ವಾಣಿಜ್ಯ ವಿಭಾಗ
ರಮಾನಂದ ಶರ್ಮಾ
ಬ್ಯಾಂಕುಗಳಲ್ಲಿನ ಸೇವಾಶುಲ್ಕಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವವರು, ಬ್ಯಾಂಕೇತರ ಸ್ಥಳಗಳಲ್ಲಿನ ಶುಲ್ಕಗಳ ಬಗ್ಗೆ ಚಕಾರ ಎತ್ತುವುದಿಲ್ಲ. ರದ್ದುಗೊಂಡ ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಂದ ಭಾರತೀಯ ರೈಲ್ವೆ ೩ ವರ್ಷಗಳಲ್ಲಿ ೧,೨೩೦ ಕೋಟಿ ರು. ಮತ್ತು ಪ್ಲಾಟ್ ಫಾರ್ಮ್ ಟಿಕೆಟ್ ಗಳಿಂದ ೨೦೧೯-೨೦ರಲ್ಲಿ ೧೬೦ ಕೋಟಿ ರು. ಆದಾಯ ಗಳಿಸಿದೆ.
ಬ್ಯಾಂಕ್ ಸೇವೆಗಳಿಗೆ ಅಡಿಗಡಿಗೂ ಶುಲ್ಕವಿದೆ ಮತ್ತು ಅದು ನಿರಂತರವಾಗಿ ಹೆಚ್ಚಾಗುತ್ತಲೇ ಇದೆ ಎನ್ನುವ ಆಕ್ರೋಶ ಬ್ಯಾಂಕ್ ಗ್ರಾಹಕರಿಂದ ಸ್ವಲ್ಪ ದೊಡ್ಡದಾಗಿಯೇ ಕೇಳುತ್ತಿದೆ. ಇದರಲ್ಲಿ ಸತ್ಯವಿಲ್ಲದಿಲ್ಲ. ಆದರೆ, ಈ ದೇಶದಲ್ಲಿ ಎಲ್ಲಿ ಶುಲ್ಕವಿಲ್ಲ? ಯಾವ ಸೇವೆಗೆ ಶುಲ್ಕವಿಲ್ಲ? ಶುಲ್ಕವು ಎಲ್ಲಿ ನಿರಂತರ ವಾಗಿ ಹೆಚ್ಚುತ್ತಿದೆ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬ್ಯಾಂಕುಗಳು ವಿಧಿಸುವ ಸೇವಾಶುಲ್ಕವು ಸುದ್ದಿಯಾಗಲಾರದು.
ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು, ಆದರೆ ಶುಲ್ಕವಿಲ್ಲದ ಸೇವೆಯನ್ನು ಈ ದೇಶದಲ್ಲಿ ಪಡೆಯಲಾಗದು ಎನ್ನುವುದು ದಿಟ. ಯಾವ ಸೇವೆಯೂ ಉಚಿತವಾಗಿ ದೊರಕದು, ಶುಲ್ಕ ನೀಡಿ ಸೇವೆ ಪಡೆಯಿರಿ ಎನ್ನುವುದು ೯೦ರ ದಶಕದ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್‌ರ ಆರ್ಥಿಕ ಸುಧಾರಣೆ, ಉದಾರೀಕರಣ ಹಾಗೂ ಜಾಗತೀಕರಣದ ಮೂಲ ಮಂತ್ರವಾಗಿತ್ತು. ಇಂದು ಜನತೆ ತಲ್ಲಣಗೊಂಡಿರುವ ಶುಲ್ಕದ ‘ವಿರಾಟ್ ಸ್ವರೂಪ’ದ ಮೊಳಕೆ ಇರುವುದು, ಜಗತ್ತೇ ಹಾಡಿ ಹೊಗಳಿದ ಈ ‘ಆರ್ಥಿಕ ಸುಧಾರಣೆ’ಯಲ್ಲಿ. ಶುಲ್ಕಗಳ ವಿಶೇಷತೆ ಎಂದರೆ, ಮೊದಮೊದಲು ವೆಚ್ಚದ ಸ್ವಲ್ಪ ಭಾಗವು ರಿಕವರಿಯಾಗಲಿ ಎಂದು ಇರುತ್ತಿದ್ದುದು, ಕಾಲಕ್ರಮೇಣ ಖರ್ಚು-ವೆಚ್ಚ ಸರಿದೂಗಿಸಲು, ನಂತರ ಹಣದುಬ್ಬರಕ್ಕೆ ಸ್ಪಂದಿಸಲು ಮತ್ತು ಅಂತಿಮವಾಗಿ ವಲಯದ ಇನ್ನಿತರ ಸೇವೆಗಳಿಗೆ ಸಾಟಿಯಾಗಲು ಇರುತ್ತದೆ ಎಂದು ಹೇಳಲಾಗುತ್ತದೆ.
