Thursday, 12th December 2024

ಸ್ವಯಂ ಪ್ರೇರಿತ ನಿರ್ಬಂಧ ಇಂದಿನ ಆದ್ಯತೆ

ಅಭಿವ್ಯಕ್ತಿ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಮಾಸ್ಕ್ ಧರಿಸಿ… ಇಲ್ಲ, ಧರಿಸಲ್ಲ, ಸಾಮಾಜಿಕ ಅಂತರ ಕಾಪಾಡಿ… ಇಲ್ಲ ಕಾಪಾಡಲ್ಲ, ಸಾನಿಟೈಸರ್ ಬಳಸಿರಿ, ಕೈ ತೊಳೆ ಯುತ್ತಿರಿ… ಇಲ್ಲ ಬಳಸಲ್ಲ, ತೊಳೆಯೊಲ್ಲ, ಅನಾವಶ್ಯಕ ತಿರುಗಾಡಬೇಡಿ… ಸಾಧ್ಯವಿಲ್ಲ, ಗುಂಪಾಗಿ ಸೇರಬೇಡಿ… ಸೇರುತ್ತೇವೆ, ಮನೆಯಿಂದ ಹೊರಗೆ ಬರುವುದನ್ನು ಕಡಿಮೆ ಮಾಡಿ… ಬರುತ್ತೇವೆ. ಈ ರೀತಿ ಎಲ್ಲದಕ್ಕೂ ಭಂಡತನ ತೋರಿ ಮತ್ತು ಎಲ್ಲದಕ್ಕೂ ಸೆಡ್ಡು ಹೊಡೆದಂತೆ ನಡೆಯುವುದು. ಯಾವುದನ್ನು ಪಾಲಿಸದೇ ಕೊನೆಗೆ ಪ್ರಾಣಕ್ಕೆ ಅಪಾಯ ಬಂದಾಗ ಸರಕಾರ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ, ನಿದ್ರಿಸುತ್ತಿದೆ ಎಂಬಿತ್ಯಾದಿ ಆರೋಪವನ್ನು ಸರಕಾರದ ಮೇಲೆ ಹೊರಿಸುವುದು ಸಮಂಜಸವೆ.

ಕೋವಿಡ್‌ನಿಂದ ಉಂಟಾಗುತ್ತಿರುವ ಕರಾಳ ಚಿತ್ರಣಗಳು ಚರಿತ್ರೆಯಲ್ಲಿ ಕೇಳಿದ ಮಹಾಯುದ್ಧ, ಮಹಾಪಿಡುಗುಗಳು ನಮ್ಮೆದುರಿಗೆ
ಹಾದುಹೊಗುವಂತೆ ಭಾಸವಾಗುತ್ತಿದೆ. ಬದುಕಿ, ಬದುಕ ಬಿಡುವ ಆರೋಗ್ಯಪೂರ್ಣ ಕಾರ್ಯ ನಮ್ಮದಾದಲ್ಲಿ ಕೋವಿಡ್ ಸಂಕಷ್ಟ ಗಳಿಂದ ನಾವು ಬಹುಬೇಗ ಪಾರಾಗುವುದು ನಿಶ್ಚಿತ.

