Saturday, 27th July 2024

ಸೀತೆಗೆ ಒಂದೇ ಅಗ್ನಿಪರೀಕ್ಷೆ, ಇದಕ್ಕೆ….?

ವಿದೇಶವಾಸಿ

dhyapaa@gmail.com

ಮತ್ತೊಂದು ಮಹಾಸಮರ ಮುಕ್ತಾಯಗೊಂಡಿದೆ. ಭಾರತದಂಥ ದೇಶದಲ್ಲಿ ಚುನಾವಣೆ ನಡೆಸುವುದು ಎಂದರೆ ಸಾಮಾನ್ಯದ ಮಾತಲ್ಲ. ಒಂದು ಕಡೆ ದೇಶದ ವಿಸ್ತಾರ, ಇನ್ನೊಂದು ಕಡೆ ಆಯಾ ಪ್ರದೇಶದ ವಿವಿಧತೆ, ಪ್ರತಿ ನೂರು ಇನ್ನೂರು ಕಿಲೋಮೀಟರಿಗೆ ಬದಲಾಗುವ ಆಚಾರ-ವಿಚಾರ. ಅದಕ್ಕೆ ಪೂರಕವಾಗುವಂತೆ ಅತಿಯಾದ ಜನಸಂಖ್ಯೆ. ಮೂರೋ-ನಾಲ್ಕೋ ಪ್ರಮುಖ ಪಕ್ಷಗಳನ್ನು ಬಿಟ್ಟರೆ, ವಿಚಾರದಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲದ ನೂರಾರು ಪಕ್ಷಗಳು, ಸಾವಿರಾರು ಅಭ್ಯರ್ಥಿಗಳು.

ಸಾಲದು ಎಂಬಂತೆ, ಯಾವ ವಿಚಾರಗಳಿಗೂ ಒಗ್ಗದ, ತಮ್ಮದೇ ವಿಚಾರ ಇಟ್ಟುಕೊಂಡಿರುವ ಇನ್ನೊಂದಿಷ್ಟು ಜನ ಪಕ್ಷೇತರರು. ಅದೇನೋ ಹೇಳುತ್ತಾ ರಲ್ಲ, ಮೊದಲೇ ಉಲ್ಲಾಸ, ಮೇಲಿಂದ ಫಲ್ಗುಣ ಮಾಸ ಅಂತ, ಹಾಗೆ. ಸುಮ್ಮನೆ ಬಹ್ರೈನ್ ದೇಶದಲ್ಲಿ ಎರಡು ವರ್ಷದ ಹಿಂದೆ ನಡೆದ ಚುನಾವಣೆಯ ಉದಾಹರಣೆ ತೆಗೆದುಕೊಳ್ಳಿ. ಬಹ್ರೈನ್ ದೇಶದ ಒಟ್ಟೂ ಜನಸಂಖ್ಯೆ ಸುಮಾರು ಹದಿನೈದೂವರೆ ಲಕ್ಷ. ಅದರಲ್ಲಿ ಸುಮಾರು ಏಳು ಲಕ್ಷಕ್ಕೂ ಹೆಚ್ಚು ವಿದೇಶಿಯರು. ಸ್ಥಳೀಯರ ಸಂಖ್ಯೆ ಸುಮಾರು ಎಂಟು ಲಕ್ಷ. ಅದರಲ್ಲಿ ಮತದಾರರ ಸಂಖ್ಯೆ ಮೂರೂವರೆ ಲಕ್ಷಕ್ಕೂ ಸ್ವಲ್ಪ ಕಮ್ಮಿ. ಅಂದರೆ ಇಡೀ ದೇಶದ ಮತದಾರರ ಸಂಖ್ಯೆ ಭಾರತದ ಕೆಲವೊಂದು ವಿಧಾನಸಭೆ ಕ್ಷೇತ್ರದ ಮತದಾರರ ಸಂಖ್ಯೆಗಿಂತಲೂ ಕಮ್ಮಿ.

