Sunday, 13th October 2024

ಸೆಕ್ಯುಲರಿಸಂನ ಉದಾರನೀತಿಯೋ ?ಮೂಲಭೂತವಾದವೋ ?

ಪ್ರಸ್ತುತ

ತುರುವೇಕೆರೆ ಪ್ರಸಾದ್

turuvekereprasad@gmail.com

ಕಳೆದ ಶನಿವಾರ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿ ಪ್ರೊ. ಎ.ಷಣ್ಮುಖ ಅವರೊಂದಿಗೆ ಅವರೇ ಬರೆದಿ ರುವ ‘ಭಾರತದಲ್ಲಿ ಸೆಕ್ಯುಲರ್‌ವಾದ ಮತ್ತು ಅದರ ವಿಮರ್ಶೆ’ ಕೃತಿಯ ಕುರಿತು ಮಾತುಕತೆ, ಸಂವಾದ ನಡೆಯಿತು. ಸಂವಾದದಲ್ಲಿ ಭಾಗವಹಿಸಿದ ನಂತರ ಸೆಕ್ಯುಲರಿಸಮ್ ಬಗ್ಗೆ ನನಗಿದ್ದ ಹಲವು ಗೊಂದಲಗಳಿಗೆ ಸ್ಪಷ್ಟ ಉತ್ತರ ಸಿಕ್ಕಿತು.

ಸೆಕ್ಯುಲರಿಸಮ್ ಅನ್ನುವುದನ್ನು ಭಾರತದ ಮಟ್ಟಿಗೆ ಒಂದು ಶ್ರೇಷ್ಠ ಪರಿಕಲ್ಪನೆ ಎಂದು ಭಾವಿಸಿರುವುದಿಂದಲೂ ಮತ್ತು ವಾಸ್ತವವು ಇದಕ್ಕೆ ನೇರಾನೇರ ವ್ಯತಿರಿಕ್ತವಾಗಿರುವುದರಿಂದಲೂ ಪ್ರೊ. ಷಣ್ಮುಖ ಅವರ ಮಾತು ಮತ್ತು ಅಭಿಪ್ರಾಯಗಳ ಒಂದಿಷ್ಟು ಭಾಗಗಳನ್ನು ಅವರದೇ ಅರ್ಥ, ವ್ಯಾಖ್ಯಾನ ಗಳೊಂದಿಗೆ ಇಲ್ಲಿ ನೀಡುತ್ತಿರುವೆ.

೧.ಸೆಕ್ಯುಲರಿಸಂ ಬ್ರಿಟಿಷರ ಎಲ್ಲ ಪಳಯುಳಿಕೆಗಳಂತೆ ಮಾಮೂಲಿ ವಸಾಹತುಶಾಹಿಯ ಬಳುವಳಿ. ಯೂರೋಪಿಯನ್ ದೇಶದ ಪ್ರಾಟಸ್ಟೆಂಟ್ ಥಿಯಾಲಿಜಿಯ ಆಧಾರದ ಮೇಲೆ ಅಲ್ಲಿನ ದೇಶಗಳಲ್ಲಿನ ರಿಲಿಜನ್ನುಗಳ ಮತ್ತು ರಿಲಿಜನ್ನಿನ ಪಂಥಗಳ ನಡುವಿನ ಸಂಘರ್ಷಗಳಿಗೆ ಅಲ್ಲಿನ ಪ್ರಭುತ್ವಗಳು ರೂಪಿಸಿಕೊಂಡ ಒಂದು ಪರಿಹಾರ ರೂಪಕವಾದ ನೀತಿ.

