Sunday, 15th December 2024

ಸಪ್ತರ್ಷಿ, ಸಪ್ತ ಚಿರಂಜೀವಿ ರೀತಿಯ ಯಾದಗಳಿರುವ ಶ್ಲೋಕಗಳು

ತಿಳಿರು ತೋರಣ

srivathsajoshi@yahoo.com

‘ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ| ಕೃಪಃ ಪರಶುರಾಮಶ್ಚ ಸಪ್ತೈತೇ ಸ್ಥಿರಜೀವಿನಃ||’ ಈ ಶ್ಲೋಕ ನಿಮಗೆ ಗೊತ್ತಿರಬಹುದು.
ರಾಮಾಯಣ-ಮಹಾಭಾರತ ಪೌರಾಣಿಕ ಪಾತ್ರಗಳಲ್ಲಿ ಏಳು ಮಂದಿಯನ್ನು ಚಿರಂಜೀವಿಗಳೆಂದು ಗುರುತಿಸಿರುವುದು.

ಅವರೊಂದಿಗೆ ಎಂಟನೆಯವರು ಮೊನ್ನೆ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಮೆಗಾಸ್ಟಾರ್ ಚಿರಂಜೀವಿ- ಎಂದು ನನ್ನೊಬ್ಬ ತೆಲುಗು ಸ್ನೇಹಿತನ ಅಭಿಮಾನಪೂರ್ವಕ ಹಾಸ್ಯೋಕ್ತಿ. ನಾನೇನು ಕಡಿಮೆಯೇ, ನಮ್ಮ ಕನ್ನಡದಲ್ಲಿ ‘ಚಿ.’ಉದಯಶಂಕರ್ ಇದ್ದಾರೆ ಎಂದು ಅವನಿಗೆ ಸೂಕ್ತ ಉತ್ತರ ನೀಡಿದೆ. ಆದರೆ ಈಗ ಅವರಿಲ್ಲವಲ್ಲ ಎಂದು ಆತ ತಗಾದೆ ಎತ್ತಿದ್ದಕ್ಕೆ ‘ರಸಸಿದ್ಧರೂ ಕವೀಶ್ವರರೂ ಅಮರರಾಗಿಯೇ ಇರುತ್ತಾರೆ…’ ಎಂಬರ್ಥದಲ್ಲಿ ಸಾಗರಸಂಗಮಂ ಚಿತ್ರದಲ್ಲಿ ಉದ್ಧೃತವಾಗಿರುವ ಸಂಸ್ಕೃತ ಶ್ಲೋಕವನ್ನು ಅವನಿಗೆ ನೆನಪಿಸಿದೆ.

ಅಂತೂ ಚರ್ಚೆಯನ್ನು ಮುಗಿಸಿದೆ. ಅಲ್ಲ, ಕಾಡುಹರಟೆಯನ್ನು ನಿಲ್ಲಿಸಿದೆ. ಆದರೆ ನಾವು ಆವತ್ತು ಚರ್ಚಿಸುತ್ತಿದ್ದದ್ದು ಒಳ್ಳೆಯ ವಿಷಯವೇ. ಸಪ್ತ ಚಿರಂಜೀವಿಗಳನ್ನು ಪಟ್ಟಿ ಮಾಡಿರುವ ಈ ಶ್ಲೋಕದಂತೆಯೇ ಸಂಸ್ಕೃತ ವಾಙ್ಮಯ ವಾರಿಧಿಯಲ್ಲಿ ಸಿಗುವ ಅನೇಕ ಮುತ್ತುಗಳ ಬಗ್ಗೆ. ಅವುಗಳ ಪೈಕಿ ನಮ್ಮ ಚರ್ಚೆಯಲ್ಲಿ ನೆನಪಿಗೆ ಬಂದ ಕೆಲವೇಕೆಲವನ್ನು ಬರೆದಿಟ್ಟುಕೊಂಡು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಇವು ನಿಮಗೆ ಗೊತ್ತಿಲ್ಲವೆಂದೇ ನಲ್ಲ, ಆದರೆ ಆಗಾಗ ಇಂಥವುಗಳನ್ನು ಮೆಲುಕು ಹಾಕುವುದೂ ಮುದ ಕೊಡುವ ಚಟುವಟಿಕೆಯೇ. ಅಷ್ಟಾಗಿ, ಇವು ಶ್ಲೋಕರೂಪ ದಲ್ಲಿರುವುದೇ ನೆನಪಿಟ್ಟು ಕೊಳ್ಳಲಿಕ್ಕೆ ಸುಲಭವಾಗಬೇಕೆಂದು!

