ಪ್ರಸ್ತುತ
ಸಂದೀಪ್ ಶರ್ಮಾ
ಶಾಲೆಗಳ ಪುನರಾರಂಭದ ಬಗ್ಗೆೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರವು ಆಯಾ ರಾಜ್ಯಗಳಿಗೆ ಅಕ್ಟೋಬರ್ 15ರಿಂದ ನಿರ್ಧಾರ ವನ್ನು ತೆಗೆದುಕೊಳ್ಳಲು ಸ್ವಾತಂತ್ರ್ಯವನ್ನು ನೀಡಿದೆಯಾದರು ಪೋಷಕರಿಂದ ಪರ-ವಿರೋಧ ವ್ಯಕ್ತವಾಗುತ್ತಿದೆ.
ಕೋವಿಡ್ ಸಂಕಟದಿಂದ ಒಂದೆಡೆ ಮಕ್ಕಳ ಪ್ರಹಸನಗಳನ್ನು ನಿಭಾಯಿಸಿ ಸಾಕಾಗಿರುವ ಪೋಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿ ಸಡೆಸುತ್ತಿದ್ದಾರೆ. ಒಂದು ಬಹುದೊಡ್ಡ ಅಂತರದ ಅನಂತರ ಶಾಲೆ ಆರಂಭವಾಗಬೇಕಿರುವ ಅನಿವಾರ್ಯ ಎದುರಾಗಿದೆಯಾದರು ರಾಜ್ಯ ಸರಕಾರ ಸದ್ಯಕ್ಕೆ ಪುನರಾರಂಭಗೊಳಿಸಲು ಒಪ್ಪುತ್ತಿಲ್ಲ. ಒಂದಡೆ ಮಕ್ಕಳ ಶೈಕ್ಷಣಿಕ ಜೀವನ ಇನ್ನೊಂದೆಡೆ ಬೌದ್ಧಿಕ ಸಾಮರ್ಥ್ಯ ಕುಂಠಿತವಾಗಬಾರದು ಎನ್ನುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಹೊಸ
ಶಿಕ್ಷಣ ನೀತಿಗೆ ರಾಷ್ಟ್ರ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಮಾನಸಿಕವಾಗಿ ಸಜ್ಜುಗೊಳಿಸಿ ಹೊಸ ಶಿಕ್ಷಣ ನೀತಿಗೆ ಮಕ್ಕಳನ್ನು ಬದಲಾಯಿಸುವುದರ ಜತೆ ಜತೆಗೆ ಬದಲಾಗಿರುವ ಮಕ್ಕಳ ಮನಃಸ್ಥಿತಿಯನ್ನೂ ಪರಿವರ್ತಿಸಬಹುದಾದ ಸನ್ನಿವೇಶ ದಲ್ಲಿ ಎಲ್ಲರಿದ್ದೇವೆ. ಮನೆಯೇ ಮೊದಲ ಪಾಠ ಶಾಲೆ ಎಂಬ ನಾಣ್ಣುಡಿ ಏನೋ ಸರಿ ಆದರೆ ಮಕ್ಕಳ ಬೆಳವಣಿಗೆ ಕೇವಲ
ಮನೆಯಿಂದಾಗಲಿ, ಮನೆಯಿಂದ ಕಲಿತ ಪಠ್ಯದಿಂದಾಗಲೇ ಆಗುವುದಿಲ್ಲ. ಶಿಕ್ಷಣ ಎನ್ನುವುದು ಒಂದು ಪರಿಪೂರ್ಣ ಪ್ರಜ್ಞೆ ಮತ್ತು ಅರಿವು. ಮಕ್ಕಳ ಪಠ್ಯ ಕೇವಲ ನಿಮಿತ್ತವಷ್ಟೇ. ವಿದ್ಯಾರ್ಥಿಗೆ ಶೈಕ್ಷಣಿಕವಲ್ಲದ ಪರಿಸರದಿಂದ, ಪಠ್ಯೇತರ ಚಟುವಟಿಕೆಗಳಿಂದ ಕಲಿಯುವಂತಹದ್ದು ಬಹಳ ಇರುತ್ತದೆ. ಪ್ರಸ್ತುತ ಕೋವಿಡ್‌ನಿಂದ ಶಾಲೆ ವಿಚಾರವಾಗಿ ಸಿಕ್ಕಿರುವ ಬಿಡುವು ಮಕ್ಕಳನ್ನು ಹೆಚ್ಚಾಗಿಯೇ ಬದಲಾಯಿಸಿದೆ.
ಈಗಿನ ಪರಿಸ್ಥಿತಿ ನೇರ ಶಿಕ್ಷಣಕ್ಕಿಂತ ಪರ್ಯಾಯ ಶಿಕ್ಷಣದ ಬಗ್ಗೆ ಯೋಚಿಸುವಾಗ ಆನ್‌ಲೈನ್ ಶಿಕ್ಷಣ ಶುರುವಾಗಿದೆ. ಯಾವ ಮಕ್ಕಳಿಗೆ ಮೊಬೈಲ್ ಕೊಟ್ಟರೆ ದಾರಿತಪ್ಪುತ್ತಾರೆ ಎನ್ನುವ ಮಾತಿತ್ತೋ ಈಗ ಅದೇ ಮಕ್ಕಳಿಗೆ ಸಾಲ ಮಾಡಿಯಾದರೂ ಮೊಬೈಲ್ ಕೊಡಿಸಿ ಪೋಷಕರು ಸ್ಮಾರ್ಟ್ ಫೋನ್ ಅಂಗಡಿಗಳ ಲಾಭವನ್ನು ಹೆಚ್ಚಿಸುತ್ತಿದ್ದಾರೆ. ಶಾಲೆಗೆ ಮಕ್ಕಳನ್ನು ಕಳುಹಿಸುವುದನ್ನು ಬಿಟ್ಟು ಬೇರೆ ಪರ್ಯಾಯ ಆನ್ ಲೈನ್ ಶಿಕ್ಷಣ ಎಂದಾಗ ಪೋಷಕರು ಕೂಡ ಅರೆ ಮನಸ್ಸಿನಿಂದ ಒಪ್ಪಿದ್ದಾರೆ. ಹೇಗಾದರೂ ಸರಿ ಮಕ್ಕಳ ಶಿಕ್ಷಣ ಹಾಳಾಗಬಾರದು ಮತ್ತು ಕುಂಠಿತವಾಗಬಾರದು ಎನ್ನುವ ಮನಃಸ್ಥಿತಿಯಲ್ಲಿಯೇ ಪೋಷಕರಿದ್ದಾರೆ. ಹಾಗಾಗಿ ಈಗ ಆನ್‌ಲೈನ್‌ಗೆ ಮಕ್ಕಳ ಜತೆಗೆ ಪೋಷಕರೂ ಕೂಡ ಹೊಂದಿಕೊಳ್ಳಲು ಶುರುಮಾಡಿದ್ದಾರೆ. ಆದರೆ ಬಹುತೇಕ ಪೋಷಕರಿಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಪೋಷಕರು ಆನ್ ಲೈನ್ ಶಿಕ್ಷಣದ ಒಳಹೊರಗನ್ನು ಅರಿಯಲು ಕಷ್ಟಪಡುತ್ತಿದ್ದಾರೆ.
ಆನ್‌ಲೈನ್‌ನಲ್ಲಿ ಪಾಠ ನಡೆಯುತ್ತಿದ್ದರೆ ನರ್ಸರಿ ಮತ್ತು ಪ್ರಾಥಮಿಕ ವರ್ಗದಲ್ಲಿರುವ ಮಕ್ಕಳು ತಮ್ಮದೇ ಲೋಕದಲ್ಲಿ ವಿಹರಿ ಸುತ್ತಾ, ಮತ್ತೇನೋ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಶಾಲೆಯ ಆವರಣ ಅಥವಾ ಪರಿಸರವಿಲ್ಲದಿರುವುದರಿಂದ ಈ ಬದಲಾ ವಣೆಗಳು ಕಾಣಸಿಗುತ್ತದೆ. ಪೋಷಕರು ಮತ್ತು ಶಿಕ್ಷಕರು ನೋಡುವಾಗ ಮಾತ್ರ ಶಿಸ್ತಾಗಿ ಕಾಣುವ ಮಕ್ಕಳು ಆನ್‌ಲೈನ್‌ನಲ್ಲಿ ಬೇಕಿದ್ದ ಕ್ಕಿಂತಲೂ ಬೇಡದ್ದನ್ನೇ ಹೆಚ್ಚು ಕಲಿಯುತ್ತಿದ್ದಾರೆ ಎನ್ನುವ ದೂರುಗಳೂ ಕೇಳಿಬರುತ್ತಿವೆ.
ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳ ತಲ್ಲೀನತೆಯಲ್ಲಿರುವುದರಿಂದ ಮಕ್ಕಳೇ ಪೋಷಕರಿಗೆ ಹೊಸ ಹೊಸ ಅಪ್‌ಗ್ರೇಡ್‌ಗಳ ಬಗ್ಗೆ ಹೇಳಿ
ಕೊಡುತ್ತಿರುತ್ತಾರೆ. ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಂಡು ಮಕ್ಕಳ ಮೇಲೆ ಒತ್ತಡ ಹೇರುವುದರಿಂದ ಮಕ್ಕಳು ಹಾಗು ಪೋಷಕರಿಗೆ ಹಿಂಸೆಯಾಗಬಾರದು. ಸಾಂಕ್ರಾಮಿಕವು ಮುಂಬರುವ ದಿನಗಳಲ್ಲಿ ತಗ್ಗಬಹುದು ಎಂಬ ವಿಶ್ವಾಸವಿದೆಯಾದರೂ ಧೈರ್ಯದಿಂದ ಜೀವನ ನಡೆಸುವುದೊಂದೆ ದಾರಿ. ಅಂತಿಮವಾಗಿ ಮಕ್ಕಳ ಭವಿಷ್ಯ ನಿರ್ಮಾಣ ಇಡೀ ಸಮಾಜದ ಜವಾಬ್ದಾರಿ.
ಪ್ರಸ್ತುತ ಸಂದರ್ಭದಲ್ಲಿ ಅದಕ್ಕೆ ಬೇಕಿರುವ ಪೂರಕ ವಾತಾವರಣ ಸೃಷ್ಟಿಯಾಗಬೇಕು ಮತ್ತು ಎಲ್ಲರೂ ಸಹಕರಿಸಬೇಕು.