Thursday, 12th December 2024

ನಿಮ್ಮ ಸ್ವಾರ್ಥಕ್ಕೆಂದು ನಮ್ಮ ಬದುಕಿಗೆ ಕೊಳ್ಳಿ ಇಡಬೇಡಿ

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ರೈತ ಹೋರಾಟಗಾರರನ್ನು ಖಲಿಸ್ತಾನಿಗಳು ಎಂದು ಕರೆದಿದ್ದರು ಎಂಬ ಕಾರಣಕ್ಕೆ ಸಂಸದೆ ಕಂಗನಾ ರಣಾವತ್ ಅವರಿಗೆ ಕುಲ್ವಿಂದರ್ ಕೌರ್ ಎಂಬ
ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಕ್ಕೆ ಹೊಡೆದಿದ್ದಾರೆ. ರಕ್ಷಣೆ ಮಾಡಬೇಕಾದವರೇ ಹೀಗೆ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ಮಾಡಿರುವುದು ಅತ್ಯಂತ ಆತಂಕದ ಬೆಳವಣಿಗೆಯಾಗಿದೆ.

ಕುಲ್ವಿಂದರ್ ಕೌರ್ ಅವರ ದುರ್ವರ್ತನೆಯನ್ನು ಹಲವರು ಸಮರ್ಥಿಸಿಕೊಂಡು ಸಾಮಾಜಿಕ ತಾಣದಲ್ಲಿ ಬೆಂಬಲಿಸಿರುವುದು ಕೂಡ ಅತ್ಯಂತ ಗಂಭೀರ ವಿಷಯ. ದುರ್ದೈವವೆಂದರೆ, ಪ್ರಮುಖ ವಿರೋಧ ಪಕ್ಷಗಳ ನಾಯ ಕರು ಇದರ ಬಗ್ಗೆ ಚಕಾರವೆತ್ತದೆ, ಕೌರ್ ನಡವಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸು ತ್ತಿದ್ದಾರೆ. ಕಾನೂನು ಧಿಕ್ಕರಿಸಿ ಹಿಂಸಾತ್ಮಕ ವರ್ತನೆ ತೋರಿದವರನ್ನು ಖಂಡಿಸದೆ ದೇಶದ ಹಿತವನ್ನು ಬಲಿಕೊಡುತ್ತಿದ್ದಾರೆ.

ಆರೋಪಿಗಳಿಗೆ ಹೀಗೆ ದೊರೆಯುವ ರಾಜಕೀಯ ಬೆಂಬಲದಿಂದಾಗಿ ಇಂಥ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಸಿಖ್ ದಂಗೆಯ ಆರೋಪಿತರಾಗಿದ್ದ ಜಗದೀಶ್ ಟೈಟ್ಲರ್‌ಗೆ ಸಿಬಿಐ ಕ್ಲೀನ್‌ಚಿಟ್ ನೀಡಿದ್ದನ್ನು ವಿರೋಽಸಿ ೨೦೦೯ರ ಚುನಾವಣೆಯ ಸಂದರ್ಭದಲ್ಲಿ ಜರ್ನೈಲ್‌ ಸಿಂಗ್ ಎಂಬ ಪತ್ರ ಕರ್ತರು ಎಐಸಿಸಿ ಕಚೇರಿಯಲ್ಲಿ ಅಂದಿನ ಗೃಹಸಚಿವ ಪಿ.ಚಿದಂಬರಂರವರ ಪತ್ರಿಕಾಗೋಷ್ಠಿಯಲ್ಲಿ ಅವರ ಮೇಲೆ ಷೂ ಎಸೆದು ಹಲ್ಲೆಮಾಡಿದ್ದರು. ಜರ್ನೈಲ್‌ಸಿಂಗ್ ವರ್ತನೆ ಅತ್ಯಂತ ಖಂಡನೀಯವಾಗಿತ್ತು. ಆದರೆ ಅವರ ಈ ವರ್ತನೆಯನ್ನು ಆಮ್ ಆದ್ಮಿ ಪಾರ್ಟಿಯು ದೆಹಲಿಯ ಸಿಖ್ಖರ ಮತ ಪಡೆಯುವ ಸಾಧನವಾಗಿ ಬಳಸಿಕೊಳ್ಳಲು ೨೦೧೪ರಲ್ಲಿ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿತು. ಅದರಲ್ಲಿ ಪರಾಭವಗೊಂಡ ತರುವಾಯ, ೨೦೧೫ರಲ್ಲಿ ಅವರಿಗೆ ದೆಹಲಿ ವಿಧಾನಸಭೆಗೆ ಟಿಕೆಟ್ ನೀಡಿ ಗೌರವಾನ್ವಿತ ಶಾಸಕರನ್ನಾಗಿಸಿತು.