ಮುಂದುವರಿಸುವ ಮೊದಲು, ಚಿರಂಜೀವಿಗಳ ಯಾದಿಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸೋಣ. ಇದರಲ್ಲಿ ಹನುಮಂತ ತ್ರೇತಾಯುಗದಲ್ಲಿ ರಾಮನ ಬಂಟನಾಗಿದ್ದವನು, ದ್ವಾಪರ ಯುಗ ದಲ್ಲಿ ಸೌಗಂಧಿಕಾಪುಷ್ಪ ತರಲಿಕ್ಕೆ ಹೊರಟ ಭೀಮಸೇನನ ದಾರಿಗೆ ಅಡ್ಡವಾಗಿ ಬಾಲವನ್ನು ಹರಡಿಕೊಂಡು ಕುಳಿತಿದ್ದನು-ಎಂಬ ಕಥೆಯಿಂದ ಆತನ ಚಿರಂಜೀವಿತನ ಗೊತ್ತಾಗುತ್ತದೆ. ಅಷ್ಟೇಕೆ, ಕಲಿಯುಗದಲ್ಲೂ ಹನುಮಂತ ನಮ್ಮೆಲ್ಲರ ಹೃದಯ ಗೆದ್ದವನು.
ಪರಶುರಾಮ ಸಹ ರಾಮಾಯಣದಲ್ಲಿ ಶ್ರೀರಾಮನಿಗೆ ಮುಖಾಮುಖಿಯಾಗಿ ತನ್ನ ವೈಷ್ಣವತೇಜಸ್ಸನ್ನು ಕಳೆದುಕೊಂಡಿದ್ದು, ಮಹಾ ಭಾರತದಲ್ಲಿ ಕರ್ಣನಿಗೆ ಆಪತ್ಕಾಲದಲ್ಲಿ ಅಸ್ತ್ರವಿದ್ಯೆ ಮರೆತು ಹೋಗುವಂತೆ ಶಾಪವಿತ್ತದ್ದು ನಾವೆಲ್ಲ ಓದಿ ರೋಮಾಂಚನಗೊಂಡ ಕಥೆಗಳು. ಪರಶುರಾಮ ಚಿರಂಜೀವಿ ಎನ್ನುವುದೂ ಸುಲಭದಲ್ಲಿ ಮನವರಿಕೆಯಾಗುತ್ತದೆ.

ರಾಮಾಯಣದ ವಿಭೀಷಣನ ಉಲ್ಲೇಖ ಮಹಾಭಾರತದಲ್ಲಿ ಯುಧಿಷ್ಠಿರನ ರಾಜಸೂಯ ಯಾಗ ಸಂದರ್ಭದಲ್ಲಿ ಬರುತ್ತದೆ. ದಕ್ಷಿಣ ದಿಗ್ವಿಜಯಕ್ಕೆ ಹೊರಟಿದ್ದ ಸಹದೇವನು ವಿಭೀಷಣನಿಂದ ಕಪ್ಪವನ್ನು ತರುವಂತೆ ಘಟೋತ್ಕಚನನ್ನು ಕಳುಹಿಸಿದನು ಮತ್ತು ವಿಭೀಷಣನು ಆತನನ್ನು ಮನ್ನಿಸಿ ಕಪ್ಪ ಕೊಟ್ಟನು ಎಂದು ಬರುವುದರಿಂದ ವಿಭೀಷಣನೂ ಯುಗಾಂತರದ ಚಿರಂಜೀವಿ. ಬಲಿಚಕ್ರವರ್ತಿಯಂತೂ ಕೃತಯುಗದಲ್ಲೇ ವಾಮನಾವತಾರದ ವಿಷ್ಣುವಿನಿಂದ ಪಾತಾಳಕ್ಕೆ ತಳ್ಳಲ್ಪಟ್ಟವನು ಕಲಿಯುಗ ದಲ್ಲೂ ವರ್ಷಕ್ಕೊಮ್ಮೆ ಭೂಲೋಕಕ್ಕೆ ಭೇಟಿನೀಡುವ ವರ ಪಡೆದವನಾದ್ದರಿಂದ ಸುಲಭಗ್ರಾಹ್ಯ ಚಿರಂಜೀವಿ. ಅಶ್ವತ್ಥಾಮ, ಕೃಪಾ ಚಾರ್ಯ, ಮತ್ತು ವ್ಯಾಸಮಹರ್ಷಿ ನಮಗೆ ಮಹಾಭಾರತದಲ್ಲೇ ಮೊದಲ ಬಾರಿಗೆ ಪರಿಚಯವಾಗುವವರು. ಅವರ ಚಿರಂಜೀವಿತನ ವನ್ನು ನಾವು ಊಹಿಸಿ ಒಪ್ಪಿಕೊಳ್ಳಬೇಕು.

ಇನ್ನು, ಮೇಲೆ ತಿಳಿಸಿದಂತೆ ತೆಲುಗು ಸ್ನೇಹಿತನೊಡನೆ ಚರ್ಚೆಯಲ್ಲಿ ಚಿ.ಉದಯಶಂಕರ್ ಹೆಸರನ್ನು ನಾನು ಪದವಿನೋದಕ್ಕಷ್ಟೇ ಬಳಸಿದ್ದು. ಅಲ್ಲಿ ಚಿ ಅಂದರೆ ಚಿಟ್ಟನಹಳ್ಳಿ ಎಂದು ಗೊತ್ತು. ಅಲ್ಲದೇ ಉದಯಶಂಕರ್ ಹಿರಿಯರು. ಅವರನ್ನು ನಾನೆಂತು ‘ಚಿ.’ ಎಂದು ಉಲ್ಲೇಖಿಸಲಿ? ಆದರೂ ನಮ್ಮ ಸಂಸ್ಕೃತಿ ಅದೆಷ್ಟು ಚಂದ ನೋಡಿ. ಪ್ರಾಯದಲ್ಲಿ ಚಿಕ್ಕವರನ್ನು ದೊಡ್ಡವರು ‘ಚಿರಂಜೀವಿಯಾಗಿರು’ ಎಂಬ ಆಶಯ ದೊಂದಿಗೆ ಸಂಬೋಧಿಸಿ ಆಶೀರ್ವದಿಸುವುದು!

