ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ
ಕಳೆದ ನಾಲ್ಕೆ ದು ತಿಂಗಳುಗಳಿಂದ, ಕಾಂಗ್ರೆಸ್ ಮುಖಂಡ ಬಿ.ಎಲ. ಶಂಕರ ಅವರು ಮಾಧ್ಯಮದ ಬಗ್ಗೆ ಹೇಳಿದ ವಿಡಿಯೋ ತುಣುಕು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ನೋಡಿರ ಬಹುದು, ಕೇಳಿರಬಹುದು. ಶಂಕರ ಎತ್ತಿದ ಪ್ರಶ್ನೆಗಳಿಗೆ ಕನ್ನಡದ ಮುಖ್ಯವಾಹಿನಿ ಸಂಪಾದಕರು, ಖ್ಯಾತನಾಮ ಪತ್ರಕರ್ತರು, ಪ್ರೆಸ್ ಕ್ಲಬ್ ಚಿಂತಕರು
ಉತ್ತರಿಸಬಹುದು ಎಂದು ಇಷ್ಟು ದಿನ ನಾನು ಕಾದೆ.
ಆದರೆ ಈ ಬಗ್ಗೆ ಯಾರೂ ಚಕಾರ ಎತ್ತಿದ್ದು ಕಾಣೆ. ನಾನು ಅದನ್ನು ಅಲ್ಲಿಗೆ ಮರೆತುಬಿಟ್ಟಿದ್ದೆ. ಆದರೆ ಕಳೆದ ಒಂದು ವಾರದಿಂದ
ಪುನಃ ಈ ವಿಡಿಯೋ ತುಣುಕು ಧುತ್ತೆಂದು ಪ್ರತ್ಯಕ್ಷವಾಗಿ ಹರಿದಾಡುತ್ತಿದೆ. ಆಗ ಮಾತಾಡದ ಪತ್ರಿಕೋದ್ಯಮದ stake holder ಗಳು ಈಗ ಮಾತಾಡಿಯಾರೇ? ಸಾಧ್ಯವೇ ಇಲ್ಲ. ಹೀಗಾಗಿ ಆ ವಿಷಯವನ್ನು ಪ್ರಸ್ತಾಪಿಸುವುದು ಮತ್ತು ಚರ್ಚಿಸುವುದು ಒಬ್ಬ ಅಂಕಣ ಕಾರನಾಗಿ ಮುಖ್ಯ ಎಂದು ನನಗೆ ಅನಿಸುತ್ತಿದೆ.
ಅಂದ ಹಾಗೆ ಶಂಕರ ಬಹುಮುಖ್ಯವಾದ ವಿಷಯವನ್ನು ಎತ್ತಿದ್ದಾರೆ. ನಾನು ಎಂದೂ ಶಂಕರ ಅವರನ್ನು ಭೇಟಿ ಮಾಡಿಲ್ಲ. ಕಳೆದ ಒಂದೂವರೆ ದಶಕದಿಂದ ಅವರನ್ನು ಸೂಕ್ಷ ವಾಗಿ ಗಮನಿಸುತ್ತಿದ್ದೇನೆ. ಟಿವಿ ಸ್ಟುಡಿಯೋಗಳಲ್ಲಿ ನಡೆಯುವ ತಲೆಬುಡವಿಲ್ಲದ ಚರ್ಚೆಗಳಲ್ಲಿ ಅವರ ಮಾತುಗಳನ್ನು ಕೇಳಿದ್ದೇನೆ. ಮೂಲತಃ ಅವರು ಕೂಗುಮಾರಿ ಅಥವಾ ಗಂಟಲ ಗೊಗ್ಗಯ್ಯ ಅಲ್ಲ. ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿಯೂ ತಮ್ಮ ವೈಯಕ್ತಿಕ ನಿಲುವನ್ನು ಪ್ರತಿಪಾದಿಸುವ ಧೀಮಂತಿಕೆ ಇರುವ ಅಪರೂಪದ ರಾಜಕಾರಣಿ. ಅವರು ನಾಜೂಕಯ್ಯನಂತೆ ಮಾತಾಡಿದ್ದನ್ನು ನಾನು ಕೇಳಿಲ್ಲ. ಅವರ ಮಾತುಗಳಲ್ಲಿ ಮೂರು ‘ವಿ’ಕಾರಗಳಿರುವುದನ್ನು ಗಮನಿಸಿದ್ದೇನೆ.
ಅವು ಯಾವುವೆಂದರೆ – ವಿಷಯ, ವಿವೇಕ ಮತ್ತು ವಿನಯ. ಹೀಗಾಗಿ ಟಿವಿ ಚರ್ಚೆಗಳಲ್ಲಿ ಅವರು ಭಿನ್ನವಾಗಿ ಕಾಣುತ್ತಾರೆ. ಈ ಕಾರಣಗಳಿಂದ ನಾನು ಅವರ ಬಗ್ಗೆ ಒಂದು ಮುಷ್ಠಿ ಜಾಸ್ತಿ ಅಭಿಮಾನ ಹೊಂದಿದ್ದೇನೆ. ಶಂಕರ ಈ ಜಮಾನಕ್ಕೆ ಹೊಂದುವ ರಾಜಕಾರಣಿ ಅಲ್ಲ. ಅದನ್ನು ಅವರ ಸಾಧನೆಯೇ ಸಾಬೀತು ಮಾಡಿದೆ. ಅವರಿಗೆ ಇತ್ತೀಚಿನ ದಿನಗಳಲ್ಲಿ ನೇರ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಾಗದೇ, electoral politics ನಲ್ಲಿ ಅಪ್ರಸ್ತುತರಾಗಿದ್ದಾರೆ. ಇನ್ನು ಚುನಾವಣೆ ಸೆಣಸುವ ಜರ್ಬು ಅವರಲ್ಲಿ ಇದ್ದಂತಿಲ್ಲ.
