ಸಂಸ್ಮರಣೆ
ಪ್ರವೀಣ್ ಕುಮಾರ‍್ ಮಾವಿನಕಾಡು
ಕಳೆದ ಏಳೆಂಟು ವರ್ಷಗಳಿಂದ ಈಚೆಗೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ತೀವ್ರವಾಗಿ ವಿರೋಧಿಸುವ ಕೆಲಸದಲ್ಲಿ ತೊಡಗಿದೆ. ಅವರೊಬ್ಬ
ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ ಎಂದು ಜನಮಾನಸದಲ್ಲಿ ಅಚ್ಚೊತ್ತುವ ತೀವ್ರಯತ್ನವನ್ನು ನಡೆಸುತ್ತಾ ಬಂದಿದೆ. ಅವರು ಬ್ರಿಟಿಷರ ಬಳಿ ಕ್ಷಮೆ ಕೇಳಿದ್ದಾರೆ ಎನ್ನುವ ವಿಚಾರವೊಂದನ್ನು ಸೃಷ್ಟಿಸಿ ಅತ್ಯಂತ ಹೀನಾಯವಾಗಿ ಬಿಂಬಿಸುವ ಕೆಲಸವನ್ನು ಮಾಡುತ್ತಿದೆ.
ಆರ್‌ಎಸ್‌ಎಸ್ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಒಮ್ಮೆ ಬೇಷರತ್ ಕ್ಷಮೆ ಕೇಳಿದ್ದ, ‘ಚೌಕೀದಾರ ಚೋರ್’ ಎನ್ನುವ ಹೇಳಿಕೆ ಕೊಟ್ಟು ಇನ್ನೊಮ್ಮೆ ಕ್ಷಮೆ ಕೇಳಿದ್ದ, ರಫೆಲ್ ಯುದ್ಧ ವಿಮಾನ ಖರೀದಿಯ ವಿಚಾರದಲ್ಲಿ ಏನೇನೋ ಹೇಳಲು ಹೋಗಿ ಮಗದೊಮ್ಮೆ ಕ್ಷಮೆ ಕೇಳಿದ, ಹಾಗೂ ಆಗಾಗ ಕ್ಷಮೆ ಕೇಳುವುದನ್ನೇ ಹವ್ಯಾಸವಾಗಿಸಿ ಕೊಂಡಿರುವ ರಾಹುಲ್ ಗಾಂಧಿ ಕೂಡ, ‘ನಾನು ಸಾವರ್ಕರ್ ಅಲ್ಲ, ನಾನೊಬ್ಬ ಗಾಂಧಿ. ಗಾಂಧಿ ಕ್ಷಮೆ ಕೇಳು ವುದಿಲ್ಲ’ ಎಂದು ಹೇಳುವ ಮೂಲಕ ಸಮಸ್ತ ದೇಶವಾಸಿಗಳನ್ನು ನಗೆಗಡಲಲ್ಲಿ ಮುಳುಗಿಸಿದ್ದರು!
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ನಾರಾಯಣ ಚಂದಾವರ್ಕರ್ ಅವರು ೧೯೨೩ರಲ್ಲಿ ಮರಣ ಹೊಂದುತ್ತಾರೆ. ಅದೇ ವರ್ಷದ ಡಿಸೆಂಬರ್ ೨೮ರಿಂದ ಜನವರಿ ೧ರವರೆಗೆ ಕಾಂಗ್ರೆಸ್ ಪಕ್ಷದ ೩೮ನೇ ರಾಷ್ಟ್ರೀಯ ಅಧಿವೇಶನವು ಕಾಕಿನಾಡಾದಲ್ಲಿ ನಡೆಯುತ್ತದೆ. ಆ ಅಧಿವೇಶನದಲ್ಲಿ, ಮೊದಲು ಚಂದಾವರ್ಕರ್ ಅವರಿಗೆ ಮತ್ತು ಅದೇ ಸಾಲಿನಲ್ಲಿ ಮೃತಪಟ್ಟ ಇನ್ನಿತರ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ. ನಂತರದ ಆ ಅಽವೇಶನದ ಮೊದಲ ಹಾಗೂ ಅತ್ಯಂತ ಪ್ರಮುಖ ನಿರ್ಣಯ ಏನಾಗಿತ್ತು ಗೊತ್ತೇ? ಸ್ವಾತಂತ್ರ್ಯ ಹೋರಾಟಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ನಿರಂತರವಾಗಿ ಬಂಧನಕ್ಕೊಳಪಡಿಸಿದ ಸರಕಾರದ ವಿರುದ್ಧದ ಖಂಡನಾ ನಿರ್ಣಯ!