ಸಪ್ತ ಚಿರಂಜೀವಿಗಳಂತೆಯೇ ಪ್ರಾತಃಸ್ಮರಣೀಯರು ಸಪ್ತರ್ಷಿಗಳು. ಸನಾತನ ಸಂಸ್ಕೃತಿಯಲ್ಲಿ ಸಹಸ್ರಾರು ಮಹರ್ಷಿಗಳು ವೇದ ಶಾಸ್ತ್ರಪುರಾಣ ಗಳನ್ನು ಸಂರಕ್ಷಿಸಿದವರಿದ್ದಾರೆ. ಇವರಲ್ಲಿ ಗೋತ್ರ ಪ್ರವರ್ತಕರು, ಸೂತ್ರಕಾರರು, ಮಂತ್ರದ್ರಷ್ಟಾರರು, ವೇದ ಸಂರಕ್ಷಕರು-ಹೀಗೆ ಎಲ್ಲರೂ ಮಹಾತ್ಮರೇ. ಆದರೂ ಸಪ್ತರ್ಷಿ ಗಳದೇ ಒಂದು ವಿಶೇಷ ಖದರು. ಈ ಶ್ಲೋಕದಲ್ಲಿ ಅವರನ್ನು ಸ್ಮರಿಸಲಾಗಿದೆ: ‘ಕಶ್ಯಪೋಧಿ ತ್ರಿರ್ಭರದ್ವಾಜಃ ವಿಶ್ವಾಮಿತ್ರೋಧಿಥ ಗೌತಮಃ| ಜಮದಗ್ನಿರ್ವಸಿಷ್ಠಶ್ಚ ಸಪ್ತೈತೇ ಋಷಯಃ ಸ್ಮೃತಾಃ||’ ದಿತಿ- ಅದಿತಿಯರ ಪತಿ ಕಶ್ಯಪ ಮಹರ್ಷಿ; ಅನಸೂಯಾಪತಿ ಅತ್ರಿ ಮಹರ್ಷಿ; ಸುಶೀಲಾದೇವಿಯ
ಪತಿ ಭರದ್ವಾಜ ಮಹರ್ಷಿ; ರಾಮ-ಲಕ್ಷ್ಮಣರಿಗೆ ವಿದ್ಯಾಗುರು ವಾಗಿದ್ದ ವಿಶ್ವಾಮಿತ್ರ; ಅಹಲ್ಯೆಯ ಪತಿ ಗೌತಮ; ರೇಣುಕಾಪತಿ ಜಮದಗ್ನಿ; ಅರುಂಧ ತೀಪತಿ ವಸಿಷ್ಠ- ಇವರೆಲ್ಲರೂ ಉಪಪ್ರಜಾಪತಿ ಎಂಬ ಶ್ರೇಷ್ಠತೆ ಯನ್ನೂ ಪಡೆದ ಸಪ್ತರ್ಷಿಗಳು.

ಇಲ್ಲೊಂದು ಸ್ವಾರಸ್ಯವಿದೆ. ಪರಶು ರಾಮ ಸಪ್ತ ಚಿರಂಜೀವಿಗಳಲ್ಲೊಬ್ಬನಾದರೆ ಆತನ ತಂದೆ ಜಮದಗ್ನಿ ಸಪ್ತರ್ಷಿ ಗಳಲ್ಲೊಬ್ಬರು! ಬೆಳಗಾಗ ನಾನೆದ್ದು
ಯಾರ್ಯಾರ ನೆನೆಯಲಿ ಎಂದರೆ ಇಂತಹ ತಪೋನಿಽಗಳನ್ನೇ. ಅಂತೆಯೇ, ‘ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರಿ ತಥಾ| ಪಂಚಕಂ ನಾ ಸ್ಮರೇ ನ್ನಿತ್ಯಂ ಮಹಾಪಾತಕನಾಶನಮ್||’ ಈ ಐವರು ಪತಿವ್ರತಾರತ್ನರೆನಿಸಿದ ಸ್ತ್ರೀಯರನ್ನು. ಇಲ್ಲೂ ಒಂದು ಸ್ವಾರಸ್ಯ: ಪತಿ ಗೌತಮ ಸಪ್ತರ್ಷಿಗಳಲ್ಲೊಬ್ಬರಾಗಿ ಪ್ರಾತಃಸ್ಮರಣೀ ಯರು; ಪತ್ನಿ ಅಹಲ್ಯಾ ಪತಿವ್ರತೆಯಾಗಿ ಪ್ರಾತಃಸ್ಮರಣೀಯಳು.

ದುಷ್ಟರ ಭಾರ್ಯೆಯರಾಗಿಯೂ ತಾರಾ ಮತ್ತು ಮಂಡೋದರಿಗೆ ಗೌರವ ಸ್ಥಾನ. ಸನಾತನ ಸಂಸ್ಕೃತಿಯಲ್ಲಿ ಹೆಂಡತಿಗೆ ಗಂಡ ನಿಂದಾಗಿಯೇ ಗುರುತು-ಗೌರವ ಅಂತೇನಿಲ್ಲ. ಪಂಚಪವಿತ್ರಕಗಳದು ಒಂದು ಪಟ್ಟಿ ಇದೆ: ‘ಉಚ್ಛಿಷ್ಟಂ ಶಿವ ನಿರ್ಮಾಲ್ಯಂ ವಮನಂ ಶವಕರ್ಪಟಮ್| ಕಾಕವಿಷ್ಠಾಸಮುದ್ಭೂತಂ
ಪಂಚೈತೇಧಿತಿಪವಿತ್ರಕಾಃ||’ ಇದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಸಂಸ್ಕೃತ ಗೊತ್ತಿದ್ದರಷ್ಟೇ ಸಾಲದು, ಸ್ವಲ್ಪ ಲ್ಯಾಟರಲ್ ಥಿಂಕಿಂಗ್ ಸಹ ಬೇಕು. ಉಚ್ಛಿಷ್ಟ ಅಂದರೆ ಎಂಜಲಾದದ್ದು. ಕರು ಎಂಜಲುಮಾಡಿದ ಕೆಚ್ಚಲಿನಿಂದ ಬಂದ ಹಾಲು ಪವಿತ್ರ, ಪಂಚಾಮೃತಾಭಿಷೇಕಕ್ಕೂ, ಪಂಚಗವ್ಯಪ್ರಾಯಶ್ಚಿತ್ತಕ್ಕೂ, ಭಗವಂತನ ನೈವೇದ್ಯಕ್ಕೂ. ಶಿವನ ಮುಡಿಗೇರಿ ಹೊರಬಂದ, ತನ್ಮೂಲಕ ನಿರ್ಮಾಲ್ಯಳಾದ ಗಂಗೆ ಪವಿತ್ರಳು. ವಮನ ಅಂದರೆ ವಾಂತಿ. ಜೇನುನೊಣಗಳ ವಾಂತಿಯೇ ಜೇನುತುಪ್ಪ. ಅದೂ ಪವಿತ್ರವಷ್ಟೇ ಅಲ್ಲ ಪರಿಶುದ್ಧ ಕೂಡ.

