Sunday, 15th December 2024

ಹಳೆ ಕೌದಿ ಎಸೆದು ಆಧುನಿಕತೆಗೆ ಮುಖ ಮಾಡಿದ ಸೌದಿ

ನೂರೆಂಟು ವಿಶ್ವ

vbhat@me.com

ಮಧ್ಯಪ್ರಾಚ್ಯದ ಬಹುತೇಕ ದೇಶಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಒಮಾನ್, ಕತಾರ್, ಈಜಿಪ್ಟ್, ಟರ್ಕಿ,
ಬೆಹರೇನ್, ಜೋರ್ಡನ್, ಸಿರಿಯಾ, ಲೆಬನಾನ್ ಮುಂತಾದ ದೇಶಗಳಿಗೆ ಹೋಗಿದ್ದರೂ, ಸೌದಿ ಅರೇಬಿಯಾಕ್ಕೆ ಹೋಗಲು ನನಗೆ ಸಾಧ್ಯವಾಗಿರಲಿಲ್ಲ. ಕಳೆದ ಹದಿನೈದು ವರ್ಷಗಳಿಂದ ಆ ದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೆ.

ಮೂರ್ನಾಲ್ಕು ಸಲ ವೀಸಾಕ್ಕೆ ಅರ್ಜಿ ಹಾಕಿದ್ದೆ. ಅದ್ಯಾಕೋ ಗೊತ್ತಿಲ್ಲ, ಪದೇ ಪದೆ ತಿರಸ್ಕೃತವಾಗುತ್ತಿತ್ತು. ನನ್ನ ಸ್ನೇಹಿತರೂ, ‘ವಿಶ್ವವಾಣಿ’ ಅಂಕಣಕಾರರೂ ಮತ್ತು ಸೌದಿ ಅರೇಬಿಯಾ-ಬೆಹರೇನ್ ವಾಸಿಯೂ ಆದ ಕಿರಣ್ ಉಪಾಧ್ಯಾಯ ಕೂಡ ತಮ್ಮ ಸಂಪರ್ಕ ಬಳಸಿ ಪ್ರಯತ್ನಿಸಿದರು. ನನ್ನ ಬೇರೆ ಸ್ನೇಹಿತರ ಮೂಲಕವೂ ಪ್ರಯತ್ನಿಸಿದೆ. ಸಫಲ ಆಗಲಿಲ್ಲ. ಹಾಗಂತ ನಾನು ಪ್ರಯತ್ನ ನಿಲ್ಲಿಸಲಿಲ್ಲ. ಅವರೂ ವೀಸಾ ಕೊಡಲಿಲ್ಲ. ಒಮಾನ್ ಮರುಭೂಮಿ ಪ್ರವಾಸ ದಿಂದ ಉತ್ತೇಜಿತನಾಗಿ, ಸೌದಿ ಅರೇಬಿ ಯಾದಲ್ಲೂ ಅಂಥದೇ ರೋಡ್ ಟ್ರಿಪ್ ಮಾಡಬೇಕೆಂದು ಆಸೆಯಾಗಿ, ವೀಸಾಕ್ಕೆ ಅರ್ಜಿ ಸಲ್ಲಿಸಿದರೂ, ಎಂದಿನಂತೆ ಸಫಲ ವಾಗಲಿಲ್ಲ. ಈ ಜನ್ಮದಲ್ಲಿ ಅಲ್ಲಿಗೆ ಹೋಗಲು ಆಗಲಿಕ್ಕಿಲ್ಲ ಎಂದು ಸುಮ್ಮ ನಾಗಿದ್ದೆ.

ಈ ಮಧ್ಯೆ, ‘ನೀವು ಪತ್ರಕರ್ತರಾಗಿರುವುದರಿಂದ ಅಲ್ಲಿಗೆ ಹೋಗಿ, ಆ ದೇಶದ ವಿರುದ್ಧ ಏನಾದರೂ ಬರೆಯಬಹುದು ಎಂಬ
ಕಾರಣಕ್ಕೆ ವೀಸಾ ಕೊಡುತ್ತಿಲ್ಲ ಅಂತೆನಿಸುತ್ತದೆ’ ಎಂದು ಸ್ನೇಹಿತರೊಬ್ಬರು ವ್ಯಾಖ್ಯಾನ ಮಾಡಿದ್ದರು. ಅದು ನಿಜವೂ ಆಗಿತ್ತು. ಸೌದಿ ಅರೇಬಿಯಾ ಯಾರನ್ನೂ ಸುಲಭಕ್ಕೆ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಆ ದೇಶಕ್ಕೆ ಅದರ ಅಗತ್ಯವೂ ಇಲ್ಲ. ಪ್ರವಾಸೋ ದ್ಯಮದ ನೆಪದಲ್ಲಿ ವಿದೇಶಿಯರು ಬಂದು ತಮ್ಮ ದೇಶವನ್ನು ನೋಡಲಿ, ಆ ಮೂಲಕ ಒಂದಷ್ಟು ಹಣ ಮಾಡೋಣ ಎಂಬ ಯಾವ ಆಸೆಯೂ ಸೌದಿಗಳಿಗಿಲ್ಲ.