ತಾವೊಬ್ಬ ‘ರಾಜಕೀಯ ಸಂತ’ರಾಗುತ್ತಿರುವುದನ್ನು ಅವರ ಮಾತುಗಳನ್ನು ಕೇಳಿದ ಯಾರಿಗಾದರೂ ಅನಿಸುತ್ತದೆ. ಹೆಂಗಸೊಬ್ಬಳು ತನ್ನ ಆಟಕ್ಕಿಂತ ಮಿಗಿಲಾದ ಆದರ್ಶಗಳ ಬಗ್ಗೆ ಮಾತಾಡಲಾರಂಭಿಸದರೆ, ಅವಳಿಗೆ ವಯಸ್ಸಾಯಿತು ಎಂಬುದನ್ನು ಪರೋಕ್ಷ ವಾಗಿ ಹೇಳಿದಂತೆ. ಶಂಕರ ಕೂಡ ಹಾಗೆ ಆಗಿದ್ದಾರೆ ಎಂದು ಭಾವಿಸಲು ಅವರೇ ಸಾಕಷ್ಟು ಸಾಮಗ್ರಿಗಳನ್ನು ಒದಗಿಸಿದ್ದಾರೆ.
ಹಾಗೆ ನೋಡಿದರೆ, ಅಂದು ಅವರು ಮೇಲ್ಮನೆಯ ಸಭಾಪತಿಯಾಗಿ ಇಳಿದಾಗಲೇ ಅವರ ಸಕ್ರಿಯ ರಾಜಕಾರಣದ ಅಗರಬತ್ತಿ ಬೂದಿಯಾಗಿ ಹೋಗಿತ್ತು. ಇಷ್ಟು ವರ್ಷಗಳವರೆಗೆ, ಜಾಣತನ ಮತ್ತು ಸಾಚಾತನದಿಂದ ವೃದ್ಧಾಪ್ಯದಂಚಿನಲ್ಲಿರುವ ತಮ್ಮ ಯೌವನವನ್ನು ಅವರು ಜತನದಿಂದ ಕಾಪಾಡಿಕೊಂಡು ಬಂದರು. ಆದರೆ ಈಗ ತಾವು ಇಂದಿನ ರಾಜಕಾರಣಕ್ಕೆ ಲಾಯಕ್ಕಲ್ಲ ಎಂಬುದು ಅವರಿಗೆ ತಡವಾಗಿ ಜ್ಞಾನೋದಯವಾಗಿದೆ.
ಡಿಕೆಶಿ ಅಧ್ಯಕ್ಷರಾಗಿರುವ ಕೆಪಿಸಿಸಿ ಮನೆಯೊಳಗೇ ಅವರು ಇನ್ನೂ ಹೇಗೆ ಗರತಿಯಂತೆ ಇzರೋ ಕನಕಪುರದ ಸನಿಹದ ಬೆಟ್ಟದಲ್ಲಿ ರುವ ಆ ಏಸುವೇ ಬಲ್ಲ! ಇರಲಿ ಅದು ಅವರ ರಾಜಕೀಯ ಅನಿವಾರ್ಯತೆ ಇರಬಹುದು. ಈಗ ಅವರು ಮಾಡುತ್ತಿರುವ ‘ಘನ
ಕಾರ್ಯ’ಗಳಿಗೆ ಹೆಚ್ಚೆಂದರೆ ಮುಂದೊಂದು ದಿನ ಅವರು ಮೇಲ್ಮನೆಯೊಳಗೆ ಮತ್ತೊಮ್ಮೆ ತೂರಿಕೊಳ್ಳಬಹುದಷ್ಟೆ. ಅದೇನೇ ಇರಲಿ, ಇಂದಿಗೂ ಶಂಕರ ಅವರನ್ನು ಒಬ್ಬ ಸಜ್ಜನ ರಾಜಕಾರಣಿ ಎಂದೇ ಎಲ್ಲರೂ ಗುರುತಿಸುತ್ತಾರೆ, ಗೌರವಿಸುತ್ತಾರೆ. ಅದೇ ಅವರ ದೊಡ್ಡ ಸಾಧನೆ ಎಂದು ನನಗನಿಸಿದೆ. ಕೈಯಗದ, ಅಸಹಾಯಕ ನಾಯಕರಿಗೂ ‘ಸಜ್ಜನ ರಾಜಕಾರಣಿ’ ಎಂದು ಹೇಳುವುದನ್ನು
ಕೇಳಿರಬಹುದು. ಆದರೆ ಶಂಕರ ಈ ವರ್ಗಕ್ಕೆ ಆಗಾಗ ಕದ ತಟ್ಟಿ ಹೋಗುತ್ತಿರುವುದೇನು ಸುಳ್ಳಲ್ಲ. ಅದೇನೇನಿರಲಿ, ಶಂಕರ ಬಗ್ಗೆ ನನಗೆ ವೈಯಕ್ತಿಕ ಅಭಿಮಾನವಿದೆ.
ಇಂಥ ಶಂಕರ, ಪತ್ರಿಕಾ ವೃತ್ತಿ ಎಲ್ಲಾ ವೃತ್ತಿಗಳಂತೆ ಉದ್ಯಮವಾಗುತ್ತಿದೆ ಎಂದಾಗ ಗಂಭೀರವಾಗಿ ಕೇಳಿಸಿಕೊಂಡೆ. ಅಷ್ಟಕ್ಕೂ ಶಂಕರ ಹೇಳಿದ್ದೇನು? ಕೇಳಿಸಿಕೊಳ್ಳಬೇಕು – ‘ರಾಜಕಾರಣ ಹೇಗೆ ಉದ್ಯಮವಾಗಿದೆಯೋ, ಧರ್ಮ ಹೇಗೆ ಉದ್ಯಮವಾಗಿದೆಯೋ, ಪತ್ರಿಕೋದ್ಯಮವೂ ಇಂದು ಉದ್ಯಮವಾಗಿದೆ. ಪತ್ರಿಕೆಯವರು ಪ್ರಸಾರವನ್ನು ನೋಡುತ್ತಾರೆ, ಟಿವಿಯವರು ಟಿಆರ್‌ಪಿ ನೋಡುತ್ತಾರೆ. ಇವುಗಳ ಆಧಾರದ ಮೇಲೆಯೇ ಪತ್ರಿಕೋದ್ಯಮ ನಡೆಯೋದು. ಇಂದು ಪತ್ರಿಕೆ ಮತ್ತು ಟಿವಿ ಚಾನೆಲ್
ನೋಡದೇ, ಅವು ಯಾವ ಪಕ್ಷದ ಪರ ಎಂದು ಹೇಳಿಬಿಡಬಹುದು. ಯಾರೂ ನಿಷ್ಪಕ್ಷಪಾತವಾಗಿ ವರದಿ ಮಾಡುವುದಿಲ್ಲ. ಅದರ ಬದಲು ಬಿಬಿಸಿ, ಸಿಎನ್‌ಎನ್, ಫಾಕ್ಸ್ ನ್ಯೂಸ್ ವಾಸಿ.
ಅಲ್ -ಜಜೀರಾ ಯಾರಿಗೆ ಸೇರಿದ್ದಾಗಿರಲಿ, ಅದೇ ಎಷ್ಟೋ ವಾಸಿ. ನಮ್ಮ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್ಲುಗಳು ಹೀಗಿಲ್ಲ. ನಾನು ಪತ್ರಿಕೆ ಓದಲು ಆರಂಭಿಸಿದಂದಿನಿಂದ ಇಲ್ಲಿ ತನಕ, ಎರಡು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿಲ್ಲ. ಒಂದು, ‘ದಿ
ಹಿಂದು’ ಮತ್ತು ಇನ್ನೊಂದು, ‘ಇಂಡಿಯನ್ ಎಕ್ಸ್ ಪ್ರೆಸ್’ . ಇವೆರಡೂ ನಮ್ಮ ಪಾರ್ಟಿಯನ್ನು ಬೈಯುತ್ತವೆ. ಆದರೂ ನಾನು ಇವನ್ನು ಓದುವುದನ್ನು ನಿಲ್ಲಿಸಿಲ್ಲ. ಅದೇ ರೀತಿ ‘ಪ್ರಜಾವಾಣಿ’ಯನ್ನು ಓದುವುದನ್ನು ನಿಲ್ಲಿಸಿಲ್ಲ, ನಿಲ್ಲಿಸುವುದೂ ಇಲ್ಲ. ಕಾರಣ ಈ ಪತ್ರಿಕೆ ಇನ್ನೂ ಕೆಲವು ಮೌಲ್ಯಗಳನ್ನು ಉಳಿಸಿಕೊಂಡಿದೆ.
ಉಳಿದವು ಇಲ್ಲ ಅಂತಿಲ್ಲ. ಬೇಕಾದಷ್ಟಿವೆ. ಮಣಿಪಾಲ ಗ್ರುಪ್ ನ ಉದಯವಾಣಿ ಬಹಳ ವರ್ಷಗಳವರೆಗೆ safe play ಮಾಡುತ್ತಿತ್ತು. ಎಡಿಟೋರಿಯಲ್ಲನ್ನೇ ಬರೆಯುತ್ತಿರಲಿಲ್ಲ. ಯಾಕೆ ರಗಳೆ? ಒಂದು ನಿಲುವನ್ನು ತಗೊಂಡು ಯಾಕೆ ನಿಷ್ಠುರವಾಗ ಬೇಕು? ಎಲ್ಲರ ಜತೆಯೂ ಚೆನ್ನಾಗಿರೋಣ ಎಂಬ ಧೋರಣೆ ಅನುಸರಿಸಿತ್ತು. ಯಾರು ತೀರಿಕೊಂಡರು, ಯಾರ ಮದುವೆ ಆಯಿತು, ಯಾರು ವಿದೇಶಕ್ಕೆ ಹೋದರು, ಇವನ್ನೇ ಪ್ರಿಂಟ್ ಮಾಡಿ ಸರ್ಕ್ಯುಲೇಷನ್ ಹೆಚ್ಚಿಸಿಕೊಳ್ಳುತ್ತಿತ್ತು.
ಈಗ ಅಂಥ ಉದಯವಾಣಿಯೂ ಬದಲಾಗಿದೆ. ಅವರೂ ಎಡಿಟೋರಿಯಲ್ ಬರೆಯುತ್ತಾರೆ. ಟಿವಿ ಚರ್ಚೆಗಳು ಹೇಗೆ ನಡೆಯುತ್ತವೆ ಗೊತ್ತಿದೆ. ಅಲ್ಲಿ ಕಿರುಚಾಡಬೇಕು, ಜಗಳವಾಡಬೇಕು. ಈಗ ಟಿವಿ ಚಾನೆಲ್ಲುಗಳಲ್ಲಿ ಚರ್ಚೆಯೇ ಇಲ್ಲವಾಗಿದೆ. ನಾನು ಟಿಎಸ್ಸಾರ್
ಅವರನ್ನು ಓದಿಕೊಂಡು ಬೆಳೆದವನು. ಲಂಕೇಶ ಪತ್ರಿಕೆ ಹೇಗೆ ಜನಪ್ರಿಯವಾಯಿತು? ಲಂಕೇಶ್ ಏನು ಬರೀತಾರೆ ಎಂದು ಜನ ಕಾಯ್ತಾ ಇದ್ದರು. ರವಿ ಬೆಳಗೆರೆ ‘ಹಾಯ್ ಬೆಂಗಳೂರು’ ಆರಂಭಿಸಿದಾಗ, ಪ್ರಸಾರ ಲಕ್ಷ ದಾಟಿತು. ಯಾಕೆ? ರವಿ ಏನು ಬರೆದಿದ್ದಾರೆ ನೋಡೋಣ ಎಂದು ಅನಿಸುತ್ತಿತ್ತು. ತೇಜಸ್ವಿ ಏನು ಬರೆದಿದ್ದಾರೆ ನೋಡೋಣ ಎಂದು ಅನಿಸುತ್ತಿತ್ತು.
ಟಿಎಸ್ಸಾರ್ ‘ಛೂಬಾಣ’ ಅಂತ ಬರೆಯುತ್ತಿದ್ದರು. ಅದನ್ನು ಓದುವುದಕ್ಕಾಗಿ ಜನ ಕಾಯುತ್ತಿದ್ದರು. ಅದೊಂಥರಾ ವಿಡಂಬನಾತ್ಮಕ ಅಂಕಣ. ಖಾದ್ರಿ ಶಾಮಣ್ಣ ಏನು ಬರೀತಾರೆ ಅಂತ ಕಾಯ್ತಾ ಇದ್ದರು. ಶಾಮರಾಯರು ಏನು ಬರೆಯುತ್ತಾರೆ ಅಂತ ಜನ ಕಾಯ್ತಾ ಇದ್ದರು. ವೈಎನ್ಕೆ ಬರಹಕ್ಕಾಗಿ ಕಾಯ್ತಾ ಇದ್ದರು. ಇಂದು ಯಾರಿಗಾಗಿ ಕಾಯೋದು? ಇಂದು ಪತ್ರಿಕೆ ಓದಬೇಕು ಅಂತ ಅನಿಸುವು ದಿಲ್ಲ. ವಾರಗಟ್ಟಲೆ ಪತ್ರಿಕೆ ಓದದಿದ್ದರೂ ನಡೆಯುತ್ತದೆ. ಬಹಳ ಜನ ಕರೋನಾ ಬಂದ ನಂತರ ಪತ್ರಿಕೆ ಓದುವುದನ್ನೇ ಬಿಟ್ಟಿದ್ದಾರೆ, ಹೆದರಿ. ಅದರಿಂದ ವ್ಯತ್ಯಾಸ ಆಗಿಲ್ಲ. ಆಗುವುದೂ ಇಲ್ಲ. ಕಾರಣ ಇಂದು ಅದು ಉದ್ಯಮವಾಗಿದೆ, ವ್ಯಾಪಾರವಾಗಿದೆ.
ರಾಜಕಾರಣದಂತೆ, ಧರ್ಮದಂತೆ ಪತ್ರಿಕೋದ್ಯಮವೂ ಉದ್ಯಮವಾಗಿದೆ.’ ಇದು ಶಂಕರ ಅಂಬೋಣ. ಅಂದು ಅವರು ಮತ್ತೇನು
ಮಾತಾಡಿದರೋ ಗೊತ್ತಿಲ್ಲ. ಆ ವಿಡಿಯೋ ತುಣುಕಿನಲ್ಲಿರುವುದು ಅಷ್ಟು. ಮೇಲ್ನೋಟಕ್ಕೆ ಶಂಕರ ಹೇಳಿರುವುದು ಸರಿಯಾಗಿಯೇ ಇದೆ ಎನಿಸುತ್ತದೆ. ಈ ಕಾರಣಕ್ಕಾಗಿ ಅದು ವೈರಲ್ ಆಗಿರಲಿಕ್ಕೂ ಸಾಕು. ಆದರೆ ನನಗೆ ಅನಿಸಿದ್ದೇನೆಂದರೆ, ಪತ್ರಿಕೆ ಓದುವುದನ್ನೇ, ಶಂಕರ ಅವರು ಪತ್ರಿಕೋದ್ಯಮ ಎಂದು ಭಾವಿಸಿzರೆ ಎಂದು.
ಶಂಕರಗೆ ಗೊತ್ತಿಲ್ಲದ ಅನೇಕ ಸಂಗತಿಗಳಿವೆ. ಅದನ್ನು ಅವರು ಇನ್ನಾದರೂ ತಲೆಗೆ ಹಾಕಿಕೊಳ್ಳಬೇಕು. ಪತ್ರಿಕಾ ವೃತ್ತಿ ಎಂದೋ ಉದ್ಯಮವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೂ ಅದು ಉದ್ಯಮವಾಗಿತ್ತು. ಆಗ ಪತ್ರಿಕೆ ನಾಲ್ಕಾಣೆ, ಎಂಟಾಣೆಗೆ ಸಿಗುತ್ತಿತ್ತು. ಆಗಲೂ ಪತ್ರಿಕೆಗಳಿಗೆ ಜಾಹೀರಾತೇ ಜೀವಾಳವಾಗಿತ್ತು. ಯಾವ ಪತ್ರಕರ್ತನೂ ಪುಗಸಟ್ಟೆ ಕೆಲಸ ಮಾಡುತ್ತಿರಲಿಲ್ಲ.
ಸರಕಾರೀ ಜಾಹೀರಾತು ನೀಡದ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ವಿರುದ್ಧ ಇದೇ ಟಿಯೆಸ್ಸಾರ್, ಖಾದ್ರಿ ಶಾಮಣ್ಣ ಮುಖಪುಟದಲ್ಲಿ ಸಂಪಾದಕೀಯ ಬರೆದು ಪ್ರತಿಭಟಿಸಿದ್ದರು. ಹೆಂಡದ ವ್ಯಾಪಾರವನ್ನೇ ಮುಖ್ಯ ಕಸುಬನ್ನಾಗಿ ಮಾಡಿ ಕೊಂಡಿದ್ದ ‘ಪ್ರಜಾವಾಣಿ’ಯ ಮಾಲೀಕರು, ಅವರದೇ ಪತ್ರಿಕೆಯ ಸಂಪಾದಕರಾಗಿದ್ದ ಟಿಯೆಸ್ಸಾರ್ ಅವರನ್ನು ಹೇಗೆ ನಡೆಸಿ ಕೊಂಡಿದ್ದರು ಎಂಬುದನ್ನು ‘ಕಿಡಿ’ ಪತ್ರಿಕೆಯ ಹಳೆ ಸಂಚಿಕೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಟಿಯೆಸ್ಸಾರ್ ತಮ್ಮ ಧಣಿಗಳ ಹಿತಾಸಕ್ತಿಯನ್ನು ಕಾಪಾಡಲು ಎಷ್ಟು ಹೆಣಗುತ್ತಿದ್ದರು ಎಂಬುದು ಗೊತ್ತಿಲ್ಲದ ವಿಷಯವೇನಲ್ಲ.
ಶಂಕರ ಅವರೇ ಬಹುವಾಗಿ ಮೆಚ್ಚಿದ ‘ಛೂಬಾಣ’ ಅಂಕಣದಲ್ಲಿ, ಹೆಂಡದ ದೊರೆಗಳ ವಿರುದ್ಧ ಕ್ರಮ ಕೈಗೊಂಡ ಮಂತ್ರಿಗಳನ್ನು, ಸರಕಾರಗಳನ್ನು ಟಿಯೆಸ್ಸಾರ್ ಎಷ್ಟು ಕೆಟ್ಟದಾಗಿ ಲೇವಡಿ ಮಾಡುತ್ತಿದ್ದರು ಎಂಬುದನ್ನು ‘ಪ್ರಜಾವಾಣಿ’ ಹಳೆ ಸಂಚಿಕೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಇನ್ನೊಂದು ಸಂಗತಿ ಶಂಕರಗೆ ಗೊತ್ತಿರಲಿ. ಅದೇನೆಂದರೆ, ಖಾದ್ರಿ ಶಾಮಣ್ಣವರು ಮೊದಲು
ರಾಜಕಾರಣಿಯಾಗಿದ್ದರು ಮತ್ತು ನಂತರ ಪತ್ರಕರ್ತರಾಗಿದ್ದರು. ಅವರು ಪತ್ರಿಕೋದ್ಯಮಕ್ಕೆ ಬರುವ ಮುನ್ನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ನಂತರ ‘ಕನ್ನಡ ಪ್ರಭ’ ಸಂಪಾದಕರಾಗಿದ್ದಾಗಲೇ ಮೇಲ್ಮನೆಯ ಸದಸ್ಯರೂ ಆಗಿದ್ದರು.
ಇರಲಿ, ವಿಷಯಾಂತರವಾಯಿತು.
ಟಿಯೆಸ್ಸಾರ್ ಸಂಪಾದಕರಾಗಿದ್ದ ಏರುಕಾಲದಲ್ಲಿ ‘ಪ್ರಜಾವಾಣಿ’ ಪ್ರಸಾರ ಕೇವಲ ಎಂಬತ್ತು ಸಾವಿರವಿತ್ತು. ಒಂದೇ ಒಂದು
ಆವೃತ್ತಿಯಿತ್ತು. ಟಿಯೆಸ್ಸಾರ್ ನಿಧನರಾಗುವಾಗ ಅವರ ಸಂಬಳ ಎರಡು ಸಾವಿರವಿತ್ತು. ಅದಾಗಿ ಎಷ್ಟೋ ವರ್ಷಗಳ ನಂತರ, ವೈಎನ್ಕೆ ಪ್ರಜಾವಾಣಿಯಲ್ಲಿ ಮೂವತ್ತೈದು ವರ್ಷ ದುಡಿದು, ಸಂಪಾದಕರಾಗಿ 1988ರಲ್ಲಿ ನಿವೃತ್ತರಾದಾಗ ಅವರ ಸಂಬಳ ಐದೂವರೆ ಸಾವಿರವಿತ್ತು. ಅಲ್ಲಿಂದ ಇಂದಿನ ತನಕ ಕನ್ನಡ ಸುದ್ದಿಮನೆಗಳಲ್ಲಿ ಅವೆಷ್ಟೋ ರೀಲು ಕಾಗದಗಳು ಹರಿದು ಹೋಗಿವೆ. ಈಗ ಪತ್ರಕರ್ತನೊಬ್ಬ ಸುದ್ದಿಮನೆ ಯೊಳಗೆ ಕಾಲಿಟ್ಟರೆ, ಕನಿಷ್ಠ ಹದಿನೈದು ಸಾವಿರ ರುಪಾಯಿ ಪಡೆಯುತ್ತಾನೆ.
ಎಲ್ಲಾ ಪತ್ರಿಕೆಗಳೂ ಐದಕ್ಕಿಂತ ಹೆಚ್ಚು ಆವೃತ್ತಿಗಳನ್ನು ಹೊಂದಿವೆ. ಎಲ್ಲಾ ಪತ್ರಿಕೆಗಳ ಪ್ರಸಾರ ಸೇರಿಸಿದರೆ ಇಪ್ಪತ್ತು ಲಕ್ಷವಾಗು ತ್ತವೆ. ಟಿಯೆಸ್ಸಾರ್ ಮತ್ತು ಖಾದ್ರಿ ಕಾಲದಲ್ಲಿ ಇದ್ದ ಕನ್ನಡ ಪತ್ರಿಕೆಗಳಿಗೂ, ಈಗಿನ ಪತ್ರಿಕೆಗಳಿಗೂ ಹೋಲಿಕೆಯೇ ಸಾಧ್ಯವಿಲ್ಲ. ಲಕ್ಷ ರುಪಾಯಿ ಸಂಬಳ ಪಡೆಯುವ ಕನಿಷ್ಠ ಐವತ್ತು ಪತ್ರಕರ್ತರು ಕನ್ನಡ ಪತ್ರಿಕೋದ್ಯಮದಲ್ಲಿದ್ದಾರೆ. ಎಲ್ಲಾ ಪತ್ರಿಕೆಗಳೂ ಆಧುನಿಕ ವಾಗಿವೆ.
ಟಿಯೆಸ್ಸಾರ್ ಮತ್ತು ಖಾದ್ರಿಯವರ ಕಾಲದಲ್ಲಿ ಪತ್ರಿಕೆಯ ಮುಖಬೆಲೆ ಎರಡು ರುಪಾಯಿ ಇತ್ತು. ಅರ್ಧ ಶತಮಾನ ದಾಟಿದ ನಂತರ ಈಗ ಪತ್ರಿಕೆ ಮುಖಬೆಲೆ ಐದು ರುಪಾಯಿ! ಉಳಿದೆಲ್ಲವುಗಳ ಬೆಲೆ ನೂರು ಪಟ್ಟು ಜಾಸ್ತಿಯಾಗಿದ್ದರೂ, ಪತ್ರಿಕೆ ಬೆಲೆ ಮೂರು ಪಟ್ಟು ಜಾಸ್ತಿಯಾಗಿಲ್ಲ. ಜಾಹೀರಾತೇ ಪತ್ರಿಕೆಯ ಬಂಡವಾಳ. ಟಿಆರ್‌ಪಿಯೇ ಟಿವಿ ಚಾನೆಲ್ಲುಗಳ ಬಂಡವಾಳ. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಮಾತಾಡುವ ಶಂಕರ, ಒಂದು ದಿನವಾದರೂ ಈ ಬಗ್ಗೆ ಪ್ರಶ್ನೆ ಮಾಡಿದ್ದಾರಾ? ತಾವು ದಿನಾ ಓದುವ ಪತ್ರಿಕೆ ಯನ್ನು ಐದು ರುಪಾಯಿಗೆ ಮನೆ ತನಕ ತಂದು ಕೊಡುವುದು ಹೇಗೆ ಸಾಧ್ಯ ಎಂದು ಕೇಳಿಕೊಂಡಿಲ್ಲಾರಾ? ಕಮಿಷನ್ ಹೋಗಿ ಪತ್ರಿಕೆಯ ಮಾಲೀಕನಿಗೆ ಸಿಗುವುದು ಮೂರೇ ರುಪಾಯಿ ಎಂಬುದು ಅವರಿಗೆ ಗೊತ್ತಿಲ್ಲವಾ? ಹಾಗಾದರೆ ಇಷ್ಟೆ ಸಂಬಳ
ಕೊಟ್ಟು, ಸಾರಿಗೆಗೆ ಖರ್ಚು ಮಾಡಿ, ಆಫೀಸು ನಡೆಸುವುದು ಅಷ್ಟು ಸುಲಭವಾ? ಅದೇನು ಪತ್ರಿಕೆ ನಡೆಸುವುದೆಂದರೆ
ತೋಟದಪ್ಪನ ಛತ್ರ ನಡೆಸಿದಂತೆ ಎಂದು ಅವರು ಭಾವಿಸಿದ್ದಾರಾ? ಈಗಲೂ ಹೇಳುತ್ತೇನೆ, ಪತ್ರಿಕಾ ವೃತ್ತಿ ಎಂಬುದು ಒಂದು
ಉದ್ಯಮವೇ.
ಇನ್ನೊಮ್ಮೆ ಹೇಳುತ್ತೇನೆ ಕೇಳಿ, ಪತ್ರಿಕಾ ವೃತ್ತಿ ಎಂಬುದು ಒಂದು ಉದ್ಯಮವೇ. ಅನುಮಾನವೇ ಬೇಡ. ಜಗತ್ತಿನ ಎಲ್ಲಾ ದೇಶ ಗಳಲ್ಲೂ ಆಗಲೂ ಉದ್ಯಮವಾಗಿತ್ತು, ಈಗಲೂ ಉದ್ಯಮವೇ. ಪತ್ರಿಕೋದ್ಯಮ ಎಂದೂ ತೋಟದಪ್ಪನ ಛತ್ರ ಆಗಿರಲಿಲ್ಲ. ಎಲ್ಲಿ ಲಾಭ – ನಷ್ಟದ ಲೆಕ್ಕಾಚಾರವಿರುವುದೋ ಅದು ಉದ್ಯಮವೇ. ಉದ್ಯಮವಾದರೆ ಮಾತ್ರ ಒಂದು ಶಿಸ್ತು ಇರುತ್ತದೆ. ಉತ್ತರದಾಯಿ ಗಳಿರುತ್ತಾರೆ. ಹೇಳುವವರು – ಕೇಳುವವರು ಇರುತ್ತಾರೆ. ಹೊಣೆಗಾರಿಕೆಯಿರುತ್ತದೆ. ಒಂದು ಸಂಸ್ಥೆಯಾಗಿ ಹೇಗೆ ನಡೆಯಬೇಕೋ ಹಾಗೆ ನಡೆಯುತ್ತದೆ. ಬಂಡವಾಳ ಹಾಕುವವರು ತಮ್ಮ ಲಾಭವನ್ನು ನಿರೀಕ್ಷಿಸುವುದು ತಪ್ಪಾ? ಯಾರದ್ದೇ ಹಣ, ಯಾರದ್ದೇ ಅಧಿಕಾರ ಎನ್ನಲು ಅದೇನು ರಾಜಕೀಯ ಪಕ್ಷವಾ? ಒಂದು ಕ್ಷೇತ್ರ ಅಥವಾ ವೃತ್ತಿ ಉದ್ಯಮವಾಗುವುದು ತಪ್ಪು ಎಂದು ಭಾವಿಸು ವುದೇ ದೊಡ್ಡ ತಪ್ಪು.
ಜನರು, ಟ್ರಸ್ಟ್, ಸೊಸೈಟಿಗಳು ನಡೆಸುವ ಪತ್ರಿಕೆಗಳು ಸಹ ಲಾಭ – ನಷ್ಟದ ಲೆಕ್ಕಾಚಾರದ ನಡೆಯುತ್ತವೆ. ಅವೂ ಸಹ ಪತ್ರಿಕಾ
ವೃತ್ತಿಯನ್ನು ಉದ್ಯಮವೆಂದು ಭಾವಿಸಲೇಬೇಕು. ಎಲ್ಲವೂ ಉದ್ಯಮವಾಗಿರುವಾಗ ಪತ್ರಿಕೆಯನ್ನು ಮಾತ್ರ ಯಾಕೆ ಹೊರಗಿಡ ಬೇಕು? ಪತ್ರಿಕಾ ವೃತ್ತಿ ಉದ್ಯಮವಾಗಿರುವುದಕ್ಕೆ ಶಂಕರಗೆ ಹೆಮ್ಮೆಯಿರಬೇಕಾಗಿತ್ತು. ಇತರ ವೃತ್ತಿಗಳಂತೆ ಪತ್ರಿಕಾ ವೃತ್ತಿಯೂ ಉದ್ಯಮವಾಗಿದೆ. ತಪ್ಪಿಲ್ಲ. ಇಂದು ಮಹಾತ್ಮ ಗಾಂಧಿ ಟಿಕೆಟ್ ಕೇಳಿದರೆ ಅವರ ಪಕ್ಷ ಕೊಡುವುದಾ? ಇಲ್ಲ ತಾನೇ? ನಾವು ಪುನಃ ಮುಕ್ಕಾಲು ಶತಮಾನದ ಹಿಂದಕ್ಕೆ ಹೋಗಿ, ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ.
ಹೀಗಿರುವಾಗ ಅರ್ಥವಿಲ್ಲದ ಮಾತುಗಳನ್ನು ಹೇಳಿ ಮೌಲ್ಯಗಳ ಅಧಃಪತನವಾಗುತ್ತಿದೆ ಎಂಬ ಹಳಹಳಿಕೆ ಯಾಕೆ? ಇದರಿಂದ ಶಂಕರ ಯಾರ ಮುಂದೆ ತಮ್ಮನ್ನು ದೊಡ್ಡವರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ? ಕನ್ನಡ ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಉತ್ತಮ ಕೆಲಸಗಳು, ಬರಹಗಳು ಅವರ ಕಣ್ಣಿಗೆ ಕಾಣುತ್ತಿಲ್ಲವಾ? ಕನ್ನಡ ಪತ್ರಿಕೋದ್ಯಮ ಇಂಗ್ಲಿಷ್ ಪತ್ರಿಕೋದ್ಯಮ ಕ್ಕೆ ಸರಿಸಾಟಿಯಾಗಿ ಬೆಳೆದಿದೆ. ಟಿಯೆಸ್ಸಾರ್, ಖಾದ್ರಿ ಕಾಲದಲ್ಲಿರುವುದಕ್ಕಿಂತ ಬುದ್ಧಿವಂತ ಪತ್ರಕರ್ತರು, ವೃತ್ತಿನಿಷ್ಠರು ಬಂದಿದ್ದಾರೆ.
ಇಂದಿಗೂ ಅಕ್ಷರಗಳನ್ನೇ ನೆಚ್ಚಿಕೊಂಡಿರುವ ಅಸಂಖ್ಯ ಪತ್ರಕರ್ತರಿದ್ದಾರೆ. ಶಂಕರ ಅವರು ಆದರ್ಶವಾದಿಯ ಅರಮನೆಯಲ್ಲಿರುವ ಇರುವ ಬದಲು, ವಾಸ್ತವವಾದಿಯ ತಳಮನೆಯಲ್ಲಿದ್ದು ನೋಡಬೇಕು. ಕನ್ನಡದ ಪತ್ರಿಕೆಗಳು ಮತ್ತು ಟಿವಿ ಚಾನೆಲ್ಲುಗಳ ಸಂಕಟ ವೇನು ಎಂದು ಕೇಳಬೇಕು. ಈಗಾಗಲೇ ಬಾಗಿಲು ಹಾಕಿದ ಸುದ್ದಿಮನೆಗಳ ಭೀಕರ ಆರ್ತನಾದ ಕೇಳಬೇಕು. ಕೆಲಸ ಕಳೆದುಕೊಂಡ ಪತ್ರಕರ್ತರ ಹೆಗಲ ಮೇಲೆ ಕೈಯಿಟ್ಟು ಅವರ ನಿಟ್ಟುಸಿರನ್ನೊಮ್ಮೆ ಧೇನಿಸಬೇಕು. ಆಗ ಉದ್ಯಮದ ಕಟು ವಾಸ್ತವ ಅರ್ಥವಾಗು ತ್ತದೆ. ವಿಚಾರ ಸಂಕಿರಣದಲ್ಲಿ ಮನಸ್ಸಿಗೆ ಬಂದಂತೆ ಮಾತಾಡುವುದಿಲ್ಲ.
‘ಫಾಕ್ಸ್ ನ್ಯೂನ್ಸ್’ ಚಾನೆಲ್ ಬಗ್ಗೆ ಮೆಚ್ಚುಗೆಯ ಮಾತಾಡುವ ಶಂಕರಗೆ, ಅದು ಭಾರಿ ಉದ್ಯಮ ಕುಳ ರೂಪರ್ಟ್ ಮುರ್ಡೋಕನದು ಎಂಬುದು ಗೊತ್ತಿಲ್ಲವಾ? ಕನಿಷ್ಠ , ಶಂಕರ ಅವರಿಂದ ನಾನು ಇವನ್ನೆ ನಿರೀಕ್ಷೆ ಮಾಡಿರಲಿಲ್ಲ. ಟಿವಿ ಸ್ಟುಡಿಯೋದಲ್ಲಿ ತಮ್ಮ ಯೌವನದ ಮುಪ್ಪನ್ನು ಕಳೆದ ಶಂಕರ ಒಂದು ದಿನವಾದರೂ, ಚಾನೆಲ್ಲಿಗೆ ಹಣ ಸುರಿದ ಪುಣ್ಯಾತ್ಮನ ಬಳಿ ಕುಳಿತುಕೊಂಡು
ಸಮಾಧಾನದಿಂದ ಮಾತಾಡಿದ್ದರೆ, ಈ ರೀತಿ ಹುಡುಗಾಟಿಕೆಯ, ಉಡಾಫೆಯ ಮಾತನ್ನು ಹೇಳುತ್ತಿರಲಿಲ್ಲ.
ಆರ್‌ಪಿ ಬಗ್ಗೆ ಕನಿಷ್ಠವಾಗಿ ಮಾತಾಡುತ್ತಿರಲಿಲ್ಲ. ‘ಟಿಆರ್ ಪಿಯೇ ತನ್ನ ಅನ್ನ’ ಎಂದು ನಂಬಿರುವ ಚಾನೆಲ್ ಮಾಲೀಕನ ಬಾಳೆ ಯಲ್ಲಿ ಕೂತು ಉಂಡಿದ್ದರೆ, ಶಂಕರ ಆ ಅಸಡ್ಡಾಳದ ಮಾತುಗಳನ್ನು ಹೇಳುತ್ತಿರಲಿಲ್ಲ. ಅವರು ತಮ್ಮ ಅಭಿಪ್ರಾಯ ಬದಲಿಸಿ ಕೊಳ್ಳಲಿ.