Tuesday, 10th September 2024

ಸೇವ್ ಡೆಮಾಕ್ರಸಿ ಎನ್ನುವ ವಿರೋಧ ಪಕ್ಷಗಳ ಹಿಪಾಕ್ರಸಿ

ಯುದ್ದಕಾಂಡ

ಡಾ.ಸಿ.ಜೆ.ರಾಘವೇಂದ್ರ ವೈಲಾಯ

ನಮ್ಮ ಪ್ರಜಾತಂತ್ರದ ಉಳಿವಿಗೆ ರಾಜಕಾರಣಿಗಳು ಕಾರಣರಲ್ಲ; ಅಸಲಿಗೆ ಅದನ್ನು ಉಳಿಸಿದ್ದು ನಮ್ಮ-ನಿಮ್ಮಂಥ ನಿಷ್ಠಾವಂತ ಮತ್ತು ಜಾಗೃತ ಪ್ರಜೆಗಳೇ. ಈಗ ವಿಪಕ್ಷಗಳ ಧೋರಣೆ ಹೇಗಿದೆಯೆಂದರೆ, ತಾವು ಗೆದ್ದರೆ ಅದು ಪ್ರಜಾಮತದ ನಿರ್ಣಯ; ಸೋತರೆ, ಅದಕ್ಕೆ ಇವಿಎಂಗಳನ್ನು ಹ್ಯಾಕ್ ಮಾಡಿದ್ದೇ ಕಾರಣ. ಇದೆಷ್ಟು ಹಾಸ್ಯಾಸ್ಪದ? ನಿರಕ್ಷರಕುಕ್ಷಿಗಳಿಗೂ ಇದರ ಮರ್ಮ ಅರ್ಥವಾಗದ್ದೇನಲ್ಲ.

ಪ್ರಜಾಪ್ರಭುತ್ವ, ಗಣತಂತ್ರ ಮತ್ತು ಸಂವಿಧಾನಗಳ ಪರಿಕಲ್ಪನೆಯನ್ನು ೨೦ನೇ ಶತಮಾನದ ‘ಪಾಶ್ಚಾತ್ಯ ಆವಿಷ್ಕಾರ’ ಎನ್ನುವಂತೆ
ಬಿಂಬಿಸಲಾಗುತ್ತಿದೆ. ಜಗತ್ತಿನಲ್ಲೇ ಅತ್ಯಂತ ಪ್ರಾಚೀನವಾದ, ಭಾರತ ಮೂಲದ ವೈದಿಕ ನಾಗರಿಕತೆಯ ಆದಿಮ ಸಾಹಿತ್ಯ ಎನಿಸಿ ಕೊಂಡ ವೇದಗಳಲ್ಲಿ, ಹಲವಾರು ಪುರಾಣಗಳಲ್ಲಿ, ಸಿಂಧೂ-ಸರಸ್ವತಿ ನಾಗರಿಕತೆಯ ಕಾಲದ ಅವಶೇಷಗಳಲ್ಲಿ ಮತ್ತು ತದ ನಂತರದ ಮಹಾಜನಪದ ಕಾಲದಲ್ಲಿ ಪ್ರಜಾತಂತ್ರ ಹಾಗೂ ಗಣತಂತ್ರಗಳ ಸ್ಪಷ್ಟ ಹೆಜ್ಜೆಗುರುತುಗಳನ್ನು ನಾವು ಕಾಣಬಹುದು.

ಭಾರತವು ‘ಕೃಣ್ವಂತೋ ವಿಶ್ವಮಾರ್ಯಂ’ ಎಂಬ ಧಿರೋದಾತ್ತ ಕರೆಯನ್ನು ಜಗತ್ತಿಗೆ ನೀಡಿದಾಗ, ಯುರೋಪಿನ ಜನರಿನ್ನೂ
ಅನಾಗರಿಕರಂತೆ ಕಾಡುಗಳಲ್ಲಿ ವಾಸಿಸುತ್ತಿದ್ದರು. ಸಂಘಜೀವನದ ಕುರಿತು ನಮ್ಮ ಪೂರ್ವಜರಿಗೆ ಸ್ಪಷ್ಟವಾದ ಕಲ್ಪನೆಯಿತ್ತು ಎಂಬುದು ‘ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಂ’, ‘ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹಚಿತ್ತಮೇಷಾಂ ಸಮಾನಂ ಮಂತ್ರಮಭಿಮಂತ್ರಯೇವ’ ಮುಂತಾದ ಸಾಲುಗಳಿಂದ ಖಾತ್ರಿಯಾಗುತ್ತದೆ.

ಪಾಶ್ಚಾತ್ಯರಿಗೆ ವಸಾಹತುಶಾಹಿ ಯುಗದ ಅಮಲು ಇನ್ನೂ ಇಳಿದಂತೆ ತೋರುತ್ತಿಲ್ಲ. ಜಗತ್ತಿನ ಎಲ್ಲಾ ಮಾನವ ಹಕ್ಕುಗಳ, ಪ್ರಜಾತಂತ್ರದ ಸ್ವಘೋಷಿತ ದಂಡನಾಯಕರಂತೆ ವರ್ತಿಸುತ್ತಿರುವ ಐರೋಪ್ಯ ಒಕ್ಕೂಟದ ಕೆಲವು ರಾಷ್ಟ್ರಗಳು, ಕೆನಡಾ ಮತ್ತು ಅಮೆರಿಕಗಳು ಭಾರತದ ಆಂತರಿಕ ರಾಜಕಾರಣದಲ್ಲಿ ಆಗಾಗ ಮೂಗುತೂರಿಸುವ ಚಾಳಿಯನ್ನು ಬೆಳೆಸಿಕೊಂಡಿವೆ.

‘ಯುರೋಸೆಂಟ್ರಿಕ್’  ಸಂಕುಚಿತ ದೃಷ್ಟಿಕೋನದಿಂದ ಇನ್ನೂ ಹೊರಬಾರದಿರುವ ಈ ಹಳೆಯ ದೊಡ್ಡಣ್ಣಗಳಿಗೆ, ಭಾರತದ ವಿದೇಶಾಂಗ ಮಂತ್ರಿಗಳು ನೀಡಿರುವ ಚಾಟಿಯೇಟಿನಂಥ ಬಿರುನುಡಿಗಳು ಬಹಳ ದಿನ ನೆನಪಿನಲ್ಲುಳಿಯಲಿವೆ. ಭಾರತದ ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಯ ಕುರಿತು ಇನ್ನೊಮ್ಮೆ ಟೀಕಿಸುವ ಮುನ್ನ ಇವರೆಲ್ಲಾ ಹತ್ತಾರು ಬಾರಿ ಯೋಚಿಸಬೇಕು. ಭಾರತವೀಗ ‘ಜೀ ಹುಜೂರ್’ ದೇಶವಾಗಿ ಉಳಿದಿಲ್ಲ. ನಾವೀಗ ಜಗತ್ತಿನ ೫ನೇ ಬಲಿಷ್ಠ ಆರ್ಥಿಕ ಶಕ್ತಿ, ಅತಿದೊಡ್ಡ ಯಶಸ್ವಿ ಪ್ರಜಾಪ್ರಭುತ್ವ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ ಮತ್ತು ವಿಶ್ವದ ಅತಿದೊಡ್ಡ ಮಾರುಕಟ್ಟೆ.

ಎಲ್ಲರಿಗೂ ಈಗ ಭಾರತದ ಸಹಕಾರವನ್ನು ನಿರೀಕ್ಷಿಸುವ ಅನಿವಾರ್ಯತೆಯಿದೆ. ಶತಮಾನಗಳ ಕಾಲ ನಮ್ಮನ್ನು ದೋಚಿದ
ಆಂಗ್ಲರನ್ನು ನಾವು ಈಗಾಗಲೇ ಹಿಂದಿಕ್ಕಿದ್ದೇವೆ. ಸಮರ್ಥ ನಾಯಕತ್ವ ಮತ್ತು ದೂರದರ್ಶಿ ನೀತಿಗಳು ಇದ್ದಲ್ಲಿ ಈ ಶತಮಾನವು ನಿಸ್ಸಂದೇಹವಾಗಿ ನಮ್ಮದೇ ಯುಗ. ಅಷ್ಟಕ್ಕೂ ವಿಷಯವೇನೆಂದರೆ, ಬೃಹತ್ ಭ್ರಷ್ಟಾಚಾರದ ಆರೋಪದ ಮೇಲೆ (ದೆಹಲಿಯ ಮದ್ಯ ಹಗರಣ ಇತ್ಯಾದಿ), ಭಾರತದಲ್ಲಿ ಸಾಂವಿಧಾನಿಕವಾಗಿ ರೂಪುಗೊಂಡ ನ್ಯಾಯಾಂಗ ವ್ಯವಸ್ಥೆಯ ನೇರ ಮೇಲ್ವಿಚಾರಣೆ ಯಲ್ಲಿ ಕಾನೂನಾತ್ಮಕ ಸಂಸ್ಥೆಗಳ ವಿಚಾರಣೆಗೆ ಎದುರಾಗಿರುವ ಅಸಹಕಾರ ಮತ್ತು ಈ ಗಂಭೀರ ಆರೋಪವು ಸಾಕ್ಷ್ಯಾಧಾರ ಗಳಿಂದ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೆಲವರು ಬಂಧನಕ್ಕೊಳಗಾಗಿರುವ ಕುರಿತು ಹಲವು ದೇಶಗಳು ಅನಪೇಕ್ಷಿತವಾಗಿ ಅಪಸ್ವರ ಎತ್ತಿವೆ.

ಇಂಥ ದೇಶಗಳು ತಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವುದು ಒಳಿತು. ‘ಓದುವುದು ಶಾಸ, ಇಕ್ಕುವುದು ಗಾಳ’ ಎಂಬಂತೆ ವರ್ತಿಸುತ್ತಿರುವ ಈ ದೇಶಗಳು ತಮ್ಮ ನೆಲದಲ್ಲೇ ದಿನನಿತ್ಯ ನಡೆಯುತ್ತಿರುವ ವರ್ಣತಾರತಮ್ಯ, ಜನಾಂಗೀಯ
ವೈಷಮ್ಯ ಮತ್ತು ಮಾನವ ಹಕ್ಕುಗಳ ಹೀನಾಯ ಉಲ್ಲಂಘನೆಗಳ ಬಗ್ಗೆ ಜಾಣಮೌನವನ್ನು ತಳೆದಿವೆ. Iಜ್ಞಿb qsಟ್ಠ್ಟ ಟಡ್ಞಿ ಚ್ಠಿoಜ್ಞಿಛಿoo ಎಂದು ಎಸ್.ಜೈಶಂಕರ್ ಅವರು ತರಾಟೆಗೆ ತೆಗೆದುಕೊಂಡ ಮೇಲೂ ಅವು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಆದರೆ ಈಗಿನ ಞ್ಠ್ಝಠಿಜಿmಟ್ಝZ ಪ್ರಪಂಚದಲ್ಲಿ ಭಾರತವು ಯಾವ ದೊಣೆನಾಯಕನ ಬಿಟ್ಟಿ ಉಪದೇಶವನ್ನೂ ಸುಮ್ಮನೆ ಕೇಳುವ ಸ್ಥಿತಿಯಲ್ಲಿಲ್ಲ.

ನಾವು ಕಳೆದೊಂದು ದಶಕದಿಂದ ಸಮರ್ಥ ನಾಯಕತ್ವದ ಛತ್ರಛಾಯೆಯಡಿ ಸರ್ವಾಂಗೀರ್ಣವಾಗಿ ಆತ್ಮನಿರ್ಭರತೆಯತ್ತ ದಾಪುಗಾಲು ಹಾಕುತ್ತಿದ್ದೇವೆ. ನೆಹರು ಯುಗದಲ್ಲಿದ್ದಂತೆ ಅಮೆರಿಕದಿಂದ ಕಳಪೆ ಗೋಧಿಗಾಗಿ, ಮೂರನೇ ದರ್ಜೆಯ ಸೂಪರ್ ಕಂಪ್ಯೂಟರ್‌ಗಾಗಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ನಾವಿಲ್ಲ. ೨೧ನೇ ಶತಮಾನದ ಹೊಸ ‘ಸೂಪರ್ ಪವರ್’ ಆಗುವತ್ತ ನಾವೀಗ
ಮುನ್ನುಗ್ಗುತ್ತಿದ್ದೇವೆ. ‘ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಎಂಬ ಹೊಸ ವಿದೇಶಾಂಗ ನೀತಿಯು, ನಮ್ಮ ಸಮರ್ಥ ನಾಯಕತ್ವದ ದೂರದರ್ಶಿತ್ವಕ್ಕೆ ಕನ್ನಡಿ ಹಿಡಿದಂತಿದೆ.

ಕತಾರ್‌ನಲ್ಲಿ ಗಲ್ಲುಶಿಕ್ಷೆಗೊಳಗಾಗಿದ್ದ ಮಾಜಿ ಸೈನಿಕರನ್ನು ಕೂದಲು ಕೊಂಕದಂತೆ ಕರೆತಂದ ಭಾರತಕ್ಕೆ ಈಗ ಅಸಾಧ್ಯ ಎಂಬ ಮಾತೇ ಇಲ್ಲ. ಅಪನಂಬಿಕೆ, ಮೋಸ, ದುರಾಸೆ ಮತ್ತು ಸ್ವಾರ್ಥಗಳೇ ತುಂಬಿರುವ ಪ್ರಸಕ್ತ ಕಾಲಘಟ್ಟದಲ್ಲಿ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ನಾಯಕತ್ವಕ್ಕಾಗಿ ಜಗತ್ತೇ ಈಗ ಭಾರತದತ್ತ ನೋಡುತ್ತಿದೆ. ಭಾರತದಲ್ಲಿ ಹೇಳಿಕೇಳಿ ಈಗ ಚುನಾವಣೆಯ
ಸಮಯ. ಪ್ರಧಾನಿ ಮೋದಿಯವರ ಜನಪ್ರಿಯತೆ ಯಂತೂ ಈಗ ಸಾರ್ವಕಾಲಿಕ ಉತ್ತುಂಗದಲ್ಲಿದೆ.

ಬಿಜೆಪಿಯು ಎಂದೂ ಗೆಲ್ಲಲಾಗದಿದ್ದ ದಕ್ಷಿಣದ ಕೆಲ ರಾಜ್ಯಗಳಲ್ಲಿ ಈ ಬಾರಿ ಉತ್ತಮ ಪ್ರದರ್ಶನ ಹೊಮ್ಮುವ ನಿರೀಕ್ಷೆಯಿದೆ. ಭಾರತೀಯರನ್ನು ವ್ಯವಸ್ಥಿತವಾಗಿ ಒಡೆದು ಆಳುವ ನೀತಿಗೆ ಪೂರಕವಾಗಿ ಮ್ಯಾಕ್ಸ್ ಮುಲ್ಲರ್ ಮಹಾಶಯನು ಕುತ್ಸಿತ ಬುದ್ಧಿ ಯಿಂದ ಹರಿಬಿಟ್ಟ ‘ಆರ್ಯ-ದ್ರಾವಿಡ ಸಿದ್ಧಾಂತ’ವು ಆಧುನಿಕ ವಿಜ್ಞಾನದ ಪರೀಕ್ಷೆಯಲ್ಲಿ ಸೋತುಹೋಗಿ, ಅದು ಸುಳ್ಳೆಂದು ಈಗ ಸಮಸ್ತ ಜಗತ್ತೇ ಒಪ್ಪಿಕೊಂಡಿದೆ. ಆದರೆ ತಂತಮ್ಮ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಅಪ್ಪ ಪೆರಿಯಾರ್ ನೆಟ್ಟ ಹಳೆಯ ಆಲದಮರಕ್ಕೆ ಇನ್ನೂ ಜೋತುಬಿದ್ದಿರುವ ದ್ರಾವಿಡ ಪಕ್ಷಗಳ ಬುಡವೇ ಈಗ ಅಲ್ಲಾಡುತ್ತಿದ್ದು, ಸೋಲಿನ ಭೀತಿ ಅವನ್ನು ಕಾಡತೊಡಗಿದೆ.

ಹಿಂದಿ ದ್ವೇಷ, ಹಿಂದೂ ದ್ವೇಷ, ಉತ್ತರ ಭಾರತದ ಕುರಿತು ಉಪೇಕ್ಷೆ, ದೇಶದ ಒಕ್ಕೂಟ ವ್ಯವಸ್ಥೆಯ ವಿರುದ್ಧ ಒಡಕಿನ ಧ್ವನಿ,
ಸದಾ ಆಂತರಿಕ ತಿಕ್ಕಾಟಗಳಲ್ಲೇ ಮೈಮರೆವು ಹೀಗೆ ಹಲವು ರಾಜಕೀಯ ಅಪಸವ್ಯಗಳಿಂದ ನಾಲ್ಕಾರು ಶತಮಾನಗಳ ಕಾಲ ದ್ರಾವಿಡ ರಾಜಕಾರಣಿಗಳ ಮೋಸದಾಟಕ್ಕೆ ಮರುಳಾಗಿ, ಸ್ವಾರ್ಥ, ಭ್ರಷ್ಟಾಚಾರಗಳಿಂದ ನೊಂದ ಯುವಜನತೆಗೆ ತಾವು ಅಭಿವೃದ್ಧಿಯ ಅಮೃತಫಲದಿಂದ ವಂಚಿತರಾಗಿರುವುದು ಇತ್ತೀಚೆಗೆ ಅರಿವಾಗಿದೆ. ರಾಷ್ಟ್ರೀ ಯತೆಯ ಈ ಮಹಾಸುನಾಮಿಗೆ ಅಣ್ಣಾಮಲೈಯಂಥ ಸಮರ್ಪಿತ ನಾಯಕತ್ವದ ನೆಪ ಮಾತ್ರ ಬೇಕಿತ್ತು.

ಇದರಿಂದ ದಿಕ್ಕು ತೋಚದಂತಾದ ‘ಇಂಡಿಯ’ ಒಕ್ಕೂಟದ ಭಾಗವಾದ ದ್ರಾವಿಡ ಪಕ್ಷದ ನಾಯಕರು ದಿನಕ್ಕೊಬ್ಬರಂತೆ ಮೋದಿ ಯವರ ನಿಂದನೆ, ದೇಶವಿಭಜನೆಯ ಮಾತುಗಳು, ಹಿಂದೂ-ವಿರೋಧಿ ಹೇಳಿಕೆಗಳನ್ನು ನೀಡತೊಡಗಿದ್ದನ್ನು ಗಮನಿಸಿದಾಗ ಅಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗುತ್ತದೆ. ಇನ್ನು, ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿ ಕೊಂಡ’ ಎಂಬಂತೆ ವರ್ತಿಸುತ್ತಿರುವ ವಿಪಕ್ಷ ನಾಯಕರನ್ನು ಕಂಡಾಗ ನಗುವುದೋ ಅಳುವುದೋ ಎಂದು ತಿಳಿಯುತ್ತಿಲ್ಲ. ಇದುವರೆಗೂ ಹೋದಲ್ಲಿ ಬಂದಲ್ಲಿ ‘ಧೈರ್ಯವಿದ್ದರೆ ನಮ್ಮನ್ನು ಬಂಧಿಸಿ’ ಎಂದು ಗುಟುರು ಹಾಕುತ್ತಿದ್ದವರು, ಈಗ ಭ್ರಷ್ಟಾಚಾರ ಮಾಡಿ ಬಂಧನಕ್ಕೊಳಗಾಗಿ ನ್ಯಾಯಾಲಯದಿಂದ ಪದೇಪದೆ ಜಾಮೀನು ನಿರಾಕರಣೆ ಆಗುತ್ತಿದ್ದರೂ, ತಾವು ಏನೂ ತಪ್ಪೇ ಮಾಡದ ಸುಭಗರಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದ.

ಸಿಬಿಐ, ಜಾರಿ ನಿರ್ದೇಶನಾಲಯ ಮೊದಲಾದ ಯಾವ ಸ್ವತಂತ್ರ, ಸಾಂವಿಧಾನಿಕ ತನಿಖಾ ಸಂಸ್ಥೆಗಳ ಮೇಲೂ ಇವರಿಗೆ ವಿಶ್ವಾಸ ವಿಲ್ಲ. ಒಂದು ವೇಳೆ, ಇವರ ಮೇಲಣ ಆರೋಪದಲ್ಲಿ ಹುರುಳೇ ಇಲ್ಲವಾಗಿದ್ದರೆ, ಇವರೆಲ್ಲಾ ಎಂದೋ ಜಾಮೀನು ಪಡೆದು ಹೊರ ಬರುತ್ತಿದ್ದರು. ‘ತಾನು ಕಳ್ಳ, ಪರರನ್ನು ನಂಬ’ ಎಂಬಂತಿದೆ ಇವರ ವರಸೆ. ತನ್ನ ಆಡಳಿತದ ೧೦ ವರ್ಷಗಳು ಸಂದರೂ ಒಂದೇ ಒಂದು ಮೇಲ್ಮಟ್ಟದ ಭ್ರಷ್ಟಾಚಾರದ ಗಂಭೀರ ಆರೋಪವನ್ನೂ ಮೈಗಂಟಿಸಿಕೊಳ್ಳದೆ, ಅಭಿವೃದ್ಧಿ, ಪರಿವರ್ತನೆ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪ್ರಣಾಳಿಕೆಯ ಭರವಸೆಗಳ ಈಡೇರಿಕೆಯಂಥ ಸಕಾರಾತ್ಮಕ ಅಂಶಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿರುವ ಆಡಳಿತ ಪಕ್ಷದ ಹೊಸರೀತಿಯ ರಾಜಕಾರಣಕ್ಕೆ ವಿಪಕ್ಷಗಳಿನ್ನೂ ಹೊಂದಿಕೊಂಡಂತಿಲ್ಲ.

ಜಾತ್ಯಾಧಾರಿತ, ಮತಾಧಾರಿತ, ವಂಶಾಧಾರಿತ ಮತ್ತು ಸಾಂಪ್ರದಾಯಿಕ ರಾಜಕಾರಣದ ಹ್ಯಾಂಗೋವರ್‌ನಿಂದ ದೇಶದ ವಿಪಕ್ಷಗಳು ಹೊರಬಂದಂತಿಲ್ಲ. ಭ್ರಷ್ಟಾಚಾರದ ಆರೋಪಿಗಳ ರಕ್ಷಣೆಯನ್ನೇ ಮುಖ್ಯ ಅಜೆಂಡಾ ಆಗಿಸಿಕೊಂಡಿರುವ ಮೋದಿ-ವಿರೋಧಿ  ಇಂಡಿಯ’ ಒಕ್ಕೂಟವು ಯುವಜನತೆಗೆ ಭ್ರಷ್ಟಾಚಾರಿಗಳ ಕೂಟವಾಗಿ ಕಂಡುಬಂದಂತಿದೆ. ಓಲೈಕೆಯ ರಾಜಕಾರಣ, ರಾಮನ ವಿರೋಧ, ಹಿಂದೂ ದ್ವೇಷ, ಕೆಳಮಟ್ಟದ ಮೋದಿ-ವಿರೋಧಿ ಹೇಳಿಕೆಗಳು, ದೇಶ ವಿಭಜನೆಯ ಒಡಕು ಮಾತುಗಳನ್ನು ಭಾರತದ ಪ್ರಬುದ್ಧ ಮತದಾರ ಎಂದೂ ಕ್ಷಮಿಸಲಾರ.

ಋಣಾತ್ಮಕ ಮಾತುಗಳ ಹೊರತು ಮತ್ತಾವ ಪರ್ಯಾಯ ನಿರೂಪಣೆಯನ್ನೂ ಜನರಿಗೆ ನೀಡುವಲ್ಲಿ ಇವರು ವಿಫಲರಾಗಿದ್ದಾರೆ. ಮೋದಿ-ವಿರೋಧದಿಂದ ಮೊದಲ್ಗೊಂಡ ಇವರ ಅಭಿಯಾನವೀಗ ದೇಶ-ವಿರೋಧಿಯಾಗಿ ಬದಲಾಗಿದೆ. ಕೇವಲ ಸ್ವಾರ್ಥ ತುಂಬಿರುವ ಈ ಒಕ್ಕೂಟಕ್ಕೆ ಆಯುಷ್ಯ ಹೆಚ್ಚು ಇರಲಾರದು. ಜನರ ವಿಶ್ವಾಸವಂತೂ ದೂರದ ಮಾತು. ಮಾಡಿದ ತಪ್ಪನ್ನೇ ಪುನರಾವರ್ತಿಸುವ ಜಿದ್ದಿಗೆ ಬಿದ್ದ ಇವರನ್ನು ಕಂಡರೆ ‘ಅಯ್ಯೋ ಪಾಪ’ ಎನಿಸುತ್ತದೆ. ಇವರು ಜನರ ನಾಡಿಮಿಡಿತವನ್ನು ಅರಿಯಲು ಪದೇಪದೆ ವಿಫಲರಾಗಿ ಈಗ ಅಳಿವಿನಂಚಿಗೆ ಬಂದು ನಿಂತಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದೆ ತಿದ್ದಿಕೊಳ್ಳದೆ ಹೋದಲ್ಲಿ ಇವರು ಎಂದೂ ಗೆಲ್ಲಲಾರರು.

ಒಟ್ಟಿನಲ್ಲಿ ಇವರ ಸ್ವಾರ್ಥ ಮತ್ತು ಅಸಮರ್ಥತೆಗಳಿಂದಾಗಿ ದೇಶವು ಒಂದು ರಚನಾತ್ಮಕ ವಿಪಕ್ಷದ ಸೇವೆಯಿಂದ ನಿರಂತರವಾಗಿ
ವಂಚಿತವಾಗುತ್ತಿದೆ. ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ ತಮ್ಮ ಭ್ರಷ್ಟ ವ್ಯವಹಾರಗಳು ಈಗ ತಮಗೇ ಉರುಳಾಗುತ್ತಿರುವು ದನ್ನು ಕಂಡು ದಿಕ್ಕೆಟ್ಟ ವಿಪಕ್ಷದವರು ಈಗ ವಿದೇಶಗಳತ್ತ (ಪಾಕಿಸ್ತಾನ, ಐರೋಪ್ಯ ಒಕ್ಕೂಟ, ಮಧ್ಯಪ್ರಾಚ್ಯ, ಚೀನಾ, ಅಮೆರಿಕ ಇತ್ಯಾದಿ) ನೆರವಿಗಾಗಿ ಅಂಗಲಾಚುತ್ತಿದ್ದಾರೆ.

ಮಣಿಶಂಕರ್ ಅಯ್ಯರ್ ಹಿಂದೊಮ್ಮೆ ಪಾಕಿಸ್ತಾನದ ನೆರವಿಗಾಗಿ ಬಹಿರಂಗ ಕರೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಹಿಂದು ಗಡೆಯಿಂದ ಬಾಣಬಿಟ್ಟು ಅಭಿಮನ್ಯುವನ್ನು ಸೋಲಿಸಿದಂತೆ, ಮೋದಿಯವರನ್ನು ನೇರವಾಗಿ ಎದುರಿಸಿ ಗೆಲ್ಲಲಾಗದ ವಿಪಕ್ಷ ದವರು ಬಾಹ್ಯಶಕ್ತಿಗಳ ನೆರವಿನಿಂದ ಚುನಾವಣೆ ಗೆಲ್ಲಲು ಹವಣಿಸುತ್ತಿದ್ದಾರೆ. ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ಚುನಾವಣೆ ಸಂದರ್ಭದಲ್ಲಿ ಜನರನ್ನು ದಾರಿತಪ್ಪಿಸಲು ದೇಶವಿರೋಧಿ ಶಕ್ತಿಗಳು ಏನು ಬೇಕಾದರೂ ಕುತಂತ್ರ ಮಾಡಬಹುದು.

ಗಡಿಯಲ್ಲಿ ಸಂಘರ್ಷ, ಆಂತರಿಕ ಕೋಮುಗಲಭೆ, ದಂಗೆ, ಭಯೋತ್ಪಾದಕ ಚಟುವಟಿಕೆಗಳು, ಮಾದಕ ದ್ರವ್ಯಗಳ ಕಳ್ಳಸಾಗಣೆ ಹೀಗೆ ಹಲವು ರೀತಿಯ ದೇಶವಿರೋಧಿ ಗತಿವಿಧಿಗಳ ಸಂಭಾವ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸೋರೋಸ್ ರೀತಿಯ ಪ್ರಜಾತಂತ್ರ-ವಿರೋಧಿ ವಿದೇಶಿ ಶಕ್ತಿಗಳು, ಎನ್‌ಜಿಒಗಳ ಹೆಸರಿನಲ್ಲಿ ದೇಶದೊಳಗೆ ಅರಾಜಕತೆಯನ್ನು ಹುಟ್ಟುಹಾಕುವ ಪ್ರಯತ್ನವನ್ನಂತೂ
ಆಗಾಗ್ಗೆ ಮಾಡುತ್ತಿವೆ; ರೈತ ಚಳವಳಿ, ಸಿಎಎ ವಿರೋಧಿ ಹೋರಾಟ ಕೆಲವು ಉದಾಹರಣೆಗಳಷ್ಟೇ. ಇವರೆಲ್ಲರ ಗುರಿ ಮೋದಿ ಯವರಲ್ಲ, ನಾವು ಮತ್ತು ನೀವು.

ಅವರ ಕಣ್ಣು ನಮ್ಮ ಮುಂದಿನ ಪೀಳಿಗೆಯ ಭವ್ಯಭವಿಷ್ಯದ ಮೇಲಿದೆ. ೨೦೨೪ರ ಅಮೃತಕಾಲದ ಈ ಚುನಾವಣೆ, ಭಾರತದ ಮುಂಬರುವ ೧೦೦ ವರ್ಷಗಳ ದಿಕ್ಕನ್ನು ನಿರ್ದೇಶಿಸಬಲ್ಲ ಚುನಾವಣೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟಬುತ್ತಿ. ಯಾವುದೇ ಸಂಕುಚಿತ ವಿಚಾರಗಳು, ಸ್ವಾರ್ಥದ ಲಾಲಸೆಗಳು ನಮ್ಮ ಆದ್ಯತೆಯಾಗಬಾರದು. ನಮಗೀಗ ದೂರದೃಷ್ಟಿಯ ಸಮರ್ಥ ನಾಯಕತ್ವದ ಅಗತ್ಯವಿದೆ. ಜನರೂ ಮೈಯೆಲ್ಲಾ ಕಣ್ಣಾಗಿರಬೇಕಾಗಿದೆ. ವಿಶ್ವಾಸ ಎನ್ನುವುದು ಎರಡು ಅಲಗಿನ ಕತ್ತಿಯಿದ್ದಂತೆ.
‘ಕೇಳಿದ್ದೂ ಸುಳ್ಳಾಗಬಹುದು, ನೋಡಿದ್ದೂ ಸುಳ್ಳಾಗಬಹುದು…’ ಎಂಬುದನ್ನು ನಾವು ಮರೆಯದಿರೋಣ.

ನಮ್ಮ ಪ್ರಜಾತಂತ್ರದ ಉಳಿವಿಗೆ ರಾಜಕಾರಣಿಗಳು ಕಾರಣರಲ್ಲ; ಅಸಲಿಗೆ ಅದನ್ನು ಉಳಿಸಿದ್ದು ನಮ್ಮ-ನಿಮ್ಮಂಥ ನಿಷ್ಠಾವಂತ ಮತ್ತು ಜಾಗೃತ ಪ್ರಜೆಗಳೇ. ಈಗ ವಿಪಕ್ಷಗಳ ಧೋರಣೆ ಹೇಗಿದೆಯೆಂದರೆ, ತಾವು ಗೆದ್ದರೆ ಅದು ಪ್ರಜಾಮತದ ನಿರ್ಣಯ; ಒಂದು ವೇಳೆ ಸೋತರೆ, ಅದಕ್ಕೆ ಇವಿಎಂಗಳನ್ನು ಹ್ಯಾಕ್ ಮಾಡಿದ್ದೇ ಕಾರಣ. ಇದೆಷ್ಟು ಹಾಸ್ಯಾಸ್ಪದ? ನಿರಕ್ಷರಕುಕ್ಷಿಗಳಿಗೂ ಇದರ ಮರ್ಮ ಅರ್ಥವಾಗದ್ದೇನಲ್ಲ. ತಮ್ಮ ವಂಶವಾದಿ ಮತ್ತು ಭ್ರಷ್ಟ ರಾಜಕೀಯದ ನಿರಂತರತೆಯೇ ಪ್ರಜಾಪ್ರಭುತ್ವದ ಉಳಿವಿನ ಏಕೈಕ ಮಾನದಂಡ ಎಂಬಂತಿದೆ ವಿಪಕ್ಷಗಳ ಧೋರಣೆ. ಭ್ರಷ್ಟಾಚಾರಿಗಳಿಗೆ ಕಾನೂನಿನ ಸಮಸ್ಯೆಯಾದಾಗ, ಅದನ್ನು ಪ್ರಜಾ ಪ್ರಭುತ್ವಕ್ಕಾದ ಅಪಾಯ ಮತ್ತು ದ್ವೇಷದ ರಾಜಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ.

ಒಂದೊಮ್ಮೆ ಭ್ರಷ್ಟಾಚಾರಿಗಳ ಬಂಧನವಾದರೆ, ‘ದೇಶ ಉಳಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಪೊಳ್ಳು ಘೋಷಣೆಗಳು ಕೇಳಿ ಬರುತ್ತವೆ. ಸಂವಿಧಾನ ಮತ್ತು ಪ್ರಜಾತಂತ್ರ ಅಪಾಯದಲ್ಲಿವೆ, ವಿಪಕ್ಷಗಳ ದನಿಯನ್ನು ಹತ್ತಿಕ್ಕಲಾಗುತ್ತಿದೆ ಎಂಬಿತ್ಯಾದಿ ಹೇಳಿಕೆ ಗಳನ್ನು ಸಾರ್ವಜನಿಕ ವಲಯದಲ್ಲಿ ಹರಿಬಿಡಲಾಗುತ್ತಿದೆ. ಇದನ್ನೇ ದೇಶಿ ಮತ್ತು ಬಿಬಿಸಿ ಮೊದಲಾದ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ‘ಪೇಯ್ಡ್ ನ್ಯೂಸ್’ ಮುಖಾಂತರ ಹರಿಬಿಟ್ಟು, ಭಾರತದ ಕುರಿತು ಜಾಗತಿಕ ಮಟ್ಟದಲ್ಲಿ ಅಪನಂಬಿಕೆ ಹುಟ್ಟಿಸುವ
ಯತ್ನಗಳಾಗುತ್ತಿವೆ.

ಭ್ರಷ್ಟಾಚಾರದ ನಿರ್ಮೂಲನೆಯ ಮೂಲಧ್ಯೇಯದೊಂದಿಗೆ ಸ್ಥಾಪಿತವಾದ ಪಕ್ಷವೊಂದರ ನಾಯಕರಿಂದು ಸಾಲುಸಾಲಾಗಿ ಜೈಲುಪಾಲಾಗುತ್ತಿರುವುದು ವಿಪರ್ಯಾಸವೇ ಸರಿ. ಒಂದೊಮ್ಮೆ, ಕೇವಲ ಭ್ರಷ್ಟಾಚಾರದ ಆರೋಪ ಬಂದರೆ ಸಾಕು ರಾಜೀನಾಮೆ ನೀಡಬೇಕೆಂಬ ಧೋರಣೆ ಹೊಂದಿದ್ದ ಪಕ್ಷವೊಂದರ ಪ್ರಶ್ನಾತೀತ ನಾಯಕರು, ಇಂದು ಭ್ರಷ್ಟಾಚಾರವನ್ನು ನಿರ್ಲಜ್ಜವಾಗಿ ಸಮ
ರ್ಥಿಸುತ್ತಾ ಅಧಿಕಾರಕ್ಕೆ ಅಂಟಿಕೊಂಡು ಕುಳಿತು ಜೈಲಿ ನಿಂದಲೇ ಶಾಸನ ಚಲಾಯಿಸುವುದನ್ನು ಕಂಡಾಗ ರಾಜಕಾರಣದ ಕುರಿತು ಅಸಹ್ಯ ಎನಿಸುತ್ತದೆ.

ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಂವಿಧಾನವನ್ನು ಗುರಾಣಿಯಾಗಿಸುವ ಇವರನ್ನು ಕಂಡು ಆ ಗೋಸುಂಬೆಯೂ ನಾಚಿಕೊಂಡೀತು. ಭ್ರಷ್ಟಾಚಾರದ ವಿರುದ್ಧ ತಾನು ನುಡಿದಂತೆ ಕೇಂದ್ರ ಸರಕಾರ ನಡೆಯುವುದೂ ಇವರ ದೃಷ್ಟಿಯಲ್ಲಿ ಅಪರಾ ಧವೇ ಸರಿ. ‘ಯಾಕೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ?’ ಎಂದು ಮೊನ್ನೆ ಮೊನ್ನೆಯವರೆಗೂ ಕೇಳುತ್ತಿದ್ದವರೆಲ್ಲಾ ಈಗ, ‘ಇದು ಸರಕಾರಿ ಪ್ರಾಯೋಜಿತ ದ್ವೇಷದ ರಾಜಕಾರಣ’ ಎನ್ನುತ್ತಾ ಏಕಾಏಕಿ ತಮ್ಮ ವರಸೆಯನ್ನು ಬದಲಿಸಿಕೊಂಡಿದ್ದಾರೆ, ತನ್ಮೂಲಕ ಜನರ ಮುಂದೆ ಬೆತ್ತಲಾಗುತ್ತಿದ್ದಾರೆ.

ಒಟ್ಟಿನಲ್ಲಿ, ಚುನಾವಣಾ ಮಹಾಭಾರತವೀಗ ನಿರ್ಣಾಯಕ ಹಂತಕ್ಕೆ ಮುಟ್ಟಿದೆ. ೨೦೨೪ರ ಮತಯುದ್ಧವು ನಮ್ಮ ಅಳಿವು-ಉಳಿವಿನ ಹೋರಾಟ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವ ತನಕ ಮಾತ್ರ ಪ್ರಜಾ ಪ್ರಭುತ್ವ, ಸಂವಿಧಾನ, ಕಾನೂನು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಚಲಾವಣೆಯಲ್ಲಿರಲಿವೆ. ಹಾಗಾಗಿ ನಾವೆಲ್ಲರೂ ಈ ಬಾರಿಯ ಚುನಾವಣೆಯನ್ನು ಧರ್ಮಯುದ್ಧವೆಂದೇ ಪರಿಭಾವಿಸಿ ಭಾರಿ ಸಂಖ್ಯೆಯಲ್ಲಿ ಮತಚಲಾವಣೆ ಮಾಡಬೇಕಿದೆ. ಕಾರಣ, ಜಾಗೃತ ಮತದಾರರಿಂದ
ಮಾತ್ರವೇ ಭಾರತದ ಸಂವಿಧಾನವು ಉಳಿದೀತು. ಇಲ್ಲವಾದರೆ, ‘ನ ವರ್ತಮಾನೋ, ನ ಭವಿಷ್ಯತಿ…’.

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)

Leave a Reply

Your email address will not be published. Required fields are marked *