ಕೋವಿಡ್ ಸಂಕಷ್ಟದಿಂದ ದೇಶದಲ್ಲಿ ಅಘೋಷಿತ ಆರೋಗ್ಯ ಪರಿಸ್ಥಿತಿ ಉಂಟಾಗಿದೆ ಎಂದರೆ ತಪ್ಪಿಲ್ಲ. ಮೊದಲ ಲಾಕ್‌ಡೌನ್ ತಂದಿತ್ತ ವಿಷಮ ಪರಿಸ್ಥಿತಿ ತಿಳಿಯಾಗುವ ಮೊದಲೇ ಎರಡನೆಯ ಅಲೆಯು ಚಂಡಮಾರುತ ದಂತೆ ಅಪ್ಪಳಿಸಿದ್ದರಿಂದ ದೇಶ ನಲುಗಿದೆ. ಜನರ ಮಾನಸಿಕ ಸಾಮರ್ಥ್ಯ ಕುಸಿದು ಹೋಗುತ್ತಿದೆ, ಒತ್ತಡ ಹೆಚ್ಚಾಗುತ್ತಿದೆ. ಆದರೆ ಈ ಸಮಯವೂ ಸರಿದು
ಹೋಗುತ್ತದೆ. ಶಿಷ್ಟಾಚಾರಗಳ ಬಗ್ಗೆ ಅವಿಧೇಯತೆಯನ್ನು ತೋರಿಸದಿದ್ದಲ್ಲಿ ನಿಯಂತ್ರಣ ಸಾಧ್ಯ. ಜನತೆ ಸಹಕರಿಸದಿದ್ದಲ್ಲಿ ಸಾಂಕ್ರಾಮಿಕದಿಂದ ಸಂಪೂರ್ಣ ಯಶಸ್ಸು ಸಿಗುವುದಿಲ್ಲ.

ಕಳೆದೊಂದು ವರ್ಷದಿಂದ ಹಿಂದೆಂದೂ ಕಂಡರಿಯದ ಸವಾಲುಗಳು ಮತ್ತು ಅನಿಶ್ಚಿತ ಪರಿಸ್ಥಿತಿಗಳು ಎದುರಾಗಿವೆ. ಬದುಕಿನ ಎಲ್ಲಾ ಸ್ಥರದ ನಾಗರಿಕರು ಭವಿಷ್ಯದ ಬಗ್ಗೆ ತೀವ್ರ ಆತಂಕ ಹೊಂದಿದ್ದಾರೆ. ಉದ್ಯೋಗಸ್ಥರಾದರೆ ಕೈಯಲ್ಲಿರುವ ಉದ್ಯೋಗ ಕಾಪಾಡಿಕೊಳ್ಳುವ ಸವಾಲು, ಭವಿಷ್ಯದ ನೂರಾರು ಕನಸುಗಳ ಬೆನ್ನೇರಿದ ವಿದ್ಯಾರ್ಥಿಗಳ ಆತಂಕ, ಅನುಮಾನಗಳು, ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ಒತ್ತಡ, ಒಟ್ಟಾರೆ ಈ ಮಹಾಮಾರಿಯಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಬದುಕಿನ ಎಲ್ಲಾ ಸ್ಥರಳಗಳು ಬದಲಾವಣೆಯಾದವು.

ಮನುಕುಲವು ಇತಿಹಾಸದಲ್ಲಿ ಇಂತಹ ನೈಸರ್ಗಿಕ ವಿಕೋಪಗಳನ್ನು ಮೆಟ್ಟಿ ನಿಂತಿದೆ ಎಂಬುದನ್ನು ಚರಿತ್ರೆಯ ಪುಟಗಳು ಹೇಳುತ್ತವೆ. ಯಾವುದೇ ದೇಶ ಅಥವಾ ಸಮುದಾಯಗಳು ಅಪಾಯಕ್ಕೆ ಹೆದರಿ ಪಲಾಯನ ಮಾಡಿಲ್ಲ. ಪ್ರತಿದಿನವೂ ಸುಖವನ್ನೇ
ಬಯಸುವುದು ತಪ್ಪು. ಇಂದಿನ ಆದ್ಯತೆ ಮತ್ತು ಅಗತ್ಯತೆ ಸಂಯಮ ಮತ್ತು ಸಂಕಲ್ಪ. ಜೀವನದ ಪಯಣದಲ್ಲಿ ಅಡ್ಡಿ ಆತಂಕ ಸಹಜ. ಪ್ರಸಕ್ತ ಸನ್ನಿವೇಶದಲ್ಲಿ ಕೊರೊನಾ ಶಿಷ್ಟಾಚಾರಗಳನ್ನು ಪಾಲಿಸುವುದರೊಂದಿಗೆ ಖಿನ್ನತೆಯ ವಿರುದ್ಧವೂ ಹೋರಾಡಿ ಜೀವನೋತ್ಸಹ ಮಂಕಾಗದಂತೆ ನೋಡಿಕೊಳ್ಳಬೇಕಾಗಿದೆ.

