Sunday, 24th November 2024

Shashidhara halady Column: ಕನ್ನಡ ಶಾಲೆ ಓದುವಾಗ ಬುತ್ತಿ ಊಟ

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಹಾಲಾಡಿಯಲ್ಲಿದ್ದ ‘ಕಕ್ಕುಂಜೆ ಬಂಡಸಾಲೆ’ಯನ್ನು ಉರುಳಿಸಲಾಯಿತು ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಕಾಡಿನ ನಡುವೆ ತಲೆ ಎತ್ತಿದ್ದ ಮಾರಿಕಾನು ದೇವಸ್ಥಾನದ ಹತ್ತಿರವಿದ್ದ ಆ ಬಂಡಸಾಲೆ ಎಂಬ ಹೆಸರಿನಕಟ್ಟಡದ ಗೋಡೆಗಳು ಉರುಳಿಬಿದ್ದ ಫೋಟೋ ಕಂಡಾಗ, ಹಳೆಯ ನೆನಪುಗಳು ಮನಃ ಪಟಲದಲ್ಲಿ ಹಾದುಹೋದವು.

ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಾನು ಓದಿದ ಪ್ರಾಥಮಿಕ ಶಾಲೆಯ ನೆನಪಾಗುತ್ತಿದೆ. ನಮ್ಮೂರಿನ ಆ ಶಾಲೆಯು ಸಂಪೂರ್ಣ ಕನ್ನಡಮಯ! ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ, ಐದನೆಯ ತರಗತಿಯಿಂದ
ಕಲಿಸಲಾಗುತ್ತಿತ್ತು; ಅದನ್ನು ಕಲಿಯುವುದೆಂದರೆ, ನಮಗೆ ಕಬ್ಬಿಣದ ಕಡಲೆ. ಇಂಗ್ಲಿಷ್ ಸಬ್ಜೆಕ್ಟ್ ಬದಲು, ಅದನ್ನು ಕನ್ನಡದಲ್ಲೇ ಬರೆಯುವಂತಿದ್ದರೆ ಎಷ್ಟು ಚೆನ್ನ ಎಂದು ನಾವೆಲ್ಲಾ ಅಂದುಕೊಳ್ಳುತ್ತಿದ್ದೆವು. ಆ ಶಾಲೆಯಲ್ಲಿ ನಾವು ಕಲಿತ ಕನ್ನಡ, ಅಲ್ಲಿನ ಸರಳವಾದ ಕೊಠಡಿಗಳು, ಪುಟ್ಟ ಪುಟ್ಟ ಬೆಂಚು ಎಲ್ಲವೂ ನೆನಪಿನ ಮೂಲೆಯಲ್ಲಿ ಭದ್ರವಾಗಿ ಕುಳಿತಿವೆ.

ನಮ್ಮ ಕನ್ನಡ ಶಾಲೆ ತುಸು ಚಿಕ್ಕದು, ಎಲ್ಲಾ ತರಗತಿಗಳಿಗೆ ಜಾಗವಿರಲಿಲ್ಲ. ಆದ್ದರಿಂದ, ಏಳನೆಯ ತರಗತಿಯನ್ನು, ರಸ್ತೆ ಪಕ್ಕದ ಇನ್ನೊಂದು ಪುಟ್ಟ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿದ್ದರು. ಅದೇ ಕಟ್ಟಡದಲ್ಲಿ ಮುಖ್ಯೋಪಾಧ್ಯಾಯರ ಕೊಠಡಿಯೂ ಇತ್ತು. ಆದ್ದರಿಂದ, ಇದೇ ಪ್ರಧಾನ ಕಚೇರಿ ಇದ್ದಂತೆ!

ನಾವೆಲ್ಲಾ ಮಧ್ಯಾಹ್ನ ಬುತ್ತಿ ಊಟ ಮಾಡಲು, ಶಾಲೆಯಲ್ಲಿ ಸೂಕ್ತ ಸ್ಥಳಾವಾಕಾಶ ಇಲ್ಲದೇ ಇದ್ದುದರಿಂದ,
ಬಂಡ ಸಾಲೆ ಎಂಬ ಕಟ್ಟಡದಲ್ಲಿ ಊಟ ಮಾಡುತ್ತಿದ್ದವು. ಶಾಲೆಯಿಂದ ನೂರು ಮೀಟರ್ ದೂರದಲ್ಲಿದ್ದ ಬಂಡ ಸಾಲೆ ಕಟ್ಟಡಕ್ಕೆ ಪ್ರತಿದಿನ ಮಧ್ಯಾಹ್ನ ಹೋಗಿ ಊಟ ಮಾಡುವುದೂ ಒಂದು ವಿಶೇಷ ಅನುಭವ! ಆದರೆ, ಹಾಲಾಡಿ ಹಳೆಪೇಟೆಯಲ್ಲಿದ್ದ ‘ಕಕ್ಕುಂಜೆ ಬಂಡಸಾಲೆ’ಯನ್ನು ಇತ್ತೀಚೆಗೆ ಉರುಳಿಸಲಾಯಿತು ಎಂಬ ಸುದ್ದಿ ಕೇಳಿ, ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ನೋವು ಮೂಡಿದ್ದು ಸುಳ್ಳಲ್ಲ.

ಕಾಡಿನ ನಡುವೆ ತಲೆ ಎತ್ತಿದ್ದ ಮಾರಿಕಾನು ದೇವಸ್ಥಾನದ ಹತ್ತಿರ ಮುಖ್ಯರಸ್ತೆಗೆ ಹೊಂದಿಕೊಂಡಂತಿದ್ದ ಆ ಬಂಡಸಾಲೆ ಎಂಬ ಹೆಸರಿನ ಕಟ್ಟಡದ ಗೋಡೆಗಳು ಉರುಳಿಬಿದ್ದ ಫೋಟೋ ಕಂಡಾಗ, ಹಲವು ಹಳೆಯ ನೆನಪುಗಳ
ಮೆರವಣಿಗೆ ಮನಃಪಟಲದ ಮೇಲೆ ಹಾದುಹೋಯಿತು. ಆ ನೆನಪುಗಳಲ್ಲಿ, ಪ್ರತಿ ಮಧ್ಯಾಹ್ನ ಆ ಕಟ್ಟಡದಲ್ಲಿ ಬುತ್ತಿಯೂಟ ಮಾಡಿದ್ದು, ಅಲ್ಲಿಂದ ಶಾಲೆಗೆ ಓಡಿಹೋಗಿ ಕನ್ನಡದ ಪಾಠಗಳನ್ನು ಕಲಿತದ್ದೂ ಸೇರಿವೆ!

ಹಾಲಾಡಿಯ ಹಳೆಪೇಟೆಯಲ್ಲಿದ್ದ ಸರಕಾರಿ ಶಾಲೆಗೆ ನಮ್ಮ ಮನೆಯಿಂದ ಸುಮಾರು 3 ಕಿ.ಮೀ. ದೂರ. ಮೊದಲ 2 ಕಿ.ಮೀ. ದಾರಿಯು ಗದ್ದೆ, ಬೈಲು, ತೋಡು, ಸಂಕ, ಹಕ್ಕಲು, ಹಾಡಿ, ಗುಡ್ಡೆಗಳನ್ನು ದಾಟಿ ಸಾಗಿದರೆ, ಕೊನೆಯ ಒಂದು ಕಿ.ಮೀ. ದಾರಿಯು ಟಾರು ರಸ್ತೆಯ ಮೇಲೆ ಸಾಗುತ್ತದೆ. ಪ್ರತಿದಿನ ಬೆಳಗ್ಗೆ 3 ಕಿ.ಮೀ. ಸಂಜೆ 3 ಕಿ.ಮೀ. ನಡೆಯುವಾಗ, ಸುತ್ತಲೂ ಪ್ರಕೃತಿಯ ಬಯಲು ರಂಗಭೂಮಿ, ಪರಿಸರದ ಪ್ರಾಥಮಿಕ ಪಾಠಗಳ ಶಿಕ್ಷಣಶಾಲೆ. ಇದೇ ದಾರಿಯಲ್ಲಿ ಸಿಗುವ ಹಂದಿ ಕೊಡ್ಲು ಬೈಲಿನ ಬಳಿಯಿದ್ದ ಕೆಲವೇ ಪುರಾತನ ಅಡಿಕೆ ಮರಗಳ ತೋಟದಲ್ಲಿ ನಾನು ಹಾರುವ ಓತಿಯನ್ನು ಮೊದಲ ಬಾರಿ ಕಂಡದ್ದು. ತನ್ನ ಕುತ್ತಿಗೆ ಕೆಳಭಾಗದಲ್ಲಿದ್ದ ಅರ್ಧ ಇಂಚಿನ ಹಳದಿ ನಾಲಗೆಯಂಥ
ರಚನೆಯನ್ನು ಅದು ಮುಂದಕ್ಕೆ ಆಗಾಗ ಚಾಚುತ್ತಾ, ಒಂದು ಮರದಿಂದ ಇನ್ನೊಂದು ಮರಕ್ಕೆ ಗ್ಲೈಡ್ ಮಾಡುತ್ತಾ ಹಾರುವ ಅದರ ನೋಟವೇ ಚಂದ. ಆ ವಿಶಿಷ್ಟ ಜೀವಿಯನ್ನು ‘ಓಂತಿ’ ಎನ್ನುತ್ತಿದ್ದರು ನಮ್ಮೂರಿನವರು.

ಅದಿರಲಿ, ಆ ದಾರಿಯಲ್ಲಿ ಪ್ರತಿದಿನ ಶಾಲೆಗೆ ನಡೆದು ಹೋಗಲು ಮುಕ್ಕಾಲು ಗಂಟೆ ಬೇಕು. ಆದ್ದರಿಂದ ಪ್ರತಿದಿನ ಬೆಳಗ್ಗೆ, ಬುತ್ತಿ ಊಟ ತೆಗೆದುಕೊಂಡು ಹೋಗುತ್ತಿದ್ದೆವು. ಒಂದು ಪುಟಾಣಿ ಅಲ್ಯುಮಿನಿಯಂ ಉಗ್ಗದ ಪಾತ್ರೆಯಲ್ಲಿ ಗಂಜಿ, ಮೊಸರು, ಉಪ್ಪಿನ ಕಾಯಿಯನ್ನು ಮನೆಯಲ್ಲಿ ಹಾಕಿಕೊಡುತ್ತಿದ್ದರು. ಆಗಿನ ದಿನಗಳಲ್ಲಿ ನಮ್ಮ ಹಾಲಾಡಿ ಸರಕಾರಿ ಶಾಲೆಯಲ್ಲಿ ಕೈತೊಳೆಯುವ ನೀರಿನ ಅನುಕೂಲತೆ ಇರಲಿಲ್ಲ. ಆದ್ದರಿಂದಲೇ ಇರಬೇಕು, ಆ ಬಂಡಸಾಲೆ ಕಟ್ಟಡದ ಉಪ್ಪರಿಗೆಯ ಹಜಾರದಲ್ಲಿ ನಾವು ಕೆಲವು ಮಕ್ಕಳು ಬುತ್ತಿ ಪಾತ್ರೆ ಇಡುತ್ತಿದ್ದೆವು. ಅಲ್ಲಿನ ಉದ್ದನೆಯ ಹಜಾರದ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬರು ಬುತ್ತಿ ಪಾತ್ರೆ ಇಡುವ ಪರಿಪಾಠ.

ಮಧ್ಯಾಹ್ನದ ಊಟದ ಬೆಲ್ ಆದ ಕೂಡಲೆ, ಆ ಮಜಬೂತಾದ ಮನೆಗೆ ಬಂದು, ಮಹಡಿಯಲ್ಲಿಟ್ಟಿದ್ದ ಬುತ್ತಿ ಊಟ ಮಾಡಿ, ಅಲ್ಲಿ ವಾಸವಿದ್ದ ಹಿರಿಯಣ್ಣ ನಾಯಕ ಕುಟುಂಬದವರು ನಮಗಾಗಿ ಸಿದ್ಧಪಡಿಸಿ ಇಡುತ್ತಿದ್ದ ಕೈತೊಳೆಯುವ ಜಾಗದಲ್ಲಿ ಬುತ್ತಿ ಪಾತ್ರೆ ಮತ್ತು ಕೈ ತೊಳೆದು, ಶಾಲೆಗೆ ಹೋಗುತ್ತಿದ್ದೆವು. ಊಟದ ನಂತರ ಕುಡಿಯುವ ನೀರನ್ನು
ನೀಡುವ ಪುಣ್ಯದ ಕೆಲಸವನ್ನೂ ಆ ಮನೆಯವರು ಮಾಡುತ್ತಿದ್ದರು. ಸಂಜೆ ಮನೆಗೆ ಹೋಗುವಾಗ, ಅಲ್ಲಿಂದ ಬುತ್ತಿ ಪಾತ್ರೆಯನ್ನು ತೆಗೆದುಕೊಂಡು, ಕಾಡಿನ ದಾರಿ ಹಿಡಿದು ಮನೆಯತ್ತ ನಡಿಗೆ. ಈ ರೀತಿ ದೂರದಿಂದ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಬುತ್ತಿ ಪಾತ್ರೆ ಇಡಲು ಜಾಗ ಕೊಟ್ಟಿದ್ದವರು,

ಹಿರಿಯಣ್ಣ ನಾಯಕರು. ಆಗ ಹಾಲಾಡಿ ಶಾಲೆಯಲ್ಲಿ ಸುಮಾರು 300 ಮಕ್ಕಳಿದ್ದರು; ಅವರಲ್ಲಿ 150 ಮಕ್ಕಳಾದರೂ ಇದೇ ರೀತಿ ಬುತ್ತಿ ತರುತ್ತಿದ್ದವರು. ಎಲ್ಲರಿಗೂ ಅಲ್ಲೆಲ್ಲಿ ಜಾಗ ಸಾಕಾದೀತು? ನಾವು ಏಳೆಂಟು ಮಕ್ಕಳು ಅಲ್ಲಿ ಬುತ್ತಿ ಇಡುತ್ತಿದ್ದೆವು. ಅವರು ಯಾವ ಮನೆಯವರು, ಏನು ಎತ್ತ ಎಂದು ವಿಚಾರಿಸದೇ, ಆ ವಿಶಾಲ ಉಪ್ಪರಿಗೆಯಲ್ಲಿ ಬುತ್ತಿ ಇಡಲು ಅವರ ಪೂರ್ಣ ಅನುಮತಿ ಇತ್ತು. ಶಾಲೆಗೆ ಹೋಗುವ ಮಕ್ಕಳಿಗೆ ಸಹಾಯ ಮಾಡುವುದೆಂದರೆ ಅವರಿಗೆ ಬಲು ಇಷ್ಟ. ಹಾಗಂತ, ಹಿರಿಯಣ್ಣ ನಾಯಕರು ಆ ಬಂಡಸಾಲೆ ಎಂಬ ಗಟ್ಟಿಮುಟ್ಟಾದ ಕಟ್ಟಡದ ಮಾಲೀಕರಲ್ಲ!

ಅವರು ಅಲ್ಲಿ ಬಾಡಿಗೆಗೆ ಇರುವವರು! ಜತೆಗೆ, ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದ ಆ ಕಟ್ಟಡದ ಮುಂಭಾಗದ ಎರಡು ಮಳಿಗೆಗಳ ಪೈಕಿ ಒಂದರಲ್ಲಿದ್ದ ಪುಟ್ಟ ಹಳ್ಳಿ ಪೋಸ್ಟ್ ಆಫೀಸಿಗೆ ಅವರೇ ಪೋಸ್ಟ್ ಮಾಸ್ಟರ್! ಅವರು ಆ ಪುಟಾಣಿ ಪೋಸ್ಟ್ ಆಫೀಸಿಗೆ ಗೌರವ ಪೋಸ್ಟ್ ಮಾಸ್ಟರ್ ಆಗಿದ್ದರು. ಆದರೆ, ನಾನು ಬುತ್ತಿಊಟ ಇಡಲು ಆರಂಭಿಸಿದ ಒಂದೇ ವರ್ಷದ ಅವಧಿಯಲ್ಲಿ ಅವರ ಪೋಸ್ಟ್ ಮಾಸ್ಟರ್ ಹುದ್ದೆ ಬೇರೆಯವರ ಪಾಲಾಯಿತು.

