Sunday, 24th November 2024

Shashidhara Halady Column: ಮುಳ್ಳು ಸೌತೆಯಲ್ಲಿ ಮುಳ್ಳು ಇರುತ್ತದಾ ?

ಶಶಾಂಕಣ

ಶಶಿಧರ ಹಾಲಾಡಿ

ಕದಿರು ಕಟ್ಟುವ ದಿನ ಪೂಜಿಸಿಕೊಳ್ಳುವ ಮುಳ್ಳು ಸೌತೆಕಾಯಿಯನ್ನು, ಪೂಜೆಯ ನಂತರ ಮನೆಯವ ರೆಲ್ಲರೂ ತಿನ್ನುವುದುಂಟು. ಅದನ್ನು ತಿಂದರೆ ಗಂಟಲು ಕಟ್ಟಬಹುದಾದ್ದುಂದ ಮೆಣಸಿನ ಪುಡಿ, ಉಪ್ಪನ್ನು ಸವರಿ ತಿನ್ನುವುದು ಕ್ಷೇಮ. ಎಳೆಯ ಮುಳ್ಳು ಸೌತೆಯನ್ನು ತರಕಾರಿಯ ರೀತಿಯಲ್ಲೂ ಬಳಸುವುದುಂಟು.

ಎಳೆ ಸೌತೆ, ಬಣ್ಣದ ಸೌತೆ, ಮದರಾಸ್ ಸೌತೆ ಮೊದಲಾದ ಹೆಸರುಗಳು ಸಾಕಷ್ಟು ಪರಿಚಿತ. ಮುಳ್ಳು ಸೌತೆ ಎಂದರೆ ಅದಾವುದು ಎಂದು ಕೆಲವರಿಗಾದರೂ ಅಚ್ಚರಿಯಾಗಬಹುದು. ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ವಾಸಿಸುವವರಿಗೆ ‘ಮುಳ್ಳು ಸೌತೆ’ ಚಿರಪರಿಚಿತ.

ಹೆಚ್ಚು ವಿಶೇಷವೇನಿಲ್ಲ, ಬಯಲುಸೀಮೆಯ ಎಳೆ ಸೌತೆಯನ್ನೇ ತದ್ವತ್ ಆಗಿ ಹೋಲುವ ಸೌತೆಯನ್ನು ಕರಾವಳಿಯ ಮುಳ್ಳು ಸೌತೆ ಎನ್ನಬಹುದು. ಈ ಸೌತೆಕಾಯಿಯ ಮೇಲೆ ಸಣ್ಣ ಸಣ್ಣ ಮುಳ್ಳುಗಳಿರುವುದರಿಂದ, ‘ಮುಳ್ಳು ಸೌತೆ’ ಎಂಬ ಅನ್ವರ್ಥ ನಾಮ. ಮುಳ್ಳು ಸೌತೆಕಾಯಿಯು ಒಂದು ಅಡಿಗಿಂತ ಚಿಕ್ಕ ಗಾತ್ರದಲ್ಲಿರುವಾಗ, ಅದನ್ನು ಉದ್ದಕ್ಕೆ
ಸೀಳಿ, ತುಸು ಉಪ್ಪು, ಮೆಣಸಿನ ಪುಡಿ ಸವರಿ ತಿಂದರೆ ಬಹುರುಚಿ- ಇಂದು ಮಾಲ್‌ಗಳಲ್ಲಿ, ರಾಜ್ಯದಾದ್ಯಂತ ದೊರೆಯುತ್ತಿರುವ ಎಳೆ ಸೌತೆಗಿಂತಲೂ ಹೆಚ್ಚು ಸವಿ, ತುಸು ಸಿಹಿ.

ಮುಳ್ಳು ಸೌತೆಕಾಯಿಗೆ ನಮ್ಮೂರಿನಲ್ಲಿ ಇಷ್ಟುಮಾತ್ರವಲ್ಲದೆ, ಇನ್ನೊಂದು ವಿಶೇಷ ಸ್ಥಾನವೂ ಇದೆ. ಅದೇನೆಂದರೆ ‘ಕದಿರು ಕಟ್ಟುವ’ ದಿನದಂದು ಮತ್ತು ‘ಹೊಸತು ಉಣ್ಣುವ’ ದಿನದಂದು, ಮುಳ್ಳು ಸೌತೆಕಾಯಿ ಅಗತ್ಯವಾಗಿ ಬೇಕು- ಅದು ಅಂದಿನ ‘ಪ್ರಕೃತಿ ಪೂಜೆ’ಗೆ ಅನಿವಾರ್ಯವಾಗಿ ಬೇಕಿರುವ ಪರಿಕರ. ಇಲ್ಲಿ ‘ಪ್ರಕೃತಿ ಪೂಜೆ’ ಎಂಬುದು ನಾನು
ಬಳಸಿದ ವಿಶೇಷಣ; ಕೃಷಿಯ ಭಾಗವಾಗಿ, ಧಾನ್ಯಗಳನ್ನು ಮನೆಗೆ ತರುವ ಸಂಭ್ರಮದ ಅಂಗವಾಗಿ ಅಂದು ನಡೆಯುವ ಪೂಜೆಯು, ಪ್ರಕೃತಿಯನ್ನು, ಪ್ರಕೃತಿಯ ಶಿಶುಗಳನ್ನು ಪೂಜಿಸುವ ರೀತಿಯಲ್ಲಿರುತ್ತದೆ ಹೊರತು ವೈದಿಕ ಪದ್ಧತಿಯ ಹೆಚ್ಚು ಪ್ರಭಾವವಿಲ್ಲ. ಆದ್ದರಿಂದಲೇ, ಕದಿರು ಕಟ್ಟುವ ದಿನದ ಆಚರಣೆ, ಭೂಮಿ ಹುಣ್ಣಿಮೆ, ಸೀಗೆ ಹುಣ್ಣಿಮೆ ಇವೆಲ್ಲವನ್ನೂ ಪ್ರಕೃತಿ ಪೂಜೆ ಎಂದೇ ತಿಳಿಯಬಹುದು.

ನವರಾತ್ರಿಯ ಮೊದಲ ದಿನ ಅಥವಾ ನಂತರದ ಯಾವುದಾದರೊಂದು ದಿನ, ಗದ್ದೆಯಲ್ಲಿ ಬೆಳೆದ ‘ಕದಿರನ್ನು’ (ಬತ್ತದ ತೆನೆಗಳು) ಮನೆಯೊಳಗೆ ತರುವಾಗ ತೋರುವ ಆದರ, ಗೌರವ, ಭಕ್ತಿ ಎಲ್ಲವೂ ‘ಕದಿರು ಕಟ್ಟುವ ಹಬ್ಬದ’ ಆಚರಣೆಯ ಭಾಗ. ಬತ್ತದ ತೆನೆಗಳನ್ನು ಹರಿವಾಣದಲ್ಲಿಟ್ಟು, ಪೂಜಿಸಿ, ತಲೆಯ ಮೇಲೆ ಹೊತ್ತು ಮನೆಯೊಳಗೆ ತರುವ ಈ ಆಚರಣೆ ಯ ಹಿನ್ನೆಲೆಯನ್ನು ಹುಡುಕುತ್ತಾ ಹೊರಟರೆ, ಪುರಾತನ ಜೀವನಪದ್ಧತಿಯೊಂದರ ಪದರಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ನವರಾತ್ರಿಯ ಮೊದಲ ದಿನ ಕದಿರು ಕಟ್ಟಲು, ಬೇರೊಬ್ಬರ ಗದ್ದೆಯಿಂದ, ಅವರಿಗೆ ಗೊತ್ತಿಲ್ಲದೇ ಕಿತ್ತು ತಂದ ಬತ್ತದ ಗಿಡಗಳು ಬೇಕು! ಅಂದರೆ, ಬತ್ತದ ಗಿಡಗಳನ್ನು ಕದ್ದು ತರಬೇಕು. ಇನ್ನೂ ಬಿಡಿಸಿ ಬೇಳಬೇಕೆಂದರೆ, ಕದಿರು ಕಟ್ಟುವ ಹಬ್ಬದ ಹಿಂದಿನ ರಾತ್ರಿ, ಮನೆಯ ಯಜಮಾನನು ಕತ್ತಲೆಯಲ್ಲೇ ಮೆತ್ತಗೆ ಓಡಾಡುತ್ತಾ, ಬೇರೊಬ್ಬರ ಗದ್ದೆಯಲ್ಲಿ ಬೆಳೆದು ನಿಂತ ನಾಲ್ಕಾರು ಬತ್ತದ ಗಿಡಗಳನ್ನು ತೆನೆಸ ಹಿತ ಕಿತ್ತು ತರಬೇಕು. ಯಾರಿಗೂ ಗೊತ್ತಾಗದಂತೆ ತಂದ ಈ ಬತ್ತದ ಗಿಡಗಳನ್ನು, ಮನೆಯಂಗಳದ ಮೂಲೆಯಲ್ಲಿ ನಾಲ್ಕು ಕೋಲು ಕಟ್ಟಿದ ಕಿರು ಚಪ್ಪರಕ್ಕೆ ಆನಿಸಿಟ್ಟು, ಸೂರ್ಯೋದಯದ ಸಮಯದಲ್ಲಿ ಪೂಜೆ ಮಾಡಿ, ಬತ್ತದ ತೆನೆಗಳನ್ನು ಗೌರವದಿಂದ ಕತ್ತರಿಸಿ, ಹರಿವಾಣದಲ್ಲಿಟ್ಟು, ಗಂಟೆ ಬಡಿ ಯುತ್ತಾ ಮನೆಯೊಳಗೆ ತರಬೇಕು. ಆ ರೀತಿ ಗೌರವದಿಂದ ಬತ್ತದ ತೆನೆ ಹೊತ್ತ ಮನೆಯ ಯಜಮಾನ ನನ್ನು ಮನೆಯ ಹೆಂಗಸರು ಕಾಲು ತೊಳೆದು, ಪೂಜೆ ಮಾಡಿ, ಮನೆಯೊಳಗೆ ಬರಮಾಡಿಕೊಳ್ಳುತ್ತಾರೆ.

ನಂತರ, ಬತ್ತದ ತೆನೆಯನ್ನು ಸಾಂತು (ತೆಂಗಿನ ಹೆಡೆಯನ್ನು ಸೀಳಿ ಮಾಡಿದ ದಾರ) ಎಂಬ ದಾರದಲ್ಲಿ ಕಟ್ಟಿ, ಮನೆಯ ಕಂಬಗಳು, ಮೇಟಿ ಕಂಬ, ಹಡಿ ಮಂಚ, ನೇಗಿಲು, ಹಟ್ಟಿ ಕಂಬ, ತಿರಿ, ಹಾರೆ, ಕಡಗೋಲು ಮೊದಲಾದವುಗಳಿಗೆ ಕಟ್ಟುವ ಕ್ರಮ. ಈ ರೀತಿ ಕಟ್ಟಿದ ಬತ್ತದ ತೆನೆಗಳು ಮುಂದಿನ ಮಳೆಗಾಲದ ತನಕವೂ ಇದ್ದು, ಗುಬ್ಬಚ್ಚಿಗಳಿಗೆ
ಆಹಾರವೂ ಆಗುವುದುಂಟು!

ಇದೆಲ್ಲಾ ಸರಿ, ಇಲ್ಲಿ ಮುಳ್ಳು ಸೌತೆಕಾಯಿಯ ದೇನು ಕಾರುಬಾರು ಎಂದು ನೀವು ಕೇಳಬಹುದು. ಬತ್ತದ ತೆನೆಯನ್ನು ಕತ್ತರಿಸಿ ಹರಿವಾಣದಲ್ಲಿ ಇಟ್ಟು ಪೂಜಿಸುವ ಸಮಯದಲ್ಲೇ, ಒಂದು ಮುಳ್ಳು ಸೌತೆಕಾಯಿಯನ್ನು ಸಹ ಉದ್ದಕ್ಕೆ ಸೀಳಿ, ಎರಡು ಭಾಗ ಮಾಡಿ, ಅದೇ ಹರಿವಾಣದಲ್ಲಿಡುತ್ತಾರೆ; ಬತ್ತದ ತೆನೆಗಳ ಜತೆಯಲ್ಲೇ, ಎರಡು ಭಾಗಗಳಾಗಿ
ಕತ್ತರಿಸಿದ ಆ ಪುಟ್ಟ ಮುಳ್ಳು ಸೌತೆಕಾಯಿಯೂ, ಹರಿವಾಣದಲ್ಲಿ ಪೂಜಿಸಿಕೊಂಡು, ಮನೆಯ ಯಜಮಾನನ ತಲೆಯ ಮೇಲೆ ಕುಳಿತು ‘ಗೃಹ ಪ್ರವೇಶ’ ಮಾಡುತ್ತದೆ! ಅದಕ್ಕೆಂದೇ, ಮುಳ್ಳು ಸೌತೆಕಾಯಿಗೆ ನಮ್ಮೂರಲ್ಲಿ ಸಾಕಷ್ಟು ಗೌರವ.
ಪುಟ್ಟ ಪುಟ್ಟ ಮುಳ್ಳುಗಳನ್ನು ಮೈಮೇಲೆ ಬೆಳೆಸಿಕೊಂಡಿರುವ ಇಂಥ ಪುಟಾಣಿ ಸೌತೆಕಾಯಿಗಳು ಆದಿನಕ್ಕೆ ಸರಿಯಾಗಿ ಸಿಗುವಂತೆ, ಮನೆಯವರು ನಾಲ್ಕೆಂಟು ವಾರಗಳ ಮುಂಚೆಯೇ, ಗಿಡ ಮಾಡಿ ನೆಡುತ್ತಾರೆ.

ಹಿಂದಿನ ವರ್ಷ ಬೆಳೆದ ಸೌತೆಕಾಯಿಯ ಬೀಜವನ್ನು ಜೋಪಾನವಾಗಿ ಸಂಗ್ರಹಿಸಿಟ್ಟು, ಚೌತಿ ಹಬ್ಬದ ನಂತರ, ಅಂಗಳದ ಮೂಲೆಯಲ್ಲೋ, ಗದ್ದೆಯಂಚಿನ ಗೊಬ್ಬರದ ರಾಶಿಯಲ್ಲೋ ಊರಿ, ಮೊಳಕೆಯೊಡೆದು ಬೆಳೆಯುವ ಗಿಡಕ್ಕೆ ಮರದ ಕೋಲಿನ ಆಧಾರ ನೀಡಿ, ಬೆಳೆಸಿ, ಕಾಯಿಯಾಗುವಂತೆ ನೋಡಿಕೊಳ್ಳುತ್ತಾರೆ. ಕದಿರು ಕಟ್ಟುವ
ದಿನಕ್ಕಿಂತ ಮುಂಚೆಯೇ ಕಾಯಿಗಳಾದರೆ, ಅದನ್ನು ಆ ದಿನದ ತನಕ ಕೊಯ್ಯುವುದಿಲ್ಲ; ಕದಿರು ಕಟ್ಟುವ ಹಬ್ಬಕ್ಕೆಂದೇ ಬೆಳೆಸಿ, ಆ ದಿನ ಮನೆಯವರಿಂದ ಪೂಜಿಸಿಕೊಂಡು, ಬರುವ ವಿಶೇಷ ಅತಿಥಿ, ಈ ಮುಳ್ಳು ಸೌತೆ.

ಆ ದಿನ, ಮುಳ್ಳು ಮುಳ್ಳು ಬಾಯಿ ಇರುವ ಕುಡುಗೋಲಿನಿಂದ ಮುಳ್ಳು ಸೌತೆಕಾಯಿಯನ್ನು ಉದ್ದಕ್ಕೆ ಸೀಳಬೇಕೆಂಬ ಇನ್ನೊಂದು ನಂಬಿಕೆಯೂ ನಮ್ಮೂರಿನಲ್ಲಿದೆ! ಅಂಥ ಕುಡುಗೋಲನ್ನು, ನಂತರ ನಡೆಯುವ ಬತ್ತದ ಕೊಯ್ಲು ಮಾಡಲು ಸಹ ಉಪಯೋಗಿಸಬೇಕು, ಉಪಯೋಗಿಸುತ್ತಾರೆ. ಈ ರೀತಿ, ಮುಳ್ಳು ಮುಳ್ಳು ಬಾಯಿ ಇರುವ ಕುಡುಗೋಲನ್ನು ನಮ್ಮ ಹಳ್ಳಿಯ ಕಮ್ಮಾರರು ತಯಾರಿಸಿಕೊಡುತ್ತಿದ್ದರು. ಕದಿರು ಹಬ್ಬದ ದಿನ ತೆನೆಗಳನ್ನು
ಕತ್ತರಿಸಲು ಸಹ ಇಂಥದ್ದೇ ಕುಡುಗೋಲನ್ನು ಬಳಸುತ್ತಾರೆ. ಮುಳ್ಳು ಸೌತೆ, ಮುಳ್ಳು ಮುಳ್ಳು ಬಾಯಿ ಇರುವ ಕುಡುಗೋಲು, ಬತ್ತದ ತೆನೆ, ಬೇರೊಬ್ಬರ ಗದ್ದೆಯಿಂದ ರಾತ್ರಿ ಹೊತ್ತಿನಲ್ಲಿ ತೆನೆ ಸಹಿತ ಬತ್ತದ ಗಿಡಗಳನ್ನು ಕದ್ದು ತರುವ ಸಂಪ್ರದಾಯ ಇವೆಲ್ಲವೂ ಬಹು ಪುರಾತನ ಜನಪದ ಪದ್ಧತಿಯ ಪಳೆಯುಳಿಕೆಗಳು. ಇನ್ನೂ ಒಂದು
ವಿಸ್ಮಯಕಾರಿ ಎನಿಸುವ, ಆದರೆ ಈಗ ಬಹುಪಾಲು ಬಳಕೆಯಲ್ಲಿಲ್ಲದ ಒಂದು ಸಂಪ್ರದಾಯವಿದೆ: ಹಿಂದಿನ ರಾತ್ರಿ ಬತ್ತದ ಗಿಡಗಳನ್ನು ಬೇರೊಬ್ಬರ ಗದ್ದೆಯಿಂದ ಕದ್ದು ತರುವಾಗ, ಮನೆಯ ಯಜಮಾನನು ಬಟ್ಟೆ ಧರಿಸಬಾರದಂತೆ!

ಈ ಪದ್ಧತಿಯನ್ನು ಈಗ ಯಾರೂ ಅನುಸರಿಸುತ್ತಿಲ್ಲ, ಬಿಡಿ. ಇದೇ ರೀತಿ, ಆಷಾಢ ಮಾಸದ ಅಮಾವಾಸ್ಯೆ
ದಿನ ಆಚರಣೆಯ ಭಾಗವಾಗಿ ಕುಡಿಯುವ ಹಾಲೆ ಕಷಾಯಕ್ಕಾಗಿ, ಹಾಲೆ ಮರದ ತೊಗಟೆ ಅಥವಾ ಕೆತ್ತೆಯನ್ನು ತರುವಾಗಲೂ, ರಾತ್ರಿ ಹೊತ್ತು ಬಟ್ಟೆ ಧರಿಸದೇ ಕಾಡಿಗೆ ಹೋಗಬೇಕೆಂಬ ನಂಬಿಕೆಯಿತ್ತು. ಇವೆಲ್ಲವೂ ಆದಿಮ ಸಂಸ್ಕೃತಿಯ, ಮನುಷ್ಯನು ಕೃಷಿ ಆರಂಭಿಸುವಾಗ ಬೆಳೆಸಿಕೊಂಡ ಪದ್ಧತಿಯ ನೆನಪಿನ ಭಾಗಗಳಾಗಿರಬಹುದು.

ನಮ್ಮೂರಿನಲ್ಲಿ ಕದಿರು ಕಟ್ಟುವ ದಿನ, ಪೂಜಿಸಿಕೊಳ್ಳುವ ಮುಳ್ಳು ಸೌತೆಕಾಯಿಯನ್ನು, ಪೂಜೆಯ ನಂತರ ಮನೆಯವರೆಲ್ಲರೂ ಚಪ್ಪರಿಸಿ ತಿನ್ನುವುದುಂಟು. ಅದನ್ನು ತಿಂದರೆ, ಶೀತವಾಗಿ, ಗಂಟಲು ಕಟ್ಟುವ ಸಾಧ್ಯತೆ ಇದೆ; ಆದ್ದರಿಂದ ಸ್ವಲ್ಪ ಮೆಣಸಿನ ಪುಡಿ, ಉಪ್ಪನ್ನು ಸವರಿ ತಿನ್ನುವುದು ಕ್ಷೇಮ. ಎಳೆಯದಾದ ಮುಳ್ಳು ಸೌತೆಯನ್ನು ಕತ್ತರಿಸಿದರೆ, ಅದರಿಂದ ನೀರು ವಸರುವ ರೀತಿಯೇ ವಿಶಿಷ್ಟ. ಒಂದು ತರಕಾರಿಯ ರೀತಿಯಲ್ಲೂ ಇದನ್ನು
ಬಳಸುವುದುಂಟು. ಕದಿರು ಕಟ್ಟುವ ಹಬ್ಬದ ದಿನ ಅಥವಾ ನಂತರದ ಯಾವುದಾದರೂ ಒಂದು ದಿನ
ಆಚರಿಸುವ ‘ಹೊಸತು ಉಣ್ಣುವ’ ಹಬ್ಬ ಅಥವಾ ಹೊಸ ಬೆಳೆಯನ್ನು ಊಟ ಮಾಡುವ ಹಬ್ಬದ ದಿನವೂ ಎಳೆ ಸೌತೆಕಾಯಿಯ ಬಳಕೆ ಇದೆ. ಹೊಸ ಊಟದ ಹಬ್ಬಕ್ಕೆ ಬಂಧು-ಮಿತ್ರರು ಅಗತ್ಯ ಬರಬೇಕು ಎಂಬ ನಂಬಿಕೆಯುಂಟು. ಮುಳ್ಳು ಸೌತೆಕಾಯಿ ಗಿಡದ ಬೀಜವನ್ನು ತಲೆತಲಾಂತರದಿಂದಲೂ ಮನೆಯಲ್ಲೇ ಪ್ರತಿವರ್ಷ ಸಂಗ್ರಹಿಸಿಡುತ್ತಾರೆ.

ವಿಶೇಷವೆಂದರೆ, ಎಳೆಯ ಮಿಡಿಯಾಗಿರುವ ಸಿಹಿಸಿಹಿ ರುಚಿಯ ಈ ಮುಳ್ಳು ಸೌತೆಕಾಯಿಯನ್ನು ಕೊಯ್ಯದೇ ಹಾಗೆಯೇ ಬಿಟ್ಟರೆ, ಅದು ಬಲಿಯತೊಡಗುತ್ತದೆ; ಒಂದರಿಂದ ಎರಡು ಅಡಿ ಉದ್ದ, ಅದಕ್ಕೆ ಸೂಕ್ತ ಎನಿಸುವಷ್ಟು ದಪ್ಪವಾಗಿ ಬೆಳೆಯುವ ಈ ಮುಳ್ಳು ಸೌತೆಕಾಯಿಯನ್ನು ಕಾಪಿಟ್ಟರೆ, ಒಂದೆರಡು ತಿಂಗಳುಗಳ ತನಕ ಕೆಡದೇ
ಉಳಿಯುತ್ತದೆ. ಕರಾವಳಿಯ ಹಳ್ಳಿಗಳಲ್ಲಿ ಅದೂ ಒಂದು ತರಕಾರಿ: ಸಾಂಬಾರು, ಪಲ್ಯ, ಪಳದ್ಯ ತಯಾರಿಸಲು ಉಪಯೋಗ.

ಆದರೆ, ಅದರ ಸಂಬಂಧಿಯಾದ ಬಣ್ಣದ ಸೌತೆಯ ರೀತಿ, ಹೆಚ್ಚು ಕಾಲ ಇಡುವಂತಿಲ್ಲ; ಜಾಸ್ತಿ ದಿನ ಇಟ್ಟರೆ ರುಚಿ
ಕಳೆದುಕೊಂಡು, ‘ಹೀಲಿ’ಯಾಗುತ್ತದೆ. ಎಳೆಯ ಮುಳ್ಳುಸೌತೆಕಾಯಿಯನ್ನು ಕಚ್ಚಿ ತಿನ್ನುವುದೆಂದರೆ ಮಕ್ಕಳಿಗೆ ಬಹಳ ಇಷ್ಟ; ಜಾಸ್ತಿ ತಿಂದರೆ, ಅದೇ ದಿನ ಸಂಜೆ ಮೂಗು ಸೊರಸೊರವಾಗುವುದೂ ಖಚಿತ!

ಇದೇ ಸೌತೆಕಾಯಿಯನ್ನು ಹಾಕಿ ತಯಾರಿಸಿದ ಅಕ್ಕಿಕಡುಬನ್ನು, ದೀಪಾವಳಿಯ ದಿನ, ಗೋಪೂಜೆಯ ದಿನ, ಎತ್ತು, ಹಸುಗಳಿಗೆ ತಿನ್ನಿಸುವ ಕ್ರಮವೂ ಇದೆ. ಇವನ್ನೆಲ್ಲಾ ಕಂಡರೆ, ನಮ್ಮೂರಿನವರು ಮುಳ್ಳು ಸೌತೆಗೆ ಎಷ್ಟೊಂದು ಗೌರವ, ಪ್ರಾಧಾನ್ಯ ನೀಡುತ್ತಿದ್ದರೆಂದು ತಿಳಿಯುತ್ತದೆ. ಆದರೆ, ಇದಕ್ಕೆ ಪ್ರತಿಯಾಗಿ, ಹಕ್ಕಲು ಸೌತೆ ಅಥವಾ ಬಣ್ಣದ ಸೌತೆಗೆ ಈ ರೀತಿಯ ಪೂಜ್ಯ ಭಾವನೆ ಇಲ್ಲ; ಆದರೆ, ಅಡುಗೆಮನೆಯಲ್ಲಿ ಅದರ ಉಪಯೋಗ ಜಾಸ್ತಿ. ನಮ್ಮ ಹಳ್ಳಿಯವರು ಹಕ್ಕಲು ಸೌತೆ ಎಂದು ಕರೆಯುವ ಸೌತೆಕಾಯಿಯನ್ನು ಬಯಲು ಸೀಮೆಯವರು ‘ಬಣ್ಣದ ಸೌತೆ’ ಎಂದು ಕರೆಯುತ್ತಾ ರೆಂದು ನಂತರ ತಿಳಿಯಿತು; ಅದನ್ನೇ ‘ಮದರಾಸ್ ಸೌತೆ’ ಎಂದು ಬೆಂಗಳೂರಿನ ಅಂಗಡಿಗಳಲ್ಲಿ ಮಾರುತ್ತಾರೆ: 1956ರ ತನಕ ಮದರಾಸ್ ರಾಜ್ಯಕ್ಕೆ ಸೇರಿದ್ದ ಕರಾವಳಿ ಪ್ರದೇಶದ ತರಕಾರಿಯಾಗಿದ್ದರಿಂದ, ಮದರಾಸ್ ಸೌತೆ ಎಂಬ ವಿಶೇಷ ಹೆಸರು! ಉತ್ತರ ಕನ್ನಡದವರು ಬಣ್ಣದ ಸೌತೆ ಮತ್ತು ಮಗೆ ಕಾಯಿ ಎಂಬ ಎರಡು ಪ್ರಭೇದದ ಸೌತೆಕಾಯಿಗಳನ್ನು ತರಕಾರಿಯಾಗಿ ಬಳಸುತ್ತಾರೆ.

ಮುಳ್ಳು ಸೌತೆಕಾಯಿಯು ಬಲಿತ ನಂತರ ಅದರಿಂದ ಸಾಂಬಾರು, ಪಳದ್ಯ, ಪಲ್ಯ ಮುಂತಾದವನ್ನು ತಯಾರಿಸುವ ಪದ್ಧತಿ ಇದ್ದರೂ, ಹಕ್ಕಲು ಸೌತೆ ಅಥವಾ ಬಣ್ಣದ ಸೌತೆಯಷ್ಟು ರುಚಿ ಅದಕ್ಕಿಲ್ಲ; ಈಚಿನ ದಶಕಗಳಲ್ಲಿ, ಎಲ್ಲಾ ಕಡೆ ಉಡುಪಿ ಹೊಟೇಲುಗಳ ಜನಪ್ರಿಯತೆಯಿಂದಾಗಿ, ಬಣ್ಣದ ಸೌತೆಯ ಸಾಂಬಾರು ಕರ್ನಾಟಕದ ಎಲ್ಲಾ ಭಾಗಗಳ
ಜನರಿಗೂ ಪರಿಚಿತವಾಗಿದೆ. ಸ್ವಲ್ಪ ಬೆಲ್ಲ ಹಾಕಿ ತಯಾರಿಸುವ ಬಣ್ಣದ ಸೌತೆಯ ಸಾಂಬಾರು, ದಿನನಿತ್ಯದ
ಅಡುಗೆಯ ಜತೆಯಲ್ಲೇ, ಮದುವೆ ಮೊದಲಾದ ವಿಶೇಷದ ಅಡುಗೆಯಲ್ಲೂ ಸಾರ್ವತ್ರಿಕ. ಇದರ ಸಾಂಬಾರಿಗೆ ಬೆಲ್ಲ ಹಾಕುವ ಪದ್ಧತಿ ಇರುವುದರಿಂದ, ಮಧುಮೇಹ ಇರುವವರು ಇದನ್ನು ಸೇವಿಸುವಾಗ ತುಸು ಯೋಚಿಸುವುದೊಳ್ಳೆ ಯದು!

ಹೊಟ್ಟೆಯ ಅಸಿಡಿಟಿ ಇರುವವರು, ಖಾಲಿ ಹೊಟ್ಟೆಯಲ್ಲಿ ಮುಳ್ಳು ಸೌತೆಯನ್ನು ತಿಂದರೆ, ಸಾಕಷ್ಟು ಉಪಯೋಗವುಂಟು ಎನ್ನುವರು. ಜತೆಗೆ, ಕ್ಯಾಲ್ಷಿಯಂ ಕೊರತೆ ಇರುವವರಿಗೂ ಇದು ಉತ್ತಮ ಎನ್ನುವುದುಂಟು. ಮುಳ್ಳು ಸೌತೆಕಾಯಿಯ ಮಹಿಮೆಯು ಕದಿರು ಕಟ್ಟುವ ಹಬ್ಬದಿಂದ ಆಹಾರ ಸಂಸ್ಕೃತಿಯ ತನಕವೂ ಹರಡಿರುವುದು ವಿಶೇಷ ಎನಿಸುತ್ತದೆ.

ಇದನ್ನೂ ಓದಿ: Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !