Sunday, 15th December 2024

ಬಡವರು ಕನ್ಡಡವನ್ನು ಉಳಿಸಿಯಾರು !

ದಾಸ್ ಕ್ಯಾಪಿಟಲ್‌

dascapital1205@gmail.com

೧೯೬೫ ರಲ್ಲಿ ಅನಂತಮೂರ್ತಿಯವರು ಇಂಗ್ಲಿಷ್ ಬ್ರಾಹ್ಮಣ, ಕನ್ನಡ ಶೂದ್ರ ಎಂಬ ದೀರ್ಘ ಲೇಖನದಲ್ಲಿ ‘ನಮ್ಮ ಮೂಳೆ ಇಲ್ಲದ ಕನ್ನಡ, ರಕ್ತವಿಲ್ಲದ ಇಂಗ್ಲಿಷನ್ನು ಕಂಡು ನಾಚಿಕೆಯಾಗುತ್ತದೆ’ ಎಂದಿದ್ದರು. ಸುಮಾರು ೫೩ ವರ್ಷಗಳ ಹಿಂದೆಯೇ ಸಾಮ್ರಾಜ್ಯಷಾಹೀ ಭಾಷೆಯೆದುರು ಕನ್ನಡದ ಉಳಿವಿನ ಅನಿವಾರ್ಯತೆ, ಅಗತ್ಯತೆ, ಆವಶ್ಯಕತೆಯ ಚಿಂತನೆಯನ್ನು ಮಾಡಿದ್ದ ಅವರು ಆಗ ಏನು ಹೇಳಿದ್ದರೋ ಅವೆಲ್ಲವೂ ಸರಿಹೊತ್ತಲ್ಲಿಯೂ ನಿಜವೆನಿ ಸುತ್ತಿದೆ.

ಕನ್ನಡ ಮಾತಾಡುತ್ತೇವೆ ಎಂಬುದೇ ಕೀಳಾಗಿ, ಅಥವಾ ಅದೇ ಒಂದು ದೊಡ್ಡ ಸಾಹಸವಾಗಿ, ಅಥವಾ ಅದೇ ಒಂದು ದೊಡ್ಡ ಹೆಮ್ಮೆಯಂತೆ ಕಾಣುವ ವರ ಜಗತ್ತಿನಲ್ಲಿ ಕನ್ನಡದ ನಿರ್ಜೀವ ಅಸ್ಮಿತೆಯಿದೆ. ಅನಂತಮೂರ್ತಿ ಹೇಳಿದ ಹಾಗೆ, ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದವ ರೆಂದರೆ ಈಗಲೂ ಹೆಬ್ಬೆಟ್ಟಿನ ಸಹಿ ಹಾಕುವ ನಮ್ಮ ಹಳ್ಳಿಗರು. ಹಳ್ಳಿಯಲ್ಲಿ ಬದುಕುವ ಬಡವರು ಕನ್ನಡವನ್ನು ಮಾತ್ರ ಉಳಿಸಿಯಾರು! ಇವರೇ ಕನ್ನಡದ ಕಸುವನ್ನು ಉಳಿಸಿಕೊಂಡು ಬಂದವರು! ಅಂಥವರು ಸಾಹಿತ್ಯಗಳಲ್ಲಿ ಕಾಣುತ್ತಾರೆ. ಭಾವನಾತ್ಮಕವಾಗಿ ಕನ್ನಡದೊಂದಿಗೆ ಬಾಂಧವ್ಯವನ್ನು ಹೊಂದಿ ದವರೂ ಇವರೇ. ಉಳ್ಳವರ ಕನಿಕರ ಮಾತ್ರವಲ್ಲ, ಧನವಂತರ, ವಿದ್ಯಾವಂತರ ಗೌರವಕ್ಕೂ ಇವರು ಸಲ್ಲುವವರು. ಇವರು ಯಕ್ಷಗಾನ, ಕೀರ್ತನೆ, ಜನಪದೀಯ ಕಲೆಗಳಿಗೆ ಜಾಗತೀಕರಣದ ಪ್ರಭಾವದಲ್ಲೂ ಯಾವ ಸೋಂಕು ತಟ್ಟಿಲ್ಲ. ಇದೇ ಕನ್ನಡದ ನಿಜವಾದ ಅಂತಃಶ್ಶಕ್ತಿ. ಇಂಗ್ಲಿಷ್ ಭಾಷೆಯ ಮೂಲಕ ಹಿಗ್ಗಿದ ನಮ್ಮ ವಿಚಾರಗಳನ್ನು ಜಾನಪದ ಜೀವನಕ್ಕೆ ನಾವು ಒಯ್ಯುತ್ತಿಲ್ಲ. ಅನ್ಯ ಭಾಷೆಗಳಿಂದ ನಾವು ಪಡೆದದ್ದನ್ನು ನಮ್ಮ ಜಾನಪದಕ್ಕೆ ಒಯ್ದದ್ದೇ ಆದರೆ ನಿತ್ಯಬದುಕಿನಲ್ಲಿ ಅದು ಅನುಭವವಾಗಿ ಹೊಸರೂಪ ತಾಳಿ ತಿರುಗಿ ನಮಗೆ ಸಿಗುವುದು ಸಾಧ್ಯವಾಗುತ್ತದೆಂದು ಅನಂತಮೂರ್ತಿ ಹೇಳುತ್ತಾರೆ.

