ವೀಕೆಂಡ್ ವಿತ್ ಮೋಹನ್
camohanbn@gmail.com
ಆರ್ಥಿಕ ಸಲಹಾ ಸಮಿತಿ ನೀಡಿರುವ ವರದಿಯ ಪ್ರಕಾರ ೧೯೫೦ ರಿಂದ ೨೦೧೫ರ ನಡುವೆ ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಜನಸಂಖ್ಯೆ
ಯ ಅನುಪಾತದಲ್ಲಿ, ಮುಸಲ್ಮಾನರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡು ಬಂದಿದೆ. ೬೫ ವರ್ಷಗಳಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಶೇ.೪೩.೧೫ ರಷ್ಟು ಏರಿಕೆಯಾಗಿದ್ದರೆ, ಹಿಂದೂಗಳ ಜನಸಂಖ್ಯೆಯಲ್ಲಿ ಶೇ.೭.೮೨ರಷ್ಟು ಮಾತ್ರ ಏರಿಕೆಯಾಗಿದೆ.
೧೯೫೦ ರಲ್ಲಿ ಶೇ.೮೪.೬೮ರಷ್ಟು ಇದ್ದಂತಹ ಹಿಂದೂಗಳ ಸಂಖ್ಯೆ ೨೦೧೫ ರಲ್ಲಿ ಶೇ. ೭೮.೦೬ ಕ್ಕೆ ಕುಸಿದಿದೆ, ಆದರೆ ೧೯೫೦ ರಲ್ಲಿ ಶೇ. ೯.೮೪ ರಷ್ಟಿದ್ದ ಮುಸ್ಲಿಮರ ಜನಸಂಖ್ಯೆ ೨೦೧೫ ರಲ್ಲಿ ಶೇ. ೧೪.೦೯ಕ್ಕೆ ಏರಿಕೆಯಾಗಿದೆ. ಹಿಂದೂಗಳಿಗಿಂತ ಮುಸ್ಲಿಮರ ಜನಸಂಖ್ಯೆ ಅತ್ಯಂತ ವೇಗವಾಗಿ ಏರಿಕೆಯಾಗಿರು ವುದು ಕಂಡುಬಂದಿದೆ. ರಾಜ್ಯವಾರು ಗಮನಿಸುವುದಾದರೆ ಕಾಶ್ಮೀರದಲ್ಲಿ ಅತ್ಯಂತ ಹೆಚ್ಚಿನ ಏರಿಕೆ ಕಂಡುಬಂದಿದ್ದು, ನಂತರ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಮುಸಲ್ಮಾನರ ಜನಸಂಖ್ಯೆ ಏರಿಕೆಯಾಗಿದೆ.
ಕೇರಳದ ಮಲ್ಲಪುರಂ ಜಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿರುವುದು ಕಂಡು ಬಂದಿದೆ. ೬೫ ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇ. ೪೩ರಷ್ಟು ಏರಿಕೆಯಾಗಿದ್ದರೆ, ಹಿಂದೂಗಳ ಜನಸಂಖ್ಯೆಯಲ್ಲಿ ಶೇ. ೭.೮೨ ರಷ್ಟು ಇಳಿಕೆಯಾಗಿದೆ. ೧೯೪೭ರಲ್ಲಿ ಅಖಂಡ ಭಾರತ ವಿಭಜನೆಯಾದಾಗ ಮುಸಲ್ಮಾನರಿಗೆಂದೇ ಪೂರ್ವ ಪಾಕಿಸ್ತಾನ ಹಾಗು ಪಶ್ಚಿಮ ಪಾಕಿಸ್ತಾನ ದೇಶಗಳು ಹುಟ್ಟಿಕೊಂಡವ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದಾಗ ಬಹುತೇಕ ಮುಸಲ್ಮಾನರು ಭಾರತವನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದರು. ಧರ್ಮದ ಆಧಾರದ ಮೇಲೆ ಮುಸಲ್ಮಾನ ರಿಗೆ ಪ್ರತ್ಯೇಕ ದೇಶವನ್ನು ನೀಡಿದ ಮೇಲೆ ಭಾರತ ಹಿಂದೂ ರಾಷ್ಟ್ರವೆಂದು ಜಗತ್ತಿನ ಮುಂದೆ ಅಂದೇ ಹೇಳಿಕೊಳ್ಳಬಹುದಿತ್ತು.
ಆದರೆ ಕಾಲಕ್ರಮೇಣ ಭಾರತದಲ್ಲಿ ಅಳಿದುಳಿದಿದ್ದ ಮುಸಲ್ಮಾನರ ಓಲೈಕೆಯ ರಾಜಕೀಯದ ಪರಿಣಾಮ ಭಾರತವು ಜಾತ್ಯತೀತ ರಾಷ್ಟ್ರವಾಯಿತು. ಇದಕ್ಕೆ ಪುಷ್ಟಿ ನೀಡುವಂತೆ ಭಾರತದ ಸಂವಿದಾನದಲ್ಲಿ ಜಾತ್ಯತೀತವೆಂಬ ಪದವನ್ನೂ ಸೇರಿಸಲಾಯಿತು. ಆ ಸಮಯದಲ್ಲಿ ಕಮ್ಯುನಿ ದೇಶವಾಗಿದ್ದ ರಷ್ಯಾ ಭಾರತದೊಳಗಿನ ಆಂತರಿಕ ಶತ್ರುಗಳಿಗೆ ದೊಡ್ಡ ದೊಡ್ಡ ಸೂಟಕೇಸ್ ಗಳ ಮೂಲಕ ಹಣವನ್ನು ವರ್ಗಾಯಿಸಿ ರಾಷ್ಟ್ರ ಮಟ್ಟದಲ್ಲಿ, ಜಾತ್ಯತೀತವೆಂಬ ಪದವನ್ನು ಹೆಚ್ಚಾಗಿ ಮುಸಲ್ಮಾನರ ಹಣೆಯ ಮೇಲೆ ಅಂಟಿಸುವಲ್ಲಿ ಯಶಸ್ವಿಯಾಯಿತು. ಅಂದಿನಿಂದ ಇಲ್ಲಿಯವರೆಗೂ ಜಾತ್ಯತೀತವೆಂದರೆ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರಿಗೆ ನೆನಪಾಗುವುದು ಕೇವಲ ಮುಸಲ್ಮಾನರು. ಅವರ ವಿಚಾರ ಬಂತೆಂದರೆ ಸಾಕು ಜಾತ್ಯತೀತವೆಂಬ ಪದಬಳಕೆ ಸಾಮಾನ್ಯವಾಗಿಬಿಟ್ಟಿದೆ.
ಕಾಂಗ್ರೆಸ್‌ನ ಮುಸಲ್ಮಾನರ ಮತಬ್ಯಾಂಕಿನ ರಾಜಕೀಯದ ನೆರಳಿನಲ್ಲಿ ಜಾತ್ಯತೀತವೆಂಬ ಪದ ತನ್ನ ನೈಜ ಅರ್ಥವನ್ನೇ ಕಳೆದುಕೊಂಡಿದೆ. ಜಾತಿಯನ್ನು ಮೀರಿ ನಾಯಕನಾಗಬೇಕಿರುವ ರಾಜಕೀಯ ನಾಯಕರು, ತಮ್ಮ ರಾಜಕೀಯ ಜೀವನದಲ್ಲಿ ಜಾತಿ ರಾಜಕೀಯವನ್ನೇ ಮಾಡುತ್ತಾ ಬಂದಿದ್ದಾರೆ. ದಿನ ಕಳೆದಂತೆ ಜಾತ್ಯತೀತತೆಯ ಜತೆಗೆ ಅಂಟಿಕೊಂಡಂತಹ ಮತ್ತೊಂದು ಓಲೈಕೆಯ ಪದ ಅಲ್ಪಸಂಖ್ಯಾತ. ಮೊಟ್ಟಮೊದಲ ಬಾರಿಗೆ ಸಂವಿಧಾನದ ಕರುಡು ಪ್ರತಿಯ ಚರ್ಚೆ ಬಂದಾಗ ಜಾತ್ಯತೀತವೆಂಬ ಪದವನ್ನು ಸೇರಿಸಬೇಕೋ ಬೇಡವೋ ಎಂಬ ಹತ್ತಾರು ಚರ್ಚೆಗಳು ನಡೆಡಿದ್ದವು.
ಹಲವರು ಧರ್ಮದ ಆಧಾರದ ಮೇಲೆ ವಿಭಜನೆಯಾದ ರಾಷ್ಟ್ರದ ಸಂವಿದಾನದಲ್ಲಿ ಜಾತ್ಯತೀತವೆಂಬ ಪದವನ್ನು ಸೇರಿಸುವುದು ಸೂಕ್ತವಲ್ಲವೆಂಬ ನಿರ್ಧಾರಕ್ಕೆ ಬಂದಿದ್ದರು. ಭಾರತ ದೇಶವು ಜಾತ್ಯತೀತತೆಯ ತತ್ವಗಳಿಗೆ ಬದ್ದವಾಗಿ ಆಡಳಿತ ನಡೆಸಬೇಕೇ ಹೊರತು ಅದನ್ನು ಸಂವಿದಾನದಲ್ಲಿ ತರುವ ಅವಶ್ಯಕತೆಯಿಲ್ಲ ವೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಬ್ರಿಟಿಷರ ವಿರುದ್ದದ ಹೋರಾಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಎಂದೂ ಸಹ ಜಾತಿಯ ಆಧಾರದ ಮೇಲೆ ಹೋರಾಟ ಮಾಡಲಿಲ್ಲ. ಎಲ್ಲರಿಗೂ ರಾಷ್ಟ್ರೀಯವಾದವೇ ಅಂತಿಮವಾಗಿತ್ತು. ಭಾರತದ ಸ್ವಾತಂತ್ರ್ಯಕ್ಕಾಗಿ ಏನು ಬೇಕಾದರೂ ಮಾಡ ಬಯಸುವಂತಹ ಮನೋಭಾವನೆಯಿತ್ತು.
ಈ ರೀತಿಯ ಇತಿಹಾಸವಿರುವ ಭಾರತದ ಸಂವಿಧಾನದಲ್ಲಿ ೧೯೭೬ ರಲ್ಲಿ ಇಂದಿರಾ ಗಾಂಧಿ ಜಾತ್ಯತೀತವೆಂಬ ಪದವನ್ನು ಸಂವಿಧಾನದ ಮುನ್ನುಡಿಯಲ್ಲಿ
ಸೇರಿಸುವ ಮೂಲಕ ಸಂವಿಧಾನದ ಜನಕರು ವಿರೋಧಿಸಿದ್ದ ಕೆಲಸವನ್ನು ಮಾಡಿದ್ದರು. ಇಂದಿರಾಗಾಂಧಿ ಈ ಪದವನ್ನು ಸೇರಿಸಿದ್ದೇ ತಡ ಕಾಂಗ್ರೆಸ್‌ನ ನಾಯಕರುಗಳಿಗೆ ಮುಸಲ್ಮಾನರನ್ನು ಓಲೈಸಲು ಒಳ್ಳೆಯ ಅಸವೊಂದು ಸಿಕ್ಕಂತಾಯಿತು. ಅಂದಿನಿಂದ ಇಂದಿನವರೆಗೂ ಮುಸಲ್ಮಾನರೆಂದರೆ ಸಾಕು
ಇವರಿಗೆ ಜಾತ್ಯತೀತತೆ ನೆನಪಾಗುತ್ತದೆ. ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿಯನ್ನು ಮುಸಲ್ಮಾನರ ಹಣೆಗೆ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಜಾತ್ಯತೀತತೆಯೆಂದರೆ ಜಾತಿ ಮತಗಳೆಂಬ ಬೇಧ ಮರೆತು ಎಲ್ಲರನ್ನೂ ಸಮನಾಗಿ ಕಾಣುವುದು. ಆದರೆ ನಮ್ಮ ದೇಶದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ
ನಡೆಯುತ್ತಿರುವ ರಾಜಕೀಯವೇ ಬೇರೆಯಾಗಿದೆ. ಜಾತ್ಯತೀತತೆಯನ್ನು ಮುಂದಿಟ್ಟುಕೊಂಡು ನೌಟಂಕಿ ಮಾಡುವ ಕಮ್ಯುನಿ ಮತ್ತು ಕಾಂಗ್ರೆಸ್ಸಿನ ತವರುಮನೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ. ಇಲ್ಲಿಂದ ಹೊರಬರುವ ಬಹುತೇಕರು ಜಾತ್ಯತೀತತೆಯ ಹೆಸರಿನಲ್ಲಿ ದೇಶದಾದ್ಯಂತ ರಾಜಕೀಯ ಮಾಡುತ್ತಾರೆ ಕೆಲವೇ ಕೆಲವರು ಮಾತ್ರ ನಿಜವಾದ ಜಾತ್ಯತೀತತೆಯ ಪರಿಕಲ್ಪನೆಯನ್ನು ಕಲಿತು ಹೊರಬರುತ್ತಾರೆ. ಕಾಶ್ಮೀರದಲ್ಲಿ ಪಂಡಿತರ ಕಗ್ಗೊಲೆಗ
ಳಾದಾಗ ಇವರಿಗೆ ಜಾತ್ಯತೀತತೆ ನೆನಪಾಗುವುದಿಲ್ಲ.
ಸಂವಿದಾನದಲ್ಲಿ ಜಾತ್ಯತೀತತೆಯೆಂಬ ಪದವನ್ನು ಕೇವಲ ಮುಸಲ್ಮಾನರಿಗೋಸ್ಕರವೇ ಸೇರಿಸಲಾಯಿತೆಂಬಂತೆ ಮಾತನಾಡುತ್ತಾರೆ. ಮುಸಲ್ಮಾನ ಸಮುದಾಯವನ್ನು ಪ್ರತಿನಿಧಿಸುವ ನಾಯಕರನ್ನು ಮಾತನಾಡಿಸಿದರೆ ತಮಗೆ ಭಾರತದ ಸಂವಿಧಾನಕ್ಕಿಂತಲೂ ಇಸ್ಲಾಂ ಧರ್ಮವೇ ದೊಡ್ಡದೆಂದು
ಹೇಳುತ್ತಾರೆ. ಭಾರತದ ಸಂವಿಧಾನವನ್ನು ಗೌರವಿಸದೇ ತಮ್ಮ ಧರ್ಮವನ್ನು ಹೆಚ್ಚು ಗೌರವಿಸುತ್ತಾರೆ ಎಂದರೆ ಅವರಿಗ್ಯಾಕೆ ಜಾತ್ಯತೀತವೆಂಬ ಆಶ್ರಯ ನೀಡಬೇಕೆಂಬುದು ಹಲವರ ಪ್ರಶ್ನೆ. ಜಾತ್ಯತೀತದ ಅಡಿಯಲ್ಲಿ ಅಂತಹವರಿಗೆ ರಕ್ಷಣೆ ನೀಡಬೇಕೆಂಬುದು ಕೆಲವರ ಮೊಂಡು ವಾದ.
ಹಲವು ನಾಯಕರು ತಮ್ಮನ್ನು ಜಾತ್ಯತೀತ ನಾಯಕನೆಂದು ಹೇಳಿಕೊಂಡು ಸಮಾಜದಲ್ಲಿ ಓಡಾಡುತ್ತಿರುತ್ತಾರೆ. ಆದರೆ ಇವರ‍್ಯಾರೂ ಸಹ ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಸಹಾಯಕ್ಕೆ ಬರುವುದಿಲ್ಲ ಆದರೆ ಮುಸಲ್ಮಾನರಿಗೆ ಅನ್ಯಾಯ ವಾದರೆ ಸಹಾಯ ಮಾಡಲು ಮುಂದಿನ ಸಾಲಿನಲ್ಲಿ ನಿಂತಿರು ತ್ತಾರೆ. ವಿಪರ್ಯಾಸ ನೋಡಿ, ಜಾತಿಯನ್ನು ಮೀರಿದ ದೇಶವನ್ನು ಕಟ್ಟಲು ಬಳಕೆಯಾಗಬೇಕಿದ್ದ ಪದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಕಾರಣವಾಯಿತು.
ಜಾತ್ಯತೀತವೆಂಬ ಪದ ಮಹಿಮೆ ಪ್ರತಿನಿತ್ಯವೂ ದೇಶದಲ್ಲಿ ಹಲವು ವಿಚಾರಗಳ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಜಾತ್ಯತೀತತೆಯ ಹೆಸರಿನಲ್ಲಿ ಹಲವು ವರ್ಷಗಳ ಕಾಲ ಭಾರತದ ರಾಷ್ಟ್ರೀಯತೆ ಸೊರಗಿದ್ದಂತೂ ನಿಜ. ರಾಷ್ಟ್ರೀಯ ಸ್ವಯಂ ಸೇವಕ ಸಂಘವೇನಾದರೂ ದೇಶದಲ್ಲಿ ಇಲ್ಲದ್ದಿದ್ದರೆ ಕಮ್ಯುನಿಷ್ಟರು ಹಾಗು ಕಾಂಗ್ರೆಸ್ಸಿನವರು ಜಾತ್ಯತೀತತೆಯೆಂಬ ಹೆಸರಿನಡಿ ದೇಶಾದ್ಯಂತ್ಯ ಅದೆಷ್ಟು ಅನಾಹುತಗಳನ್ನು ಸೃಷ್ಟಿಸುತ್ತಿದ್ದರೋ ದೇವರೇ ಬಲ್ಲ. ಒಂದು ಮಾತಂತೂ ನಿಜ ಈ ಒಂದು ಪದ ಮುಸಲ್ಮಾನರ ಒಗ್ಗಟ್ಟನ್ನು ಹೆಚ್ಚು ಮಾಡಿದೆ. ದೇಶದಲ್ಲಿನ ಜಾತಿ ಹಾಗು ಧರ್ಮಗಳನ್ನು ಒಂದುಗೂಡಿಸ ಬೇಕಾದ ಜಾತ್ಯತೀತತೆಯೆಂಬ ಪದ ಕಾಂಗ್ರೆಸ್ಸಿಗರ ಕೈಯಲ್ಲಿ ಸಿಕ್ಕು ದೇಶ ವಿಭಜನೆಯತ್ತ ಸಾಗುತ್ತಿದೆ.
ಸ್ಯಾಮ್ ಪಿತ್ರೋಡ ಭಾರತದ ನಾಲ್ಕು ದಿಕ್ಕುಗಳಲ್ಲಿನ ಜನರನ್ನು ಅರಬ್ಬರು,ಪಾಶ್ಚಿಮಾತ್ಯರು, ಚೀನಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸುತ್ತಾರೆ. ಪಿತ್ರೋಡ ಹೇಳಿಕೆ ಭಾರತವನ್ನು ವಿಭಜಿಸುವ ಕಾಂಗ್ರೆಸ್ಸಿನ ಮನಸ್ಥಿತಿಯ ಅನಾವರಣ. ಹಿಂದೂಗಳ ಮನಸಿನಲ್ಲಿ ಕಾಂಗ್ರೆಸ್ಸಿಗರ ಜಾತ್ಯತೀತ ರಾಜಕೀಯದ ಹಿಂದಿರುವ ರಹಸ್ಯ ಸ್ಪಷ್ಟವಾಗಬೇಕಿದೆ. ಕೇವಲ ಮುಸಲ್ಮಾನರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ರಹಸ್ಯವೂ ಸ್ಪಷ್ಟವಾಗ ಬೇಕಿದೆ.
೨೦೦೪ ಹಾಗು ೨೦೦೯ ರ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಜಾತ್ಯತೀತತೆಯ ಆದಾರದ ಮೇಲೆಯೇ ಗೆದ್ದದ್ದು ದೇಶದಾದ್ಯಂತ್ಯ ಜಾತಿಗಳನ್ನು ವಿಭಜಿಸಿ ಮುಸಲ್ಮಾನರನ್ನು ಒಂದೆಡೆ ಸೇರಿಸಿ ತಮ್ಮ ಓಲೈಕೆ ರಾಜಕೀಯದ ಮೂಲಕ ಮತಬ್ಯಾಂಕನ್ನು ಗಟ್ಟಿ ಮಾಡಿಕೊಂಡಿದ್ದರು. ಓದುವ ವಯಸ್ಸಿನಲ್ಲಿ ವಿದ್ಯಾರ್ಥಿಗಳ ತಲೆಗೆ ಕಮ್ಯುನಿಷ್ಟರು ತುಂಬುತ್ತಿದ್ದ ನಕಲಿ ಜಾತ್ಯತೀತತೆಯ ಸಾರವು ಇಂದು ಜಗಜ್ಜಾಹೀರವಾಗಿದೆ. ಅದರ ಫಲವಾಗಿ ಜವಾಹರಲಾಲ್
ನೆಹರು ವಿಶ್ವವಿದ್ಯಾಲಯ ದಲ್ಲಿನ ಹಲವು ವಿದ್ಯಾರ್ಥಿಗಳು ದೇಶದಲ್ಲಿ ಒಂದು ಧರ್ಮದವರಿಗೆ ತೊಂದರೆಯಾದರೆ ಸಾಕು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದರು.
ಹಲವು ಸುಳ್ಳುಗಳನ್ನು ನಿಜವೆಂದು ಸಾಬೀತುಪಡಿಸುವ ಹುನ್ನಾರ ಗಳು ನಡೆದವು. ದೇಶದಾದ್ಯಂತ್ಯ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ದದ ಪ್ರತಿಭಟನೆಯಲ್ಲಿ ಮತ್ತದೇ ಜಾತ್ಯತೀತ ಎಂಬ ಪದವನ್ನಿಟ್ಟುಕೊಂಡು ಸುಳ್ಳುಗಳನ್ನು ಹೇಳಲಾಯಿತು. ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳ ತಲೆಯಲ್ಲಿ
ಜಾತ್ಯತೀತವೆಂದರೆ ಕೇವಲ ಮುಸಲ್ಮಾನರ ರಕ್ಷಣೆಯೆಂಬ ವಿಚಾರವನ್ನು ತುಂಬಲಾಯಿತು. ಬ್ರಿಟಿಷರು ಜಾತಿ ಹಾಗು ಧರ್ಮಗಳ ಆಧಾರದ ಮೇಲೆ
ದೇಶವನ್ನು ವಿಭಜನೆಯನ್ನು ಮಾಡಿ ನೂರಾರು ವರ್ಷಗಳ ಕಾಲ ಆಡಳಿತ ನಡೆಸಿದ ಮಾದರಿಯಲ್ಲಿ, ಸ್ವಾತಂತ್ರ್ಯಾನಂತರ ಭಾರತದಲ್ಲಿ ಜಾತ್ಯತೀತತೆಯ ಸೋಗಿನಡಿ ಮುಸಲ್ಮಾನರ ಓಲೈಕೆ ಮಾಡಲಾಯಿತು. ಮುಸಲ್ಮಾನರನ್ನು ರಕ್ಷಿಸುವ ಸಲುವಾಗಿಯೇ ಕಾಂಗ್ರೆಸ್ ಪಕ್ಷವು ಹುಟ್ಟಿಕೊಂಡಂತೆ ಈಗಲೂ ಕಾಂಗ್ರೆಸ್ಸಿನ ನಾಯಕರು ಮಾತನಾಡುತ್ತಾರೆ.
ದೇಶದಲ್ಲಿ ಸುಮಾರು ಇಪ್ಪತ್ತು ಕೋಟಿ ಜನಸಂಖ್ಯೆಯಿರುವ ಮುಸಲ್ಮಾನರು ಯಾವ ದಿಕ್ಕಿನಿಂದಲೂ ಅಲ್ಪಸಂಖ್ಯಾತರಂತೆ ಕಾಣಿಸುವುದಿಲ್ಲ, ಮುಸಲ್ಮಾನರು ತಮ್ಮ ಧರ್ಮದಲ್ಲಿ ಮಾಡುವ ಎಲ್ಲಾ ಆಚರಣೆಗಳೂ ಸರಿಯಾಗಿದೆಯೆಂದೇ ಕಮ್ಯುನಿಷ್ಟರು ಹಾಗು ಕಾಂಗ್ರೆಸ್ಸಿಗರು ಹೇಳುತ್ತಾರೆ ಆದರೆ
ಹಿಂದೂ ಧರ್ಮದ ಆಚರಣೆಗಳು ಮಾತ್ರ ಇವರ ಕಣ್ಣು ಕುಕ್ಕುತ್ತಿರುತ್ತದೆ. ಮುಸಲ್ಮಾನರನ್ನು ಬೆಂಬಲಿಸುವ ಹಲವು ಮಾಧ್ಯಮಗಳ ಕಥೆಯೂ ಇಷ್ಟೇ. ಬಹಿರಂಗವಾಗಿ ತಾವು ಮಾಡುತ್ತಿರುವುದು ತಪ್ಪೆಂದು ತಿಳಿದ್ದಿದ್ದರೂಅವರ ಪರವಾಗಿ ನಿಲ್ಲುತ್ತವೆ. ಜಾತ್ಯತೀತವೆಂಬ ಪದಬಳಕೆಯ ಮೂಲಕ ಕಾಂಗ್ರೆಸ್ ಪಕ್ಷ ಕೇವಲ ಮುಸಲ್ಮಾನರ ಓಲೈಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ.
ಸಂವಿದಾನದಡಿಯಲ್ಲಿ ಕೇವಲ ಮುಸಲ್ಮಾನರ ಓಲೈಕೆಗಾಗಿ ಈ ಪದವನ್ನು ಸೇರಿಸಲಾಯಿತೇ ? ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ಶುರುವಾಗಿದೆ. ಕಳೆದ
ಕೆಲ ದಶಕಗಳ ಕಾಂಗ್ರೆಸ್ಸಿನ ಓಲೈಕೆ ರಾಜಕೀಯವನ್ನು ಗಮನಿಸಿದಾಗ ಮತ್ತಷ್ಟು ಸ್ಪಷ್ಟವಾಗುತ್ತದೆ. ಜಾತಿ, ಮತಗಳ ಎಲ್ಲಾ ಮೀರಿ ರಚಿಸಿದಂತಹ ಸಂವಿಧಾನವನ್ನು ಕೇವಲ ಒಂದು ಧರ್ಮದ ಓಲೈಕೆಗಾಗಿ ಬಳಸಲಾಗುತ್ತಿರುವುದು ಎದ್ದು ಕಾಣುತ್ತಿದೆ. ಅಲ್ಪಸಂಖ್ಯಾತರಾಗಿರುವ ಜೈನರು, ಪಾರ್ಸಿಗಳು, ಸಿಖ್ಖರ ಬಗ್ಗೆ ಕಾಂಗ್ರೆಸ್ ಪಕ್ಷ ತುಟಿ ಬಿಚ್ಚುವುದಿಲ್ಲ, ನಾಲಿಗೆಯಿಂದ ಬರುವ ಪದಗಳಿಗೂ ಸಮಾಜದಲ್ಲಿರುವ ವಾಸ್ತವಗಳಿಗೂ ಸಂಬಂಧವೇ ಇರುವುದಿಲ್ಲ. ಭಾರತದಲ್ಲಿ ಹಿಂದೂಗಳ ನಂತರ ಅತೀ ಹೆಚ್ಚು ಜನಸಂಖ್ಯೆ ಇರುವ ಮುಸಲ್ಮಾನರನ್ನು ಅಲ್ಪಸಂಖ್ಯಾತರೆನ್ನಲಾಗುತ್ತದೆ.
ಗಲಭೆಕೋರರ ಪರವಾಗಿ ಮಾತನಾಡುವ ಸಂದರ್ಭಗಳಲ್ಲಿ ಜಾತ್ಯತೀತತೆಯೆಂಬ ಪದ ಬಳಸಲಾಗುತ್ತಿದೆ. ಮುಸಲ್ಮಾನರರನ್ನು ಓಲೈಸಲು ಕಾಂಗ್ರೆಸ್ ಸರಕಾರ ನೀಡುವ ಹೆಚ್ಚಿನ ಸವಲತ್ತುಗಳನ್ನು ಬೆಂಬಲಿಸಲು ಜಾತ್ಯಾತೀತ ಮತ್ತು ಅಲ್ಪಸಂಖ್ಯಾತ ಪದಗಳನ್ನು ಬಳಸಲಾಗುತ್ತಿದೆ. ಮುಸಲ್ಮಾನರ ಓಲೈಕೆ ಮತ್ತು ಋಣಸಂದಾಯದ ರಾಜಕೀಯವನ್ನು ಗಮನಿಸಿದಾಗ ಸ್ವತಂತ್ರ ಬಂದು ೭೬ ವರ್ಷಗಳ ಬಳಿಕೆ ಮೂಡುವ ಅತೀ ದೊಡ್ಡ ಪ್ರಶ್ನೆ ಎಂದರೆ ಮುಸಲ್ಮಾನರು ಅಲ್ಪಸಂಖ್ಯಾತರೆ ? ಮುಸಲ್ಮಾನರ ಓಲೈಕೆಗಾಗಿ ಮಾತ್ರ ಜಾತ್ಯತೀತ ಎಂಬ ಪದ ಮೀಸಲಾಗಿದೆಯೆ ?