ಶಿಶಿರ ಕಾಲ
shishirh@gmail.com
ವೈರ್‌ಲೆಸ್. ಮೊಬೈಲ್‌ನಲ್ಲಿ ನೆಟ್‌ವರ್ಕ್, ಇಂಟರ್ನೆಟ್ ಇವೆಲ್ಲವೂ ಇಂದು ಅಗ್ಗದಲ್ಲಿ ಲಭ್ಯ, ಅದು ವೈರ್‌ಲೆಸ್. ಮೊಬೈಲ್‌ಗೆ ಜೋಡಿಯಾಗುವ ಇಯರ್-ನ್ ನಿಸ್ತಂತು. ಮನೆಯ ಇಂಟರ್ನೆಟ್‌ಗೆ ಜೋಡಿಸುವ ವೈಫೈ ಕೂಡ ವೈರ್‌ಲೆಸ್. ವೈರ್ ಇಲ್ಲದೆಯೇ ಮೊಬೈಲ್ ಚಾರ್ಜಿಂಗ್ ಸಾಧ್ಯ. ದಕ್ಷಿಣ ಕೊರಿಯಾ ದಲ್ಲಿ, ರಸ್ತೆಯಲ್ಲಿ ಓಡಾಡು ವಾಗಲೇ ವೈರ್‌ಲೆಸ್ ಆಗಿ ಚಾರ್ಜ್ ಆಗುವ ಬಸ್ ಒಂದು ಪ್ರಯೋಗಾತ್ಮಕವಾಗಿ ಜಾರಿಯಲ್ಲಿದೆ.
ಹೀಗೆ, ಇಂದಿನ ಮುಂಚೂಣಿಯ ಎಲ್ಲ ಟೆಕ್, ಎಲೆಕ್ಟ್ರಾನಿಕ್ ಕಂಪನಿಗಳು ಅವುಗಳ ಉತ್ಪನ್ನವನ್ನು ವೈರ್‌ಲೆಸ್ ಮಾಡುವುದು ಹೇಗೆ ಎನ್ನುವ ವಿಚಾರಕ್ಕೆ ಯಥೇಚ್ಛ ಹಣ ವ್ಯಯಿಸುತ್ತವೆ. ವೈರ್ ಎಂದರೆ ಜಂಜಾಟ. ಕಡಿಮೆ ವೈರ್ ಇದ್ದಷ್ಟೂ ಅದೇನೋ ಒಂದು ನಿರಾಳತೆ ನಮಗೆಲ್ಲ. ಅದು ಇಂದಿನ ಗ್ರಾಹಕನ ಅವಶ್ಯಕತೆ. ಆದರೆ ಇಲ್ಲಿ ಒಂದನ್ನು ಗಮನಿಸಬೇಕು. ಈ ಮೇಲೆ ಹೇಳಿದ ಎಲ್ಲ ನಿಸ್ತಂತು ಉಪಕರಣಗಳು ಸಂವಹಿಸುವ ತಂತ್ರಜ್ಞಾನ ಮಾತ್ರ ಸಂಪೂರ್ಣ ಬೇರೆ ಬೇರೆ.
ರೇಡಿಯೋ ತರಂಗಗಳ ಮೂಲಕ ಶಬ್ದವನ್ನು ಕಳಿಸುವ ತಂತ್ರಜ್ಞಾನವೇ ಬೇರೆ, ಮನೆಯ ವೈಫೈ ಕೆಲಸ ಮಾಡುವ ರೀತಿಯೇ ಬೇರೆ. ಬ್ಲೂಟೂತ್ ಕೆಲಸ ಮಾಡುವುದೇ ಒಂದು ರೀತಿ, ಮನೆಯ ಡಿಶ್ ಆಂಟೆನಾಗೆ ಸ್ಯಾಟಲೈಟ್‌ನಿಂದ ಬರುವ ತರಂಗಗಳು ಪ್ರಸಾರವಾಗುವುದು ಮಗದೊಂದು ರೀತಿ. ಎಲ್ಲವೂ ತರಂಗಗಳಾಗಿಯೇ ಪ್ರವಹಿಸಿದರೂ ಅವೆಲ್ಲ ಬೇರೆ ಬೇರೆ ತೆರನಾದ ವೈರ್‌ಲೆಸ್ ತಂತ್ರeನಗಳು. ಒಂದೊಂದಕ್ಕೆ ಒಂದೊಂದು ಮಿತಿಯಿದೆ. ಬ್ಲೂಟೂತ್‌ಗೆ ಹೆಚ್ಚೆಂದರೆ ನೂರು ಫೂಟ್‌ನಷ್ಟೇ ವ್ಯಾಪ್ತಿ. ವೈಫೈ ಸುಮಾರು ಮೂನ್ನೂರು ಫೂಟ್ ಮುಟ್ಟಬಹುದು. ನಮಗಿಂದು ಮೊಬೈಲ್ ನೆಟ್‌ವರ್ಕ್ ಎಡೆಯಲ್ಲಿ ಯೂ ಲಭ್ಯವಿದೆ. ಆದರೆ ಒಂದು ಮೊಬೈಲ್ ಟವರ್ ವ್ಯಾಪ್ತಿ ಅಬ್ಬಬ್ಬಾ ಎಂದರೆ ಹತ್ತು ಹನ್ನೆರಡು ಕಿಲೋಮೀಟರ್. ಬೆಂಗಳೂರಿನಂತಹ ನಗರದಲ್ಲಿ ಅದರ ವ್ಯಾಪ್ತಿ ಕೇವಲ ಒಂದೇ ಕಿಲೋಮೀಟರ್.