ನಮ್ಮೊಳಗಿನ ನ್ಯೂನತೆಗಳನ್ನು ನಿವಾರಿಸುವ ಮಾಧ್ಯಮವಾಗಿ ದೇಶಭಾಷೆ ನಮ್ಮನ್ನು ಐಕ್ಯಗೊಳಿಸಿದೆ. ಯಾವಾಗ ಇಂಗ್ಲಿಷಿನ ಆಧಿಪತ್ಯಕ್ಕೆ
ಶರಣಾದೆವೋ ಅಂದೇ ನಮ್ಮ ಸೃಷ್ಟಿಶೀಲತೆಗೆ ಘಾತವಾಗುತ್ತಾ ಬಂತು. ತನ್ನೊಳಗೇ ಹುಟ್ಟುವ ಚಿಂತನೆಗಳು, ಭಾವಗಳು, ಆಲೋಚನೆಗಳು ಯಾವ ಬಾಹ್ಯಸ್ಪರ್ಶವಿಲ್ಲದೆ ಆಕಾಶಮುಖಿಯಾಗಿ ಚಿಗುರೊಡೆಯುತ್ತವೆ. ಚಿಗುರೊಡೆಯುತ್ತಲೇ ಇರುತ್ತದೆ. ಈ ಅಸಾಮಾನ್ಯಶಕ್ತಿ ವರ್ತಮಾನದಲ್ಲಿ ಶೂನ್ಯವನ್ನು ಕನ್ನಡದಲ್ಲಿ ಸೃಷ್ಟಿಸಿವೆ. ಅದಕ್ಕಾಗಿ ಕನ್ನಡದಲ್ಲಿ ಹಿಂದಿನ ತಲೆಮಾರಿನಂತೆ ಕಸುವುಳ್ಳ, ನೆಲದ ಗಾಢ ತಾದಾತ್ಮ್ಯದ ಚಿಂತನೆಗಳುಳ್ಳ ಕೃತಿಗಳು ಹುಟ್ಟುತ್ತಿಲ್ಲ. ಇಂಗ್ಲಿಷಿನ ಪ್ರಭಾವ ಎಷ್ಟೆಂದರೆ, ನಮ್ಮಲ್ಲಿ ಅಂತರ್ಗತವಾಗಿ ಮಾನವೀಯವಾಗಿ ಉಳಿಯುವಂತ ಜೀವನಮೌಲ್ಯಗಳು ಬರಿದಾಗಿ ಶುಷ್ಕವಾದ ಬುದ್ಧಿ ಮತ್ತು ಮನಸ್ಸನ್ನು ಹೊಂದುವಂತೆ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ.