ಈ ಶುಲ್ಕಗಳು ಒಮ್ಮೆ ಬೋರ್ಡ್‌ಗೆ ಬಂದರೆ, ಅವು ಕಡಿಮೆಯಾಗುವ ಅಥವಾ ನಿಲ್ಲುವ ಸಾಧ್ಯತೆ ಕಡಿಮೆ ಮತ್ತು ಶುಲ್ಕ ವಿಧಿಸುವ ಹೊಸ ಕಾರ್ಯಕೇಂದ್ರ ಗಳು ಕ್ರಮೇಣ ಹೆಚ್ಚಾಗುತ್ತವೆ. ವಿಪರ್ಯಾಸವೆಂದರೆ, ಬ್ಯಾಂಕುಗಳಲ್ಲಿನ ಸೇವಾಶುಲ್ಕಗಳ ಬಗ್ಗೆ ಅಸಮಾಧಾನ-ಆಕ್ರೋಶಗಳನ್ನು ವ್ಯಕ್ತಪಡಿಸುವವರು, ಬ್ಯಾಂಕೇತರ ಸ್ಥಳಗಳಲ್ಲಿ ವಿಧಿಸುವ ಶುಲ್ಕಗಳ ಬಗ್ಗೆ ಚಕಾರ ಎತ್ತುವುದಿಲ್ಲ. ರದ್ದುಗೊಂಡ ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಂದ ಭಾರತೀಯ ರೈಲ್ವೆಯು ಮೂರು ವರ್ಷಗಳಲ್ಲಿ ೧,೨೩೦ ಕೋಟಿ ರು. ಆದಾಯ ಗಳಿಸಿದೆ ಮತ್ತು ಪ್ಲಾಟ್ ಫಾರ್ಮ್ ಟಿಕೆಟ್‌ಗಳಿಂದ ೨೦೧೯-೨೦ರಲ್ಲಿ ೧೬೦ ಕೋಟಿ ರು. ಗಳಿಸಿದೆ. ಒಂದು ಕಾಲಕ್ಕೆ ೫೦ ಪೈಸೆ ಇದ್ದ ಪ್ಲಾಟ್ ಫಾರ್ಮ್ ಟಿಕೆಟ್ ದರ ಈಗ ೨೦ ರುಪಾಯಿಗೆ ಏರಿದೆ. ಕೆಲವು ನಿಲ್ದಾಣಗಳಲ್ಲಿ ಇದು ೫೦ ರುಪಾಯಿವರೆಗೂ ಏರಿತ್ತು.
ರೈಲು ಮತ್ತು ಬಸ್ ಪ್ರಯಾಣದ ದರಗಳು ನಿರಂತರವಾಗಿ ಏರುತ್ತಲೇ ಇರುತ್ತವೆ. ಮಠ-ಮಂದಿರಗಳಲ್ಲೂ ಬಹುತೇಕ ಪ್ರತಿಯೊಂದು ಸೇವೆಗೂ ಶುಲ್ಕವಿದೆ. ಆಸ್ಪತ್ರೆಗಳಲ್ಲಿ ದಾಖಲಾಗುವಾಗ ಚಿಕಿತ್ಸೆಗಿಂತ ಮೊದಲು ನೋಂದಣಿ ಹೆಸರಿನಲ್ಲಿ ಶುಲ್ಕ ವಿಧಿಸುತ್ತಾರೆ. ಸಾರ್ವಜನಿಕ ಶೌಚಾಲಯಗಳನ್ನು ಶುಲ್ಕ ನೀಡದೆ ಬಳಸಲಾಗದು. ಯಾವುದೇ ಸರಕಾರಿ ಕಚೇರಿಗಳಿಗೆ ಹೋದರೂ ಶುಲ್ಕ ಇಲ್ಲದೆ ಯಾವುದೇ ಕೆಲಸವಾಗುವುದಿಲ್ಲ. ಇದು ನಿತ್ಯಸತ್ಯ. ಆದರೂ, ಬ್ಯಾಂಕ್ ಸೇವೆಗೆ ವಿಧಿಸುವ ಶುಲ್ಕವನ್ನು ಮಾತ್ರ ಟಾರ್ಗೆಟ್ ಮಾಡುವುದೇಕೆ? ಬ್ಯಾಂಕುಗಳ ವಿಶೇಷತೆ ಎಂದರೆ, ತಮ್ಮ ನಿರ್ವಹಣಾ ವೆಚ್ಚವನ್ನು ಅವುಗಳೇ ನಿಭಾಯಿಸಬೇಕು. ಅವುಗಳಿಗೆ ಸರಕಾರದ ಆಯವ್ಯಯದ ಅನುದಾನ ದೊರಕುವುದಿಲ್ಲ.
