕಟ್ಟಿಗೆ ಸೇರಿದವನು.

ನಮ್ಮ ದೇಶದ ರಾಷ್ಟ್ರಪತಿ ಹುದ್ದೆಗೆ ಈ ಶತಮಾನದ ಅಚ್ಚರಿಯ ಆಯ್ಕೆಗಳಲ್ಲಿ ಒಬ್ಬರು ಎಂದರೆ ದ್ರೌಪದಿ ಮುರ್ಮು. ಇದೇ ಜುಲೈ ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಹುತೇಕ ಆಯ್ಕೆಯಾಗುವುದು ಖಚಿತ ಎನಿಸಿರುವ ದ್ರೌಪದಿ ಮುರ್ಮು ಅವರು, ಆ ಹುದ್ದೆಯನ್ನು ಅಲಂಕರಿಸುವ ಮೂಲಕ ವಿನೂತನ ದಾಖಲೆಯನ್ನು ಬರೆಯಲಿದ್ದಾರೆ.

ದ್ರೌಪದಿ ಮುರ್ಮು ಅವರು ಸಂತಾಲ ಬುಡಕಟ್ಟಿನವರು ಎಂಬುದು ಇನ್ನಷ್ಟು ಕುತೂಹಲ ಹುಟ್ಟಿಸುವ ವಿಚಾರ. ನಮ್ಮ ದೇಶದ ಜಾರ್ಖಂಡ್, ಒಡಿಶಾ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಚದುರಿ ಹೋಗಿರುವ ಸಂತಾಲ್ ಜನರು, ಬಾಂಗ್ಲಾದೇಶದಲ್ಲೂ ಸಾಕಷ್ಟು ಸಂಖ್ಯೆ ಯಲ್ಲಿರುವುದು ವಿಶೇಷ. ಕಳೆದ ಒಂದೆರಡು ದಶಕಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡು ಬಂದಿರುವ ದ್ರೌಪದಿ ಮುರ್ಮು ಅವರು, ಈಗಾಗಲೇ ಜಾರ್ಖಂಡ್‌ನ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡು, ಪತಿಯನ್ನೂ ಕಳೆದುಕೊಂಡು ಸಾಕಷ್ಟು ನೋವನ್ನು ಅನುಭ ವಿಸಿರುವ ಇವರು, ಸರಳತೆಗೆ ಹೆಸರಾಗಿ ದ್ದಾರೆ. ಇವರು ಸೇರಿರುವ ಸಂತಾಲ ಬುಡಕಟ್ಟು ಸ್ಥಳೀಯವಾಗಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ಬುಡಕಟ್ಟು. ಸಂತಾಲರು ಮುಖ್ಯವಾಗಿ ನೆಲೆಸಿರುವುದು ಜಾರ್ಖಂಡ್ ರಾಜ್ಯದಲ್ಲಿ (27 ಲಕ್ಷ) ಮತ್ತು ಪಶ್ಚಿಮ ಬಂಗಾಳ ದಲ್ಲಿ (25 ಲಕ್ಷ). ಒಡಿಶಾದಲ್ಲಿ ಸುಮಾರು 9 ಲಕ್ಷ ಜನರಿದ್ದು, ಇಂದಿಗೂ ತಮ್ಮ ಬುಡಕಟ್ಟು ಜೀವನ ಕ್ರಮವನ್ನು ಉಳಿಸಿಕೊಂಡು ಬಂದಿರುವುದು ವಿಶೇಷ.

2001ರ ಜನಗಣತಿಯಂತೆ ಬಾಂಗ್ಲಾದೇಶದಲ್ಲಿ ಸುಮಾರು ಮೂರು ಲಕ್ಷ ಜನ ಸಂತಾಲರು ಇದ್ದಾರೆ ಮತ್ತು ನೇಪಾಳದಲ್ಲೂ
ಸುಮಾರು 50000 ಜನ ವಾಸಿಸುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ ಸಂತಾಲರಲ್ಲಿ ಶೇ.63 ರಷ್ಟು ಜನ ಹಿಂದೂ ಧರ್ಮಕ್ಕೆ ಸೇರಿದ್ದು, ಶೇ.31 ರಷ್ಟು ಜನರು ಸಾರ್ನಾ (ವನ ಪೂಜೆ) ಪದ್ಧತಿಯನ್ನು ಅನುಸರಿಸುತ್ತಾರೆ. ಇವರಲ್ಲಿ ಶೇ.5ರಷ್ಟು ಕ್ರಿಶ್ಚಿಯನ್ನರು. ಸಂತಾಲರ ಬಹುದೊಡ್ಡ ವರ್ಗ ಸಾರ್ನಾ ಪದ್ಧತಿಯನ್ನು ಅನುಸರಿಸುತ್ತಿರುವುದು ವಿಶೇಷ. ಸಾಲ ಮರ, ಬೇವಿನ ಮರ ಮೊದಲಾದ ಮರಗಳನ್ನೇ
ಪೂಜಿಸುವುದು ಸಾರ್ನಾ ಪದ್ಧತಿಯ ಮುಖ್ಯ ಲಕ್ಷಣ ಮತ್ತು ಅದು ಅವಶ್ಯವಾಗಿ ಬುಡಕಟ್ಟು ಮತ್ತು ಆದಿವಾಸಿ ಜನರ ಜೀವನ ಪದ್ಧತಿ ಎನಿಸಿದೆ.

ಸಂತಾಲರು ಮಾತನಾಡುವ ಭಾಷೆಯನ್ನು ಆಸ್ಟ್ರೋ ಏಸ್ಯಾಟಿಕ್ ಭಾಷಾ ಗುಂಪಿನ ಮುಂಡಾ ಗುಂಪಿಗೆ ಸೇರಿಸಲಾಗಿದ್ದು, ಮುಂಡಾ ಭಾಷೆಗಿಂತಲೂ ಸಂತಾಲಿ ಭಾಷೆಯನ್ನಾಡುವ ಜನರೇ ಅಧಿಕ. ಬಹು ಹಿಂದೆ ಈ ಜನರು ಇಂಡೋಚೀನಾ ಭಾಗದಿಂದ ಬಂದಿರಬಹುದು ಎಂಬುದು ಕೆಲವು ಭಾಷಾ ಶಾಸಜ್ಞರ ಅಂಬೋಣ. ಐತಿಹಾಸಿಕವಾಗಿ, ಸಂತಾಲರು ನಮ್ಮದೇಶದ ಹಜಾರಿ ಬಾಗ್ ಜಿಲ್ಲೆಯ ಸುತ್ತ ಮುತ್ತ ವಾಸಿಸುತ್ತಿದ್ದು,ಅಲ್ಲಿ ಸಂತಾಲ ರಾಜನು ಆಡಳಿತ ನಡೆಸುತ್ತಿದ್ದನೆಂದೂ, ಮೊಗಲರ ಆಕ್ರಮಣವನ್ನು ತಡೆಯಲಾಗದೇ, ದೇಶದಾದ್ಯಂತ ಚದುರಿ ಹೋದರೆಂದೂ ತಿಳಿಯಲಾಗಿದೆ.

1770ರ ಬರಗಾಲದ ಸಮಯದಲ್ಲಿ, ಬಂಗಾಲದಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯವರಿಗೆ ಒಮ್ಮೆಗೇ ಕೆಲಸಗಾರರ ಕೊರತೆ ಉಂಟಾ ಯಿತು. ಚೋಟಾ ನಾಗಪುರದ ಪ್ರದೇಶದಲ್ಲಿ ವಾಸಿಸಿದ್ದ ಸಂತಾಲರನ್ನು ಕೃಷಿ ಕೆಲಸಕ್ಕೆ, ಪ್ಲಾಂಟೇಷನ್ ಕೆಲಸಕ್ಕೆ ಉಪಯೋಗಿಸಿ ಕೊಳ್ಳಲು ಕಂಪೆನಿಯ ಅಧಿಕಾರಿಗಳು ನಿರ್ಧರಿಸಿ, ಅವರನ್ನು ವಿವಿಧ ಪ್ರದೇಶಗಳಿಗೆ ಕರೆಸಿಕೊಂಡರು. ಹಾಳು ಬಿದ್ದ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಯನ್ನು ಆರಂಭಿಸಲು, ಕಬ್ಬಿಣದ ಸಾಮಗ್ರಿ ಖರೀದಿಸಲು ಸಂತಾಲ ಜನರು ಸ್ಥಳೀಯ ಬಡ್ಡಿ ಸಾಹುಕಾರರಿಂದ ಸಾಲ ಪಡೆದರು ಎಂಬುದನ್ನು ಅಂದಿನ ದಾಖಲೆಗಳು ಹೇಳುತ್ತವೆ. ವಿವಿಧ ವಸ್ತುಗಳನ್ನು ಖರೀದಿಸಲು ಜಮೀನನ್ನು ಅಡವಿಟ್ಟ ಸಂತಾಲರು, ಕ್ರಮೇಣ ಜಮೀನಿನ ಮಾಲಕತ್ವವನ್ನು ಕಳೆದುಕೊಂಡು, ಕೃಷಿ ಕಾರ್ಮಿಕರಾಗಿಯೇ ಉಳಿದದ್ದು ಸಹ ಇತಿಹಾಸದಲ್ಲಿ ದಾಖಲಾಗಿದೆ. ಬುಡಕಟ್ಟು ಜನರ ಜೀವನಕ್ರಮವನ್ನೇ ಮುಂದುವರಿಸಿಕೊಂಡು ಬಂದ ಸಂತಾಲರನ್ನು ಬಂಗಾಳದ ಮತ್ತು ಬಿಹಾರದ ವ್ಯಾಪಾರಿಗಳು, ಸಾಹುಕಾರರು ಸಾಕಷ್ಟು ಶೋಷಣೆಗೆ ಒಳಪಡಿಸಿದರು.

ನಮ್ಮ ದೇಶದ ಇತಿಹಾಸವನ್ನು ಗಮನಿಸಿದರೆ, ಬ್ರಿಟಿಷರ ವಿರುದ್ಧ ಬಂಡೆದ್ದ ಮೊದಲ ಬುಡಕಟ್ಟು ಜನಾಂಗದಲ್ಲಿ ಸಂತಾಲರು ಪ್ರಮುಖರು. 1757ರಲ್ಲಿ ಬಂಗಾಳದಲ್ಲಿ ಸಿರಾಜ್ ಉದ್ದೌಲನನ್ನು ಸದೆಬಡಿದ ಬ್ರಿಟಿಷರು, ಈಸ್ಟ್ ಇಂಡಿಯಾ ಕಂಪೆನಿಯ ಸರಕಾರವನ್ನು ಸ್ಥಾಪಿಸಿದ್ದು ಸರಿಯಷ್ಟೆ. ಸ್ಥಳೀಯ ರಾಜರುಗಳು ಬ್ರಿಟಿಷರನ್ನು ಎದುರಿಸಲು ಬೆದರಿದರು. ಆದರೆ ಸಂತಾಲರ ನಾಯಕ ತಿಲಕಾ ಮಾಂಝಿ (ತಿಲಕಾ ಮುರ್ಮು ಎಂದೂ ಕರೆದಿದ್ದಾರೆ) ಎಂಬಾತನು, 1784ರಲ್ಲಿ ಬ್ರಿಟಿಷ್ ಅಽಕಾರಿಗಳನ್ನು ಎದುರಿಸಿದ, ಮಾತ್ರವಲ್ಲ ಭಾಗಲ್ಪುರ ಜಿಲ್ಲೆಯ ಕಲೆಕ್ಟರ್ ಆಗಸ್ಟಸ್ ಕ್ಲೀವ್‌ಲ್ಯಾಂಡ್ ಎಂಬಾತನನ್ನು ಸಾಯಿಸಿದ! ಆ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಎಂದೆನಿಸಿದ್ದಾನೆ ತಿಲಕಾ ಮಾಂಝಿ. ಸ್ಥಳೀಯರ ವಿರುದ್ಧ ಕ್ರೂರವಾಗಿ ನಡೆದುಕೊಳ್ಳುತ್ತಿದ್ದ ಆಗಸ್ಟಸ್ ಕ್ಲೀವ್‌ಲ್ಯಾಂಡ್, ಈತನ ಬಾಣಕ್ಕೆ ಬಲಿಯಾಗಿದ್ದು ಭಾಗಲ್ಪುರ ಪ್ರದೇಶದಲ್ಲಿ.

ಬ್ರಿಟಿಷರ ವಿರುದ್ಧ ಹೋರಾಡಲು ಆತ ಮತ್ತು ಆತನ ಸಂಗಡಿಗರು ಉಪಯೋಗಿಸಿದ್ದು ಬಿಲ್ಲು ಮತ್ತು ಬಾಣಗಳನ್ನು! ಆ ನಂತರ ಹಲವು ದಿನಗಳ ತನಕ ಆತ ಮತ್ತು ಆತನ ಸಂಗಡಿಗರು ಕಾಡಿನಲ್ಲಿ ಅಡಗಿದರು. ಕೊನೆಗೂ ಆತನನ್ನು ಬಂಽಸಿದ ಬ್ರಿಟಿಷರು, ಕುದುರೆಯ ಬಾಲಕ್ಕೆ ಆತನನ್ನು ಕಟ್ಟಿ, ಭಾಗಲ್ಪುರಕ್ಕೆ ಎಳೆದುಕೊಂಡು ಬಂದರು. ಜತೆಗೆ, ಜಿಲ್ಲಾ ಕಲೆಕ್ಟರ್ ನಿವಾಸದ ಎದುರು, ಒಂದು ಆಲದ ಮರಕ್ಕೆ ಆತನ
ಶವವನ್ನು 13.1.1785ರಂದು ನೇತುಹಾಕಿದರು! ಆ ಜಾಗದಲ್ಲಿ ತಿಲಕಾ ಮಾಂಜಿಯ ವಿಗ್ರಹವನ್ನು ಇಂದು ಸ್ಥಾಪಿಸಲಾಗಿದೆ. ಜತೆಗೆ ಭಾಗಲ್ಪುರ ವಿಶ್ವವಿದ್ಯಾಲಯಕ್ಕೆ ‘ತಿಲಕಾ ಮಾಂಝಿ ವಿಶ್ವವಿದ್ಯಾಲಯ’ ಎಂದು ಹೆಸರಿಸಿ ಗೌರವಿಸಲಾಗಿದೆ.

ಆ ನಂತರವೂ ಬ್ರಿಟಿಷರ ದಬ್ಬಾಳಿಕೆಯನ್ನು ಸಂತಾಲರು ವಿರೋಧಿಸುತ್ತಲೇ ಬಂದಿದ್ದರು. ಬುಡಕಟ್ಟು ಜನರ ಮೇಲೆ ವಿಪರೀತ ತೆರಿಗೆ ವಿಧಿಸಿ ಶೋಷಿಸುವುದು ಬ್ರಿಟಿಷರ ಒಂದು ಕ್ರೂರ ಪದ್ಧತಿ. ಇದನ್ನು ಒಪ್ಪದ ಸಂತಾಲರು, ಬಂಡೆದ್ದದ್ದುಂಟು. ಆದರೆ, ಭೂಮಾಲಿಕರ ಪರವಾಗಿದ್ದ ಬ್ರಿಟಿಷರು, ಸಂತಾಲರ ಹೋರಾಟವನ್ನು ಹತ್ತಿಕ್ಕಿದರು. ಬ್ರಿಟಿಷರ ತೆರಿಗೆಯ ಭಾರಕ್ಕೆ ನಲುಗಿದ ಸಂತಾಲರು, 1855ರಲ್ಲಿ ಬಂಡಾಯವೇಳುತ್ತಾರೆ. ಸುಮಾರು 30000 ಸಂತಾಲರರನ್ನು ಒಗ್ಗೂಡಿಸಿ, ಸಿಧು ಮತ್ತು ಕಾನ್ಹು ಮುರ್ಮು ಎಂಬ ಇಬ್ಬರು ನಾಯಕರು
ಜಮೀನುದಾರರ ಮೇಲೆ ಆಕ್ರಮಣ ಮಾಡುತ್ತಾರೆ, ಬ್ರಿಟಿಷ್ ಅಽಕಾರಿಗಳನ್ನು ಕಾಡುತ್ತಾರೆ. ಬ್ರಿಟಿಷ್ ಸರಕಾರವು ಸಂತಾಲರ ಹೋರಾಟಕ್ಕೆ ಆರಂಭದಲ್ಲಿ ತುಸು ನಲುಗಿದರೂ, 10000 ಸೈನಿಕರನ್ನು ಮತ್ತು ಪೊಲೀಸರನ್ನು ಬಳಸಿ ಸಂತಾಲರ ಹೋರಾಟವನ್ನು
ದಮನಿಸುತ್ತಾರೆ.

ಕೊನೆಗೆ, ಸಂತಾಲರ ಅಸ್ತಿತ್ವವನ್ನು ತಕ್ಕ ಮಟ್ಟಿಗೆ ಗುರುತಿಸಲೆಂದು, ಸಂತಾಲ ಪರಗಣ ಎಂಬ ಒಂದು ಮೀಸಲು ಪ್ರದೇಶವನ್ನು ಬ್ರಿಟಿಷ್
ಸರಕಾರ ಘೋಷಿಸಿತು. ಸುಮಾರು 5000 ಚದರ ಕಿ.ಮೀ. ವಿಸ್ತೀರ್ಣದ ಸಂತಾಲ ಪರಗಣದಲ್ಲಿ ಬ್ರಿಟಿಷರ ತೆರಿಗೆಯ ಕಾನೂನುಗಳು ಸಂಪೂರ್ಣ ಲಾಗೂ ಆಗದೇ ಇರುವುದರಿಂದ, ಸಂತಾಲರಿಗೆ ಸಾಕಷ್ಟು ಸ್ವಾತಂತ್ರ್ಯವನ್ನು ನೀಡಿದಂತಾಯಿತು. ಸಂತಾಲ ಪರಗಣವು ಇಂದು ಜಾರ್ಖಂಡ್ ರಾಜ್ಯದ ಒಂದು ಜಿಲ್ಲೆಯಾಗಿದೆ. ಸಂತಾಲರ ಅಂದಿನ ಬಂಡಾಯದ ನೆನಪಿನಲ್ಲಿ, ಜಾರ್ಖಂಡ್ ರಾಜ್ಯವು ರೂಪು ಗೊಂಡದ್ದು ಒಂದು ವಿಶೇಷ ಮತ್ತು ಸಂತಾಲರ ಹೋರಾಟಕ್ಕೆ ದೊರೆತ ಗೌರವ.

ಇಪ್ಪತ್ತನೆಯ ಶತಮಾನದಲ್ಲಿ ಮತ್ತೊಮ್ಮೆ ಸಂತಾಲರು ಹೋರಾಟ ನಡೆಸಿದರು! ಬ್ರಿಟಿಷರ ವಿರುದ್ಧ ಹೋರಾಟದ ಬೀಜಗಳು ದೇಶದಾ ದ್ಯಂತ ಚಿಗುರುತ್ತಿದ್ದ ಕಾಲ. ಸಂತಾಲ ಹೋರಾಟಕ್ಕೆ ಜಿತು ಸರ್ದಾರ್ ಆಗ ನಾಯಕತ್ವ ವಹಿಸಿದರು. ಗಾಂಧೀಜಿಯವರ ಹೋರಾಟದ ಸೂರ್ತಿಯಿಂದ, ಸಂತಾಲರು ಜಮೀನುದಾರರಿಗೆ ತೆರಿಗೆ ನೀಡುವುದನ್ನು ನಿಲ್ಲಿಸಿದರು. ಬ್ರಿಟಿಷ್ ಸರಕಾರದ ಉದ್ಯೋಗಿ ಗಳನ್ನು ಥಳಿಸಿದರು. ಬಡ್ಡಿ ಸಾಹುಕಾರರ ವಿರುದ್ಧ ಹೋರಾಟ ನಡೆಸಿದರು. 1932ರಲ್ಲಿ ಜಿತು ಸರ್ದಾರ್‌ನ ನೇತೃತ್ವದಲ್ಲಿ ತಮ್ಮದೇ ಒಂದು ರಾಜ್ಯವನ್ನು ಸ್ಥಾಪಿಸಲು ನಿರ್ಧರಿಸಿದರು. ಆದರೆ, ಇದಕ್ಕೆ ಸೂಕ್ತ ಬೆಂಬಲ ದೊರಕಲಿಲ್ಲ. ಅದೇನೇ ಇದ್ದರೂ, ಇತಿಹಾಸದುದ್ದಕ್ಕೂ ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಮುಂದುವರಿಸಿಕೊಂಡು ಬಂದದ್ದು ಸಂತಾಲರ ಹೋರಾಟದ ಭಾಗ ಎನಿಸಿತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದಾಗ, ಸಂತಾಲ ಬುಡಕಟ್ಟಿನ ಜನರು ವಿವಿಧ ರಾಜ್ಯಗಳಲ್ಲಿ ಮತ್ತು ಪೂರ್ವ ಪಾಕಿಸ್ತಾನದಲ್ಲಿ ಸೇರಿಹೋದರು.

ನಮ್ಮದೇಶದಲ್ಲಿ ಅವರನ್ನು ಷೆಡ್ಯೂಲ್ಡ್ ಟ್ರೈಬ್‌ಗೆ ಸೇರಿಸಲಾಯಿತು. 2000ರಲ್ಲಿ ಜಾರ್ಖಂಡ್ ರಾಜ್ಯವನ್ನು ರೂಪಿಸಿದಾಗ, ಸಂತಾಲ ಮತ್ತು ಇತರ ಬುಡಕಟ್ಟು ಜನರ ಬಹುದಿನಗಳ ಬೇಡಿಕೆಯೊಂದನ್ನು ಈಡೇರಿಸಿದಂತಾಯಿತು. ಸಂತಾಲರು ದೇಶದ ವಿವಿಧ ರಾಜ್ಯಗಳಲ್ಲಿ ಹರಡಿ ದ್ದರೂ, ಸಂತಾಲ ಪರಗಣ ಜಿಲ್ಲೆಯು ಅವರ ಸಾಂಸ್ಕೃತಿಕ ಅಸ್ಮಿತೆಯ ಭಾಗ ಎನಿಸಿದೆ. ಸಂತಾಲ ಬುಡಕಟ್ಟಿನ ಜನರು ತಮ್ಮ ಸಂಸ್ಕೃತಿ ಯನ್ನು, ಹಲವು ಪುರಾತನ ಪದ್ಧತಿಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷ.

ಸಂತಾಲರಲ್ಲಿ ಏಳು ವಿಧದ ಮದುವೆಗಳಿವೆ! ಹೆಚ್ಚು ಪ್ರಚಲಿತದಲ್ಲಿರುವುದು ‘ಹಿರಿಯರ ಮದುವೆ’ (ಹಪ್ರಂಕೋ ಬಾಪ್ಲಾ) ಮತ್ತು ಕೆಸಿಮೆಕ್. ಇವುಗಳಲ್ಲಿ ಕೆಸಿಮೆಕ್ ಹೆಚ್ಚು ಜನಪ್ರಿಯ. ಈ ವಿಧಾನ ದಲ್ಲಿ ಮದುವೆಯಾಗಲು ನಿರ್ಧರಿಸಿದ ಹುಡುಗ ಮತ್ತು ಹುಡುಗಿ, ನೇರವಾಗಿ ಹುಡಗನ ಮನೆಗೆ ಹೋಗಿ,ಅಲ್ಲೇ ಕೆಲವು ಕಾಲ ತಂಗುತ್ತಾರೆ! ನಂತರ ಹುಡುಗಿಯ ಹಿರಿಯರು, ಊರಿನ ಹಿರಿಯರು ಅಲ್ಲಿಗೆ ಬಂದು, ಮಾತುಕತೆ ನಡೆಸುತ್ತಾರೆ. ಹುಡುಗಿಗೆ ನೀಡುವ ವಧುದಕ್ಷಿಣೆಯ ಮೊತ್ತವು ಒಂದು ಮುಖ್ಯ ವಿಚಾರ. ಅದರ ಕುರಿತು ಒಪ್ಪಂದಕ್ಕೆ ಬಂದ
ನಂತರ, ಬೇರೆಲ್ಲವೂ ಹಿರಿಯರ ಮಾರ್ಗದರ್ಶನ ದಲ್ಲಿ ನಡೆದು, ಹುಡುಗ ಹುಡುಗಿ ಮದುವೆ ಯಾಗುತ್ತಾರೆ. ದೀಪಾವಳಿಯ ಸಮಯದಲ್ಲಿ ಆಚರಿಸಲ್ಪಡುವ ಸೊಹಾರಿ ಹಬ್ಬವು ಸಂತಾಲರಲ್ಲಿ ವಿಶೇಷ.

ಸಂತಾಲರ ಜತೆಯಲ್ಲೇ, ಕುರ್ಮಿ, ಮುಂಡಾ, ಪ್ರಜಾಪತಿ ಮೊದಲಾದ ಇತರ ಬುಡಕಟ್ಟು ಜನರು ಸಹ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಕಾರ್ತಿಕ ಮಾಸದ ಅಮಾವಾಸೆಯ ಸಮಯ ದಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕಾಗಿ ಮನೆಗೆ ಬಣ್ಣ ಬಳಿಯುವುದು ವಿಶೇಷ. ಇದನ್ನು ಅವರು ಸಾಕುಪ್ರಾಣಿಗಳನ್ನು ಪೂಜಿಸುವ ಮೂಲಕ ಆಚರಿಸುತ್ತಾರೆ. ಕೊಟ್ಟಿಗೆಗಳಲ್ಲಿ ಹಣತೆಯನ್ನಿಟ್ಟು ಪೂಜಿಸಿ, ಪಶುಪತಿ ಯನ್ನು ಆರಾಧಿಸುತ್ತಾರೆ.

ಸುಮಾರು ಎಪ್ಪತ್ತು ಲಕ್ಷ ಜನರು ಮಾತನಾಡುವ ಸಂತಾಲಿ ಭಾಷೆಗೆ ತನ್ನದೇ ಆದ ಅಸ್ತಿತ್ವವಿದೆ. 1925ರ ತನಕ ಈ ಭಾಷೆಗೆ ಲಿಪಿ ಇರಲಿಲ್ಲ. ಪಂಡಿತ ರಘುನಾಥ ಮುರ್ಮು ಎಂಬವವರು ಸಂತಾಲಿಗೆಂದೇ ಓಲ್ ಚಿಕಿ ಎಂಬ ಲಿಪಿಯನ್ನು ರೂಪಿಸಿ, ಬರೆಯಲು ಅಭ್ಯಾಸ ಮಾಡಿದರು ಮತ್ತು 1939ರಲ್ಲಿ ಪ್ರಚುರಪಡಿಸಿದರು. ನಂತರದ ವರ್ಷಗಳಲ್ಲಿ ಈ ಲಿಪಿಯು ಸಂತಾಲ ಜನರಲ್ಲಿ ಹೆಚ್ಚು ಬಳಕೆಯಲ್ಲಿದೆ.

ಜತೆಗೆ, ಒಡಿಯಾ, ಬಂಗಾಳಿ, ಹಿಂದಿಯಲ್ಲೂ ಸಂತಾಲಿಯನ್ನು ಬರೆಯುವ ಅಭ್ಯಾಸವಿದೆ. ಈ ನಡುವೆ, ಬ್ರಿಟಿಷ್ ಪಾದ್ರಿಗಳು ಮತ್ತು ಭಾಷಾ ತಜ್ಞರು ರೋಮನ್ ಲಿಪಿಯನ್ನು ಬಳಸಿ ಸಂತಾಲಿ ಭಾಷೆಯನ್ನು ಬರೆದದ್ದುಂಟು. ಸಂತಾಲಿ ಭಾಷೆಯು ಇಂದು ಸಾಕಷ್ಟು ಪ್ರಸಿದ್ಧ.
೨೦೦೫ರಿಂದ ಸಂತಾಲಿ ಭಾಷೆಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಹೊಸ ರಾಷ್ಟ್ರಪತಿಗಳ ಆಯ್ಕೆಯಾದ ನಂತರ,
ಸಂತಾಲಿ ಭಾಷೆಗೆ ಇನ್ನಷ್ಟು ಪ್ರಾಮುಖ್ಯತೆ ದೊರೆಯುವ ನಿರೀಕ್ಷೆ ಇದೆ. ಜತೆಗೆ, ಬ್ರಿಟಿಷರ ಆಳ್ವಿಕೆಯನ್ನು ಎದುರಿಸಿ, ಯುರೋಪಿಯನ್ ಕಲೆಕ್ಟರ್ ಒಬ್ಬನನ್ನು ಹತ್ಯೆ ಮಾಡಿದ ಮೊತ್ತಮೊದಲ ಬುಡಕಟ್ಟು ಹೋರಾಟಗಾರ ಬಾಬಾ ತಿಲಕಾ ಮಾಝಿ ಯವರ ಬಲಿದಾನವು ಹೆಚ್ಚು ಜನರಿಗೆ ಪರಿಚಯವಾಗಲಿದೆ.