ನಮ್ಮ ಹಿರಿಯರನ್ನು ನೆನಪಿಟ್ಟುಕೊಂಡು ಸ್ಮರಿಸುವ ನಮ್ಮ ಔದಾರ್ಯವೂ ಹೀನವಾಗಿ ಕೃಶವಾಗಿ ಕೃತಕವಾಗಿ ಸೃಷ್ಟಿಸಿಕೊಂಡ ಆಮದು ಸರಕಂತಾಗಿದೆ. ಇಂಗ್ಲಿಷನ್ನು ಸ್ವಲ್ಪವೂ ತಪ್ಪದೇ ಮಾತಾಡಬೇಕೆಂಬ ಅತೀ ಎಚ್ಚರವನ್ನು ಕನ್ನಡದಲ್ಲಿ ಮಾತಾಡುವಾಗ ನಾವು ಹೊಂದಿರಲಾರೆವು. ದೇಶಭಾಷೆಯ ಬಗೆಗಂತೂ ಈ ಎಚ್ಚರ ಬಹುದೂರದ ಮಾತು. ಈ ಶುಶ್ರೂಷೆಯಿಂದಾಗಿ ದೇಶಭಾಷೆಗಳು ವಾತಗ್ರಸ್ತವಾಗಿದೆ. ಬಹು ಪ್ರಯಾಸದ ನುಡಿಯಾಗಿ, ಕೇಳಲು ಯಾವ ಅಭೀಷ್ಟವೂ ಇಲ್ಲದ ಸ್ಥಿತಿಗೆ ಅವು ತಲುಪಿವೆ.

ಜನಪದೀಯ ಸ್ಪರ್ಶವಿಲ್ಲದೆ ಯಾವ ಭಾಷೆಯೂ ಸಿರಿಗೊಳ್ಳದೆ ಈ ಕಾಲಘಟ್ಟದಲ್ಲೂ ಕಾಡುವಾಸಿಯಾಗಿ ಬೌದ್ಧಿಕವಾದ ವಿಕಾಸಕ್ಕೆ ಒಳಗಾಗದೆ, ಜನಸಂಪರ್ಕದಿಂದಲೂ ಮರೆಯಾಗಿ, ತನ್ನೊಳಗೇ ತಾನು ಅನಾಥವಾಗಿ ಶೂದ್ರಾವಸ್ಥೆಗೆ ತಲುಪುತ್ತದೆ. ಮುಖ್ಯವಾಗಿ ಅನಂತಮೂರ್ತಿ ಹೇಳುವ ಮಾತುಗಳಲ್ಲಿ ಇಂಗ್ಲಿಷ್- ಬ್ರಾಹ್ಮಣ, ಕನ್ನಡ- ಶೂದ್ರವೆಂಬ ಎರಡು ಅಮಾನುಷ ಜಾತಿಗಳು ಹುಟ್ಟಿ ಯಂತ್ರನಾಗರಿಕತೆಯ ಒತ್ತಡದಲ್ಲಿ ನಮ್ಮ ಮಾನವತ್ವವನ್ನು ರಕ್ಷಿಸುವಂತಹ ಯಾವ ನಮ್ಮ ಗತಕಾಲದ ನೆನಪೂ ನಮಗೆ ಉಳಿಯದೆ ಮರೆಯಾಗುತ್ತಿದೆ.

ಇದಕ್ಕೆ ಪರಿಹಾರವೆಂದರೆ, ಇಂಗ್ಲಿಷನ್ನು ಕನ್ನಡದ ಜಗತ್ತಿನೊಳಗೆ ದಕ್ಕಿಸಿಕೊಳ್ಳುವುದು. ಯಾವುದೇ ಅಭಿವ್ಯಕ್ತಿಯಿದ್ದರೂ ಕನ್ನಡದ ಮೂಲಕವೇ ಸಾಧ್ಯವಾಗಿಸುವುದು. ಇಂಗ್ಲಿಷ್ ಜಗತ್ತಿನ ಜ್ಞಾನವಾಹಿನಿ, ಜ್ಞಾನದ ಬಾಗಿಲು ಎಂಬುದು ನಿಸ್ಸಂದೇಹ. ಆ ಜ್ಞಾನವನ್ನು ಪಡೆಯುವ ಸಲುವಾಗಿ ಇಂಗ್ಲಿಷ್ ಮಾಧ್ಯಮ ಬೇಕೇ ಬೇಕು. ಹಾಗೆ ಒದಗಿಬಂದ ಜ್ಞಾನವು ಕನ್ನಡದಲ್ಲಿ ಮರುಹುಟ್ಟು ಪಡೆಯಬೇಕು. ಆದರೆ, ಬಾಲ್ಯದ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿದರೆ ಚಿಂತನೆಯ ಸಾಮರ್ಥ್ಯ ಕುಸಿಯುತ್ತದೆ. ಇಂಗ್ಲಿಷಿಗಿರುವ ದೊಡ್ಡ ಶಕ್ತಿಯೆಂದರೆ, ಅದು ಯಾವ ಭಾಷೆಯನ್ನೂ ನಾಶ ಮಾಡಿಬಿಡುವ ಸಾಮರ್ಥ್ಯವನ್ನು ಹೊಂದಿದೆ.