ಕೋವಿಡ್ ಪರಿಣಾಮದ ಆರ್ಥಿಕ, ಸಾಮಾಜಿಕ ಹೊಡೆತಗಳಿಂದ ಶಾಲಾ ಕಾಲೇಜು ಓದುತ್ತಿರುವ ಮಕ್ಕಳ ಮೇಲೆ ಗಂಭೀರ
ಮಾನಸಿಕ ಪರಿಣಾಮವಾಗದಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ. ಇದೀಗ ಕರೋನಾ ಎರಡನೆಯ ಅಲೆ ವ್ಯಾಪಿಸು ತ್ತಿರುವ ರೀತಿ ಹಾಗೂ ಸೋಂಕು ಹರಡು ತ್ತಿರುವ ವೇಗ ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ ಮತ್ತು ಅಪಾಯಕಾರಿ ಸನ್ನಿವೇಶವನ್ನು ತಲುಪಿಯಾಗಿದೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಜನತೆ ತಮ್ಮ ಪ್ರಾಣ ಉಳಿಸಿಕೊಳ್ಳುವುದರ ಜತೆಗೆ
ಸಮುದಾಯದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯೂ ಇದೆ ಎಂದರೆ ತಪ್ಪಿಲ್ಲ.

ಬಹುಪಾಲು ಜನ ಎಚ್ಚರಿಕೆ ವಹಿಸುತ್ತಿದ್ದರೂ ಎಲ್ಲರ ಸಹಭಾಗಿತ್ವ ಅನಿವಾರ್ಯ. ಕರೋನಾ ನಿಯಂತ್ರಣ ವಿಚಾರದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತ ನಿರ್ಬಂಧ ಹೇರಿಕೊಳ್ಳುವುದು ಉತ್ತಮ ಅದು ಅಗತ್ಯ ಮತ್ತು ಜವಾಬ್ದಾರಿಯೂ ಕೂಡ.
ಅನಾರೋಗ್ಯ ಕಾಡುವವರೆಗೆ ಆರೋಗ್ಯದ ಬೆಲೆ ಗೊತ್ತಾಗುವುದಿಲ್ಲ. ಕಾಳಜಿ ವಹಿಸಿದರೆ ಆರೋಗ್ಯವೇ ವರದಾನ, ಆರೋಗ್ಯವೇ ಹೂಡಿಕೆ ಸರ್ವಸ್ವ ಸಂಪತ್ತು ಎಲ್ಲವೂ ಕೂಡಾ. ತಪ್ಪಿದರೆ ತುಂಬಲಾರದ ನಷ್ಟ, ಕಷ್ಟ, ಆತಂಕ.

ನಮ್ಮ ಪ್ರಾಣ ಮತ್ತು ಆರೋಗ್ಯಕ್ಕೆ ನಾವೇ ಜವಾಬ್ದಾರಿ. ಪ್ರಸಕ್ತ ಸನ್ನಿವೇಶದಲ್ಲಿ ನಿಯಮ, ಶಿಸ್ತು, ಶಿಷ್ಟಾಚಾರಗಳನ್ನು ಪಾಲಿಸ ದಿದ್ದರೆ ಸೋಂಕಿನ ಸುಳಿಯೊಳಗೆ ಸಿಲುಕುವುದು ಖಚಿತ. ವೈರಸನ್ನು ನಿಯಂತ್ರಣದಲ್ಲಿಡಲು ಸದಾಕಾಲ ಲಾಕ್‌ಡೌನ್ ವಿಧಿಸು ವುದು ಸಾಧ್ಯವಿಲ್ಲ. ಅದು ಪ್ರಾಯೋಗಿಕವೂ ಅಲ್ಲ. ಬದುಕು ಮುನ್ನಡೆಯಬೇಕು. ಇದಕ್ಕೆ ಪ್ರತಿಯೊಬ್ಬರೂ ಜಾಗರೂಕತೆಯಿಂದ ನಿರ್ಬಂಧದಲ್ಲಿ ಕಳೆಯಲೇಬೇಕು.

ಮಾಸ್ಕ್ ಧರಿಸಿ… ಇಲ್ಲ, ಧರಿಸಲ್ಲ, ಸಾಮಾಜಿಕ ಅಂತರ ಕಾಪಾಡಿ… ಇಲ್ಲ ಕಾಪಾಡಲ್ಲ, ಸಾನಿಟೈಸರ್ ಬಳಸಿರಿ, ಕೈ ತೊಳೆಯುತ್ತಿರಿ… ಇಲ್ಲ ಬಳಸಲ್ಲ, ತೊಳೆಯೊಲ್ಲ, ಅನಾವಶ್ಯಕ ತಿರುಗಾಡಬೇಡಿ… ಸಾಧ್ಯವಿಲ್ಲ, ಗುಂಪಾಗಿ ಸೇರಬೇಡಿ… ಸೇರುತ್ತೇವೆ, ಮನೆಯಿಂದ ಹೊರಗೆ ಬರುವುದನ್ನು ಕಡಿಮೆ ಮಾಡಿ… ಬರುತ್ತೇವೆ. ಈ ರೀತಿ ಎಲ್ಲದಕ್ಕೂ ಭಂಡತನ ತೋರಿ ಮತ್ತು ಎಲ್ಲದಕ್ಕೂ ಸೆಡ್ಡುಹೊಡೆ ದಂತೆ ನಡೆಯುವುದು. ಯಾವುದನ್ನು ಪಾಲಿಸದೇ ಕೊನೆಗೆ ಪ್ರಾಣಕ್ಕೆ ಅಪಾಯ ಬಂದಾಗ ಸರಕಾರ ಜನರ ಜೀವನದ ಜತೆ ಚೆಲ್ಲಾಟ ವಾಡುತ್ತಿದೆ, ನಿದ್ರಿಸುತ್ತಿದೆ ಎಂಬಿತ್ಯಾದಿ ಆರೋಪವನ್ನು ಸರಕಾರದ ಮೇಲೆ ಹೊರಿಸುವುದು ಮತ್ತು ಮಾಧ್ಯಮ ಮತ್ತು
ಸಾಮಾಜಿಕ ಜಾಲತಾಣಗಳಲ್ಲಿ ತಾಮುಂದು, ತಾಮುಂದು ಎಂಬಂತೆ ಬಿಂಬಿಸಿ ಸರಕಾರ ನಿಷ್ಕ್ರಿಯವಾಗಿದೆ, ಜನನಾಯಕರು ನಾಪತ್ತೆಯಾಗಿದ್ದಾರೆ ಎಂಬ ಹೇಳಿಕೆಗಳು ತಪ್ಪು ಮತ್ತು ಎಲ್ಲಾ ಕಾಲಕ್ಕೂ ಸರಿಹೋಗುವ ವಿಚಾರವಲ್ಲ.

ಯಾವ ಸರಕಾರವೂ ಕೂಡಾ ತನ್ನ ಪ್ರಜೆಗಳ ಓಡಾಟವೆಲ್ಲಾ ನಿಂತು, ಆರ್ಥಿಕ ಚಟುವಟಿಕೆಗಳೆಲ್ಲಾ ಬಂದಾಗಿ ತನ್ನ ಬೊಕ್ಕಸ
ಬರಿದಾಗಲಿ ಎಂದು ಬಯಸುವುದಿಲ್ಲ. ಪ್ರಜೆಗಳು ಸುಖವಾಗಿದ್ದರೇನೇ ಸರಕಾರಕ್ಕೆ ನೆಮ್ಮದಿ. ಆದರೆ ಸರಕಾರಗಳು ಮತ್ತು ಜನ ನಾಯಕರು ತಪ್ಪೆಸಗಿಲ್ಲ ವೆಂದು ಹೇಳಲಾಗದು. ವಿಜ್ಞಾನಿಗಳು, ತಜ್ಞರು, ಪ್ರಖ್ಯಾತ ವೈದ್ಯರು, ಪರಿಣತರು ಎರಡನೆಯ ಅಲೆಯ ಬಗ್ಗೆ ಸೂಚನೆ ಮತ್ತು ಎಚ್ಚರಿಕೆ ನೀಡುತ್ತಾ ಬಂದಾಗ್ಯೂ, ಭಾರತವು ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದ
ಕೊನೆಯ ಹಂತದಲ್ಲಿದ್ದೇವೆಂದು ಕೇಂದ್ರದ ಆರೋಗ್ಯ ಸಚಿವರೇ ಎರಡನೆಯ ಅಲೆಯ ಮುಂಚೆ ಹೇಳಿದ್ದರು.