ಇರಲಿ, ಇವರೆಲ್ಲ ಸೇರಿ ಆರಿಸಬೇಕಾದದ್ದು ಕೇವಲ ನಲವತ್ತು ಜನಪ್ರತಿನಿಧಿಗಳನ್ನು! ಆ ನಲವತ್ತು ಸ್ಥಾನಕ್ಕೆ ಅಬ್ಬಬ್ಬಾ ಎಂದರೆ ಮುನ್ನೂರು-ಮುನ್ನೂರೈ ವತ್ತು ಸ್ಪರ್ಧಾಳುಗಳು. ಕೆಲವು ಕ್ಷೇತ್ರದಲ್ಲಿ ಐದರಿಂದ ಹತ್ತು ಸಾವಿರ ಮತದಾರರು. ಆದರೂ ಎರಡು ಹಂತದಲ್ಲಿ ಮತದಾನ! ಕೆಲವು ಯುರೋಪ್ ದೇಶಗಳಲ್ಲೂ ಚುನಾವಣೆ ಇದೇ ರೀತಿಯದ್ದಾಗಿರುತ್ತದೆ. ಹೀಗಿರುವಾಗ ಭಾರತದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯ ಅಗಾಧತೆ ಮತ್ತು ಅದನ್ನು ನಿರ್ವಹಿಸುವ ಜವಾಬ್ದಾರಿ ಏನು ಎನ್ನುವುದರ ಅರಿವಾಗುತ್ತದೆ. ಈ ಚುನಾವಣೆಯಲ್ಲಿ, ಮತದಾನ ನಡೆಯುವ ದಿನಗಳಲ್ಲಿ ಅರವತ್ತೆರಡು ಕೋಟಿ ಗೂಗಲ್ ಸರ್ಚ್ ಆಗಿದೆ ಎಂದರೆ ಹೆಚ್ಚು ಹೇಳಬೇಕಿಲ್ಲ.

ಮೊನ್ನೆ ಮೊನ್ನೆಯಷ್ಟೇ ಸಂಪನ್ನಗೊಂಡ ಲೋಕಸಭೆ ಚುನಾವಣೆಯ ಅಂಕಿ ಅಂಶಗಳನ್ನು ಭಾರತದ ಚುನಾವಣಾ ಆಯೋಗ ನೀಡಿತ್ತು. ಭಾರತದ ಒಟ್ಟೂ ತೊಂಬತ್ತೇಳು ಕೋಟಿ ಮತದಾರರಲ್ಲಿ ಈ ಬಾರಿ ಚುನಾವಣೆಯಲ್ಲಿ ಸುಮಾರು ಅರವತ್ತ ನಾಲ್ಕು ಕೋಟಿಗೂ ಹೆಚ್ಚು ಜನ ಮತ ಚಲಾಯಿಸಿ
ದ್ದಾರೆ. ಅದಕ್ಕಾಗಿ ಚುನಾವಣಾ ಆಯೋಗ ಹತ್ತೂ ವರೆ ಲಕ್ಷ ಮತಗಟ್ಟೆಗಳನ್ನು ನಿರ್ಮಿಸಿದೆ. ಒಂದೂವರೆ ಕೋಟಿ ಭದ್ರತೆ ಮತ್ತು ಮತಗಟ್ಟೆಯ ಸಿಬ್ಬಂದಿ ಗಳು ಕಾರ್ಯ ನಿರ್ವಹಿಸಿದ್ದಾರೆ.

ಚುನಾವಣೆಗೆ ಬೇಕಾದ ಸಲಕರಣೆಗಳು ಮತ್ತು ಸಿಬ್ಬಂದಿಗಳನ್ನು ಸಾಗಿಸಲೆಂದೇ ನೂರ ಮೂವತ್ತೈದು ವಿಶೇಷ ರೈಲುಗಳು, ನಾಲ್ಕು ಲಕ್ಷ ವಾಹನಗಳನ್ನು
ಆಯೋಗ ಬಳಸಿಕೊಂಡಿದೆ. ಹೆಮ್ಮೆ ಪಡಬೇಕಾದ ಸಂಗತಿ ಎಂದರೆ, ದೇಶದ ಇಪ್ಪತ್ತೇಳು ರಾಜ್ಯ ಮತ್ತು ಎಲ್ಲ ಕೇಂದ್ರಾಡಳಿತ ಪ್ರದೇಶದಲ್ಲಿ ಮರು ಮತದಾನ ನಡೆಯಲಿಲ್ಲ. ಈ ಬಾರಿ ಕೇವಲ ಮೂವತ್ತೊಂಬತ್ತು ಮತಗಟ್ಟೆಗಳಲ್ಲಿ ಮರು ಮತದಾನ ನಡೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಐದು ನೂರ ನಲವತ್ತು ಮತಗಟ್ಟೆಗಳಲ್ಲಿ ಮರುಮತದಾನವಾಗಿತ್ತು. ಎಲ್ಲರೂ ಕುತೂಹಲದಿಂದ ನೋಡುತ್ತಿದ್ದ, ಒಂದು ಕಾಲದಲ್ಲಿ ಆತಂಕವಾದಿಗಳು ಅಟ್ಟಹಾಸ ಮೆರೆ ಯುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಇತರೆ ರಾಜ್ಯಗಳಿಗಿಂತ ಅಧಿಕ ಮತದಾನವಾಗಿದೆ ಎಂದು ಆಯೋಗ ಹೇಳಿಕೊಂಡಿದೆ.