ಕರ್ಮ ಹೇಗೆ ಹಿಂದಿರುಗಿ ಬರುತ್ತದೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿಯಿದೆ. ೨೦೧೭ರಲ್ಲಿ ಅರವಿಂದ ಕೇಜ್ರಿವಾಲ್ ರೋಹ್ತಕ್‌ನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಯುವಕನೊಬ್ಬ ಅವರ ಮೇಲೆ ಚಪ್ಪಲಿ ಎಸೆದ. ಜರ್ನೈಲ್ ಸಿಂಗ್ ಚಪ್ಪಲಿ ಎಸೆದ ತರುವಾಯ, ಒಮರ್ ಅಬ್ದುಲ್ಲಾ ಹಾಗೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೂ ಚಪ್ಪಲಿ ಎಸೆದ ಘಟನೆಗಳು ಜರುಗಿದವು. ಹಿಂದೆ ನಡೆದ ಹೊಣೆಗೇಡಿ ವರ್ತನೆಯನ್ನು ಖಂಡಿಸದೆ ಗೌರವಿಸಿದ ಕಾರಣಕ್ಕೆ ಇತರರಿಗೆ ಅದು ಹೇಗೆ ಅನುಕರಣೀಯವಾಯಿತು ಎಂಬುದಕ್ಕೆ ತರುವಾಯದ ಇಂಥ ಘಟನೆಗಳು ಸಾಕ್ಷಿಯಾಗಿವೆ.

೨೦೦೮ರಲ್ಲಿ, ದೆಹಲಿಯ ಬಾಟ್ಲ ಹೌಸ್‌ನಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು. ಭಯೋತ್ಪಾದಕರ ಹೆಣದ ಚಿತ್ರ ನೋಡಿ ಸೋನಿಯಾ ಗಾಂಧಿಯವರು ಕಣ್ಣೀರಿಟ್ಟರು ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ತಿಳಿಸುತ್ತಾರೆ. ಕಾಂಗ್ರೆಸ್ ಪಾರ್ಟಿಗೆ ಕರ್ಮ ಹೇಗೆ ಬಂದಿರುವುದು ಎಂದರೆ, ರಾಜೀವ್ ಗಾಂಧಿಯವರ ಹತ್ಯೆಯ ಆರೋಪಿ ಪೆರಿಯ ವಾಲನ್ ೩೦ ವರ್ಷಗಳ ನಂತರ ಸೆರೆಮನೆಯಿಂದ ಹೊರ
ಬಂದಾಗ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆತನನ್ನು ಕರೆದು ಸನ್ಮಾನಿಸಿದರು.