ಈ ಎಲ್ಲ ವೈರ್‌ಲೆಸ್ ತಂತ್ರಜ್ಞಾನಗಳಿಗೆ ವ್ಯಾಪ್ತಿಯ ಜತೆ ತಾಕತ್ತಿನಲ್ಲಿ ಕೂಡ ಅದರದೇ ಮಿತಿಯಿದೆ. ಈ ತರಂಗಗಳನ್ನು ಇನ್ನಷ್ಟು ಬಲಿಷ್ಠ ಮಾಡಿದರೆ ಇವು ಇನ್ನಷ್ಟು ದೂರ ಹೋಗಿ ಮುಟ್ಟಬಹುದೇ? ಇಲ್ಲ. ಅದು ಸಾಧ್ಯವಿಲ್ಲ. ಆ ಕಾರಣಕ್ಕೇ ಅಷ್ಟೊಂದು ಪ್ರಮಾಣದಲ್ಲಿ ಮೊಬೈಲ್ ಟವರ್‌ಗಳು ಬೇಕಾಗೋದು. ನಿಮ್ಮ ಮನೆಯ ವೈಫೈನ ಶಕ್ತಿ ನೂರು ಪಟ್ಟು ಹೆಚ್ಚಿಸಿಬಿಟ್ಟರೆ ಊರಿನ ತುಂಬಾ ಮನೆಯ ವೈಫೈ ಬರುವಂತೆ ಮಾಡಲು ಸಾಧ್ಯವಿಲ್ಲ. ವ್ಯಾಪ್ತಿ ಪ್ರದೇಶ ದಾಟಿದರೆ ಮೊಬೈಲ್ ನಲ್ಲಿ ಸಿಗ್ನಲ್ ಮತ್ತು ಇಂಟರ್ನೆಟ್ ಎರಡೂ ಬರುವುದಿಲ್ಲ.
ಹಾಗಾದರೆ ಸ್ಯಾಟಲೈಟ್ ಫೋನಿನಂತೆ ಸ್ಯಾಟಲೈಟ್ ಇಂಟರ್ನೆಟ್ ಏಕೆ ನಮಗೆಲ್ಲ ಇನ್ನೂವರೆಗೆ ಲಭ್ಯವಾಗಿಲ್ಲ? ಇದೊಂದು ಕೊರತೆಯೆಂದು ತೀರಾ ಒಳಕ್ಕಿರುವ ಹಳ್ಳಿಯ ಕೆಲವರಿಗಾದರೂ ಅನ್ನಿಸಿರಬಹುದು. ಸ್ಯಾಟಲೈಟ್‌ನಿಂದ ಮನೆಯ ಮೇಲಿನ ಡಿಶ್‌ಗೆ ನೇರವಾಗಿ ಸಿಗ್ನಲ್ ಬರುತ್ತದೆಯೆಂದರೆ ಅದೇ ರೀತಿ ಇಂಟರ್ನೆಟ್ ಏಕೆ ಬರುವ ವ್ಯವಸ್ಥೆ ಇಷ್ಟು ವರ್ಷವಾದರೂ ಸಾಧ್ಯವಾಗಿಲ್ಲ? ಸಾಮಾನ್ಯವಾಗಿ ಒಂದು ದೊಡ್ಡ ತಪ್ಪು ಕಲ್ಪನೆಯಿದೆ. ಅದೇನೆಂದರೆ ಇಂಟರ್ನೆಟ್ ದೇಶದೇಶಗಳ ನಡುವೆ, ಖಂಡಗಳ ನಡುವೆ ಸ್ಯಾಟಲೈಟ್ ಮೂಲಕ ಸಿಗ್ನಲ್ ರವಾನೆಯಾಗುತ್ತದೆಯೆಂದು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರೊಬ್ಬರು ಇಂದು ಸ್ಯಾಟಲೈಟ್ ಕಾರಣದಿಂದ ಅಮೆರಿಕದ ತುದಿಯಲ್ಲಿರುವವರನ್ನು ಮುಖನೋಡಿ ಮಾತನಾಡಲು ಸಾಧ್ಯವಾಗಿದೆ ಎಂದು ಹೇಳಿದ್ದು ಕೇಳಿದ್ದೆ.
ಇದು ನಿಜವೇ ಎಂದು ವಿಡಿಯೋ ತೋರಿಸಿ ಕೆಲವರಲ್ಲಿ ಕೇಳಿದಾಗ ಹೌದು, ಇದೆಲ್ಲ ಸಾಧ್ಯವಾಗಿರುವುದು ಸ್ಯಾಟಲೈಟನಿಂದಲೇ ಎಂದವರೇ ಜಾಸ್ತಿ. ಅಸಲಿಗೆ ನಾವೆಲ್ಲ ಬಳಸುವ ಇಂಟರ್ನೆಟ್‌ಗೆ ಮತ್ತು ಸ್ಯಾಟಲೈಟ್‌ಗೆ ಆ ರೀತಿಯ ಸಂಬಂಧವೇ ಇಲ್ಲ. ಉತ್ತರ, ದಕ್ಷಿಣ ಅಮೆರಿಕ, ಭಾರತ, ರಷ್ಯಾ, ಆಸ್ಟ್ರೇಲಿಯಾ, ಯುರೋಪ್ ಈ ಎಲ್ಲ ಖಂಡ, ದೇಶಗಳ ನಡುವಿನ ಇಂಟರ್ನೆಟ್ ಸಂವಹಿಸುವುದು ಸಮುದ್ರದಾಳದಲ್ಲಿ ಇಳಿಬಿಟ್ಟ ಫೈಬರ್ ಆಪ್ಟಿಕ್ ಕೇಬಲ್‌ಗಳ ಮೂಲಕ. ನೀವು ಅಮೆರಿಕದ ಸರ್ವರ್‌ನಲ್ಲಿರುವ ಒಂದು ವೆಬ್‌ಸೈಟ್ ಅಥವಾ ಫೇಸ್ಬುಕ್ ನೋಡುತ್ತಿದ್ದೀರಿ ಎಂದರೆ ನಿಮ್ಮ ಮೊಬೈಲ್ ಟವರ್‌ಗೆ, ಅಲ್ಲಿಂದ ಆಪ್ಟಿಕಲ್ ಕೇಬಲ್‌ಗಳ ಮೂಲಕ ಅಮೆರಿಕದ ಫೇಸ್ಬುಕ್ ಸರ್ವರ್‌ಗೆ ನೀವು ಕಕ್ಟ್ ಆಗಿದ್ದೀರಿ ಎಂದೇ ಅರ್ಥ.
