Thursday, 31st October 2024

ಅಮಿತ್ ಶಾ ಅವರ ಆತಂಕ ಏನು ?

ಮೂರ್ತಿಪೂಜೆ

ಕಳೆದ ವಾರ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಆತಂಕದಲ್ಲಿದ್ದರಂತೆ. ಕರ್ನಾಟಕದಲ್ಲಿ ಬಿಜೆಪಿ ಮೈತ್ರಿ ಕೂಟ ೧೬ ಸ್ಥಾನಗಳನ್ನು ಗೆಲ್ಲಲಿದೆ ಎಂಬ ವರದಿ ಕೈ ಸೇರಿದ್ದೇ ಇದಕ್ಕೆ ಕಾರಣ. ರಾಜ್ಯದಲ್ಲಿರುವ ೨೮ ಕ್ಷೇತ್ರಗಳ ಪೈಕಿ ೧೬ರಲ್ಲಿ ಬಿಜೆಪಿ ಮೈತ್ರಿಕೂಟ ಮುಂದಿದ್ದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ೧೨ ಕ್ಷೇತ್ರಗಳಲ್ಲಿ ಮುಂದಿದೆ ಎಂಬುದು ಅಮಿತ್ ಶಾ ಕೈಲಿರುವ ರಿಪೋರ್ಟು.

೧೨ ಮಂದಿಯ ಪಡೆಯು ರಾಜ್ಯಾದ್ಯಂತ ಸುತ್ತಿ ನೀಡಿರುವ ಈ ವರದಿ ಹಂಡ್ರೆಡ್ ಪಸೆಂಟ್ ಪಕ್ಕಾ ಎಂಬುದು ಅಮಿತ್ ಶಾ ಅವರ
ನಂಬಿಕೆ. ಹೀಗಾಗಿ ಕಳೆದ ವಾರ ಕರ್ನಾಟಕಕ್ಕೆ ಬಂದವರು, ‘ಕ್ಯಾ ಬೋಲ್ತಾ ಹೈ ತುಮ್ಹಾರಾ ರಿಪೋರ್ಟ್?’ ಅಂತ ರಾಜ್ಯದ ನಾಯಕರಿಗೆ ಕೇಳಿದ್ದಾರೆ. ಆದರೆ ರಾಜ್ಯದ ನಾಯಕರು ಮಾತ್ರ, ‘ಸರ್, ನಾವು ಸ್ಪರ್ಧಿಸುವ ೨೫ ಕ್ಷೇತ್ರಗಳ ಪೈಕಿ ೧೮ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ.

ಆದರೆ ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೊಪ್ಪಳ ಮತ್ತು ಕಲಬುರ್ಗಿ ಕ್ಷೇತ್ರಗಳಲ್ಲಿ ಟಫ್ ಫೈಟ್ ಇದೆ’ ಎಂದಿದ್ದಾರೆ. ಅಷ್ಟೇ ಅಲ್ಲ, ‘ಈಗ ನಾವು ಗೆಲ್ಲುವ ಕ್ಷೇತ್ರಗಳ ಜತೆ ಜೆಡಿಎಸ್ ಮುಂದಿರುವ ಮಂಡ್ಯ, ಹಾಸನ, ಕೋಲಾರ
ಸೇರಿದರೆ ನಮ್ಮ ಗಳಿಕೆ ೨೧ಕ್ಕೆ ಏರುತ್ತದೆ’ ಎಂದಿದ್ದಾರೆ. ಹೀಗೆ ಅವರು ಹೇಳುವುದನ್ನೆಲ್ಲ ಕೇಳಿಸಿಕೊಂಡ ಅಮಿತ್ ಶಾ ಅವರು, ‘ನೀವು ತೋರಿಸುತ್ತಿರುವ ವಿಶ್ವಾಸ ದೊಡ್ಡದು. ಆದರೆ ಪರಿಸ್ಥಿತಿ ಅಷ್ಟು ಸುಲಭವಾಗಿದೆ ಅನ್ನಿಸುತ್ತಿಲ್ಲ. ನಮಗಿರುವ ಮಾಹಿತಿಯ ಪ್ರಕಾರ ಬಿಜೆಪಿ ಮೈತ್ರಿಕೂಟ ೧೬ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಕಷ್ಟ. ಆದರೆ ಪಕ್ಷದಲ್ಲಿರುವ ಒಳಜಗಳವನ್ನು ನಿವಾರಿಸಿ ಕೊಂಡರೆ ನಾವು ಇನ್ನೂ ೪ ಕ್ಷೇತ್ರಗಳಲ್ಲಿ ಜಯಗಳಿಸಬಹುದು. ಏಕೆಂದರೆ ಇವತ್ತು ಕಾಂಗ್ರೆಸ್ ಮುಂಚೂಣಿಯಲ್ಲಿರುವ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಅದು ಅಲ್ಪ ಮುನ್ನಡೆಯಲ್ಲಿದೆ.