ಶವಕರ್ಪಟ ಅಂದರೆ ಹೆಣದ ಬಟ್ಟೆ. ರೇಷ್ಮೆಹುಳಗಳನ್ನು ಸಾಯಿಸಿ ಮಾಡಿರುವ ‘ಮಡಿ’ ಬಟ್ಟೆ! ಕಾಕವಿಷ್ಠಾಸಮುದ್ಭೂತ ಅಂದರೆ ಅಶ್ವತ್ಥ ಮರ. ಹೇಗೆ? ಕಾಗೆಯು ಅರಳೀಮರದ ಬೀಜ ತಿಂದು ಅದು ಕಾಗೆಯ ಮಲದ ಮೂಲಕ ಹೊರಕ್ಕೆ ಬಂದು ಭೂಮಿಗೆ ಬಿದ್ದು ಮೊಳೆತು ಹೆಮ್ಮರವಾಗುತ್ತದೆ. ಪೂಜನೀಯವೆನಿಸುತ್ತದೆ. ಈ ಪಂಚ ಪವಿತ್ರಕಗಳಂತೆಯೇ ಅನೇಕ ವಸ್ತುಗಳನ್ನು ನಾವು ಪಂಚಪ್ರಾಣ ವೆಂಬಂತೆ ಇಷ್ಟಪಡುತ್ತೇವೆ. ಯಾವುವು ಆ ಪಂಚಪ್ರಾಣಗಳು? ‘ಪ್ರಾಣಾಪಾನೌ ತಥಾ ವ್ಯಾನಃ ಉದಾನಶ್ಚ ಸಮಾನಗಃ| ಶರೀರ ವ್ಯಾಪಿನೋ ನೂನಂ ಪಂಚಪ್ರಾಣಾಃ ಪ್ರಕೀರ್ತಿತಾಃ||’ ಈ ಐದು
ಪ್ರಾಣವಾಯುಗಳು ಇರುವುದೆಲ್ಲಿ? ‘ಹೃದಿ ಪ್ರಾಣೋ ಗುದೇಧಿ ಪಾನಃ ಸಮಾನೋ ನಾಭಿಸಂಸ್ಥಿತಃ| ಉದಾನಃ ಕಂಠದೇಶೇ ಸ್ಯಾತ್ ವ್ಯಾನಃ ಸರ್ವಶರೀರಗಃ||’ ಪ್ರಾಣನು ಹೃದಯದಲ್ಲಿದ್ದು ಅನ್ನವನ್ನು ದೇಹದೊಳಗೆ ಸೇರಿಸುತ್ತ ಶರೀರವನ್ನು ಭದ್ರವಾಗಿ ಕಾಪಾಡುತ್ತಾನೆ.

ಅಪಾನನು ದೇಹದ ಕಲ್ಮಷವನ್ನು ಮಲಮೂತ್ರಗಳ ಮೂಲಕ ದೇಹ ದಿಂದ ಹೊರಹಾಕುತ್ತಾನೆ. ಸಮಾನನು ಹೊಕ್ಕುಳಲ್ಲಿದ್ದು ಶರೀರದ ಸಮಸ್ಥಿತಿಗೆ ಕಾರಣನಾಗುತ್ತಾನೆ. ಕಂಠದಲ್ಲಿರುವ ಉದಾನನು ವಾಕ್ (ಮಾತು) ಮತ್ತು ವಿವೇಕಪ್ರeಯನ್ನು ನೋಡಿಕೊಳ್ಳುತ್ತಾನೆ. ವ್ಯಾನನು ಶರೀರದಲ್ಲೆಲ್ಲ ವ್ಯಾಪಿಸಿಕೊಂಡು ಸಮಗ್ರವಾಗಿ ನಿಯಂತ್ರಕನಾಗಿರುತ್ತಾನೆ. ಅಂತಹ ಶರೀರವನ್ನು ನೀಡಿದ ಭಗವಂತನ ದಶಾವತಾರಗಳನ್ನು ನಾವು ನೆನೆಯಬೇಕು: ‘ಮತ್ಸ್ಯಃ ಕೂರ್ಮೋ ವರಾಹಶ್ಚ ನಾರಸಿಂಹಶ್ಚ ವಾಮನಃ| ರಾಮೋ ರಾಮಶ್ಚ ಕೃಷ್ಣಶ್ಚ ಬೌದ್ಧಃ ಶ್ರೀಕಲ್ಕಿರೇವಚ||’ ಆ ಜಗನ್ನಿಯಾಮಕನಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು: ‘ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ| ಪದ್ಭ್ಯಾಂ ಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮೋಧಿಷ್ಟಾಂಗ ಉಚ್ಯತೇ||’
ಅಂದರೆ ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಪಾದಗಳು, ಕೈಗಳು, ಆಮೇಲೆ ಕಿವಿಗಳನ್ನೂ ನೆಲಕ್ಕೆ ತಾಗಿಸಿ ಉದ್ದಂಡ ನಮಸ್ಕಾರ.

