ವಿಚಾರ
ಅನಿಲ್ ಕೆ.ಆಂಟನಿ
ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ ಬರಿಗಣ್ಣಿಗೆ ಕಾಣಿಸದ ಕೋಟ್ಯಂತರ ಸಂಗತಿಗಳೊಂದಿಗೆ ಚಿಪ್‌ಗಳು ಅಳವಡಿಕೆ ಯಾಗುತ್ತಿವೆ. ಕಣ್ಣಿಗೆ ಕಾಣದ ಅದೆಷ್ಟೋ ಮಿನಿಯೇಚರ್ ಅಂಶಗಳನ್ನು ಒಳಗೊಂಡಿರುವ ಚಿಪ್‌ಗಳು ಈಗ ಇನ್ನಷ್ಟು ಸಣ್ಣದಾ ಗಿವೆ.
ವಿಶ್ವದ ಸರ್ವಪ್ರಥಮ ಕಂಪ್ಯೂಟರ್ ತಯಾರಕ ಕಂಪನಿ 1945ರಲ್ಲಿ ತಯಾರಿಸಿದ ಕಂಪ್ಯೂಟರ್‌ನ ತೂಕ 30 ಟನ್‌ನಷ್ಟಿತ್ತು. ಅದರಲ್ಲಿ ಬಹುಪಾಲು ವ್ಯಾಕ್ಯೂಮ್ ಟ್ಯೂಬ್‌ಗಳದ್ದವು ಮತ್ತು ಅದರ ತೂಕವೇ 18 ಟನ್‌ನಷ್ಟಿತ್ತು. ಅದೆಲ್ಲವೂ ಗಾತ್ರದಲ್ಲಿ ಬೃಹತ್ತಾಗಿತ್ತು. ಹೆಚ್ಚು ವಿದ್ಯುತ್ ಬೇಡುತ್ತಿತ್ತು ಮತ್ತು ತಾತ್ವಿಕವಾಗಿ ದುರ್ಬಲವೂ ಆಗಿತ್ತು. ಕಂಪ್ಯೂಟರ್‌ನ ಬಳಕೆ ವಿರಳವಾಗಿದ್ದ ಆ ಕಾಲಘಟ್ಟದಲ್ಲಿ ಇದೆಲ್ಲವೂ ಒಂದು ಬಗೆಯ ವಿಸ್ಮಯವೇ! ತಾಂತ್ರಿಕತೆ ಮುಂದುವರಿದು ವ್ಯಾಕ್ಯೂಮ್ ಟ್ಯೂಬ್‌ಗಳ ಬದಲಿಗೆಟ್ರಾನ್ಸಿಸ್ಟರುಗಳ ಬಳಕೆ ವ್ಯಾಪಕವಾಯಿತು.
ತದನಂತರದಲ್ಲಿ ಚಿಪ್ಸ್ ಎಂದು ಕರೆಯಲಾಗುವ ಸರ್ಕೀಟ್‌ಗಳ ಬಳಕೆಯೂ ಅನು ಷ್ಠಾನಕ್ಕೆ ಬಂತು. ಇದು ಅಪ್ಪಟ ಸಿಲಿಕಾನ್ ನಿಂದ ತಯಾರಾಗಿದ್ದು, ಸೆಮಿಕಂಡಕ್ಟರ್ ವೇ-ರ್‌ಗಳಿಗೆ ಅಳವಡಿಸಲಾಗಿತ್ತು. ಇದನ್ನು ಗಮನಿಸಿದ ಇಂಟೆಲ್ ಸಹಸ್ಥಾಪಕ ಗೋರ್ಡೋನ್ ಮೂರ್, ಟ್ರಾನ್ಸಿಸ್ಟರ್ ಬದಲಿಗೆ ಚಿಪ್ ಬಳಕೆಯನ್ನು ದುಪ್ಪಟ್ಟು ಮಾಡುವುದು ಹೆಚ್ಚು ಸೂಕ್ತವೆಂದು ಪರಿಭಾವಿಸಿದರು. ಇದರಿಂದ ಕಂಪ್ಯೂಟರ್‌ಗಳ ಕ್ಷಮತೆ ಹೆಚ್ಚಿತಲ್ಲದೇ ಅದು ಗಾತ್ರದಲ್ಲಿ ಇನ್ನಷ್ಟು ಸಣ್ಣದಾಯಿತು.