೨.ವ್ಯಕ್ತಿಯೊಬ್ಬ ನಾನು ಸೆಕ್ಯುಲರ್ ಎಂದು (ನಮ್ಮ ರಾಜಕಾರಣಿಗಳಂತೆ) ಹೇಳಿಕೊಳ್ಳಬಾರದು. ಅದು ಅರ್ಥ ವಿಲ್ಲದ್ದು. ಪ್ರಭುತ್ವ ಮಾತ್ರ ಸೆಕ್ಯುಲರ್ ಆಗಿರುತ್ತದೆ. ಸೆಕ್ಯುಲರ್ ಎನ್ನುವುದು ಪ್ರಭುತ್ವದ ಗುಣ ಮತ್ತು ನೀತಿ ಮಾತ್ರ. ವ್ಯಕ್ತಿ ಸೆಕ್ಯುಲರ್ ಪ್ರಭುತ್ವ ವನ್ನು ಬೆಂಬಲಿಸಬಹುದು ಅಷ್ಟೆ.

೩.ಯೂರೋಪಿಯನ್ ದೇಶಗಳ ರಿಲಿಜನ್ನುಗಳ ಮತ್ತು ರಿಲಿಜನ್ನಿನ ಪಂಥಗಳ ನಡುವಿನ ಸಂಘರ್ಷಗಳ ಪರಿಹಾರದ ಹಿನ್ನೆಲೆಯಲ್ಲಿ ಸೆಕ್ಯುಲರಿಸಂ ನೀತಿ ಜಾರಿಗೆ ಬಂದಿತಾದರೂ ಮಧ್ಯ ಏಷ್ಯಾ, ಇಸ್ರೇಲ್ ಮತ್ತಿತರ ದೇಶಗಳಲ್ಲಿ ರಿಲಿಜನ್ನುಗಳ ಮತ್ತು ರಿಲಿಜನ್ನಿನ ಪಂಥಗಳ ನಡುವೆ ಸಂಘರ್ಷಗಳಿದ್ದರೂ
ಅಲ್ಲಿ ಸೆಕ್ಯುಲರಿಸಂ ಮಾದರಿಯ ಯಾವ ನೀತಿಯೂ ರೂಪಿತವಾಗಲಿಲ್ಲ ಎಂಬುದು ಗಮನಿಸಬೇಕಾದ ಅಂಶ

೪.ಪ್ರಾಟಸ್ಟೆಂಟ್ ಥಿಯಾಲಜಿ ಹಿನ್ನಲೆಯಲ್ಲಿ ಸೆಕ್ಯುಲರಿಸಂ ನೀತಿ ರೂಪಿತವಾಗಿದ್ದು ಬ್ರಿಟಿಷರ್ ಪ್ರಾಟಸ್ಟೆಂಟ್ ಥಿಯಾಲಜಿಯ ಅನುಯಾಯಿಗಳಾಗಿದ್ದ ರಿಂದ ಅವರೇ ಆಳುತ್ತಿದ್ದ ಭಾರತಕ್ಕೂ ಸೆಕ್ಯುಲರಿಸಂ ಪರಿಕಲ್ಪನೆ ಕಾಲಿಟ್ಟಿತು. ಭಾರತದಲ್ಲಿ ಬಹುತೇಕ ಮುಸ್ಲಿಮರು ಸಹ ತಮ್ಮ ವ್ಯಾಜ್ಯ ಪರಿಹಾರಗಳಿಗೆ
ಸ್ಥಳೀಯ ಹಿಂದೂ ಪದ್ಧತಿಗಳನ್ನೇ ಅನುಸರಿಸುತ್ತಿದ್ದರೇ ಹೊರತು, ಷರಿಯಾ ಅಲ್ಲ. ಸ್ಥಳೀಯ ಬ್ರಿಟಿಷ್ ಕೋರ್ಟು ಗಳಲ್ಲೂ ಹಾಗೆಯೇ ಮುಂದುವರಿದಿತ್ತು. ಮುಸ್ಲೀಮರು ಎಲ್ಲೆಡೆ ಷರಿಯಾವನ್ನೇ ಅನುಸರಿಸಬೇಕು ಎನ್ನುವ ದಿಯೋ ಬಂಧ್ ಮತ್ತು ಅದರ ಅಂಗಸಂಸ್ಥೆಯಾದ ಜಮಾತ್-ಇ- ಹಿಂದ್ ಸಂಘಟನೆ ಗಳ ಒತ್ತಾಯದ ಮೇರೆಗೆ ೧೯೧೮ರಲ್ಲಿ ಷರಿಯಾ ಕಾಯಿದೆಯನ್ನು ಮುಸ್ಲಿಮರಿಗೆ ಅಳವಡಿಸಲಾಯಿತು.