ಇಲ್ಲಿ ಕಣ್ಣು, ಕೈ, ಪಾದ, ಕಿವಿ ಜೋಡಿಗಳನ್ನು ಒಂದೊಂದೇ ಅಂಗ ವೆಂದು ಪರಿಗಣಿಸಿ, ಎದೆ, ತಲೆ, ಜೊತೆಗೆ ಮನಸ್ಸು ಮತ್ತು ಮಾತನ್ನೂ ಒಂದೊಂದು ಅಂಗವೆಂದು ಪರಿಗಣಿಸಿ ಒಟ್ಟು ಸಂಖ್ಯೆ ಎಂಟು. ಈರೀತಿ ಭಗವಂತನಿಗೆ ಶರಣಾಗತರಾಗದಿದ್ದರೆ ಮನಸ್ಸು ಚಂಚಲವಾಗುತ್ತದೆ. ಏಕೆಂದರೆ ಚಾಂಚಲ್ಯಕ್ಕೆ ಹೆಸರಾದ ಹತ್ತು ‘ಮ’ಕಾರಗಳಿಗೆ ಮನಸ್ಸೇ ಮುಂದಾಳು! ‘ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್| ಮಾ ಮದೋ ಮರ್ಕಟೋ ಮತ್ಸ್ಯಃ ಮಕಾರಾ ದಶ ಚಂಚಲಾಃ||’ ಇದರಲ್ಲಿ ಬರುವ ಮಾ ಎಂದರೆ ಲಕ್ಷ್ಮೀ. ಅವಳ ದಾಸ್ಯಕ್ಕೆ ಒಳಗಾಗಬಾರದು.

ದಾನ ಮಾಡಬೇಕು. ಅದೂ ಹೇಗೆ? ದಶದಾನ ರೂಪದಲ್ಲಿ: ‘ಗೋ ಭೂ ತಿಲ ಹಿರಣ್ಯಾಜ್ಯ ವಾಸೋ ಧಾನ್ಯ ಧನಾನಿ ಚ| ರೌಪ್ಯಂ ಲವಣ ಮಿತ್ಯೇತೇ ದಶ ದಾನಾಃ ಪ್ರಕೀರ್ತಿತಾಃ||’ ಅಂದರೆ ಅನುಕ್ರಮವಾಗಿ- ಹಸು, ಫಲವತ್ತಾದ ಭೂಮಿ, ಕಪ್ಪು ಎಳ್ಳು, ಬಂಗಾರದ ವಸ್ತು, ಹಸುವಿನ ತುಪ್ಪ, ಉಪಯುಕ್ತ ಬಟ್ಟೆ, ಧಾನ್ಯ, ಧನ, ಬೆಳ್ಳಿಯ ಪಾತ್ರೆಗಳು ಮತ್ತು ಉಪ್ಪಿನ ಹರಳು. ಅಥವಾ, ನವಗ್ರಹಗಳ ಪೂಜೆ ಮಾಡಿ ನವಧಾನ್ಯಗಳನ್ನು ದಾನಮಾಡುವುದಾದರೆ- ‘ಗೋಧೂ
ಮಾಸ್ತಂಡುಲಾಃ ಶ್ವೇತಾ ಆಢಕಾಶ್ಚಾಥ ಮುದ್ಗಕಾಃ| ಚಣಕಾಃ ಶುಕ್ಲನಿಷ್ಟಾವಾಃ ತಿಲಮಾಷಕುಳಿತ್ಥಕಾಃ||’ ಸೂರ್ಯ- ಗೋಧಿ; ಚಂದ್ರ- ಬಿಳಿ ಅಕ್ಕಿ; ಮಂಗಳ- ತೊಗರಿಕಾಳು; ಬುಧ- ಹೆಸರು ಕಾಳು; ಗುರು-ಕಡಲೇಕಾಳು; ಶುಕ್ರ- ಬಿಳಿ ಅವರೇಕಾಳು; ಶನಿ- ಕಪ್ಪು ಎಳ್ಳು; ರಾಹು- ಉದ್ದಿನಕಾಳು; ಕೇತು- ಹುರುಳಿ.

