Sunday, 15th December 2024

ಕಾರಣವೇ ಇಲ್ಲದೆ ಮನೆಬಿಟ್ಟು ಹೋದ ಮಗು ಸಾರಾ !

ಯಶೋ ಬೆಳಗು

yashomathy@gmail.com

ಈ ನವೆಂಬರ್ ಎಂಬ ಭಾವುಕ ತಿಂಗಳು ದಾಟುವಷ್ಟರಲ್ಲಿ ಮನಸೆಂಬ ಸಮುದ್ರ ಮಂಥನದಲ್ಲಿ ನಾನಾ ಬಗೆಯ ಕೋಲಾಹಲ ವೆದ್ದಿರುತ್ತದೆ. ಮಾತು ಮೌನವಾಗಿ, ಕಣ್ಣ ದೀವಟಿಗೆಯ ನೆರಳು-ಬೆಳಕುಗಳ ನಡುವೆ ನೆನಪುಗಳ ಮೆರವಣಿಗೆ ಹೊರಟಿರುತ್ತದೆ. ಅದರ ನಡುನಡುವೆಯೇ ಬಂದು ಹೋಗುವ ಹಬ್ಬ-ಹರಿದಿನಗಳಲ್ಲಿ ನಗೆಯ ಚಿಲುಮೆ ಯಾಗುತ್ತಾ, ಅತ್ತಿತ್ತ ಕದಲದಂತೆ ಜವಾಬ್ದಾರಿಯ ಗೂಟ ಹೊಡೆದುಕೊಂಡು ಇದ್ದಲ್ಲೇ ಕೇಳಿದ ವರ ಕೊಡುವ ಗರ್ಭಗುಡಿಯ ದೇವತೆಯಂತೆ ಸ್ಥಾಪಿತಳಾಗಿ ಹೋಗಿದ್ದೇನೆ. ಮಗನಿಗೆ ಸಮಾಧಾನ ಹೇಳ್ತಾ ಹೇಳ್ತಾ ನಾನೇ ಕಂಗಾಲಾಗಿ ಕಣ್ಣೀರಾದ ದಿನಗಳಿಗೆ ಲೆಕ್ಕದ ಗೊಡವೆಯಿಲ್ಲ.

ಮೊನ್ನೆ ಇಂಥದ್ದೇ ದಿನದ ಒಂದು ಬೆಳಗಿನ ಜಾವ ಆಗತಾನೆ ಮನೆಬಾಗಿಲಿಗೆ ಬಂದುಬಿದ್ದ ಪತ್ರಿಕೆಯನ್ನು ತಂದು ಓದುತ್ತಾ ಕುಳಿತಿದ್ದೆ. ತೆರೆದ ಬಾಗಿಲಿನೊಳಗೆ ಹೆಜ್ಜೆಯ ಮೇಲೆ ಹೆಜ್ಜೆಯನಿಡುತ್ತಾ ಒಂದು ಪಾರಿವಾಳ ನಡೆದುಬರತೊಡಗಿತು. ಚಲಿಸಿದರೆ, ದನಿ ಹೊರಡಿಸಿದರೆ ಹಾರಿ ಹೋಗುತ್ತದೆಂಬ ಕಾರಣದಿಂದ ಏನು ಮಾಡುವುದೋ ಎಂದು ಸುಮ್ಮನೆ ನೋಡುತ್ತಾ ಕುಳಿತೆ.

ಎದುರಿನ ಕೋಣೆಯಲ್ಲಿಯೇ ಮಗ, ಲ್ಯಾಪ್‌ಟಾಪ್‌ನಲ್ಲಿ ತನ್ನ ಶಾಲೆಯ ಪ್ರಾಜೆಕ್ಟಿಗೆ ಯಾವುದೋ ವಿಷಯ ಡೌನ್ ಲೋಡ್ ಮಾಡುವುದರಲ್ಲಿ ನಿರತನಾಗಿದ್ದ. ಅವನ ಕೋಣೆಯ ಬಾಗಿಲೂ ತೆರೆದೇ ಇತ್ತು. ಮುಂದಿರುವ ಮತ್ತೆರಡು ಕೋಣೆಗಳ ಕದವೂ ತೆರೆದಿತ್ತು. ಆದರೆ ನನ್ನದೇ ಕೋಣೆಯತ್ತ ನಡೆದು ಬರಲು ಕಾರಣವೇನು? ಹಿಮಾ, ಇಲ್ನೋಡು ಯಾರು ಬಂದಿದ್ದಾರೆ…. ಎಂದು ಕೂಗಿದೆ. ಯಾರಮ್ಮಾ ಎಂದು ಕೇಳುತ್ತಾ ಬಂದವನನ್ನು ಕಂಡು ಗಾಬರಿಯಿಂದ ಸೀದ ಆಸರೆಗಾಗಿ ಇದ್ದ ಎ.ಸಿ.ಯ ಮೇಲೆ ಹಾರಿ ಕುಳಿತಿತು. ಇಡೀ ಕೋಣೆಯನ್ನು ದಿಟ್ಟಿ ಸುತ್ತಾ ಒಂದೈದು ನಿಮಿಷ ಕುಳಿತೇ ಇತ್ತು.

ಅಮ್ಮಾ, ಅದ್ಯಾಕೆ ಅದರ ಕಣ್ಣು ಅಷ್ಟು ಕೆಂಪಗಿದೆ? ಅಂದ ಅವನ ಮಾತಿಗೆ, ಹೊಸ ಜಾಗಕ್ಕೆ ಬಂದಾಗ ಅದನ್ನು ಗುರುತಿಸಿ ಕೊಳ್ಳುವಾಗ ಹೀಗಾಗುತ್ತದಂತೆ. ಒಮ್ಮೆ ಗೂಗಲ್ ಸರ್ಚ್ ಮಾಡಿ ನೋಡು ಅಂದೆ. ಇರು ಒಂದು ವಿಡಿಯೋ ರೆಕಾರ್ಡ್ ಮಾಡಿ ಕೊಳ್ಳೋಣ ಅನ್ನುತ್ತಾ ಮೊಬೈಲ್ ಆನ್ ಮಾಡಿದ ಕೂಡಲೇ ಸರ್ರ್… ಅಂತ ಹಾರಿ ಹೋಯಿತು. ಅಲ್ಲೇ ಇದ್ದ ಕ್ಯಾಲೆಂಡರಿನಲ್ಲಿ ನವೆಂಬರ್ ತಿಂಗಳಿನ ಹನ್ನೆರಡನೆಯ ದಿನವಾಗಿತ್ತು!

ಅದೂ ಥೇಟ್ ಹಾಗೇ ಇತ್ತು. ನೋಡಿದ ಕೂಡಲೇ ಪಾರಿವಾಳದಂತೆಯೇ ಅನಿಸುತ್ತಿತ್ತು. ಆದರೆ ಅದಕ್ಕಿದ್ದ ಕೊಕ್ಕು ಹಾಗೂ ಪಾದಗಳ ರಚನೆಯಿಂದಾಗಿ ಅದನ್ನು ಗಿಳಿಯೆಂದು ಹೇಳಬಹುದಾಗಿತ್ತಷ್ಟೆ. ಮಗನನ್ನು ಗ್ಯಾಜೆಟ್‌ಗಳಿಂದ ದೂರವಿಡಲು ಅವನಿಗೆ ಆಫ್ರಿಕನ್ ಗಿಳಿಯೊಂದನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದರು ರವಿ. ಮನೆಗೆ ಬರುವಾಗಲೇ ಇದ್ದ ಸಾರಾ ಎನ್ನುವ
ಹೆಸರನ್ನೇ ನಾವೂ ಮುಂದುವರೆಸಿದೆವು. ಬಂದ ಎರಡು ದಿನ ದನಿಯೇ ಹೊರಡಿಸದೆ ಮುಗುಮ್ಮಾಗಿದ್ದ ಸಾರಾ ದಿನಗಳೆದಂತೆಲ್ಲ ಅದನ್ನು ಸುಮ್ಮನಿರಿಸುವುದೇ ದೊಡ್ಡ ಕೆಲಸವಾಗಿ ಹೋಯ್ತು.

ಅದೆಷ್ಟು ಚೆನ್ನಾಗಿ ಎಲ್ಲ ಶಬ್ದಗಳನ್ನು ಅನುಕರಿಸುತ್ತಿತ್ತೆಂದರೆ ಎಷ್ಟೋ ಸಲ ಅಮ್ಮಾ ಎಂದು ಕರೆದಾಗ ಅದು ಮಗನ ದನಿಯೋ? ಸಾರಾ ದನಿಯೋ? ಅನ್ನುವುದರ ವ್ಯತ್ಯಾಸ ತಿಳಿಯದೆ ನಾನು, ಹೇಳು ಪುಟ್ಟಾ ಎಂದು ಉತ್ತರಿಸುತ್ತಾ, ಆನಂತರ ಅದು ಸಾರಾ ದನಿಯೆಂದು ತಿಳಿದು ಪೆಚ್ಚಾದ ಘಟನೆಗಳಿಗೆ ಲೆಕ್ಕವಿಲ್ಲ. ನಮ್ಮ ಮಾತುಗಳನ್ನೆಲ್ಲ ಕಿವಿಗೊಟ್ಟು ಕೇಳಿಸಿಕೊಂಡು ಆನಂತರ ಅದನ್ನೆಲ್ಲ ತದ್ರೂಪಾಗಿ ಪುನರುಚ್ಛರಿಸುತ್ತಿದ್ದ ಅದರ ಪ್ರತಿಭೆಯನ್ನು ಕಂಡು ಮನಸೋಲದವರೇ ಇಲ್ಲ.

ಬೀದಿಯಲ್ಲಿ ಕೂಗುತ್ತಾ ಬರುವ ವ್ಯಾಪಾರಿಗಳ ದನಿಯಿಂದ ಹಿಡಿದು ನಮ್ಮ ಸಿದ್ದು-ಬಜ್ಜು (pet dogs) ವಿನ ದನಿಗಳನ್ನೂ ಅನುಕರಿಸುವ ಅಸಾಧ್ಯ ಪ್ರತಿಭಾಶಾಲಿಯಾಗಿದ್ದ ಸಾರಾ ನಾವು ಎಲ್ಲಿದ್ರೆ ಅಲ್ಲಿ ಓಡಿ ಬಂದುಬಿಡುತ್ತಿತ್ತು. ಮಾತೆಲ್ಲ ಆಲಿಸುತ್ತಾ
ಕುಳಿತುಕೊಳ್ಳುತ್ತಿತ್ತು. ಕಲಿತ ಮಾತನ್ನೆಲ್ಲ ಬೆಳಬೆಳಗ್ಗೇನೇ ಪ್ರದರ್ಶಿಸಲು ಶುರುವಿಡುತ್ತಿತ್ತು. ರಾತ್ರಿ ಗೂಡಿಗೆ ಹಾಕಿ ಅದರ ಮೇಲೊಂದು ಹೊದಿಕೆ ಹೊದಿಸುವವರೆಗೂ ನಿದ್ರೆ ಮಾಡುತ್ತಿರಲಿಲ್ಲ.

ಬೆಳಗ್ಗೆ ಸೂರ್ಯೋದಯಕ್ಕೂ ಮೊದಲೇ ಸೊಪ್ಪೂ… ಅಂತ ಕೂಗುತ್ತಾ, ಮಗ ಸಂಗೀತ ಕಲಿಯುವಾಗ ತಾನೂ ಅವನ ಜೊತೆಗೆ ರಾಗ ಕೂಡಿಸೋಕೆ ಟ್ರೈ ಮಾಡುತ್ತಾ, ಹಲ್ಲಿಲ್ಲದಿದ್ರೂ ಏನಾದ್ರೂ ಕಚ್ಚುತ್ತಲೇ ಇರುವ ಅದರ ಹವ್ಯಾಸಕ್ಕೆ ನಮ್ಮ ಗಿಡಗಳು, ಬಾಗಿಲು, ಟೇಬಲ್ಲು, ಮಂಚ, ಕಿಟಕಿಗಳೆಲ್ಲ ಸಾಕ್ಷಿ. ನಕ್ಕರೆ ನಮಗಿಂತ ಜೋರಾಗಿ ನಗುತ್ತಾ, ಸಿಟ್ಟು ಬಂದು ಬೈದರೆ ಅದನ್ನೆಲ್ಲ ಕಲಿತು ತಾನೂ ತಿರುಗಿಸಿ ಬೈಯತ್ತಾ, ಫೋನು ರಿಂಗಾದ ಕೂಡಲೇ ಹಲೋ ಎಂದು ತಾನೇ ಮಾತನಾಡಲು ಶುರು ಮಾಡುತ್ತಾ… ಪುಸ್ತಕವೋ, ಪತ್ರಿಕೆಯೋ ಓದುತ್ತಾ ಕುಳಿತರೆ ಮೆಲ್ಲಗೆ ಬಂದು ಕಾಲಿನ ಚಪ್ಪಲಿ ಕಚ್ಚಿಹಾಕಿರುತ್ತಿತ್ತು…. ಅದಕ್ಕೇ ಅಂತಲೇ ಎರಡು ಜೊತೆ ಹೊಚ್ಚ ಹೊಸ ಚಪ್ಪಲಿ ತಂದಿಟ್ಟು ಏನಾದರೂ ಮಾಡಿಕೋ ತಾಯಿ.. ನನ್ನ ತಂಟೆಗೆ ಮಾತ್ರ ಬರಬೇಡ ಅಂದರೆ, ಅದೆಲ್ಲ ಬಿಟ್ಟು ಸದ್ದಾಗದಂತೆ ಬಂದು ಕಾಲೆಳೆಯುತ್ತಿರುತ್ತಿತ್ತು…

ಟೀ ಕುಡಿಯುವಾಗ, ತಿಂಡಿ ತಿನ್ನುವಾಗ ಜಗಳ ಮಾಡಿ ತಾನೂ ಜೊತೆಗೆ ಗುಟುಕರಿಸುತ್ತಾ ಚಪ್ಪರಿಸುತ್ತಿತ್ತು. ಸಾಲದೂ ಅಂತ ನಮ್ಮ shi Tzu ಭಜಗೋವಿಂದನ ಬಟ್ಟಲಿಗೂ ಬಾಯಿ ಹಾಕುವಷ್ಟು ಧೈರ್ಯ. ನಮ್ಮ ಬಜ್ಜು ಸಿಟ್ಟು ಬಂದು ಎಲ್ಲಿ ಅದನ್ನು ಕಚ್ಚಿ ಬಿಡುತ್ತದೋ ಅನ್ನುವ ಆತಂಕ ನಮಗೆ… ಆದರೆ ತಾನು ಮಾತ್ರ ಅದ್ಯಾವ ಭಯವಿಲ್ಲದೆ ಬೇಕಂತಲೇ ಬಜ್ಜುವಿನ ಮುಂದೆ ಬಂದು ತರಲೆ ಮಾಡುವುದು ಸಾಲದೆಂಬಂತೆ ಅದಕ್ಕಿಂತ ಜೋರಾಗಿ ತಾನೇ ಬೊಗಳಿಬಿಡುತ್ತಿತ್ತು… ಕಾರಿನ ಹಾರ್ನ್ ಸದ್ದಿನಿಂದ ಹಿಡಿದು, ಕಾಗೆ, ಹದ್ದು, ಗುಬ್ಬಿ ಥರಾ ಕೂಗುತ್ತಿತ್ತು. ಅಮ್ಮಾ ಅನ್ನುತ್ತಿತ್ತು, ಹಿಮ ಅನ್ನುತ್ತಿತ್ತು, ಮನೋಜ್ ಭಯ್ಯಾ ಅನ್ನುತ್ತಿತ್ತು… ಎಲ್ಲ ರೀತಿಯ ಶಬ್ದವನ್ನೂ ಅಷ್ಟು ಚೆಂದಗೆ ಅನುಕರಿಸುವುದನ್ನು ಕಂಡು ಬಂದವರೆದುರು ನಾವು ಬಡಾಯಿ ಕೊಚ್ಚಿಕೊಳ್ಳುತ್ತಾ ಮಾತಾಡಿಸಲು ಹೋದರೆ, ನಾವು ಹೇಳ್ತಿರೋದೆಲ್ಲ ಸುಳ್ಳೇನೋ ಅನ್ನುವ ಹಾಗೆ ಮಾತೇ ಆಡದೆ ಮೌನವಾಗಿ ಕುಳಿತು ಬಂದವರೆದುರು ಸರಿಯಾಗಿ ಮರ್ಯಾದೆ ಕಳೆಯುತ್ತಿತ್ತು.

ನಾವು ಕೇಳಿದಾಗ ಮಾತಾಡಲ್ಲ ಅಲ್ವಾ? ಹಾಗಾದರೆ ನೀನು ಕರೆದಾಗ ನಾವೂ ಮಾತಾಡುವುದಿಲ್ಲ ಟೂ ಟೂ ಟೂ ಅನ್ನುತ್ತ ಎರಡು ದಿನ ಮಾತಾಡಿಸಲಿಲ್ಲ ಅಂದರೆ ಮಂಕಾಗಿ ಕುಳಿತುಬಿಡುತ್ತಿತ್ತು. ಎಲ್ಲರ ಗಮನ ಸೆಳೆಯುತ್ತ ಮನೆಯಲ್ಲಿ ಮಗುವಿನಂತೆ
ಸದಾ ಕಲರವ ಎಬ್ಬಿಸುತ್ತಿದ್ದ ಮಾತಿನ ಮಲ್ಲಿ ಸಾರಾಗೆ ಒಂದು ಜೊತೆಯಿದ್ದಿದ್ದರೆ ಅದು ನಮ್ಮ ತಂಟೆಗೇ ಬರುತ್ತಿರಲಿಲ್ಲ… ಅಂತನ್ನಿಸಿ ವಿಚಾರಿಸಿದಾಗ ಅದರ ಬೆಲೆ ರು. ೭೫,೦೦೦ ಎಂಬುದು ತಿಳಿದು ವರದಕ್ಷಿಣೆ ಅಂದುಕೊಂಡು ಕೊಟ್ಟು ತರಬೇಕಷ್ಟೆ ಅಂದುಕೊಳ್ಳುತ್ತಾಅದಕ್ಕಾಗಿ ಹುಡುಕಾಟ ನಡೆಸಿದೆವು.

ಹಾರುವ ಹಕ್ಕಿಯನ್ನು ಸದಾ ಗೂಡಿನಲ್ಲೇ ಇಟ್ಟರೆ ಅದರ ರೆಕ್ಕೆಗಳಲ್ಲಿ ನೋವುಂಟಾಗುತ್ತದೆ. ಹೀಗಾಗಿ ಒಂದಷ್ಟು ಹೊತ್ತು ಅದನ್ನು ಸ್ವತಂತ್ರವಾಗಿ ಹಾರಾಡಲು ಬಿಡಬೇಕೆಂದು ಎಲ್ಲ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಗೂಡಿನ ಬಾಗಿಲು ತೆರೆದು ಬಿಡುತ್ತಿದ್ದೆವು. ಒಮ್ಮೆ ಹಾಗೆ ತೆರೆದ ಬಾಗಿಲಿನಿಂದ ಹಾರಿಹೋಗಿ ಪಕ್ಕದ ಮನೆಯ ಬೇಸ್ಮೆಂಟಿನಲ್ಲಿ ಹೆದರಿ ಕುಳಿತುಬಿಟ್ಟಿತ್ತು. ಸದ್ಯ ಅಲ್ಲೇ ಹೊಂಚುಹಾಕುತ್ತಿದ್ದ ಬೆಕ್ಕಿನ ಕಣ್ಣಿಗೆ ಬೀಳಲಿಲ್ಲವಲ್ಲ! ಅಂದುಕೊಳ್ಳುತ್ತಾ ಮನೆಗೆ ಕರೆತಂದು ನಿಟ್ಟುಸಿರಾದೆವು. ಆ ಘಟನೆ ಯಿಂದಾಗಿ ಅದೂ ಪಾಠ ಕಲಿತಂತೆ ಮತ್ಯಾವತ್ತೂ ಆ ಸಾಹಸ ಮಾಡುವ ಪ್ರಯತ್ನ ಮಾಡದೆ ನಾವಿದ್ದಲ್ಲಿಗೆ ಬಂದು ಎಂದಿನಂತೆ ತಂಟೆ ಮಾಡತೊಡಗಿತು. ಅದರ ಮೇಲೆ ಈಗ ಇನ್ನಷ್ಟು ಅಟ್ಯಾಚ್‌ಮೆಂಟ್ ಬೆಳೆದು ಎಲ್ಲರ ಕಣ್ಣಿನ ಗೊಂಬೆಯಾಗಿ ಮೆರೆಯು ತ್ತಿತ್ತು.

ಕಳೆದ ವರ್ಷ ಇದೇ ನವೆಂಬರ್ ತಿಂಗಳ ಒಂದು ದಿನ ಎಲ್ಲರ ನಡುವೆ ತಾನೂ ಮಾತಾಡುತ್ತ ಕುಳಿತಿದ್ದ ಸಾರಾ ಅದ್ಯಾವ ಮಾಯದಲ್ಲಿ ಎಲ್ಲರ ಕಣ್ತಪ್ಪಿಸಿ ಹಾರಿಹೋಯಿತೋ ಗೊತ್ತಾಗಲೇ ಇಲ್ಲ. ಯಾಕೆ ಇಷ್ಟು ಹೊತ್ತಾದರೂ ಏನೂ ಮಾತಾಡುತ್ತಿಲ್ಲ ವಲ್ಲ? ಎಂದು ಅನುಮಾನವಾಗಿ ಮೂಲೆಮೂಲೆ ಹುಡುಕಾಡಿದರೂ ಎಲ್ಲೂ ಅದರ ಕುರುಹು ಕಾಣಲಿಲ್ಲ. ಅಕ್ಕಪಕ್ಕದ ಮನೆಗಳು, ಬೀದಿಗಳು ಎಲ್ಲವನ್ನೂ ಹುಡುಕಾಡಿದರೂ ಸುಳಿವಿಲ್ಲ. ಕಂಡ ಕಂಡ ಮರಗಳನ್ನೆಲ್ಲ ಹುಡುಕಿ ಸೋತೆವು. ಅದರಂತೆಯೇ ದನಿ ಹೊರಡಿಸಿದರೂ ಪ್ರತಿಕ್ರಿಯೆಯೇ ಇಲ್ಲ.

ಜ್ಯೋತಿಷ್ಯ, ಟ್ಯಾರೋ ಕಾರ್ಡ್ ರೀಡಿಂಗ್ ಎಲ್ಲ ನೋಡಿದ್ದಾಯಿತು. ತಾರಸಿಯ ಮೇಲೆ ಗುಟುಕಿಟ್ಟು ಕಾದು ನೋಡಿದ್ದಾಯಿತು. ರಾತ್ರಿ ಕಣ್ಣು ಮುಚ್ಚಿದರೆ ಅದರ ದನಿ ಕೇಳಿದಂತಾಗಿ ಟಾರ್ಚ್ ಹಿಡಿದು ದನಿ ಬಂದ ಕಡೆಗೆಲ್ಲ ಹೋಗಿ ಹುಡುಕಾಡಿದೆವು. ಪೆಟ್
ಶಾಪುಗಳಿಗೆಲ್ಲ ಹೋಗಿ ವಿಷಯ ತಿಳಿಸಿ ಬಂದೆವು. ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದೆವು. ಏನು ಮಾಡಿದರೂ ಪ್ರಯೋಜನವಾಗಲಿಲ್ಲ. ಹಕ್ಕಿಗಳಿಂದ ಅದರ ಹಾರುವ ಸ್ವಾತಂತ್ರ್ಯವನ್ನು ಕಿತ್ತುಕೊಂಡು ನಮ್ಮ ಮುಚ್ಚಟೆಗಾಗಿ ಬಂಧಿಸಿಡುವುದು ಅಮಾನವೀಯವೇ.