ನೀವು ಬಂದರೆಷ್ಟು, ಬಿಟ್ಟರೆಷ್ಟು ಎಂಬ ತಣ್ಣನೆಯ ಧೋರಣೆ. ಅಷ್ಟಕ್ಕೂ ನೀವು ಬರದಿದ್ದರೇ ಒಳ್ಳೆಯದು ಎಂಬುದು ಅವರ ವರಸೆ. ಈ ಕಾರಣದಿಂದ ಸೌದಿ ಅರೇಬಿಯಾ ಪ್ರವಾಸಿಸ್ನೇಹಿ ದೇಶವಾಗಿರಲಿಲ್ಲ. ಹೊರಗಿನ ರಾಷ್ಟ್ರಗಳಿಗೆ, ಆ ದೇಶ ಅಪರಿಚಿತ ಮತ್ತು ಗುಪ್ತ್ ಗುಪ್ತ್. ತಾನಾಯಿತು, ತನ್ನ ತೈಲ ವ್ಯಾಪಾರವಾಯಿತು ಹಾಗೂ ಮಧ್ಯಪ್ರಾಚ್ಯ ದೇಶಗಳ ರಾಜಕೀಯವಾಯಿತು ಎಂದು ನಿರುಮ್ಮಳವಾಗಿ ಇದ್ದುಬಿಟ್ಟಿದೆ. ಅಲ್ಲಿನ ವಿದ್ಯಮಾನಗಳು ಹೊರ ದೇಶಗಳಿಗೆ ಬಹುಬೇಗ ಗೊತ್ತೂ ಆಗುವುದಿಲ್ಲ. ಅದಕ್ಕೆ ಪ್ರಚಾರದ ಖಯಾಲಿಯೂ ಇಲ್ಲ.

ಒಂದು ಸುಂದರ ದೇಶವನ್ನು ಕಟ್ಟಿಕೊಂಡು, ಅದನ್ನು ತಾವೇ ಅನುಭವಿಸಿಕೊಂಡು ಸೌದಿಗಳು ಹಾಯಾಗಿ ಇದ್ದುಬಿಟ್ಟಿದ್ದಾರೆ. ತೈಲ ವ್ಯಾಪಾರದ ಮೂಲಕವೇ ಅವರು ಅಮೆರಿಕ ಸೇರಿದಂತೆ ಬಲಿಷ್ಠ ದೇಶಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ. ‘ನಾನು ಎಲ್ಲಿಯೂ ಇರಬಾರದು, ಆದರೆ ನನ್ನನ್ನು ಕೇಳದೇ ಏನೂ ಆಗಬಾರದು’ ಎಂಬುದು ಸೌದಿ ಅರೇಬಿಯಾದ ನಿಲುವು.
ಕಳೆದ ಐವತ್ತು ವರ್ಷಗಳಲ್ಲಿ ಆ ದೇಶ ನಡೆದುಕೊಂಡು ಬರುತ್ತಿರುವುದೇ ಹಾಗೆ. ಈ ಕಾರಣದಿಂದ ಸೌದಿ ಅರೇಬಿಯಾ ವಿದೇಶಿ ಯರಿಗೆ ರತ್ನಗಂಬಳಿ ಹಾಸುವುದಿಲ್ಲ.

ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭಾರತದ ಕೂಲಿ ಕಾರ್ಮಿಕರನ್ನು ಹೊರತುಪಡಿಸಿದರೆ, ಆ ದೇಶದಲ್ಲಿ ವಿದೇಶಿ ಯರ ಸಂಖ್ಯೆ ನಗಣ್ಯವೆಂದೇ ಹೇಳಬೇಕು. ವಿದೇಶಿಯರು ಬಯಸುವ ‘ಆಕರ್ಷಣೆ’ಗಳು ಸೌದಿ ಅರೇಬಿಯಾದಲ್ಲಿ ಇಲ್ಲದಿರುವುದು ಮತ್ತೊಂದು ಕಾರಣವಿರಬಹುದು. ಇಡೀ ದೇಶದಲ್ಲಿ ಒಂದು ಪಬ್ಬು, ಬಾರ್, ವೈನ್ ಶಾಪ್ ಕೂಡ ಇಲ್ಲ. ಕದ್ದು ಮುಚ್ಚಿ ಕುಡಿಯು ವವರು, ಮಾರಾಟ ಮಾಡುವವರು ಇರಬಹುದು. ಸಿಕ್ಕಿ ಬಿದ್ದರೆ ಫಜೀತಿ.