ಅಷ್ಟೇ ಅಲ್ಲದೆ ಸಾವರ್ಕರ್ ಅವರ ಸಹೋದರ ರಾದ ಡಾ.ನಾರಾಯಣ ದಾಮೋದರ ಸಾವರ್ಕರ್ ಮತ್ತು ಅವರ ಕುಟುಂಬದ ಇತರ ಸದಸ್ಯರೊಂದಿಗೆ ತನ್ನ
ಸಹಾನುಭೂತಿ ವ್ಯಕ್ತಪಡಿಸುವ ನಿರ್ಣಯವನ್ನೂ ಕಾಂಗ್ರೆಸ್ ಸರ್ವಾನುಮತದಿಂದ ಅನುಮೋದಿಸುತ್ತದೆ. ಕಾಂಗ್ರೆಸ್ಸಿನಿಂದ ಆಗ ಸ್ವಾತಂತ್ರ್ಯ ಹೋರಾಟಗಾರರೆನಿಸಿ
ಕೊಂಡಿದ್ದ ಅದೇ ಸಾವರ್ಕರ್ ಈಗ ದೇಶದ್ರೋಹಿ ಎನಿಸಿ ಕೊಂಡಿದ್ದಾರೆ! ನನಗೆ ಗೊತ್ತು, ಈಗ ನಾನು ಹೇಳುತ್ತಿರುವುದೆಲ್ಲವೂ ಸುಳ್ಳು, ನಕಲಿ, -ಕು ಎಂದು ಮುಗಿಬೀಳಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ದೊಡ್ಡ ಪಡೆಯೇ ಬರುತ್ತದೆ. ಏಕೆಂದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಅಷ್ಟೊಂದು ಸ್ವಚ್ಛವಾಗಿ ಅವರ ಮಿದುಳು ತೊಳೆಯಲಾಗಿದೆ.
ಆದರೆ ಕಾಂಗ್ರೆಸ್ ಪಕ್ಷದ ಆ ಅಧಿವೇಶನದ ಪೂರ್ತಿ ಐದೂ ದಿನಗಳ ಸಂಪೂರ್ಣ ದಾಖಲೆಯನ್ನಿಟ್ಟುಕೊಂಡೇ ನಾನಿದನ್ನು ಬರೆಯುತ್ತಿದ್ದೇನೆ. ಮುಗಿಬೀಳಲು ಮುಂದಾದರೆ ಅವರುಗಳ ಮುಂದೆ ಅಕ್ಷರ ಅಕ್ಷರಗಳನ್ನೂ ಬಿಡಿಸಿ ಓದಬಲ್ಲೆ. ಸಾವರ್ಕರ್ ಅವರನ್ನು ‘ವೀರ’ ಸಾವರ್ಕರ್ ಎಂದು ಕರೆಯುವುದನ್ನೂ ಕೂಡ ಇತ್ತೀಚಿಗೆ ಮಿದುಳು ತೊಳೆಸಿಕೊಂಡವರ ಗುಂಪು ವಿರೋಧಿಸುತ್ತದೆ. ಅವರನ್ನು ವೀರ ಸಾವರ್ಕರ್ ಎಂದು ಕರೆದವರಾದರೂ ಯಾರು ಎಂದು ಆ ಗುಂಪು ಪ್ರಶ್ನಿಸುತ್ತದೆ. ಸಾವರ್ಕರ್ ಅವರ ಜನ್ಮಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಸಮಿತಿಯ ಕಾರ್ಯ ದರ್ಶಿಗಳಾಗಿದ್ದ ಪಂಡಿತ್ ಬಕ್ಲೆ ಅವರು ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಇಂದಿರಾ ಗಾಂಧಿಯವರು ದಿನಾಂಕ ೨೦ ಮೇ ೧೯೮೦ರಂದು ಬರೆದ ಪತ್ರದಲ್ಲಿ, ‘ಬ್ರಿಟಿಷ್ ಸರಕಾರದ ವಿರುದ್ಧದ ವೀರ ಸಾವರ್ಕರ್ ಅವರ ದಿಟ್ಟ ಹೋರಾಟವು ಸ್ವಾತಂತ್ರ್ಯ ಚಳವಳಿಯನ್ನು ಸ್ಮರಿಸಬೇಕಾದ ದಿನಗಳಲ್ಲಿ ತನ್ನದೇ ಆದ ಪ್ರಾಮುಖ್ಯ ವನ್ನು ಹೊಂದಿದೆ.
ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುವ ಯೋಜನೆಯು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸುತ್ತೇನೆ’ ಎಂದು ಹೇಳುತ್ತಾರೆ. ಸಾವರ್ಕರ್ ಅವರನ್ನು ‘ವೀರ’ ಎಂದು ಕರೆದಿದ್ದಷ್ಟೇ ಅಲ್ಲದೆ ತಮ್ಮ ಅದೇ ಪತ್ರದಲ್ಲಿ ಇಂದಿರಾ ಗಾಂಧಿಯವರು ಅವರನ್ನು ‘ರಿಮಾರ್ಕಬಲ್ ಸನ್ ಆಫ್ ಇಂಡಿಯ’ ಎಂದೂ ಕರೆಯುತ್ತಾರೆ!
ಆವತ್ತು ‘ವೀರ ಸಾವರ್ಕರ್’, ‘ರಿಮಾರ್ಕಬಲ್ ಸನ್ ಆಫ್ ಇಂಡಿಯಾ’ ಎಂದೆಲ್ಲಾ ಕರೆದವರು ಇವತ್ತು ‘ಅವರ‍್ಯಾರು?’ ಎಂದು ಕೇಳುತ್ತಿರುವುದಾದರೂ ಏಕೆ? ‘ಗಂಗಾ’ಳು ‘ನಾಗವಲ್ಲಿಯಾಗಿ’ ಬದಲಾಗಿದ್ದು ಯಾವಾಗ? ವೀರ ಸಾವರ್ಕರ್‌ರ ಮರಣಾನಂತರ ಅದೇ ಇಂದಿರಾ ಗಾಂಧಿಯವರ ಸರಕಾರವು ಸಾವರ್ಕರ್ ನೆನಪಿಗಾಗಿ ಅಂಚೆಚೀಟಿ ಬಿಡುಗಡೆ ಮಾಡುತ್ತದೆ. ಅದರ ಮೇಲೆ ಸಾವರ್ಕರ್‌ರ ಚಿತ್ರ ಮಾತ್ರವಲ್ಲದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಅತಿಕ್ರೂರ ಶಿಕ್ಷೆ ಅನುಭವಿಸಿದ ಅವರಿದ್ದ ಜೈಲಿನ ಚಿತ್ರವನ್ನೂ ಹಾಕಲಾಗುತ್ತದೆ. ಅಷ್ಟೇ ಅಲ್ಲದೆ, ಇಂದಿರಾ ಗಾಂಧಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಕೂಡಲೇ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿ ‘ಲೈಫ್ ಆಫ್ ಶ್ರೀ ವಿನಾಯಕ ದಾಮೋದರ ಸಾವರ್ಕರ್’ ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ಮಿಸುತ್ತಾರೆ! ಈ ಕುರಿತು ಯಾರಿಗಾದರೂ ಅನುಮಾನವಿದ್ದರೆ ಆ ಸಾಕ್ಷ್ಯಚಿತ್ರದ ಒಂದೊಂದು ದೃಶ್ಯವನ್ನೂ ವಿವರಿಸಿ ಹೇಳಲು ಸಿದ್ಧನಿದ್ದೇನೆ.