ಹೀಗಾಗಿ ಮತ್ತಷ್ಟು ಬಲ ಹಾಕಿದರೆ ಮೈತ್ರಿಕೂಟ ೨೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು’ ಅಂತ ಸ್ಪಷ್ಟವಾಗಿ ಹೇಳಿದ್ದಾರೆ.
ಅವರು ನೀಡಿದ ಎಚ್ಚರಿಕೆಯ ಮಾತುಗಳನ್ನು ರಾಜ್ಯದ ಬಿಜೆಪಿ ನಾಯಕರು ಸೀರಿಯಸ್ಸಾಗಿ ರಿಸೀವ್ ಮಾಡಿಕೊಂಡಿದ್ದಾರಾದರೂ ಸ್ವತಃ ಅಮಿತ್ ಶಾ ಅವರಿಗೆ ತುಂಬ ನಂಬಿಕೆ ಬರುತ್ತಿಲ್ಲ. ಯಾಕೆಂದರೆ ಒಗ್ಗಟ್ಟಿನ ಮಂತ್ರ ಜಪಿಸಿ ಹೋರಾಡಿದ್ದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಪಕ್ಷ ಗೆದ್ದು ಅಧಿಕಾರ ಹಿಡಿಯಬೇಕಿತ್ತು. ಆದರೆ ಅದೇಕೆ ಸಾಧ್ಯವಾಗಲಿಲ್ಲ? ಹೀಗಾಗಿ ಅವತ್ತು ಶುರುವಾದ ಅನೈಕ್ಯತೆ ಈ ಚುನಾವಣೆಯಲ್ಲೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋದರೂ ಅಚ್ಚರಿಯಿಲ್ಲ ಎಂಬುದು ಅವರ ಚಿಂತೆ.

ಅಂದ ಹಾಗೆ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ೨೦ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಟಿಕೆಟ್ ಪಡೆದಿದ್ದು ಹೇಗೆ? ಅದರಲ್ಲಿ ಬಹುತೇಕರು ಗೆದ್ದಿದ್ದು ಹೇಗೆ? ಎಂಬ ಸೂಕ್ಷ್ಮವನ್ನು ಅರಗಿಸಿಕೊಳ್ಳಲು ಅಮಿತ್ ಶಾ ಅವರಿಗೆ ಇನ್ನೂ ಸಾಧ್ಯವಾ ಗುತ್ತಿಲ್ಲ. ಇದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಳೇಟು ಕೊಡಲು ಸಜ್ಜಾಗಿರುವವರು ಯಾರು? ಅವರ ಹಿಂದಿರುವ ನಾಯಕರು ಯಾರು? ಎಂಬ ವಿವರವೂ ಅಮಿತ್ ಶಾ ಅವರ ಕೈಲಿದೆ.

ಅರ್ಥಾತ್, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸೋಲಿಗೆ ನಾವೇ ಕಾರಣ, ಈಗ ಲೋಕಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾದರೆ ಅದಕ್ಕೂ ನಾವೇ ಕಾರಣ ಅಂತ ಅಮಿತ್ ಶಾ ಅವರಿಗೆ ಪಕ್ಕಾ ಆಗಿದೆ. ಹೀಗಾಗಿ ಕೊಡಬೇಕಾದ ಎಚ್ಚರಿಕೆ ಕೊಟ್ಟು ಅವರೇನೋ ದಿಲ್ಲಿಗೆ ಹಿಂದಿರುಗಿದ್ದಾರೆ. ಆದರೆ ಬಿಜೆಪಿ ಮೈತ್ರಿಕೂಟ ಕರ್ನಾಟಕದಲ್ಲಿ ೨೦ರ ಗಡಿ ತಲುಪುತ್ತದೆ ಎಂಬ ವಿಷಯದಲ್ಲಿ ಅವರಿಗೆ ನಂಬಿಕೆ ಬರುತ್ತಿಲ್ಲ.

