Saturday, 14th December 2024

Shashikumar K Column: ಮಧ್ಯಪ್ರಾಚ್ಯವೀಗ ಸುಡುತ್ತಿರುವ ಕಡಾಯಿ !

ವಿಶ್ವ ಪರ್ಯಟನೆ

ಶಶಿಕುಮಾರ್‌ ಕೆ.

ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ ಎಂಬ ಗಾದೆ ಮಾತಿದೆ. ಈ ಮಾತಿನಂತೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನವೀಕರಿಸಲಾಗದ ಶಕ್ತಿ ಸಂಪನ್ಮೂಲಗಳ ಕೊರತೆ ಇದೆ. ಅದಕ್ಕಾಗಿ ನಾವು ಬೇರೆ ಯವರನ್ನು ಅವಲಂಬಿಸಿದ್ದೇವೆ. ಆದರೆ ಭಗವಂತನ ವರವೋ ಎಂಬಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಪುಲವಾದ ಪೆಟ್ರೋಲಿಯಂ ನಿಕ್ಷೇಪಗಳಿದ್ದು ಜಗತ್ತಿನಾದ್ಯಂತ ಈ ಇಂಧನಗಳಿಗೆ ಭಾರೀ ಬೇಡಿಕೆ ಇದೆ. ಆದರೆ ಈ ಇಂಧನಗಳ ಲಭ್ಯತೆ ಇರುವಂತಹ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಾತ್ರ ಶಾಂತಿ ಮತ್ತು ನೆಮ್ಮದಿ ಇಲ್ಲದಂತಾಗಿದೆ.

ಕ್ರಮೇಣವಾಗಿ ಒಂದೊಂದೇ ರಾಷ್ಟ್ರ ಅರಾಜಕತೆಯ ತಾಣಗಳಾಗಿ ಮಾರ್ಪಾಡಾಗುತ್ತಿವೆ. ಈ ರಾಷ್ಟ್ರಗಳಲ್ಲಿ ಬದು ಕುವುದೇ ದುಸ್ತರವಾಗುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರವಾದ ಇಸ್ರೇಲ್ ತನಗೆ ಸದಾ ಕಾಟ ಕೊಡುತ್ತಿದ್ದ ನೆರೆಯ ರಾಷ್ಟ್ರಗಳ ಉಗ್ರಸಂಘಟನೆಗಳ ಮೇಲೆ ಕಳೆದ ಒಂದು ವರ್ಷದಿಂದ ಸಮರವೇ ಸಾರಿದೆ.

ಪ್ಯಾಲಸ್ಟೈನ್ ಮತ್ತು ಗಾಜಾ ಪಟ್ಟಿಯಲ್ಲಿದ್ದಂತಹ ಹಮಾಸ್‌ಗಳ ವಿರುದ್ಧ, ಲೆಬನಾನ್‌ನಲ್ಲಿ ಹಿಜ್ಬುಗಳು, ಯಮನ್‌ ನಲ್ಲಿ ಹೌತಿಗಳು, ಸಿರಿಯಾದಲ್ಲಿ ಐಎಸ್‌ಐಎಸ್ ಬಂಡುಕೋರರನ್ನು ಮಟ್ಟ ಹಾಕಲು ಆ ರಾಷ್ಟ್ರಗಳ ಮೇಲೆ
ಇಸ್ರೇಲ್ ನಿರಂತರ ದಾಳಿಗಳನ್ನು ಕೈಗೊಳ್ಳುತ್ತಿದೆ. ಲೆಬನಾನ್, ಪ್ಯಾಲೆಸ್ಟೈನ್ ಮತ್ತು ಗಾಜಾ ಪಟ್ಟಿಗಳ ಮೇಲೆ ನಿರಂತರ ಏರ್ ಸ್ಟ್ರೈಕ್‌ಗಳನ್ನು ನಡೆಸಿ ಆ ರಾಷ್ಟ್ರಗಳಲ್ಲಿ ಅಡಗಿ ಕೂತಿರುವ ಬಂಡುಕೋರರನ್ನು ಮತ್ತು ಅವರ ನೆಲೆಗಳನ್ನು ನಾಶಗೊಳಿಸುವುದರ ಜೊತೆಗೆ ಆ ದೇಶಗಳನ್ನು ಅಕ್ಷರಶಃ ಇಸ್ರೇಲ್ ಧ್ವಂಸ ಮಾಡುತ್ತಿದೆ.