ಹೀಗೆ ಕೇರಳದಿಂದ ಶುರುವಾದ ಷರಿಯಾವನ್ನು ಎಲ್ಲ ಮುಸ್ಲಿಮರ ಮೇಲೆ ಕಡ್ಡಾಯವಾಗಿ ಹೇರುವ ಈ ‘ಸೆಕ್ಯುಲರ್ ಸ್ಟೇಟ್’ ನೀತಿ ನಿಧಾನವಾಗಿ ಎಲ್ಲೆಡೆ ಜಾರಿಗೊಂಡು ೧೯೩೭ರಲ್ಲಿ ಬ್ರಿಟಿಷರಿಂದ ಅಖಿಲ ಭಾರತ ಮಟ್ಟ ದಲ್ಲಿ ಕಾನೂನಾಗಿ ರೂಪುಗೊಂಡಿತು. ಮಹಮದಾಲಿ ಜಿನ್ನಾ ಇದಕ್ಕೆ ಆಕ್ಷೇಪಿಸಿದಾಗ ಷರಿಯಾ ಕಾನೂನನ್ನು ಪಾಲಿಸುವುದನ್ನು ಆಯ್ಕೆಯ ಹಕ್ಕಾಗಿಡಲಾಯಿತು. ಆದರೆ ಸ್ವಾತಂತ್ರ್ಯಾ ನಂತರ ಈ ಆಯ್ಕೆಯ ಹಕ್ಕನ್ನು ರದ್ದುಪಡಿಸಲಾಯಿತು.
೫.ಉದಾರವಾದಿ ರಾಜಕೀಯ ಸಿದ್ಧಾಂತದ ಭಾಗ ಎಂದೇ ಬಿಂಬಿತಗೊಂಡ ಸೆಕ್ಯುಲರಿಸಂ, ನಂತರ ಹಲವಾರು ಸ್ಥಿತ್ಯಂತರಕಂಡಿತು.