ಕೆಲವು ತಿಂಗಳು ಕೋವಿಡ್ ಪ್ರಕರಣಗಳು ಕಡಿಮೆ ಇದ್ದವು. ಹಾಗಾಗಿ ಭಾರತವು ಕೋವಿಡನ್ನು ಹಿಮ್ಮೆಟಿಸಿತು ಎಂಬುದೇ ಸರಕಾರದ ಭಾವನೆಯಾಗಿತ್ತು. ಭಾರೀ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಯಿತು. ಇಲ್ಲಿ ಕುಂಭಮೇಳವನ್ನು ಉಲ್ಲೇಖಿಸ ಬಹುದು. ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸಭೆ ಸಮಾರಂಭಗಳು ಎಗ್ಗಿಲ್ಲದೆ ನಡೆದವು. ಜನರಲ್ಲಿ ಎರಡನೆಯ ಅಲೆಯ ಬಗ್ಗೆ ಗಂಭೀರವಾದ ಎಚ್ಚರಿಕೆ ಮತ್ತು ಜಾಗ್ರತೆ ಮೂಡಿಸುವುದು. ಇತರ ದೇಶಗಳ ಉದಾಹರಣೆ ನೀಡದಿರುವುದು, ಸ್ಪಾನಿಷ್ -ನ ಎರಡನೆಯ ಅಲೆಯಲ್ಲಾದ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡದೆ ನಿರ್ಲಕ್ಷ್ಯ ತೋರಿಸಿರುವು ದರಿಂದ ಭಾರಿ ಬೆಲೆ ತೆರಬೇಕಾಗಿದೆ.

ನಾಲ್ಕು ರಾಜ್ಯಗಳ ಮತ್ತು ಪುದುಚೇರಿ ವಿಧಾನಸಭೆಗೆ ನಡೆದ ಚುನಾವಣೆ ಮತ್ತು ಇತರ ಉಪಚುನಾವಣೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯಾಗದಿರುವುದು ತುಂಬಾ ದುರದೃಷ್ಟಕರ. ಪಾಶ್ಚಾತ್ಯ ದೇಶಗಳೂ ಈ ಬಗ್ಗೆ ತಮ್ಮ ಟೀಕೆ ವ್ಯಕ್ತಪಡಿಸಿವೆ. ಎರಡನೆಯ ಅಲೆಯ ಪರಿಜ್ಞಾನವೇ ಇಲ್ಲವೆಂಬಂತೆ ದೇಶದ ಜನರಿಗೆ ಕಡ್ಡಾಯವಾಗಿ ಲಸಿಕೆ ನೀಡುವ ಬದಲು ಇತರ ದೇಶಗಳಿಗೆ ರಫ್ತು ಮಾಡಿತು.