ಇನ್ನು ಸುಡಾನ್‌ನಲ್ಲಿ ಸೇನಾಪಡೆಗಳು ಮತ್ತು ಅರೆಸೇನಾ ಪಡೆಗಳ ಬಡಿದಾಟದಿಂದ ಸುಡಾನ್ ರಣರಂಗವಾಗಿ ಮಾರ್ಪಟ್ಟಿದೆ. ಹೈಟಿ ದೇಶದಲ್ಲಿ ನಾಗರಿಕ ದಂಗೆಗಳು ಏರ್ಪಟ್ಟು ಅಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ.

ಈಗ ಸಿರಿಯಾದ ಸರದಿ. ಸಿರಿಯಾದಲ್ಲಿ ಅಲ್ಲಿನ ಅಧ್ಯಕ್ಷ ಅಥವಾ ಸರ್ವಾಧಿಕಾರಿಯಾಗಿರುವ ಬಷರ್ ಅಲ್ ಅಸಾದ್ ವಿರುದ್ಧ ಬಂಡುಕೋರರ ಗುಂಪುಗಳು ಕಳೆದ ಒಂದು ದಶಕದಿಂದ ಹೋರಾಟ ನಡೆಸುತ್ತಲೇ ಇದ್ದವು. 2011ರಲ್ಲಿ ಇಡೀ ಮಧ್ಯಪ್ರಾಚ್ಯವನ್ನು ಆವರಿಸಿದ್ದ ಅರಬ್ ಸ್ಪ್ರಿಂಗ್ ಅಥವಾ ಜಾಸ್ಮಿನ್ ಕ್ರಾಂತಿಯಿಂದ ಲಿಬಿಯಾ, ಈಜಿ, ಟುನೀಷಿ ಯಾಗಳಲ್ಲಿ ಅಲ್ಲಿನ ಸರ್ವಾಧಿಕಾರಿಗಳು ಪದಚ್ಯುತಗೊಂಡರು. ಈ ಕ್ರಾಂತಿಯ ಕಿಚ್ಚು ಸಿರಿಯಾಗು ಸಹ ಹಬ್ಬಿತ್ತು.

2000ನೇ ಇಸವಿಯಿಂದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದ ಬಷರ್ ಅಲ್ ಅಸಾದ್ ವಿರುದ್ಧ ಭಾರಿ ಪ್ರತಿಭಟನೆಗಳು ಆರಂಭವಾದವು. ಒಂದು ಹಂತಕ್ಕೆ ಇಲ್ಲಿಯೂ ಜಾಸ್ಮಿನ್ ಕ್ರಾಂತಿ ಯಶಸ್ವಿಯಾಗುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಈ ವೇಳೆಗೆ ಇರಾನ್ ಮತ್ತು ರಷ್ಯಾಗಳು ಸಿರಿಯಾದ ನೆರವರಿಗೆ ಧಾವಿಸಿ ಅಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಉಗ್ರ ರೀತಿಯಲ್ಲಿ ಹತ್ತಿಕ್ಕಿದವು. ಅಲ್ಲದೆ ಬಷರ್ ರಾಸಾಯನಿಕ ಶಸಾಸಗಳನ್ನು ತಯಾರಿಸಿ ಇಟ್ಟುಕೊಂಡಿದ್ದನು ಈ ರಾಸಾಯನಿಕಗಳನ್ನು ತನ್ನ ವಿರೋಧಿಗಳ ಮೇಲೆ ಸಿಂಪಡಿಸಿ ಸಾವಿರಾರು ಜನರನ್ನು ಒಮ್ಮೆಗೆ ಕೊಲ್ಲಿಸಿದ್ದನು.

2011ರಿಂದ ಇಲ್ಲಿಯ ತನಕ ತನ್ನ ವಿರೋಧಿಗಳ ಮೇಲೆ ಹಿಟ್ಲರ್‌ಗಿಂತ ಭೀಕರವಾಗಿ ಸೇಡು ತೀರಿಸಿಕೊಂಡಿದ್ದಾನೆ. ಕೆಲವು ನಿಖರ ಅಂಕಿ-ಅಂಶಗಳ ಪ್ರಕಾರ ೫ ಲಕ್ಷ ಸಿರಿಯನ್ನರನ್ನು ಬಷರ್ ಕೊಲ್ಲಿಸಿದ್ದಾನೆ. ಮರಣದಂಡನೆಯ ಮೂಲಕವೇ ಒಂದು ಲಕ್ಷ ಜನರನ್ನು ಕೊಂದು ಹಾಕಿದ್ದಾನೆ.

ಒಂದೇ ವರ್ಷದಲ್ಲಿ 13000 ಕೈದಿ ಗಳನ್ನು ಗಲ್ಲಿಗೇರಿಸಿದ ಕುಖ್ಯಾತಿ ಇವನದು. ಅಂತಹ ಭೀಕರವಾದ ರಕ್ತ ಪಿಪಾಸು ಈತನಾಗಿದ್ದನು. ಸಿರಿಯಾ ಒಂದು ಸುನ್ನಿ ಮುಸ್ಲಿಂ ಬಾಹುಳ್ಯ ರಾಷ್ಟ್ರವಾಗಿದ್ದು ಶೇ.76ರಷ್ಟು ಜನರು ಇಲ್ಲಿ ಸುನ್ನಿ ಮುಸ್ಲಿಮರಾಗಿದ್ದಾರೆ, ಶೇ.24ರಷ್ಟು ಜನರು ಶಿಯಾ ಮುಸ್ಲಿಮರಾಗಿದ್ದಾರೆ. ಆದರೆ ಇಲ್ಲಿ ಆಡಳಿತ ನಡೆಸುತ್ತಿದ್ದ ಬಷರ್ ಶಿಯಾ ಆಗಿದ್ದಾನೆ. ಈ ಕಾರಣದಿಂದಲೇ ಇರಾನ್ ಈತನ ದುಷ್ಟ ಕಾರ್ಯಗಳಿಗೆಲ್ಲ ನೆರವಾಗಿ ನಿಂತಿತ್ತು.

ಸಿರಿಯಾದಲ್ಲಿರುವ ಶಿಯಾಗಳ ರಕ್ಷಣೆ ಬಂದಾಗ ಇರಾನ್ ಐಎಸ್‌ಐಎಸ್ ವಿರುದ್ಧ ನಿಲ್ಲುತ್ತದೆ ಆದರೆ ಸಿರಿಯಾದ ಗಡಿಗೆ ತಾಗಿಕೊಂಡೇ ಇರುವ ಇಸ್ರೇಲ್ ವಿಚಾರಕ್ಕೆ ಬಂದಾಗ ಇರಾನ್ ಐಎಸ್‌ಐಎಸ್ ಪರವಾಗಿ ನಿಲ್ಲುತ್ತದೆ. ಇಂತಹ ಡಬಲ್ ಸ್ಟ್ಯಾಂಡರ್ಡ್ ಗೇಮ್‌ನ್ನು ಇರಾನ್ ಆಡುತ್ತಿದೆ. 2016ರಲ್ಲಿ ಬಷರ್ ವಿರುದ್ಧ ಸಿರಿಯಾದಲ್ಲಿ ಸೇನಾ ದಂಗೆ ಉಂಟಾ ಯಿತು. ಇನ್ನೇನು ಬರ್ಷ ಪದಚ್ಯುತನಾಗುವ ಹಂತಕ್ಕೆ ಬಂದಿದ್ದ. ಆದರೆ ಆಗಲೂ ಇರಾನ್ ಮತ್ತು ರಷ್ಯಾಗಳು ಸಿರಿಯಾದ ನೆರವರಿಗೆ ಧಾವಿಸಿ ಸೇನಾ ದಂಗೆಯನ್ನು ಹತ್ತಿಕ್ಕಿದವು. ಆದರೆ ಈ ಬಾರಿ ಬಷರ್‌ನ ಪಾಪದ ಕೊಡ
ತುಂಬಿತ್ತು ಎನಿಸುತ್ತದೆ. ಏಕೆಂದರೆ ರಷ್ಯಾ ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಕಾದಾಡುತ್ತಿದ್ದರೆ, ಅತ್ತ ಇರಾನ್
ತನ್ನ ಬದ್ಧ ಶತ್ರು ಇಸ್ರೇಲ್‌ನ್ನು ಮಣಿಸಲು ಕತ್ತಿ ಮಸೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಬಂಡುಕೋರ ಗುಂಪುಗಳು ತಮ್ಮ ಚಟುವಟಿಕೆ ಆರಂಭಿಸಿ ಸಿರಿಯಾದ ಒಂದೊಂದೇ ನಗರವನ್ನು ವಶಪಡಿಸಿಕೊಳ್ಳುತ್ತಾ ಸಾಗಿ ಕೊನೆಗೆ ಡಿಸೆಂಬರ್ 7ರಂದು ಸಿರಿಯಾದ ರಾಜಧಾನಿ ಡೆಮಾಸ್ಕಸ್‌ನ್ನು ವಶಕ್ಕೆ ಪಡೆದವು. ಸಿರಿಯಾದ ಸೈನಿಕರು ಈ ಬಂಡುಕೋರರನ್ನು ಹತ್ತಿಕ್ಕಲಾಗದೆ ತಮ್ಮ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟು, ಸಮವಸಗಳನ್ನು ಕಳಚಿ ಪರಾರಿಯಾದರು. ಅಧ್ಯಕ್ಷ ಬಷರ್ ಅಲ್ ಅಸಾದ್ ರಷ್ಯಾ ಗೆ ಓಡಿ ಹೋದನು.

