Friday, 25th October 2024

Shashidhara Halady Column: ನಿತ್ಯದ ಆಹಾರ ಸೇವನೆಯಲ್ಲಿ ಹೊಸ ಚಿಂತನೆ

ಶಶಾಂಕಣ

ಶಶಿಧರ ಹಾಲಾಡಿ

ಕಳೆದ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ, ಮೈಸೂರು ವಾಸಿ ಡಾ.ಖಾದರ್ ವಲಿ ಅವರ ಚಿಂತನೆಗಳು ಅಪರೂಪವಾದವುಗಳು, ಹೊಸ ಹೊಳಹುಗಳನ್ನು ಹೊಂದಿರುವಂಥವು. ಇಂದಿನ ವಾಣಿಜ್ಯಕ ಪ್ರಧಾನ ಸಮಾಜ
ದಲ್ಲಿ, ಖಾದರ್ ಅವರು ತಮ್ಮೆಲ್ಲಾ ಚಿಂತನೆಗಳನ್ನು ಕ್ರೋಡೀಕರಿಸಿ ಒಂದು ಪುಸ್ತಕ ಮಾಡಿ, ಅದನ್ನು ಉಚಿತವಾಗಿ ಇಡೀ ನಾಡಿಗೆ, ಜಗತ್ತಿಗೆ ಹಂಚಿದ್ದಾರೆ!

ಅವರ ವೆಬ್‌ಸೈಟ್‌ಗೆ ಹೋದರೆ, ಆ ಪುಸ್ತಕವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು, ಅಲ್ಲಿನ ಸಲಹೆಗಳನ್ನು ಓದಬಹುದು, ಸೂಕ್ತ ಎನಿಸಿದರೆ ಅನುಸರಿಸಲೂಬಹುದು. ಎಲ್ಲವನ್ನೂ ಪಾಶ್ಚಾತ್ಯ ದೃಷ್ಟಿಕೋನ ದಲ್ಲಿ ನೋಡುತ್ತಾ, ತಮ್ಮಲ್ಲಿರುವ ಕೌಶಲ, ಮಾಹಿತಿ, ಸಂಪನ್ಮೂಲ, ಜ್ಞಾನವನ್ನು ವಾಣಿಜ್ಯೀಕರಿಸುತ್ತಿರುವ ಈ ಕಾಲದಲ್ಲಿ, ಖಾದರ್ ಅವರು ತಮ್ಮ ಸಂಶೋಧನೆಯ ಜ್ಞಾನವನ್ನು ಉಚಿತವಾಗಿ ಹಂಚುತ್ತಿರುವುದು ನಿಜಕ್ಕೂ ವಿಶೇಷ ಎನಿಸುತ್ತದೆ.

ಹಾಗೆ ನೋಡಹೋದರೆ, ಖಾದರ್ ವಲಿಯವರ ಚಿಂತನೆ, ಮಾರ್ಗದರ್ಶನ, ಸಂಶೋಧನೆ ಎಲ್ಲವೂ ಮುಖ್ಯ ವಾಹಿನಿಯಿಂದ ಹೊರಗಿರುವ ಚಿಂತನಾಕ್ರಮ. ಖಾದರ್ ಅವರು ಡಯಾಬಿಟಿಸ್ ಅಥವಾ ಮಧುಮೇಹಕ್ಕೆ ಔಷಧವಿಲ್ಲದೇ ಪರಿಹಾರವನ್ನು ಸೂಚಿಸುತ್ತಿದ್ದಾರೆ ಎಂದು ಆರಂಭದಲ್ಲಿ ಜನರಲ್ಲಿ ಪ್ರಚಾರ ವಾಗಿತ್ತು; ಕಳೆದ ಸುಮಾರು ೩ ದಶಕಗಳಿಂದಲೂ ಅವರು ನಮ್ಮ ನಾಡಿನ ವಿವಿಧ ಊರುಗಳಲ್ಲಿ ಭಾಷಣ ಮಾಡುತ್ತಾ, ಉತ್ತಮ ಜೀವನಕ್ರಮ ಅನುಸರಿಸಿ ಎಂದು ಸಲಹೆ ನೀಡುತ್ತಿದ್ದರು. ಜತೆಗೆ, ಹಳ್ಳಿ, ಪಟ್ಟಣಗಳೆರಡರಲ್ಲೂ ಸಾಮಾನ್ಯ ಆರೋಗ್ಯ ಸಮಸ್ಯೆ ಎನಿಸಿರುವ ಮಧುಮೇಹವು ನಾವು ತಿನ್ನುವ ಆಹಾರದಿಂದ ಪ್ರೇರಿತವಾಗಿದೆ ಮತ್ತು ಅದರಿಂದ ಹೊರ ಬರಲು, ಹೆಚ್ಚು ನಾರು ಇರುವ ಆಹಾರ ತಿನ್ನಿ ಮತ್ತು ದಿನಕ್ಕೆ ಕನಿಷ್ಠ ಮುಕ್ಕಾಲು ಗಂಟೆ ನಡೆಯಿರಿ ಎಂಬ ಸಲಹೆ ನೀಡುತ್ತಿದ್ದರು.