ಆದರೆ ಡಿಎಂಕೆಯೊಂದಿಗೆ ಮೈತ್ರಿಭಂಗವಾಗುವ ಭೀತಿಯಿಂದ ಕಾಂಗ್ರೆಸ್ ನಾಯಕರು ಉಸಿರೆತ್ತಲಿಲ್ಲ. ಬಿಜೆಪಿ ಕೂಡ ಈ ವಿಷಯದಲ್ಲಿ ತಪ್ಪೆಸಗಿದೆ.
೨೦೦೮ರ ಮಾಲೇಗಾಂವ್ ಬಾಂಬ್ ಸೋಟದ ಆರೋಪಿ ಪ್ರಗ್ಯಾಸಿಂಗ್ ಠಾಕೂರ್ ಅವರಿಗೆ, ಅವರು ಆರೋಪದಿಂದ ಮುಕ್ತರಾಗುವ ಮುನ್ನವೇ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಟಿಕೆಟ್ ನೀಡಿ ಲೋಕಸಭಾ ಸದಸ್ಯರನ್ನಾಗಿ ಮಾಡಿ ಪ್ರಮಾದ ವೆಸಗಿತು. ೧೯೯೩ರ ಮುಂಬೈ ಬಾಂಬ್ ಸ್ಪೋಟದ ಆರೋಪಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ನಂತರ ಮುಂಬೈ ಯಲ್ಲಿ ನಡೆದ ಅವನ ಅಂತ್ಯಕ್ರಿಯೆಯಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗದ್ದರು. ಭೂಗತ ಜಗತ್ತಿನ ಪಾಪಿಗಳು ಮೃತಪಟ್ಟರೆ ಅವರನ್ನು ವೈಭವೀಕರಿ ಸುವ ಕೆಟ್ಟನಡೆ ಸಾಮಾನ್ಯವಾಗಿದೆ.

ಕುಖ್ಯಾತ ಅಪರಾಧಿ ಮುಖ್ತಾರ್ ಅನ್ಸಾರಿ ಮೃತನಾದಾಗ ಅವನ ಅಂತ್ಯಕ್ರಿಯೆ ಯಲ್ಲಿ ಸಾವಿರಾರು ಜನರು ಭಾಗವಹಿಸಿ, ಭೂಗತ ಜಗತ್ತಿನ ಕ್ರಿಮಿಯಾಗಿ ದ್ದರೂ ಸಮುದಾಯ ಅವನ ಕೈಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದರು. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಯು ಅಣ್ಣಾಮಲೈ ಅವರ ನೇತೃತ್ವದಲ್ಲಿ ಶೇ.೧೧ರಷ್ಟು ಮತವನ್ನು ಪಡೆದಿದೆ. ಸ್ವತಂತ್ರವಾಗಿ ಸ್ಪರ್ಧಿಸಿ ೯ ಸೀಟುಗಳಲ್ಲಿ ಎರಡನೆಯ ಸ್ಥಾನದಲ್ಲಿದೆ. ಬಿಜೆಪಿಯ ಈ ಬೆಳವಣಿಗೆ ಡಿಎಂಕೆಯ ನಿದ್ರೆಗೆಡಿಸಿದೆ.