ಥೇಟ್ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾದ ಮಾದರಿಗಳ ಸಿರಿಯಾದಲ್ಲೂ ಸಹ ಅಧ್ಯಕ್ಷರ ಭವನಕ್ಕೆ ಮುತ್ತಿಗೆ ಹಾಕಿದ ಜನರು ಅಲ್ಲಿನ ವಸ್ತುಗಳನ್ನೆಲ್ಲ ಲೂಟಿ ಮಾಡಿಕೊಂಡು ಕೊಂಡೊಯ್ದರು. ಸಿರಿಯಾದ ನಗರಗಳ ಬೀದಿ ಗಳಲ್ಲಿ ಜನರು ಬಷರ್ ಆಡಳಿತ ಕೊನೆಗೊಂಡಿದ್ದಕ್ಕಾಗಿ ಕುಣಿದು ಸಂಭ್ರಮಿಸಿದರು. ಆದರೆ ಈ ಖುಷಿ ತುಂಬಾ
ದಿನಗಳ ಕಾಲ ಇರಲು ಸಾಧ್ಯವಿಲ್ಲ. ಏಕೆಂದರೆ ಜಾತ್ಯತೀತ ದೇಶಗಳಲ್ಲಿ ದಂಗೆಗಳಾದರೆ ಸಾಮಾನ್ಯ ಜನತೆಗೆ ಯಾವ
ಸಮಸ್ಯೆಯೂ ಇರುವುದಿಲ್ಲ. ಆದರೆ ಕಟ್ಟರ್ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದಂಗೆಗಳಾದರೆ ಅಲ್ಲಿನ ಅಲ್ಪಸಂಖ್ಯಾತರ
ಮಾರಣ ಹೋಮವೇ ನಡೆಯುತ್ತದೆ ಎಂಬುದು ಇತಿಹಾಸದಲ್ಲಿನ ಘಟನೆಗಳೇ ಹೇಳುತ್ತವೆ. ಬಷರ್‌ನನ್ನು ಪದಚ್ಯುತ ಗೊಳಿಸಲು ಸಿರಿಯಾದಲ್ಲಿ ಅರಬ್ ಸ್ಪ್ರಿಂಗ್ ಕ್ರಾಂತಿ ನಡೆಯಿತು. ಆದರೆ ಈ ಕ್ರಾಂತಿಯ ನಂತರ ಐಎಸ್ ಐಎಸ್ ಎಂಬ ಜಾಗತಿಕ ಭಯೋತ್ಪಾದನಾ ಸಂಘಟನೆ ಹುಟ್ಟಿಕೊಂಡಿತು. ಜೊತೆಗೆ ಸಿರಿಯಾದಲ್ಲಿದ್ದ ಯಜೀದಿ ಎಂಬ ಸಮುದಾಯ ವನ್ನು ನಿರ್ನಾಮ ಮಾಡಲಾಯಿತು.

2021ರಲ್ಲಿ ಆಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹೊರನಡೆದಾಗ ತಾಲಿಬಾನ್‌ಗಳು ಆಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಇಷ್ಟಕ್ಕೆ ಸುಮ್ಮನಾಗದ ತಾಲಿಬಾನ್‌ಗಳು ಅಲ್ಲಿದ್ದ ಅಲ್ಪಸಂಖ್ಯಾತ ಸಿಕ್ಕರನ್ನು ಆಫ್ಘಾನಿ ಸ್ತಾನದಿಂದ ಹೊಡೆದೋಡಿಸಿದರು. ಜೊತೆಗೆ ಸ್ತ್ರೀ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು
ನಿರಾಕರಿಸಲಾಗಿದೆ.

ಅಲ್ಲದೆ ತಾಲಿಬಾನ್‌ಗಳು ಇಸ್ಲಾಮಿಕ್ ಷರಿಯಾ ಕಾನೂನನ್ನು ಆಫ್ಘಾನಿಸ್ತಾನದಲ್ಲಿ ಜಾರಿಗೊಳಿಸಿದ್ದಾರೆ. ಇನ್ನು ಬಾಂಗ್ಲಾದೇಶದಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಅಲ್ಲಿನ ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಪರಿಣಾಮವಾಗಿ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ವಿದ್ಯಾರ್ಥಿಗಳ ಪ್ರತಿಭಟನೆ ಕ್ರಮೇಣ ಮೂಲಭೂತ ವಾದಿಗಳ ದಂಗೆಯಾಗಿ ಪರಿವರ್ತನೆಯಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮನೆ, ದೇಗುಲಗಳು, ಆಸ್ತಿ- ಪಾಸ್ತಿಗಳ ಮೇಲೆ ವ್ಯಾಪಕ ದಾಳಿಗಳಾಗುತ್ತಿದ್ದು ಕರೋನಾ ಸಂದರ್ಭದಲ್ಲಿ ಬಾಂಗ್ಲಾದ ಜನತೆಗೆ ಅನ್ನ ನೀಡಿದಂತಹ ಇಸ್ಕಾನ್ ಸಂಸ್ಥೆಯ ಸಂತರನ್ನೇ ಭಯೋತ್ಪಾದನೆಯ ಪ್ರಕರಣದಲ್ಲಿ ಜೈಲಿನಲ್ಲಿ ಇಡಲಾಗಿದ್ದು ಈಗ ಬಾಂಗ್ಲಾದೇಶ ದಲ್ಲಿ ಹಿಂದುಗಳು ಬದುಕಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಪ್ರಸ್ತುತ ಸಿರಿಯಾದಲ್ಲೂ ಸಹ ಬಂಡುಕೋರರೇ ಆಡಳಿತ ನಡೆಸಲು ಸಜ್ಜಾಗಿದ್ದಾರೆ. ಆದರೆ ಸಿರಿಯಾವನ್ನು ತುಂಡು- ತುಂಡುಗಳನ್ನಾಗಿ ಮಾಡಲು ಕೆಲವು ರಾಷ್ಟ್ರಗಳು ಹವಣಿಸುತ್ತಿವೆ. ಇಸ್ರೇಲ್ ಸಿರಿಯಾದ ಮೇಲೆ ವೈಜ್ಞಾನಿಕ ದಾಳಿ ನಡೆಸುತ್ತಿದೆ. ಬಷರ್ ಆಡಳಿತದ ಸಂದರ್ಭದಲ್ಲಿ ಸಂಗ್ರಹಿಸಿಟ್ಟಿದ್ದ ರಾಸಾಯನಿಕ ಅಸ್ತ್ರಗಳನ್ನು ನಾಶಗೊಳಿಸಲು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದೆ.

ಸಿರಿಯಾದ ನಾಗರಿಕರನ್ನು ಯಾವ ದೇಶಗಳೂ ಸಹ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಅಲ್ಲಿನ ಜನರು ಹಸಿವು ಮತ್ತು ರೋಗ- ರುಜಿನಗಳಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜಗತ್ತಿನಲ್ಲಿ ನಾವೇ ಶ್ರೇಷ್ಠ ನಾವು ಹೇಳಿದ ಹಾಗೆ ಜಗತ್ತು ನಡೆಯಬೇಕು ಎಂಬ ಅಹಂ ಮತ್ತು ಧಾರ್ಮಿಕ ಮೂಲಭೂತ ವಾದವನ್ನು ತಲೆಗೆ ತುಂಬಿಕೊಂಡ ಪರಿಣಾಮವಾಗಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳು ಅದರ ಫಲಿತಾಂಶ ವನ್ನು ಅನುಭವಿಸುತ್ತಿವೆ. ಈಗ ಸಿರಿಯಾ ಸಹ ಈ ಪಟ್ಟಿಗೆ ಸೇರಿದ್ದು ಇಂತಹ ಧಾರ್ಮಿಕ ಮೂಲ ಭೂತವಾದಿಗಳ ಅಟ್ಟಹಾಸವನ್ನು ಜಗತ್ತು ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ಜಗತ್ತಿನ ಮತ್ತಷ್ಟು ದೇಶಗಳು ಮೂಲಭೂತ ವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಬಲಿಯಾಗಬೇಕಾಗುತ್ತದೆ.

(ಲೇಖಕರು: ಹವ್ಯಾಸಿ ಬರಹಗಾರ)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