Thursday, 12th December 2024

ಮಾನವತಾವಾದಿ ವಿಜ್ಞಾನಿ ಡಾ.ಸೆಲ್ವಮೂರ್ತಿ

ಗುಣಗಾನ

ಜಯಪ್ರಕಾಶ ಪುತ್ತೂರು

ನಮ್ಮ ಸೇನೆಯ ಮೂರು ವಿಭಾಗದ ಭಟರನ್ನು ಆರೋಗ್ಯಕರವಾಗಿ, ಸದೃಢವಾಗಿ, ಫಿಟ್ ಆಗಿ ಕಾಪಿಡುವ ಘನಕಾರ್ಯವನ್ನು ಕೇಂದ್ರ ರಕ್ಷಣಾ ಸಂಶೋಧನಾ ವಿಭಾಗವು ಕಳೆದ ೫೦-೬೦ ವರ್ಷಗಳಿಂದ ಸತತವಾಗಿ ಮಾಡುತ್ತಿರುವ ವಿಚಾರ ಅನೇಕರಿಗೆ ತಿಳಿದಿಲ್ಲ.

ಕೇವಲ ಯೋಧರು ಹಿಡಿಯುವ ಶಸಾಸ, ಯುದ್ಧವಾಹಕ ಹಾಗೂ ಇನ್ನಿತರ ಸಲಕರಣೆಗಳಲ್ಲದೆ, ಅವರು ಧರಿಸುವ ಬಟ್ಟೆ, ಶಿರಸ್ತ್ರಾಣ, ಕಾಲುಚೀಲ, ಬೂಟು, ಕೈಗವಚ, ಮಾಸ್ಕ್, ಜೀವ ರಕ್ಷಕ ಸಾಧನ-ಸಾಮಗ್ರಿಗಳು ಹೀಗೆ ಹಲವಾರು ಅತಿ ಪ್ರಮುಖ ವಿಚಾರಗಳು ಕೂಡ ಹೆಚ್ಚಿನ ಪ್ರಚಾರದಲ್ಲಿ ಇಲ್ಲ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗಿನ ಸಮುದ್ರ ತೀರ, ದುರ್ಗಮ ಅರಣ್ಯ, ಮರುಭೂಮಿ, ವಾಯುಕ್ಷೇತ್ರ ಹೀಗೆ ಹವಾಮಾನ ವೈರುಧ್ಯಗಳ ನೆಲೆಗಳಲ್ಲಿ ದೇಶವನ್ನು ಕಾಪಾಡುವ ಭಟರಿಗೆ ಮೇಲೆ ಉಲ್ಲೇಖಿಸಿರುವ ಸಲಕರಣೆಗಳು ಒಂದೇ ತೆರನಾಗಿರುವುದಿಲ್ಲ.

ಉದಾಹರಣೆಗೆ, ಕಾಶ್ಮೀರ ಸರಹದ್ದಿನಲ್ಲಿನ ತೀವ್ರ ಚಳಿಗಾಳಿ, ಹಿಮಾಚ್ಛಾದಿತ ಪ್ರದೇಶಗಳಲ್ಲಿ ಧರಿಸುವ ಬೆಚ್ಚಗಿನ ಉಡುಪುಗಳನ್ನು ಗರಿಷ್ಠ ಉಷ್ಣಾಂಶ
ವಿರುವ ರಾಜಸ್ಥಾನ, ಪಂಜಾಬ್ ಪ್ರದೇಶಗಳಲ್ಲಿ ಖಂಡಿತ ಧರಿಸಲಾಗುವುದಿಲ್ಲ. ದೂರಗಾಮಿ ಸಾಗರದಲ್ಲಿ ತಿಂಗಳು ಗಟ್ಟಲೆ ಸಾಗುವ ನಮ್ಮ ನೌಕಾಸೇನೆಯ ಸಿಬ್ಬಂದಿಗೆ ಅಥವಾ ಯುದ್ಧವಿಮಾನಗಳಲ್ಲಿ ಕಾರ್ಯವೆಸಗುವ ಪೈಲಟ್‌ಗಳಿಗೆ ಹಾಗೂ ದಿನಗಟ್ಟಲೆ ನೀರಿನಡಿ ಕಾರ್ಯಾಚರಣೆಯಲ್ಲಿ ತೊಡಗುವ
ವರಿಗೆ ಕೇವಲ ಬಾಹ್ಯ ರಕ್ಷಣೆಯ ಕವಚ, ಬಟ್ಟೆಗಳಲ್ಲದೆ, ಪೌಷ್ಟಿಕಾಂಶದಿಂದ ಕೂಡಿದ, ಆರೋಗ್ಯಕರ ವಾದ, ಬಿಸಿಬಿಸಿ ಆಹಾರವನ್ನು ಒದಗಿಸುವುದು ಕೂಡ ಗುರುತರ ವಾದ ಕಾರ್ಯ.

