Saturday, 14th December 2024

srivathsajoshi column: ವಿಜ್ಞಾನ ಕಾನನದಲ್ಲಿ ಸಫಾರಿಗೆಂದು ಹತ್ತೇವು ವಿಜ್ಞಾನದ ಜೀಪ !

ತಿಳಿರು ತೋರಣ

srivathsajoshi@yahoo.com

ಅಜ್ಞಾನ ಅಥವಾ ಅರೆಬರೆ ಜ್ಞಾನಕ್ಕೇ ಈಗಿನ ದಿನಗಳಲ್ಲಿ ಹೆಚ್ಚು ಮನ್ನಣೆ, ಹೆಚ್ಚು ಪ್ರಚಾರ, ಹೆಚ್ಚು ವೇದಿಕೆಗಳು, ಹೆಚ್ಚು ಅವಕಾಶಗಳು. ಯಾವುದನ್ನೇ ಆದರೂ ಶಾಸ್ತ್ರೀಯವಾಗಿ ಮತ್ತು ಸಮಗ್ರವಾಗಿ ತಿಳಿದುಕೊಳ್ಳುವ ಆಸಕ್ತಿ, ಶ್ರದ್ಧೆ, ತಾಳ್ಮೆ ಒಂದೂ ನಮಗಿಲ್ಲ. ಹಾಗಾಗಿಯೇ ವಿಜ್ಞಾನ ಎಂದೊಡನೆ ನಮ್ಮ ಎದೆ ಕುಣಿದಾಡುವುದಿಲ್ಲ, ಕಿವಿ ನಿಮಿರುವುದಿಲ್ಲ, ತೆಕ್ಕನೆ ಮನ-ಮೈ ಮರೆಯುವುದೂ ಇಲ್ಲ. ಇದು ಒಂದು ಆಯಾಮವಾದರೆ ಇನ್ನೊಂದೆಡೆ- ವಿಜ್ಞಾನದ ಬಗ್ಗೆ ತಿಳಿಯಬೇಕೆಂಬ ಕುತೂಹಲವುಳ್ಳವರಿಗೆ, ಜ್ಞಾನಪಿಪಾಸುಗಳಿಗೆ ಅಂಥ ಜ್ಞಾನವು ಸುಲಭವಾಗಿ ವಿಪುಲವಾಗಿ ಸಿಗುವುದೂ ಇಲ್ಲ. ಕನ್ನಡದ ಸಂದರ್ಭವನ್ನೇ ತೆಗೆದುಕೊಂಡರೆ ವಿಜ್ಞಾನ ಬರಹಗಾರರ ಪರಂಪರೆ ಇಲ್ಲಿ ಸಮೃದ್ಧವಾಗಿದೆ ಎನ್ನಲಾರೆವು. ನೆನಪಿಸಿಕೊಂಡರೆ ಬೆರಳೆಣಿಕೆಯಷ್ಟೇ ಹೆಸರುಗಳು ಹೊಳೆದಾವು- ಅಡ್ಯನಡ್ಕ ಕೃಷ್ಣ ಭಟ್, ಜಿ.ಟಿ.ನಾರಾಯಣ ರಾವ್, ಜೆ.ಆರ್.ಲಕ್ಷ್ಮಣ ರಾವ್, ಹಾಲ್ದೊಡ್ಡೇರಿ ಸುಧೀಂದ್ರ ಮುಂತಾಗಿ ಆಗಿಹೋದ, ಮತ್ತು ನಾಗೇಶ ಹೆಗಡೆ, ಕೊಳ್ಳೇಗಾಲ ಶರ್ಮ, ರೋಹಿತ್ ಚಕ್ರತೀರ್ಥ, ಟಿ.ಜಿ.ಶ್ರೀನಿಧಿ ಮುಂತಾಗಿ ಈಗಲೂ ಬರೆಯುತ್ತಿರುವ ಕೆಲವೇಕೆಲವು ಲೇಖಕರವು; ‘ಬಾಲವಿಜ್ಞಾನ’ದಂಥ ಒಂದೆರಡು ಹಳೇ ವಿಜ್ಞಾನ ಪತ್ರಿಕೆಗಳದು; ಪೂರ್ಣಚಂದ್ರ ತೇಜಸ್ವಿ, ಬಿ.ಜಿ.ಎಲ್ ಸ್ವಾಮಿ, ಪ.ರಾಮಕೃಷ್ಣ ಶಾಸಿ, ಪಾವೆಂ ಆಚಾರ್ಯ ಮುಂತಾಗಿ ಸಾಹಿತಿಗಳಾಗಿಯೂ ವಿಜ್ಞಾನ ವಿಷಯಗಳನ್ನು ಬೋಧಪ್ರದವಾಗಿ ಮತ್ತು ರಂಜನೀಯವಾಗಿ ಬರೆದವರದು; ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಸೀಮಿತ ಪ್ರಮಾಣದಲ್ಲಾದರೂ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರದು; ಹಾಗೆಯೇ ‘ತರಂಗ’ದಲ್ಲಿ ‘ಬಾಲವನದಲ್ಲಿ ಕಾರಂತಜ್ಜ’ ಅಂಕಣದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಕ್ಕಳ ಪ್ರಶ್ನೆಗಳಿಗೆ ಕಾರಂತರು ಉತ್ತರಿಸುತ್ತಿದ್ದದ್ದು; ‘ಸುಧಾ’ದಲ್ಲಿ ‘ಚೌ ಚೌ ಚೌಕಿ’ ಅಂಕಣ (ನಿರ್ವಹಣೆ: ಟಿ. ಆರ್. ಅನಂತರಾಮು ಮತ್ತು ಶರಣಬಸವೇಶ್ವರ ಅಂಗಡಿ) ವಿಜ್ಞಾನವನ್ನು ಕುರಿತ ಪ್ರಶ್ನೋತ್ತರಕ್ಕೆ ವೇದಿಕೆಯಾಗಿದ್ದದ್ದು ಇತ್ಯಾದಿ.