ಬ್ಯಾಂಕು ಗಳಿಸುವ ಮತ್ತು ನೀಡುವ ಬಡ್ಡಿದರದ ವ್ಯತ್ಯಾಸ ಕನಿಷ್ಠ ಶೇ.೩ರಷ್ಟು ಇದ್ದರೆ, ಅದರ ನಿರ್ವಹಣಾ ವೆಚ್ಚ ಸ್ವಲ್ಪ ಸರಿದೂಗಬಹುದು ಎನ್ನುವ ಅಂದಾಜು ಬ್ಯಾಂಕಿಂಗ್ ಉದ್ಯಮದಲ್ಲಿ ಕೇಳಿಬರುತ್ತದೆ. ಆದರೆ, ಸಾಲದ ಮೇಲಿನ ಬಡ್ಡಿದರ ಇಳಿಸುವಂತೆ ಹೊಮ್ಮುವ ಗ್ರಾಹಕರ-ಸರಕಾರದ ಆಗ್ರಹ ಹಾಗೂ ಠೇವಣಿ ಮೇಲಿನ ಬಡ್ಡಿದರ ಹೆಚ್ಚಿಸುವಂತೆ ಗ್ರಾಹಕರಿಂದ ಹೊಮ್ಮುವ ಒತ್ತಾಯದ ನಡುವೆ ಸಿಲುಕಿ, ಬ್ಯಾಂಕು ನೀಡುವ ಮತ್ತು ಪಡೆಯುವ ಬಡ್ಡಿಯಲ್ಲಿನ ವ್ಯತ್ಯಾಸ ಕಿರಿದಾಗುತ್ತಿದ್ದು, ಬ್ಯಾಂಕುಗಳ ನಿರ್ವಹಣೆ ಕ್ಲಿಷ್ಟಕರವಾಗುತ್ತಿದೆ. ಬ್ಯಾಂಕುಗಳಲ್ಲಿ ಅನುತ್ಪಾದಕ ಸುಸ್ತಿ ಸಾಲ ಏರುತ್ತಿದ್ದು, ಇದು ಬ್ಯಾಂಕುಗಳ ಬಡ್ಡಿ ಆದಾಯದ ಮೇಲೆ ಪರಿಣಾಮ ಬೀರಿದೆ.
ಹೊಸ ನಿಯಮಾವಳಿ ಪ್ರಕಾರ ಬ್ಯಾಂಕುಗಳು ವಸೂಲಿಯಾದ ಬಡ್ಡಿಯನ್ನು ಮಾತ್ರ ಆದಾಯವೆಂದು ಪರಿಗಣಿಸಬೇಕು. ವಸೂಲಿಯಾಗಬೇಕಾದ ಬಡ್ಡಿಯನ್ನು ಆದಾಯವೆಂದು ತೆಗೆದುಕೊಳ್ಳುವಂತಿಲ್ಲ. ಹಾಗೆಯೇ, ಸಾಲ ವಿಲೇವಾರಿಯೂ ನಿರೀಕ್ಷೆಯಷ್ಟು ಇಲ್ಲ ಎಂದು ಹೇಳಲಾಗುತ್ತಿದೆ. ದೊಡ್ಡ ಸಾಲಗಳನ್ನು ತೆಗೆದುಕೊಳ್ಳುವ ಖಾಸಗಿ/ಕಾರ್ಪೊರೇಟ್ ಕಂಪನಿಗಳು, ಖಾಸಗಿ ಸಾಲಗಳ ಮೊರೆಹೋಗುತ್ತವೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಆರ್ಥಿಕತೆಯು low interest regime ನಲ್ಲಿ ಇದ್ದು, ಬಡ್ಡಿ ಆದಾಯ ಕುಸಿಯುತ್ತಿದೆ. ಅಂತೆಯೇ ಬ್ಯಾಂಕುಗಳು ತಮ್ಮ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಡ್ಡಿಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯಲ್ಲಿವೆ. ಹಾಗೆಯೇ, ಸಾಲ ವಸೂಲಾತಿಯಲ್ಲಿ ಕೂಡ ಹಿನ್ನಡೆ ಇದೆ ಎನ್ನಲಾಗುತ್ತಿದ್ದು, ಬ್ಯಾಂಕುಗಳು ಒತ್ತಡದಲ್ಲಿರುವುದನ್ನು ಅಲ್ಲಗಳೆಯಲಾಗದು.