ಯಾವ ದೃಷ್ಟಿಯಲ್ಲಿ ನೋಡಿದರೂ ಈ ಸಲದ ಚುನಾವಣೆ ಅಚ್ಚುಕಟ್ಟು. ನಮ್ಮ ಚುನಾವಣಾ ಆಯೋಗ ನಡೆಸಿದ್ದು ವಿಶ್ವದ ಅತಿ ದೊಡ್ಡ ಲೋಕತಂತ್ರದ ಚುನಾವಣೆ ಎನ್ನುವುದನ್ನು ಮರೆಯಬೇಡಿ. ಇದರ ಜತೆಗೆ ಇನ್ನೊಂದು ಮಹತ್ವದ ಅಂಕಿ- ಅಂಶವನ್ನು ನೋಡೋಣ. ಈ ಬಾರಿ ಚುನಾವಣಾ ಆಯೋಗ ದೇಶದಾದ್ಯಂತ ಸುಮಾರು ಹತ್ತು ಸಾವಿರ ಕೋಟಿ ರುಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ ನಾಲ್ಕು ಸಾವಿರದ ಮುನ್ನೂರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್, ಸುಮಾರು ಒಂಬೈನೂರು ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದೆ. ನಮ್ಮ ದೇಶದಲ್ಲಿ ಗುಜರಾತ್, ನಾಗಾಲ್ಯಾಂಡ್, ಮಿಜೋರಾಮ್, ಬಿಹಾರದಂಥ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಣಿಪುರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮದ್ಯಪಾನ ನಿಷೇಧವಾದರೂ ಉಳಿದ ಕಡೆಗಳಲ್ಲಿ ಮದ್ಯಪಾನಕ್ಕೆ ಯಾವುದೇ ನಿರ್ಬಂಧವಿಲ್ಲ.

ಆದರೆ ಮಾದಕ ವಸ್ತುಗಳ ಮಾರಾಟಕ್ಕೆ ಯಾವ ರಾಜ್ಯದಲ್ಲಿಯೂ ಪರವಾನಗಿ ಇಲ್ಲ. ಆದಾಗ್ಯೂ ಈ ಪ್ರಮಾಣದಲ್ಲಿ ಡ್ರಗ್ಸ್ ವಿಲೇವಾರಿಯಾಗುತ್ತಿದೆ ಎಂದರೆ
ಚಿಂತಾಜನಕವಂತೂ ಹೌದು, ಜತೆಗೆ ಹೀಗೆಯೇ ನಡೆದರೆ ಮುಂದೇನು ಎಂಬ ಆತಂಕ ಮೂಡುವುದು ಸಹಜ. ನೆನಪಿರಲಿ, ಇದು ಚುನಾವಣೆ ಘೋಷಣೆ ಯಾಗಿ, ನೀತಿ ಸಂಹಿತೆ ಜಾರಿಯಾದ ನಂತರ ಸಿಕ್ಕಿಬಿದ್ದದ್ದು. ಇನ್ನು ಸಿಗದೇ ಇರುವುದು, ಉಳಿದ ದಿನಗಳಲ್ಲಿ ವಹಿವಾಟಾಗುವುದು ಎಷ್ಟೋ, ಏನೋ? ಅದರ ಲೆಕ್ಕ ಹೇಳುವವರು ಯಾರು? ಇದರ ಜತೆಗೆ ಆಯೋಗ ಒಂದು ಸಾವಿರ ಕೋಟಿಗೂ ಹೆಚ್ಚು ನಗದು ಹಣವನ್ನು ವಶಪಡಿಸಿಕೊಂಡಿದೆ.