ಹೋಗಲಿ ಬಿಡು ಎಲ್ಲಾದರೂ ಸ್ವಚ್ಛಂದವಾಗಿ ಹಾರಾಡುತ್ತಾ ಖುಷಿಯಾಗಿರಲಿ. ಆದರೆ ಸುರಕ್ಷಿತವಾಗಿರಲಿ ಅಷ್ಟೇ… ಅಂದುಕೊಳ್ಳುತ್ತಾ ಕಂಡ ಕಂಡ ದೇವರುಗಳಿಗೆಲ್ಲ ಬೇಡಿಕೊಳ್ಳತೊಡಗಿದೆವು. ಆದರೆ ಹಾರುವುದನ್ನೇ ಮರೆತ, ಮನೆಗೆ ಅಭ್ಯಾಸ ವಾಗಿ ಹೋದ ಹಕ್ಕಿ ಹೊರಜಗತ್ತಿನಲ್ಲಿ ಬದುಕುಳಿಯುವುದು ಅಸಾಧ್ಯ. ಅದು ಮತ್ಯಾರದೋ ಸೆರೆಯಲ್ಲಿ ಮತ್ತೊಂದು ಗೂಡು
ಸೇರಿರುತ್ತದೆ. ಇಲ್ಲವೇ ಯಾರದೋ ಹಸಿವಿಗೆ ಬಲಿಯಾಗಿರುತ್ತದೆ ಅನ್ನುವುದು ಮನವರಿಕೆಯಾದಾಗ ಛೆ ಎಂಥಾ ಕೆಲಸವಾಗಿ ಹೋಯ್ತಲ್ಲ, ಎನ್ನುವ ಪೇಚಾಟದಲ್ಲೇ ಒಂದು ವಾರ ಜ್ವರ ಬಂದು ಮಲಗಿಬಿಟ್ಟೆ.

ಹೆತ್ತ ಪ್ರೀತಿಗಿಂತ ಸಾಕಿ ಸಲುಹಿದ ಪ್ರೀತಿಯ ಬೆಲೆಯೇನೆಂದು ಅಂದು ಅರಿವಿಗೆ ಬಂತು. ಬೆಕ್ಕು, ನಾಯಿ, ಹದ್ದು, ಕಾಗೆ, ಗಿಡುಗ,
ಗುಡುಗು-ಮಿಂಚಿನೊಡನೆ ನಿಲ್ಲದೆ ಸುರಿಯುವ ಮಳೆಯನ್ನು ಕಂಡಾಗೊಮ್ಮೆ ಸಾರಾ ನೆನಪಾಗಿ ಜೀವ ಹಿಂಡಿದಂತಾಗುತ್ತಿತ್ತು. ಅಷ್ಟು ಸಣ್ಣಜೀವ ಜೊತೆಗಿದ್ದ ಕೆಲವೇ ದಿನಗಳಲ್ಲಿ ಅದೆಷ್ಟು ಪ್ರೀತಿ ಹುಟ್ಟಿತ್ತಲ್ಲ? ಇಂದಿಗೂ ಅದರ ನೆನಪಾದರೆ ಮನಸು ಕಳವಳಗೊಳ್ಳುತ್ತದೆ. ಅದು ಹೇಗೆ ಪ್ರೀತಿಸಿ ಜೊತೆಗಿದ್ದ ಜೀವವನ್ನು ಅಷ್ಟು ತುಂಡುಗಳನ್ನಾಗಿ ಕತ್ತರಿಸುವ ಮನಸಾಗುತ್ತದೋ ಭಗವಂತಾ? ಕಳೆದುಕೊಂಡ ತಂದೆ-ತಾಯಿಯ ಮನಸು ಹೇಗಿರುತ್ತದೋ? ಊಹಿಸಿಕೊಳ್ಳಲೂ ಅಸಾಧ್ಯ.