ಚುನಾವಣಾ ಫಲಿತಾಂಶದ ನಂತರ ಡಿಎಂಕೆ ಕಾರ್ಯಕರ್ತರು ಕೃಷ್ಣಗಿರಿಯಲ್ಲಿ ಮೇಕೆಯೊಂದಕ್ಕೆ ಅಣ್ಣಾಮಲೈ ಅವರ ಚಿತ್ರ ಹಾಕಿ, ಅದರ ತಲೆ ಕತ್ತರಿಸಿ ರಕ್ತವನ್ನು ಚೆಲ್ಲಾಡಿದರು. ಚಿಕ್ಕ ಮಕ್ಕಳು ಅಣ್ಣಾಮಲೈ ವಿರುದ್ಧ ಪ್ರಚೋದನಕಾರಿಯಾಗಿ ಘೋಷಣೆ ಕೂಗಿ ಸಂಭ್ರಮಿಸಿದರು. ಸಾಲದೆಂಬಂತೆ, ಈ ಭಯಾನಕ ಕೃತ್ಯದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಯಥಾ ಪ್ರಕಾರ, ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಹೇಳುವ ಯಾರೊಬ್ಬ ನಾಯಕರೂ ಹಿಂಸೆಗೆ ಪ್ರಚೋದಿಸುವ ಇಂಥ ಕೃತ್ಯವನ್ನು ಖಂಡಿಸಲಿಲ್ಲ. ಈ ಅಮಾನುಷ ಕೃತ್ಯದ ಬಗ್ಗೆ
ಸಾರ್ವತ್ರಿಕವಾಗಿ ಖಂಡನೆಯಾಗಬೇಕಿತ್ತು. ಇದರಲ್ಲಿ ಭಾಗಿಯಾದವರ ಮೇಲೆ ರಾಜ್ಯ ಸರಕಾರವು ಕಾನೂನಾತ್ಮಕ ಕ್ರಮವನ್ನು ಜರುಗಿಸಬೇಕಿತ್ತು. ಆದರೆ ಅಣ್ಣಾಮಲೈಯವರು ತಮ್ಮ ರಾಜಕೀಯ ವಿರೋಧಿ ಎಂಬ ಕಾರಣಕ್ಕೆ ಆ ಸರಕಾರ ಈ ಪ್ರಕರಣವನ್ನು ನಿರ್ಲಕ್ಷಿಸಿದೆ.

೨೦೨೪ರ ಲೋಕಸಭಾ ಚುನಾವಣಾ ಫಲಿತಾಂಶವು ಪಂಜಾಬ್‌ನಲ್ಲಿ ಮತ್ತೆ ಪ್ರತ್ಯೇಕತಾವಾದಿಗಳು ತಳವೂರುತ್ತಿರುವ ಸ್ಪಷ್ಟ ಸೂಚನೆಯನ್ನು ನೀಡಿದೆ. ಸಿಖ್ ಪ್ರತ್ಯೇಕತಾ ವಾದಿ ಮತ್ತು ಖಲಿಸ್ತಾನದ ಪರವಾಗಿರುವ ವಾರಿಸ್ ಪಂಜಾಬ್ ಡೇ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಂಧು ಅನೇಕ ಗಂಭೀರ ಆರೋಪಗಳನ್ನು ಹೊತ್ತಿರುವಾತ. ಇವನ ಬಂಧನಕ್ಕಾಗಿ ಒಂದು ತಿಂಗಳು ಹುಡುಕಾಟ ನಡೆಸಿದ ತರುವಾಯ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೋಗಾ ದಲ್ಲಿ ಇವನನ್ನು ಬಂಧಿಸಲಾಯಿತು. ಈತ ಅಸ್ಸಾಂನ ದಿಬ್ರುಗಢ ಸೆರೆಮನೆಯಲ್ಲಿ ಇದ್ದುಕೊಂಡೇ ಖಡೂರ್ ಸಾಹೇಬ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ೨ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ.

ಈ ಜಯವು, ಪಂಜಾಬಿನ ಜನರು ಮತ್ತೆ ಪ್ರತ್ಯೇಕತಾವಾದಕ್ಕೆ ಮಣೆಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇಂದಿರಾ ಗಾಂಧಿಯವರ ಹಂತಕ ಬಿಯಾಂತ್ ಸಿಂಗ್‌ನ ಪುತ್ರ ಸರಬ್‌ಜೀತ್ ಸಿಂಗ್ ಖಾಲ್ಸಾ, ಫರೀದ್ ಕೋಟ್ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದಾನೆ. ಇವನು ಕೂಡ ಖಲಿಸ್ತಾನ ಸಿದ್ಧಾಂತದ ಪರ ಒಲವು ಇರುವವನು. ಇಂದು ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಇವನ ಜತೆ ಹಂಚಿಕೊಳ್ಳುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷವು ದೇಶದ ಹಿತಕ್ಕಿಂತ ತನ್ನ ರಾಜಕೀಯ ಹಿತಕ್ಕೆ ಪ್ರಾಶಸ್ತ್ಯ ಕೊಡುವುದು ಹೊಸದೇನಲ್ಲ.

ಇಂದಿರಾ ಗಾಂಧಿಯವರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಕೇಹರ್ ಸಿಂಗ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ರಾಮ್ ಜೇಠ್ಮಲಾನಿ ಯವರಿಗೆ ಲಖನೌ ನಲ್ಲಿ ವಾಜಪೇಯಿ ವಿರುದ್ಧ ಸ್ಪರ್ಧಿಸಲು ಅದು ಟಿಕೆಟ್ ನೀಡಿತ್ತು. ವಾಸ್ತವವಾಗಿ ರಾಮ್ ಜೇಠ್ಮಲಾನಿಯವರನ್ನು ಬಿಜೆಪಿಯಿಂದ ಹೊರಹಾಕಲಾಗಿತ್ತು. ಕರ್ನಾಟಕದ ಅಂದಿನ ಸಂಸದ ಡಿ.ಕೆ.ಸುರೇಶ್‌ರವರು ಸಂಸತ್ ಭವನದ ಮುಂದೆ ನಿಂತು, ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ಸರಿಪಡಿಸದಿದ್ದರೆ ದಕ್ಷಿಣದ ರಾಜ್ಯಗಳು ಪ್ರತ್ಯೇಕ ದೇಶವಾಗುವ ಕಾಲ ದೂರವಿಲ್ಲ ಎಂಬ ಹೇಳಿಕೆ ಕೊಟ್ಟರೂ ಕಾಂಗ್ರೆಸ್ ಅವರ ವಿರುದ್ಧ ಯಾವ ಕ್ರಮವನ್ನೂ ಜರುಗಿಸಲಿಲ್ಲ.

ಭಯೋತ್ಪಾದಕ ಸಂಘಟನೆಗಳಿಗೆ ಧನಸಹಾಯ ಮಾಡಿದ ಆರೋಪದ ಮೇಲೆ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿತನಾಗಿ ದೆಹಲಿಯ ತಿಹಾರ್
ಜೈಲಿನಲ್ಲಿ ಕಳೆದ ಐದು ವರ್ಷದಿಂದ ಕಂಬಿ ಎಣಿಸುತ್ತಿರುವ ರಶೀದ್ ಇಂಜಿನಿಯರ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಅಭ್ಯರ್ಥಿ ಯಾಗಿ ಒಮರ್ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ, ೨ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸಿದ. ಇವನ ಜಯವು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಶಕ್ತಿ ತುಂಬುತ್ತದೆ ಎಂಬ ಕಳವಳವನ್ನು ಒಮರ್ ಅಬ್ದುಲ್ಲಾ ವ್ಯಕ್ತಪಡಿಸಿದ್ದಾರೆ.