ಸುಮಾರು ಒಂದೂವರೆ ಸಾವಿರ ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಆಭರಣಗಳು, ಎರಡು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಉಡುಗೊರೆ ವಸ್ತು
ಗಳು, ಬಟ್ಟೆ, ಆಹಾರ ಧಾನ್ಯಗಳನ್ನೂ ವಶಪಡಿಸಿಕೊಂಡಿದೆ. ಈ ರೀತಿ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಆಮಿಷ ಒಡ್ಡುವುದು ಇದೇ ಮೊದಲ
ಸಲವೇನೂ ಅಲ್ಲ. ನಾವು ಸಣ್ಣವರಿರುವಾಗಲೂ ಈ ರೀತಿಯ ಮಾತು ಕೇಳಿ, ಸುದ್ದಿ ಓದಿಯೇ ಬೆಳೆದವರು. ಮದ್ಯ, ಹಣ ಆಗಲೂ ಇತ್ತು. ಸೀರೆ, ಬೆಳ್ಳಿಯ ಹಣತೆ, ಟೇಪ್‌ರೆಕಾರ್ಡರ್‌ಗಳನ್ನು ಹಂಚಲಾಗುತ್ತಿತ್ತು.

ಕ್ರಮೇಣ ಟೇಪ್‌ರೆಕಾರ್ಡರ್ ಜಾಗವನ್ನು ಟಿವಿ ಆಕ್ರಮಿಸಿಕೊಂಡಿತು. ಈಗ ಟಿವಿಯೂ ಮಾಯವಾಗಿ ಕುಕ್ಕರ್, ಮಿಕ್ಸರ್ ಅದರ ಸ್ಥಾನ ತುಂಬಿದೆ. ಒಂದೇ ವ್ಯತ್ಯಾಸ ಎಂದರೆ, ಈ ಸಂಸ್ಕೃತಿ ಪ್ರತಿ ಚುನಾವಣೆಗೂ ಹೆಚ್ಚುತ್ತಿದೆಯೇ ವಿನಾ ಕಮ್ಮಿಯಾಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಆಯೋಗ ಮೂರೂವರೆ ಸಾವಿರ ಕೋಟಿ ಮೌಲ್ಯದ ವಸ್ತು ಮತ್ತು ಹಣವನ್ನು ವಶಪಡಿಸಿಕೊಂಡಿತ್ತು. ಅಂದರೆ, ಈ ವರ್ಷ ಆಯೋಗ ಕಳೆದ ಚುನಾವಣೆಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು ವಶಪಡಿಸಿಕೊಂಡಿದೆ.

ಗಮನಿಸಬೇಕಾದ ಇನ್ನೊಂದು ವಿಷಯವಿದೆ. ಸಿ-ವಿಜಿಲ್ (ಐಒಐಔ) ಬಗ್ಗೆ ನೀವು ಕೇಳಿರಬಹುದು. ಇದು ಚುನಾವಣಾ ಆಯೋಗ ಮತದಾರಿಗೆ ಮಾಹಿತಿ ನೀಡುವುದರ ಜತೆಗೆ ಚುನಾವಣೆಗೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಲು ನಿರ್ಮಿಸಿದ ಅಪ್ಲಿಕೇಷನ್ (ಆಪ್). ಈ ಬಾರಿ ಆಯೋಗ ಆಪ್ ಮೂಲಕ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ದೂರನ್ನು ಸ್ವೀಕರಿಸಿದ್ದಷ್ಟೇ ಅಲ್ಲ, ಶೇಕಡ ೯೯.೯ರಷ್ಟು ದೂರುಗಳಿಗೆ ಪ್ರತಿಕ್ರಿಯಿಸಿ, ಪರಿಹಾರ ನೀಡಿದೆ. ಇದು ಇಂದಿನ ಆಯೋಗ ಹೇಗೆ ಕೆಲಸಮಾಡುತ್ತಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ. ಈ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗದ ಕಾರ್ಯ ನಿಜಕ್ಕೂ ಶ್ಲಾಘನೀಯ.