ದೇಶರಕ್ಷಕರ ಆರೋಗ್ಯಕ್ಕಾಗಿ ಕೊಡಬೇಕಾಗುವ ಆಹಾರ ಪದಾರ್ಥಗಳನ್ನು ಕೆಡದಂತೆ ಕಾಪಿಡುವುದು, ಪ್ಯಾಕ್ ಮಾಡುವುದು, ಆ ಬಳಿಕ ಸುಲಭದಲ್ಲಿ
ತಾಜಾ ಆಗಿ, ರುಚಿಕರ ವಾಗಿ ತಿನ್ನಬಹುದಾದ ವ್ಯವಸ್ಥೆ ಹೀಗೆ ಒಂದೇ ಎರಡೇ? ಇನ್ನು ಅವರ ಆರೋಗ್ಯ ತಪಾಸಣೆ, ಪಾಲನೆ ಹಾಗೂ ಶುಶ್ರೂಷೆ ಗಳನ್ನು
ಭಿನ್ನರೂಪದಲ್ಲಿ ವ್ಯವಸ್ಥೆಗೊಳಿಸುವ ಕ್ರಮಗಳು ಕೂಡಾ ಅಷ್ಟೇ ಕ್ಲಿಷ್ಟಕರ. ಹೌದು, ತಮ್ಮ ಕುಟುಂಬಗಳಿಂದ ಬಹಳ ದೂರವಿದ್ದು, ಹಗಲು-ಇರುಳು ಏಕಪ್ರಕಾರದಲ್ಲಿ ದೇಶಸೇವೆಯಲ್ಲಿ ತೊಡಗಿರುವಾಗ, ಹಿಮಾಚ್ಛಾದಿತ, ದುರ್ಗಮ, ನೀರಸ ಮರುಭೂಮಿಗಳಲ್ಲಿ ಕೆಲವೊಮ್ಮೆ ಏಕಾಂಗಿಯಾಗಿ ಎಚ್ಚರ ದಿಂದ ಇರುವಲ್ಲಿ ಸೈನಿಕರ ಮಾನಸಿಕ ಸ್ಥಿತಿ, ಆರೋಗ್ಯ, ಸ್ಥಿರತೆ ಹಾಗೂ ಪ್ರಸನ್ನತೆಗಳನ್ನು ಕಾಪಿಟ್ಟುಕೊಳ್ಳುವುದಕ್ಕೆ ಕೂಡ ಕೇವಲ ಔಷಧಗಳಲ್ಲದೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮುಂತಾದ ಅಭ್ಯಾಸಗಳೂ ಬೇಕಾಗುತ್ತವೆ.

ಹತ್ತು ಹಲವು ವಿಚಾರಗಳಲ್ಲಿ, ಸೈನಿಕರ ಸಮಗ್ರ ವ್ಯವಸ್ಥೆಯ ಯೋಗಕ್ಷೇಮ / ನಿಗಾವಣೆಯ ಕಾರ್ಯದಲ್ಲಿ ಈ ವ್ಯವಸ್ಥೆ ತೊಡಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ಹಲವಾರು ವಿಭಾಗಗಳು ಸಂಶೋ ಧನೆಗಳನ್ನು ಕೈಗೊಂಡು ಯಶಸ್ವಿಯಾಗಿ, ಎಲೆಮರೆಯ ಕಾಯಿಯಂತೆ ಸದ್ದಿಲ್ಲದೆ ಕಾರ್ಯವೆಸಗುತ್ತವೆ. ಆಹಾರ ನೀಡಿಕೆಯ ಕ್ಷೇತ್ರದಲ್ಲಿ ಮೈಸೂರಿನಲ್ಲಿರುವ ಡಿಎಫ್ ಆರ್‌ಎಲ್ ಎಂಬ ಚಿಕ್ಕ ಪ್ರಯೋಗಾಲಯ ಗಣನೀಯ ಸಾಧನೆ ಮಾಡುತ್ತಾ ಬಂದಿದೆ. ಈ
ಎಲ್ಲವನ್ನೂ ಸಂಭಾಳಿಸಲು ಡಿಆರ್ ಡಿಒ ಸಂಸ್ಥೆಯ ಅಡಿ ‘ಆರೋಗ್ಯ ವಿಜ್ಞಾನ’ ಎಂಬ ದೊಡ್ಡ ವಿಭಾಗವನ್ನು ಹುಟ್ಟುಹಾಕಿ ಸುವ್ಯವಸ್ಥಿತವಾಗಿ
ಬೆಳೆಸಿದ ಕೀರ್ತಿ ಪಡೆದವರಲ್ಲಿ ಶ್ರೇಷ್ಠ ವಿಜ್ಞಾನಿ ಡಾ. ಡಬ್ಲ್ಯು.ಸೆಲ್ವಮೂರ್ತಿ ಕೂಡ ಒಬ್ಬರು.

ನೋಡಲು ವಾಮನಮೂರ್ತಿ ಯಾದ ಈ ಕಾರ್ಯಶೀಲ ಸಜ್ಜನ, ಸದಾ ಹಸನ್ಮುಖಿಯಾಗಿ, ಸ್ನೇಹಶೀಲ ರಾಗಿ, ವಿನಯ ಸಂಪನ್ನರಾಗಿ, ಓರ್ವ ಆತ್ಮೀಯ ಬಾಸ್ ಆಗಿ ಸಹೋದ್ಯೋಗಿ ಗಳನ್ನು ಉತ್ತೇಜಿಸುತ್ತಿದ್ದ ಪರಿ ಅನನ್ಯ. ತಮಿಳುನಾಡಿನ ಸಣ್ಣಪಟ್ಟಣ ಶಿವಕಾಶಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಚೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ಮಾನವ ಮಾನಸಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (೧೯೭೨) ಗಳಿಸಿ, ದೆಹಲಿ
ವಿಶ್ವವಿದ್ಯಾಲಯದಿಂದ (೧೯೮೨) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದಿಂದ (೨೦೦೬) ಕೂಡ ಡಾಕ್ಟರೇಟ್ ಗಳಿಸಿ, ದೇಶದ ಆರೋಗ್ಯ ವಿಜ್ಞಾನ ಸಂಶೋಧಕರುಗಳಲ್ಲಿ ಪ್ರಮುಖರೆನಿಸಿಕೊಂಡರು.

ಕೇಂದ್ರ ರಕ್ಷಣಾ ಸಂಶೋಧನಾ ವಿಭಾಗದಲ್ಲಿ ಸೇರ್ಪಡೆ ಯಾಗಿ ೪೦ ವರ್ಷಗಳ ಸುದೀರ್ಘ, ಸ್ತುತ್ಯರ್ಹ ಸೇವೆ ಸಲ್ಲಿಸಿ, ಹಲವಾರು ವಿಜ್ಞಾನಿಗಳಿಗೆ ಮಾರ್ಗದರ್ಶನ, ನಾಯಕತ್ವ ಹಾಗೂ ಉತ್ತೇಜನ ನೀಡಿ, ಈ ವಿಭಾಗದ ವತಿಯಿಂದ ನಮ್ಮ ಸೇನೆಯ ಮೂರು ವಿಭಾಗಗಳ ಅವಶ್ಯಕತೆಗಳಿಗೆ ಗಣನೀಯ
ಕೊಡುಗೆ ನೀಡಿದರು. ಬಯೋಮೆಡಿಕಲ್ ಕ್ಷೇತ್ರದ ಈ ಸಂಶೋಧನಾತ್ಮಕ ಕಾರ್ಯಗಳು ಸೈನಿಕರ ಆರೋಗ್ಯ ವ್ಯವಸ್ಥೆ ಕಾಪಿಡುವಲ್ಲಿ ವಿಶೇಷ ಯಶಸ್ಸು ಕಂಡು, ಇದೀಗ ದಿನವಹಿ ಕಾರ್ಯಾಚರಣೆಯ ಭಾಗಗಳಾಗಿ ಮಾರ್ಪಟ್ಟಿವೆ. ನ್ಯಾನೋ ಟೆಕ್ನಾಲಜಿ, ಯೋಗ ಹಾಗೂ ಮಿಲಿಟರಿಯ ಮಾನವೀಯ ಶಾಸ್ತ್ರ- ಹೀಗೆ ಹತ್ತು ಹಲವು ಹೊಸ ಪ್ರಯೋಗಗಳು ಸೈನಿಕರ ಮಾನಸಿಕ ಆರೋಗ್ಯವರ್ಧನೆ ಕಾರ್ಯಗಳಿಗೆ ನಾಂದಿಹಾಡಿ ಇತಿಹಾಸ ನಿರ್ಮಿಸಿದವು.