ಇದರಲ್ಲಿ ಪ್ರಮುಖವೆಂದರೆ ೪೦ರ ದಶಕದಲ್ಲಿ ಸೆಕ್ಯುಲರಿಸಂನ ತಾತ್ವಿಕ ತಳಹದಿಯಾಗಿದ್ದ ಅಥವಾ ಅದಕ್ಕೆ ಚೌಕಟ್ಟನ್ನು ಒದಗಿಸುತ್ತಿದ್ದ ಕ್ರಿಶ್ಚಿಯನ್ ಥಿಯಾಲಜಿಯ ಜಾಗವನ್ನು ಇಸ್ಲಾಮಿಕ್ ಥಿಯಾಲಜಿ ಮತ್ತು ಅದರ ತಾತ್ವಿಕ ಅಂಶಗಳು ಆಕ್ರಮಿಸಿದವು. ಸೆಕ್ಯುಲರಿಸಂ ಮೂಲತಃ ರಿಲಿಜ ನ್ನುಗಳ ಕುರಿತ ಪ್ರಭುತ್ವ ನೀತಿಯಾಗಿರುವುದರಿಂದ ಭಾರತದಮಟ್ಟಿಗೆ ಪ್ರಮುಖ ರಿಲಿಜನ್ ಆಗಿದ್ದ ಇಸ್ಲಾಂನ ರಚನೆ, ವಿನ್ಯಾಸದ ಒಳಗೆ ಇದರ ಪರಿಭಾಷೆಗಳನ್ನು ಸೆಳೆದುಕೊಳ್ಳಲು, ಅಳವಡಿಸಿಕೊಂಡು ಅರಗಿಸಿಕೊಳ್ಳಲು ಸಮರ್ಥವಾಯಿತು. ೬. ಸ್ವಾತಂತ್ರ್ಯಾ ನಂತರ ಈ ಸೆಕ್ಯುಲರಿಸಂ ನೀತಿ ಬ್ರಿಟಿಷರೊಂದಿಗೆ ಹೋಗಲಿಲ್ಲ. ಬದಲಿಗೆ ಅದನ್ನು ನಮ್ಮ ನೆಲ, ನಮ್ಮ ಭಾಷೆಗಳು, ಪರಂಪರೆ, ಸಾಂಸ್ಕೃತಿಕ ಚೌಕಟ್ಟಿಗೆ ಒಗ್ಗಿಸಿ ಕೊಳ್ಳುವ, ಅರ್ಥೈಸುವ ಪ್ರಯತ್ನಗಳು ನಡೆದವು. ಆದರೆ ಈ ಎಲ್ಲಾ ಪ್ರಯತ್ನಗಳೂ ಇಸ್ಲಾಂ ಥಿಯಾಲಜಿಯ ಚೌಕಟಿ ನೊಳಗೇ ನಡೆದದ್ದರಿಂದ ಅಥವಾ ಮುಸ್ಲೀಮರ ಹಕ್ಕುಗಳನ್ನೇ ಆಧಾರವಾಗಿಟ್ಟು ಕೊಂಡು ನಡೆದದ್ದರಿಂದ ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಉಂಟಾಯಿತು. ಎಲ್ಲ ರಿಲಿಜಿ ಯನ್ನುಗಳಿಗೆ ಸ್ವಾತಂತ್ರ ಕೊಡಬೇಕು. ಅವನ್ನು ಸಮಾನವಾಗಿ ಗೌರವಿಸಬೇಕು. ಎಲ್ಲಾ ಧರ್ಮಗಳ ಬಗ್ಗೆ ತಟಸ್ಥ ನೀತಿ ಅನುಸರಿಸಬೇಕು, ಯಾವೊಂದು ಧರ್ಮದ ಆಚಾರ ವಿಚಾರ
ಗಳಲ್ಲೂ ಹಸ್ತಕ್ಷೇಪ ಮಾಡಬಾರದು. ಹಾಗೂ ಯಾವುದೇ ಧರ್ಮದ ಆಚರಣೆ ಅದು ತನಗೆ ಸರಿ ಎನಿಸದಿದ್ದರೂಅದನ್ನು ಸಹಿಸಬೇಕು.

ಉದಾರವಾದಿ ರಾಜಕೀಯ ಸಿದ್ಧಾಂ ತದ ಪ್ರಕಾರ ಇವು ಸೆಕ್ಯುಲರಿಸಂನ ಮೂಲ ತತ್ವಗಳಾಗಿವೆ.ಆದರೆ ಭಾರತೀಯ ಪ್ರಭುತ್ವ ನಡೆದುಕೊಂಡ ರೀತಿಯೇ
ಬೇರೆ. ಅದು ತಟಸ್ಥವಾಗಿ ಉಳಿಯದೆ ಹಿಂದೂ ಮತಪಂಥ ಗಳ ಆಚರಣೆ ಮಧ್ಯೆ ಹಸ್ತಕ್ಷೇಪ ಮಾಡಿತು. ಒಂದು ಕಡೆ ಹಿಂದೂ ಮತಪಂಥಗಳು ತಮ್ಮ ಪಾರಂಪರಿಕ ಆಚಾರ, ವಿಚಾರಗಳನ್ನು ಬದಿಗಿಟ್ಟು ಅವುಗಳಿಂದ ಹೊರಬಂದು ವಿಚಾರವಂತಿಕೆಯನ್ನು, ವೈಚಾರಿಕ ನಿಲುವನ್ನು ಪ್ರದರ್ಶಿಸಬೇಕು. ಅದೇ  ಸೆಕ್ಯುಲರ್ ಸ್ಟೇಟ್‌ನ ನೀತಿ ಎಂದು ಪ್ರತಿಪಾ ದಿತವಾಯಿತು. ಮತ್ತೊಂದೆಡೆ ಇನ್ನೊಂದು ರಿಲಿಜನ್ನಿನ ವೈಯಕ್ತಿಕ ಕಾನೂನು, ಅದರ ರಿಲಿಜನ್ನಿನ ಆಚರಣೆ ಗಳನ್ನು ಮಾನ್ಯ ಮಾಡಿ ರಕ್ಷಿಸುವುದೇ ಸೆಕ್ಯುಲರಿಸಂನ ಉದಾರತನ ಎಂಬ ಇಬ್ಬಂದಿ ನೀತಿ ಅನುಸರಿಸಿತು. ಹೀಗಾಗಿ ಒಂದು ರಿಲಿಜನ್ನಿನ ಮೂಲಭೂತ ವಾದವೇ ಸೆಕ್ಯುಲರ್ ಅನಿಸಿ ಕೊಂಡಿತು. ಆ ಮೂಲಭೂತವಾದವನ್ನು ಪ್ರಶ್ನಿಸುವ ವಿಚಾರ ವಂತಿಕೆ ಕೋಮುವಾದ ಎನಿಸಿಕೊಂಡಿತು.