ಸಂಪುಟಕ್ಕೆ ‘ಕೈ’ಹಾಕಲ್ಲ
ಈ ಮಧ್ಯೆ ಕರ್ನಾಟಕದ ನೆಲೆಯಿಂದ ಶುಭಸುದ್ದಿಗಳು ಬರುತ್ತಿದ್ದರೂ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಆತಂಕ ಶುರುವಾಗಿದೆ. ದಿಲ್ಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಒಕ್ಕೂಟ ಬಂದು ಕುಳಿತರೆ ಸರಿ; ಹಾಗಾಗದೆ ಪುನಃ ನರೇಂದ್ರ ಮೋದಿ ಸರಕಾರ ವೇ ಸೆಟ್ಲಾದರೆ ರಾಜ್ಯ ಸರಕಾರ ಅಲುಗಾಡಲಿದೆ ಎಂಬುದು ಈ ನಾಯಕರಿಗಿರುವ ಮೆಸೇಜು. ಅವರಿಗೆ ತಲುಪುತ್ತಿರುವ ಮಾಹಿತಿಯ ಪ್ರಕಾರ, ಮುಂಬೈ-ಕರ್ನಾಟಕ ಭಾಗದ ಹಿರಿಯ ಸಚಿವರೊಬ್ಬರು ನಿರಂತರವಾಗಿ ಮಹಾರಾಷ್ಟ್ರದ ಬಿಜೆಪಿ ನಾಯಕ ಫಡ್ನವೀಸ್ ಮತ್ತು ಗೋವಾದ ಪ್ರಮೋದ್ ಸಾವಂತ್ ಅವರ ಸಂಪರ್ಕದಲ್ಲಿದ್ದಾರೆ. ಅಷ್ಟೇ ಅಲ್ಲ, ರಾಜ್ಯ ಕಾಂಗ್ರೆಸ್‌ನಲ್ಲಿರುವ ಹಲವು ಅತೃಪ್ತ ಶಾಸಕರು ಈ ನಾಯಕರ ಸಂಪರ್ಕದಲ್ಲಿರುವಂತೆ ಮಾಡಿದ್ದಾರೆ.

ದಿಲ್ಲಿಯ ಕಾಂಗ್ರೆಸ್ ನಾಯಕರ ಪ್ರಕಾರ, ಕರ್ನಾಟಕ ಸರಕಾರವನ್ನು ಅಲುಗಾಡಿಸುವ ಆಟ ಜುಲೈ ಹೊತ್ತಿಗೆ ವೇಗ ಪಡೆಯಬಹುದು. ಹೀಗಾಗಿ ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಬರಲಿ, ಆದರೆ ಮಂತ್ರಿಮಂಡಲ ಪುನಾರಚನೆಗೆ ಕೈ ಹಾಕುವುದು ಬೇಡ
ಎಂಬುದು ಅವರ ಯೋಚನೆ. ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಮಂತ್ರಿಗಳು ಸೂಚಿಸಿದವರಿಗೆ ಟಿಕೆಟ್ ಕೊಡುವುದು, ಚುನಾವಣೆಯಲ್ಲಿ ಈ ಕ್ಯಾಂಡಿಡೇಟುಗಳು ಸೋತರೆ ಸಂಬಂಧಪಟ್ಟ ಮಂತ್ರಿಗಳನ್ನು ಸಂಪುಟದಿಂದ ಕೈಬಿಡುವು ದಾಗಿ ಹೆದರಿಸಿದ್ದೇನೋ ಸರಿ. ಆದರೆ ಈ ತಂತ್ರಕ್ಕೆ ಕೈಹಾಕಿದರೆ ಮಂತ್ರಿಗಿರಿ ಕಳೆದುಕೊಂಡವರು ಬಿಜೆಪಿ ಕಡೆ ಹೋಗಬ ಹುದು.

ಹೀಗಾಗಿ ಚುನಾವಣೆಯ ಫಲಿತಾಂಶ ಬಂದ ನಂತರ ೪-೫ ತಿಂಗಳ ಮಟ್ಟಿಗಾದರೂ ಪುನಾರಚನೆಯ ಗೋಜಿಗೆ ಹೋಗದಿರುವುದೇ ಒಳ್ಳೆಯದು ಎಂಬುದು ವರಿಷ್ಠರ ಯೋಚನೆ. ಈಶ್ವರಪ್ಪ ‘ಅಮಿತ’ ಟೆಕ್ನಿಕ್ ಇನ್ನು, ಬಂಡಾಯವೆದ್ದಿರುವ ಹಿರಿಯ ನಾಯಕ  ಕೆ.ಎಸ್.ಈಶ್ವರಪ್ಪ ಅವರ ಮನವೊಲಿಸುವ ಕೊನೆಯ ಯತ್ನವೂ ವಿಫಲಗೊಂಡಿದೆ. ಎಷ್ಟೇ ಆದರೂ ಕರ್ನಾಟಕದಲ್ಲಿ ಬಿಜೆಪಿ
ಯನ್ನು ಕಟ್ಟಿದ ತ್ರಿಮೂರ್ತಿಗಳಲ್ಲಿ ಈಶ್ವರಪ್ಪ ಅವರೂ ಒಬ್ಬರು. ಈ ಸಂದರ್ಭದಲ್ಲಿ ಅವರು ಪಕ್ಷದಿಂದ ಹೊರಹೋಗುವುದು ಸರಿಯಲ್ಲ ಅಂತ ಯಡಿಯೂರಪ್ಪ ಬಳಗದ ನಾಯಕರೊಬ್ಬರು ಈಶ್ವರಪ್ಪ ಅವರನ್ನು ಸಂಪರ್ಕಿಸಿದ್ದಾರೆ.

‘ಸರ್, ನಿಮ್ಮ ಜತೆ ಮಾತನಾಡಬೇಕು, ಭೇಟಿಗೆ ಅವಕಾಶ ಕೊಡಿ’ ಎಂದಿದ್ದಾರೆ. ಆಗೆಲ್ಲ ವಿಶ್ವಾಸದಿಂದಲೇ ಮಾತನಾಡಿಸಿದ ಈಶ್ವರಪ್ಪ ಅವರು, ‘ನಾಳೆ ಶಿವಮೊಗ್ಗದ ಹರ್ಷ ಹೋಟೆಲ್ಲಿಗೆ ಬನ್ನಿ ಮಾತನಾಡೋಣ’ ಎಂದಿದ್ದಾರೆ. ಹಾಗಂತಲೇ ಮೊನ್ನೆ ಶನಿವಾರ ಈ ನಾಯಕರು ಹರ್ಷ ಹೋಟೆಲ್ಲಿಗೆ ಹೋದರೆ ಈಶ್ವರಪ್ಪ ಬೆಂಬಲಿಗರ ಜತೆ ಸಭೆ ನಡೆಸುತ್ತಿರುವುದು ಗೊತ್ತಾಗಿದೆ. ಹಾಗಂತಲೇ ಅಲ್ಲಿದ್ದ ಅವರ ಆಪ್ತರ ಮೂಲಕ ಹೇಳಿ ಕಳಿಸಿದರೆ, ‘ಈಗ ಮಾತನಾಡುವುದೇನಿಲ್ಲ, ಭೇಟಿ ಮಾಡುವುದು ಬೇಕಿಲ್ಲ’ ಅಂತ ಈಶ್ವರಪ್ಪ ಹೇಳಿಕಳಿಸಿದ್ದಾರೆ.