ಆವತ್ತು ‘ಸಾಮಾನ್ಯರಲ್ಲ ನೀವು’ ಎಂದು ಹೇಳಿದವರೇ ಇವತ್ತು ‘ಯಾರು ನೀವು?’ ಎಂದು ಕೇಳುತ್ತಿರುವುದಾದರೂ ಏಕೆ? ನಾಗವಲ್ಲಿಯಾಗಿ ಬದಲಾಗಲು ಗಂಗಾಳಿಗಿರುವ ಆ ಅನಿವಾರ್ಯವಾದರೂ ಏನು? ಈ ರೀತಿಯಾಗಿ ಕಾಂಗ್ರೆಸ್ ಪಕ್ಷ ‘ದಿನಕೊಂದು ಬಣ್ಣ, ಕ್ಷಣಕೊಂದು ಬಣ್ಣ, ಏನೇನೋ ವೇಷ, ಮಾತಲ್ಲಿ ಮೋಸ’ ಮಾಡುತ್ತಿರುವುದಾದರೂ ಏಕೆ? ಇದನ್ನು ತಿಳಿದುಕೊಳ್ಳಲು ನಾವು ತುಂಬಾ ಶ್ರಮಪಡಬೇಕಾಗಿ ಯೇನೂ ಇಲ್ಲ. ಹಿಂದೆ ‘ಹಸು-ಕರು’ ಚಿಹ್ನೆಯನ್ನು ಕೇಳಿ ಪಡೆದುಕೊಂಡಿದ್ದ ಕಾಂಗ್ರೆಸ್ ಪಕ್ಷವೇ ಇದೀಗ ಪ್ರಮುಖ ನಗರದ ಬೀದಿಯಲ್ಲಿ ಬಹಿರಂಗವಾಗಿ ಹಸು-ಕರುವಿನ ಕುತ್ತಿಗೆಯನ್ನು ಕತ್ತರಿಸಿ ಬೀಫ್ ಫೆಸ್ಟಿವಲ್ ನಡೆಸಿದ್ದನ್ನು ನೋಡಿದವರಿಗೆ ಅದರ ಸಿದ್ಧಾಂತಗಳು ಕಾಲಕಾಲಕ್ಕೆ ಹೇಗೆ ಬದಲಾಗುತ್ತವೆ, ಏಕೆ ಬದಲಾಗುತ್ತವೆ ಮತ್ತು ಯಾರಿಗಾಗಿ ಬದಲಾಗುತ್ತವೆ ಎನ್ನುವುದು ಗೊತ್ತೇ ಇರುತ್ತದೆ.