ಇಡೀ ದೇಶದಲ್ಲೂ ‘ಗುಂಡು’ ಇಲ್ಲವೇ ಇಲ್ಲ. ಪ್ರವಾಸೋದ್ಯಮ ಅಂದ್ರೆ ಕುಡಿತ, ಮೋಜು-ಮಸ್ತಿ ಎಂದೇ ಭಾವಿಸುವ ಯಾರೂ ಸೌದಿಗೆ ಹೋಗಲು ಬಯಸುವುದಿಲ್ಲ. ಸೌದಿ ಹೊರ ಪ್ರಪಂಚಕ್ಕೆ ಸಂಪೂರ್ಣ ತೆರೆದುಕೊಳ್ಳದೇ ಇರುವುದರಿಂದ, ಸ್ಪಷ್ಟ ಮತ್ತು ನಿಖರ ಮಾಹಿತಿ ಸುಲಭಕ್ಕೆ ಸಿಗುವುದಿಲ್ಲ. ಬೇರೆಯವರು ಹೇಳಿದ್ದೇ ಖರೆ. ಇರಲಿ, ಈ ಎಲ್ಲ ಅಪಸವ್ಯಗಳ ನಡುವೆಯೂ, ಸೌದಿ
ಅರೇಬಿಯಾಕ್ಕೆ ಹೋಗುವ ನನ್ನ ದಾಹ ಮಾತ್ರ ಕಡಿಮೆ ಆಗಿರಲಿಲ್ಲ.

ಅವಕಾಶ ಸಿಕ್ಕಾಗ ಪ್ರಯತ್ನ ಮುಂದುವರಿಸುತ್ತಲೇ ಇದ್ದೆ. ಇತ್ತೀಚೆಗೆ ಸ್ನೇಹಿತರೊಬ್ಬರ ಮೂಲಕ, ಹೇಗಿದ್ದರೂ ಸಿಗಲಿಕ್ಕಿಲ್ಲ ಎಂಬ ನಿರುತ್ಸಾಹ ಭಾವದಿಂದಲೇ ವೀಸಾಕ್ಕೆ ಅಪ್ಲೈ ಮಾಡಿದೆ. ಸಿಕ್ಕಿ ಬಿಡ್ತು ! ಅದಕ್ಕೆ ಕಾರಣವೂ ಇತ್ತು. ಕಳೆದ ತಿಂಗಳು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ನೋಡಲು ನಾನು ಕತಾರಿಗೆ ಹೋಗಿದ್ದೆ. ಫುಟ್ಬಾಲ್ ಪಂದ್ಯಗಳನ್ನು ನೋಡಲು ಆಗಮಿಸುವವರಿಗೆ ಕತಾರ್, ವೀಸಾ ಬದಲಿಗೆ, ‘ಹಯ್ಯಾ’ ಎಂಬ ಹೆಸರಿನ ವಿವಿಧೋದ್ದೇಶಗಳ ಒಂದು ಕಾರ್ಡ್ ಅನ್ನು ನೀಡಿತ್ತು. ಹಯ್ಯಾ ಕಾರ್ಡ್ ಇದ್ದರೆ, ಜಿಸಿಸಿ (Gulf Cooperation Council) ದೇಶಗಳಿಗೆ (ಬೆಹರೀನ್, ಕುವೇಟ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್) ಫುಟ್ಬಾಲ್ ಪಂದ್ಯ ನಡೆಯುವ ಸಂದರ್ಭದಲ್ಲಿ ಸುಲಭವಾಗಿ ಎಷ್ಟು ಸಲ ಬೇಕಾದರೂ ಹೋಗಬಹುದಾಗಿತ್ತು, ಬರಬಹುದಾಗಿತ್ತು.

ಅಂದರೆ ಹಯ್ಯಾ ಕಾರ್ಡ್ ತೋರಿಸಿದರೆ, ಬೆಹರೀನ್, ಕುವೇಟ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸುಲಭಕ್ಕೆ ವೀಸಾ ನೀಡುತ್ತಿತ್ತು. ನಾನು ಇದನ್ನೇ ನೆಪ ಮಾಡಿಕೊಂಡು, ಸ್ನೇಹಿತರ ಮೂಲಕ ಅಪ್ಲೈ ಮಾಡಿದೆ. ಆಶ್ಚರ್ಯ, ಒಂದೆರಡು ದಿನಗಳಲ್ಲಿ ವೀಸಾ ಸಿಕ್ಕಿ ಬಿಟ್ಟಿತು. ಯಾವುದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೇನೋ, ಅದು ಮಲ್ಲಿಗೆ ಹೂವನ್ನು ಎತ್ತಿಡಬಹುದಾದಷ್ಟು ನಿರಾಯಾಸವಾಗಿ, ಸುಲಭಕ್ಕೆ ಪ್ರಾಪ್ತವಾಗಿಬಿಟ್ಟಿತು.

ಸಾಮಾನ್ಯವಾಗಿ ಸೌದಿ ಅರೇಬಿಯಾ ವೀಸಾಕ್ಕೆ ಅಪ್ಲೈ ಮಾಡಿದ ಬಳಿಕ ಕನಿಷ್ಠ ಒಂದು ತಿಂಗಳು ಕಾಯಬೇಕು. ನಂತರ ಫಿಂಗರ್ ಪ್ರಿಂಟ್ ಅಥವಾ ಬಯೋಮೆಟ್ರಿಕ್ ನೀಡಲು ಮುಂಬೈಗೆ ಹೋಗಬೇಕು. ಇಷ್ಟಾದರೂ ವೀಸಾ ಸಿಕ್ಕೇ ಬಿಡುತ್ತದೆ ಎಂಬ ಗ್ಯಾರಂಟಿ ಇಲ್ಲ. ನೂರೆಂಟು ಪ್ರಶ್ನೆ. ಹತ್ತಾರು ಅಡೆ-ತಡೆ. ಅದರಲ್ಲೂ ನೀವು ಪತ್ರಕರ್ತರು ಎಂಬುದು ಗೊತ್ತಾದರೆ, ವೀಸಾ ಕೊಡುವ ಪ್ರಶ್ನೆಯೇ ಇಲ್ಲ.

ಸೌದಿಯಲ್ಲಿರುವ ಪತ್ರಕರ್ತರಿಗೇ ಬರೆಯುವ ಸ್ವಾತಂತ್ರ್ಯ ಇಲ್ಲ. ಇನ್ನು ವಿದೇಶಗಳ ಪತ್ರಕರ್ತರನ್ನು ಒಳಬಿಟ್ಟುಕೊಳ್ಳುವು ದುಂಟಾ? ಹಾಗಂತ ಆ ದೇಶ ಮೋರಿ ಬಳಿಯುವವರಿಗೆ, ಬಾತ್ ರೂಮ್ ತೊಳೆಯುವವರಿಗೆ, ಹೋಟೆಲ್ ಮಾಣಿಗಳಿಗೆ ಬಹಳ ಸುಲಭಕ್ಕೆ ವೀಸಾ ಕೊಡುತ್ತದೆ. ಆದರೆ ಪತ್ರಕರ್ತರಿಗೆ ಜಪ್ಪಯ್ಯ ಅಂದ್ರೂ ವೀಸಾ ಕೊಡುವುದಿಲ್ಲ. ಹಾಗಂತ ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾ, ಬಹಳ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕೆಲವು ದಿನಗಳ ಹಿಂದೆ, ಸೌದಿ ಅರೇಬಿಯಾ ಪ್ರವಾಸೋದ್ಯಮ, ಬೆಂಗಳೂರಿನಲ್ಲೂ ರೋಡ್ ಷೋ ಹಮ್ಮಿಕೊಂಡಿತ್ತು. ಕರ್ನಾಟಕದ ಗಣ್ಯರನ್ನು ತಮ್ಮ ದೇಶಕ್ಕೆ ಆಹ್ವಾನಿಸಿ, ಅಲ್ಲಿನ ಪ್ರೇಕ್ಷಣೀಯ ತಾಣಗಳಿಗೆ ಕರೆದುಕೊಂಡು ಹೋಗಿ ಪ್ರಚಾರ ಮಾಡುತ್ತಿದೆ. ಆದರೂ ಸೌದಿ ಅರೇಬಿಯಾಕ್ಕೆ ಜನ ಮುಗಿಬಿದ್ದು ಹೋಗುತ್ತಿಲ್ಲ. ಯಾರಿಗೆ ಹೋಗಬೇಕು ಎಂಬ ಮನಸ್ಸಿದೆಯೋ ಅವರಿಗೆ ವೀಸಾ ಕೊಡುತ್ತಿಲ್ಲ. ಆದರೆ ಉಳಿದವರಿಗೆ ಬನ್ನಿ ಬನ್ನಿ ಎಂದು ಕರೆಯುತ್ತಿದೆ.

ಆದರೆ, ಸೌದಿ ಅರೇಬಿಯಾಕ್ಕೆ ಪ್ರವಾಸಿಗರು ನಿರೀಕ್ಷಿತ ಪ್ರಮಾಣದಲ್ಲಿ ಹೋಗುತ್ತಿಲ್ಲ. ಇನ್ನೂ ಅನೇಕರ ಪಾಲಿಗೆ ಅದು ಮರೀಚಿಕೆಯೇ. ಇದಕ್ಕೆ ಆ ದೇಶದ ಬಗ್ಗೆ ಜನರಿಗಿರುವ ಕಲ್ಪನೆ ಮತ್ತು ತಪ್ಪು ಕಲ್ಪನೆ. ಸೌದಿಯಲ್ಲಿ ನೋಡಲೇಬೇಕಾದ
ಅದ್ಭುತ ತಾಣಗಳಿವೆ, ಅಪರೂಪದ ಪ್ರೇಕ್ಷಣೀಯ ತಾಣ ಗಳಿವೆ. ನೈಸರ್ಗಿಕ ಕ್ಷೇತ್ರಗಳಿವೆ. ನಿಸರ್ಗದ ಅಚ್ಚರಿಗಳನ್ನು ಹೊತ್ತಿರುವ ಕೌತುಕಮಯ ಪ್ರದೇಶಗಳಿವೆ.

ಬೆರಗುಗೊಳಿಸುವ ಬೆಟ್ಟ-ಗುಡ್ಡಗಳು, ರಮ್ಯ ತಾಣಗಳು, ಸಾಗರದಂಥ ಮರಳು ರಾಶಿಗಳಿವೆ. ಆ ಎಲ್ಲಾ ತಾಣಗಳಲ್ಲಿ ಅತ್ಯುತ್ತಮ, ಅಂತಾರಾಷ್ಟ್ರೀಯ ಮಟ್ಟದ ಮೂಲಸೌಲಭ್ಯಗಳಿವೆ. ಆದರೆ ಎಡೆ ಬಿಕೋ. ಜನ ಮಾತ್ರ ಸುಳಿಯುತ್ತಿಲ್ಲ. ವಿದೇಶಿಗರನ್ನು ತನ್ನತ್ತ ಸೆಳೆದುಕೊಳ್ಳಲು ಸೌದಿ ಅರೇಬಿಯಾ ಸಿದ್ಧವಾದರೂ, ಆ ದೇಶವನ್ನು ಸ್ವೀಕರಿಸಲು ವಿದೇಶಿಯರು ಇನ್ನೂ ಸಿದ್ಧವಾಗಿಲ್ಲ. ಹಾಗಂತ ಈ ಭಾವನೆ ಕ್ಷಣಿಕ. ಒಮ್ಮೆ ಅಲ್ಲಿಗೆ ಹೋಗಿ ಬಂದರೆ, ಸೌದಿ ಯಾವ ಅನುಮಾನಗಳಿಲ್ಲದೇ,
ಇಷ್ಟವಾಗುತ್ತ ಹೋಗುತ್ತದೆ.

ಅಲ್ಲಿಗೆ ಹೋಗುವ ಮುನ್ನ ನನ್ನ ಮನಸ್ಸಿನಲ್ಲಿ ಆ ದೇಶದ ಬಗ್ಗೆ ಹಲವು ಜಣುಕುಗಳಿದ್ದವು, ಅನುಮಾನಗಳಿದ್ದವು. ಇವೆಲ್ಲವೂ ಕುತೂಹಲದ ಚಿಪ್ಪಿನೊಳಗಿದ್ದವು. ಸೌದಿ ಅಂದ್ರೆ ಹಾಗಂತೆ, ಹೀಗಂತೆ ಎಂಬ ಅಡಾ-ಪಡಾ ಭಾವನೆಗಳಿದ್ದವು. ನನ್ನಲ್ಲೂ ಅನೇಕ ಚಿತ್ತಪ್ರಭಾವಗಳಿದ್ದವು. ಗಂಡು-ಹೆಣ್ಣು  ಅಸಮಾನತೆ, ವೈವಾಹಿಕ ಸಂಬಂಧ, ಕುಟುಂಬ ವ್ಯವಸ್ಥೆ, ದಾಂಪತ್ಯ, ಪುರುಷ ಪ್ರಧಾನ ಸಮಾಜದ ಕ್ರೌರ್ಯ ಕಥನಗಳು, ಸಂಕೀರ್ಣವಾದ ಜನಜೀವನ, ಕರ್ಮಠ ಕಟ್ಟುಪಾಡು, ಕಟ್ಟುನಿಟ್ಟಾದ ಧಾರ್ಮಿಕ ಆಚರಣೆ ಗಳು, ಸಂಪ್ರದಾಯಗಳು ನನ್ನಲ್ಲಿ ಆ ದೇಶದ ಬಗ್ಗೆ ಅನುಮಾನ, ತಿರಸ್ಕಾರ, ಗೊಂದಲದ ಜೇಡರಬಲೆಗಳನ್ನು ನೇಯ್ದಿದ್ದವು.

ಸೌದಿ ಬಗ್ಗೆ ನಾನು ನನಗರಿವಿಲ್ಲದೇ, ನನ್ನ ಮನಸ್ಸಿನೊಳಗೆ ಚಿತ್ರಪಟವನ್ನು ಬಿಡಿಸಿಟ್ಟುಕೊಂಡು, ಅದಕ್ಕೊಂದು -ಮ್
ತೊಡಿಸಿ ಮನಸ್ಸಿನ ಗೋಡೆಗೆ ನೇತು ಹಾಕಿಕೊಂಡಿದ್ದೆ. ಸೌದಿ ಬಗ್ಗೆ ತಿಳಿದುಕೊಳ್ಳುವ ನಿಖರ ಮತ್ತು ಅಥೆಂಟಿಕ್ ಆದ ಸಾಹಿತ್ಯದ
ಕೊರತೆ, (ಇಂದಿಗೂ ಅದರ ಕೊರತೆ ನೀಗಿಲ್ಲ) ನನ್ನ ಭಾವನೆಗಳನ್ನು ಅಷ್ಟು ವರ್ಷಗಳಿಂದ ಸಾಕಿಕೊಳ್ಳಲು ಕಾರಣವಾಯಿತು.
ಸೌದಿ ಬಗ್ಗೆ ಯಾರೋ ಬಿತ್ತಿದ ಬೀಜ ನಮ್ಮ ಮನಸಿನಲ್ಲಿ ಇಂದಿಗೂ ಹೆಮ್ಮರವಾಗಿ ಬೆಳೆಯುತ್ತ ಇದೆ. ವಿದೇಶೀಯರು ಸೌದಿ ಬಗ್ಗೆ ಈ ರೀತಿ ತಪ್ಪು ತಿಳಿದುಕೊಳ್ಳಲು ಆ ದೇಶದ ಯೋಗದಾನವನ್ನು ಉಪೇಕ್ಷಿಸುವಂತಿಲ್ಲ.

ಈ ರೀತಿಯ ತಪ್ಪು ಅಭಿಪ್ರಾಯ ದೂರ ಮಾಡುವ ಯಾವ ಪ್ರಯತ್ನವನ್ನೂ ಆ ದೇಶ ಮಾಡಲಿಲ್ಲ. ಹೀಗಾಗಿ ಸೌದಿ ಬಗ್ಗೆ ತಿಳಿದು ಕೊಂಡವರ ಪೈಕಿ ತಪ್ಪು ತಿಳಿದುಕೊಂಡವರೇ ಹೆಚ್ಚು. ಕಾರಣ ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ಹೇಳುವವರ ಸ್ವಾತಂತ್ರ್ಯವನ್ನೇ ಕಿತ್ತು ಕೊಂಡರೆ ಅವರಾದರೂ ಹೇಗೆ ಹೇಳುತ್ತಾರೆ!? ಹೀಗಾಗಿ ಸೌದಿ ಎಲ್ಲ ಇದ್ದೂ, ಏನೂ ಇಲ್ಲದ ಹತಭಾಗ್ಯ ಪಡೆದವರಂತಿತ್ತು. ಯಾವ ಸಮಾಜ ಎಲ್ಲವನ್ನು ಮುಚ್ಚಿಡಲು ಪ್ರಯತ್ನಿಸುವುದೋ, ಅಲ್ಲಿ ಅನಗತ್ಯ ಅನುಮಾನಗಳು ಹುಟ್ಟಿಕೊಳ್ಳುತ್ತವೆ.