ಮಾತ್ರವಲ್ಲ, ದರವೂ ಕಡಿಮೆಯಾಯಿತು. ಈಗ ತಂತ್ರಜ್ಞಾನ ಎಷ್ಟು ಬದಲಾಗಿದೆ ಎಂದರೆ ಬರಿಗಣ್ಣಿಗೆ ಕಾಣಿಸದ ಅಸಂಖ್ಯ ಕೋಟ್ಯಂತರ ಸಂಗತಿಗಳೊಂದಿಗೆ ಚಿಪ್ ಗಳು ಅಳವಡಿಕೆಯಾಗುತ್ತಿವೆ. ಈ ಕ್ಷೇತ್ರ ಇದೀಗ ಸಾಕಷ್ಟು ಪ್ರಗತಿ ಸಾಧಿಸಿದೆ. ಸಾಮಾನ್ಯ ವಾಗಿ ಕಣ್ಣಿಗೆ ಕಾಣದ ಅದೆಷ್ಟೋ ಮಿನಿಯೇಚರ್ ಅಂಶಗಳನ್ನು ಒಳಗೊಂಡಿರುವ ಚಿಪ್‌ಗಳು ಈಗ ಇನ್ನಷ್ಟು ಸಣ್ಣದಾಗಿವೆ. ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಫೋನ್ ಕ್ಷೇತ್ರದಲ್ಲಿ ಸಾಕಷ್ಟು ಅನ್ವೇಷಣೆಗಳು ಮುನ್ನೆಲೆಗೆ ಬಂದಿವೆ. ಇದೆಲ್ಲವೂ ಇಂದಿನ ನೂತನ ಆವಿಷ್ಕಾರದ ಬಹುಮುಖ್ಯ ಭಾಗಗಳು.
ಜಾಗತಿಕವಾಗಿ ಸೆಮಿ ಕಂಡಕ್ಟರ್‌ಗಳ ಉತ್ಪಾದನೆ ತುಂಬಾ ಸಂಕೀರ್ಣವಾಗಿದೆ. ಕೋವಿಡ್-೧೯ ಪ್ರಾರಂಭವಾದ ಮೇಲಂತೂ
ಇದರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಾಕಷ್ಟು ಕಡಿತವಾಗಿದೆ. ಇದರಿಂದಾಗಿ ವಿಶ್ವಾದ್ಯಂತ ಅಟೊಮೋಟಿವ್, ಸ್ಪೇಸ್ ಸೆಟಲೈಟ್, ಗೃಹಬಳಕೆ, ರಕ್ಷಣಾಕ್ಷೇತ್ರ, ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಉತ್ಪಾದನೆಗೆ ದೊಡ್ಡ ಹೊಡೆತ ಬಿದ್ದಿದೆ.
ಜಾಗತಿಕವಾಗಿ ಚಿಪ್‌ಗಳ ಕೊರತೆಯುಂಟಾಗಿ ಅದು ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ ಮತ್ತು ಆರ್ಥಿಕ ಹಿಂಜರಿತಕ್ಕೂ ಕಾರಣ ವಾಗಿದೆ.
ಇದೀಗ ಮತ್ತೆ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ವಾತಾವರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಚಿಪ್ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯವಾಗುವ ಎಲ್ಲ ಸಂಭವಗಳೂ ಕಾಣಿಸುತ್ತಿವೆ. ಜಾಗತಿಕವಾಗಿ ಚಿಪ್ ಉತ್ಪಾದನೆಗೆ ಬೇಕಾಗುವ ಕಚ್ಚಾವಸ್ತು ಪಡಿಯಂ ಪೂರೈಕೆಯನ್ನು ರಷ್ಯಾ ಗಮನಾರ್ಹವಾಗಿ ಮಾಡುತ್ತಿದೆ. ವಿಶ್ವದ ಒಟ್ಟು ಅಗತ್ಯದ ಶೇ.40ರಷ್ಟು ಪಡಿಯಂ ರಷ್ಯಾ ದಿಂದಲೇ ಬರುತ್ತಿದೆ. ಉಕ್ರೇನ್ ಶೇ.70 ನಿಯಾನ್ ಪೂರೈಕೆ ಮಾಡುತ್ತಿತ್ತು.