ಅಧಿಕಾರವಂಚಿತ ರಾಜಕೀಯ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಎತ್ತಿಕಟ್ಟಲು ಚುನಾವಣೆಯಿಂದ ಚುನಾವಣೆಗೆ ವಿಚ್ಛಿದ್ರಕಾರಿ ಶಕ್ತಿಗಳನ್ನು ಉತ್ತೇಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಅಪಾಯಕಾರಿ ವರ್ತನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್‌ರವರು, ‘ಪಾರ್ಲಿ ಮೆಂಟ್ ಆವರಣದ ಪ್ರಮುಖ ಸ್ಥಾನಗಳಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜ್, ಮಹಾತ್ಮ ಗಾಂಧಿ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ತೆಗೆದುಹಾಕಲಾಗಿದೆ. ಇದು ಅಮಾನುಷ’ ಎಂದು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡರು. ನೂತನ ಸಂಸತ್ ಭವನದ ಆವರಣದಲ್ಲಿ, ಬದಲಾದ ಭೂಪ್ರದೇಶಕ್ಕೆ ತಕ್ಕಂತೆ ಸೂಕ್ತ ಸ್ಥಳದಲ್ಲಿ ಸ್ಥಾಪಿಸಲು ಸ್ಥಳಾಂತರ ಮಾಡಿದರೆ, ಅದರ ಹಿನ್ನೆಲೆಯನ್ನು ಮರೆಮಾಚಿ ರಾಜಕೀಯ ಲಾಭಕ್ಕಾಗಿ ಪ್ರಚೋದನಕಾರಿಯಾಗಿ ಬರೆದು ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಲು ಯತ್ನಿಸುವ ಅಗತ್ಯವೇನಿದೆ? ಮೋದಿಯವರ ಬೆಂಬಲಿಗರು ಎಂಬ ಕಾರಣಕ್ಕೆ ಅವರ ವಿರುದ್ಧ ನಡೆಯುವ ಹಲ್ಲೆಯನ್ನು ಸ್ವಾಗತಿಸುವ ಅಥವಾ ಅದರ ವಿರುದ್ಧ ಚಕಾರವೆತ್ತದಿರುವ ರೋಗಗ್ರಸ್ತ ಮನಸ್ಥಿತಿಯು ಕಳೆದ ೧೦ ವರ್ಷಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಕಂಡುಬಂದಿದೆ. ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವವರು ಸಂವಿಧಾನದಲ್ಲಿ ಕಾನೂನುಪಾಲನೆ ಎಲ್ಲರಿಗೂ ಸಮಾನ ಎಂಬ ಮೂಲಭೂತ ಸಂಗತಿಯನ್ನು ಮರೆತಿದ್ದಾರೆ.

ಭದ್ರತಾ ಸಿಬ್ಬಂದಿಯು ಲೋಕಸಭಾ ಸದಸ್ಯೆಯ ಮೇಲೆ ಹಲ್ಲೆ ಮಾಡಿದ್ದನ್ನು ರಾಜಕೀಯ ಕಾರಣಗಳಿಗೆ ಸಮರ್ಥಿಸಿಕೊಳ್ಳುವುದು ಅಪಾಯಕಾರಿ ಬೆಳವಣಿಗೆ. ಹಲ್ಲೆ ಮಾಡಿದವಳ ಕುಟುಂಬಕ್ಕೆ ಸನ್ಮಾನವನ್ನೂ ಮಾಡಿಯಾಯಿತು; ಹಲ್ಲೆ ಮಾಡಿದವಳಿಗೆ ಕಾನೂನು ನೆರವು, ಹಣದ ಸಹಾಯ ಮತ್ತು
ಮುಂದೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಆಶ್ವಾಸನೆ ಯನ್ನು ಈಗಾಗಲೇ ನೀಡಲಾಗಿದೆ. ಮೋದಿಯವರ ಮೇಲಿನ ದ್ವೇಷವು ಅಂತಿಮವಾಗಿ ದೇಶದ ವಿರುದ್ಧ ತಿರುಗುತ್ತದೆ ಎಂಬ ಆರೋಪವು ಇಂದು ಸತ್ಯವಾಗಿ, ಅದರ ಪರಿಣಾಮವನ್ನು ಕಾಣುವಂತಾಗಿದೆ. ರಾಜಕೀಯ ಲಾಭಕ್ಕಾಗಿ ಜನರ ಸುರಕ್ಷತೆಯ ಜತೆ ಚೆಲ್ಲಾಟವಾಡಬೇಡಿ ಮತ್ತು ನಿಮ್ಮ ಅಽಕಾರದಾಹಕ್ಕೆ ದೇಶದ ಹಿತಕ್ಕೆ ಕೊಳ್ಳಿಯಿಡುವ ಕೆಲಸ ಮಾಡಬೇಡಿ ಎಂದು ಇಂಥವರನ್ನು ಆಗ್ರಹಿಸಬೇಕಾಗಿ ಬಂದಿದೆ.

(ಲೇಖಕರು ಬಿಜೆಪಿಯ ವಕ್ತಾರರು)