ಕೇಂದ್ರ 93 ದೇಶಗಳಿಗೆ ಲಸಿಕೆ ಮಾರಾಟ ಮಾಡಿದ್ದು ಆ ಪೈಕಿ ಶೇ.60ರಷ್ಟು ದೇಶಗಳಲ್ಲಿ ಸೋಂಕು ನಿಯಂತ್ರಣದಲ್ಲಿದೆ. ಅಲ್ಲದೆ
ಅಲ್ಲಿ ಸಾವಿನ ಭೀತಿಯೂ ಕಡಿಮೆಯಿದೆ. ಈ ಸಂದರ್ಭದಲ್ಲಿ ಈ ಎರಡನೆಯ ಅಲೆಯ ತೀವ್ರತೆಯಿಂದ ಯುವಕರು ಬಲಿಯಾಗು ತ್ತಿರುವುದು ಚಿಂತಾಜನಕವೇ ಸರಿ. ಕೋವಿಡ್ ನಿಯಂತ್ರಣದಲ್ಲಿ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ದೇಶ ಕೈಚೆಲ್ಲಿತು. ಕೇಂದ್ರ ಸರಕಾರದ ಕೋವಿಡ್ ಕಾರ್ಯಪಡೆಯು ಏಪ್ರಿಲ್‌ವರೆಗೆ ಹಲವು ತಿಂಗಳಿಂದ ಸಭೆಯೇ ಸೇರಲಿಲ್ಲ. ಇದರಿಂದಾದ ದುಷ್ಪರಿಣಾಮ ವನ್ನು ಈಗ ಕಣ್ಣಮುಂದೆ ನೋಡುತ್ತಿದ್ದೇವೆ.

ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ತುರ್ತು ಕ್ರಮಕೈಗೊಳ್ಳುವಲ್ಲಿ ವಿಫಲವಾಯಿತು. ಇದರಿಂದಾಗಿ ಕಟ್ಟಕಡೆಗೆ ಅತ್ಯಂತ ದುಷ್ಪರಿಣಾಮ ಎದುರಿಸಬೇಕಾದವರು ಕೂಲಿಕಾರ್ಮಿಕರು, ಅಸಹಾಯಕರು, ಅಸಂಘಟಿತ ವಲಯದ ನೌಕರರು, ಬೀದಿ ಬದಿ ವ್ಯಾಪಾರಿಗಳು. ಒಟ್ಟಾರೆ ಬಡವರು ಮತ್ತು ಕಡುಬಡವರು ಮತ್ತು ಮಾನಸಿಕಯಾತನೆ ಯಂತೂ ಎಲ್ಲಾ ವರ್ಗಕ್ಕೂ ಕಾಡು ವಂತಾಗಲಿಲ್ಲವೇ? ವಿಶ್ವದ ಶೆ. 18 ಜನಸಂಖ್ಯೆಯ 138 ಕೋಟಿ ಜನರಿರುವ ದೇಶ ನಮ್ಮದು.

ಚ.ಕಿಮೀಗೆ ಸರಾಸರಿ 422 ಜನ ವಾಸಿಸುತ್ತಿದ್ದಾರೆ. ಮಹಾನಗರಗಳ ಕೆಲವೆಡೆ ಈ ಸಾಂದ್ರತೆ ಚ.ಕಿ.ಮೀ.ಗೆ ಎರಡು ಲಕ್ಷಕ್ಕೂ
ಮೀರಿದೆ. ಇಂಥ ದೇಶದಲ್ಲಿ ಕರೋನಾದಂಥ ಸೋಂಕಿನಿಂದ ಪಾರಾಗುವುದು ಸುಲಭದ ಮಾತಲ್ಲ ಮತ್ತು ಪ್ರತಿಯೊಬ್ಬ ನಾಗರಿಕನ ಪ್ರಜ್ಞೆ ಮತ್ತು ಸಹಕಾರ ಅನಿವಾರ್ಯ.

ಇಂದು ನಾವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಜನಾಂಗಕ್ಕೆ ರಕ್ಷಣೆ ಕೊಡಬೇಕಾಗಿದೆ. ನಾವು ಶಿಷ್ಟಾಚಾರಕ್ಕೆ ವಿಧೇಯಕರಾಗಿ ಮಕ್ಕಳಲ್ಲಿ ಪ್ರಜ್ಞೆ, ಜಾಗ್ರತೆ ಮತ್ತು ಜವಾಬ್ದಾರಿಯನ್ನು ಮೂಡಿಸಬೇಕಾಗಿದೆ. ಸ್ವಯಂಪ್ರೇರಿತ ನಿರ್ಬಂಧಗಳು ಮತ್ತು ಸಂಯಮ, ಸಂಕಲ್ಪ ಇಂದಿನ ಆದ್ಯತೆ.