ಕಳೆದ ಒಂದು ದಶಕದಲ್ಲಿ ಬ್ಯಾಂಕುಗಳು ಸುಮಾರು ೧೫ ಲಕ್ಷ ಕೋಟಿ ರು. ಸಾಲವನ್ನು ಬರ್ಖಾಸ್ತ್ (ರೈಟ್ -ಆಫ್) ಮಾಡಿದ್ದು, ಅಷ್ಟರ ಮಟ್ಟಿಗೆ ಬ್ಯಾಂಕುಗಳು ಗಳಿಸಿದ ಲಾಭವು ಸುಸ್ತಿ ಸಾಲಕ್ಕೆ ವಜಾ ಆಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಉತ್ತಮವಾದ, ಅಂತಾರಾಷ್ಟ್ರೀಯ ಮಟ್ಟದ ಮತ್ತು ಶೀಘ್ರ ಸೇವೆಯನ್ನು ಒದಗಿಸಲು ಕಚೇರಿ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣ ಮಾಡುವುದರೊಂದಿಗೆ, ಹಲವಾರು ವಿದ್ಯುನ್ಮಾನ ಪರಿಕರಗಳನ್ನು ಅಳವಡಿಸಿವೆ.
ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡಲು ಡಿಜಿಟಲೀಕರಣವನ್ನೂ ಕೈಗೊಂಡಿವೆ. ಈ ನಿಟ್ಟಿನಲ್ಲಿ ಬ್ಯಾಂಕುಗಳು ಭಾರಿ ಬಂಡವಾಳ ಹೂಡಿವೆ ಮತ್ತು ಲಕ್ಷಾಂತರ ಕೋಟಿ ವೆಚ್ಚ ಮಾಡಿವೆ. ಬ್ಯಾಂಕುಗಳ ಬಳಸುವ ಸಾಫ್ಟ್ ವೇರ್‌ಗೂ ಹಣ ಪಾವತಿಸಬೇಕು. ಇವುಗಳ ನಿರ್ವಹಣೆ ಇನ್ನೊಂದು ವೆಚ್ಚದಾಯಕ ಅಂಶ. ಗಣಕ ಯಂತ್ರಗಳು ಮತ್ತು ಇತರ ವಿದ್ಯುನ್ಮಾನ ಪರಿಕರಗಳನ್ನು ಮೂರು ವರ್ಷಕ್ಕೊಮ್ಮೆ ಬದಲಾಯಿಸಬೇಕಾಗುತ್ತದೆ ಇಲ್ಲವೇ ಉನ್ನತೀಕರಣಗೆ
ಳಿಸಬೇಕಾಗುತ್ತದೆ.