ಇಂಗ್ಲಿಷನ್ನು ಕಲಿಯುವಾಗಲೂ, ಇಂಗ್ಲಿಷಿನಲ್ಲಿ ಕಲಿಯುವಾಗಲೂ ನಮ್ಮ ಭಾಷೆಯನ್ನು ಬೆಳಸುವ, ಅದಕ್ಕೆ ಎರವಾಗುವಂತೆ ನಮ್ಮ ಚಿಕಿತ್ಸಕ ದೃಷ್ಟಿಯನ್ನು, ಬುದ್ಧಿಯನ್ನು ವಿಸ್ತರಿಸಿಕೊಳ್ಳುತ್ತಾ, ಯಾವುದನ್ನೂ ಬಿಡದೆ ನಮ್ಮ ಭಾಷೆಯ ಉನ್ನತಿಗೆ, ಉತ್ಕರ್ಷಕ್ಕೆ ಬೇಕಾಗಿ ಆಲೋಚಿಸುತ್ತಾ ಶ್ರಮಿಸುತ್ತಿರಬೇಕು. ನಮ್ಮ ಅರಿವಿಗೆ ಅದು ದಕ್ಕುವಂತೆ ಬಗ್ಗಿಸಿಕೊಂಡು ಒಗ್ಗಿಸಿಕೊಳ್ಳಬೇಕು. ಕನ್ನಡ ದಲ್ಲಿ ಓದುವುದಕ್ಕೂ, ಕನ್ನಡವನ್ನು ಓದುವುದಕ್ಕೂ ಇರುವ ಅಂತರ ಇದೇ. ದೇಶಭಾಷೆಗಳ ಮನಸ್ಸಿಗೆ ಅನ್ಯಭಾಷೆಯಲ್ಲಿ ಪಡೆಯುವ ಜ್ಞಾನವನ್ನು ಅಂತರಂಗದ ಭಾಷೆಗೆ ಎರವಾಗಿಸಿಕೊಳ್ಳುವ ಸಾಮರ್ಥ್ಯವಿದೆ. ಇಂಗ್ಲಿಷಿನಲ್ಲಿ ಮಾತಾಡುವಾಗಲೂ ಮನಸ್ಸು ಮಾತೃಭಾಷೆಗೆ ತರ್ಜುಮೆ ಮಾಡುತ್ತಿರುತ್ತದೆ.

ಮಾತೃಭಾಷೆಯ ಅನನ್ಯತೆಯಿದು. ಇಂಗ್ಲಿಷಿಗೂ ಅದರದ್ದೇ ಆದ ಜನಪದೀಯ ಸ್ಪರ್ಶವಿರುವ ಗ್ರಾಂಥಿಕವಲ್ಲದ ಇಂಗ್ಲಿಷ್ ಇದ್ದೇ ಇದೆ. ಇಂಗ್ಲಿಷಿನಲ್ಲಿ ಬರೆದ ಕವನಗಳನ್ನು ಬಹಿರಂಗವಾಗಿ ಅಭಿವ್ಯಕ್ತಿಸಲು ಇಂಗ್ಲಿಷ್ ಕವಿಗಳೇ ಅಂಜುವ ಕಾಲವೊಂದಿತ್ತು. ಇಂದು ಇಂಗ್ಲಿಷಿನಲ್ಲಿ ಬರೆದರೆ ಮಾತ್ರ ವಿಶ್ವಮಾನ್ಯತೆ ಸಿಗುತ್ತದೆ. ಇಂಗ್ಲಿಷಿಗಿದ್ದ ಆ ಅಂಜುವ ಕಾಲ ಅಥವಾ ದುಃಸ್ಥಿತಿ ಈಗ ಕನ್ನಡದ್ದು. ಇದಕ್ಕೆ ಕಾರಣ, ಕನ್ನಡಿಗರಾಗಿ ಕನ್ನಡವನ್ನು ನಾವೇ ಕೀಳಾಗಿ ನೋಡಿ, ಇಂಗ್ಲಿಷಿನ ಹುಚ್ಚು ಹೆಚ್ಚಾಗಿ ಅದನ್ನೇ ನಿತ್ಯಜೀವನಕ್ಕೆ ಬಳಸಿದುದರ ಪರಿಣಾಮದಿಂದ.

ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದ ಓದಿದವರು ಅನಂತರದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಯಶಸ್ಸನ್ನು ಗಳಿಸಿದ್ದವರಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಕನ್ನಡಿಗ ವಿಜ್ಞಾನಿಗಳಿದ್ದಾರೆ. ಚಿಂತಕರಿದ್ದಾರೆ. ವಿದ್ವಾಂಸರಿದ್ದಾರೆ. ಪತ್ರಕರ್ತರಿದ್ದಾರೆ. ಇವರೆಲ್ಲ ಕನ್ನಡವನ್ನು ಓದಲು, ಬರೆಯಲು ಸ್ಪಷ್ಟವಾಗಿ ಬಲ್ಲವರು. ಒಂದು ಭಾಷೆಯಲ್ಲಿ ಪಡೆಯುವ ಪ್ರಭುತ್ತ್ವದಿಂದ ಮತ್ತೊಂದು ಭಾಷೆಯಲ್ಲಿ ನೈಪುಣ್ಯವನ್ನು ಗಳಿಸಬಹುದು. ಇಂಗ್ಲೆಂಡಿನ ಯಾವುದೇ ಒಬ್ಬ ರಾಜಕೀಯ ಶಾಸಜ್ಞನಾಗಲೀ, ತತ್ತ್ವಶಾಸಜ್ಞನಾಗಲೀ, ಬ್ಲೇಕ್, ಲಾರೆ, ವವರ್ತನಲ್ಲಿ ಅಭಿವ್ಯಕ್ತವಾದ ಜನಾಂಗದ ವಿಶೇಷ ಪ್ರeಯನ್ನು ಗಣನೆಗೆ ತೆಗೆದುಕೊಳ್ಳದೆ ಹೊಸ ವಿಚಾರವನ್ನು ಮಾಡಲಾರ! ನಾವು ನಮ್ಮ ತತ್ತ್ವ ಜ್ಞಾನಿಗಳ, ಸಂತರ, ಚಿಂತಕರ, ದಾರ್ಶನಿಕರ, ಆಧುನಿಕ ಕನ್ನಡ ಸಾಹಿತ್ಯದ ದರ್ಶನದ ಪ್ರಭಾವವಿಲ್ಲದೆ ಇಂಗ್ಲಿಷಿನ ಹೊಸತನ್ನು ಸೃಷ್ಟಿಸುವ ಸಾಹಸಕ್ಕೆ ಕೈಹಾಕುತ್ತೇವೆ.