ತೈವಾನ್‌ನಲ್ಲಿ ಮಿಲಿಟರಿ ಮತ್ತು ಭೌಗೋಳಿಕ-ರಾಜಕೀಯ ವಿಶ್ಲೇಷಣೆಯ ನಂತರದಲ್ಲಿ ವಿಶ್ವಕ್ಕೆ ಬೇಕಾಗುವ ಶೇ. ೯೦ ಚಿಪ್ ಪೂರೈಕೆ ಯಲ್ಲಿ ಆದ್ಯ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಯುಎಸ್, ಚೀನಾ ಮತ್ತು ಐರೋಪ್ಯ ಒಕ್ಕೂಟದ ರಾಷ್ಟಗಳು ಚಿಪ್ ಅವಶ್ಯ ಕತೆಯಲ್ಲಿ ಅನ್ಯರಾಷ್ಟಗಳ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ದೃಷ್ಟಿಯಿಂದ ತಾವೇ ಉತ್ಪಾದನೆಗೆ ಮುಂದಾಗಿವೆ. ಉದಾಹರಣೆಗೆ ಹೇಳುವುದಾದರೆ ಐರೋಪ್ಯ ಒಕ್ಕೂಟ ಯುರೋಪಿಯನ್ ಚಿಪ್ಸ್ ಆಕ್ಟ್ ಎಂಬ ಕಾಯಿದೆಯನ್ನು ಜಾರಿಗೆ ತಂದು ಸಾರ್ವಜನಿಕ ಸಹಭಾಗಿತ್ವದೊಂದಿಗೆ ೪೯ ಬಿಲಿಯನ್ ಡಾಲರ್ ಹೂಡಿಕೆಯನ್ನು ಸೆಮಿಕಂಡಕ್ಟರ್ ತಂತ್ರಜ್ಞಾನಕ್ಕೆ ಬಳಸಲು ಮುಂದಾಗಿದೆ.
ಇದು ಜಾಗತಿಕ ಮಾರುಕ್ಟೆಯ 20%ರಷ್ಟನ್ನು 2030ರಲ್ಲಿ ಸಾಧಿಸಲಿದೆ ಎಂದೂ ಹೇಳಲಾಗಿದೆ. ಅಮೆರಿಕ ಕೂಡ ತನ್ನದೇ ಆದ ಚಿಪ್ ತಯಾರಿಕಾ ಕಾಯಿದೆಯನ್ನು ರೂಪುಗೊಳಿಸಿದ್ದು, ತೈವಾನ್ ಜತೆ ಕೈಗೂಡಿಸಿ ಅರಿಝೋನಾದಲ್ಲಿ 12 ಬಿಲಿಯನ್ ಡಾಲರ್ ಸಾಮರ್ಥ್ಯದ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಮುಂದಾಗಿದ್ದು ಇದು 2024ರೊಳಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಭಾರತ ಕೂಡ ಈ ನಿಟ್ಟಿನಲ್ಲಿ ತನ್ನ ಕಾರ್ಯಯೋಜನೆಯನ್ನು ರೂಪಿಸಿದೆ. ಪ್ರಾಥಮಿಕವಾಗಿ ಸಿಕ್ಕ ಫಲಿತಾಂಶ ಆಶಾದಾಯಕ ವಾಗಿದ್ದು, ಮೂರು ಸಂಸ್ಥಾಪನೆಗಳು ಉತ್ಪಾದನೆಯಲ್ಲಿ ತೊಡಗುವುದಕ್ಕೆ ಉತ್ಸುಕವಾಗಿವೆ.
ಭಾರತದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಯ ಸರಕಾರ ಕೂಡ ಚಿಪ್ ತಯಾರಿಕೆಯ ಕುರಿತಾಗಿ ಎರಡು ಒಕ್ಕೂಟಗಳ ರಚನೆಯನ್ನು ಮಾಡಿತ್ತು ಮತ್ತು ಸ್ಥಳೀಯವಾಗಿ ಚಿಪ್ ತಯಾರಿಕೆಯಲ್ಲಿ ತೊಡಗುವುದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಒಟ್ಟಾರೆಯಾಗಿ ಬೇಕಿದ್ದ 63000 ಕೋಟಿ ಹೂಡಿಕೆಯ ಕ್ರೋಡೀಕರಣ ಮಾಡುವುದಕ್ಕೆ ಸಾಧ್ಯ ವಾಗದೇ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗಿನ ಸರಕಾರದ ಮುಂದಿರುವ 76000 ಕೋಟಿ ಹೂಡಿಕೆಯ ಆರು ವರ್ಷಗಳ ಯೋಜನೆ ಕೂಡ ಹಲವು ಏಳುಬೀಳುಗಳನ್ನು ಕಾಣುವ ಸಾಧ್ಯತೆ ಇದೆ.
ಈ ನಿಟ್ಟಿನಲ್ಲಿ ಸ್ಥಾಪನೆಯಾಗಬೇಕಿರುವ ಫ್ಯಾಬ್ರಿಕೇಶನ್ ಘಟಕ ಕೂಡ ಪ್ಯಾಕೇಜಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ. ವಿಶ್ವದ ಬಹುತೇಕ ಚಿಪ್ ತಯಾರಿಕಾ ಸಂಸ್ಥೆಗಳು ತಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿರುವುದರಿಂದ ಇಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿದೆ. ನಮ್ಮ ಸರಕಾರ ಈ ನಿಟ್ಟಿನಲ್ಲಿ ಸ್ಟಾರ್ಟಪ್ ಕಂಪನಿಗಳಿಗೆ
ಉತ್ತೇಜನ ಕೊಡುವ ಉದ್ದೇಶವನ್ನು ಹೊಂದಿದ್ದು 85000 ಅತ್ಯುತ್ತಮ ಕೌಶಲದ ಎಂಜಿನಿಯರುಗಳನ್ನು ಬಳಸಿಕೊಂಡು
ಈ ಉದ್ಯಮವನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸುವ ಕಾರ್ಯಯೋಜನೆಗೆ ಕೈಹಾಕಿದೆ.