ವಿಷಯ ಇಷ್ಟೇ. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳು ಗಾಂಧಿವಾದಿಗಳಿಗಿಂತ ಮೇಲುಗೈ ಸಾಧಿಸುತ್ತಿದ್ದರು. ಅದನ್ನು ತಡೆಯುವ ಮತ್ತು ಅವರ ಬೆಂಬಲಿಗರನ್ನು ತನ್ನೆಡೆಗೆ ಸೆಳೆಯುವ ಸಲುವಾಗಿ ಕಾಂಗ್ರೆಸ್ ಪಕ್ಷ ಅಂದು ಸಾವರ್ಕರ್ ಅವರಿಗೆ ಬೆಂಬಲ ಸೂಚಿಸುವ ಆ ನಿರ್ಣಯ ಕೈಗೊಂಡಿತ್ತು. ನಂತರದ ದಿನಗಳಲ್ಲಿ ಬಾಂಗ್ಲಾ ವಿಷಯದಲ್ಲಿ ಮುನಿಸಿಕೊಂಡಿದ್ದ ಅನ್ಯಕೋಮಿನವರ ಬದಲಿಗೆ ಹಿಂದೂ ಸಮುದಾಯವನ್ನು ಓಲೈಸಲೇಬೇಕಾದ ಅನಿವಾರ್ಯ ಅದಕ್ಕೆ
ಎದುರಾಯಿತು. ಆದರೆ ಈಗ ಸ್ವಾತಂತ್ರ್ಯ ದೊರೆತಿದ್ದು ನಮ್ಮಿಂದ ಮಾತ್ರ ಎಂದು ದೇಶದ ಜನರನ್ನು ನಂಬಿಸುವ ಅವಶ್ಯಕತೆ ಇದೆ. ಜತೆಗೆ ಹಿಂದೂಗಳ ಪರವಾಗಿದ್ದ ಸ್ವಾತಂತ್ರ್ಯ ವೀರರೊಬ್ಬರನ್ನು ನಿಂದಿಸುತ್ತಾ ತನ್ನ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ನಿರ್ದಿಷ್ಟ ಕೋಮನ್ನು ಓಲೈಸಿ ಇಟ್ಟುಕೊಳ್ಳಲೇಬೇಕಾದ ಅಗತ್ಯವೂ ಅದಕ್ಕಿದೆ.
ಅದಕ್ಕಾಗಿಯೇ ವೀರ ಸಾವರ್ಕರ್ ಅವರನ್ನು ಅವಮಾನಿಸುವ, ಅವರ ವಿರುದ್ಧ ತಪ್ಪುಕಲ್ಪನೆ ಮೂಡಿಸುವ ಕೆಲಸವನ್ನು ಅದು ಮಾಡುತ್ತಿದೆ. ಅನಿವಾರ್ಯಗಳು ಏನೇ ಇರಲಿ, ಒಂದು ವಿಷಯವನ್ನು ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಲೇಬೇಕು. ಕೇವಲ ಮಕ್ಕಳ ಪಠ್ಯದಿಂದ ಒಂದಷ್ಟು ವಿಷಯಗಳನ್ನು ‘ಕಿತ್ತು ಬಿಸಾಕುವುದ
ರಿಂದ’, ತಮಗಿಷ್ಟವಿಲ್ಲದ ಮಾಹಿತಿಗಳನ್ನು ಮುಚ್ಚಿಹಾಕಲು ಈಗಿನ ಕಾಲದಲ್ಲಿ ಸಾಧ್ಯವಿಲ್ಲ. ಮುಚ್ಚಿಹಾಕಲು ಯತ್ನಿಸಿದಷ್ಟೂ ಮತ್ತಷ್ಟು ನೈಜ ಇತಿಹಾಸಗಳು ಹೊರಬರುತ್ತಲೇ ಹೋಗುತ್ತವೆ! ಆ ಕಾರಣಕ್ಕಾಗಿಯೇ ಇಂದು ಮಹಾತ್ಮ ಗಾಂಧೀಜಿ ಅಥವಾ ನೆಹರು ಅವರಿಗಿಂತಲೂ ವೀರ ಸಾವರ್ಕರ್ ಅವರ ಹೆಸರೇ
ಯುವಜನತೆಯ ಮನಸ್ಸನ್ನು ಹೆಚ್ಚು ಆಕರ್ಷಿಸುತ್ತಿದೆ.
‘ರಿಮಾರ್ಕಬಲ್ ಸನ್ ಆಫ್ ಇಂಡಿಯ’, ಸ್ವಾತಂತ್ರ್ಯವೀರ ಸಾವರ್ಕರ್ ಅವರಿಗೆ ಜಯವಾಗಲಿ.