ಸೆಕ್ಯುಲರ್ ಸ್ಟೇಟ್ ಒಂದು ರಿಲಿಜನ್ನಿನ ಸ್ಟೇಟ್ ಆಯಿತು. ರಿಲಿಜಿಯನ್ನುಗಳ ಸ್ವಾತಂತ್ರ್ಯ, ಮೈನಾರಿಟಿ ಹಕ್ಕುಗಳು ಎನ್ನುವಂತಾಯಿತು.

೭. ಇಂತಹ ಸ್ಥಿತ್ಯಂತರಗಳ ಮಧ್ಯೆಯೇ ಸೆಕ್ಯುಲರಿಸಂನ ಶ್ರೇಷ್ಠ ಎನಬಹುದಾದ ಮತ್ತೊಂದು ಉದಾರ ನಿಲುವೂ ರೂಪಾಂತರಗೊಂಡಿತು. ಅದೇ ವ್ಯಕ್ತಿಗತ ರಿಲಿಜನ್ನಿನ ಸ್ವಾತಂತ್ರ್ಯ. ಸೆಕ್ಯುಲರಿಸಂ ನೀತಿಯಲ್ಲಿ ಪ್ರಭುತ್ವ ರಿಲಿಜಿಯನ್ ಗಳಿಗೆ ಸ್ವಾತಂತ್ರ್ಯ ಕೊಡುವುದು, ಹಸ್ತಕ್ಷೇಪ ಮಾಡದಿರುವುದು, ತಟಸ್ಥವಾಗಿರು ವುದು ಮತ್ತು ಸಹಿಸುವುದು ಈ ಎಲ್ಲಾ ಆಯಾಮಗಳೂ ವ್ಯಕ್ತಿ ಕೇಂದ್ರಿತವಾಗಿಯೇ ಇದ್ದದ್ದು. ಇದು ಸಮುದಾಯ ಸ್ವಾತಂತ್ರ್ಯವಾಗಿ ರೂಪಾಂತರ ಗೊಂಡದ್ದು ದುರಂತ. ಇದರಿಂದ ಲಾಭ ಪಡೆದದ್ದು (ಸೆಕ್ಯುಲರಿಸಂನ ಆಧಾರದಲ್ಲಿ) ರಿಲಿಜನ್ ಎನಿಸಿದ್ದ ಇಸ್ಲಾಂ! ಇದಕ್ಕೆ ಬೆಂಬಲ ವಾಗಿ ನಿಂತದ್ದು ಮತ್ತದೇ ಸೆಕ್ಯುಲರ್ ಪ್ರಭುತ್ವ.

ಒಂದೆಡೆ ಸೆಕ್ಯುಲರಿಸಂನ ವೈಚಾರಿಕ ನಿಯಮಗಳನ್ನು ಹಿಂದೂ ಮತ ಪಂಥಗಳ ಮೇಲೆ ಹೇರುತ್ತ, ಅವುಗಳ ಸಾಂಸ್ಕೃತಿಕ, ಪಾರಂಪರಿಕ ಬೇರುಗಳನ್ನು ಕತ್ತರಿಸುತ್ತ, ಇನ್ನೊಂದೆಡೆ ಮತ್ತೊಂದು ರಿಲಿಜನ್ನಿನ ವೈಯಕ್ತಿಕ ಕಾನೂನು, ಕಟ್ಟಳೆಗಳನ್ನು ಸೆಕ್ಯುಲರ್ ಪ್ರಭುತ್ವದ ಅನುಶಾಸನಗಳ ಚೌಕಟ್ಟಿನಲ್ಲಿ ತಂದು ಆ ರಿಲಿಜ ನ್ನಿನ ಎಲ್ಲ ವ್ಯಕ್ತಿಗಳನ್ನು ಇಡೀ ಸಮುದಾಯದೊಳಗೆ ಕಟ್ಟಿಹಾಕುವ ಕೆಲಸವನ್ನು ಪ್ರಭುತ್ವಗಳು ಮಾಡಿದವು. ಇದನ್ನು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಸಹ ಸಂವಿಧಾನ ರಚನಾ ಸಭೆಯಲ್ಲಿ ಪ್ರಶ್ನಿಸಿದ್ದರು. ಮುಸ್ಲಿಂ ಮುಖಂಡ ಇಸ್ಮಾ ಯಿಲ್ ಸಂವಿಧಾನದಲ್ಲಿ ವೈಯಕ್ತಿಕ ಕಾನೂನಿಗೆ ಮಾನ್ಯತೆ
ಕೊಡಬೇಕು ಎಂಬ ಬೇಡಿಕೆ ಇಟ್ಟಾಗ ಅಂಬೇಡ್ಕರಾದಿಯಾಗಿ ಸಂವಿಧಾನ ತಜ್ಞರು ವಿರೋಽಸಿ ತಿರಸ್ಕರಿಸಿ ಸಮಾನ ನಾಗರಿಕ ಸಂಹಿತೆ ಯನ್ನೇ ಎಲ್ಲರಿಗೂ ಅಳವಡಿಸಬೇಕೆನ್ನುವ ನಿರ್ಣಯ ಅಂಗೀ ಕರಿಸಿದರು.

ಆದರೆ ಸ್ವತಂತ್ರ ಭಾರತದ ಪ್ರಭುತ್ವವು ಇದು ವರೆಗೂ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿಲ್ಲ. ಇದರಿಂದಾಗಿ ೧೯೩೭ರ ಕಾಯಿದೆಯನ್ನೇ
ಕೋರ್ಟುಗಳು ಅನುಸರಿಸುತ್ತಿರುವುದರಿಂದ ಮುಸ್ಲಿಂ ವೈಯಕ್ತಿಕ ಕಾನೂನು, ಷರಿಯಾ ಗಳನ್ನು ಸೆಕ್ಯುಲರ್ ಸ್ಟೇಟ್ ನಲ್ಲಿನ ಪ್ರತಿ ಯೊಬ್ಬ ಮುಸ್ಲಿಂಮರೂ ಕಡ್ಡಾಯ ಪಾಲಿಸಲೇಬೇಕು ಎಂಬಂತಾ ಗಿದೆ. ೧೯೩೭ಕ್ಕೆ ಮುಂಚೆ ಮುಸ್ಲಿಂ ಬಂಧುಗಳಿಗೆ ಯಾವುದೇ ಷರಿಯಾ, ರಿಲಿಜನ್ನಿನ ವೈಯಕ್ತಿಕ ಕಾನೂನು ಕಡ್ಡಾಯವಾಗಿ ರಲಿಲ್ಲ. ಮದುವೆ, ವಿಚ್ಛೇದನ, ವ್ಯಾಜ್ಯ ಪಂಚಾಯಿತಿ, ಆಸ್ತಿ ವಿಲೇವಾರಿ ಇತರೆ ಎಲ್ಲ ವಿವಾದಗಳನ್ನೂ ಅವರು ಸ್ಥಳೀಯವಾಗಿ
ರೂಢಿಯಲ್ಲಿದ್ದ ಪದ್ಧತಿಗಳ ಚೌಕಟ್ಟಿನಲ್ಲೇ ಬಗೆಹರಿಸಿಕೊಳ್ಳುತ್ತಿದ್ದರು.

ಸೆಕ್ಯುಲರಿಸಂ ನೀತಿಯಿಂದಾಗಿ ಅವರು ಈ ವೈಯಕ್ತಿಕ ಆಯ್ಕೆಯ ಹಕ್ಕನ್ನು ಕಳೆದುಕೊಳ್ಳುವಂತಾಯಿತು. ಹೀಗಾಗಿ ಅವರು ಪ್ರಭುತ್ವದ ಸೆಕ್ಯುಲರ್ ನೀತಿಯಿಂ ದಾಗಿಯೇ ತಮ್ಮ ರಿಲಿಜನ್ನಿನಾಚೆಯ ಉದಾರ ಸಮಾನ ನಾಗರಿಕ ಹಕ್ಕುಗಳನ್ನು ಪಡೆಯಲಾರದಂತಾಯಿತು. ಶಾಹ್ ಬಾನೋ ಪ್ರಕರಣದ ಇದಕ್ಕೆ ಅತ್ಯುತ್ತಮ ಉದಾಹರಣೆ.

೮.ಇದಿಷ್ಟೇ ಅಲ್ಲ. ಒಂದು ನಿರ್ದಿಷ್ಟ ರಿಲಿಜನ್ನಿನ ಒಳಗೇ ವ್ಯಕ್ತಿ ಸ್ವಾತಂತ್ರ್ಯವನ್ನು ಸೆಕ್ಯುಲರಿಸಂ ಹೆಸರಿನಲ್ಲಿ ಪ್ರಭುತ್ವದ ಹಸ್ತಕ್ಷೇಪದ ಮೂಲಕ ಹತ್ತಿಕ್ಕಿದಂತಾಗಿದೆ. ಅಲ್ಲದೆ ಧರ್ಮದೊಳಗಿನ ಉದಾರತೆಯನ್ನು ಹತ್ತಿಕ್ಕಿ ವೈಯಕ್ತಿಕ ಕಾನೂನು, ಕಟ್ಟಲೆಗಳಡಿ ಇಡೀ ಸಮುದಾಯವನ್ನೇ ತರುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಧರ್ಮಗ್ರಂಥಗಳನ್ನು ಅದರಲ್ಲಿನ ಉಲ್ಲೇಖಗಳನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತಿದೆ. ಧರ್ಮದೊಳಗಿನ ಆಂತರಿಕ ಸಂಘರ್ಷಗಳನ್ನು ಮರೆಮಾಚಿ ಅವನ್ನು ಧರ್ಮ, ಧರ್ಮಗಳೊಂದಿಗಿನ ಸಂಘರ್ಷ ಎಂಬುವಂತೆ ಬಿಂಬಿಸಲಾಗುತ್ತಿದೆ.

ಕೆಲವೇ ಕೆಲವರು ಆಚರಿಸುವ ಧರ್ಮಾಚರಣೆಯನ್ನು, ಕಟ್ಟುಪಾಡುಗಳನ್ನು ಸಾಮೂಹಿಕಗೊಳಿಸುವ, ಧರ್ಮದೊಳಗಿನ ಉದಾರನೀತಿಯನ್ನು ಪ್ರದರ್ಶಿಸಲಾಗದ, ಅನುಸರಿಸಲಾಗದ, ಪ್ರಶ್ನಿಸಲಾಗದ, ಧಾರ್ಮಿಕ ಕಾನೂನುಗಳ ಚೌಕಟ್ಟಿನಾಚೆ ನಾಗರಿಕ ಸಂಹಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಗಿ ಕಪಿಮುಷ್ಟಿಯಲ್ಲಿ ಜನ ಸಿಲುಕುವಂತಾಗಿದೆ. ಇದಕ್ಕೆ ಉದಾಹರಣೆ ಇತ್ತೀಚೆಗೆ ಮುನ್ನೆಲೆಗೆ ಬಂದಿದ್ದ ಹಿಜಾಬ್ ಸಂಘರ್ಷ!

೯. ಮೇಲಿನ ಎಲ್ಲಾ ಅಂಶಗಳಿಂದ ಒಂದು ಸಂಗತಿ ಮನವರಿಕೆಯಾಗುತ್ತದೆ. ನಾವು ಎರಡು ರೀತಿಯ ಜೀವನ ನಡೆಸಬೇಕಿದೆ. ಒಂದು ಸಾಂಪ್ರದಾಯಿಕ ಬದುಕು ಮತ್ತು ಇನ್ನೊಂದು ಪ್ರಭುತ್ವವನ್ನು ಒಳಗೊಂಡ ಬದುಕು. ನಮಗೆ ಬೇಕಿರಲಿ, ಬೇಡದಿರಲಿ ಇಂದು ಪ್ರಭುತ್ವ ನಮ್ಮನೆಯ ಹೊಸಿಲು ದಾಟಿ ಒಳಗೆ ಬಂದಿರುವುದರಿಂದ ನಾವು ಅದಕ್ಕೆ ಪ್ರತಿಕ್ರಿಯಿಸಲೇಬೇಕಿದೆ.

೧೦.ಈ ಎಲ್ಲಾ ಸೆಕ್ಯುಲರಿಸಂ ಎಡವಟ್ಟುಗಳಿಗೆ, ಸಮಸ್ಯೆ ಗಳಿಗೆ ಪರಿಹಾರವೆಂದರೆ ಸಮಾನ ನಾಗರಿಕ ಸಂಹಿತೆಯ ಜಾರಿ. ಈ ನಾಗರಿಕ ಸಂಹಿತೆಯೂ ನಾಗರಿಕ ಹಕ್ಕುಗಳ ಜತೆಗೆ ರಿಲಿಯನ್ನಿನ ಸ್ವಾತಂತ್ರ್ಯ ಮತ್ತು ಅದರಡಿಯ ಹಕ್ಕುಗಳನ್ನು ಮುಕ್ತವಾಗಿಸಬೇಕು. ವ್ಯಕ್ತಿಗೆ ತನ್ನ ರಿಲಿಜನ್ನಿನೊಳಗೆ ದತ್ತವಾದ ಹಕ್ಕುಗಳು ಮತ್ತು ನಾಗರಿಕ ಸಂಹಿತೆಯ ಹಕ್ಕುಗಳು ಯಾವುದನ್ನು ಬೇಕೋ ಅದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯಇರಬೇಕು. ಆಗ ಇಚ್ಛೆ ಇದ್ದವರು
ರಿಲಿಜನ್ನಿನ ಕಟ್ಟಳೆಗಳನ್ನು ಇಲ್ಲವೇ ಸ್ಥಳೀಯ ಪದ್ಧತಿಗಳನ್ನು ಆಯ್ದು ಕೊಳ್ಳುವರು. ಉಳಿದವರು ನಾಗರಿಕ ಕಾಯ್ದಯನ್ನೇ ಅನುಸರಿಸುವರು. ಯಾವುದೇ ಒತ್ತಾಯಗಳಿಲ್ಲದ ನಿಜವಾದ ರಿಲಿಜನ್ನಿನ ಸ್ವಾತಂತ್ರ್ಯ ಆಗ ಮಾತ್ರ ಸಾಧ್ಯ.