ಬ್ಯಾಂಕುಗಳು ತಮ್ಮ ಆದಾಯದ ಶೇ.೧೧.೦೧ರವರೆಗೆ ಡಿಜಿಟಲೀಕರಣಕ್ಕೆ ವೆಚ್ಚ ಮಾಡುತ್ತವೆಯಂತೆ. ಬ್ಯಾಂಕುಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಯನ್ನು ಅಳವಡಿಸಿದ ಮೇಲೆ ಬ್ಯಾಂಕಿನ ಬಹುತೇಕ ವ್ಯವಹಾರಗಳು ಟೆಲಿ-ನ್ ಮತ್ತು ಉಪಗ್ರಹ ಸಂಪರ್ಕದ ಮೇಲೆ ನಡೆಯುವುದರಿಂದ ಅದರ ವೆಚ್ಚವೂ
ಗಮನಾರ್ಹವಾಗಿರುತ್ತದೆ. ಒಂದು ಎಟಿಎಂ ವ್ಯವಸ್ಥೆಯ ಬೆಲೆ ಸುಮಾರು ೧೦ ಲಕ್ಷ ರು. ಇದ್ದು, ಅದರ ಮಾಸಿಕ ನಿರ್ವಹಣಾ ವೆಚ್ಚವು (ಸೆಕ್ಯುರಿಟಿ, ವಿದ್ಯುತ್, ಹವಾನಿಯಂತ್ರಣ ಇತ್ಯಾದಿ) ಸುಮಾರು ೭೦ ಸಾವಿರ ರು. ಆಗುತ್ತದೆ. ಎಟಿಎಂ ಕೇಂದ್ರಗಳು ಬ್ಯಾಂಕ್ ಕಟ್ಟಡದ ವ್ಯಾಪ್ತಿಯಿಂದ ದೂರವಿದ್ದರೆ ಬಾಡಿಗೆ ಬೇರೆ. ಅಂತೆಯೇ ಬ್ಯಾಂಕುಗಳು ತಮ್ಮ ನಿರ್ವಹಣಾ ವೆಚ್ಚವನ್ನು ನಿಭಾಯಿಸಲು ಆದಾಯದ ಬೇರೆ ಬೇರೆ ಮೂಲಗಳನ್ನು ಹುಡುಕುತ್ತವೆ ಮತ್ತು ಈಗಾಗಲೇ ಇರುವ ಶುಲ್ಕವನ್ನು ಹೆಚ್ಚು ಮಾಡುತ್ತಿರುತ್ತವೆ. ಇದೇನೂ ಹೊಸ ಬೆಳವಣಿಗೆಯಲ್ಲ.
ಬಹುತೇಕ ಎಲ್ಲಾ ಸಾರ್ವಜನಿಕ ಸೇವಾ ವಿಭಾಗಗಳಲ್ಲಿ ಸದಾ ಕಾಣುವ ಪ್ರಕ್ರಿಯೆಯಾಗಿರುತ್ತದೆ. ಬ್ಯಾಂಕುಗಳು ನೀಡುವ ಆಧುನಿಕ ಸೌಲಭ್ಯಗಳನ್ನು
ಪಡೆಯುವವರು, ಈ ಸೌಲಭ್ಯ ನೀಡಲು ಬ್ಯಾಂಕುಗಳು ಮಾಡುವ ವೆಚ್ಚದ ಮೊತ್ತದ ಬಗ್ಗೆ ಎಂದೂ ಯೋಚಿಸುವುದಿಲ್ಲ ಎಂದು ಬ್ಯಾಂಕರ್‌ಗಳು ಅಭಿಪ್ರಾಯಪಡುತ್ತಾರೆ. ‘ಮನೆಗೆ ನೆಂಟರು ಬರಬೇಕು, ಆದರೆ ಅಕ್ಕಿ ಖರ್ಚಾಗಬಾರದು’ ಎನ್ನುವ ಗ್ರಾಹಕರ ದ್ವಂದ್ವ ನಿಲುವು ಮತ್ತು ಆಗ್ರಹಕ್ಕೆ ಬ್ಯಾಂಕುಗಳು ಆಶ್ಚರ್ಯಪಡುತ್ತವೆ.