ಆಗ ಹಿರಿಯಣ್ಣ ನಾಯಕರು, ತಮ್ಮ ಮನೆಯನ್ನು ಬದಲಿಸಿ, ಅದೇ ರಸ್ತೆಯಲ್ಲಿ ಒಂದು ಫರ್ಲಾಂಗು ದೂರದಲ್ಲಿರುವ ಇನ್ನೊಂದು ಹಂಚಿನ ಮನೆಗೆ ತಮ್ಮ ವಾಸವನ್ನು ಸ್ಥಳಾಂತರಿಸಿದರು. ಅದು ಸಹ ಬಾಡಿಗೆಯ ಕಟ್ಟಡ. ಅದರಲ್ಲೂ ಒಂದು ಪುಟ್ಟ ಮಳಿಗೆ ಇತ್ತು. ಅಲ್ಲಿ ಅವರು ಹಳ್ಳಿಮಟ್ಟದ ಒಂದು ಪುಟ್ಟ ಬಟ್ಟೆ ಅಂಗಡಿ ಆರಂಭಿಸಿದರು. ಜತೆಗೆ ತಮ್ಮ ಟೈಲರ್ ವೃತ್ತಿಗೆ ಮರುಚಾಲನೆ ನೀಡಿದರು. ಅವರ ಕಾರ್ಯಸ್ಥಳ ಬದಲಾದಾಗ, ನಾವು ಬುತ್ತಿ ಇಡುವ
ಜಾಗ ಸಹ ಅವರ ಹಿಂದೆಯೇ, ಅವರ ಹೊಸ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿತು.

ಇಲ್ಲಿ ಉಪ್ಪರಿಗೆ ಇರಲಿಲ್ಲ. ಕತ್ತಲು ತುಂಬಿದ ಅಲ್ಲಿನ ನಡುಮನೆಯ ಬುತ್ತಿ ಇಟ್ಟು, ಮಧ್ಯಾಹ್ನ ಊಟ ಮಾಡು ತ್ತಿದ್ದೆವು. ಈ ಮನೆ ತುಸು ಚಿಕ್ಕದು. ಆದರೆ ಹಿರಿಯಣ್ಣ ನಾಯಕರ ಮನಸ್ಸು ದೊಡ್ಡದು! ನಮ್ಮೂರಿನಲ್ಲಿ 3 ಬಂಡಸಾಲೆಗಳಿದ್ದವು. ಹಾಲಾಡಿ ನದಿಯ ತೀರದಲ್ಲಿದ್ದ ನಮ್ಮೂರಿಗೆ, ದೋಣಿಯ ಮೂಲಕ ಹಿಂದೆ ಉಪ್ಪು, ಹೆಂಚು ಮತ್ತಿತರ ಸಾಮಾನುಗಳನ್ನು 20 ಕಿ.ಮೀ. ದೂರದ ಕರಾವಳಿಯಿಂದ ತರುತ್ತಿದ್ದರು. ಇಲ್ಲಿಯ ತನಕ ‘ಬರತದ ನೀರು’
ಏರಿಕೊಂಡು ಬರುತ್ತಿತ್ತಾದ್ದರಿಂದ ದೋಣಿಯಲ್ಲಿ ಸಾಮಾನು ತುಂಬಿ ತರಲು ಸುಲಭ. ಇಲ್ಲಿ ಸಾಮಾನು ಇಳಿಸಿ, ಉಳ್ತಿಗ ಘಾಟಿಯ ಮೂಲಕ ಘಟ್ಟದ ಮೇಲೆ ಸಾಗಿಸುತ್ತಿದ್ದರು. ಆ ರೀತಿ ಸಾಮಾನು ಸಂಗ್ರಹಿಸಲು ನಿರ್ಮಿಸಿದ್ದ ಗಟ್ಟಿಮುಟ್ಟಾದ ಕಟ್ಟಡಗಳೇ ಬಂಡಸಾಲೆ ಗಳು. ಇವೆಲ್ಲಾ ಒಂದೆರಡು ಶತಮಾನದ ಹಿಂದಿನ ಕಥೆಗಳು.

ಬಂಡಸಾಲೆ ಕಟ್ಟಡದ ಕುರಿತು ಒಂದು ಭಾವನಾತ್ಮಕ ನೆನಪೂ ಸೇರಿಕೊಂಡಿದೆ. ಬಂಡಸಾಲೆ ಕಟ್ಟಡದ ಒಂದು ಮಳಿಗೆಯಲ್ಲಿದ್ದ ಪೋಸ್ಟ್ ಆಫೀಸಿಗೆ ನಾನು ಕಾಯಂ ಗಿರಾಕಿ. ಆಗ ಹಾಲಾಡಿಯಲ್ಲಿ ಮಧ್ಯಾಹ್ನ ಒಂದು ಗಂಟೆಯ ಸಮಯವು ಪತ್ರಗಳ ಬಟವಾಡೆಯ ಸಮಯ. 12 ಗಂಟೆಗೆ ಟಪಾಲ್ ಬಸ್ಸಿನಲ್ಲಿ ಅಂಚೆ ಬರುತ್ತಿತ್ತು. ಪ್ರತಿ ದಿನ ಬುತ್ತಿ
ಊಟವಾದ ಕೂಡಲೇ, ನಾನು ಪೋಸ್ಟ್ ಆಫೀಸಿನ ಮುಂದೆ ನಿಂತಿರುತ್ತಿದ್ದೆ. ಅಲ್ಲಿ ನನ್ನ ರೀತಿ ಕಾಗದಕ್ಕಾಗಿ
ಕಾಯುತ್ತಿರುವವರು ನಾಲ್ಕೆಂಟು ಮಂದಿ ಇರುತ್ತಿದ್ದುದು ಸಾಮಾನ್ಯ.

ನಾನು ಪೋಸ್ಟ್‌ಗೆ ಕಾಯುತ್ತಿದ್ದ ಕಾರಣವೆಂದರೆ, ನಮ್ಮಪ್ಪ ಆಗ ದೂರದ ಆಂಧ್ರದಲ್ಲಿ ಹೊಟೇಲ್ ಕೆಲಸದಲ್ಲಿದ್ದರು. ಅವರು ವಾರಕ್ಕೆ ಒಂದು ಕಾಗದ ಬರೆಯುತ್ತಿದ್ದು, ಅದು 3-4 ದಿನಗಳಲ್ಲಿ ಹಾಲಾಡಿಗೆ ಬರುತ್ತಿತ್ತು. ಅದರ ಜತೆ, ಊರಿನ ಯಾರಿಗೆ ಕಾಗದ ಬರುತ್ತೆ ಎಂದು ತಿಳಿಯುವ ಕುತೂಹಲವೂ ಅಲ್ಲಿ ನಿಲ್ಲುವಂತೆ ಮಾಡುತ್ತಿತ್ತು.

ಪೋಸ್ಟ್‌ಮ್ಯಾನ್ ಎಲ್ಲಾ ಕಾಗದಗಳಿಗೆ ಸೀಲು ಹೊಡೆದ ನಂತರ, ಅವುಗಳ ಮೇಲಿನ ಅಡ್ರೆಸ್ಸನ್ನು ದೊಡ್ಡದಾಗಿ ಓದು ತ್ತಿದ್ದರು; ಸ್ಪಷ್ಟತೆ ಇಲ್ಲದೇ ಇದ್ದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಓದಿ, ಅದಕ್ಕೊಂದು ಟಿಪ್ಪಣಿ ಹೇಳು ತ್ತಿದ್ದರು. ‘ಈ ಕಾಗ್ದ ಬಂದದ್ದು ಪುತ್ತೂರಿನಿಂದ. ಇಂಥವರ ಮಗಳನ್ನು ಅಲ್ಲಿಗೇ ಕೊಟ್ಟದ್ದು ಅಲ್ದಾ!’ ಆದ್ದರಿಂದ ಆ ದಿನ ಸಮಸ್ತ ಹಾಲಾಡಿಯಲ್ಲಿರುವ ಯಾರ್ಯಾರಿಗೆ ಏನೇನು ಪತ್ರಗಳು ಬಂದಿವೆ ಎಂದು ನಮಗೆಲ್ಲರಿಗೂ ಗೊತ್ತಾಗುತ್ತಿತ್ತು. ಕೆಲವರಿಗೆ ಕಾರ್ಡ್, ಕೆಲವರಿ ಇನ್ಲ್ಯಾಂಡ್ ಲೆಟರ್, ಇನ್ನು ಕೆಲವರಿಗೆ ಕವರುಗಳು! ಹಾಗಾಗಿ, ಅಂದಿನ ದಿನ ಗಳಲ್ಲಿ ಇದೂ ಒಂದು eನಾರ್ಜನೆಯ ವಿಧಾನ! ಒಂದು ರೀತಿಯಲ್ಲಿ ಇದು ‘ಅಬಚೂರಿನ ಪೋಸ್ಟ್ ಆಫೀಸೂ’ ಹೌದು!

ಆ ಕಲ್ಲಿನ ಕಟ್ಟಡವು ನಮ್ಮೂರಿನ ಮಟ್ಟಿಗೆ ಬೃಹತ್ ಮತ್ತು ಗಟ್ಟಿಮುಟ್ಟು. 19ನೆಯ ಶತಮಾನದಲ್ಲಿ, 20ನೆಯ ಶತಮಾನದ ಆರಂಭದಲ್ಲಿ, ಸಾಮಾನುಗಳನ್ನು ಭದ್ರವಾಗಿ ಪೇರಿಸಿಟ್ಟು, ಮಾರಾಟಕ್ಕೆ ಕಳುಹಿಸುತ್ತಿದ್ದ ವ್ಯಾಪಾರಸ್ಥರ ಗೋದಾಮು ಕ್ರಮೇಣ ತನ್ನ ಪ್ರಾಮುಖ್ಯ ಕಳೆದುಕೊಂಡಿತು. ಸ್ವಾತಂತ್ರ್ಯ ದೊರಕಿದ ನಂತರ, 1960ರ ದಶಕದಲ್ಲಿ, ಹಾಲಾಡಿಯ ದೊಡ್ಡ ಹೊಳೆಗೆ ಗಟ್ಟಿಮುಟ್ಟಾದ ಸೇತುವೆ ಯಾಯಿತು ಮತ್ತು ಕುಂದಾಪುರದಿಂದ ನೇರವಾಗಿ
ಶಿವಮೊಗ್ಗದ ಕಡೆಗೆ ಲಾರಿ, ಬಸ್ಸುಗಳು ಸಂಚರಿಸುವಂತಾಯಿತು; ವ್ಯಾಪಾರಸ್ಥರು ತಮ್ಮ ಸಾಮಾನುಗಳನ್ನು ಲಾರಿಗಳಲ್ಲಿ, ವ್ಯಾನುಗಳಲ್ಲಿ ಸಾಗಿಸತೊಡಗಿದರು. ಬಂಡಸಾಲೆಯ ಉಪಯೋಗ ಇಲ್ಲವಾಯಿತು. ನೂರಿನ್ನೂರು ವರ್ಷಗಳಷ್ಟು ಹಳೆಯ ದಾದ ಆ ಬಂಡಸಾಲೆ ಮೂಲೆಗುಂಪಾಯಿತು.

ಅದರ ಒಳಭಾಗದಲ್ಲಿ, ತೊಟ್ಟಿ ಮನೆಯಂಥ ಅಂಗಳವಿತ್ತು. ಅಲ್ಲಿ 2-3 ಕುಟುಂಬಗಳು ವಾಸವಿರುವಷ್ಟು ದೊಡ್ಡ ದಾದ ಜಾಗವೂ ಇತ್ತು. ಆದರೆ, ಅಲ್ಲಿದ್ದ ಬಾಡಿಗೆಯವರು ಒಬ್ಬೊಬ್ಬರಾಗಿ ಖಾಲಿ ಮಾಡಿದರು. ಅದರ ಮಾಲೀ ಕತ್ವವೂ ಬದಲಾಯಿತು. ನಮ್ಮ ಹಳ್ಳಿಯಲ್ಲಿ ಇನ್ನೂ ಎರಡು ಬಂಡಸಾಲೆಗಳಿದ್ದವು. ಅವುಗಳೂ ಮೂಲ ಉದ್ದೇಶವನ್ನು ಮರೆತು, ವಾಸಸ್ಥಳವಾಗಿ ಪರಿವರ್ತನೆಗೊಂಡಿವೆ. ಇವೆಲ್ಲಕ್ಕೂ ಮುಖ್ಯ ಕಾರಣ, ಹಳೆಯ ಶೈಲಿಯ
ವ್ಯಾಪಾರದ ವಿಧಾನ ಬದಲಾಗಿದ್ದು. ಅದರಲ್ಲೂ ಮುಖ್ಯವಾಗಿ, ರಸ್ತೆಗಡ್ಡಲಾಗಿದ್ದ ನದಿಗೆ ಸೇತುವೆಯಾಗಿದ್ದರಿಂದ, ಸಾಮಾನುಗಳನ್ನು ಅಲ್ಲಿ ಶೇಖರಿಸಿ ಇಡುವ ಪ್ರಮೇಯ ಇಲ್ಲವಾಯಿತು; ನೇರವಾಗಿ ಸಾಮಾನನ್ನು ಸಾಗಿಸುವ ಪರಿಪಾಠ ಆರಂಭವಾಯಿತು.

ಈ ರೀತಿ ನಮ್ಮ ಹಳ್ಳಿಗೆ ಒಂದು ಉತ್ತಮ ರಸ್ತೆಯಾಗಿ, ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಗೊಂಡು, ನೇರವಾದ ಸಾರಿಗೆಗೆ ಅವಕಾಶವಾಗಲು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರಬೇಕಾಯಿತು ಎಂಬುದು ಇಲ್ಲಿ ಮುಖ್ಯ ಎನಿಸುತ್ತದೆ. ಒಂದು ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯವು ಎಷ್ಟು ಪ್ರಮುಖ ಎಂಬುದನ್ನು ನಮ್ಮ ಹಳ್ಳಿಗೆ ತೋರಿಸಿ ಕೊಟ್ಟಿದ್ದು,
ಹಾಲಾಡಿ ಹೊಳೆಗೆ ೧೯೬೦ರ ದಶಕದಲ್ಲಿ ನಿರ್ಮಾಣಗೊಂಡ ಆ ಸೇತುವೆ.

ಬಂಡಸಾಲೆಯ ಆ ಗಟ್ಟಿಮುಟ್ಟಾದ ಕಟ್ಟಡವು ರಸ್ತೆ ಬದಿಯಲ್ಲಿ ತನ್ನಪಾಡಿಗೆ ತಾನು ಇತ್ತು. ಇಷ್ಟು ವರ್ಷಗಳ ಕಾಲ ಅದನ್ನು ಒಡೆಯದೇ ಹಾಗೆಯೇ ಇಟ್ಟಿದ್ದು ಸಹ ಒಂದು ಅಚ್ಚರಿ. ಈಗ ಅದು, ಕಾಲನ ಗರ್ಭ ಸೇರಿದೆ; ಆ ಕಟ್ಟಡವನ್ನು ಒಡೆದ ನಂತರ, ಅದಕ್ಕೆ ಬಳಸಿದ ಸಾವಿರಾರು ಕಲ್ಲುಗಳನ್ನು ಬೇರೆ ಕಡೆ ಸಾಗಿಸಿದರು. ನನ್ನ ಬಾಲ್ಯದ ಕನ್ನಡ ಮಾಧ್ಯಮ ಅಧ್ಯಯನದೊಂದಿಗೆ ತಳುಕು ಹಾಕಿಕೊಂಡಿದ್ದ ಆ ಒಂದು ಕಟ್ಟಡ ಈಗ ನೆನಪು ಮಾತ್ರ.

ಇದನ್ನೂ ಓದಿ: Shashidhara Halady Column: ಮುಳ್ಳು ಸೌತೆಯಲ್ಲಿ ಮುಳ್ಳು ಇರುತ್ತದಾ ?