ಹೀಗೆ ಸಭೆಯ ಒಳ ಹೋಗಿ ಸಂದೇಶ ತಂದವರು, ‘ಈಶ್ವರಪ್ಪ ಸಾಹೇಬರು ಶಿವಮೊಗ್ಗದಲ್ಲಿ ಗೆದ್ದು ಮೋದಿಯವರ ಕೈಲಿ ಹಾರ ಹಾಕಿಸ್ಕೊಂಡು ಬಿಜೆಪಿಗೇ ವಾಪಸ್ಸು ಬರ್ತಾರೆ’ ಎಂದರಂತೆ. ಯಾವಾಗ ಈಶ್ವರಪ್ಪ ಈ ಮೆಸೇಜು ಕೊಟ್ಟರೋ, ಅಲ್ಲಿಗೆ ಅವರ ಮನವೊಲಿಕೆಯ ಕೊನೆಯ ಪ್ರಯತ್ನವೂ ವಿಫಲವಾಗಿದೆ. ಅಂದ ಹಾಗೆ, ಕೆಲ ದಿನಗಳ ಮುನ್ನ ಈಶ್ವರಪ್ಪ ಅವರನ್ನು ದಿಲ್ಲಿಗೆ ಕರೆಸಿದ್ದ ಅಮಿತ್ ಶಾ ಅವರು, ನಿಮ್ಮ ಬಳಿ ಮಾತನಾಡುವುದೇನಿಲ್ಲ ಅಂತ ಭೇಟಿಗೂ ಅವಕಾಶ ನೀಡದೆ ವಾಪಸ್ ಕಳಿಸಿದ್ದರು. ಈಗ ಈಶ್ವರಪ್ಪ ಅವರು ಯಡಿಯೂರಪ್ಪ ಆಪ್ತರಿಗೆ ಇದೇ ಬಗೆಯ ಉತ್ತರ ನೀಡಿ ವಾಪಸ್ ಕಳಿಸಿದ್ದಾರೆ. ಸಂಧಾನದ ಬಾಗಿಲನ್ನು ವಿಧ್ಯುಕ್ತವಾಗಿ ಮುಚ್ಚಿದ್ದಾರೆ.

ಘಟಿಸಲಿದೆಯೇ ‘ಕಲ್ಯಾಣ’ ಕ್ರಾಂತಿ? 
ಈ ಮಧ್ಯೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಲ್ಯಾಣ ಕ್ರಾಂತಿ ಘಟಿಸುವ ಲಕ್ಷಣಗಳು ಕಾಣುತ್ತಿವೆ. ಕಾರಣ? ಚುನಾವಣೆ ಯಲ್ಲಿ ಸ್ಪರ್ಧಿಸಲು ಪಕ್ಷ ತಮಗೆ ನೀಡಿದ ಟಿಕೆಟ್ ಅನ್ನು ೮ ಕೋಟಿ ರುಪಾಯಿಗೆ ಮಾರಿಕೊಳ್ಳಲು ಒಬ್ಬ ಅಭ್ಯರ್ಥಿ ಪ್ರಯತ್ನಿಸಿದ್ದಾರೆ ಎಂಬ ಮಾಹಿತಿ. ಮೂಲಗಳ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದ ನಾಯಕರೊಬ್ಬರಿಗೆ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಮುಂದುವರಿದರೆ ತಾವು ಕಣಕ್ಕಿಳಿಯುವುದು ಕಷ್ಟವಾಗಬಹುದು ಎಂಬುದು ಅವರ ಆತಂಕ. ಹೀಗಾಗಿ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗುವ ಮುನ್ನವೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಹೊರಟಿರುವ ಆ ಅಭ್ಯರ್ಥಿ, ಪಕ್ಷದ ಟಿಕೆಟ್ ಪಡೆಯಲು ತಮ್ಮಂತೆಯೇ ಪ್ರಯತ್ನ ನಡೆಸಿದ್ದ ಒಬ್ಬ ನಾಯಕರ ಬಳಿ ಡೀಲು ಕುದುರಿಸಲು ಮುಂದಾಗಿದ್ದಾರೆ.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ನಿಮಗೇ ಟಿಕೆಟ್ ಕೊಡಿಸಲು ರೆಡಿ. ಇದಕ್ಕೆ ಪ್ರತಿಯಾಗಿ ನೀವು ನನಗೆ ೮ ಕೋಟಿ ರುಪಾಯಿ ಕೊಡಬೇಕು’ ಅಂತ ಹೇಳಿದ್ದಾರೆ. ಇವರ ಮಾತು ಕೇಳಿದ ಆ ಆಕಾಂಕ್ಷಿ, ‘ಅಷ್ಟು ರೊಕ್ಕ ಎಲ್ಲೈ ತಣ್ಣ? ಬೇಕಿದ್ದರೆ ೪ ಕೋಟಿ ಕೊಡುತ್ತೇನೆ’ ಎಂದಿದ್ದಾರೆ. ಹೀಗೆ ಇಬ್ಬರು ಸ್ಥಳೀಯ ನಾಯಕರ ಮಧ್ಯೆ ನಡೆದ ಟಿಕೆಟ್ ಡೀಲಿನ ಮಾತುಕತೆ ಈಗ ಆಡಿಯೋ ಬಾಂಬ್ ಆಗಿ ರೆಡಿಯಾಗಿದೆ. ಒಂದು ವೇಳೆ ಈ ಬಾಂಬು ಸಿಡಿದರೆ ರಾಯಚೂರು ಮಾತ್ರವಲ್ಲ, ಇಡೀ ರಾಜ್ಯವನ್ನೂ ಅಚ್ಚರಿಗೆ ದೂಡಲಿದೆ.

ಪ್ರಜ್ವಲ್‌ಗೆ ಬಿಜೆಪಿ ಕಿರಿಕಿರಿ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಟಕ್ಕರ್ ಕೊಡಲು ಬಿಜೆಪಿ ಜತೆ ಕೈ ಜೋಡಿಸಿದ ಜೆಡಿಎಸ್ ನಾಯಕರಿಗೆ ಹಾಸನ ಕ್ಷೇತ್ರ ಟಫ್ ಆಗುವ ಲಕ್ಷಣಗಳು ಕಾಣುತ್ತಿವೆ. ಕಾರಣ? ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಬೆಂಬಲ ಕೊಡುವ ವಿಷಯದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಉತ್ಸಾಹ ತೋರಿಸುತ್ತಿಲ್ಲ. ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಸಕಲೇಶಪುರದ ಸಿಮೆಂಟ್ ಮಂಜು, ಅರಕಲಗೂಡಿನ ಯೋಗಾ ರಮೇಶ್ ಅವರಂಥ ನಾಯಕರು ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಆಸಕ್ತಿ ತೋರುತ್ತಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದ ಇತರ ಕ್ಷೇತ್ರಗಳ
ಅಸಮಾಧಾನಿತರನ್ನು ಸಮಾಧಾನಿಸಿದಂತೆ ಹಾಸನ ಜಿಲ್ಲೆಯ ಅಸಮಾಧಾನಿತರನ್ನೂ ಯಡಿಯೂರಪ್ಪ ಸಮಾಧಾನಿಸಿದ್ದಾರೆ.

ಇದೇ ರೀತಿ ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ದಂತೆ ಹಲವು ನಾಯಕರು ಬಂದು ಮೈತ್ರಿಧರ್ಮ ಪಾಲನೆ ಮಾಡಿದ್ದಾರೆ. ಆದರೆ ಅದೇನೇ ಮಾಡಿದರೂ ಕ್ಷೇತ್ರದ ಬಿಜೆಪಿ ನಾಯಕರಲ್ಲಿ ಪ್ರಜ್ವಲ್ ರೇವಣ್ಣ ಪರ ಹೋರಾಡುವ ಉಮೇದು ಕಾಣುತ್ತಿಲ್ಲ. ಬಿಜೆಪಿ ಪಾಳಯದ ನಿರುತ್ಸಾಹ ಹೀಗೆ ಕಣ್ಣಿಗೆ ಕಾಣುತ್ತಿದ್ದರೆ ಕಾಂಗ್ರೆಸ್ ಪಾಳಯದಲ್ಲಿ ಒಗ್ಗಟ್ಟಿನ ಮಂತ್ರ ಕೇಳಿಸುತ್ತಿದೆ. ಈ ಸಲ ಪಕ್ಷದ ಕ್ಯಾಂಡಿಡೇಟು ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬಹುದು.

ಇಲ್ಲದಿದ್ದರೆ ನಮ್ಮ ಅಜ್ಞಾತವಾಸ ಮುಂದುವರಿಯುವುದು ಗ್ಯಾರಂಟಿ ಎಂಬ ಮಾತು ಆವರಿಸುತ್ತಿದೆ. ಪರಿಣಾಮ? ಜೆಡಿಎಸ್-ಬಿಜೆಪಿ ಮೈತ್ರಿ ಶುರುವಾದಾಗ ಪ್ರಜ್ವಲ್ ರೇವಣ್ಣ ಗೆಲ್ಲುವುದು ಸುಲಭ ಅಂದುಕೊಂಡವರಿಗೆ ಫಲಿತಾಂಶ ಉಲ್ಟಾ ಅಗಬಹುದು ಎಂಬ ಶಂಕೆ ಕಾಡುತ್ತಿದೆ.