ಯುಕ್ತಾಯುಕ್ತ
ಕೆ.ಲೀಲಾವತಿ
ಎಲ್ಲ ಶಂಕರಾಚಾರ್ಯರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ಹಿಂದೂ ಧರ್ಮದ ಪ್ರಮುಖ ಮಠಗಳಾದ ನಾಲ್ಕೂ ಶಂಕರಾಚಾರ್ಯ ಪೀಠಗಳು ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿವೆ! ಎನ್ನುವ ಸುದ್ದಿಯನ್ನು ಟಿವಿಯಲ್ಲಿ ನೋಡಿ ನನಗೆ ಆಘಾತವಾಯಿತು.
ಅದರಲ್ಲಿ ಎರಡು ಪೀಠಗಳ ಹೇಳಿಕೆಗಳನ್ನು ಮಾತ್ರ ತೋರಿಸಲಾಯಿತು. ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯರು ಸ್ಕಂದ ಪುರಾಣದ ಪ್ರಕಾರ
ರಾಮಲನ ಪ್ರಾಣ ಪ್ರತಿಷ್ಠೆ ಆಗುತ್ತಿಲ್ಲವೆಂದೂ, ಮೋದಿ ರಾಮಲನ ಮೂರ್ತಿ ಮುಟ್ಟುತ್ತಾರೆಂದೂ ಹೇಳಿರುತ್ತೀರಿ. ನೀವು ಹೀಗೆ ಹೇಳಿದ ನಂತರ ಶ್ರೀ ಜಯಚಾಮರಾಜೇಂದ್ರ ಗ್ರಂಥ ಮಾಲೆಯ ಸರಣಿಯಲ್ಲಿ ಪ್ರಕಟವಾಗಿರುವ ಸ್ಕಂದ ಪುರಾಣದ ೩೦ ಸಂಪುಟಗಳನ್ನೂ ತಿರುವಿ ಹಾಕಿದೆ. ಅದರ ಒಂದೊಂದೇ ಸಂಪುಟದ ವಿಷಯಾನುಕ್ರಮಣಿಕೆಗಳನ್ನು ನೋಡಿದಾಗ ಸಂಪುಟ-೯, ಹತ್ತನೇ ಅಧ್ಯಾಯದ ಪುಟ ಸಂಖ್ಯೆ ೧೫೭-೧೮೦ರಲ್ಲಿ ಅಯೋಧ್ಯೆಯ
ವರ್ಣನೆ ಸಿಕ್ಕಿತು.
ಅದರಲ್ಲಿ ಅಯೋಧ್ಯೆಯಲ್ಲಿರುವ ಯಾವ್ಯಾವ ದೇವರುಗಳನ್ನು ಯಾವ್ಯಾವಾಗ ದರ್ಶನ ಮಾಡಬೇಕು, ಯಾವ್ಯಾವ ತೀರ್ಥಗಳಲ್ಲಿ ಸ್ನಾನ ಮಾಡಬೇಕು, ಸರಯೂ ನದಿಯನ್ನು ಯಾವಾಗ ದರ್ಶಿಸಬೇಕು ಎಂಬೆಲ್ಲ ವರ್ಣನೆ ಇದೆ. ಆದರೆ, ಎಲ್ಲಿಯೂ ಶ್ರೀರಾಮ ಮಂದಿರದ ಬಗ್ಗೆಯಾಗಲೀ, ಅದು ಹೇಗಿರ ಬೇಕೆಂದಾಗಲೀ ಅದರಲ್ಲಿ ಹೇಳಿಲ್ಲ. ಅಯೋಧ್ಯಾ ಪರಮಂ ಸ್ಥಾನಂ ವಿಷ್ಣು ಚಕ್ರೇ ಪ್ರತಿಷ್ಠಿತಂ|| ಶ್ಲೋಕ-೭೨|| ಅಂದರೆ ವಿಷ್ಣುಚಕ್ರದಲ್ಲಿ ಪ್ರತಿಷ್ಠಿತ ವಾಗಿರುವ ಅಯೋಧ್ಯೆಯು ಪರಮ(ಶ್ರೇಷ್ಠ) ಸ್ಥಾನ ಎಂದಿದೆ. ಪುರಿಯ ಶಂಕರಾಚಾರ್ಯರು ಹೇಳಿದಂತೆ ರಾಮಲನ ಪ್ರಾಣ ಪ್ರತಿಷ್ಠೆಯ ಬಗ್ಗೆ ಎಲ್ಲಿಯೂ
ವಿವರಣೆಯಿಲ್ಲ.
ಇನ್ನು ಮೋದಿ ರಾಮಲನ ಮೂರ್ತಿಯನ್ನು ಮುಟ್ಟುತ್ತಾರೆಂದೂ, ದೇವಸ್ಥಾನದ ಗರ್ಭಗುಡಿಲ್ಲಿರುತ್ತಾರೆಂದೂ ಹೇಳಿರುತ್ತೀರಿ. ನೀವು ಇದನ್ನು ಯಾವ ಅರ್ಥದಲ್ಲಿ ಹೇಳಿದ್ದೀರೋ ತಿಳಿಯದು, ಅವರು ಬ್ರಾಹ್ಮಣೇತರ ಹಾಗೂ ಹಿಂದುಳಿದ ಜಾತಿಗೆ ಸೇರಿದವರೆಂದೇ? ಒಂದೊಮ್ಮೆ ಅದೇ ಆಗಿದ್ದರೆ, ಗೀತೆಯಲ್ಲಿ ಸಾಕ್ಷಾತ್ ಕೃಷ್ಣ ಭಗವಂತನೇ ಹೇಳಿದ ಸಾಲು ನೋಡಿ.
ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮ
ವಿಭಾಗಶಃ ||೪-೧೩||
ಇಲ್ಲಿ ನನಗೆ ಅರ್ಥವಾದಂತೆ ಹುಟ್ಟಿನಿಂದ ಯಾರೂ ಯಾವ ಜಾತಿಗೂ ಸೇರಿದವರಲ್ಲ. ಅವರ ಗುಣ ಮತ್ತು ಅವರ ಕರ್ಮಗಳೇ ಅವರು ಯಾವ
ವರ್ಣಕ್ಕೆ ಸೇರಿದವರೆಂದು ನಿರ್ಧರಿಸುತ್ತವೆ. ನೀವು ಈಗಿನ ಜಾತಿ ಪದ್ಧತಿಗೆ ಅನುಗುಣವಾಗಿ ಮಾತನಾಡಿದ್ದರೆ, ಕ್ಷಮಿಸಿ, ನಿಮಗೆ ಭಗವದ್ಗೀತೆ ಅರ್ಥವೇ
ಆಗಿಲ್ಲವೆಂದು ಭಾವಿಸುತ್ತೇನೆ. ಮೋದಿಯವರು ಪ್ರತಿಷ್ಠಾಪನೆಯ ಮುನ್ನಾ ದಿನಗಳಲ್ಲಿ ವ್ರತ ಉಪವಾಸಗಳನ್ನು ಮಾಡುತ್ತಾರೆಂದು (ಈಗಾಗಲೇ ಆರಂಭಿಸಿದ್ದಾರೆ) ಪತ್ರಿಕೆಯಲ್ಲಿ ಓದಿದ್ದೆ.
ಅಲ್ಲದೆ, ಕೃಷ್ಣ ಭಗವಂತನೇ ಹೇಳಿದಂತೆ ವರ್ಣ ವಿಭಾಗದ ಪ್ರಕಾರ ಹೇಳುವುದಾದರೆ ಮೋದಿ ಯಾವ ಬ್ರಾಹ್ಮಣನಿಗೂ ಕಡಿಮೆಯಿಲ್ಲ ಅಲ್ಲವೇ? ವರ್ಣ ವ್ಯವಸ್ಥೆಯನ್ನು ಈಗಿನ ಜಾತಿ ಮಟ್ಟಕ್ಕೆ ತಂದು ಹಿಂದೂ ಧರ್ಮಕ್ಕೆ ಅಪಚಾರ ಮಾಡುತ್ತೀರಾ? ಅದೇ ಗೀತೆಯಲ್ಲಿ
ಯಾಮಿಮಾಂ ಪುಷ್ಪಿತಾಂ ವಾಚಂ
ಪ್ರವದಂತ್ಯವಿಪಶ್ಚಿತಃ|
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ
ವಾದಿನಃ|| ೨-೪೨||
ಎಲೈ ಅರ್ಜುನನೇ! ಅವಿವೇಕಿಗಳು ವೇದಗಳಲ್ಲಿನ ಕರ್ಮಭಾಗವನ್ನೇ ಪ್ರಶಂಸೆ ಮಾಡುತ್ತ, ‘ಇದಕ್ಕಿಂತ ಹೆಚ್ಚಿನದೇನೂ ಇಲ್ಲ’ ಎಂದು ಹೂವಿನಂತಹ ಬಣ್ಣದ ಮಾತುಗಳನ್ನಾಡುವರು ಎಂದಿದೆ. ಪೂಜ್ಯರೇ, ನೀವು ಅದೇನೋ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಆಗುತ್ತಿಲ್ಲ ಎಂದಿದ್ದೀರಿ. ಆದರೆ, ರಾಮ ಮಂದಿರದ ಟ್ರಸ್ಟಿನಲ್ಲಿಯೂ ತಿಳಿದವರಿದ್ದಾರೆ ಅಲ್ಲವೇ? ಅವರೂ ಶಾಸ್ತ್ರ, ವಿಧಿ-ವಿಧಾನಗಳನ್ನು ಬಲ್ಲವರು; ಅಲ್ಲವೇ? ಹೀಗೆಲ್ಲ ಇದ್ದಾಗ್ಯೂ ನೀವು
ಸ್ಕಂದ ಪುರಾಣದಲ್ಲಿ ಇಲ್ಲದ ಉಲ್ಲೇಖ ಮಾಡಿ ಜನರಲ್ಲಿ ತಪ್ಪು ತಿಳಿವಳಿಕೆಯನ್ನುಂಟು ಮಾಡುವುದು ಸರಿಯೇ? ಈ ಮಂದಿರಕ್ಕಾಗಿ ಶತ ಶತಮಾನಗಳಿಂದ
ಹೋರಾಟ ಮಾಡಿ, ಸಾವಿರಾರು ಜನರು ಪ್ರಾಣತ್ಯಾಗ ಮಾಡಿದ್ದಾರೆ.
ಮಂದಿರದ ಸಂಭ್ರಮಾಚರಣೆಯಲ್ಲಿರುವ ನಮ್ಮ ಬಗೆಗೆ ನಿಮಗೊಂದಿಷ್ಟು, ಕರುಣೆ, ಕಕ್ಕುಲಾತಿ ಬೇಡವೇ? ನ ಬುದ್ಧಿಭೇದಂ ಜನಯೇದಜ್ಞೆನ ಕರ್ಮ
ಸಂಗಿನಾಮ| ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್||೩-೨೬|| ಮತ್ತದೇ ಗೀತೆಯ ಮಾತು.
ಒಂದು ಪಕ್ಷ ಭಗವಂತನ ಪ್ರಾಣ ಪ್ರತಿಷ್ಠಾಪನೆ ನಿಮ್ಮ ಪ್ರಕಾರ ಸರಿಹೋಗದೇ ಇದ್ದರೂ ಆ ಚಿನ್ಮಯ ಮೂರುತಿ ರಾಮನಿಗೇ ಗೊತ್ತಿಲ್ಲವೇ? ಅದರ ಮೂಲಕ ತನ್ನ ಪೂಜೆಯೇ ನಡೆಯುತ್ತಿದೆ ಎಂಬುದನ್ನು ಆತ ಅರಿಯನೆ? ಆತ ಯಾವುದೇ ವಿಧದ ಪೂಜೆಯಿಂದಲೂ ಸಂತುಷ್ಟನಾಗುತ್ತಾನೆ. ಪೂಜೆ ಗೊಳ್ಳುತ್ತಿರು ವುದು ತಾನೇ ಎಂದೂ, ತನ್ನನ್ನೇ ಉದ್ದೇಶಿಸಿಯೇ ಪೂಜಿಸುತ್ತಿzರೆಂದು ತಿಳಿಯುತ್ತಾನೆ.
ಅಂತಹ ರಾಮನಿಂದ ಕೆಡುಕಾಗುತ್ತದೆಯೇ? ಅದರಲ್ಲಿ ಶಾಕಿನಿ, ಡಾಕಿನಿ, ಪ್ರೇತ, ಪಿಶಾಚಿ ಸೇರಿ ಕೊಳ್ಳುತ್ತವೆಯೇ? ಯಾಕೆ ಹೀಗೆ ಅಪಶಕುನ ನುಡಿಯು ತ್ತೀರೀ? ನಿಮ್ಮಂತಹವರು ಹೀಗೆ ಆಡೋದ ರಿಂದಲೇ ವಿಶ್ವವಿಶಾಲವಾಗಿರುವ ಹಿಂದೂ ಧರ್ಮದ ಬಗೆಗೆ ತಪ್ಪು ತಿಳಿವಳಿಕೆ ಬರುತ್ತಿರುವುದು. ಸ್ವಾಮಿ ವಿವೇಕಾನಂದರೂ ಹಿಂದುಗಳನ್ನು ಕುರಿತು ಇದನ್ನೇ ಹೇಳಿದ್ದಾರೆ- ‘ಹಾಗೆ ಪೂಜೆ ಮಾಡಬೇಕಾ ಹೀಗೆ ಪೂಜೆ ಮಾಡಬೇಕಾ, ಅಷ್ಟು ಪ್ರದಕ್ಷಣೆ ಹಾಗೆ
ಹಾಕಬೇಕಾ, ಹೀಗೆ ಹಾಕಬೇಕಾ ಎಂದು ಚರ್ಚಿಸುತ್ತ ಕೂರಬೇಡಿ.
ವೇದಗಳ ಮೂಲ ಆಶಯ ಅರಿಯಿರಿ’ ಎಂದವರು ಸಾರಿ ಸಾರಿ ಹೇಳಿದ್ದರು. ಹಿಂದೂ ಧರ್ಮದ ಮೂಲ ಆಶಯವೇ ಆತ್ಮ ಸಾಕ್ಷಾತ್ಕಾರ ಅಲ್ಲವೇ? ನಮ್ಮ ನಮ್ಮ ಮನೋಧರ್ಮಕ್ಕೆ ತಕ್ಕಂತೆ ಪೂಜಿಸುವ ಸ್ವಾತಂತ್ರ್ಯವಿರುವುದು ಹಿಂದೂ ಧರ್ಮದಲ್ಲಿ ಮಾತ್ರ. ಪೂಜ್ಯರೇ, ನೀವು ಜಗದ್ಗುರುಗಳೇ ಇರಬಹುದು, ಹಾಗೆಂದು ನಮ್ಮ ಭಾವನೆಗಳಿಗೆ ಧಕ್ಕೆ ತಂದು, ನಮ್ಮಲ್ಲೇ ದಯವಿಟ್ಟು ಒಡಕನ್ನುಂಟು ಮಾಡಬೇಡಿ.
ಇನ್ನೊಬ್ಬ ಶಂಕರಾಚಾರ್ಯರಾದ ಜ್ಯೋತಿ ರ್ಮಠ, ಉತ್ತರಾಖಂಡದವರು ಮಂದಿರ ಪೂರ್ಣವಾಗಿಲ್ಲವೆಂದೂ, ಮುಂಚೆಯೇ ರಾಮಲನ ಪ್ರಾಣ ಪ್ರತಿ ಷ್ಠಾಪನೆ ಮಾಡುವುದು ಸರಿಯಲ್ಲವೆಂದೂ ಹೇಳಿದ್ದೀರಿ. ಪೂಜ್ಯರೇ, ಒಂದು ಮಂದಿರ ಪೂರ್ಣವಾಗಲು ಒಂದೆರಡು ತಲೆಮಾರುಗಳೇ ಬೇಕಾಗ ಬಹುದು. ಅಲ್ಲಿಯವರೆಗೆ ಪ್ರಾಣ ಪ್ರತಿಷ್ಠಾಪನೆ, ಪೂಜೆ ನಡೆಯಬಾರದೆ? ಇನ್ನೆಷ್ಟು ದಿನ ರಾಮಲ ಪ್ಲಾಸ್ಟಿಕ್ ಜೋಪಡಿಯಲ್ಲಿಯೇ ಪೂಜೆಗೊಳ್ಳಬೇಕು? ಅಯೋಧ್ಯೆಗೆ ಹೋದಾಗ ಅಲ್ಲಿ ಪ್ಲಾಸ್ಟಿಕ್ ಜೋಪಡಿಯಲ್ಲಿ ಪೂಜೆಗೊಳ್ಳುತ್ತಿರುವ ರಾಮಲನನ್ನು ನೋಡಿ, ನಮಗಿನ್ನೂ ಒಂದು ಮಂದಿರ ಕಟ್ಟಲಿಕ್ಕೆ ಆಗದೆ ಹೀಗೆ ಪೂಜಿಸ್ತಿದ್ದೀವ ಅಂತ ಅಸಹಾಯಕಳಾಗಿ, ಭಾವುಕಳಾಗಿ ಅತ್ತುಬಿಟ್ಟಿದ್ದೆ.
ದಯವಿಟ್ಟು ನನ್ನಂತಹವರ ನೋವನ್ನು ಅರಿಯಿರಿ. ಈಗ ಗರ್ಭಗುಡಿ, ರಾಮಲನ ಮೂರ್ತಿ ಸಿದ್ಧವಾಗಿದೆಯಲ್ಲವೇ? ಅಲ್ಲಿಯೇ ಪೂಜೆ ಪ್ರಾರಂಭವಾಗಲಿ ಬಿಡಿ. ಶತಶತಮಾನಗಳಿಂದ ಕಾದಿದ್ದೇವೆ, ಇನ್ನೂ ಎಷ್ಟು ಕಾಯಬೇಕು? ನೀವು, ನಿಮ್ಮ ನಾಲ್ಕೂ ಪೀಠಗಳ ವಕ್ತಾರರಂತೆ ಹೇಳಿದ್ದೀರಿ. ಹಿಂದೂ ಧರ್ಮ, ಅದರ ಆಚರಣೆ ಬಹಳ ವಿಶಾಲವಾದದ್ದು, ಅದನ್ನು ಸಂಕುಚಿತಗೊಳಿಸಬೇಡಿ. ಕೋಟಿ ಕೋಟಿ ರಾಮಭಕ್ತರು ಜನವರಿ ೨೨ಕ್ಕಾಗಿ ಸಂಭ್ರಮದಿಂದ ಕಾಯು ತ್ತಿದ್ದೇವೆ.
ಇಡೀ ವಿಶ್ವವೇ ಒಪ್ಪಿಕೊಳ್ಳಬಹುದಾದ, ಅಪ್ಪಿಕೊಳ್ಳಬಹುದಾದ ಧರ್ಮ ನಮ್ಮದು. ಅದನ್ನು ಸರಿಯಾಗಿ ಅರ್ಥ ಮಾಡಿಸಬೇಕಲ್ಲವೇ? ದಯವಿಟ್ಟು
ನೀವು ನಿಮ್ಮ ಶಾಸದ ನೆಪ ಹೇಳಿ, ಅಪಸವ್ಯವಾಡದಿರಿ. ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನೀವು. ತಿಳಿದವರು ನೀವು. ಆದರೂ ನಿಮ್ಮ
ಅಭಿಪ್ರಾಯಕ್ಕೆ ವಿರುದ್ಧವಾಗಿ ಹೇಳಬೇಕಾದಂತಹ ಪರಿಸ್ಥಿತಿ ಬಂದಿದ್ದಕ್ಕೆ ನನಗೆ ನೋವಿದೆ. ಹೇಳಿದ್ದಕ್ಕೆ ಕ್ಷಮೆಯಿರಲಿ.