ಆದ್ದರಿಂದ, ಇವರನ್ನು ಆರಂಭದಲ್ಲಿ ‘ಮಧುಮೇಹದ ಸಮಸ್ಯೆಯನ್ನು ರಿವರ್ಸ್ ಮಾಡುವ ಆಹಾರ ತಜ್ಞ’ ಎಂದೇ ಸಮಾಜ ನೋಡತೊಡಗಿತು. ಆದರೆ, ಕಳೆದ 2-3 ದಶಕಗಳಿಂದ ಅವರು ನಡೆಸಿದ ಸಂಶೋಧನೆಯನ್ನು, ತಮ್ಮ ಭಾಷಣಗಳಲ್ಲಿ ಪ್ರತಿಪಾದಿಸುತ್ತಿರುವ ವಿಚಾರಗಳನ್ನು ಗಮನಿಸಿದಾಗ ಗೊತ್ತಾಗುವುದೆಂದರೆ, ಜನಸಾಮಾನ್ಯರ ಆರೋಗ್ಯ ಕಾಪಾಡುವ ಜತೆಯಲ್ಲೇ, ಅವರ ಮುಖ್ಯ ಆಶಯ ಎಂದರೆ, ಭೂಮಿಯ ಪರಿಸರವನ್ನು ಕಾಪಾಡುವುದು! ಅಂಥದೊಂದು ಹೋಲಿಸ್ಟಿಕ್ ಉದ್ದೇಶವನ್ನಿಟ್ಟುಕೊಂಡೇ ಅವರು ಸಂಶೋಧನೆಗಳನ್ನು ಮುಂದುವರಿಸಿದ್ದಾರೆ. ಈ ವಿಚಾರವನ್ನು ಅವರ ಉಚಿತ ಪುಸ್ತಕದಲ್ಲೂ ಗಮನಿಸಬಹುದು. ಹಲವು ವರ್ಷಗಳ ಸಂಶೋಧನೆ ಮತ್ತು ರೋಗಿಗಳ
ಅಧ್ಯಯನದಿಂದ ರೂಪುಗೊಂಡ ಅವರ ಬುಕ್ ಲೆಟ್ ಎಲ್ಲರಿಗೂ ಉಚಿತ ಮಾತ್ರವಲ್ಲ, ಅದನ್ನು ಡಿಜಿಟಲ್ ರೂಪ ದಲ್ಲಿ ಎಲ್ಲರೂ ಬಳಸುವಂತೆ ಅವರು ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅಂದರೆ, ಸಾಧ್ಯವಿರು ವವರು ಡಿಜಿಟಲ್ ರೂಪದಲ್ಲೇ ಓದಲಿ ಮತ್ತು ಅಷ್ಟರ ಮಟ್ಟಿಗೆ ಕಾಗದ ತಯಾರಿಸಲು ಬೇಕಾದ ಮರಗಳ ರಕ್ಷಣೆ ಯಾಗಲಿ ಎಂಬ ಉದ್ದೇಶವೂ ಇದೆ!

ಇಷ್ಟು ಹೇಳಿಬಿಟ್ಟರೆ, ಖಾದರ್ ಅವರ ಸಮಗ್ರ ಚಿಂತನೆಯ ಸ್ವರೂಪವನ್ನು ಪೂರ್ತಿಯಾಗಿ ಗ್ರಹಿಸಿದಂತಾಗುವುದಿಲ್ಲ. ಆರಂಭದಲ್ಲಿ ತಮ್ಮ ಜನಪ್ರಿಯ ಭಾಷಣಗಳಲ್ಲಿ ಮುಖ್ಯವಾಗಿ ಮಧುಮೇಹ, ಹೊಟ್ಟೆಯ ಸಮಸ್ಯೆಗಳ ಕುರಿತು ವಿವರವಾಗಿ ಮಾತನಾಡುತ್ತಿದ್ದರು; ಹೆಚ್ಚು ನಾರಿನಂಶ ಇರುವ ಆಹಾರ ಸೇವಿಸಿದರೆ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಜತೆಯಲ್ಲೇ, ಜನರು ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿದರೆ, ನಮ್ಮ ರಾಜ್ಯದ, ದೇಶದ, ಜಗತ್ತಿನ ಕಾಡುಗಳು ಬದುಕಿಕೊಳ್ಳುತ್ತವೆ ಎಂದೂ ಹೇಳಿದ್ದರು. ಜನಸಾಮಾನ್ಯರಿಗೆ ಇದು ತಕ್ಷಣ ಅರ್ಥವಾಗದೇ ಹೋಗಬಹುದು: ನಾವೆಲ್ಲರೂ ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡಿದರೆ, ಪಶ್ಚಿಮ ಘಟ್ಟದ ತಪ್ಪಲಿನ ಕಾಡು ಅದು ಹೇಗೆ ಉಳಿದು ಕೊಳ್ಳುತ್ತದೆ? ಉತ್ತರ ಸರಳ: ಸಕ್ಕರೆ ತಯಾರಿಸಲು ಕಬ್ಬನ್ನು ಬೆಳೆಸಬೇಕು; ಕಬ್ಬು ಬೆಳೆಯಲು ಅಪಾರ ಪ್ರಮಾಣದ ನೀರು ಬೇಕು; ಆ ನೀರನ್ನು ಒದಗಿಸಲು/ಪಂಪ್ ಮಾಡಲು ವಿದ್ಯುತ್ ಪೂರೈಸಲು ಇನ್ನಷ್ಟು ಅಣೆಕಟ್ಟುಗಳನ್ನು ಕಟ್ಟಬೇಕು; ಒಂದೊಂದು ಅಣೆಕಟ್ಟಿನ ನಿರ್ಮಾಣ ಎಂದರೆ ಅದೆಷ್ಟೋ ಸಾವಿರ ಎಕರೆ ಕಾಡಿನ ನಾಶವಾಗಲೇಬೇಕು; ನಮ್ಮ ರಾಜ್ಯದ ಹಲವು ಜಲಾಶಯಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಆದ್ದರಿಂದ ಸಕ್ಕರೆಯ ಸೇವನೆಯನ್ನು ತಗ್ಗಿಸಿದರೆ ಅತ್ತ ಕಾಡೂ ಉಳಿಯುತ್ತದೆ, ಇತ್ತ ನಮ್ಮ ಪರಿಸರವೂ ಆರೋಗ್ಯ ವನ್ನು ಪಡೆಯುತ್ತದೆ, ಜನರ ಆರೋಗ್ಯವೂ ಸುಧಾರಿಸುತ್ತದೆ ಎಂಬ ಅವರ ಪ್ರತಿಪಾದನೆಯು ಬಹು ದೂರಗಾಮಿ ಚಿಂತನೆಯ ಫಲ. ಇಂದು ಹಳ್ಳಿ ಹಳ್ಳಿಗಳಲ್ಲೂ ಮಧುಮೇಹ ಸಾಮಾನ್ಯ ಎನಿಸಿದೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ನಡಿಗೆ ಮತ್ತು ಇತರ ವ್ಯಾಯಾಮಗಳು ಕಡಿಮೆಯಾಗಿದ್ದು. ಇನ್ನೊಂದು ಮುಖ್ಯ ಕಾರಣ, ಸಕ್ಕರೆ ಹಾಕಿದ ಚಹಾ/ಕಾಫಿ ಯನ್ನು ಆಗಾಗ ಕುಡಿಯುವುದು, ಸಿಹಿತಿನಿಸು, ಐಸ್‌ಕ್ರೀಮ್, ಚಾಕೊಲೇಟ್ ಸೇವನೆ ಇತ್ಯಾದಿ.

ಜತೆಗೆ, ಖಾದರ್ ವಲಿಯವರು ಪ್ರಧಾನವಾಗಿ ಪ್ರಸ್ತಾಪಿಸುವ ವಿಚಾರವೆಂದರೆ, ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚು ಬಳಸುವುದರಿಂದ, ಅನ್ನವನ್ನು ತಿಂದಾಕ್ಷಣ ದೇಹದಲ್ಲಿ ಸಕ್ಕರೆಯ ಅಂಶ ಏರುತ್ತದೆ. ಅದನ್ನು ಕರಗಿಸಲು ಸೂಕ್ತ ವ್ಯಾಯಾಮ ಮಾಡದಿರುವುದರಿಂದ, ಕ್ರಮೇಣ ಮಧುಮೇಹ ಬರುತ್ತದೆ ಎಂಬ ವಿಚಾರ. ಇದಕ್ಕೆ ಅವರು ಸೂಚಿಸಿ ರುವ ಒಂದು ಸರಳ ಪರಿಹಾರವೆಂದರೆ, ಹೆಚ್ಚು ನಾರಿನಂಶ ಇರುವ ಸಿರಿಧಾನ್ಯ, ತರಕಾರಿಗಳನ್ನು ಸೇವಿಸುವುದು. ಅಕ್ಕಿಯ ಬದಲು ಸಿರಿಧಾನ್ಯಗಳಾದ ಸಾವೆ, ಆರ್ಕ ಅಕ್ಕಿಯ ಅನ್ನವನ್ನು ಸೇವಿಸುವುದರಿಂದ ನಾರಿನಂಶ ಜಠರಕ್ಕೆ ಸೇರುತ್ತದೆ.

ಆಗ ಆಹಾರದಲ್ಲಿನ ಗ್ಲೂಕೋಸ್ ನಿಧಾನವಾಗಿ ರಕ್ತಕ್ಕೆ ಬಿಡುಗಡೆಯಾಗಿ, ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎಂಬ ಅವರ ಪ್ರತಿಪಾದನೆಯು ಮೇಲ್ನೋಟಕ್ಕೆ ತೀರಾ ಲಾಜಿಕಲ್ ಎನಿಸುತ್ತದೆ. ಮಧುಮೇಹ ಉಂಟಾದಾಗ, ಅಕ್ಕಿಯ ಬದಲು ಗೋಧಿಯನ್ನು ಉಪಯೋಗಿಸುವಂತೆ ಕೆಲವು ವಲಯ ಗಳು ಸಲಹೆ ನೀಡಿದರೂ, ಅದು ಸೂಕ್ತವಲ್ಲ ಎಂದೇ ಖಾದರ್ ಪ್ರತಿಪಾದಿಸಿದ್ದಾರೆ. ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಸಾವೆ, ಆರ್ಕ, ನವಣೆ ಮೊದಲಾದ ಧಾನ್ಯಗಳನ್ನು ಅಕ್ಕಿಯ ಬದಲಿಗೆ ಉಪಯೋಗಿಸುವುದು ತುಂಬಾ ವೈಜ್ಞಾನಿಕ ಎಂದು ಹಲವು ಸ್ತರಗಳಲ್ಲಿ ಅವರು ಪ್ರತಿಪಾದಿಸಿ ದ್ದಾರೆ,

ಪ್ರತಿಪಾದಿಸುತ್ತಲೇ ಇದ್ದಾರೆ. ಕೆಲವು ದಶಕಗಳ ಹಿಂದೆ ನಮ್ಮ ರಾಜ್ಯದ ಬಯಲುಸೀಮೆಯಲ್ಲಿ ತೀರಾ ಸಾಮಾನ್ಯ ಆಹಾರವೆನಿಸಿದ್ದ ಈ ಸಿರಿಧಾನ್ಯಗಳು, ಕಳೆದ 3 ದಶಕಗಳಿಂದ ಹಿನ್ನೆಲೆಗೆ ಸರಿದಿರುವುದನ್ನು ಕಂಡಿದ್ದೇವೆ; ಅತಿ ಕಡಿಮೆ ಮಳೆ ಬೀಳುವ ಪ್ರದೇಶಗಳಾದ ಚಿತ್ರದುರ್ಗ, ಬಳ್ಳಾರಿ ಮೊದಲಾದೆಡೆ ಹಾರಕ (ಆರ್ಕ), ಸಾವೆಯಂಥ ಸಿರಿ ಧಾನ್ಯ ಬೆಳೆದು, ಅದರ ಅಕ್ಕಿಯನ್ನೇ ಉಪಯೋಗಿಸುತ್ತಿದ್ದರು. ಈಚೆಗೆ ನಾನಾ ಕಾರಣಗಳಿಂದಾಗಿ, ಅಕ್ಕಿ, ಅನ್ನ, ಗೋಧಿ ಮೊದಲಾದವುಗಳ ಬಳಕೆ ಜಾಸ್ತಿಯಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಮಧುಮೇಹ ಹೆಚ್ಚಳಗೊಳ್ಳಲು ಇದೂ ಒಂದು ಕಾರಣ ಎಂದಿದ್ದಾರೆ ಖಾದರ್.