ಗುಮಾನಿಯ ಹೊಗೆ ಯಾಡಲಾರಂಭಿಸುತ್ತದೆ. ವೃಥಾ ತಪ್ಪು ಕಲ್ಪನೆಗೆ ಆಸ್ಪದ ನೀಡಿದಂತಾಗುತ್ತದೆ. ಸೌದಿಯಲ್ಲಿ ಆಗಿದ್ದು ಅದೇ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸೌದಿಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಅಲ್ಲಿನ ಯುವ ಜನತೆ ಜಗತ್ತಿನೆಡೆಗೆ ದೃಷ್ಟಿ
ಹಾಯಿಸುತ್ತಿzರೆ. ಪ್ರಭುತ್ವವನ್ನು ಪ್ರಶ್ನಿಸುವ ಮನೋಭಾವ ಮೊಳಕೆಯೊಡೆಯುತ್ತಿದೆ. ಮಹಿಳೆಯರನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದ ಅರಬ್ ಸಮಾಜ, ಇಂದು ಸಮಾನತೆಯ ಮಾತಾಡುತ್ತಿದೆ. ಅದು ಯಾವಾಗ ಆಚರಣೆಗೆ ಬರುತ್ತೋ, ಅದು ಬೇರೆ ಮಾತು. ಈ ಮೊದಲು ಅಂಥ ಮಾತುಗಳನ್ನು ಸಹ ಆಡಲು ಆಸ್ಪದವಿರಲಿಲ್ಲ.

ಬುರ್ಖಾ ಹೊರತಾಗಿ ಹೆಂಗಸರು ಕಾಣಿಸಿಕೊಳ್ಳುವಂತಿರಲಿಲ್ಲ. ಅಂಗಡಿ, ಮಾಲ, ಹೋಟೆಲ, ಆಫೀಸುಗಳಲ್ಲಿ ಹೆಂಗಸರು ಕೆಲಸ
ಮಾಡುವಂತಿರಲಿಲ್ಲ. ಹೆಂಗಸರು ವಾಹನ ಓಡಿಸುವಂತಿರಲಿಲ್ಲ. ಆದರೆ ಈಗ ಸಾರ್ವಜನಿಕವಾಗಿ ಹೆಂಗಸರು ಜೀನ್ಸ್ ಧರಿಸಿ ಓಡಾಡುತ್ತಾರೆ, ಸಿಗರೇಟು ಸೇದುತ್ತಾರೆ, ತಮ್ಮ ಇಷ್ಟದ ಫ್ಯಾಷನ್ ದಿರಿಸುಗಳನ್ನು ತೊಡುತ್ತಾರೆ, ಕಾರುಗಳನ್ನು ಓಡಿಸುತ್ತಾರೆ. ಹತ್ತು ವರ್ಷಗಳ ಹಿಂದೆ, ಹೆಂಗಸರು ತಮ್ಮದೇ ಪಾಸ್ ಪೋರ್ಟ್ ಹೊಂದುವಂತಿರಲಿಲ್ಲ. ವಿದೇಶ ಪ್ರಯಾಣ ಮಾಡುವಂತಿ ರಲಿಲ್ಲ. ಆದರೆ ಈಗ ಆ ಎಲ್ಲ ಕಟ್ಟುಪಾಡುಗಳನ್ನು ಕಿತ್ತೆಸೆಯಲಾಗಿದೆ. ಮಹಿಳೆಯರು, ವಲಿಯ (male guardian ಅಥವಾ ಪೋಷಕರು) ಅನುಮತಿಯಿಲ್ಲದೇ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂತಿರಲಿಲ್ಲ.

2012 ರವರೆಗೆ ಸೌದಿ ಮಹಿಳೆಯರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಿರಲಿಲ್ಲ. ಲಂಡನ್ ಕ್ರೀಡಾಕೂಟದಲ್ಲಿ
ಇಬ್ಬರು ಮಹಿಳೆಯರು ಭಾಗವಹಿಸಿದ್ದೇ ಮೊದಲು. ನಂತರ 2016 ರಲ್ಲಿ ರಿಯೋಡಿ ಜನೈರೊದಲ್ಲಿ ನಾಲ್ವರು ಮಹಿಳೆಯರು
ಭಾಗವಹಿಸಿದರು. ಸೌದಿ ಅರೇಬಿಯಾ 2018 ರ ತನಕ, ಮಹಿಳೆಯರು ವಾಹನ ಓಡಿಸದ ಜಗತ್ತಿನ ಏಕೈಕ ಮತ್ತು ಕೊನೆಯ ದೇಶವಾಗಿತ್ತು. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿ ಅರೇಬಿಯಾದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಜಾರಿಗೊಳಿಸಿದ ಬಳಿಕ ಆ ದೇಶ ಬದಲಾವಣೆಗೆ ಮುಖ ಮಾಡಲಾರಂಭಿಸಿದೆ.

ಸೌದಿ ಅರೇಬಿಯಾದಲ್ಲಿ ಹೊಸಗಾಳಿ ಬೀಸಲು ಆ ದೇಶದ ಯುವ ಜನತೆಯೂ ಕಾರಣ. ಅಲ್ಲಿನ ಜನಸಂಖ್ಯೆಯ ಮೂರರಲ್ಲಿ ಎರಡರಷ್ಟು ಮಂದಿ ಮೂವತ್ತೈದು ವರ್ಷಕ್ಕಿಂತ ಚಿಕ್ಕವರು. ಅಲ್ಲಿನವರ ಸರಾಸರಿ ವರ್ಷ ಮೂವತ್ತು. ಆ ದೇಶದ ಶೇ.ಮೂವತ್ತರಷ್ಟು ಜನಸಂಖ್ಯೆ ಹದಿನಾಲ್ಕು ವರ್ಷ ವಯಸ್ಸಿನವರು. ೧೫-೩೫ ವಯೋಮಾನದವರು ಶೇ. ಮೂವತ್ನಾಲ್ಕ ರಷ್ಟಿದ್ದಾರೆ.

ಯುವತಿಯರು ಬೇಗನೆ ಮದುವೆಯಾಗುತ್ತಿಲ್ಲ. ೧೫-೩೪ ವಯೋಮಾನದ ಶೇ.೬೬ ರಷ್ಟು ಗಂಡಸರು ಮತ್ತು ಹೆಂಗಸರು ಮದುವೆ ಆಗಿಲ್ಲ. ಈ ಪೈಕಿ ಶೇ. ೪೩ ರಷ್ಟು ಹೆಂಗಸರು ಎಂಬುದು ಗಮನಾರ್ಹ. ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಯುವಕ-ಯುವತಿಯರು ಉನ್ನತ ಶಿಕ್ಷಣ, ವಿದ್ಯಾಭ್ಯಾಸಕ್ಕೆ ತೆರಳುತ್ತಿzರೆ. ಸೌದಿಯಲ್ಲೂ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಗಳು ತಲೆಯೆತ್ತುತ್ತಿವೆ. ಕಳೆದ ಒಂದು, ಒಂದೂವರೆ ದಶಕದೊಳಗೆ, ನೂರು ವರ್ಷಗಳಲ್ಲಿ ಆಗದಷ್ಟು ಬದಲಾವಣೆಗಳಾಗಿವೆ. ಸೌದಿಯಲ್ಲಿ ತಲತಲಾಂತರಗಳಿಂದ ಜಡ್ಡುಗಟ್ಟಿದ್ದ ನಂಬಿಕೆಗಳು ನಿಧಾನವಾಗಿ ಮಾಯವಾಗುತ್ತಿದೆ.

ಅವ್ಯಕ್ತ ಭಯ, ಆತಂಕ, ತೂಗುಗತ್ತಿಯ ದುಗುಡ ಮಾಯವಾಗಿದೆ. ಅಲ್ಲಿನವರಿಗೆ ಅರಿವಿಲ್ಲದಂತೆ ಆಧುನಿಕತೆ ಅಪ್ಪಿಕೊಳ್ಳುತ್ತಿದೆ. ಗೊಡ್ಡು ಸಂಪ್ರದಾಯ, ನಂಬಿಕೆಗಳನ್ನು ಹೇರುತ್ತಿದ್ದವರನ್ನು ಯುವ ಜನತೆ ಪ್ರಶ್ನಿಸಲಾರಂಭಿಸಿದ್ದಾರೆ. ಆದರೆ ಕ್ರಮಿಸಬೇಕಾದ
ಹಾದಿಯೂ ಸುದೀರ್ಘವಾಗಿದೆ. ಸಮಾಜದಲ್ಲಿನ ಗುಪ್ತಗಾಮಿನಿ ಅಷ್ಟು ಬೇಗನೆ ತನ್ನ ಬದಲಿನ ಹುದಲನ್ನು ಬಿಟ್ಟುಕೊಡುವುದಿಲ್ಲ. ಆದರೆ ಬದಲಾವಣೆಯ ಹುಡಿಗಳು ರೆಪ್ಪೆಗಳಿಗಂಟಿಕೊಳ್ಳುವ ಸಹಜ ಕ್ರಿಯೆ ಯಾರಿಗಾದರೂ ಮೇಲ್ನೋಟಕ್ಕೆ ಕಂಡು ಬರುತ್ತವೆ.
ಅರಬ್ ರಾಷ್ಟ್ರಗಳ ಅತ್ಯಂತ ಬಲಿಷ್ಠ, ಪ್ರಭಾವಿ ಮತ್ತು ಶ್ರೀಮಂತ ದೇಶವೊಂದು ತನ್ನಷ್ಟಕ್ಕೆ ಆಧುನಿಕ ಕಾಲನ ಜತೆಗೆ ಹೆಜ್ಜೆ ಹಾಕಲು ಮುಂದಾಗಿರುವುದಂತೂ ಸತ್ಯ.