ಹುಲುಸಾದ ಬೆಳೆ ಎನ್ನುವಷ್ಟಂತೂ ಖಂಡಿತ ಅಲ್ಲ. ವಿಜ್ಞಾನಸಾಹಿತ್ಯ ಅಪೇಕ್ಷಿತ ಮಟ್ಟದಲ್ಲಿ ಬೆಳೆಯದಿರುವುದಕ್ಕೆ ಕಾರಣಗಳು ಹಲವಾರು ಇರಬಹುದು. ಓದುಗರಿಗೇ ಖಾಯಿಶಿ ಇಲ್ಲವಾದರೆ ಬರೆಯುವವರಿಗಾದರೂ ಉತ್ಸಾಹ ಎಲ್ಲಿಂದ ಬರಬೇಕು? ಪ್ರಕಾಶಕರೇಕೆ ಪ್ರಕಟಣೆಯ ಸಾಹಸ ಮಾಡಬೇಕು? ಫಿಲಂ, ಫುಡ್, ಫ್ಯಾಷನ್- ಈ ಮೂರು ‘ಎ-’ಗಳಿಗೇ ಓದುಗರನ್ನು ಸೆಳೆಯುವ ಗುಣ ಹೆಚ್ಚು ಎಂದು ಪತ್ರಿಕೆಗಳಿಗೂ ಗೊತ್ತು. ಈಗಂತೂ ದಿನಪತ್ರಿಕೆಗಳು ಗಾಂಭೀರ್ಯ ಕಳೆದುಕೊಂಡು ಟ್ಯಾಬ್ಲಾಯ್ಡ್‌ಗಳಂತಾಗಿವೆ. ವಿಜ್ಞಾನಕ್ಕೆ ಮಣೆ ಹಾಕಲು ಅವು ಹಿಂಜರಿಯುತ್ತವೆ. ವಿಜ್ಞಾನವೆಂದರೆ ಒಂಥರದ ಹೆದರಿಕೆ-ಹೇವರಿಕೆಗಳ ಭಾವನೆ ಕೆಲವರಲ್ಲಿರುವುದೂ ಒಂದು ಕಾರಣವೇ. ಸೂತ್ರಗಳು, ಸಮೀಕರಣಗಳು, ಸಂಕೇತಗಳು, ಅಂಕಿಸಂಖ್ಯೆಗಳೇ ತುಂಬಿದ ವಿಜ್ಞಾನ ಲೇಖನ ಓದುಗರನ್ನು ಕಂಗೆಡಿಸಬಹುದು.

ಗಣಿತದ ಗುಮ್ಮನಂತೆ ಅವ್ಯಕ್ತ ಹೆದರಿಕೆ ಹುಟ್ಟಿಸಬಹುದು. ಇಲ್ಲಿ ನನ್ನದೇ ಅನುಭವವನ್ನೂ ಹೇಳಬಲ್ಲೆ. ಕಳೆದ ಹತ್ತಾರು ವರ್ಷಗಳಿಂದ ಅಂಕಣ ಬರೆಯುತ್ತಿರುವ ನಾನು ಯಾವುದಾದರೂ ವಾರದಲ್ಲಿ ವಿಜ್ಞಾನದ ವಿಷಯವನ್ನೆತ್ತಿಕೊಂಡರೆ ಆ ವಾರ ಓದುಗರ ಪ್ರತಿಕ್ರಿಯೆ ನೀರಸವಾಗಿರುತ್ತದೆ. ಎಷ್ಟೇ ಸರಳವಾಗಿ, ಸರಸಮಯವಾಗಿ ಬರೆದರೂ ‘ಇದು ನಮ್ಮ ತಲೆಮೇಲಿಂದ ಹಾರಿಹೋಯಿತು’ ಎನ್ನುವವರೇ ಹೆಚ್ಚು. ‘ವಿಜ್ಞಾನ ಲೇಖನಗಳನ್ನು ನೀವೇನಾದರೂ ಬರೆದಿರೋ, ಇನ್ನುಮುಂದೆ ನಿಮ್ಮ ಅಂಕಣ ಓದುವುದನ್ನೇ ನಿಲ್ಲಿಸುತ್ತೇನೆ’ ಎಂದು ಸಾತ್ತ್ವಿಕ ಧಮ್ಕಿ ಹಾಕುವವರೂ ಇದ್ದಾರೆ. ಅದು ತಮಾಷೆಗಾಗಿಯೇ ಹೌದಾದರೂ ಒಬ್ಬರದೇ ಧ್ವನಿಯಲ್ಲ ಎಂದು ಕೂಡ ನನಗೆ ಗೊತ್ತು. ಹಾಗಂತ, ವಿಜ್ಞಾನವಿಷಯಗಳ ಉಸಾಬರಿಗೇ ಹೋಗಲಾರೆ ಎಂದು ನಾನೇನೂ ಶಪಥ ಮಾಡಿಲ್ಲ. ಆದರೆ ಈ ಬಗ್ಗೆ ಓದುಗರ ನಾಡಿಮಿಡಿತ ನನಗೆ ಅಷ್ಟಿಷ್ಟಾದರೂ ಅರ್ಥ ವಾಗಿದೆ ಎಂದಷ್ಟೇ ಹೇಳುತ್ತೇನೆ.

ಈ ಹಿನ್ನೆಲೆಯಿಂದ ಅಥವಾ ದೃಷ್ಟಿಕೋನದಿಂದ ನೋಡಿದರೆ, ಶರತ್ ಭಟ್ ಸೇರಾಜೆ ಅವರ ಹೊಸ ಪುಸ್ತಕ ‘ಹತ್ತೇವು ವಿಜ್ಞಾನದ ಜೀಪ’ ಒಂದು ಭರವಸೆಯ ಆಶಾಕಿರಣ. ಶರತ್ ಭಟ್ ನನ್ನಂತೆಯೇ ವೃತ್ತಿಗೋಸ್ಕರ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಆರಿಸಿಕೊಂಡಿರುವವರು; ಪ್ರವೃತ್ತಿಯೆಂದು ಕನ್ನಡ ಅಕ್ಷರಕೃಷಿಯನ್ನು ಪ್ರೀತಿ ಯಿಂದ ಆಲಂಗಿಸಿಕೊಂಡಿರುವವರು. ಆಲೋಚನಾ ವಿಧಾನ, ತರ್ಕಸರಣಿಗಳು, ಅಕ್ಷರಗಳೊಂದಿಗಿನ ಆಟದ ವಿಷಯದಲ್ಲೂ ಅವರ ಮತ್ತು ನನ್ನ ಫ್ರೀಕ್ವೆನ್ಸಿ ಮ್ಯಾಚ್ ಆಗುತ್ತದೆ- ಎಂದು ಈ ಪುಸ್ತಕದಿಂದಷ್ಟೇ ಅಲ್ಲ, -ಸ್‌ಬುಕ್‌ನಲ್ಲಿನ ಅವರ ಟಿಪ್ಪಣಿಗಳಿಂದ, ಬಿಡಿಬರಹಗಳಿಂದಲೂ ನಾನು ಅಂದಾಜಿಸಿದ್ದೇನೆ. ಅದಕ್ಕಿಂತ
ಹೆಚ್ಚಾಗಿ, ಐದಾರು ವರ್ಷಗಳ ಹಿಂದೆ ಅಂಕಿತ ಪ್ರತಿಭಾ ಮಾಲಿಕೆ ಯಲ್ಲಿ ಪ್ರಕಟವಾದ ಅವರ ಚೊಚ್ಚಲ ಕೃತಿ ‘ಬಾಗಿಲು ತೆರೆಯೇ ಸೇಸಮ್ಮ’ ಎಂಬ ತುಸು ವಿಚಿತ್ರ, ವಿಶಿಷ್ಟ ಶೀರ್ಷಿಕೆಯ ಪುಸ್ತಕದಲ್ಲಿರುವ ವೈಚಾರಿಕ ಲಲಿತ ಪ್ರಬಂಧಗಳನ್ನು ಓದಿ ಆನಂದಿಸಿದ್ದೇನೆ.

ಅದಕ್ಕೆ ಓದುಗರಿಂದ ಒಳ್ಳೆಯ ಸ್ಪಂದನ ಸಿಕ್ಕಿರುವುದನ್ನು ಕಂಡು ಖುಷಿಪಟ್ಟಿದ್ದೇನೆ. ವೈಚಾರಿಕ, ವೈನೋದಿಕ ಶೈಲಿಯನ್ನು ಕರಗತ ಮಾಡಿಕೊಂಡಿರುವ ಶರತ್ ಭಟ್ ಇದೀಗ ವೈಜ್ಞಾನಿಕ ಹೂರಣವನ್ನೇ ಎತ್ತಿಕೊಂಡಿ ರುವುದಕ್ಕೆ ಅವರ ಬಗೆಗೆ ಅಭಿಮಾನವನ್ನು ಹೆಚ್ಚಿಸಿಕೊಂಡಿದ್ದೇನೆ. ನಾನಿಲ್ಲಿ ವೈಜ್ಞಾನಿಕ ಎಂಬ ಪದ ಬಳಸಿದ್ದು ವಿಜ್ಞಾನಕ್ಕೆ ಸಂಬಂಧಿಸಿದ ಎಂಬ ಅರ್ಥದಲ್ಲಿ. ಆದರೆ ಹಾಗೆ ಮಾಡುವಾಗ ಪ್ರಜ್ಞಾಪೂರ್ವಕ ಎಚ್ಚರ ವನ್ನೂ ವಹಿಸಿದ್ದೇನೆ! ಏಕೆಂದರೆ ಶರತ್ ಭಟ್ ಈ ಪುಸ್ತಕದ ಮೊದಲ ಅಧ್ಯಾಯದಲ್ಲಿ ಪೀಠಿಕೆಯೆಂಬಂತೆ ಬೆಟ್ಟು ಮಾಡಿ ತೋರಿಸಿರುವುದು ಅಥವಾ ತಕರಾರು ಎತ್ತಿರುವುದು ಎರಡು ಮುಖ್ಯವಾದ ಪದಗಳ ಅತಿಶಯ ಬಳಕೆಯ ಬಗೆಗೆ: ಒಂದು ‘ವಿಜ್ಞಾನ’, ಮತ್ತೊಂದು ‘ವೈಜ್ಞಾನಿಕ’. ವಿಶೇಷವಾಗಿ ಇಂಗ್ಲಿಷ್ ನಲ್ಲಿ The Science of Shopping, The Science of Popularity, The Science of Getting Rich ಅಂತೆಲ್ಲ ಪುಸ್ತಕಗಳ ಶೀರ್ಷಿಕೆಯಲ್ಲಿ ಖ್ಚಜಿಛ್ಞ್ಚಿಛಿ ಪದ ಯಾವ ಕರ್ಮಕ್ಕೆ ಎಂದು ಅವರ ಪ್ರಶ್ನೆ. ಯಾರು ಬೇಕಾದರೂ ಯಾವುದನ್ನು ಬೇಕಾದರೂ ವಿಜ್ಞಾನ ಎನ್ನಬಹುದೇ? ಇನ್ನು ಸೈನ್ಸ್ ಆಫ್‌ ಕತ್ತೆ ಕಾಯುವುದು, ಸೈನ್ಸ್ ಆಫ್‌ ಟ್ರೋಲ್ ಮಾಡುವುದು ಎಂಬಂಥವು ಮಾತ್ರ ಬಾಕಿ ಉಳಿದಿರುವಂತಿವೆ ಎಂದು ಅವರು ಲೇವಡಿ ಮಾಡುತ್ತಾರೆ.

ಕೂತದ್ದಕ್ಕೆ, ನಿಂತದ್ದಕ್ಕೆ, ಕುಣಿದದ್ದಕ್ಕೆ ಎಲ್ಲದಕ್ಕೂ ಒಂದೊಂದು ವೈಜ್ಞಾನಿಕ ಕಾರಣವನ್ನು ಆರೋಪಿಸುವ ಮಾತುಗುಳಿಗಳದ್ದು ಕೂಡ ಅತಿರೇಕದ ತರ್ಕರಸಿಕತೆ. ವಿಚಾರ ಯಾವುದೇ ಇರಲಿ, ಅದಕ್ಕೊಂದು ವೈಜ್ಞಾ ನಿಕ ಕಾರಣದ ಟೈ ಕಟ್ಟಿದರೆ ಮಾತ್ರ ಗೌರವಕ್ಕೆ ಪಾತ್ರವಾಗಿ ಕಾಲರ್ ಮೇಲೆ ಮಾಡಲು ಸಾಧ್ಯವೆಂದು ಹಲವರು ಭಾವಿಸಿರುವಂತಿದೆ. ‘ವಿಜ್ಞಾನ, ವೈಜ್ಞಾನಿಕ ಎಂಬುದರ ಪರಿಧಿಯೊಳಗೆ ಎಲ್ಲೆ ಮೀರಿದ ಪ್ರವೇಶಗಳು ಹೇರಳವಾಗಿವೆ. ಈ ಪದಗಳ ಅಪಪ್ರಯೋಗ, ಅತಿಬಳಕೆಗಳನ್ನು ಕಂಡಾಗ ವಿಜ್ಞಾನದ ಚರಮಕಿಂಕರನಾಗಿರುವ, ವಿಜ್ಞಾನದ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಲು ಹಗಲಿರುಳೂ ಹಾತೊರೆಯುತ್ತಿರುವ ನನ್ನಂಥ ವರು ಏನು ಮಾಡಬಹುದು? ಇಂಥದೊಂದು ಪುಸ್ತಕ ಬರೆಯಬಹುದು!’ ಎಂದು, ಈ ಪುಸ್ತಕದ ರಚನೆಗೆ ಸಾತ್ತ್ವಿಕ ಸಿಟ್ಟೇ ಸೂರ್ತಿಯೆಂದು ತಿಳಿಸುತ್ತಾರೆ.

‘ನನ್ನ ಅಧ್ಯಯನದ ಮಿತಿಯಲ್ಲಿ, ವಿಜ್ಞಾನಕ್ಕೊಂದು ಶಾಲು ಹೊದೆಸಿ, ಪ್ರಶಸ್ತಿ ಪತ್ರ ಕೊಟ್ಟು ಅದರ ಬಗ್ಗೆ ಒಂದು ಅಭಿನಂದನಾ ಭಾಷಣವನ್ನು ಮಾಡಿದರೆ ಹೇಗಿರಬಹುದೋ ಆ ರೀತಿ ಇದನ್ನು ಬರೆದಿದ್ದೇನೆ. ವಿಜ್ಞಾನ ಎಂದರೆ ಏನೇನೆಲ್ಲ ಮತ್ತು ಏನೇನಲ್ಲ, ವಿಜ್ಞಾನಿಗಳು ಹೇಗೆ ಕೆಲಸ ಮಾಡುತ್ತಾರೆ, ವೈಜ್ಞಾನಿಕ ಮನೋಧರ್ಮ/ಮನೋವೃತ್ತಿ ಎಂದರೇನು ಎಂಬುದೆಲ್ಲ ಈ ಅಸಮಗ್ರ ಚಿತ್ರಣದಲ್ಲಿ ಅಷ್ಟಿಷ್ಟಾದರೂ ಬಂದು ಹೋದೀತೆಂದು ನನ್ನ ಮಿಣುಕು ಭರವಸೆ, ಅಭಿಲಾಷೆ’ ಎಂದು ವಿನೀತಭಾವದಿಂದಲೇ ನಿವೇದಿಸುತ್ತಾರೆ. ಎಲ್ಲಕ್ಕೂ ಮೊದಲು ವಿಜ್ಞಾನವು ಈ ಭೂಮಿಯಲ್ಲಿ ಏಕೆ ಅವತರಿಸಿತೆಂದು ವಿಚಾರಮಾಡುವುದು ಸಮುಚಿತವಾ
ದೀತು ಅಂತ ಆರಂಭಿಸಿ, ಮನೋಜ್ಞ ಕಥಾನಕಗ ಳನ್ನು ಉದಾಹರಣೆಯಾಗಿ ತೋರಿಸಿ, ಜ್ಞಾನಾಕಾಂಕ್ಷೆ, ಒಗಟಿನ ಸವಾಲನ್ನು ಬಗೆಹ ರಿಸುವ ಕಾಮನೆ, ತಡೆಹಿಡಿಯಲಾಗದ, ಪ್ರಚಂಡವಾದ ತಿಳಿವಿನ ಬಯಕೆಯೇ ವಿಜ್ಞಾನದ ಪ್ರೇರಕಶಕ್ತಿ ಮತ್ತು ವಿಜ್ಞಾನ ಗಂಗೆಗೆ ಅಂಥ ತಣಿಯದ ಜಿಜ್ಞಾಸೆಯೇ ಗಂಗೋತ್ರಿ ಎಂಬ ತೀರ್ಮಾನಕ್ಕೆ ಶರತ್ ಭಟ್ ಬರುತ್ತಾರೆ. ಪುಸ್ತಕದುದ್ದಕ್ಕೂ ವಿಜ್ಞಾನಸಂಬಂಧಿ ಕಥಾನಕಗಳು, ಸಂದರ್ಭೋಚಿತ ನಗೆಹನಿಗಳು, ಚಾಟೂಕ್ತಿಗಳು ಬರುತ್ತವೆ. ಇದರಲ್ಲಿ ನಿಮಗೆ ಆರ್ಕಿಮಿಡಿಸನು ಬಚ್ಚಲುಮನೆಯಿಂದ ಬೆತ್ತಲೆ ಓಡಿದ ಕಥೆ (ಅದರ ನಿಖರ ರೂಪ) ಸಿಗುತ್ತದೆ; ಅಲೆಕ್ಸಾಂಡ್ರಿಯಾದಲ್ಲಿ ಗ್ರಂಥಪಾಲನಾಗಿದ್ದ ಇರಾಟೋಸ್ತನೀ ಸನು ಬರೀ ಒಂದು ಕೋಲಿಂದಲೇ ಭೂಮಿಯ ಸುತ್ತ ಳತೆಯನ್ನು ಕರಾರುವಾಕ್ಕಾಗಿ ಕಂಡುಹಿಡಿದ ಕಥೆಯೂ ಸಿಗುತ್ತದೆ.

ಗಗನನೌಕೆಯೊಳಗೆ ಶೌಚಾಲಯ ಇರಲಿಲ್ಲವಾಗಿ ಉಡ್ಡಯನ ಸ್ಥಳಕ್ಕೊಯ್ದ ಬಸ್ಸಿನ ಚಕ್ರದ ಮೇಲೆ ಯೂರಿ ಗಗಾರಿನ್ ಉಚ್ಚೆ ಹೊಯ್ದಿದ್ದು, ರಷ್ಯನ್ ಅಂತರಿಕ್ಷಗಾಮಿಗಳು ಅಂಥ ಮೂತ್ರವಿಸರ್ಜನೆಯನ್ನು ಈಗಲೂ
ಒಂದು ಸಂಪ್ರದಾಯವೆಂದು ಪಾಲಿಸುವುದು- ರೀತಿಯ ಉಲ್ಲೇಖಗಳು ‘ಹೀಗೂ ಉಂಟೇ!?’ ಎಂಬ ಉದ್ಗಾರ ಹೊರಡಿಸುತ್ತವೆ. ಆದ್ದರಿಂದಲೇ ಈ ಪುಸ್ತಕ ಎಲ್ಲಿಯೂ ‘ತಲೆ ಮೇಲಿಂದ ಹಾದುಹೋಗುವಂತಿದೆ’ ಎಂದನಿಸದೆ ಮನಸ್ಸಿಗೆ ಮುದ ನೀಡುತ್ತದೆ, ಕುತೂಹಲವನ್ನು ಕಾಯ್ದುಕೊಳ್ಳುತ್ತದೆ. ಇಲ್ಲಿ ನ್ಯೂಟನ್, ಐನ್‌ಸ್ಟೀನ್, ಗೆಲಿಲಿಯೋ, ಎಡಿಸನ್ ಮುಂತಾಗಿ ನಮಗೆ ಚಿರಪರಿಚಿತರಾಗಿರುವ ವಿಜ್ಞಾನಿಗಳ ಜತೆಜತೆಗೇ ಅಷ್ಟೇನೂ ಪರಿಚಿತ ವಲ್ಲದ ಹೆಸರುಗಳೂ ಬರುತ್ತವೆ. ವಿಜ್ಞಾನವನ್ನು ಅರಸುತ್ತ ಅವರೆಲ್ಲ ಮಾಡಿದ ಪ್ರಯೋಗಗಳ ವಿವರಗಳು ಕಾಣಿಸಿಕೊಳ್ಳುತ್ತವೆ. ಅವರ ಈ ಜ್ಞಾನಾನ್ವೇಷಣೆಯನ್ನು ಶರತ್ ಭಟ್ ಸನಾತನ ಭಾರತೀಯ ತತ್ತ್ವಶಾಸಜ್ಞರ, ದಾರ್ಶನಿಕರ ‘ಸತ್ಯದ ಹುಡುಕಾಟ’ಕ್ಕೆ ಸಮೀಕರಿಸುತ್ತಾರೆ; ‘ವಿಜ್ಞಾನ ಮತ್ತು ತತ್ತ್ವಶಾಸ್ತ್ರ ಎರಡರ ಗುರಿಯೂ ಒಂದೇ: ಮೂಲ ಸತ್ಯದ ಅನ್ವೇಷಣೆ, ಜ್ಞಾನದ ಹುಡುಕಾಟ.

ವಿಧಾನದಲ್ಲಿ, ವೈಖರಿಯಲ್ಲಿ ಮಾತ್ರ ವ್ಯತ್ಯಾಸ. ಗ್ರೀಕ್ ಭಾಷೆಯಲ್ಲಿ ‘ಫಿಲೋ’ ಎಂದರೆ ಪ್ರೇಮ, ‘ಸೋಫಿಯಾ’ ಎಂದರೆ ಜ್ಞಾನ. ಹಾಗಾಗಿ, ಜ್ಞಾನದ ಪ್ರೇಮವೇ ಫಿಲಾಸಫಿ, ಜ್ಞಾನಾನುರಾಗಿಯೇ ಫಿಲಾಸಫರ್. ನಮ್ಮಲ್ಲಿ ತತ್ತ್ವಶಾಸ್ತ್ರವನ್ನು ‘ದರ್ಶನ’ ಎನ್ನುತ್ತೇವೆ. ‘ದೃಶ್ಯತೇ ಅನೇನ ಇತಿ ದರ್ಶನಮ್’ ಎಂದು ವ್ಯುತ್ಪತ್ತಿ. ಯಾವುದರ ಮುಖಾಂತರ ಕಾಣಬೇಕಾದ್ದು ಕಾಣುತ್ತದೋ ಅದೇ ದರ್ಶನ. ಕಾಣಬೇಕಾದ್ದು ಏನನ್ನು? ವಸ್ತುವಿನ ಸತ್ಯ-ಸ್ವರೂಪವನ್ನು. ಆದ್ದರಿಂದ ವಿಜ್ಞಾನವನ್ನು ದರ್ಶನವೆಂದೂ ಕರೆಯಬಹುದು, ಅದಕ್ಕೆ ಫಿಲಾಸಫಿ ಎಂದೂ ಹೆಸರಿಡಬಹುದು’ ಎಂಬ ವ್ಯಾಖ್ಯಾನ ಓದುಗರಿಗೆ ಮನದಟ್ಟಾಗುವಂತೆ ಇದೆ.

ವಿಜ್ಞಾನ ಅಂದರೆ ಏನೇನೆಲ್ಲ ಮತ್ತು ಏನೇನಲ್ಲ ಎಂಬುದರ ಸೋದಾಹರಣ ವಿವರಣೆ ಈ ಪುಸ್ತಕದ ಮುಖ್ಯ ತಿರುಳು. ‘ಪ್ರಮಾ ಅಂದರೆ ಯಥಾರ್ಥಜ್ಞಾನ. ಆ ಪದದಿಂದಲೇ ಬಂದದ್ದು ಪ್ರಮಾಣ, ಪ್ರಮೇಯ ಇತ್ಯಾದಿ. ನಮ್ಮ ದಾರ್ಶನಿಕರು ಸೂಚಿಸಿದ ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ, ಅರ್ಥಾಪತ್ತಿ ಎಂಬ ಐದು ಪ್ರಮಾಣಗಳನ್ನೇ ಆಧುನಿಕ ವಿಜ್ಞಾನವೂ ಉಪಯೋಗಿಸುತ್ತದೆ. ಪಕ್ಷಪಾತ, ವೈಯುಕ್ತಿಕ ಒಲವು, ಪೂರ್ವಗ್ರಹ ಇವೆಲ್ಲ ವಿಕಿಪೀಡಿಯಾ ಬರವಣಿಗೆಯಲ್ಲಿ ಹೇಗೆ ಸಲ್ಲವೋ ಹಾಗೆ ವಿಜ್ಞಾನದಲ್ಲೂ ಸಲ್ಲ. ವಿಜ್ಞಾನಿಯ ವೈಯುಕ್ತಿಕ ನಡೆ-ನುಡಿ, ರಾಜಕೀಯ ನಿಲುವು, ಮುಂಗೋಪ, ಸುಳ್ಳು ಹೇಳುವ ಚಾಳಿ ಇವೆಲ್ಲವುಗಳಿಂದ ವಿಜ್ಞಾನಕ್ಕೆ ಯಾವುದೇ ಬಾಧೆಯುಂಟಾಗಬಾರದು, ಸತ್ಯವು ಮುಕ್ಕಾಗಬಾರದು. ವಿಜ್ಞಾನಿಗೆ ಒಂದು ರೀತಿಯ ತಟಸ್ಥ ದೃಷ್ಟಿಕೋನ ಬೇಕು.

ವಿಜ್ಞಾನಿ ಏನು ಹೇಳುತ್ತಿದ್ದಾನೆ ಎನ್ನುವುದಕ್ಕಿಂತ, ಪ್ರಯೋಗವು ಏನು ಹೇಳುತ್ತಿದೆ? ನಿಸರ್ಗವು ಏನು ಹೇಳುತ್ತಿದೆ? ಎನ್ನುವುದಕ್ಕೇ ಬೆಲೆ ಹೆಚ್ಚು. ಪ್ರಯೋಗ, ಪರಿವೀಕ್ಷಣೆ, ಪರಿಶೀಲನೆ, ಸಾಕ್ಷಿ, ಆಧಾರಗಳು ಏನು ಹೇಳುತ್ತಿವೆ,
ಸಂಶೋಧನೆಯಲ್ಲಿ ದೊರೆತ ಸತ್ಯಾಂಶವೇನು ಎನ್ನುವುದನ್ನು ವಿಜ್ಞಾನಿ ಹೇಳಲೇಬೇಕು; ಸ್ವತಃ ಅವನ ನಿಲುವಿಗೆ ಅದು ವಿರುದ್ಧವಾಗಿದ್ದರೂ, ಅವನಿಗೇ ಅದು ಇಷ್ಟವಿಲ್ಲದಿದ್ದರೂ. ವಿಜ್ಞಾನದ ಯಾವುದೇ ಸಿದ್ಧಾಂತ ವಾದರೂ ತನ್ನನ್ನು ಸುಳ್ಳಾಗಿಸಲು ಅನುವು ಮಾಡಿಕೊಡಬೇಕು, ಅದನ್ನು ತಪ್ಪೆಂದು ತೋರಿಸುವುದಕ್ಕೆ ಅವಕಾಶವೇ ಇಲ್ಲದಿದ್ದರೆ ಅದು ಎಂದಿಗೂ ವೈಜ್ಞಾನಿಕ ಸಿದ್ಧಾಂತವಾಗಲಾರದು. ಹಳೆಯದನ್ನು ತಿದ್ದುತ್ತ, ಬೇಡವಾದ್ದನ್ನು ಕೈಬಿಡುತ್ತ, ಹೊಸದನ್ನು ಸೇರಿಸಿಕೊಳ್ಳುತ್ತ, ಸುಧಾರಣೆಯಾಗುತ್ತ ಸಿದ್ಧಾಂತ ಬೆಳೆಯಬೇಕು. ನಿರಂತರವಾದ ತಿದ್ದುಪಡಿ, ಸುಧಾರಣೆ, ಸರಿಪಡಿಸುವಿಕೆ, ಹೊಸ ಅಂಶಗಳ ಸೇರ್ಪಡೆ ಇವೇ ವಿಜ್ಞಾನದ ಶಕ್ತಿಮದ್ದು.

ವಿಜ್ಞಾನವು ಪರೀಕ್ಷೆಗಳನ್ನು, ತಪಾಸಣೆಗಳನ್ನು ಎದುರಿಸುವುದಕ್ಕೆ ಎಂದಿಗೂ ಸಿದ್ಧವಾಗಿ, ತುದಿಗಾಲಿನಲ್ಲಿ ನಿಂತಿರಬೇಕು. ಪ್ರಯೋಗಕ್ಕೆ ಒಳಗಾಗುವುದು, ಪರಿಶೀಲನೆಗೆ ಗುರಿಯಾಗುವುದು, ವಿಚಾರಣೆಗೆ, ತಪ್ಪು-ಒಪ್ಪುಗಳ ವಿಮರ್ಶೆಗೆ ವಸ್ತುವಾಗುವುದು ವಿಜ್ಞಾನಕ್ಕೆ ಅಚ್ಚುಮೆಚ್ಚು’- ಹೀಗೆ ಯಾವುದು ವಿಜ್ಞಾನ ಮತ್ತು ಯಾವುದು ವಿಜ್ಞಾನವಲ್ಲ, ಯಾರು ವಿಜ್ಞಾನಿ ಮತ್ತು ಯಾರು ವಿಜ್ಞಾನಿಯಲ್ಲ ಎಂದು ಸೂಕ್ತ ನಿದರ್ಶನಗಳೊಂದಿಗೆ, ಅಧಿಕೃತ ಆಕರಗಳ ಉಲ್ಲೇಖಗಳೊಂದಿಗೆ ನಿರೂಪಣೆ. ಅಲ್ಲಲ್ಲಿ ಹಾಸ್ಯೋಕ್ತಿಗಳು ಮತ್ತು ರಸಪ್ರಸಂಗಗಳು ರವೆಉಂಡೆಯ ರುಚಿ ಹೆಚ್ಚಿಸುವ ದ್ರಾಕ್ಷಿ- ಲವಂಗ-ಗೋಡಂಬಿಗಳಂತೆ. ಪುಸ್ತಕವನ್ನು ಓದಿ ಮುಗಿಸಿದಾಗ
ವಿಜ್ಞಾನದ ಬಗೆಗಂತೂ ನಿಮ್ಮಲ್ಲಿ ವಿಶೇಷ ಆಸಕ್ತಿ, ಒಲವುಗಳು ಮೂಡಿಯೇಮೂಡುತ್ತವೆ; ಜತೆಯಲ್ಲೇ ಶರತ್ ಭಟ್ ಅವರ ಜ್ಞಾನಭಂಡಾರದ ಆಳ-ಅಗಲಗಳಿಗೆ, ಭಾಷಾ ಪ್ರೌಢಿಮೆಗೆ, ಹಾಸ್ಯಪ್ರಜ್ಞೆಗೆ, ಮತ್ತು ಆಗಾಗ ಇಣುಕುವ ‘ಸ್ವಲ್ಪ ತಡೀ ಮಾರಾಯ…’, ‘ಅದ್ಯಾವ ಬೊಜ್ಜದ ಬ್ಯಾಕ್ಟೀರಿಯವೋ…’, ‘ಇದೆಂಥ ಮರ್ಲು ಮಾರಾಯರೇ’ ರೀತಿಯ ವಾಕ್ಯಗಳಲ್ಲಿನ ಮಂಗಳೂರು-ಕನ್ನಡಕ್ಕೆ ನೀವು ನಿಮಗರಿವಿಲ್ಲದಂತೆಯೇ ಫಿದಾ ಆಗುತ್ತೀರಿ.

ಶರತ್ ಭಟ್ ಅವರ ಓದು-ಅಧ್ಯಯನಗಳ ಹರಹು, ವಿಶೇಷವಾಗಿ ಕನ್ನಡ ಸಾಹಿತ್ಯ-ಸಾಹಿತಿಗಳ ಬಗೆಗಿನ ಅರಿವು ನಿಮಗೆ ಈ ಪುಸ್ತಕದ ಹೆಸರು ಮತ್ತು ಅಧ್ಯಾಯಗಳ ಶೀರ್ಷಿಕೆಗಳಿಂದಲೇ ಅಂದಾಜಾಗುತ್ತದೆ. ವಿಜ್ಞಾನ ಕಾನನದಲೊಂದು ಸಫಾರಿಗೆ ಕರೆದುಕೊಂಡು ಹೋಗುತ್ತೇನೆಂದು ಅವರು ‘ಹತ್ತೇವು ವಿಜ್ಞಾನದ ಜೀಪ’ ಎಂದಿದ್ದಾರಷ್ಟೆ? ಅದು ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ದ ಪ್ರೇರಣೆ. ‘ಬಲ್ಲಿರೇನಯ್ಯ’ ಎಂಬ ಮೊದಲ ಅಧ್ಯಾಯದ ತಲೆಬರಹ ಕರಾವಳಿಯ ಕಲೆ ಯಕ್ಷಗಾನಕ್ಕೆ ಸಮರ್ಪಣೆ; ‘ದೂರದಿಂದ ಬಂದಂಥ ಸುಂದರಾಂಗ ಜ್ಞಾನ’, ‘ಇದು ಎಂಥಾ ಪ್ರಯೋಗವಯ್ಯಾ’ ಕನ್ನಡ ಚಿತ್ರಗೀತೆ ಸಾಲುಗಳಿಂದ ಪ್ರಭಾವಿತವಾದರೆ ‘ನಡೆವರೆಡಹದೆ ಕುಳಿತವರೆಡಹುವರೆ’ ರಾಘವಾಂಕನ ಕೃಪೆ. ‘ಪ್ರಯೋಗ ಪರಿಣತ ಮತಿಗಳ್’ ಕವಿರಾಜಮಾರ್ಗದ ಶ್ರೀವಿಜಯನಿಂದ ಕಡ ಪಡೆದದ್ದು.

‘ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ’ ಮತ್ತು ‘ಸಾಲವನು ಕೊಂಬಾಗ’ ಸರ್ವಜ್ಞನ ವಚನಪ್ರಸಾದ. ‘ಇದ ತಿಳಿದೆನೆಂದರೂ ತಿಳಿದ ಧೀರ ನಿಲ್ಲ’ ಮತ್ತು ‘ಕಾರ್ಯಕಾರಣದೊಂದಪೂರ್ವ ನಟನೆ’ ಇವು ಗೋಪಾಲಕೃಷ್ಣ ಅಡಿಗರ ಅನುಗ್ರಹ. ಇದಿಷ್ಟೇ ಅಲ್ಲದೇ ಪುಸ್ತಕದುದ್ದಕ್ಕೂ ನಿಮಗೆ ಲಕ್ಷ್ಮೀಶ, ರತ್ನಾಕರವರ್ಣಿ, ಎ.ಎನ್.ಮೂರ್ತಿರಾಯರು, ನಾಡಿಗೇರ ಕೃಷ್ಣರಾಯರು, ಮಾಸ್ತಿ, ಬಿಎಂಶ್ರೀ, ತೀನಂಶ್ರೀ, ಡಿವಿಜಿ, ಬೀಚಿ, ಲಂಕೇಶ್ ಮುಂತಾಗಿ ಕನ್ನಡ ಸಾಹಿತ್ಯವೀಥಿಯ ಪ್ರಖರ ದೀಪಸ್ತಂಭಗಳು ಎದುರಾಗುತ್ತವೆ. ವಿಜ್ಞಾನ ಪುಸ್ತಕದಲ್ಲಿ ಕನ್ನಡ ಸಾಹಿತಿಗಳಿಗೇನು ಕೆಲಸ ಅಂತೀರಾ? ಓದಿನ ಅಮಿತಾನಂದಕ್ಕೆ ಅದೂ ಒಂದು ಕಾರಣ! ಅಂದಹಾಗೆ, ಪುಸ್ತಕವಿನ್ನೂ ಅಚ್ಚಿನಮನೆಯಲ್ಲಿದೆ. ನನಗೆ ಇದರದೊಂದು ಪ್ರಿವಿಲೆಜ್ಡ್ ಪ್ರಿವ್ಯೂ ಸಿಕ್ಕಿದ್ದರಿಂದಾಗಿ ನನ್ನ ಸಂತಸವನ್ನು, ಪುಸ್ತಕದ ಬಗ್ಗೆ ನನ್ನ ಅನುಮೋದನೆಯನ್ನು ಈಗಲೇ ನಿಮಗೆ ತಿಳಿಸುತ್ತಿದ್ದೇನೆ. ಇನ್ನೇನು ಕೆಲ ದಿನಗಳಲ್ಲೇ ಪುಸ್ತಕ ಬಿಡುಗಡೆಯಾಗುತ್ತದೆ.

ಇಷ್ಟೊಂದು ಎಕ್ಸೈಟ್‌ಮೆಂಟ್ ಏಕೆಂದರೆ- ಆಫ್ರಿಕಾ ಖಂಡದ ಕೀನ್ಯಾ, ಸೆರೆಂಗೆಟಿ, ಮಸೈಮಾರಗಳಲ್ಲೋ, ಜರ್ಮನಿಯ ಹ್ಯಾಂಬರ್ಗ್‌ನಲ್ಲೋ, ಅಥವಾ ನಮ್ಮದೇ ಕರ್ನಾಟಕದ ಕಬಿನಿ ಬಂಡೀಪುರಗಳಲ್ಲೋ- ವನ್ಯಮೃಗ ಗಳ ಸಹಜ ಜೀವನಶೈಲಿಯ ದರ್ಶನಕ್ಕೆಂದು ನಿಮ್ಮನ್ನು ಓಪನ್ ಜೀಪಿ ನಲ್ಲಿ ಕರೆದುಕೊಂಡು ಹೋಗುತ್ತೇನೆಂದಾಗಿನ ಕುತೂಹಲ ರೋಮಾಂಚನಗಳು ಹೇಗಿರುತ್ತವೋ ಅಂಥದೇ ರೋಮಾಂಚನ, ಭಾವೋದ್ವೇಗ, ಸಂಭ್ರಮ ನಿಮಗೆ ಈ ಪುಸ್ತಕದ ಓದಿನಿಂದ ಸಿಗಲಿದೆ. ಅದರಲ್ಲೂ ಸಫಾರಿಗೆ ಕರೆದುಕೊಂಡು ಹೋಗುವ ಜೀಪ್ ಡ್ರೈವರ್-ಕಮ್-ಗೈಡ್ ಬರೀ ವಿಜ್ಞಾನದ ಬಗ್ಗೆಯಷ್ಟೇ ಕಾಟಾಚಾರದ ಬಡಬಡಿಕೆ ಮಾಡದೆ, ರಸವತ್ತಾದ ಕಥೆಗಳನ್ನು ಹೇಳುತ್ತ, ಹಾಸ್ಯಚಟಾಕಿಗಳನ್ನು ಸಿಡಿಸುತ್ತ, ಸಂಸ್ಕೃತ-ಹಳಗನ್ನಡ ರಸಘಟ್ಟಿಗಳನ್ನು ಮಧುರಕಂಠದಲ್ಲಿ ಪಠಿಸುತ್ತ, ಭಾರತೀಯ ದರ್ಶನಶಾಸ್ತ್ರಗಳ ಝಲಕ್ಕುಗಳು, ವೇದೋಪನಿಷತ್ತುಗಳು, ಭಗವ
ದ್ಗೀತೆ, ಶಂಕರಭಾಷ್ಯಗಳ ತುಣುಕುಗಳನ್ನೂ ಬಾಯಾಡಿಸಲಿಕ್ಕೆ ಒದಗಿಸುತ್ತ, ನಡುವೆಯೇ ಧುತ್ತೆಂದು ಕೈಫಿ ಆಜ್ಮಿ ಬರೆದ ಹಿಂದೀ ಚಿತ್ರಗೀತೆಯ ಸಾಲನ್ನೂ ಗುನುಗುನಿಸುತ್ತ ನಿಮಗೆ ಹೋಲ್‌ಸಮ್  ನೊಟೈನ್‌ಮೆಂಟ್ ಕೊಡುತ್ತಾನಾದರೆ ತಪ್ಪಿಸಿಕೊಳ್ಳುತ್ತೀರೇಕೆ? ಯಾವುದಕ್ಕೂ, ಜೀಪ್ ಡ್ರೈವರನನ್ನು ಸಂಪರ್ಕಿಸಿ (ಶರತ್ ಭಟ್: ೯೫೯೧೪ ೮೧೪೮೫).

ನಿಮಗೊಂದು ಸೀಟ್ (ಪುಸ್ತಕದ ಪ್ರತಿ) ಕಾಯ್ದಿರಿಸಿ…