ಹಾಗಂತ ಧರ್ಮಭೀರುವಾಗಿ ದೇವರು-ದಿಂಡರು ಅಂತಲೇ  ಮೂರುಹೊತ್ತೂ ಕಳೆಯಬೇಕೆಂದಲ್ಲ. ಮನೋಲ್ಲಾಸಕ್ಕೆ ಕಾವ್ಯ- ನಾಟಕಗಳಲ್ಲಿನ ನವರಸಗಳ ಆಸ್ವಾದನೆ ಮಾಡಬಹುದು. ‘ಶೃಂಗಾರ ವೀರ ಕರುಣಾದ್ಭುತ ಹಾಸ್ಯ ಭಯಾನಕಾಃ| ಬೀಭತ್ಸರೌದ್ರೌ ಶಾಂತಶ್ಚ ನವೈತೇ ಕಥಿತಾ ರಸಾಃ||’ ಅಥವಾ, ಹತ್ತು ಉಪನಿಷತ್ತುಗಳನ್ನು ಕಲಿಯಬಹುದು: ‘ಈಶ ಕೇನ ಕಠ ಪ್ರಶ್ನ ಮುಂಡ ಮಾಂಡೂಕ್ಯ ತಿತ್ತಿರಿಃ| ಐತರೇಯಂ ಚ ಛಾಂದೋಗ್ಯಂ ಬೃಹದಾರಣ್ಯಕಂ ದಶ||’ ಉಪನಿಷತ್ತುಗಳಾಗಲೀ ವೇದಗಳಾಗಲೀ ಅರ್ಥವಾಗದಿದ್ದರೆ ಪೂರಕವಾಗಿ ಆರು ವೇದಾಂಗಗಳನ್ನು ಅಭ್ಯಸಿಸಬಹುದು: ‘ಶಿಕ್ಷಾ
ವ್ಯಾಕರಣಂ ಕಲ್ಪೋ ನಿರುಕ್ತಂ ಜ್ಯೋತಿಷಂ ತಥಾ| ಛಂದಶ್ಚೇತಿ ಷಡಂಗಾನಿ ವೇದಸ್ಯಾಹುರ್ಮನೀಷಿಣಃ||’ ವೇದಾಂಗ ಅಂದರೆ ವೇದದ ಭಾಗ ಅಂತಲ್ಲ, ಅವು ವೇದಪುರುಷನ ಆರು ಅಂಗಗಳು: ಛಂದಸ್ಸು ಪಾದಗಳು; ಕಲ್ಪವು ಹಸ್ತಗಳು; ಜ್ಯೋತಿಷ ಕಣ್ಣುಗಳು; ನಿರುಕ್ತವು ಕಿವಿಗಳು; ಶಿಕ್ಷಾ ಎಂಬುದು ಮೂಗು; ವ್ಯಾಕರಣವು ಬಾಯಿ.

ವ್ಯಾಕರಣದಲ್ಲಿ ಬರುವ ಆರು ಸಮಾಸ ಪ್ರಕಾರಗಳದೂ ಶ್ಲೋಕ ಬೇಕೇ? ತಗೊಳ್ಳಿ: ‘ದ್ವಿಗುರಪಿ ಸದ್ವಂದ್ವೋಧಿಹಂ ಸತತಮ್ ಅವ್ಯಯೀಭಾವಃ| ತತ್ಪುರುಷ ಕರ್ಮಧಾರಯ ಯೇನಾಹಂ ಸ್ಯಾಂ ಬಹುವ್ರೀಹಿಃ’ ಇವೆಲ್ಲ ತಲೆಗೆ ಹತ್ತೋದಿಲ್ಲ ಅಂತಾದರೆ ಮಧುರ ವಾದ ಸಂಗೀತವನ್ನು ಆಲಿಸಬಹುದು, ಏಳು ಸ್ವರಗಳಿಂದಾದ ದ್ದನ್ನು: ‘ನಿಷಾದರ್ಷಭಗಾಂಧಾರ ಷಡ್ಜ ಮಧ್ಯಮ ಧೈವತಾಃ| ಪಂಚಮಶ್ಚೇತ್ಯಮೀ ಸಪ್ತ ತಂತ್ರೀಕಂಠೋತ್ಥಿತಾಃ ಸ್ವರಾಃ||’ ಪ್ರಕೃತಿ
ಯಲ್ಲಿ ಯಾವುದರಿಂದ ಯಾವ ಸ್ವರ ಬರುತ್ತದೆಂದು ತಿಳಿದು ಕೊಳ್ಳಬಹುದು: ‘ಷಡ್ಜಂ ಮಯೂರೋ ವದತಿ ಗಾವೋ ನರ್ದಂತಿ ಚರ್ಷಭಮ್| ಅಜಾವಿಕೌ ತು ಗಾಂಧಾರಂ ಕ್ರೌಂಚೋ ನದತಿ ಮಧ್ಯಮಮ್| ಪುಷ್ಪಸಾಧಾರಣೇ ಕಾಲೇ ಕೋಕಿಲೋ ರೌತಿ ಪಂಚಮಮ್| ಅಶ್ವಸ್ತು ಧೈವತಂ ರೌತಿ ನಿಷಾದಂ ರೌತಿ ಕುಂಜರಃ||’ ನವಿಲುಗಳ ಕೂಗಿನಲ್ಲಿ ಷಡ್ಜ ಸ್ವರವನ್ನೂ, ಎತ್ತುಗಳ ಅಂಬಾದಲ್ಲಿ ಋಷಭ ಸ್ವರವನ್ನೂ, ಆಡುಕುರಿಗಳ ಬ್ಯಾಬ್ಯಾದಲ್ಲಿ ಗಾಂಧಾರ ವನ್ನೂ, ಕ್ರೌಂಚ ಪಕ್ಷಿಯ ಕಲರವದಲ್ಲಿ ಮಧ್ಯಮ ಸ್ವರವನ್ನೂ, ಕೋಗಿಲೆಯ ಕುಹೂವಿನಲ್ಲಿ ಪಂಚಮ ಸ್ವರವನ್ನೂ, ಕುದುರೆಯ ಕೆನೆತದಲ್ಲಿ ಧೈವತವನ್ನೂ, ಆನೆಯ ಘೀಳಿಡುವಿಕೆಯಲ್ಲಿ ನಿಷಾದ ಸ್ವರವನ್ನೂ ಗುರುತಿಸಬಹುದು!