ಫೇಸ್ಬುಕ್ ಒಂದು ಉದಾಹರಣೆಯಷ್ಟೆ. ಆ ಅದೆಷ್ಟೋ ಸಾವಿರ ಮೈಲಿ ಯ ಕನೆಕ್ಷನ್‌ನಲ್ಲಿ ಎಲ್ಲಿಯೋ ಒಂದು ಕಡೆ ವ್ಯತ್ಯಯವಾಗಿಬಿಟ್ಟರೆ ಫೇಸ್‌ಬುಕ್, ಟ್ವಿಟ್ಟರ್ ಕೆಲಸಮಾಡುವುದಿಲ್ಲ. ಅಮೆರಿಕದ ಜತೆಗಿನ ಕನೆಕ್ಷನ್ ತಪ್ಪಿಹೋದರೆ ಜಗತ್ತಿನ ಅರ್ಧಕ್ಕರ್ಧ ವೆಬ್‌ಸೈಟ್ ಕಾರ್ಯನಿರ್ವಹಿಸುವುದಿಲ್ಲ. ಆಗ
ನಾವು, ‘ಒಹ್ ಇಂಟರ್ನೆಟ್ ಡೌನ್ ಇದೆ’ ಎನ್ನುತ್ತೇವೆ. ಒಂದು ಅವಧಿಗಿಂತ ಜಾಸ್ತಿ ಈ ಸಾವಿರಾರು ಮೈಲಿಯ ಇಂಟರ್ನೆಟ್ ಜಾಲ ವ್ಯವಸ್ಥೆ ಸರಿಯಿಲ್ಲ ವೆಂದರೆ ಇಡೀ ಜಗತ್ತೇ ಕ್ಷಣಾರ್ಧದಲ್ಲಿ ಅಲಕಲವಾಗಿಬಿಡುತ್ತದೆ. ಇಂದಿನ ಇಂಟರ್ನೆಟ್‌ನ ಶೇ.೯೯ರಷ್ಟು ಸಂವಹನೆ ಇಡೀ ಜಗತ್ತನ್ನು ಸಮುದ್ರದಾಳದಲ್ಲಿ ಜೋಡಿಸಿರುವ ಇದೇ ಪೈಬರ್೦ ಆಪ್ಟಿಕಲ್ ಕೇಬಲ್‌ಗಳ ಮೂಲಕ ನಡೆಯುತ್ತದೆ.
ಇಂಟರ್ನೆಟ್ ಬಳಸುವ ಪ್ರತಿಯೊಬ್ಬರೂ ಈ ವ್ಯವಸ್ಥೆಯನ್ನು ಬಳಸಿಯೆ ಇರುತ್ತಾರೆ. ಆ ಸಮುದ್ರದ ಆಳದಲ್ಲಿ ಸುಮಾರು ಎಂಟು ಹತ್ತು ಸಾವಿರ ಮೈಲಿ ಉದ್ದದ ಫೈಬರ್ ಆಪ್ಟಿಕ್ ಕೇಬಲ್ ಇಂದಿನ ಜಾಗತಿಕ ಇಂಟರ್ನೆಟ್ ವ್ಯವಸ್ಥೆಯ ಜೀವಾಳ. ಫೈಬರ್ ಆಪ್ಟಿಕ್ ಏಕೆ? ಹಾಗಾದರೆ ಇಂಟರ್ನೆಟ್‌ಗೆ ಸ್ಯಾಟಲೈಟ್ ಅನ್ನು ಬಳಸೋಕೆ ಸಮಸ್ಯೆಯೇನು, ಯಾಕಿಲ್ಲ? ನೀವು ಕ್ರಿಕೆಟ್ ಪ್ರಿಯರಾಗಿದ್ದರೆ ಈ ಅನುಭವಾಗಿರುತ್ತದೆ. ಬೆಂಗಳೂರಿನಲ್ಲಿಯೇ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆಯೆಂದಿಟ್ಟುಕೊಳ್ಳಿ.
ನೀವು ಬೆಂಗಳೂರಿನ ಮನೆಯಲ್ಲಿ ಲೈವ್ ಮ್ಯಾಚ್ ನೋಡುವಾಗ ಪಕ್ಕದಲ್ಲಿ ರೇಡಿಯೋ ಕಮೆಂಟ್ರಿ ಹಚ್ಚಿಕೊಂಡಿದ್ದರೆ ವಿಕೆಟ್ ಪತನವಾದ ಸುದ್ದಿ ಮೊದಲು ರೇಡಿಯೋದಲ್ಲಿ ಕೇಳಿಸುತ್ತದೆ. ಅದಾದ ಸುಮಾರು ಅರ್ಧದಿಂದ ಎರಡು ನಿಮಿಷದ ನಂತರ ಟಿವಿಯಲ್ಲಿ ಅದು ಕಾಣಿಸುತ್ತದೆ. ಇದಕ್ಕೆ ಕಾರಣ ಚಿತ್ರವೊಂದು ಕ್ಯಾಮೆರಾದಲ್ಲಿ ಸೆರೆಯಾಗಿ, ಅದು ತರಂಗವಾಗಿ ಮಾರ್ಪಟ್ಟು, ಅಲ್ಲಿಂದ ಸ್ಯಾಟಲೈಟ್‌ಗೆ ಹೋಗಿ ತಲುಪಿ ಅಲ್ಲಿಂದ ಮನೆಯ ಡಿಶ್‌ಗೆ ಬಂದು ಟಿವಿಯಲ್ಲಿ ಮೂಡುವಾಗ ಆಗುವ ವಿಳಂಬ. ಅದನ್ನು ಸಿಗ್ನಲ್ ಲ್ಯಾಟೆನ್ಸಿ ಎನ್ನುವುದು. ಇದಿಷ್ಟು ನಡೆಯಲು ಅಷ್ಟು ಸಮಯ ಬೇಕು. ಅದೇ ರೇಡಿಯೋ ಆದರೆ ಟವರ್‌ನಿಂದ ನೇರವಾಗಿ ರೇಡಿಯೋಗೆ ತರಂಗ ರವಾನೆಯಾಗುತ್ತದೆ. ಹಾಗಾಗಿ ಅದರ ವೇಗ ಜಾಸ್ತಿ.
ಈಗ ಯೋಚಿಸಿ, ಒಂದೊಮ್ಮೆ ಟಿವಿಯಂತೆ ಇಂಟರ್ನೆಟ್ ಸ್ಯಾಟಲೈಟ್ ಮೂಲಕ ರವಾನೆಯಾಗುತ್ತಿದ್ದರೆ ನಮಗೆ ವಾಟ್ಸಾಪ್ ಕರೆ ಮಾಡಲು, ವಿಡಿಯೋ ಕರೆ ಮಾಡಲು ಸಾಧ್ಯವಾಗುತ್ತಿತ್ತಾ? ಒಂದು ವಾಕ್ಯ ಹೇಳಿದ ಮೇಲೆ ಉತ್ತರ ಬರಲಿಕ್ಕೆ ನಾಲ್ಕು ನಿಮಿಷ ಬೇಕಾಗುತ್ತಿದ್ದರೆ ಇಂಟರ್ನೆಟ್ ಅನ್ನು ಇಂದಿನ ಬಹುತೇಕ ಅವಶ್ಯಕತೆಗಳಿಗೆ ಬಳಸಲು ಆಗುತ್ತಲೇ ಇರಲಿಲ್ಲ. ಇಂದು ನೀವು ಅಮೆರಿಕದಲ್ಲಿರುವ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಕರೆ ಮಾಡಿ ‘ಹಲೋ’ ಎಂದರೆ ಅದು ಅಮೆರಿಕಕ್ಕೆ ತಲುಪಿ ಅವರ ಮೊಬೈಲ್‌ನಲ್ಲಿ ಸ್ವರವಾಗಿ ಬದಲಾಗಿ ಕೇಳಿಸಲು ಬೇಕಾಗುವ ಸಮಯ ಎಷ್ಟು ಗೊತ್ತೆ? ಕೇವಲ 300 ಮಿಲಿ ಸೆಕೆಂಡುಗಳು.
ಅದು ಎಷ್ಟು ಚಿಕ್ಕ ಬಿಡುವು ಎಂದರೆ ನಮ್ಮ ಗ್ರಹಿಕೆಗೂ ಬರುವುದಿಲ್ಲ. ಇದೆಲ್ಲ ಸಾಧ್ಯವಾಗಿದ್ದು ಫೈಬರ್ ಆಪ್ಟಿಕಲ್ ಕೇಬಲ್‌ನಿಂದ. ಇಂದು ಜಗತ್ತಿನಾ ದ್ಯಂತ ಸಮುದ್ರದಾಳದಲ್ಲಿ ಇರುವ -ಬರ್ ಕೇಬಲ್‌ನ ಉದ್ದ ಎಷ್ಟು ಗೊತ್ತೇ? ಬರೋಬ್ಬರಿ ಹದಿನಾಲ್ಕು ಲಕ್ಷ ಕಿಲೋಮೀಟರ್. ಸುಮಾರು ೪೫೦ ಕೇಬಲ್ ಗಳು ಬೇರೆ ಬೇರೆ ಭೂ ಭಾಗವನ್ನು ಇಂಟರ್ನೆಟ್ ಮೂಲಕ ಜೋಡಿಸುತ್ತವೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬಳಸುವ ಇಂಟರ್ನೆಟ್ ಪ್ರವಹಿಸಲು ಗಜಗಾತ್ರದ ಕೇಬಲ್‌ಗಳು ಬೇಕಿರಬಹುದು ಅಲ್ಲವೇ? ಇಲ್ಲ, ಈ ದೇಶಗಳನ್ನು ಜೋಡಿಸುವ ಆಪ್ಟಿಕಲ್ ಕೇಬಲ್‌ಗಳ ಗಾತ್ರ ಎರಡು ಇಂಚಿನ ಪೈಪಿನಷ್ಟು ಮಾತ್ರ. ಅಷ್ಟೊಂದು ಪ್ರಮಾಣದ ಇಂಟರ್ನೆಟ್ ವಿಷಯ ಸಂಚಾರಕ್ಕೆ ಅಷ್ಟೇ ಗಾತ್ರ ಸಾಕು.
ಇನ್ನು ಅದು ಸಮುದ್ರದಾಳದಲ್ಲಿ, ನೆಲದ ಮೇಲೆ ಇರಬೇಕಾದದ್ದರಿಂದ ಸಹಜವಾಗಿ ಶಾರ್ಕ್ ಮೊದಲಾದ ಮೀನುಗಳು ಕಡಿಯಬಹುದು. ಆ ಕಾರಣಕ್ಕೆ ಅದರ ಸುತ್ತ ರಕ್ಷಣಾಕವಚಗಳನ್ನೆಲ್ಲ ಸೇರಿಸಿದರೆ ಅವುಗಳದು ಅಬ್ಬಬ್ಬಾ ಎಂದರೆ ಒಂದು ಕೈ ಮುಷ್ಟಿಗೆ ಸಿಗುವಷ್ಟು ದಪ್ಪ. ಸ್ಯಾಟಲೈಟ್ ಭೂಮಿಯಿಂದ ಅಷ್ಟು ದೂರದಲ್ಲಿರುವುದರಿಂದ, ಈ ಲೇಟೆನ್ಸಿ (ವಿಳಂಬದ) ಕಾರಣದಿಂದ ಇಂಟರ್ನೆಟ್‌ನ ಬಳಕೆಗೆ ಸ್ಯಾಟಲೈಟ್ ಅಷ್ಟಾಗಿ ಆಗಿರುವುದಿಲ್ಲ ಎನ್ನುವುದು ಮೊದಲನೇ ವಿಚಾರವಾಯಿತು. ಎರಡನೆಯದಾಗಿ ಇಂಟರ್ನೆಟ್‌ಗೆ ಟಿವಿಗಿಂತ ಹೆಚ್ಚಿನ ವಿಷಯ ರವಾನೆಯಾಗಬೇಕು. ಎಂದರೆ ಸ್ಯಾಟಲೈಟ್‌ನಿಂದ ವಿಳಂಬವಾದರೂ ಇಂಟರ್ನೆಟ್ ಪಡೆಯಬೇಕೆಂದರೆ ಇದೆಲ್ಲ ಕಾರಣದಿಂದ ಹೆಚ್ಚಿನ ಹಣ ತೆರಬೇಕಾಗುತ್ತದೆ. ಎಲ್ಲರಿಗೂ ಅದನ್ನು ಪಡೆಯುವಷ್ಟು ಅಗ್ಗವಾಗಲು ಸಾಧ್ಯವಿಲ್ಲ.
ಅಗ್ಗ ಎನ್ನುವುದಕ್ಕಿಂತ ಈ ವಿಳಂಬದ ಕಾರಣಕ್ಕೆ ನೆಲ ಜಲದಲ್ಲಿ ಹಾಕಿದ ಆಪ್ಟಿಕಲ್ ಕೇಬಲ್‌ಗಳೇ ಹೆಚ್ಚು ಒಪ್ಪುವುದು. ಆದರೆ, ಅಂದು ಸಮಸ್ಯೆಯಿದೆ. ಹಡಗಿನಲ್ಲಿ ಸಮುದ್ರದಲ್ಲಿ ಸಂಚರಿಸುವವರು ಇಂಟರ್ನೆಟ್ ಸಂವಹನ ಮಾಡುವುದು ಹೇಗೆ? ಅಲ್ಲದೇ ಆಫ್ರಿಕಾದಂತಹ ಜನವಿರಳ ಪ್ರದೇಶಗಳಿಗೆ, ಕೆಲವೇ ಜನರಿಗೆ ಇಂಟರ್ನೆಟ್ ಒದಗಿಸಲು ಸಾವಿರ ಮೈಲಿಯ ಕೇಬಲ್ ಎಳೆಯುವುದೂ ವ್ಯಾವಹಾರಿಕವಾಗಿ ಸಾಧ್ಯವಾಗುವುದಲ್ಲ. ಇದಕ್ಕೆ ಪರಿಹಾರ ಹುಡುಕುತ್ತ
ಇತೀಚೆಗೆ, ಕೆಲವು ವರ್ಷಗಳಿಂದ ಫೇಸ್ ಬುಕ್ ಮೊದಲಾದ ಕಂಪನಿಗಳು ಇಂಟರ್ನೆಟ್ ಒದಗಿಸಲು ನಾನಾ ರೀತಿಯ ಸರ್ಕಸ್ ನಡೆಸುತ್ತಿವೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಕಂಡಿರುವುದು ಬಲೂನ್ ಇಂಟರ್ನೆಟ್.
ಒಂದು ಬೃಹತ್ ಬಲೂನಿಗೆ ಹೀಲಿಯಮ್ ಗಾಳಿ ತುಂಬಿಸಿ, ಮೇಲಕ್ಕೆ ಹಾರಿಸಿ ಅದಕ್ಕೆ ಇಳಿಬಿಟ್ಟ ಬಳ್ಳಿಯನ್ನು ನೆಲಕ್ಕೆ ಕಟ್ಟಿಹಾಕುವುದು. ಮೇಲಕ್ಕೆ ಹಾರುವ ಪುಗ್ಗೆಗೆ ಇಂಟರ್ನೆಟ್ ಸಿಗ್ನಲ್‌ಗಳನ್ನು ಪ್ರತಿಫಲಿಸುವ ತಾಂತ್ರಿಕ ಫಲಕಗಳನ್ನು ಜೋಡಿಸುವುದು. ಆ ಮೂಲಕ ಕೇಬಲ್ ಇಲ್ಲದೇ ಇಂಟರ್ನೆಟ್ ಅನ್ನು ಒಂದಿಷ್ಟು ವಿಶಾಲವಾದ ಪ್ರದೇಶಕ್ಕೆ ಪ್ರಸಾರ ಮಾಡುವುದು. ಆದರೆ ಇದಕ್ಕೂ ಮಿತಿಯಿದೆ. ಇದರಿಂದ ಕೆಲವೇ ಕಿಲೋಮೀಟರ್ ವ್ಯಾಪ್ತಿಗೆ ಇಂಟರ್ನೆಟ್ ಕೊಡಬಹುದು. ಅಂತಹ ಬಲೂನುಗಳನ್ನು ಎಷ್ಟೆಂದು ಹಾರಿಸೋದು? ಹಾರಿಸೋದಷ್ಟೇ ಅಲ್ಲ, ಅದಕ್ಕೆ ಇಂಟರ್ನೆಟ್ ಅನ್ನು ಜೋಡಿಸಿದರಷ್ಟೇ ಅದು ಪ್ರತಿಫಲಿಸಿ ಪ್ರಸಾರಮಾಡಲು ಸಾಧ್ಯ. ಅಲ್ಲದೆ ಇದನ್ನು ಎಡೆ ಬಳಸುವಂತಿಲ್ಲ. ಉದಾಹರಣೆಗೆ ಯುದ್ಧದಲ್ಲಿ ಸೈನಿಕರು ಬಳಸಲು ಮುಂದಾದರೆ ಮೊದಲು ಈ ಬಲೂನುಗಳನ್ನು ಹೊಡೆದು ಹಾಕುವುದು ಶತ್ರು ರಾಷ್ಟ್ರಕ್ಕೆ ದೊಡ್ಡ ವಿಷಯವೇ ಅಲ್ಲ.
ಏಕೆಂದರೆ ಅದು ಆಕಾಶದಲ್ಲಿರುತ್ತದೆ. ಯುದ್ಧ, ಜನವಿರಳ ಪ್ರದೇಶ, ಸಮುದ್ರದ ಮಧ್ಯದಲ್ಲಿ ಹೀಗೆ ಬೇರೆ ಬೇರೆ ಕಾರಣಕ್ಕೆ ಸ್ಯಾಟಲೈಟ್ ಇಂಟರ್ನೆಟ್‌ನ
ಅವಶ್ಯಕತೆ ಬಹುಕಾಲದಿಂದ, ಇಂಟರ್ನೆಟ್ ಬಂದ ಲಾಗಾಯ್ತಿನಿಂದ ಇದ್ದೇ ಇದೆ. ಬಹು ಕಾಲ ಇದರ ಪರಿಹಾರಕ್ಕೆ, ಸ್ಯಾಟಲೈಟ್ ಮೂಲಕ ವೇಗದ, ವಿಳಂಬವಿಲ್ಲದ ಮತ್ತು ಅಗ್ಗದಲ್ಲಿ ಇಂಟರ್ನೆಟ್ ಪಡೆಯುವುದು ಹೇಗೆ ಎನ್ನುವ ಬಗ್ಗೆ ಬಹಳಷ್ಟು ಕಂಪನಿಗಳು ತಲೆಕೆಡಿಸಿಕೊಂಡಿದ್ದವು. ಆದರೆ ವೈರ್
ಲೆಸ್, ಸ್ಯಾಟಲೈಟ್ ಇಂಟರ್ನೆಟ್ ಅನ್ನು ಸಾರ್ವತ್ರಿಕವಾಗಿ ಒದಗಿಸುವ ಹೊಸ ಸಾಹಸಕ್ಕೆ ದೊಡ್ಡ ಮಟ್ಟದಲ್ಲಿ ಕೈ ಹಾಕಿದ್ದು ಮಾತ್ರ ಒಬ್ಬನೇ ಆಸಾಮಿ, ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್. ಈಗಿರುವ, ಟಿವಿ ಮೊದಲಾದವುಗಳಿಗೆ ಬಳಕೆಯಾಗುವ ಸ್ಯಾಟಲೈಟ್‌ಗಳ ಸಂವಹನ ನಿಧಾನಕ್ಕೆ ಕಾರಣ ಅವಿರುವ ಎತ್ತರ.
ಟಿವಿ ಸ್ಯಾಟಲೈಟ್‌ಗಳು ನೆಲದಿಂದ ಅಜಮಾಸು ೫೫ ಸಾವಿರ ಕಿಲೋಮೀಟರ್ ಮೇಲಕ್ಕಿರುತ್ತವೆ. ಅವು ಎತ್ತರವಿದ್ದಷ್ಟು ಅವುಗಳ ವ್ಯಾಪ್ತಿ ಜಾಸ್ತಿ. ಆದರೆ ದೂರ ಹೋದಂತೆ ಸಿಗ್ನಲ್ ತಲುಪಲು ಹೆಚ್ಚಿನ ಸಮಯಬೇಕು, ಇದರಿಂದ ಇನ್ನಷ್ಟು ವಿಳಂಬ. ಹಾಗಾದರೆ ಕೆಲವೇ ಸಾವಿರ ಕಿಲೋಮೀಟರ್, ಕೆಳಕಕ್ಷೆ ಯಲ್ಲಿ ಈ ಸ್ಯಾಟಲೈಟ್‌ಗಳನ್ನು ಏಕೆ ಬಿಡಬಾರದು, ಹಾಗೆ ಮಾಡಿ ಇಂಟರ್ನೆಟ್ ಒದಗಿಸಬಹುದಲ್ಲವೇ? ಅದು ಸಾಧ್ಯ. ಇದರಿಂದ ಮೇಲ್‌ಕಕ್ಷೆಯ
ಸ್ಯಾಟಲೈಟ್‌ನಗುವ ಲೇಟೆನ್ಸಿ(ವಿಳಂಬ)ಯಲ್ಲಿ ಯೆಥೇಚ್ಛ ಇಳಿಕೆ ಕಾಣಬಹುದು. ಆದರೆ ಇಂದು ಸಮಸ್ಯೆಯಿದೆ. ಕೆಲವೇ ಸಾವಿರ ಕಿಲೋಮೀಟರ್ ಮೇಲಕ್ಕೆ ಸ್ಯಾಟಲೈಟ್ ಇಟ್ಟರೆ ಅದರ ದೃಷ್ಟಿ, ವ್ಯಾಪ್ತಿ ತೀರಾ ಕಡಿಮೆಯಾಗಿರುತ್ತದೆ.
ಈ ಮೂಲಕ ಭೂಮಿ ಪೂರ್ತಿ ಇಂಟರ್ನೆಟ್ ವ್ಯಾಪ್ತಿ ಪಡೆಯಬೇಕೆಂದರೆ ಒಂದೆರಡು ಲಕ್ಷ ಸ್ಯಾಟಲೈಟ್‌ಗಳೂ ಸಾಕಾಗುವುದಿಲ್ಲ. ಅಷ್ಟಿದ್ದರೂ ಎಲ್ಲರೂ ಅದನ್ನೇ ಬಳಸುವಷ್ಟು, ಅಗ್ಗವಾಗಿ ಇಂಟರ್ನೆಟ್ ಒದಗಿಸುವುದು ಕಷ್ಟ. ಅಂತಹ ಕಷ್ಟದ ಕೆಲಸಕ್ಕೇ ಎಲಾನ್ ಮಸ್ಕ್ ಕೈ ಹಾಕಿರುವುದು. ಕೆಲ ವರ್ಷದ ಹಿಂದೆ ಮಸ್ಕ್ ತನ್ನ ‘ಸ್ಪೇಸ್ ಎಕ್ಸ್’ ಎಂಬ ರಾಕೆಟ್ ಉಡಾವಣಾ ಕಂಪನಿಯ ಜತೆಜತೆಯಲ್ಲಿ ಸ್ಟಾರ್ ಲಿಂಕ್ ಎನ್ನುವ ಉಪಕಂಪನಿಯನ್ನು ಹುಟ್ಟು ಹಾಕಿದ್ದ. ಆತನ ಈ ಕಂಪನಿ ಭೂಮಿಗೆ ಹತ್ತಿರದ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಬಲ್ಲ ಚಿಕ್ಕ ಚಿಕ್ಕ, ಸ್ಯಾಟಲೈಟ್‌ಗಳನ್ನು ತಯಾರುಮಾಡಲು
ಶುರುಮಾಡಿತು. ಅವು ಗಾತ್ರದಲ್ಲಿ ೩ ಮೀಟರ್ ಉದ್ದ, ೨ ಮೀಟರ್ ಅಗಲದಷ್ಟು ಚಿಕ್ಕವು. ಅಂತಹ ಚಿಕ್ಕ, ನೆಲದಿಂದ ಸುಮಾರು ಒಂದೆರಡು ಸಾವಿರ ಕಿಲೋಮೀಟರ್ ಎತ್ತರದಲ್ಲಿ ಸುತ್ತಬಲ್ಲ ಭೂ ಸ್ಥಾಯಿ ಉಪಗ್ರಹಗಳನ್ನು ೨೦೧೯ರ ನಂತರ ಕಕ್ಷೆಗೆ ಸೇರಿಸಲು ಶುರುಮಾಡಿದ.
ಅಂತಹ ಒಂದೆರಡು ಲಕ್ಷ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸಿದರಷ್ಟೇ ಇದು ಉಪಯೋಗಕ್ಕ ಬಂದಾದಾಗ ಈ ಮನುಷ್ಯ ಎಷ್ಟು ಸ್ಯಾಟಲೈಟ್ ಹಾರಿಸಿ
ಯಾನು? ಈತನ ಕಂಪನಿ ದಿವಾಳಿಯಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುವ ಮಾತುಗಳು ಆಗ ಹರಿದಾಡಿದವು. ಆದರೆ ಎಲೊನ್ ಮಸ್ಕ ಸುಮ್ಮನೆ ಕೂರುವ ಗಿರಾಕಿಯೇ? ಈಗ ಕಳೆದ ಮೂರು ವರ್ಷಗಳಲ್ಲಿ ಅದಾಗಲೇ ಸುಮಾರು ಒಂದೂವರೆ ಸಾವಿರ ಸ್ಟಾರ್ ಲಿಂಕ್ ಉಪಗ್ರಹಗಳನ್ನು ಆತ ಕಕ್ಷೆಯಲ್ಲಿಟ್ಟು ಆಗಿದೆ.
ಇನ್ನೊಂದು ಮೂರು ಸಾವಿರ ಸ್ಯಾಟಲೈಟ್‌ಗಳು ಕಕ್ಷೆ ಸೇರಲು ತಯಾರಾಗಿ ನಿಂತಿವೆ. ಈ ವರ್ಷ ಮುಗಿಯುವುದರೊಳಗೆ ಹನ್ನೆರಡು ಸಾವಿರ ಸ್ಯಾಟಲೈಟ್
ಗಳನ್ನು ಆಕಾಶದಲ್ಲಿಡುವ ಇರಾದೆಯಿದೆಯಂತೆ. ಮತ್ತೊಂದು ವರ್ಷದೊಳಗೆ ಇನ್ನು ೪೨ ಸಾವಿರ ಇಂತಹ ಸ್ಯಾಟಲೈಟ್ ಗಳು ಕೆಳ ಕಕ್ಷೆಯಲ್ಲಿ ಸುತ್ತುಹಾಕುತ್ತ ಕೆಲಸಮಾಡಲಿವೆಯಂತೆ. ಕ್ರಮೇಣ ಇನ್ನು ಕೆಲವೇ ವರ್ಷಗಳಲ್ಲಿ ಪ್ರತೀ ತಾಲೂಕಿನ ಮೇಲೆಯೂ ಒಂದು ಎಲೊನ್ ಮಸ್ಕ್‌ನ ಸ್ಯಾಟಲೈಟ್
ಹಾರುತ್ತಿದೆಯೆಂದರೆ ಆಶ್ಚರ್ಯವಿಲ್ಲ. ಆ ವೇಗದಲ್ಲಿ ಈ ನಿಟ್ಟಿ ನಲ್ಲಿ ಕೆಲಸವಾಗುತ್ತಿವೆ. ಅಂತೆಯೇ ರಕ್ಷಣಾ ಕಾರಣಗಳಿಂದ ಅಡೆತಡೆಗಳು ಕೂಡ ಬರುತ್ತಿವೆ ಎನ್ನುವುದು ಬೇರೆ ವಿಚಾರ.
ನೀವು ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಉಕ್ರೈನ್ ಯುದ್ಧವನ್ನು ಹಿಂಬಾಲಿಸುತ್ತಿದ್ದರೆ ಅಲ್ಲಿನ ಚಿತ್ರ, ವಿಡಿಯೋಗಳನ್ನು ನೋಡಿಯೇ ಇರುತ್ತೀರಿ. ಅವೆಲ್ಲವೂ ನಡೆದ ಕೆಲವೇ ನಿಮಿಷಗಳಲ್ಲಿ ಜಗತ್ತಿನ ಮೂಲೆ ಮೂಲೆ ತಲುಪುತ್ತಿದೆ. ಈ ರೀತಿ ಯುದ್ಧನೆಲದ ಲೈವ್ ವಿಡಿಯೋಗಳು,
ಚಿತ್ರಗಳು ಕ್ಷಣಾರ್ಧದಲ್ಲಿ ಸರ್ವವ್ಯಾಪಿಸಲು ಕಾರಣ ಎಲಾನ್ ಮಸ್ಕ್‌ನ ಈ ಸ್ಟಾರ್ ಲಿಂಕ್ ಸ್ಯಾಟಲೈಟ್ ಗಳು. ಇಡೀ ಯುದ್ಧದಲ್ಲಿ ತೀರಾ ಕರಾರುವಕ್ಕಾಗಿ ಆಂತರಿಕವಾಗಿ ಅಥವಾ ಬಾಹ್ಯಪ್ರಪಂಚದ ಜತೆ ಉಕ್ರೇನ್ ಸೈನಿಕರ ಸಂವಹನ ಸಾಧ್ಯವಾಗಿದ್ದು ಇದರಿಂದ. ಸಾಮಾನ್ಯವಾಗಿ ಯುಧ್ಧ ಶುರುವಾದ
ಕೂಡಲೇ ಮೊದಲು ದಾಳಿಗೊಳಗಾಗುವುದೇ ಕಮ್ಯುನಿಕೇಶನ್ ವ್ಯವಸ್ಥೆಯ ಮೇಲೆ. ಆದರೆ ಸ್ಟಾರ್ ಲಿಂಕ್‌ಗೆ ಇದ್ದರೆ ಆ ಸಮಸ್ಯೆಯಿಲ್ಲ. ಒಂದು ಚಿಕ್ಕ ಕೊಡೆಯಷ್ಟು ಗಾತ್ರದ ಡಿಶ್ ಅನ್ನು ಆಕಾಶಕ್ಕೆ ಹಿಡಿದರೆ ಸಾಕು, ಇಂಟರ್ನೆಟ್ ಎಂದರಲ್ಲಿ ಲಭ್ಯ.
ಇಷ್ಟು ದೀರ್ಘ ಕಾಲದವರೆಗೆ ರಷ್ಯಾವನ್ನು ಉಕ್ರೈನ್ ತಡೆದು ನಿಲ್ಲಿಸಿದೆ, ಹಿಮ್ಮೆಟ್ಟಿಸಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಸ್ಟಾರ್‌ಲಿಂಕ್‌ನ ಸ್ಯಾಟಲೈಟ್ ಇಂಟರ್ನೆಟ್. ಇದು ಯುದ್ಧ ಭೂಮಿಯ ಲಿಮಿಟೇಷನ್‌ಗಳಲ್ಲಿ ಒಂದಾಗಿದ್ದ ಇಂಟರ್ನೆಟ್ ಸಂಹವನವನ್ನು ಸಂಪೂರ್ಣ ಬದಲಿಸಿದೆ. ಇದರಿಂದ ಯುದ್ಧ ನೆಲದ ಸಮನ್ವಯ, ಡೈರೆಕ್ಟ್ ಮಾಡುವ, ಆಕ್ರಮಣ ಮಾಡುವ, ಹಾನಿಯಿಂದ ತಪ್ಪಿಸಿಕೊಳ್ಳುವ ಹೀಗೆ ಯುದ್ಧ ನಡೆಯುವ ರೀತಿಯನ್ನೇ ಸಂಪೂರ್ಣ ಬದಲಿಸಿ ಬಿಟ್ಟಿದೆ. ಇದು ಸ್ಯಾಟಲೈಟ್ ಇಂಟರ್ನೆಟ್ ಅನ್ನು ಇಷ್ಟು ವ್ಯಾಪಕವಾಗಿ ಬಳಸುತ್ತಿರುವ ಮೊದಲ ಯುದ್ಧ.
ಒಟ್ಟಾರೆ ಮನೆ ಮನೆಗೆ ಸ್ಯಾಟಲೈಟ್‌ನಿಂದ ನೇರವಾಗಿ ಟಿವಿಯಂತೆ ಇಂಟರ್ನೆಟ್ ಪಡೆಯುವ ಕಾಲ ದೂರವಿಲ್ಲ. ಸರಕಾರಗಳಿಗೆ ಸಾಧ್ಯವಾಗದ ಕೆಲಸವನ್ನು ಮಾಡಲು ಹೊರಡುವ ಎಲಾನ್ ಮಸ್ಕ್ ಈ ಕಾರಣಕ್ಕೆ ಇಷ್ಟವಾಗುತ್ತಾನೆ. ಎಲಾನ್ ಮಸ್ಕ್ ಜಗತ್ತಿನ ಮೂರನೇ ಶ್ರೀಮಂತ ವ್ಯಕ್ತಿ ಇರಬ ಹುದು. ಆದರೆ ಆತ ಅದೆಷ್ಟೋ ಶ್ರೀಮಂತರಿಗಿಂತ ಈ ಕಾರಣಗಳಿಂದ ಭಿನ್ನ. ಆತನ ವರಸೆಯೇ ಅನನ್ಯ. ಅದಕ್ಕೇ ಅನ್ನಿಸೋದು, ಎಲೊನ್ ಮಸ್ಕ್ ಇನ್ನಷ್ಟು ಶ್ರೀಮಂತನಾಗಬೇಕು ಎಂದು.
Read E-Paper click here