ಉತ್ತಮ, ಶೀಘ್ರ ಮತ್ತು ಗುಣಮಟ್ಟದ ಸೇವೆಯ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಗಣಕೀಕರಣ ಮತ್ತು ಡಿಟಿಜಲೀಕರಣವನ್ನು ಸಿಬ್ಬಂದಿಯ ಕಡುವಿರೋಧದ
ನಡುವೆಯೂ ಯುದ್ಧೋಪಾದಿಯಲ್ಲಿ ಅಳವಡಿಸಿದಾಗ ಗ್ರಾಹಕರು ಶ್ಲಾಘಿಸಿದ್ದರು; ಇದಕ್ಕೆ ಮುಂದಿನ ದಿನಗಳಲ್ಲಿ ತಾವು ತೆರಬೇಕಾದ ದುಬಾರಿ ಬೆಲೆಯ ಬಗೆಗೆ ಆಗ ಅವರು ಯೋಚಿಸಿರಲಿಲ್ಲ. ಬ್ಯಾಂಕುಗಳು ಒದಗಿಸುವ ಸೇವೆ ಹಾಗೂ ಅದರಿಂದಾಗುವ ಅನುಕೂಲದ ಬಗೆಗೆ ಯಾರೂ ಮಾತನಾಡುವುದಿಲ್ಲ. ಪ್ರತಿಯೊಬ್ಬ ಗ್ರಾಹಕರೂ ಉಚಿತ ಸೇವೆಯನ್ನು ಅಥವಾ ಪಡೆಯುವ ಸೇವೆಗೆ ಅತಿಕಡಿಮೆ ಶುಲ್ಕವನ್ನು ನಿರೀಕ್ಷಿಸುತ್ತಾರೆ ಎಂದು ಬ್ಯಾಂಕರುಗಳು ಹೇಳುತ್ತಾರೆ. ನಿರಂತರವಾಗಿ ಬಳಸುವ ಸಾರಿಗೆ, ನೀರು, ವಿದ್ಯುತ್, ಮೊಬೈಲ್, ಅಡುಗೆ ಅನಿಲ, ವಾಹನದ ಇಂಧನ ದರ ಏರಿದಾಗ ಯಾರೂ ತುಟಪಿಟ
ಕ್ಕೆನ್ನುವುದಿಲ್ಲ ಎನ್ನುವ ಬ್ಯಾಂಕರುಗಳ ಪ್ರತಿಕ್ರಿಯೆಯಲ್ಲಿ ತೂಕವಿದೆ.
ಏರುತ್ತಿರುವ ಹಣದುಬ್ಬರಕ್ಕೆ ಪದಾರ್ಥಗಳ ಮತ್ತು ಸೇವೆಯ ಬೆಲೆಯು ದುಬಾರಿಯಾಗುವಾಗ, ಈ ಮಾನದಂಡವು ಬ್ಯಾಂಕ್ ಸೇವೆಗಳಿಗೆ ಇಲ್ಲವೇ? ಎನ್ನುವ
ಅವರ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಬ್ಯಾಂಕ್ ಸೇವೆಗಳ ಶುಲ್ಕ ಹೆಚ್ಚು ಎಂಬುದು ಜನಸಾಮಾನ್ಯರ ಅನಿಸಿಕೆಯಾಗಿದ್ದರೂ, ಇನ್ನಿತರ ವಲಯಗಳಲ್ಲಿ ನೀಡುವ ಸೇವೆಗಳಿಗೆ ವಿಧಿಸುವ ಶುಲ್ಕಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಎನ್ನುವ ಹಣಕಾಸು ಮಂತ್ರಿಗಳ ಹೇಳಿಕೆಯಲ್ಲಿ ಅರ್ಥವಿದೆ. ನಗರ ಗಳಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಶುಲ್ಕವು ತಾಸಿಗೆ ರು. ೧೦-೪೦ರವರೆಗೆ ಇದ್ದರೆ, ಕಾರುಗಳ ಪಾರ್ಕಿಂಗ್ ಶುಲ್ಕವು ರು. ೨೦-೧೦೦ರವರೆಗೆ ಇರುತ್ತದೆ.
ಬೆಂಗಳೂರಿನ ಮಾಲ್ ಒಂದರಲ್ಲಿ ವಾಹನ ಪಾರ್ಕಿಂಗ್ ಶುಲ್ಕವು ತಾಸಿಗೆ ೧,೦೦೦ ರು. ಇದೆಯಂತೆ. ಕೆಲವು ಮಲ್ಟಿಪ್ಲೆಕ್ಸ್ ಮತ್ತು ಮಾಲ್‌ಗಳಲ್ಲಿ ಅವರು ಹೇಳಿದ್ದೇ ಶುಲ್ಕವಂತೆ. ಮಲ್ಟಿಪ್ಲೆಕ್ಸ್‌ಗಳಲ್ಲಿನ ತಿಂಡಿ-ತಿನಿಸುಗಳ ಬೆಲೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ; ಆದರೆ ಬ್ಯಾಂಕ್ ಸೇವೆಗಳ ಶುಲ್ಕವನ್ನು ಬೇರೆ ಸೇವೆಗಳ ಸಂಗಡ ಹೋಲಿಸದೇ ಆಕ್ರೋಶ ವ್ಯಕ್ತಪಡಿಸುತ್ತಾರೆ ಎನ್ನುವ ಬ್ಯಾಂಕುಗಳ ವ್ಯಾಕುಲತೆಯಲ್ಲಿ ಅರ್ಥವಿದೆ.
(ಲೇಖಕರು ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)