ಇದನ್ನೆಲ್ಲ ಮಾಡದಿದ್ದರೆ ಲೈಫೇ ವೇಸ್ಟು, ದಂಡ ಅಂದ್ಕೊಳ್ಳಬೇಡಿ. ದಂಡಂ ದಶಗುಣಂ ಭವೇತ್ ಅಂತ ಗೊತ್ತಲ್ಲ? ‘ವಿಶ್ವಾ ಮಿತ್ರಾಹಿಪಶುಷು  ಕರ್ದಮೇಷು ಜಲೇಷು ಚ| ಅಂಧೇ ತಮಸಿ ವಾರ್ಧಕ್ಯೇ ದಂಡಂ ದಶಗುಣಂ ಭವೇತ್||’ ಕೈಯಲ್ಲಿ ಒಂದು ಕೋಲು ಹಿಡಿದುಕೊಂಡಿದ್ದರೆ ಹತ್ತು ವಿಧದ ಪ್ರಯೋಜನಗಳು: ವಿ ಅಂದರೆ ಹಕ್ಕಿಗಳು, ಅವುಗಳನ್ನೋಡಿಸಲಿಕ್ಕೆ; ಶ್ವಾ ಅಂದರೆ ನಾಯಿ, ಅದನ್ನೋಡಿಸಲಿಕ್ಕೆ; ಅಮಿತ್ರ ಅಂದರೆ ಕಳ್ಳಕಾಕರು ಪುಂಡುಪೋಕರಿ ಗಳು, ಅವರನ್ನೋಡಿಸಲಿಕ್ಕೆ; ಅಹಿ ಅಂದರೆ ಹಾವು, ಅದನ್ನೋಡಿ ಸಲಿಕ್ಕೆ; ಪಶು ಅಂದರೆ ಹಸುವೇ ಮೊದಲಾದ ಪ್ರಾಣಿಗಳು, ಅವು
ಗಳನ್ನೋಡಿಸಲಿಕ್ಕೆ; ಕರ್ದಮೇಷು ಅಂದರೆ ಕೆಸರಿನ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡರೆ ಅಲ್ಲಿಂದ ಹೊರಬರಲಿಕ್ಕೆ; ಜಲೇಷು ಅಂದರೆ ನೀರಿರುವ ಗುಂಡಿಗಳನ್ನು ಸಲೀಸಾಗಿ ದಾಟಲಿಕ್ಕೆ; ಅಂಧೇ ಅಂದರೆ ಕುರುಡುತನವಿದ್ದರೆ ಸಂಚಾರಕ್ಕೆ ಸಹಾಯಕವಾಗಿ; ತಮಸಿ ಅಂದರೆ ಕತ್ತಲೆಯಲ್ಲಿ ದಾರಿ ಕಂಡು ಕೊಳ್ಳಲಿಕ್ಕೆ; ವಾರ್ಧಕ್ಯೇ ಅಂದರೆ ಮುಪ್ಪಿನಲ್ಲಿ ಊರುಗೋಲಾಗಿ.

