Sunday, 15th December 2024

ಗ್ರಾಮೀಣ ಮಕ್ಕಳಿಗೇಕೆ ವಿಜ್ಞಾನ ಅಪಥ್ಯ ?

ಕಲಿ- ನಲಿ

ಬಸವನಗೌಡ ಹೆಬ್ಬಳಗೆರೆ

ಶಾಲಾ ಮಕ್ಕಳೆಲ್ಲರೂ ಹತ್ತನೇ ತರಗತಿಯವರೆಗೂ ಶಿಫಾರಿತ ಪಠ್ಯಕ್ರಮವನ್ನು ಅನುಸರಿಸಲೇಬೇಕು. ಅವರಿಗೆ ಆಯ್ಕೆ ಇರೋದಿಲ್ಲ. ಇಷ್ಟ ಇರಲಿ ಬಿಡಲಿ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಇವನ್ನು ಓದಲೇಬೇಕು. ಆದರೆ ಪಿಯುಸಿಯಲ್ಲಿ ಹೀಗೆ ಇರೋದಿಲ್ಲ, ಅವರಿಗೆ ಆಯ್ಕೆಗಳಿರುತ್ತವೆ. ವಿಜ್ಞಾನದಲ್ಲಿ ಆಸಕ್ತಿಯಿರುವವರು ವಿಜ್ಞಾನವನ್ನೂ, ಕಲೆ-ಇತಿಹಾಸದ ಬಗ್ಗೆ ಒಲವುಳ್ಳವರು ಕಲಾ ವಿಭಾಗವನ್ನೂ, ಬ್ಯುಸಿನೆಸ್, ಬ್ಯಾಂಕಿಂಗ್ ಬಗ್ಗೆ ಆಸಕ್ತಿಯಿರುವವರು ವಾಣಿಜ್ಯ ಶಾಸ್ತ್ರವನ್ನೂ ಆಯ್ಕೆ ಮಾಡಿಕೊಳ್ಳಬಹುದು.

ಇಲ್ಲಿ ಮಕ್ಕಳು ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳೋದು ಅವರು ಎಸ್‌ಎಸ್‌ಎಲ್‌ಸಿಯಲ್ಲಿ ತೆಗೆದ ಅಂಕಗಳ ಆಧಾರದ ಮೇಲೆ, ಅವರ ಪೋಷಕರ
ಒತ್ತಾಯದ ಮೇರೆಗೆ! ಅಥವಾ ಇದು ಅವರ ಗೆಳೆಯರು ಆಯ್ದುಕೊಂಡ ಕೋರ್ಸ್ ಆಧಾರದ ಮೇಲೆ ಅಥವಾ ಪ್ರೌಢಶಾಲೆಯಲ್ಲಿ ಅವರ ಶಿಕ್ಷಕರು ಬೀರಿದ ಪ್ರಭಾವದಿಂದಲೋ, ಸಂಬಂಧಿಕರೋ, ನೆರೆಹೊರೆಯವರೋ ಕೊಟ್ಟ ಸಲಹೆಯಿಂದಲೋ ಆಗಿರಬಹುದು. ಇದು ಅವರ ಆರ್ಥಿಕ ಸ್ಥಿತಿಯನ್ನೂ ಅವಲಂಬಿಸಿರಬಹುದು. ಕೆಲವರು ಚಿಕ್ಕಂದಿನಿಂದಲೂ ಇಟ್ಟುಕೊಂಡ ಗುರಿಯೂ ಇದಕ್ಕೆ ಆಧಾರವಾಗಿರಬಹುದು. ಆದರೆ ಬಹುತೇಕರು ಆಯ್ಕೆ ಮಾಡಿಕೊಳ್ಳುವುದು ತಾವು ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ.

‘ಪಿಯುಸಿಯಲ್ಲಿ ಯಾಕೆ ಸೈನ್ಸ್ ತೆಗೆದು ಕೊಳ್ಳೋಲ್ಲ?’ ಎಂದು ನಾನು ಹಲವಾರು ವಿದ್ಯಾರ್ಥಿಗಳನ್ನು ಕೇಳಿದಾಗ ಬರುವ ಉತ್ತರವೊಂದೇ- ಎಸ್‌ಎಸ್‌ಎಲ್‌ಸಿಯಲ್ಲಿ ವಿಜ್ಞಾನ, ಗಣಿತ ವಿಷಯಗಳಲ್ಲಿ ಕಡಿಮೆ ಅಂಕ ಬಂದಿವೆ ಎಂಬುದು! ಇಲ್ಲಿ ತಮ್ಮ ಕೋರ್ಸ್ ಆಯ್ಕೆಯ ನಿರ್ಧಾರಕ್ಕೆ ಆ ಅಂಕಗಳನ್ನೇ ಮಾನದಂಡವಾಗಿಸಿಕೊಂಡಿರುತ್ತಾರೆ. ಹಿಂದೆ ನಾವು ಓದುವಾಗ ‘ಗಣಿತವೆಂದರೆ ಕಬ್ಬಿಣದ ಕಡಲೆ’ ಎಂಬ ಭಾವನೆ ಹಲವರಲ್ಲಿತ್ತು. ನಾವಿದ್ದ ಹಾಸ್ಟೆಲ್‌ಗಳಲ್ಲಿ ಗಣಿತ ಪರೀಕ್ಷೆಯ ದಿನ ‘ಸೈಲೆಂಟ್ ವಾತಾವರಣ’ ನಿರ್ಮಾಣ ವಾಗುತ್ತಿತ್ತು. ಎಷ್ಟೋ ಹುಡುಗರು ಗಣಿತ ಪರೀಕ್ಷೆಯು ಮುಗಿದ ದಿನ ಜಸ್ಟ್ ಪಾಸ್ ಆಗುವಷ್ಟು ಬರೆದಿದ್ದರೂ ಸಾಕು ಕುಣಿದು ಕುಪ್ಪಳಿಸುತ್ತಿದ್ದರು! ಆಗ ವಿಜ್ಞಾನ ವಿಷಯವು ಅಷ್ಟೇನೂ ಕಷ್ಟವಾಗುತ್ತಿರಲಿಲ್ಲ.

ಆದರೆ ಈಗೀಗ ವಿಜ್ಞಾನ ವಿಷಯವೂ ಮಕ್ಕಳಿಗೆ ಕಷ್ಟವೆನಿಸುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ವಿಜ್ಞಾನದಲ್ಲಿ ಅಷ್ಟೇನೂ ಸ್ಕೋರ್ ಮಾಡುತ್ತಿಲ್ಲ. ಕೆಲವರು ಉತ್ತಮ ಅಂಕ ಪಡೆಯುತ್ತಿದ್ದಾರಾದರೂ ಇತರೆ ವಿಷಯಗಳಿಗೆ ಹೋಲಿಸಿದರೆ ತೀರಾ ಕಮ್ಮಿ. ಕೆಲ ಪಟ್ಟಣದ ಮಕ್ಕಳೂ ಇರುವ ವಿಶೇಷ ಕೋಚಿಂಗ್, ಟ್ಯೂಷನ್ ಸೌಲಭ್ಯಗಳ ಹೊರತಾಗಿಯೂ ವಿಜ್ಞಾನ ವಿಷಯದಲ್ಲಿ ಕಮ್ಮಿ ಅಂಕ ಪಡೆಯುತ್ತಿದ್ದಾರೆ. ಇಂದು ಮಕ್ಕಳು ಸ್ಟೇಟ್
ಸಿಲೆಬಸ್‌ನಲ್ಲಿ ಓದುತ್ತಿದ್ದರೂ ವಿಜ್ಞಾನವು ಸಿಬಿಎಸ್ಸಿಯ ಕನ್ನಡ ಅನುವಾದದ ಪುಸ್ತಕ!

ಪ್ರಶ್ನೆಪತ್ರಿಕೆಯಲ್ಲಿ ಸಿಬಿಎಸ್ಸಿಯಲ್ಲಿ ಕೇಳುವಂಥ ಕೆಲ ಕ್ಲಿಷ್ಟ ಪ್ರಶ್ನೆಗಳು ಇರುತ್ತವೆ. ಈ ರೀತಿ ಇದ್ದರೆ ಮಕ್ಕಳ ಪರಿಕಲ್ಪನಾತ್ಮಕ ಗ್ರಹಿಕೆಯನ್ನು ತಿಳಿಯಬಹುದು ಹಾಗೂ ಅವರ ಅನ್ವಯಿಕ ಜ್ಞಾನದ ಒರೆಹಚ್ಚುವಿಕೆಗೆ ಅದು ಸಹಾಯಕ ಆಗಬಹುದು. ಆದರೆ ಮಕ್ಕಳು ಇವನ್ನು ಉತ್ತರಿಸಲು ಎಡವಿರುವುದು ಹಿಂದಿನ ವರ್ಷಗಳ ವಿಜ್ಞಾನ ಫಲಿತಾಂಶವನ್ನು ನೋಡಿದರೆ ತಿಳಿಯುತ್ತದೆ. ಮಿಕ್ಕ ವಿಷಯ ಗಳಲ್ಲಿ ನೂರಕ್ಕೆ ನೂರು ಅಂಕ ತೆಗೆದಿರುವ, ಆದರೆ ವಿಜ್ಞಾನದಲ್ಲಿ ಸ್ಕೋರ್ ಕಡಿಮೆ ಆಗಿರುವ ಮಕ್ಕಳೂ ಇದ್ದಾರೆ.

ಪಿಯುಸಿಯಲ್ಲಿ ವಿಜ್ಞಾನ ವಿಷಯದ ಆಯ್ಕೆಯಲ್ಲಿ ಮಕ್ಕಳು ಅದರಲ್ಲೂ ಗ್ರಾಮೀಣ ಮಕ್ಕಳು ಹಿಂದೇಟು ಹಾಕುತ್ತಿರುವುದು ಏಕೆಂದು ಹಲವರನ್ನು ಕೇಳಿದಾಗ ಅವರು ಕೊಟ್ಟ ಕಾರಣಗಳು ಇಂತಿವೆ: ಗಣಿತ, ವಿಜ್ಞಾನ ವಿಷಯಗಳಲ್ಲಿ ಅಮೂರ್ತ ಪರಿಕಲ್ಪನೆಗಳು ಹೆಚ್ಚಿರುತ್ತವೆ. ಇದರಿಂದ ಮಕ್ಕಳಿಗೆ
ಈ ವಿಷಯಗಳು ಕಷ್ಟ ಎಂಬ ಭಾವನೆ ಬಾರದಂತೆ ನೋಡಿಕೊಳ್ಳಬೇಕು. ಇವನ್ನು ಪ್ರಾಥಮಿಕ ಹಂತದಿಂದಲೂ ಅರ್ಥೈಸಲು ಪ್ರಯತ್ನಿಸಬೇಕು. ಅನುಭವಾತ್ಮಕ ಕಲಿಕೆಗೆ ಚಿಕ್ಕಂದಿನಿಂದಲೂ ಒತ್ತು ನೀಡಿ ಈ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಹೆಚ್ಚೆಚ್ಚು ಪ್ರಾಕ್ಟೀಸ್ ಮಾಡಿಸಿ ಈ ವಿಷಯ
ಗಳನ್ನು ಮನದಟ್ಟು ಮಾಡಿಸಬೇಕು. ಹಾಗಾದಲ್ಲಿ ಮಾತ್ರ ಮುಂದಿನ ತರಗತಿಗಳಲ್ಲಿ ಈ ವಿಷಯಗಳು ಚೆನ್ನಾಗಿ ಅರ್ಥವಾಗುತ್ತವೆ.

ನಮ್ಮ ಪಠ್ಯಕ್ರಮವು ಸುರುಳಿಯಾಕಾರದ ವಿಧಾನ, ಅಂದರೆ ಚಿಕ್ಕ ಪರಿಕಲ್ಪನೆಯಿಂದ ದೊಡ್ಡ ಪರಿಕಲ್ಪನೆಯ ಕಡೆಗೆ ಅದು ಸಾಗುವುದರಿಂದ ಚಿಕ್ಕ ತರಗತಿಗಳಲ್ಲೇ ಮೂಲ ಪರಿಕಲ್ಪನೆಗಳನ್ನು ಕಲಿಸಬೇಕು. ಇವನ್ನು ಕಲಿಯದೇ ಮುಂದಿನ ಹಂತಕ್ಕೆ ಹೋಗಿ ಅಲ್ಲಿ ಕಲಿಸುವುದೆಂದರೆ ಮಡಕೆ ಮಾಡಲು ಬಾರದವನಿಗೆ ಗುಡಾಣ ಮಾಡಲು ಕೊಟ್ಟಂತೆ ಆಗುತ್ತದೆ ಅಷ್ಟೇ! ಇಂದು ಸರಕಾರಿ ಕಾಲೇಜುಗಳಲ್ಲೂ ಖಾಸಗಿ ಸಂಸ್ಥೆಗಳಲ್ಲಿರುವಂತೆ ಉತ್ತಮ ಪಾಠ-ಪ್ರವಚನಗಳು ನಡೆಯುತ್ತಿವೆ. ಆದಾಗ್ಯೂ ಅಲ್ಲಿ ಸಿಗುವ ಕೋಚಿಂಗ್ ಬಹುತೇಕರು ಬಯಸುವ ನೀಟ್, ಜೆಇಇ, ಸಿಇಟಿ ಪರೀಕ್ಷೆಯಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಕಾಗುವುದಿಲ್ಲ. ಇದಕ್ಕಾಗಿ ಅವರು ಖಾಸಗಿ ಕಾಲೇಜ್ ಅಥವಾ ಕೋಚಿಂಗ್ ಸೆಂಟರ್‌ಗಳನ್ನು ಸೇರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಇದಕ್ಕೆ ಹೆಚ್ಚು ಹಣ ಕೊಡ ಬೇಕಾಗುತ್ತದೆ. ಆದರೆ ಅಷ್ಟು ಹಣ ಕೊಡುವಷ್ಟು ತಾವು ಸಿರಿವಂತರಲ್ಲ ಎಂದು ಭಾವಿಸಿ ಯಾವುದಾದರೂ ಒಂದು ಡಿಗ್ರಿ
ಪಡೆದರಾಯ್ತು ಎಂದುಕೊಂಡು ವಿಜ್ಞಾನ ಬಿಟ್ಟು ಬೇರೆ ಕೋರ್ಸ್ ಸೇರುತ್ತಾರೆ. ಹಲವರು ತಾಂತ್ರಿಕವಾಗಿ ಉತ್ತಮ ಕೌಶಲ ಹೊಂದಿರುತ್ತಾರೆ. ಇಂಥವರು ಟೆಕ್ನಿಕಲ್ ಕೋರ್ಸ್ ಓದಲು ಸಮರ್ಥ ರಾಗಿರುತ್ತಾರೆ. ಇಲ್ಲಿನ ದಾಖಲಾತಿಗೆ ಸರಕಾರಿ ಕಾಲೇಜು ಗಳಲ್ಲಿ, ಹತ್ತನೇ ತರಗತಿಯ ವಿಜ್ಞಾನ, ಗಣಿತ ವಿಷಯದ ಅಂಕ ಗಳ ಸರಾಸರಿಯ ಆಧಾರದ ಮೇಲೆ ಸೀಟನ್ನು ಕೊಡಲಾಗುತ್ತದೆ. ಆದರೆ ಅಲ್ಲಿ ಮಕ್ಕಳಿಗೆ ಇದರ ಬಗ್ಗೆ ಜ್ಞಾನ ಇರದೇ ಒಟ್ಟಾರೆ ಅಂಕಗಳ ಮೇಲೆ ಗಮನ ಹರಿಸುತ್ತಾರೆಯೇ ವಿನಾ ಈ ವಿಷಯಗಳಿಗೆ ಹೆಚ್ಚಿನ ಆದ್ಯತೆ ಕೊಡುವುದಿಲ್ಲ.

ಪರೀಕ್ಷೆ ಮುಗಿದು ಮುಂದೆ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಹೋದಾಗ ಇವರಿಗೆ ಈ ವಿಷಯ ಗೊತ್ತಾಗುತ್ತದೆ. ಆದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಗುತ್ತದೆಯಾದರೂ ಶುಲ್ಕ ಭರಿಸುವ ಸಾಮರ್ಥ್ಯ ಇರದೇ ಈ ಕೋರ್ಸ್ ಸೇರದೇ ಹಾಗೆ ಸಿಕ್ಕ ಸಿಕ್ಕ ಕೋರ್ಸ್
ಸೇರುತ್ತಾರೆ. ಆದ್ದರಿಂದ ಮಕ್ಕಳಿಗೆ ಸೂಕ್ತ ಸಮಯದಲ್ಲಿ ಕೆರಿಯರ್ ಕೌನ್ಸಿಲಿಂಗ್ ಮಾಡಿಸಬೇಕು. ಸಾಮಾನ್ಯವಾಗಿ ಹಳ್ಳಿಗಾಡಿನ ಮಕ್ಕಳು ಇಂಗ್ಲಿಷ್ ವಿಷಯ ವೆಂದರೆ ಹೆದರುತ್ತಾರೆ. ಅದರಲ್ಲೂ ಪಿಯುಸಿ ಸೈನ್ಸ್ ಇಂಗ್ಲಿಷ್ ಮೀಡಿಯಂನಲ್ಲಿರುತ್ತದೆ ಎಂದು ತಿಳಿದು ವಿಜ್ಞಾನ ಕೋರ್ಸ್‌ಗೆ ಬಹುತೇಕರು
ಸೇರೋಲ್ಲ!

‘ಕೋರ್ಸಿಗೂ ಭಾಷೆಗೂ ಅಷ್ಟೇನೂ ಸಂಬಂಧ ಇರೋಲ್ಲ, ಇದು ಅಷ್ಟಾಗಿ ಸಮಸ್ಯೆ ಆಗೋಲ್ಲ’ ಎಂದು ಹೇಳಿದರೂ ಪೂರ್ವಗ್ರಹಪೀಡಿತರಾಗಿರುವ ಇಂಥ ವರ ಮನಸ್ಸು ಇದಕ್ಕೆ ಒಪ್ಪೋದಿಲ್ಲ. ಇದರಿಂದಾಗಿ ವಿಜ್ಞಾನ, ಗಣಿತ ವಿಷಯದಲ್ಲಿ ಉತ್ತಮ ಅಂಕ ಪಡೆದವರೂ ವಿಜ್ಞಾನ ವಿಭಾಗಕ್ಕೆ ಸೇರುವುದಿಲ್ಲ. ಇಲ್ಲಿ ಕನ್ನಡ ಮೀಡಿಯಂನಲ್ಲಿ ವಿಜ್ಞಾನದ ಕೋರ್ಸ್ ಇದ್ದಿದ್ದರೆ ಇಂಥವರು ಸೇರುತಿ ದ್ದರೇನೋ? ಇಂದು ಪಿಯುಸಿ ಸೈನ್ಸ್ ಎಂದಾಕ್ಷಣ ಎಲ್ಲರೂ ಬರೀ ನೀಟ್, ಜೆಇಇ ಇದರ ಬಗ್ಗೆಯೇ ಕೇಳುತ್ತಾರೆ. ತಮ್ಮ ಮಕ್ಕಳು ಹುಟ್ಟಿರುವುದೇ ಡಾಕ್ಟರ್, ಎಂಜಿನಿಯರ್ ಆಗಲು ಎಂದು ಕೊಂಡು ಅವರ ಮೇಲೆ ಒತ್ತಡ ಹೇರುತ್ತಾರೆ. ಈಗೀಗ ಬಹುತೇಕರು ‘ನೀಟ್ ನೀಟ್’ ಎಂದು ಕನವರಿಸುತ್ತಿದ್ದಾರೆ.

ಎಲ್ಲಿಯವರೆಗೂ ಇದರ ಒತ್ತಡ ಸೃಷ್ಟಿಯಾಗಿದೆಯೆಂದರೆ ಇತ್ತೀಚೆಗೆ ಖಾಸಗಿ ಪ್ರೈಮರಿ ಶಾಲೆಗಳವರೂ ‘ನೀಟ್ ಕೋಚಿಂಗ್ ಅನ್ನು ಈಗಿನಿಂದಲೇ ಕೊಡುತ್ತೇವೆ’ ಎಂದು ಜಾಹೀರಾತು ಕೊಡುತ್ತಾ ತಮ್ಮ ಶಾಲೆಯ ಮಕ್ಕಳ ಸಂಖ್ಯೆ ಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ! ಆದರೆ ವಿಜ್ಞಾನ ವಿಷಯ ಓದಿ ಮುಂದೆ ಅನೇಕ ಕೋರ್ಸ್‌ಗಳನ್ನು ನಾವು ಓದಬಹುದು. ಕಡಿಮೆ ಖರ್ಚಿನಲ್ಲಿ ಶುದ್ಧ ವಿಜ್ಞಾನವನ್ನು ಡಿಗ್ರಿಯಲ್ಲಿ ಓದಿದರೆ ಉತ್ತಮ ಅವಕಾಶಗಳು ಇವೆ ಎಂಬುದನ್ನು ಮಕ್ಕಳಿಗೆ ತಿಳಿಸುತ್ತಿಲ್ಲ. ಇಂದು ಬರೀ ಅನ್ವಯಿಕ ವಿಜ್ಞಾನ ಓದಿಸುವತ್ತ ನಮ್ಮ ಗುರಿಯಿದೆ. ಆದ್ದರಿಂದ ಮಕ್ಕಳಿಗೆ ಇರುವ ಆಸಕ್ತಿಗನು
ಸಾರವಾಗಿ ಓದಲು ಅವಕಾಶ ಮಾಡಿಕೊಡಬೇಕು.

ಇಂದು ವಿಜ್ಞಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಶಿಕ್ಷಕರೂ ಮಕ್ಕಳನ್ನು ಅಣಿಗೊಳಿಸಬೇಕು. ಅವರೂ ವಿಷಯಜ್ಞಾನ ಹಾಗೂ ಬೋಧನೆಯಲ್ಲಿ ಅಪ್‌ಡೇಟ್ ಆದರೆ ಮಕ್ಕಳೂ ಬದಲಾಗುತ್ತಾರೆ. ಶಿಕ್ಷಕರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿ ಮಕ್ಕಳಿಗೆ ಗಣಿತ, ವಿಜ್ಞಾನದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು.

(ಲೇಖಕರು ಪ್ರೌಢಶಾಲಾ ಶಿಕ್ಷಕರು)