Thursday, 12th December 2024

ಸ್ವತಂತ್ರ ಭಾರತದಲ್ಲಿ ಬರಿ ಹಗರಣಗಳದೇ ಸಂತೆ

ಸಕಾಲಿಕ

ರಮಾನಂದ ಶರ್ಮ

ನಮ್ಮ ದೇಶಕ್ಕೂ ಹಗರಣಗಳಿಗೂ ಅವಿನಾಭಾವ ಸಂಬಂಧ. ಅಷ್ಟರಮಟ್ಟಿಗೆ ಹಗರಣಗಳು ಜನನಿತ. ಸ್ವಾತಂತ್ರ್ಯೋತ್ತರ ಇತಿಹಾಸ ನೋಡಿದರೆ ಹನುಮಂತನ ಬಾಲವನ್ನೂ ಮೀರಿಸುವಷ್ಟು ಉದ್ದದ ಪಟ್ಟಿ ಸಿಗಬಹುದು. ಈ ಪಟ್ಟಿಗೆ ತೀರಾ ಇತ್ತಿಚಿನ ಸೇರ್ಪಡೆ, ಸುಮಾರು 58 ಸಾವಿರ ಕೋಟಿ ಉರುಳಿದೆ ಎಂದು ಅಂದಾಜು ಮಾಡಲಾಗುತ್ತಿರುವ ಬಿಟ್ ಕಾಯಿನ್ ಹಗರಣ. ಇದಿನ್ನೂ ಆರಂಭಿಕ ಹಂತ. ಸುರುಳಿ ಬಿಚ್ಚುತ್ತ ಹೋದಂತೆಲ್ಲ ವ್ಯಕ್ತಿ, ವ್ಯಾಪಕತೆ ಮತ್ತು ವಂಚನೆಗೊಳಪಟ್ಟ ಮೊತ್ತದ ನಿಖರ ಮಾಹಿತಿ ದೊರಕಬಹುದು. ಹಾಗೆ ನೋಡಿದರೆ ಎಲ್ಲವೂ ಆಯಾ ಕಾಲಕ್ಕೆ ದೊಡ್ಡ ದೇ. ಆದರೆ ಕೆಲವು ಇಂದಿಗೂ ಜನಮಾನಸದಿಂದ ಮಾಸಿಲ್ಲ, ಅಂಥವೊಂದಿಷ್ಟನ್ನು ಮೆಲುಕಬಹುದಾದರೆ…

ಜೀಪ್‌ನ ಧೂಳು: ಸ್ವಾತಂತ್ರ್ಯದ ಹೊಸ್ತಿಲಲ್ಲೇ ನಡೆದ, 1948ರ ಜೀಪ್ ಖರೀದಿ ಹಗರಣ ಸ್ವತಂತ್ರ ಭಾರತ ಕಂಡ ಮೊದಲ ಬಹು ದೊಡ್ಡ ಭ್ರಷ್ಟಾಚಾರ. ಇಂಗ್ಲೆಂಡ್‌ ನಲ್ಲಿ ಭಾರತದ ರಾಯಭಾರಿಯಾಗಿದ್ದ ವಿ.ಕೆ. ಕೃಷ್ಣ ಮೆನನ್ ಶಿಷ್ಟಾಚಾರ ಉಲ್ಲಂಸಿ ಭಾರತೀಯ ಸೇನೆಗಾಗಿ ಜೀಪ್ ಖರೀದಿಸಲು ಖಾಸಗಿ ಕಂಪನಿಯೊಂದಿಗೆ 80 ಲಕ್ಷದ ಒಪ್ಪಂದ ಮಾಡಿಕೊಂಡು ಮುಂಗಡ ಹಣವನ್ನೂ ಪಾವತಿಸಿದ್ದರು. ಅದರೆ ಕೇವಲ 150 ಜೀಪ್‌ಗಳು ಭಾರತವನ್ನು ತಲುಪಿದವು. ಇದರಲ್ಲಿ ಪ್ರಧಾನಿ ನೆಹರೂ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು.

ಮುಳುವಾದ ವಿಮೆ

1958ರಲ್ಲಿ ಹರಿದಾಸ ಮುಂದ್ರಾ ಎನ್ನುವ ಕೊಲ್ಕಾತಾ ಮೂಲದ ಸ್ಟಾಕ್ ಬ್ರೋಕರ್, ಜೀವ ವಿಮಾ ನಿಗಮದ 1.26 ಲಕ್ಷ ಮೌಲ್ಯದ ಶೇರುಗಳನ್ನು ಸಂಕಷ್ಟ ದಲ್ಲಿರುವ ತನ್ನ 6 ಕಂಪನಿಗಳಲ್ಲಿ ಹೂಡಿಕೆ ಮಾಡು ವಂತೆ ಮಾಡಿದ್ದು. ಇದನ್ನು ಸರಕಾರದ ಚಿತಾವಣೆಯಿಂದ ಮಾಡಿದ್ದು ಎಂದು ಸಂಸದ ಫೀರೋಜ್ ಗಾಂಧಿ ಅರೋಪಿ ಸಿದ್ದರು. ಇದೇ ಮುಂದೆ ನೆಹರು ಮತ್ತು ಫಿರೋಜ್ ಸಂಬಂಧ ಹಳಸುವಂತೆ ಮಾಡಿದ್ದಲ್ಲದೇ 245 ವಿಮಾ ಕಂಪನಿಗಳ ರಾಷ್ಟ್ರೀಕರಣಕ್ಕೆ ದಾರಿ ಮಾಡಿತ್ತು. ಜೀವನ ವಿಮಾ ನಿಗಮ ಇದರಲ್ಲಿ ನಷ್ಟ ಅನುಭವಿಸಿದ್ದಲ್ಲದೇ, ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಾಮಾಚಾರಿ ಸಚಿವ ಪದಕ್ಕೆ ರಾಜೀನಾಮೆ ಕೊಡಬೇಕಾಯಿತು.

ನಗರವಾಲಾ ನಖರಾ

1971ರಲ್ಲಿ ದೆಹಲಿಯ ಸಂಸತ್ ರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್‌ಗೆ 60 ಲಕ್ಷ ರು. ಅನ್ನು ನಗರ ವಾಲಾ ಎನ್ನುವವರಿಗೆ ನೀಡುವಂತೆ ಇಂದಿರಾ ಗಾಂಧಿ ಹೆಸರಿನಲ್ಲಿ ಫೋನ್ ಕರೆ ಬಂದಿತ್ತು. ಅದರ ಆಧಾರದ ಮೇಲೆ ಹೆಡ್ ಕ್ಯಾಷಿಯರ್ ಮಲ್ಹೋತ್ರ 60 ಲಕ್ಷ ನೀಡಿದ್ದು, ನಂತರ ಇದು ನಕಲಿ ಎಂದು ಗೊತ್ತಾಗಿದೆ. ಪ್ರಕರಣದ ವಿಚಾರಣಾ ಅಧಿಕಾರಿ ಡಿ.ಕೆ. ಕಶ್ಯಪ ಕಾರು ಅಪಘಾತದಲ್ಲಿ ಸತ್ತರೆ, ಹಣ ಪಡೆದಿದ್ದ ನಗರವಾಲಾ ಜೈಲಿನಲ್ಲಿಯೇ ಕೊನೆ ಉಸಿರೆಳೆದಿದ್ದ. ವರ್ಷಗಳ ಕಾಲ ಮಾಧ್ಯಮದಲ್ಲಿ ರಾರಾಜಿ ಸಿದ್ದ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ಕಾಣಲೇ ಇಲ್ಲ.

ರಾಜೀವ್ ಸ್ಫೋಟಿಸಿದ ಬೋಫೋರ್ಸ್
1987ರಲ್ಲಿ ಬೋಫೋರ್ಸ್ ಗನ್ ಖರೀದಿ ವಿಚಾರದಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಮತ್ತು ಇತರ ಹಲವು ರಾಜಕಾರಣಿ ಗಳು 64 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದರು ಎಂದು ಅಪಾದಿಸಲಾಗಿತ್ತು. ಪ್ರಕರಣದಲ್ಲಿ ರಕ್ಷಣಾ ಮಂತ್ರಿ ವಿ.ಪಿ. ಸಿಂಗ್ ಕಠಿಣ ನಿಲುವು ತಳೆದಿದ್ದು , ಅಂತಿಮವಾಗಿ ರಾಜೀನಾಮೆ ನೀಡಿದ್ದರು. ಚೆನ್ನೈ ಮೂಲದ ‘ದಿ ಹಿಂದು’ ಪತ್ರಿಕೆ, ಅದರ ಸಂಪಾದಕ ಎನ್. ರಾಮ್ ಮತ್ತು ಪತ್ರಿಕೆಯ ಸ್ವೀಡನ್ ವರದಿಗಾರ್ತಿ ಚಿತ್ರಾ ಸುಬ್ರಮಣ್ಯಂ ಮನೆಮಾತಾದರು. 1989ರ ಉಚನಾವಣೆಯಲ್ಲಿ ಯಾವುದೇ ಅರೋಪ ದಲ್ಲಿ ಸಾಬೀತಾಗದಿದ್ದರೂ ರಾಜೀವ್ ಸರಕಾರಕ್ಕೆ ಸೋಲುಂಟಾಯಿತು. ಹಗರಣ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ ವಿ.ಪಿ. ಸಿಂಗ್ 1989ರಲ್ಲಿ ಪ್ರಧಾನಿಯಾದರು. ಇದು ಸಹ ತಾರ್ಕಿಕ ಅಂತ್ಯ ಕಾಣಲೇ ಇಲ್ಲ.

ಡೈರಿ ಹೊರಗೆಡಹಿದ ಸತ್ಯ
1991ರಲ್ಲಿ ಜೈನ್ ಹವಾಲಾ ಪ್ರಕರಣ ಹಣಕಾಸು ಜಗತ್ತನ್ನು ನಡುಗಿಸಿತ್ತು. 18 ಮಿಲಿ ಯನ್ ಡಾಲರ್ ಹವಾಲ ಹಗರಣದಲ್ಲಿ, ವಶಪಡಿಸಿಕೊಳ್ಳಲಾದ ಜೈನ್ ಡೈರಿಯಲ್ಲಿ ಪ್ರಧಾನಿ ನರಸಿಂಹರಾವ್, ಲಾಲ್ ಕೃಷ್ಣ ಆಡ್ವಾಣಿ, ವಿ.ಸಿ.ಶುಕ್ಲಾ, ಪ. ಶಿವಶಂಕರ್, ಶರದ್ ಯಾದವ್, ಬಲರಾಂ ಜಾಕ್ಕಡ್ ಮತ್ತ ಮದನಲಾಲ ಖುರನಾ ರಂಥ ಅತಿರಥ ಮಹಾರಥರ ಹೆಸರು ಇದೆ ಎಂದು ಹೇಳಲಾಗಿದ್ದು, ನಿಷ್ಪಕ್ಷಪಾತ ವಿಚಾರಣೆಗಾಗಿ, ರಾಜಧರ್ಮ ಪಾಲಿಸಲು ಆಡ್ವಾಣಿ ತಮ್ಮ ಸಂಸದೀಯ
ಸ್ಥಾನಕ್ಕೆ 1996ರಲ್ಲಿ ರಾಜೀನಾಮೆ ನೀಡಿ 1998ರಲ್ಲಿ ಪುನರಾಯ್ಕೆ ಆದರು. ಪ್ರಕರಣ ಕೊನೆಗೆ ಸಮರ್ಥ ಸಾಕ್ಷಿ ಮತ್ತು ಪುರಾವೆ ಇಲ್ಲದೇ ನ್ಯಾಯಾಲಯದಲ್ಲಿ ಸೋಲುಂಡಿತು.

ಮೇವು ನುಂಗಿದ ಲಾಲು
1996ರಲ್ಲಿ ಲಾಲು ಪ್ರಸಾದ್ ಯಾದವರ ವಿರುದ್ಧದ 950 ಕೋಟಿ ಮೇವು ಹಗರಣ ಪ್ರಜ್ಞಾವಂತರನ್ನು ದಿಗಿಲು ಬೀಳಿಸಿತ್ತು. ಪಶುಗಳಿಗೆ ಪೂರೈಸಲಾಗಿದ್ದ ಮೇವಿನ ಬಗೆಗಿನ ದಾಖಲೆಗಳೆಲ್ಲ ನಕಲಿಯಾಗಿದ್ದವು. ಪ್ರಕರಣದಲ್ಲಿ ಲಾಲು ಯಾದವರನ್ನು ಬಂಽಸಿ, ಬಲವಂತವಾಗಿ ಮುಖ್ಯಮಂತ್ರಿ ಪದವಿಯಿಂದ ಇಳಿಸಲಾಯಿತು. ದಿಗ್ಗಜ ರಾಜಕಾರಿಣಿಗಳು ಶಾಮೀಲಾ ಗಿದ್ದು, ಇದು ಲಾಲು ಯಾದವರ ರಾಜಕೀಯ ಭವಿಷ್ಯಕ್ಕೆ ಚರಮಗೀತೆ ಹಾಡಿತು. ಇದು ಬಿಹಾರ ಅತಿ ದೊಡ್ಡ ಹಗರಣ ಎಂದು ಹೇಳಲಾಗುತ್ತದೆ.

ಸುಖ ಕಸಿದ ನಗದು 
ಸುಖರಾಮ್ ಯಾದವ್ ಹಿಮಾಚಲಪ್ರದೇಶದ ಸಿಎಂ ಮತ್ತು ಬಹುಕಾಲ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಟೆಲಿಕಾಮ್ ಹಗರಣ ಒಂದರಲ್ಲಿ ಸಿಕ್ಕು ಬಿದ್ದು ಅವರ ಮನೆಯಿಂದ ಕೇಂದ್ರ ತನಿಖಾದಳ 3.60 ಕೋಟಿ ನಗದನ್ನು ವಶಪಡಿಸಿಕೊಂಡಿತ್ತು. ತನಿಖೆಯಲ್ಲಿ ಆರೋಪ ಸ್ಥಿರಪಟ್ಟು ಅವರಿಗೆ ಮೂರು ವರ್ಷ ಕಠಿಣ ಶಿಕ್ಷೆಯನ್ನು ವಿಽಸಲಾಗಿತ್ತು.

ಸಂಸತ್‌ನಲ್ಲಿ ತೂರಾಡಿದ ನೋಟುಗಳು

2008ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಮೆರಿಕದೊಂದಿಗಿನ ಅಣು ಒಪ್ಪಂದದ ನಿಟ್ಟಿನಲ್ಲಿ ಸಿಪಿಎಂ ಪ್ರೇರಿತ ಅವಿಶ್ವಾಸದ ಭಯದಲ್ಲಿ ಇರುವಾಗ, ಭಾಜಪದ ಕೆಲವು ಸಂಸದರು ಸರಕಾರ ಬೆಂಬಲಿಸಲು ತಮಗೆ ಕೋಟಿ -ಕೋಟಿ ರು.ಗಳಲಂಚ ನೀಡಲಾಗಿದೆ ಎಂದು ಸಂಸತ್ತಿನಲ್ಲಿ ನೋಟಿನ ಕಂತೆಗಳನ್ನ ಪ್ರದರ್ಶಿಸಿದ್ದರು. ಈ ಪ್ರಕರಣದಲ್ಲಿ ವಿಕಿಲೀಕ್‌ಅನ್ನು ಎಳೆದು ತರಲಾಗಿತ್ತು. ಸಮಾಜವಾದಿ ನಾಯಕ ಅಮರ್‌ಸಿಂಗ್ ಮತ್ತು ಸುಧೀಂದ್ರ ಕುಲಕರ್ಣಿ ಸೇರಿ ಹಲವರನ್ನು ಬಂಧಿಸಲಾಗಿತ್ತು. ಸಂಸದರ ಸಮಿತಿ ಆರೋಪದಲ್ಲಿ ಹುರುಳಿಲ್ಲವೆಂದು ತಳ್ಳಿ ಹಾಕಿದ್ದು ಪ್ರಕರಣಕ್ಕೆ ಮಂಗಳ ಹಾಡಲಾಯಿತು. ಇದು ೫೦ ಕೋಟಿ ಲಂಚದ ಹಗರಣವಾಗಿತ್ತು.

ಕಾಮನ್ ಕರ್ಮಕಾಂಡ
2010ರ ಕಾಮನ್‌ವೆಲ್ತ್ ಗೇಮ್ಸ್ ಸಂಬಂಧ ಇನ್ನೊಂದು ದೊಡ್ಡ ಕರ್ಮಕಾಂಡ. 70608 ಕೋಟಿ ಭಾರೀ ಭ್ರಷ್ಟಾಚಾರ ನಡೆದಿದೆಯಂದು ಹೇಳಲಾಗಿತ್ತು. ಸುರೇಶ್ ಕಲ್ಮಾಡಿ ಹಗರಣದ ರೂವಾರಿಯಾಗಿದ್ದು, ಪುಣೆಯಿಂದ ಲೋಕಸಭಾಗೆ ಅಯ್ಕೆಯಾಗಿ ದ್ದರು. ಹಗರಣದ ನಂತರ ಕಾಂಗ್ರೆಸ್‌ನಿಂದ ಅಮಾನತು ಗೊಳಿಸಲಾಗಿತ್ತು. ಇಂಡಿಯನ್ ಓಲಿಂಪಿಕ್ ಅಸೋಸಿಯೇ ಷನ್‌ದಿಂದ ತೆಗೆದು ಹಾಕಲಾಗಿತ್ತು. ಈ ಹಗರಣದಲ್ಲಿ 95 ಕೋಟಿ ನಷ್ಟದ ಅಂದಾಜು
ಮಾಡಲಾಗಿದೆ.

ಆದರ್ಶದ ಸೂರೆ

ರಕ್ಷಣಾ ಇಲಾಖೆಯ ಕಾರ್ಯನಿರತ ಮತ್ತು ನಿವೃತ್ ಸಿಬ್ಬಂದಿಗಾಗಿ ಗೃಹ ನಿರ್ಮಾಣಕ್ಕಾಗಿ 2002ರಲ್ಲಿ ಮಹಾರಾಷ್ಟ್ರದ ಸಿಎಂಗೆ ವಿಶೇಷ ಬೇಡಿಕೆ ಸಲ್ಲಿಸಿ ಮುಂಬೈನ್ ಆದರ್ಶ ಹೌಸಿಂಗ್ ಸೊಸೈಟಿಗಾಗಿ ಜಾಗ ಪಡೆಯ ಲಾಗಿತ್ತು. ಇದರಲ್ಲಿ ನಿಯವಾವಳಿಯನ್ನು ಮನಬಂದಂತೆ ತಿದ್ದುಪಡಿ ಮಾಡಿ ಕೊಂಡು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಇನ್ನಿತರ ಪ್ರಭಾವಿಗಳು ಅದರಲ್ಲಿ ಫ್ಲ್ಯಾಟ್ ಗಳನ್ನು ತಮ್ಮೊಳಗೆ ಅಲಾಟ್‌ಮೆಂಟ ಮಾಡಿಕೊಂಡಿದ್ದರು. ಇದರಲ್ಲಿ
ಶುಶೀಲ್ ಕುಮಾರ್ ಶಿಂದೆ, ಆಶೋಕ್ ಚವ್ಹಾಣ್ ಮತ್ತು ವಿಲಾಸ ರಾವ್ ದೇಶಮುಖರಂಥ ಧುರೀಣರು ಫಲಾನುಭವಿಗಳಾಗಿದ್ದರು.

2ಜಿ ಸ್ಕ್ಯಾಮ್ ಈ ದೇಶದ ಅತಿ ದೊಡ್ಡ ಹಗರಣ ಎಂದು ಹೇಳಲಾಗುತ್ತದೆ. ಇದರಲ್ಲಿ ಫ್ರೀಕ್ವೆನ್ಸಿಗಳನ್ನು ಕೆಲವೇ ಕಂಪನಿಗಳಿಗೆ ನೀಡಿದ್ದು, ಅವರು ಮೂರನೇ ಪಾರ್ಟಿ ಗಳಿಗೆ ಮಾರಿ ಭಾರೀ ದುಡ್ಡು ಮಾಡಿದ್ದಾರೆ ಎನ್ನಲಾಗುತ್ತದೆ. ಸಿಎಜಿ ರಿಪೋರ್ಟ್ ಪ್ರಕಾರ ಫ್ರೀಕ್ವೆನ್ಸಿಗೆ ಬರಬೇಕಾದ ಹಣಕ್ಕೂ ಪಡೆದ ಹಣಕ್ಕೂ ಸುಮಾರು 1,76,465 ಕೋಟಿ ವ್ಯತ್ಯಾಸ ಇದೆಯಂತೆ. ನಿಖರ ನಷ್ಟ ಎಷ್ಟೆಂದು ಹೇಳಲಾಗ ದಿದ್ದರೂ, ಸೆಕ್ಟ್ರಂ ಅಲಾಟ್‌ಮೆಂಟನ್ನು ಸುಪ್ರೀಂಕೋರ್ಟ್ ಅಸಂವಿಧಾನಿಕ ಮತ್ತು ಏಕಪಕ್ಷೀಯ ಎಂದು ಘೋಷಿಸಿ, 122 ಪರವಾನಗಿಗಳನ್ನು ರದ್ದು ಪಡಿಸಿತು. ಪ್ರಕರಣದಲ್ಲಿ ಅಂದಿನ ಟೆಲೆಕಾಮ್ ಮಂತ್ರಿ ಎ.ರಾಜಾ ಮತ್ತು ಸಂಸದೆ, ಕರುಣಾನಿಧಿ ಯವರ ಪುತ್ರಿ ಕನಮೊಳಿಯನ್ನು ಬಂಧಿಸಲಾಗಿತ್ತು. ಅವರೊಂದಿಗೆ ಇಬ್ಬರು ಉನ್ನತ ಆಧಿಕಾರಿಗಳನ್ನೂ ಜೈಲಿಗೆ ಕಳಿಸಲಾಗಿತ್ತು.

ಕಪ್ಪಾದ ಕೋಲ್
2012ರ ಕೋಲ್‌ಗೇಟ್ ಇನ್ನೊಂದು ಮಹಾ ಹಗರಣ. ಸರ್ಕಾರ ಸ್ಪರ್ಧಾತ್ಮಕ ಬಿಡ್ ಕರೆಯದೇ ಕೋಲ್ ಬ್ಲಾಕ್ ಗಳನ್ನು ಖಾಸಗಿ ಮತ್ತು ಸಾರ್ವಜನಿಕ ರಂಗಗಳಿಗೆ ನೀಡಿದ ಆರೋಪ ಇದರಲ್ಲಿ ಇದೆ. ಸಿಎಜಿ ಪ್ರಕಾರ ಈ ವ್ಯವಹಾರ ದಲ್ಲಿ ಸರಕಾರದ ಖಜಾನೆಗೆ 10,67,303 ಕೋಟಿ ನಷ್ಟ ಅಗಿದೆಯಂತೆ. ಅಂದಿನ ಕಲ್ಲದ್ದಲ್ಲು ಮಂತ್ರಿ ಜೈಸ್ವಾಲ್ ಇದನ್ನು ಅಲ್ಲಗೆಳೆದು ಸಿಎಜಿ ರಿಪೋರ್ಟ್ ಅನ್ನು ತಿರಸ್ಕರಿಸಿದ್ದಾರೆ.

ಹದಗೆಟ್ಟ ಆರೋಗ್ಯ
ಉತ್ತರ ಪ್ರದೇಶದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಸ್ಕ್ಯಾಮ್ ಒಂದು ವಿಚಿತ್ರ ಪ್ರಕರಣ. ಗ್ರಾಮೀಣ ಜನತೆಯ ಅರೋಗ್ಯಕ್ಕಾಗಿ ಮೀಸಲಾಗಿಟ್ಟ 10000 ಕೋಟಿಯನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಲೂಟಿ ಮಾಡಿದ್ದಾರಂತೆ. ಈ ಪ್ರಕರಣದಲ್ಲಿ ಇಬ್ಬರು ವೈದ್ಯರ ಕೊಲೆಯಾಗಿದೆ ಮತ್ತು ಬಂಧಿತರಲ್ಲಿ ಒಬ್ಬರು ಜೈಲಿನಲ್ಲಿಯೇ ಮೃತಪಟ್ಟರು.

ಈ ಪಟ್ಟಿ tip of an iceberg ಅಷ್ಟೇ: ಜನಸಾಮಾನ್ಯರು ಇದರಲ್ಲಿ ಅಸಕ್ತಿ ಕಳೆದುಕೊಂಡಿದ್ದಾರೆ. ಒಂದೆರಡು ದಿನ ಮೂರ್ಖರಂತೆ ಮಾತನಾಡಿ ಮರೆತು ಬಿಡುತ್ತಾರೆ. ಒಂದು ವಿವಾದ ಅಥವಾ ಹಗರಣ ಇನ್ನೊಂದು ದೊಡ್ಡ ಹಗರಣ ಬರುವವರೆಗೆ ಚಾಲ್ತಿಯಲ್ಲಿ ಇರುತ್ತದೆ ಎನ್ನುವ ಹಳೆಯ ಗಾದೆಗೆ ಶರಣಾಗುತ್ತಾರೆ. ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಬಿಟ್ಟರೆ ಯಾವುದೇ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದಿಲ್ಲ. ವಿಚಾರಣೆಯ ಹೆಸರಿನಲ್ಲಿ ಹಣ ಮತ್ತು ಮಾನವ ಸಂಪನ್ಮೂಲ ವ್ಯರ್ಥ ಎನ್ನುತ್ತಾರೆ ತಜ್ಞರು. ಬಿಟ್ ಕಾಯಿನ್ ಕೂಡ ಇದೇ ಹಾದಿ ಹಿಡಿದರೆ ಆಶ್ಚರ್ಯವಿಲ್ಲ ಎಂಬ ಮಾತು ಎಲ್ಲೆಡೆ ಸಾರ್ವಜನಿಕಗೊಂಡಿದೆ. ಅಂತಿಮವಾಗಿ ಬಿಟ್ ಕಾಯಿನ್ ಹಗರಣ ಸತ್ಯವನ್ನು ಹೊರಹಾಕುತ್ತದೆ ಎನ್ನುವ ನಂಬಿಕೆ ಜನರಲ್ಲಿ ಇಲ್ಲ. ಇದು ಕೆಲವು ರಾಜಕೀಯ ಸೇಡನ್ನು ತೀರಿಸಿಕೊಳ್ಳಲು ಬಳಸಿಕೊಳ್ಳಬಹುದು ಎನ್ನುವ ಮಾತಿನಲ್ಲಿ ಅರ್ಥ ವಿಲ್ಲದಿಲ್ಲ