ಇದು ಭಾರತದ ಸ್ಕಿಲ್ ಇಂಡಿಯಾ ಯೋಜನೆಗಿಂತಲೂ ದೊಡ್ಡ ಕಾರ್ಯಕ್ರಮವಾಗಿದ್ದು ಜಾಗತಿಕ ಪೂರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಈ ಯೋಜನೆಯ ಫ್ಯಾಬ್ರಿಕೇಶನ್ ವ್ಯವಸ್ಥೆಗೆ ಅನಿರ್ಬಾಧಿತ ವಿದ್ಯುಚ್ಚಕ್ತಿ ಪೂರೈಕೆ ಮತ್ತು
ಮಿಲಿಯಗಟ್ಟಲೆ ಗ್ಯಾಲನ್ ಶುದ್ಧ ನೀರಿನ ಅಗತ್ಯವಿದ್ದು, ಇದನ್ನು ಹೊಂದಿಸುವುದು ಕೂಡ ಸವಾಲಿನ ಕೆಲಸವೇ ಆಗಿದೆ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಜೈವಿಕ ತಾಂತ್ರಿಕತೆ ಮತ್ತು ವ್ಯಾಕ್ಸೀನ್ ಉದ್ಯಮ ಕ್ಷೇತ್ರದಲ್ಲಿ ಭಾರತ ಮುನ್ನಡೆ ಸಾಧಿಸಿ ಜಾಗತಿಕ
ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆಂದಾದರೆ ಅಪೂರ್ವವಾದ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.
ಈಗ ನಮಗೆ ಅಗತ್ಯವಿರುವ ಸೆಮಿಕಂಡಕ್ಟರ್ ಪರಿಮಾಣಕ್ಕೆ ನಾವು ಆಮದಿನ ಮೇಲೆ ಅವಲಂಬಿತರಾಗಿದ್ದು, ನಮ್ಮ ಬಳಕೆಯ ಪ್ರಮಾಣ 2030ರ ವೇಳೆಗೆ 110 ಬಿಲಿಯನ್ ಡಾಲರುಗಳನ್ನು ಮೀರುವ ಸಾಧ್ಯತೆ ಇದೆ. ದೇಶೀಯ ಉತ್ಪಾದನೆ ನಮ್ಮ ವ್ಯಾಪಾರ ಕೊರತೆಯನ್ನು ನೀಗಿಸುವಲ್ಲಿ ಸಹಾಯಕವಾಗಬಹುದು. ನಮ್ಮ ಉದ್ಯಮ ವಲಯದಲ್ಲಿ ಅದರಲ್ಲೂ ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಮತ್ತು ಸಂಪರ್ಕ ಮಾಧ್ಯಮದಲ್ಲಿ ಮೈಕ್ರೋಚಿಪ್‌ಗಳ ಅಗತ್ಯತೆ ಖಂಡಿತವಾಗಿಯೂ ಇನ್ನಷ್ಟು ಏರಲಿದೆ.
ಸ್ಥಳೀಯವಾದ ಉತ್ಪಾದನೆ ಖಂಡಿತವಾಗಿಯೂ ನಮ್ಮ ಆತಂಕಗಳನ್ನು ಕಡಿಮೆ ಮಾಡಲಿದೆ. ಮತ್ತು ಜಾಗತಿಕ ಮಾರುಕಟ್ಟೆ ಯನ್ನು ಅವಲಂಬಿಸಬೇಕಾದ ಪ್ರಮಾಣವನ್ನು ತಗ್ಗಿಸಲಿದೆ. ನಮ್ಮ ದೇಶದ ಸೆಮಿಕಂಡಕ್ಟರ್ ನೀತಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದರೆ ಭಾರತ ದೀರ್ಘಕಾಲದಲ್ಲಿ ಆರ್ಥಿಕ ಸ್ವಾಯತ್ತತೆಯನ್ನು ಸಾಧಿಸುವಲ್ಲಿ ದೊಡ್ಡ ಹೆಜ್ಜೆ ಇಡುವುದು ಸಾಧ್ಯವಾಗಲಿದೆ.