೨೦೧೩ರಲ್ಲಿ ನಿವೃತ್ತಿ ಹೊಂದುವ ಹೊತ್ತಿಗೆ, ಸಂಸ್ಥೆಯ ಆರೋಗ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಮಹಾ ನಿರ್ದೇಶಕರಾಗಿ ತಮ್ಮದೇ ಆದಂಥ ಛಾಪನ್ನು ಮೂಡಿಸಿದರು. ಆ ಬಳಿಕ ಪ್ರತಿಷ್ಠಿತ ಏಮಿಟಿ ವಿಶ್ವವಿದ್ಯಾಲಯ ಛತ್ತೀಸ್‌ಗಢದ ಹುದ್ದೆಯನ್ನು ಅಲಂಕರಿಸಿ, ಜತೆಯಲ್ಲಿ ಸಂಸ್ಥೆಯ ಆರೋಗ್ಯ
ವಿಜ್ಞಾನ, ಹೊಸ ವೈಜ್ಞಾನಿಕ ಆವಿಷ್ಕಾರ ಮುಂತಾದ ವಿಭಾಗ ಗಳ ಮುಖ್ಯಸ್ಥರಾಗಿ ಕಾರ್ಯಪ್ರವೃತ್ತರಾದರು. ಈ ಅಮೋಘ ಸೇವಾವಧಿಯಲ್ಲಿ ಸಾಕಷ್ಟು ರಾಷ್ಟ್ರೀಯ ಮತ್ತು ಸಂದರ್ಶನಾ ತಂಡಗಳ ಸದಸ್ಯ, ಮುಖ್ಯಸ್ಥರಾಗಿ ಮಾಡಿದ ಸೇವೆಗೆ ಹಲವಾರು ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್
ನೀಡಿವೆ. ೧೮ ಪುಸ್ತಕಗಳು, ೨೫೦ ಸಂಶೋಧನಾ ಲೇಖನಗಳು, ಬಹುಬಾರಿ ಮುದ್ರಿತವಾಗಿರುವ ೩೯ ಪ್ರೌಢಪ್ರಬಂಧಗಳನ್ನು ಕೊಡುಗೆಯಾಗಿತ್ತಿರುವ ಇವರು ದೇಶ-ವಿದೇಶಗಳಲ್ಲಿ ಗಣನೀಯ ಸಂಖ್ಯೆಯ ಉಪನ್ಯಾಸಗಳನ್ನು ನೀಡಿದ್ದಾರೆ.

ಸೇನಾ ಸಮುದಾಯದ ಆರೋಗ್ಯ ಪಾಲನೆಯಲ್ಲಿ ಯೋಗ ಮತ್ತು ಧ್ಯಾನ ಮುಂತಾದ ಭಾರತೀಯ ಪದ್ಧತಿಗಳನ್ನು ಅನುಷ್ಠಾನಕ್ಕೆ ತಂದು ಹೊಸ ಅಧ್ಯಾಯವನ್ನು ಬರೆದ ಹೆಗ್ಗಳಿಕೆ ಇವರದ್ದು. ಪ್ರಪಂಚದ ಶಾಂತಿ ಹಾಗೂ ನೆಮ್ಮದಿಗಳು ಸದಾ ಕಾಪಿಡುವ ಗುರುತರ ಹೊಣೆಹೊತ್ತಿರುವ ವಿಶ್ವಸಂಸ್ಥೆಯ ಸಭೆಗಳಲ್ಲಿ ದೇಶವನ್ನು ಪ್ರತಿನಿಧಿಸಿ, ರಾಸಾಯನಿಕ ಹಾಗೂ ಅಣ್ವಸ್ತ್ರ ಯುದ್ಧಗಳನ್ನು ನಿರ್ಬಂಧಿಸುವ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಾ. ಸೆಲ್ವಮೂರ್ತಿಯವರು, ಪ್ರಸ್ತುತ ದೆಹಲಿಯಲ್ಲಿ ವಾಸವಾಗಿದ್ದು ೭೪ರ ಈ ಇಳಿವಯಸ್ಸಿನಲ್ಲಿಯೂ ಕಾರ್ಯಪ್ರವೃತ್ತರಾಗಿದ್ದುಕೊಂಡು ನಾಡಿನ ವಿಜ್ಞಾನಿಗಳಿಗೆಲ್ಲಾ ಓರ್ವ ಸರ್ವಶ್ರೇಷ್ಠ ಮಾದರಿ ಎನಿಸಿಕೊಂಡಿದ್ದಾರೆ.

(ಲೇಖಕರು ಮಾಜಿ ಸಾರ್ವಜನಿಕ
ಸಂಪರ್ಕಾಧಿಕಾರಿ, ಡಿಆರ್‌ಡಿಒ)