ನಗರೀಕರಣದಿಂದಾಗಿ ಜನರು ಮರೆತಿರುವ ಸಾವೆ, ಆರ್ಕ ಮೊದಲಾದ ಧಾನ್ಯಗಳನ್ನು ಪುನಃ ಅಡುಗೆಗೆ ಬಳಸಲು ಜನರಿಗೆ ಸೂರ್ತಿ ನೀಡಲೆಂದು, ಇದರಿಂದ ತಯಾರಿಸಬಹುದಾದ ವಿವಿಧ ತಿನಿಸು, ಖಾದ್ಯಗಳ ಕುರಿತಾದ ಅಡುಗೆ ಪುಸ್ತಕಗಳನ್ನೂ ಅವರು ಒದಗಿಸಿದ್ದಾರೆ, ಪ್ರೋತ್ಸಾಹಿಸಿದ್ದಾರೆ. ಆರ್ಕ, ನವಣೆ ಬಳಸಿ, ದೋಸೆ, ಬಿಸಿಬೇಳೆ ಬಾತ್, ಪಲಾವ್ ಮತ್ತಿತರ ತಿನಿಸುಗಳನ್ನು ತಯಾರಿಸಲು ಈಚಿನ ತಲೆಮಾರು ಉತ್ಸಾಹ ತೋರುತ್ತಿದೆ ಎಂದಾದರೆ, ಅದರಲ್ಲಿ ಖಾದರ್ ವಲಿ ಅವರ ಕೊಡುಗೆ ಬಹು ಮುಖ್ಯ.

ಅವರ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಿರುವ ಒಂದು ಪುಸ್ತಕ ಎಂದರೆ, ‘ಆರೋಗ್ಯಕರ ಜೀವನಕ್ಕೆ ಮತ್ತು ರೋಗನಿವಾರಣೆಗೆ ಸಿರಿಧಾನ್ಯ ಮತ್ತು ಕಷಾಯಗಳು’ (ಸಿರಿಧಾನ್ಯ ಆಂಡ್ ಕಷಾಯ ಫಾರ್ ಲೀಡಿಂಗ್ ಹೆಲ್ದಿ ಲೈಫ್ ಅಂಡ್‌ ಕ್ಯೂರಿಂಗ್ ಡಿಸೀಸ್). ಅಮೆರಿಕದಲ್ಲಿ ಸಂಶೋಧನೆ ನಡೆಸುತ್ತಿದ್ದ ಖಾದರ್ ಅವರು 3 ದಶಕಗಳ ಹಿಂದೆ
ಭಾರತಕ್ಕೆ ಹಿಂದಿರುಗಿ, ಹೋಮಿಯೋಪತಿ ಅಧ್ಯಯನ ಮಾಡಿ, ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಸಿರಿಧಾನ್ಯಗಳು, ಕಷಾಯಗಳ ಬಳಕೆ ಮತ್ತು ದೇಹಕ್ಕೆ ಅಗತ್ಯವಿರುವ ವ್ಯಾಯಾಮದ ಪ್ರಾಮುಖ್ಯವನ್ನು ತಿಳಿಸುವ ಮೂಲಕ, ಅವರು ಹಲವು ರೋಗಿಗಳ ಆರೋಗ್ಯವನ್ನು ಉತ್ತಮಪಡಿಸಿದ್ದಾರೆ ಎನ್ನುತ್ತದೆ ಅವರ ವೆಬ್‌ಸೈಟ್. ಮಧುಮೇಹದಿಂದಾಗಿ
ಗ್ಯಾಂಗ್ರೀನ್ ಆಗಿ ಕಾಲು ಕತ್ತರಿಸುವ ಸ್ಥಿತಿಯಲ್ಲಿದ್ದ ರೋಗಿಗಳನ್ನು ಸಹ ಗುಣಪಡಿಸಿ, ಕಾಲನ್ನು ಉಳಿಸಿಕೊಟ್ಟಿದ್ದಾ ರೆಂಬ ವಿವರಗಳೂ ಇವೆ.

ಅಮೆರಿಕದಿಂದ ವಾಪಸಾದ ಅವರು, ನಮ್ಮ ರಾಜ್ಯದಲ್ಲಿ ಅಲ್ಲಲ್ಲಿ ಉಳಿದುಕೊಂಡಿದ್ದ ಸಾವೆ, ನವಣೆ, ಆರ್ಕ, ಊದಲು, ಕೊರ‍್ಲೆ ಮೊದಲಾದ ಸಿರಿಧಾನ್ಯಗಳ ಬೀಜಗಳನ್ನು ಸಂಗ್ರಹಿಸಿ, ಹೆಗ್ಗಡದೇವನ ಕೋಟೆ ಸಮೀಪದಲ್ಲಿ ಬಿತ್ತನೆ ಮಾಡಿ, ಬೆಳೆದರು; ಈಗ ಅವರು ಸುಮಾರು ೩೮ಕ್ಕೂ ಅಧಿಕ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ.

ಅದಕ್ಕೆ ಅವರು ಉಪಯೋಗಿಸುವುದು ‘ಕಾಡುಚೈತನ್ಯ ದ್ರಾವಣ’. ಜಂಗಲ್ ಕೃಷಿ ಎಂಬುದು ಅವರ ಇನ್ನೊಂದು ಪರಿಕಲ್ಪನೆ. ಹೆಚ್ಚು ನೀರಾವರಿ ಬಯಸದ ಕೃಷಿಪದ್ಧತಿ ಅದು. ನಮ್ಮ ದೈನಂದಿನ ದಿನಚರಿಯೂ ಸರಳವಾಗಿರಬೇಕು
ಎಂದು ಸಲಹೆ ನೀಡುವ ಅವರು, ಇಜ್ಜಲಿನಿಂದ ಹಲ್ಲುಜ್ಜುವುದನ್ನು ಪ್ರೋತ್ಸಾಹಿಸುತ್ತಾರೆ! ಸಿರಿಧಾನ್ಯದ ಹಿಟ್ಟಿನಿಂದ ತಯಾರಿಸಿದ ಗಂಜಿ (ಹುದುಗುಬರಿಸಿದ್ದು) ಸೇವಿಸಿದರೆ, ಹೊಟ್ಟೆಯ ಸಮಸ್ಯೆಗಳು ವಾಸಿಯಾಗಿ, ದೇಹವು ಪುನಶ್ಚೇತನ ಗೊಳ್ಳುತ್ತದೆ ಎಂಬ ಅವರ ಪ್ರತಿಪಾದನೆಯು ಸರಳ ಜೀವನದ ಮಹತ್ವವನ್ನು ತಿಳಿಸುತ್ತದೆ.

ಸಿರಿಧಾನ್ಯದ ಬಳಕೆ ಸಾರ್ವತ್ರಿಕವಾಗಿರಬೇಕು ಎಂಬುದರ ಜತೆಯೇ, ಜನರು ಈ ಕೆಲವು ಸರಳ ಪದ್ಧತಿಗಳನ್ನು ಬಳಸಿದರೆ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತದೆ ಅವರ ವೆಬ್‌ಸೈಟ್: ಬೆಳಗ್ಗೆ ಮೊದಲಿಗೆ ಸೂರ್ಯನ ಬೆಳಕನ್ನು 10 ನಿಮಿಷ ನೋಡಿದ ನಂತರ, ಧ್ಯಾನ; ಪ್ರತಿದಿನ 75 ನಿಮಿಷ ನಡಿಗೆ- ವೇಗದ ನಡಿಗೆಗಿಂತ ಹೆಚ್ಚು ಹೊತ್ತು ನಡೆಯು ವುದು ಮುಖ್ಯ; ಮಾಮೂಲಿ ನೀರಿನಿಂದ ಸ್ನಾನ (ಬಿಸಿನೀರು ಬೇಕಿಲ್ಲ); ಸೂಕ್ತ ಎಲೆಗಳನ್ನು ಬಳಸಿ ಕಷಾಯ ಸೇವನೆ; ಅಕ್ಕಿ, ಗೋಧಿ, ಮಾಂಸಾಹಾರ, ಮೈದಾ, ಟೀ, ಚಹ, ಸಕ್ಕರೆ, ಹಾಲು, ರಿಫೈನ್ಡ್ ಆಯಿಲ್, ಡ್ರೈಫ್ರೂಟ್ ಸೇವನೆಯನ್ನು ನಿಲ್ಲಿಸುವುದು; ದಿನಕ್ಕೆ 2 ಊಟ; ಸ್ಥಳೀಯ ಹಸುಗಳ ಹಾಲಿನಿಂದ ತಯಾರಿಸಿದ ಮಜ್ಜಿಗೆ ಸೇವನೆ; ತೆಂಗು, ಶೇಂಗಾ ದಿಂದ ತಯಾರಿಸಿದ ಹಾಲಿನ ಬಳಕೆ; ಸಂಜೆ 10 ನಿಮಿಷ ಸೂರ್ಯನ ಕಿತ್ತಳೆ ಬಣ್ಣದ ಕಿರಣಗಳನ್ನು ನೋಡುವುದು; ರಾತ್ರಿ ನಿದ್ರಿಸುವಾಗ ಪರಿಸರವು ಪೂರ್ಣ ಕತ್ತಲಾಗಿರುವಂತೆ ನೋಡಿಕೊಳ್ಳುವುದು, ಪ್ರತಿದಿನ ಸಸ್ಯ, ಮರಗಳ ನಡುವೆ ಓಡಾಟ, ಇತರರಿಗೆ ಸಹಾಯ ಮಾಡುವುದು ಇತ್ಯಾದಿ. ಇದರ ಹೆಚ್ಚಿನ ವಿವರಗಳು ಅವರ ವೆಬ್‌ಸೈಟ್‌ನಲ್ಲಿ (www.
manavata.org/khadervali/) ಲಭ್ಯ.

ಬೇರೆ ಬೇರೆ ಎಲೆಗಳ್ನು ಬಳಸಿ ಕಷಾಯ ತಯಾರಿಸುವ ವಿಧಾನವನ್ನೂ ಅವರು ನೀಡಿದ್ದಾರೆ. ಈಚಿನ ವರ್ಷಗಳಲ್ಲಿ ಅಂಬಲಿಯ ಮಹತ್ವವನ್ನು ಅವರು ಒತ್ತಿ ಹೇಳುತ್ತಿರುವುದು ವಿಶೇಷ ಎನಿಸಿದೆ. ಸಿರಿಧಾನ್ಯದ ಹಿಟ್ಟಿನಿಂದ ತಯಾರಿಸಿ, 6-8 ಗಂಟೆಗಳ ಕಾಲ ಇಟ್ಟು, ಹುದುಗು ಬರಿಸಿದ ಈ ಅಂಬಲಿಯು, ಹೊಟ್ಟೆಯ ಆರೋಗ್ಯವನ್ನುಸುಧಾರಿಸಿ, ಆ
ಮೂಲಕ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರ ವಿಡುವುದರಿಂದ, ಅದು ಅಮೃತ ಸಮಾನ ಎನ್ನುವ ಅವರ ಮಾತುಗಳು, ನಮ್ಮ ಜನರ, ಮುಖ್ಯವಾಗಿ ನಗರವಾಸಿಗಳ ಗಮನಕ್ಕೆ ಬರುವ ಅವಶ್ಯಕತೆಯಿದೆ.

ಇಂದಿನ ವಾಣಿಜ್ಯಕ ಸಮಾಜದಲ್ಲಿ, ಜನಸಾಮಾನ್ಯರ ಆರೋಗ್ಯ ಸುಧಾರಿಸಲು ಉಚಿತವಾಗಿ ಹಲವು ಸಲಹೆಗಳನ್ನು ನೀಡುವ, ಅದರಲ್ಲಿ ಸಂಶೋಧನೆ ನಡೆಸಿ ಅದರ ಸಾರವನ್ನು ಜನರಿಗೆ ಒದಗಿಸುವ ಡಾ. ಖಾದರ್ ವಲಿ, ತಮ್ಮ ಉದಾತ್ತ ಮನೋಭಾವದಿಂದಾಗಿ ವಿಶಿಷ್ಟ ಎನಿಸುತ್ತಾರೆ.

ಇದನ್ನೂ ಓದಿ: Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !