ವರ್ತಮಾನ
maapala@gmail.com
ಭಾರತದಲ್ಲಿ ಹಿಂದೂ, ಹಿಂದುತ್ವ, ಹಿಂದೂ ದೇವಾನುದೇವತೆಗಳ ಬಗ್ಗೆ ಎಷ್ಟೇ ಅವಹೇಳನ ಮಾಡಿದರೂ ಅದನ್ನು
ಅರಗಿಸಿ ಕೊಳ್ಳಬಹುದು. ಹಾಗೆ ಹೇಳಿದ ವ್ಯಕ್ತಿ ಜಾತ್ಯತೀತ ನಾಯಕನಾಗುತ್ತಾನೆ. ಕೆಲವರ ಪಾಲಿಗೆ ಆತ ಹೀರೋ
ಆಗುತ್ತಾನೆ. ಬಹುಷಃ ಈ ರಾಷ್ಟ್ರದಲ್ಲಿ ಓಲೈಕೆ ಮತ್ತು ತುಷ್ಠೀಕರಣ ರಾಜಕಾರಣಕ್ಕೆ ಅತಿ ಹೆಚ್ಚು ಬಲಿಪಶುಗಳಾಗುತ್ತಿರುವುದು ಹಿಂದೂಗಳು.
ಇದರ ವಿರುದ್ಧ ಹಿಂದೂಗಳು ಒಗ್ಗಟ್ಟಾಗುತ್ತಿದ್ದಾರೆ ಎನ್ನುವಾಗ ಜಾತಿಯ ಹೆಸರಲ್ಲಿ ಅವರನ್ನು ವಿಂಗಡಿಸಿ, ಮೇಲು-ಕೀಳುಗಳೆಂಬ ಬಣ್ಣ ಹಚ್ಚಿ ಒಗ್ಗಟ್ಟು ಮುರಿಯಲಾಗುತ್ತದೆ. ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಇದ್ದ ಮನು ಸಂಸ್ಕೃತಿಯನ್ನು ಪ್ರಸ್ತಾಪಿಸಿ ಹಿಂದೂಗಳು, ಹಿಂದುತ್ವವನ್ನು ಪ್ರಶ್ನಿಸಲಾಗುತ್ತದೆ. ಹಿಂದೂ ಎಂಬುದು ಧರ್ಮವೇ ಅಲ್ಲ ಎನ್ನುತ್ತಾರೆ.
ಅದೆಲ್ಲವೂ ಅವರವರ ಭಾವಕ್ಕೆ, ಅವರವರ ಜ್ಞಾನಕ್ಕೆ ಸೀಮಿತವಾದ ವಿಚಾರ ಇರಬಹುದು. ಆದರೆ, ಅದನ್ನು ನಂಬುವವರ ಭಾವನೆಗಳಿಗೆ ಧಕ್ಕೆ ತರುವ, ಅದನ್ನು ಕೆರಳಿಸುವ ಅಧಿಕಾರ ಯಾರಿಗೂ ಇಲ್ಲ. ಆದರೂ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಗಳು ನಡೆಯುತ್ತಲೇ ಇವೆ.
ಅದರಲ್ಲೂ ಎಡಪಂಥೀಯರು, ಸಮಾಜವಾದಿಗಳು, ವಿಚಾರವಾದಿಗಳು ಎನಿಸಿಕೊಂಡವರು, ನಾವು ಜಾತ್ಯ ತೀತರು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವವರು, ಕೆಲವು ಕಾಂಗ್ರೆಸ್ಸಿಗರಿಗೆ ಜಾತ್ಯತೀತತೆ ಎಂದರೆ ನೆನಪಾಗುವುದು ಹಿಂದೂ ಧರ್ಮ ಮತ್ತು ಹಿಂದುತ್ವ. ಅದನ್ನು ಟೀಕಿಸಿದರೆ ಆತ ಜಾತ್ಯತೀತ, ವಿಚಾರವಾದಿ ಎನಿಸಿ ಕೊಳ್ಳುತ್ತಾನೆ. ಅದಕ್ಕೇ ಕಾಯುತ್ತಿರುವ ಕೆಲವರು ಅವನಿಗೆ ಬಹುಪರಾಕ್ ಹೇಳುತ್ತಾರೆ.
ಇದಕ್ಕೆ ಇತ್ತೀಚಿನ ಉದಾಹರಣೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ. ಹಿಂದೂ ಎಂಬುದು ಪರ್ಷಿಯನ್ ಭಾಷೆಯ ಪದ. ಹಿಂದೂ ಎಂಬುದು ಅಶ್ಲೀಲ ಪದ ಎಂದು ಫರ್ಮಾನು ಹೊರಡಿಸಿಬಿಟ್ಟರು. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ಮೊದಲಾಗಿದ್ದರೆ ಕಾಂಗ್ರೆಸ್ ಅವರ ಪರ ನಿಲ್ಲುತ್ತಿತ್ತೋ ಏನೋ? ಆದರೆ, ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತು ಇತ್ತೀಚೆಗೆ ಹಿಂದೂಗಳಲ್ಲಿ ಸಂಘಟನೆ ಗಟ್ಟಿಯಾಗುತ್ತಿರುವುದರಿಂದ ಮುಂದೆ ಚುನಾವಣೆ ಯಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಕೆಲವು ನಾಯಕರು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದರು. ಇನ್ನು ಕೆಲವರು ಮೌನಕ್ಕೆ ಶರಣಾಗಿ ಪರೋಕ್ಷವಾಗಿ ಸತೀಶ್ ಬೆನ್ನಿಗೆ ನಿಂತರು.
ಆದರೆ, ಯಾವಾಗ ಪ್ರತಿಭಟನೆಗಳು ತೀವ್ರಗೊಂಡವೋ, ಕಾಂಗ್ರೆಸ್‌ನಿಂದ ಒತ್ತಡ ಬಂದು ಸತೀಶ್ ಜಾರಕಿಹೊಳಿ ತಮ್ಮ
ಹೇಳಿಕೆ ಹಿಂಪಡೆದು, ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿಗಳಿಗೆ
ಪತ್ರ ಬರೆದರು. ಅಷ್ಟೇ ಅಲ್ಲ, ತನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ತನಿಖೆಗೆ ಆಗ್ರಹಿಸಿದರು. ಇದರ ಬೆನ್ನಲ್ಲೇ ಪ್ರತಿಭಟನೆಯೂ ಕಡಿಮೆಯಾಯಿತು.
ಈ ವೇಳೆ ಕಳೆದ ಜೂನ್ ತಿಂಗಳಿನಲ್ಲಿ ನಡೆದ ಘಟನೆ ನೆನಪಾಗುತ್ತಿದೆ. ಬಿಜೆಪಿ ನಾಯಕಿ ಮೊಹಮ್ಮದ್ ಪೈಗಂಬರ್ ಬಗ್ಗೆ ನೂಪುರ್ ಶರ್ಮಾ ನೀಡಿದ ಹೇಳಿಕೆ ಖಂಡಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಕೆಲವರು ಪ್ರಾಣ ಕಳೆದುಕೊಂಡರೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೂ ನೂಪುರ್ ಶರ್ಮಾ ವಿರುದ್ಧ ಕಿಡಿ ಕಾರಿದ್ದರು. ಬಿಜೆಪಿ ಹೊರತಾದ ರಾಜಕೀಯ ಪಕ್ಷಗಳು ಹಿಂಸಾಚಾರವನ್ನು ಖಂಡಿಸುವ ಬದಲು ನೂಪುರ್ ಶರ್ಮಾ ಇದಕ್ಕೆಲ್ಲಾ ಕಾರಣ ಎಂದರು. ನೂಪುರ್ ಶರ್ಮಾ ಅವರನ್ನುಬಿಜೆಪಿಯಿಂದ ಉಚ್ಛಾಟಿಸಿದ್ದೂ ಆಯಿತು.
ವಿಶೇಷವೆಂದರೆ ಆಗ ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರೂ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ನಡೆದ ಹಿಂಸಾತ್ಮಕ
ಪ್ರತಿಭಟನೆಯನ್ನು ಬೆಂಬಲಿಸುವ ರೀತಿ ಮಾತನಾಡಿದರು. ಅದೇ ಮಂದಿ ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ
ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿದಾಗ, ಇದೆಲ್ಲಾ ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಎಂದರೇ ಹೊರತು ಅದಕ್ಕೆ ಕಾರಣವನ್ನು ವಿಶ್ಲೇಷಿಸಲೇ ಇಲ್ಲ.
ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಎಂದರೆ, ಹಿಂದೂಗಳನ್ನು ಅವಮಾನಿಸಿ
ಅದನ್ನು ಜೀರ್ಣಿಸಿಕೊಳ್ಳಬಹುದು ಎಂಬ ಕಾಂಗ್ರೆಸ್ ನಾಯಕರ ಧೋರಣೆ. ಮಹಮ್ಮದ್ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆಗೆ ನೂಪುರ್ ಶರ್ಮಾ ಕ್ಷಮೆ ಯಾಚಿಸಿದ್ದರೂ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್, ಸತೀಶ್ ಜಾರಕಿಹೊಳಿ ವಿಚಾರದಲ್ಲಿ ಹೇಳಿಕೆ ಖಂಡಿಸಿ ಮೌನವಾಯಿತು. ಸತೀಶ್ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳುವ ಯೋಚನೆಯನ್ನೇ ಮಾಡಲಿಲ್ಲ.
ಅವರನ್ನು ಉಚ್ಛಾಟಿಸಬೇಕೆಂಬ ಒತ್ತಾಯವನ್ನು ರಾಜಕೀ. ಪ್ರೇರಿತ ಎಂದು ಹೇಳಿ, ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ
ಹಿಂಪಡೆದು ಕ್ಷಮೆ ಕೇಳುತ್ತಿದ್ದಂತೆ ಪ್ರಕರಣಕ್ಕೆ ಮುಕ್ತಾಯ ಹಾಡಿತು. ಆದರೆ, ಸತೀಶ್ ಜಾರಕಿಹೊಳಿ ಇಲ್ಲಿಗೆ ಪ್ರಕರಣ
ಮುಕ್ತಾಯಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಹೇಳಿಕೆ ಹಿಂಪಡೆದು, ಕ್ಷಮೆ ಕೇಳಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೂ, ಪಕ್ಷಕ್ಕೆ ಉಂಟಾಗುವ ಮುಜುಗರ ತಪ್ಪಿಸಲು ಮತ್ತು ನಾಯಕರ ಒತ್ತಡಕ್ಕೆ ಮಣಿದು ಹೇಳಿಕೆ ವಾಪಸ್ ಪಡೆದಿದ್ದೇನೆ.
ನನ್ನ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಹೇಳಿಕೆಯನ್ನು ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಅಂದರೆ, ಸತೀಶ್ ಜಾರಕಿಹೊಳಿ ಅವರ ಮನಸ್ಸಿನಲ್ಲಿ ಇನ್ನೂ ಹಿಂದೂ ಎಂಬುದು ಅಶ್ಲೀಲ ಪದ ಎಂಬ ಅಂಶ ಗಟ್ಟಿಯಾಗಿ ಕುಳಿತಿದೆ ಎಂದು ಅರ್ಥ. ಪಕ್ಷಕ್ಕೆ ಮುಜುಗರ ಆಗಬಾರದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಬಾರದು ಎಂಬ ಉದ್ದೇಶ ದಿಂದಷ್ಟೇ ಅವರು ಹೇಳಿಕೆ ಹಿಂಪಡೆದಿದ್ದಾರೆ.
ಹೀಗಿರುವಾಗ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷ ಅವರ ಹೇಳಿಕೆಯನ್ನು ಸಮರ್ಥಿಸಿ ಕೊಂಡಂತೆ ಅಲ್ಲವೇ? ಇಲ್ಲಿ ಇನ್ನೂ ಒಂದು ವಿಚಾರ ಗಮನಿಸಲೇ ಬೇಕು. ಸತೀಶ್ ಜಾರಕಿ ಹೊಳಿ ಪ್ರಕರಣವನ್ನು ಕಾಂಗ್ರೆಸ್ ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿತು. ಅವರ ಹೇಳಿಕೆ ಹೊರಬಂದ ಕೆಲವೇ ಕ್ಷಣದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದರು.
ಅಷ್ಟಕ್ಕೆ ಕಾಂಗ್ರೆಸ್ ಈ ವಿಚಾರದಲ್ಲಿ ಅಂತರ ಕಾಪಾಡಿಕೊಂಡಿತು ಎಂದು ಬಿಂಬಿತವಾಗುವಂತೆ ನೋಡಿಕೊಂಡಿತು. ಆದರೆ, ಹಿಂದೂಏತರರ ವಿಚಾರದಲ್ಲಿ ಸಣ್ಣ ಕಟಿಪಿಟಿಯಾದರೂ ಅದನ್ನು ಅತ್ಯುಗ್ರವಾಗಿ ಖಂಡಿಸುತ್ತಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸೊಲ್ಲೆತ್ತಲಿಲ್ಲ. ಅಷ್ಟೇ ಏಕೆ, ರಾಜ್ಯದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಅದನ್ನು ಖಂಡಿಸಲಿಲ್ಲ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಽಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಎನಿಸಿಕೊಂಡಿರುವ ಸಿದ್ದರಾ ಮಯ್ಯ, ಸುರ್ಜೇವಾಲ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದು ಹೇಳಿದರೇ ಹೊರತು ನೇರವಾಗಿ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ನಮ್ಮಲ್ಲಿ ಮೌನಂ ಸಮ್ಮತಿ ತಕ್ಷಣಂ ಎಂದು ಹೇಳುತ್ತಾರೆ. ಹಾಗಿದ್ದಾಗ ಪಕ್ಷದ ರಾಜ್ಯ ಮಟ್ಟದ ನಾಯಕರೊಬ್ಬರು ಇಂತಹ ಹೇಳಿಕೆ ನೀಡಿದಾಗ ಅದರ ಬಗ್ಗೆ ಮೌನವಾಗಿದ್ದರೆ ಅದನ್ನು ಒಪ್ಪಿಕೊಂಡಂತೆ ಅಲ್ಲವೇ? ಈ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ? ಈ ಸಂದರ್ಭದಲ್ಲಿ ವಿಶ್ವವಾಣಿ ಓದುಗರ ಪತ್ರಕ್ಕೆ ಬೆಂಗಳೂರಿನ ರಾಘವ ಪೂರ್ಣ ಪ್ರಮತಿ ಎಂಬುವರು ಬರೆದ ಓದುಗರ ಓಣಿ ನೆನಪಾಗುತ್ತದೆ. ಸತೀಶ್ ಜಾರಕಿಹೊಳಿ ಸಾಹೇಬರು ಹಿಂದೂ ಶಬ್ಧದ ಅರ್ಥದ ಬಗ್ಗೆ ಲಘುವಾಗಿ ಮಾತನಾಡಿ ದ್ದನ್ನು ವಿರೋಧಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಪ್ರಕರಣದಲ್ಲಿ ಜಾರಕಿಹೊಳಿ ಸಾಹೇಬರ ಹೇಳಿಕೆ ಹೊರಬಿದ್ದ ತಕ್ಷಣವೇ ವಿರೋಧ ಮಾಡಬಾರದಿತ್ತು.
ಅವರ ಬಾಯಿಯಿಂದ ಏನು ಬರುತ್ತದೆಯೋ ಅದೆಲ್ಲವೂ ಬಂದು ಬಿಡಲಿ ಎಂದು ಕಾಯಬೇಕಿತ್ತು. ಈ ಕಾಂಗ್ರೆಸ್ ಪಕ್ಷದ ಮುಖಂಡರ ಮನಸ್ಸಿನಲ್ಲಿ ಹಾಗೂ ಹಿಂದೂ ಧರ್ಮದಿಂದ ಅನ್ಯ ಮತಕ್ಕೆ ಮತಾಂತರಗೊಂಡವರ ಮನಸ್ಸಿನಲ್ಲಿ ಹಿಂದೂ ದ್ವೇಷ ಎಷ್ಟರಮಟ್ಟಿಗೆ ಇದೆ? ಯಾವ್ಯಾವ ಸ್ವರೂಪದಲ್ಲಿ ಇದೆ ಎಂಬುದು ಗೊತ್ತಾಗುವುದಾದರೂ ಹೇಗೆ? ಅದಕ್ಕಾಗಿಯಾದರೂ
ಅವರನ್ನು ಮಾತನಾಡಲು ಬಿಡಬೇಕಿತ್ತು. ಆಗಲೇ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು ಎಂದು ರಾಘವ
ಹೇಳಿದ್ದರು. ಹೇಳಿಕೆ ಹಿಂಪಡು ಕ್ಷಮೆ ಯಾಚಿಸಿದ ಬಳಿಕವೂ ಸತೀಶ್ ಜಾರಕಿಹೊಳಿ ಹೇಳಿದ ಮಾತು, ಆ ಹೇಳಿಕೆ ಕುರಿತಂತೆ
ಕಾಂಗ್ರೆಸ್ ನಾಯಕರ ನಿಲುವುಗಳನ್ನು ನೋಡಿದರೆ ರಾಘವ ಅವರ ಮಾತು ಸತ್ಯ ಎನಿಸುತ್ತದೆ.
ಲಾಸ್ಟ್ ಸಿಪ್: ಮಾತಲ್ಲೇ ಮಂಟಪ ಕಟ್ಟುವವರ ಜತೆಗೆ ಮಾತಲ್ಲೇ ಘೋರಿ ಕಟ್ಟುವವರೂ ಇರುತ್ತಾರೆ ಎಂಬುದು ಸತ್ಯ.