ಮುಪ್ಪಿನವರೆಗೆ ಎಷ್ಟು ಸಂವತ್ಸರಗಳನ್ನು ಕಳೆದೆವೆನ್ನುವುದಕ್ಕೂ ಒಂದು ಶ್ಲೋಕ ಇದೆ. ಎಲ್ಲ ೬೦ ಸಂವತ್ಸರಗಳ ಹೆಸರುಗಳು ಇದರಲ್ಲಿ ಬರುತ್ತವೆ: ‘ಪ್ರಭವೋ ವಿಭವಃ ಶುಕ್ಲಃ ಪ್ರಮೋದೋಧಿಥ ಪ್ರಜಾಪತಿಃ| ಅಂಗಿರಾ ಶ್ರೀಮುಖೋ ಭಾವೋ ಯುವಾ ಧಾತಾ ತಥೈವ ಚ| ಈಶ್ವರೋ ಬಹುಧಾನ್ಯಶ್ಚ ಪ್ರಮಾಥೀ ವಿಕ್ರಮೋ ವೃಷಃ| ಚಿತ್ರಭಾನುಃ ಸುಭಾನುಶ್ಚ ತಾರಣಃ ಪಾರ್ಥಿವೋಧಿವ್ಯಯಃ| ಸರ್ವಜಿತ್ಸರ್ವಧಾರೀ ಚ ವಿರೋಧಿ ವಿಕೃತಿಃ ಖರಃ| ನಂದನೋ
ವಿಜಯಶ್ಚೈವ ಜಯೋ ಮನ್ಮಥದುರ್ಮುಖೌ| ಹೇಮಲಂಬೀ ವಿಲಂಬೀ ಚ ವಿಕಾರೀ ಶಾರ್ವರೀ ಪ್ಲವಃ| ಶುಭಕೃಚ್ಛೋಭನಃ ಕ್ರೋಧಿ ವಿಶ್ವಾವಸುಪರಾಭವೌ| ಪ್ಲವಂಗಃ ಕೀಲಕಃ ಸೌಮ್ಯಃ ಸಾಧಾರಣೋ ವಿರೋಧಕೃತ್| ಪರಿಧಾವೀ ಪ್ರಮಾದೀ ಚ ಆನಂದೋ ರಾಕ್ಷಸೋ ನಲಃ| ಪಿಂಗಲಃ ಕಾಲಯುಕ್ತಶ್ಚ ಸಿದ್ಧಾರ್ಥೀ ರೌದ್ರ ದುರ್ಮತಿಃ| ದುಂದುಭೀ ರುಧಿರೋದ್ಗಾರೀ ರಕ್ತಾಕ್ಷಃ ಕ್ರೋಧನಃ ಕ್ಷಯಃ|’ ಅಷ್ಟರೊಳಗೆ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರ
ಗಳಿಗೆ ತೀರ್ಥಯಾತ್ರೆ ಮಾಡಬಯಸುತ್ತೀರಾದರೆ: ‘ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್| ಉಜ್ಜಯಿ ನ್ಯಾಂ ಮಹಾಕಾಲಮೋಂಕಾರಮಮಲೇಶ್ವರಮ್|| ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್| ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ|| ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ| ಹಿಮಾಲಯೇ ತು ಕೇದಾರಂ ಘೃಷ್ಣೇಶಂ ಚ ವಿಶಾಲಕೇ|| ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ| ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ||’ ಸಂಸ್ಕೃತಸಾಗರದಲ್ಲಿ ಎಷ್ಟೊಂದು ಮುತ್ತುರತ್ನಗಳು ಅಲ್ಲವೇ? ಹೌದು, ದೇವದಾನವರು ಮಂದರಪರ್ವತವನ್ನೇ ಕಡಗೋಲಾಗಿ, ವಾಸುಕಿಯನ್ನೇ ಹಗ್ಗವಾಗಿಸಿ, ಸಮುದ್ರಮಂಥನ ಮಾಡಿದಾಗ ಸಿಕ್ಕಿದವು ಇವು ಹದಿನಾಲ್ಕು: ‘ಲಕ್ಷ್ಮೀಃ ಕೌಸ್ತುಭಪಾರಿಜಾತಕಸುರಾ ಧನ್ವಂತರೀಶ್ಚಂದ್ರಮಾ| ಗಾವಃ ‘ಕಾಮದುಘಾಃ’ ಸುರೇಶ್ವರಗಜೋ ರಂಭಾದಿದೇವಾಂಗನಾಃ| ಅಶ್ವಃ ಸಪ್ತಮುಖೋ ವಿಷಂ ಹರಿಧನುಃ ಶಂಖೋಧಿಮೃತಂ ಚಾಂಬುಧೇ| ರತ್ನಾನೀಹ ಚತುರ್ದಶಂ ಪ್ರತಿ ದಿನಂ ಕುರ್ಯಾತ್ಸದಾ ಮಂಗಲಂ||’ ಅನುಕ್ರಮವಾಗಿ ಲಕ್ಷ್ಮೀ- ವಿಷ್ಣುವಿನ ಮಡದಿಯಾದವಳು; ಕೌಸ್ತುಭ ಮಣಿ- ವಿಷ್ಣು ಕೊರಳಲ್ಲಿ ಧರಿಸಿದ್ದು; ಪಾರಿಜಾತ ವೃಕ್ಷ- ಸ್ವರ್ಗದ ನಂದನವನಕ್ಕೆ ಸೇರಿದ್ದು; ಸುರೆ (ಮದಿರೆ)- ಅಸುರರು ಮುಗಿಬಿದ್ದು ಕುಡಿದದ್ದು; ಧನ್ವಂತರೀ- ದೇವತೆಗಳ ವೈದ್ಯನಾದವನು; ಚಂದ್ರ- ಶಿವನ ಮುಡಿಗೇರಿದವನು; ಕಾಮಧೇನು ಗೋವು- ಋಷಿಗಳಿಗೆ ಸೇರಿದ್ದು; ಐರಾವತ ಆನೆ- ಇಂದ್ರನಿಗೆ ಸೇರಿದ್ದು; ರಂಭೆಯೇ ಮೊದಲಾದ ಅಪ್ಸರೆಯರು- ಇಂದ್ರಲೋಕಕ್ಕೆ ಸೇರಿದವರು; ಏಳು ತಲೆಗಳ ಉಚ್ಚೈಃಶ್ರವಸ್ ಕುದುರೆ-ಇಂದ್ರನ ಪಟ್ಟದ ಕುದುರೆ; ಕಾಲಕೂಟ ವಿಷ- ಮಹಾದೇವನಿಂದ ಕುಡಿಯಲ್ಪಟ್ಟದ್ದು; ಶಾರ್ಙ್ಗ ಎಂಬ ಧನುಸ್ಸು- ವಿಷ್ಣು
ವಿಗೆ ಸೇರಿದ್ದು; ಪಾಂಚಜನ್ಯ ಎಂಬ ಶಂಖ- ಶ್ರೀಕೃಷ್ಣನು ಕುರುಕ್ಷೇತ್ರ ರಣಾಂಗಣದಲ್ಲಿ ಊದಿದ್ದು; ಅಮೃತ- ವಿಷ್ಣುವು ಮೋಹಿನಿಯಾಗಿ ಬಂದು ದೈವಾಸುರರಿಗೆ ಹಂಚಿದ್ದು.

ಅಂತಹ ಸಂಸ್ಕೃತಸಿಂಧುವಿನಿಂದ ಇಂದಿನ ತಿಳಿರುತೋರಣ ಅಂಕಣದಲ್ಲಿ ಎತ್ತಿಕೊಂಡಿದ್ದು ಒಂದು ಬಿಂದು ಮಾತ್ರ! ಸಿಂಧುವಿ ನಲ್ಲಿರುವುದಷ್ಟನ್ನೂ ಆಸ್ವಾದಿಸ ಬೇಕಾದರೆ ನಾವು ಅಕ್ಷರಶಃ ಚಿರಂಜೀವಿಗಳಾಗಬೇಕಷ್ಟೇ.