ಭಾರತದ ಚುನಾವಣಾ ಆಯೋಗ ದಿನ ಕಳೆದಂತೆ ತನ್ನ ಕಾರ್ಯಕ್ಷಮತೆಯನ್ನು ವೃದ್ಧಿಸಿಕೊಂಡು ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚುನಾವಣೆ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ತಂದ ಟಿ.ಎನ್.ಶೇಷನ್ ಅವರನ್ನು ಭಾರತೀಯರು ಇಂದಿಗೂ ಮರೆತಿಲ್ಲ. ನೀತಿಸಂಹಿತೆಯಾಗಲಿ,
ಪ್ರಚಾರ ಪ್ರಕ್ರಿಯೆಯಲ್ಲಾಗಲಿ ಆಯೋಗ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡು ಬಂದಿದೆ. ಅದರ ಭಾಗವಾಗಿ ಬಂದದ್ದು ಸಾಕಷ್ಟು ಸುದ್ದಿ
ಮಾಡಿದ ಇವಿಎಮ್ (ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್). ಬ್ಯಾಲೆಟ್ ಪೇಪರ್ ಮತದಾನಕ್ಕೆ ತಿಲಾಂಜಲಿ ಕೊಡಿಸಿದ್ದು ಇದೇ ಇವಿಎಮ್.

ಕಳೆದ ಹತ್ತು ವರ್ಷಗಳಿಂದ ಚುನಾವಣೆ ಎಂದಾಗ ಸಾಕಷ್ಟು ಚರ್ಚೆಯಲ್ಲಿದ್ದದ್ದು ಇವಿಎಮ್. ಈ ಕುರಿತು ವಿರೋಧಪಕ್ಷಗಳು ಸಾಕಷ್ಟು ಅನುಮಾನ
ವ್ಯಕ್ತಪಡಿಸುತ್ತಿದ್ದವು. ಅದರಲ್ಲೂ ವಿಶೇಷವಾಗಿ, ಸೋತಾಗ ಅಪವಾದಕ್ಕೆ ಗುರಿಯಾಗುತ್ತಿದ್ದದ್ದು ಇವಿಎಮ್. ಇಂದಿನ ಇವಿಎಮ್ ಪೂರ್ವಜರು ಅದೆಷ್ಟು ಬಾರಿ ಚೌತಿಯ ಚಂದ್ರನನ್ನು ನೋಡಿ ದ್ದರೋ ಏನೋ? ಬಹುಶಃ ಭಾರತದಲ್ಲಿ ಮಾಡದ ತಪ್ಪಿಗೆ ಇವಿಎಮ್ ಎದುರಿಸಿದಷ್ಟು ಅಪವಾದವನ್ನು
ಇನ್ಯಾವುದೂ ಎದುರಿಸಲಿಲ್ಲ.

ಭಾರತದಲ್ಲಿ ಮೊದಲ ಬಾರಿ ಇವಿಎಮ್ ಬಳಕೆಯಾದದ್ದು ೧೯೮೨ರಲ್ಲಿ, ಕೇರಳದ ಚುನಾವಣೆಯಲ್ಲಿ. ಅಲ್ಲಿಂದ ೨೦೧೪ರವರೆಗೂ ಅದು ಸರಿಯಾಗಿಯೇ ಇತ್ತು. ನಂತರ ಇದ್ದಕ್ಕಿದ್ದಂತೆ ಇವಿಎಮ್ ಸರಿ ಇಲ್ಲ, ಅದನ್ನು ಆಡಳಿತ ಪಕ್ಷದವರು ಹ್ಯಾಕ್ ಮಾಡುತ್ತಿದ್ದಾರೆ, ತಮ್ಮ ಗೆಲುವಿಗೆ ಇವಿಎಮ್ ಬಳಸಿಕೊಳ್ಳು ತ್ತಿದ್ದಾರೆ ಎಂಬ ಸುಳ್ಳು ಆರೋಪಗಳು ಬಂದವು. ಇದು ಸುಳ್ಳು ಆರೋಪ ಎಂದು ಹೇಳಲು ಎರಡು ಕಾರಣವಿದೆ. ಮೊದಲನೆಯದು, ಇವಿಎಮ್ ಒಂದು ಸ್ವತಂತ್ರ ಯಂತ್ರ. ಅದಕ್ಕೆ ಮತದಾನ ನಡೆಯುವ ಸಂದರ್ಭದಲ್ಲಿ ಇಂಟರ್ನೆಟ್ ಸಂಪರ್ಕ ಇರುವುದಿಲ್ಲ.