ಇದರಿಂದಾಗಿ ಕನ್ನಡದಲ್ಲಿ ಯಾವೊಂದು ಸೃಷ್ಟಿಶೀಲ ಕೃತಿಯೊಂದನ್ನು ರಚಿಸಲು ಸಾಧ್ಯವಾಗದೇ ಹೋಗುತ್ತಿದೆಯೆಂದು ಅನಿಸುತ್ತಿದೆಯೆಂದು
ಅನಂತಮೂರ್ತಿ ಹೇಳುತ್ತಾರೆ. ತನ್ನ ಭಾಷೆಯ ಏನನ್ನೂ ಸೃಷ್ಟಿಸಲು ಸಾಧ್ಯವಾಗದೆ ಅನ್ಯಭಾಷೆಯಿಂದ ಎರವಲು ಪಡೆದ ಜ್ಞಾನದಿಂದ ಪ್ರತಿಭಾಶೀಲ ಕೃತಿಯೊಂದನ್ನು ಸೃಷ್ಟಿಸಲು ಸಾಧ್ಯವೆಂಬುದೇ ಕನ್ನಡದ ಮಟ್ಟಿಗೆ ದೊಡ್ಡ ಪ್ರಶ್ನೆಯಾಗಿದೆ. ಇದು ಕನ್ನಡದ ಸಮಸ್ಯೆ ಮಾತ್ರವಲ್ಲ, ಎಲ್ಲ ದೇಶಭಾಷೆಗಳ ಜ್ವಲಂತ ಸಮಸ್ಯೆ. ಈ ಹಿನ್ನೆಲೆ ಯಲ್ಲಿ ಎಲ್ಲ ದೇಶಭಾಷೆಗಳು ಬ್ರಾಹ್ಮಣತ್ವವನ್ನು ಪಡೆಯಬೇಕಾಗಿದೆ ಇಂಗ್ಲಿಷಿನ ಹಂಗಿನಿಂದ ಹೊರಬಂದು. ಅಭಿವೃದ್ಧಿ
ಹೊಂದಿದ ದೊಡ್ಡದೊಡ್ಡ ರಾಷ್ಟ್ರಗಳಲ್ಲಿ ಆರಂಭದ ಕಲಿಕೆ ದೇಶ ಭಾಷಾ ಮಾಧ್ಯಮದಲ್ಲಿದೆ. ತನ್ನ ಭಾಷೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಸಂಸ್ಕೃತಿಯನ್ನು ಜತನವಾಗಿಟ್ಟುಕೊಳ್ಳುವ ಜವಾಬ್ದಾರಿಯಿಂದ. ಇಂಗ್ಲಿಷನ್ನು ಹೊರತುಪಡಿಸಿದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಭ್ರಮೆ ನಮ್ಮ ಲ್ಲಿದೆ. ಇದು ಸತ್ಯವೂ ಹೌದು.

ಆಧುನಿಕ ಮತ್ತು ವಿಶ್ವಪಾರಂಪರಿಕ ಲೌಕಿಕ ಜ್ಞಾನವನ್ನು ಇಂಗ್ಲಿಷೂ ಸೇರಿ ಜಗತ್ತಿನ ಇತರ ಭಾಷೆಗಳಿಂದ ಪಡೆಯಬೇಕೆಂಬುದು ಸತ್ಯ. ಹಾಗೆ ಸಂಸ್ಕೃತ
ದಲ್ಲಿರುವ ಜ್ಞಾನನಿಧಿಯನ್ನು ಪಡೆಯಲು ವಿಶ್ವವೇ ಸಂಸ್ಕೃತದ ಮೊರೆಹೋಗಬೇಕಾದುದೂ ಅಷ್ಟೇ ಸತ್ಯ. ಆದ್ದರಿಂದ ನಮ್ಮೊಳಗಿನ ಸೃಜನಶೀಲತೆ ಯನ್ನು ಪ್ರತಿಭಾವಂತಗೊಳಿಸಲು ಕನ್ನಡವೂ ಸೇರಿದಂತೆ ಸಂಸ್ಕೃತವನ್ನೂ ನಾವು ಬೋಽಸಬೇಕು. ಕನ್ನಡ ಮಾತ್ರ ಬಲ್ಲವರು ಶೂದ್ರರೆಂಬ ಭಾವವೂ, ಇಂಗ್ಲಿಷ್ ಒಂದೇ ಅನ್ನಕೊಡುವ ಭಾಷೆಯೆಂಬ ಮೇಲರಿಮೆಯೂ ತೊಲಗಬೇಕು. ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ವಾಹಕವಾಗಿ ಕನ್ನಡ ನಮ್ಮ ಬದುಕನ್ನು ಜೀವಂತಗೊಳಿಸಿ ಅರ್ಥಪೂರ್ಣವಾಗಿಸುತ್ತದೆಂಬ ಅರಿವನ್ನು ಬೆಳೆಸಿ ಜಾಗೃತಗೊಳಿಸಬೇಕಿದೆ.

ಅಧ್ಯಾಪಕರಾಗಿ, ಎಲ್ಲಾ ಅಧ್ಯಾಪಕರಿಗೂ ಒಳತೋಟಿ ಯಲ್ಲಿ ಅನಿಸಿ ಅನ್ವಯಿಸಿ ಬರೆದ ಅನಂತಮೂರ್ತಿಯವರ ಈ ಮಾತು ಬಹುಮಹತ್ವದ್ದು ಎನಿಸಿ ಉಖಿಸುತ್ತಿದ್ದೇನೆ: ಮೂಲಗ್ರಂಥವನ್ನು ಓದುವಷ್ಟು ಇಂಗ್ಲಿಷ್ ಭಾಷೆಯ ವ್ಯಾಕರಣ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಕಲಿಸೋಣ. ಆದರೆ
ಅವರು ಇಂಗ್ಲಿಷ್ ಸಾಹಿತ್ಯವನ್ನು ಓದಿ ಪಡೆದ ಅನುಭವವನ್ನು ತಮ್ಮ ಭಾಷೆಯಲ್ಲಿಯೇ ವ್ಯಕ್ತಪಡಿಸಲು ಅವಕಾಶ ಕಲ್ಪಿಸೋಣ. ನಾವು ಈಗ ಪರೀಕ್ಷೆಯಲ್ಲಿ ಅವರ ಇಂಗ್ಲಿಷ್ ಭಾಷಾ ಜ್ಞಾನವನ್ನು ಪರೀಕ್ಷಿಸದೆ, ಅವರ ಸಾಹಿತ್ಯಾನುಭವವನ್ನೂ ತೂಗದೆ ನೂರರಲ್ಲಿ ಎಂಬತ್ತು ಜನರನ್ನು ಇಂಗ್ಲಿಷಿನಲ್ಲಿ ಫೇಲ್ ಮಾಡುತ್ತಿದ್ದೇವೆ.

ಇದರ ಪರಿಣಾಮ: ನಮ್ಮ ವಿದ್ಯಾರ್ಥಿಗಳು ಷೇಕ್ಸ್ಪಿಯರನ ಪರಮ ಶತ್ರುಗಳೋ ಅಥವಾ ಷೇಕ್ಸ್ಪಿಯರಿನ ಬಗ್ಗೆ ನೋಟ್ಸ ಬರೆದವನೊಬ್ಬನ ಮಿತ್ರರೊ ಅಥವಾ ಪಾಸಾಗಲಾರದ ತಾವು ಅಪ್ರಯೋಜಕರೆನ್ನುವ ಹತಮತಿಗಳು ಆಗುತ್ತಿದ್ದಾರೆ. ಅಂದರೆ, ಗ್ರಹಿಕೆಗೆ ಮೂಲಭಾಷೆ, ಅಭಿವ್ಯಕ್ತಿಗೆ ನಮ್ಮ ಭಾಷೆ ಎಂಬ ಸೂಕ್ತವಾದ ಮಾರ್ಗ ಇವರದ್ದು. ಕೊಡು ಕೊಳ್ಳುವಿಕೆಯು ಭಾಷಾಭಿವೃದ್ಧಿಯ ಯತ್ನದಲ್ಲಿ ತುಂಬಾ ಪ್ರಯೋ ಜನಕಾರಿ. ಬೆಳೆಯುತ್ತಿರುವ ಭಾಷೆಗೆ ಮೃದು ಹಿತವನ್ನು ಇದು ನೀಡುತ್ತದೆ. ಆಗ ಕನ್ನಡದ ಮುಂದೆ ಇಂಗ್ಲಿಷನ್ನು ಶೂದ್ರವಾಗಿ ದಕ್ಕಿಸಿಕೊಳ್ಳಬಹುದು.

ಕೊನೆಯ ಮಾತು: ಸಾಂಸ್ಕೃತಿಕವಾಗಿ ಏಕಭಾಷೆಗಳಾಗಿ, ಏಕಸಂಸ್ಕೃತಿ, ಏಕಮತಾವಲಂಬಿಗಳಾಗಿ ಕುಗ್ಗಿ, ಸೊರಗಿ, ಬತ್ತಿ ಹೋಗುವ, ನಿರ್ನಾಮ ವಾಗುವ ಹಂತವನ್ನು ಮುಟ್ಟಿಯೂ ತಾವು ರಾಷ್ಟ್ರಗಳೆಂದು ಮೆರೆಯುವ ಪಾಶ್ಚಾತ್ಯ ನಾಗರಿಕತೆಗೆ ನಮ್ಮ ಕನ್ನಡದ ಜನಪದದಲ್ಲಿ ನಿಜವಾದ ಪರ್ಯಾಯವಿದೆ. ಅದನ್ನು ಹುಡುಕಿ ನೀರು, ಗೊಬ್ಬರ ಹಾಕಿ ಹುಲುಸಾಗಿ ಬೆಳೆಸಬೇಕಷ್ಟೆ.