ಯಾವುದೇ ಇಲೆಕ್ಟ್ರಾನಿಕ್ ಯಂತ್ರವನ್ನು ಹ್ಯಾಕ್ ಮಾಡಲು ಅಥವಾ ವಶಕ್ಕೆ ತೆಗೆದುಕೊಳ್ಳಲು ಇಂಟರ್‌ನೆಟ್ ಅತ್ಯವಶ್ಯ. ಹಾಗಾಗಿ ಮತದಾನದ ಸಂದರ್ಭದಲ್ಲಿ ಅದನ್ನು ವಶಪಡಿಸಿಕೊಳ್ಳುವುದು ಅಸಾಧ್ಯವಾದ ಮಾತು. ಇನ್ನು ಮತದಾನದ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಜನರಿಂದಲೇ ತಮಗೆ ಬೇಕಾದವರಿಗೆ ಮತ ಹಾಕಿಸಬೇಕು ಅಥವಾ ಅವರನ್ನು ಒಳಗೆ ಬಿಡದೇ ಯಾರಾದರೂ ತಮಗೆ ಬೇಕಾದಂತೆ ಮತ ಹಾಕಬೇಕು, ಅಥವಾ ಮತದಾನದ ನಂತರ ಇವಿಎಮ್ ಬದಲಾಯಿಸಬೇಕು. ಅದೆಲ್ಲ ನಡೆದರೆ ಜನರ ಕಣ್ಣಿಗೆ, ಮಾಧ್ಯಮದವರ ಕಣ್ಣಿಗೆ ಬೀಳದೇ ಇರಲು ಸಾಧ್ಯವಿಲ್ಲ. ಜತೆಗೆ ಇದನ್ನು ಹೈಗೈ ಮಾಡಲಾಗದಂತೆ ಸಾಕಷ್ಟು ಭದ್ರತೆಯ ವ್ಯವಸ್ಥೆಯಿದೆ. ಈ ವಿಷಯ ಭಾರತದ ಉಚ್ಚನ್ಯಾಯಾಲಯದ ಒಳಕ್ಕೂ ಹೋಗಿ, ಸಾಕಷ್ಟು  ವಾದ-ಪ್ರತಿ ವಾದ, ಪರಾಮರ್ಶೆ, ಪರಿಶೀಲನೆ ಎಲ್ಲವೂ ನಡೆದು ತೀರ್ಪನ್ನು ಪಡೆದುಕೊಂಡಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಓದಿದವರಿಗೆ ಇದು ತಿಳಿಯುತ್ತದೆ. ಅಷ್ಟು ವಿಸ್ತಾರವಾಗಿ ನ್ಯಾಯಾಲಯ ಈ ಕುರಿತು ತೀರ್ಪು ನೀಡಿದೆ.

ಎರಡನೆಯದಾಗಿ, ಇವಿಎಮ್ ವಿರುದ್ಧ ಮಾತಾಡುವ ಪಕ್ಷಗಳು ತಾವು ಗೆದ್ದಾಗ ಯಂತ್ರವನ್ನು ದೂಷಿಸುವುದಿಲ್ಲ. ದೋಷಾರೋಪ ಏನಿದ್ದರೂ
ಸೋತಾಗ ಮಾತ್ರ. ಇದು ತಮ್ಮ ಸೋಲನ್ನು ಒಪ್ಪಿಕೊಳ್ಳಲಾಗದೇ, ನೆಪ ಹುಡುಕುವ ಕಾರ್ಯವೇ ವಿನಾ ಇನ್ನೇನೂ ಆಗಿರಲಿಲ್ಲ. ಒಂದೇ ಸುಳ್ಳನ್ನು
ಎಷ್ಟು ಹೇಳಿದರೂ ಸುಳ್ಳು ಸತ್ಯವಾಗುವುದಿಲ್ಲವಲ್ಲ! ಮೊನ್ನೆ ನಡೆದ ಚುನಾವಣೆಯಲ್ಲಿ ಭಾರತದ ಮತದಾರ ನೀಡಿದ ತೀರ್ಪು ತೀರಾ ವಿಭಿನ್ನವಾ
ದದ್ದು. ಇದು ಅಧಿಕಾರದಲ್ಲಿರುವ ಪಕ್ಷದ ಅತಿ ಯಾದ ಆತ್ಮವಿಶ್ವಾಸ ಮತ್ತು ಎಲ್ಲ ಎಕ್ಸಿಟ್ ಪೋಲ್ ಗಳನ್ನೂ ಹುಸಿಗೊಳಿಸಿದ ಚುನಾವಣೆ. ಬಹುತೇಕ
ಪ್ರಮುಖ ರಾಜಕೀಯ ಪಕ್ಷಗಳಿಗೆ ಒಂದು ಬಗೆಯ ಖುಷಿ ಇದ್ದರೂ ಸಂತೋಷ ಪಡಲಾಗದ ಪರಿಸ್ಥಿತಿ.

ಚುನಾವಣೆಯ ಫಲಿತಾಂಶ ಬಂದಾಗಿನಿಂದ ಇವತ್ತಿನವರೆಗೂ ಕಾಯುತ್ತಿದ್ದೇನೆ, ಇವಿಎಮ್ ಅಥವಾ ಮತಯಂತ್ರಗಳು ಸರಿಯಾಗಿರಲಿಲ್ಲ ಎಂದು ಈ ಬಾರಿ ಯಾರೂ ಹೇಳಿದ್ದು ಕೇಳಿಬಂದಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಚುನಾವಣೆಯಲ್ಲಿ ಪಡೆಯುತ್ತಿದ್ದ ಆಪಾದನೆ ಯಿಂದ ಈ ಸಲ ಇವಿಎಮ್ ಮುಕ್ತಿ ಪಡೆಯಿತೆ? ರಾಮಾಯಣದ ಸೀತಾಮಾತೆಯೂ ಅಗ್ನಿಪರೀಕ್ಷೆ ಎದುರಿಸಿದ್ದಳು, ಆದರೆ ಒಮ್ಮೆ ಮಾತ್ರ. ಆದರೆ ಭಾರತದ ಇವಿಎಮ್ ಅದೆಷ್ಟು ಬಾರಿ ಅಗ್ನಿಪರೀಕ್ಷೆ ಎದುರಿಸಿತು ನೋಡಿ! ಸೀತೆಯ ಅಗ್ನಿಪರೀಕ್ಷೆಯ ನಂತರ ಅಯೋಧ್ಯೆಯ ಒಬ್ಬ ಪ್ರಜೆ ಬಿಟ್ಟರೆ ಬೇರೆಯಾರೂ ಆ ಕುರಿತು ಮಾತನಾಡಿದ ಉಲ್ಲೇಖವಿಲ್ಲ. ಆದರೆ ಭಾರತದ ರಾಜಕೀಯ ಪಕ್ಷದ ರೂಪದಲ್ಲಿರುವ ಪ್ರಜೆಗಳು ಇವಿಎಮ್ ಪವಿತ್ರ ಎಂದು ಒಪ್ಪಲೇ ಇಲ್ಲ. ಪ್ರತಿ ಚುನಾವಣೆಯ ನಂತರವೂ ಯಂತ್ರವನ್ನು ವನವಾಸಕ್ಕೆ ಕಳಿಸಿ, ಪುನಃ ಬ್ಯಾಲೆಟ್ ಪೇಪರ್ ಮತದಾನ ನಡೆಸುವಂತೆ ಒತ್ತಾಯಿಸುತ್ತಿದ್ದರು. ಪಾಪ ಇವಿಎಮ್! ಈ ಸಲದ ಚುನಾವಣೆಯ ಫಲಿತಾಂಶ ಇವಿಎಮ್ ಮೇಲಿರುವ ಅಪವಾದವನ್ನು ಶಾಶ್ವತವಾಗಿ ತೊಡೆದುಹಾಕುತ್ತದೆಯೇ ಅಥವಾ ಇದೂ
ತಾತ್ಕಾಲಿಕವೇ ಎಂಬುದನ್ನು ಕಾದು ನೋಡಬೇಕು!

Leave a Reply

Your email address will not be published. Required fields are marked *

error: Content is protected !!