Friday, 15th November 2024

ಚಿಂತನೆಗೆ ಹಚ್ಚುವ ಶಾಸ್ತ್ರ ಪುರಾಣಗಳು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್‌

ನೀವೆಲ್ಲ ಭಕ್ತಪ್ರಲ್ಹಾದ ಚಿತ್ರ ನೋಡಿರುತ್ತೀರಿ. ಅದರಲ್ಲಿ ಪ್ರಲ್ಹಾದ ಗುರುಕುಲಕ್ಕೆ ವಿದ್ಯೆ ಕಲಿಯಲು ಬಂದಾಗ ಅಲ್ಲಿನ ಇತರ ರಾಕ್ಷಸ
ಬಾಲಕರಿಗೆ ‘ಸ್ನೇಹಿತರೇ, ಹರಿನಾಮದಲ್ಲಿರುವ ರುಚಿ ಹಾಲಿನಲ್ಲಿಯೂ ಇಲ್ಲ, ಅವನನ್ನು ಸ್ಮರಿಸುತ್ತಾ ಕುಣಿದಾಡುವ ಆಟದ ಮುಂದೆ ಬೇರಾವ ಆಟಗಳಲ್ಲೂ ಸೊಗಸಿಲ್ಲ’ ಎಂದು ಹೇಳುತ್ತಾ ನಾರಾಯಣ ಶ್ರೀಮನ್ನಾರಾಯಣ ಎಂದು ಹಾಡುತ್ತಾ ಅವರನ್ನೂ ಕುಣಿಯಲು ಪ್ರೇರೇಪಿಸುತ್ತಾನೆ, ನೆನಪಿದೆ ತಾನೆ?. ಹಾಗೆಯೇ, ನನಗೂ ಏನೇನೋ ಲೌಕಿಕ, ಬಾಲ್ಯದ, ಹಾಸ್ಯದ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದಾಗಲೆಲ್ಲ.

ಅಂಕಣಕ್ಕೆ ಪ್ರತಿವಾರ ಬರೆಯಬೇಕೆನ್ನುವ ಉಮೇದಿನಿಂದ ಬರೆಯುತ್ತೇನಾಗಲೀ, ಜನರಿಗೆ ತಿಳಿಸಬೇಕಾಗಿರುವುದು ಇದಲ್ಲ ಎಂದು ಆಗಾಗ ಅನಿಸುತ್ತಲೇ ಇರುತ್ತದೆ. ಪುರಾಣ, ಶಾಸಗಳು, ಉಪನಿಷತ್ತುಗಳು, ಮಹಾಭಾರತ, ರಾಮಾಯಣದ ಭಾಗವತಗಳಲ್ಲಿ ಎಂಥ ರೋಚಕ ಬೌದ್ಧಿಕ, ತಾತ್ವಿಕ ವಿಚಾರಗಳಿವೆ ಎಂದು ಅವನ್ನು ಓದುವಾಗ ನೋಟ್ಸ್ ಮಾಡಿಕೊಂಡಂಥವುಗಳನ್ನು ತೆಗೆದು ನೋಡಿದರೆ, ಇವನ್ನು ಓದದ, ಓದಲಾಗದ ವಾಚಕ ಸ್ನೇಹಿತರಿಗೆ ತಿಳಿಸಬೇಕೆಂಬ ತುಡಿತ ಆಗಾಗ ಉಂಟಾಗುತ್ತಲೇ ಇರುತ್ತದೆ.

ನನ್ನ ಕಾರ್ಯಕ್ರಮಗಳ ಊರೂರು ತಿರುಗಾಟದ ಮಧ್ಯೆಯೂ ನಾನು ಬಿಡುವು ಸಿಕ್ಕಾಗ ಪುರಾಣದ ಕಥೆಗಳನ್ನು ಓದುತ್ತೇನೆ.
ಅಲ್ಲದೇ ಯಾರಾದರೂ ಪಂಡಿತರ, ದಾಸರ, ಶರಣರ, ಸಂತರ ಬಗೆಗಿನ ಉಪನ್ಯಾಸಗಳಿಗೂ ಹೋಗಿ ಕೂರುತ್ತಿರುತ್ತೇನೆ. ಅವನ್ನು ಆಸಕ್ತಿಯಿಂದ ಕೇಳುತ್ತೇನೆ, ಬರೆದುಕೊಳ್ಳುತ್ತೇನೆ.

ದೊಡ್ಡ ದೊಡ್ಡ ಗ್ರಂಥಗಳನ್ನು ಓದಿ ನಿರರ್ಗಳವಾಗಿ ಶ್ಲೋಕಾದಿಗಳನ್ನು ರಾಗವಾಗಿ ಹಾಡಿ ಅರ್ಥ ಬಿಡಿಸುವ ಅವರ ವಾಗ್ಜರಿಗೆ ತಲೆದೂಗುತ್ತೇನೆ. ಇವರ ನಿರರ್ಗಳತೆ, ಸ್ಮರಣ ಶಕ್ತಿ, ವಿಷಯ ಸಂಗ್ರಹಗಳನ್ನು ಕಂಡು, ಕೇಳಿ ಅವರ ವಿದ್ವತ್ತಿಗೆ ತಲೆದೂಗುತ್ತೇನೆ. ಪಾಪ, ಆ ಮೇಧಾವಿಗಳು ನನ್ನನ್ನು ಸಭೆಯಲ್ಲಿ ನೋಡಿ, ನನ್ನ ಮಾತು ಕೇಳಲು ಗಂಗಾವತಿ ಪ್ರಾಣೇಶರು ಬಂದು ಪ್ರೇಕ್ಷಕರ ಮಧ್ಯೆ
ಕೂತಿದ್ದಾರೆ, ಅವರ ಮುಂದೆ ಹೇಗೆ ಮಾತಾಡಬೇಕು ಎಂದು ತಿಳಿಯದಾಗಿದೆ ಎಂದು ಅವರು ತಮ್ಮ ವಿದ್ವತ್ತಿಗೆ ಅನುಗುಣವಾಗಿ ವಿನಯ ತೋರಿಸುತ್ತಿದ್ದರೆ, ನನಗೋ ಸಂಕೋಚದಿಂದ ಭೂಮಿಗಿಳಿದು ಹೋಗುತ್ತಿದ್ದೆನೆನೋ ಅನಿಸುತ್ತಿರುತ್ತದೆ.

ಎಲ್ಲೋ ಓದಿದ, ಕೇಳಿದ ಕೆಲ ಹಾಸ್ಯ ಪ್ರಸಂಗಗಳನ್ನು, ಅಭ್ಯಾಸ, ಅನುಭವಗಳ ಬಲದಿಂದ ನೆರೆದ ಪ್ರೇಕ್ಷಕರಿಗೆ ಹೇಳುವ ನನ್ನ ಈ ಸಣ್ಣ ಕಾಯಕವೆಲ್ಲಿ?, ಉದ್ಗ್ರಂಥಗಳನ್ನು ಕಂಠಪಾಠ ಮಾಡಿದ ಕಂಚುಕಂಠದ ಇವರೆಲ್ಲಿ, ನಾನೆಲ್ಲಿ? ಎಂದು ಹಿಡಿಯಾಗುತ್ತೇನೆ. ಅವರು ವಿಚಾರ ಪ್ರಚೋದಕರು, ನಾನೋ ಟಿ.ವಿ. ಗಳಿಂದಾಗಿ ಪ್ರಚಾರ ಪ್ರಚೋದಕನಾಗಿರುವವನು ಅನಿಸಿ ಮುದುಡಿ ಹೋಗುತ್ತೇನೆ. ಪುರಾಣಿಕರು, ಹರಿಕಥೆ ದಾಸರು, ಶ್ರಾವಣ ಮಾಸ, ಆಷಾಢ ಮಾಸಗಳಲ್ಲಿ ಮಠಗಳಲ್ಲಿ ತಿಂಗಳುಗಟ್ಟಲೇ ಪುರಾಣ ಹೇಳುವ ಶಾಸಿಗಳು ಸಾಮಾನ್ಯರಲ್ಲ.

ಹಾಸ್ಯ, ಹಾಡುಗಳ ಮೂಲಕ ಹಳ್ಳಿಯ ಅದ್ಯಾವಂತ, ರೈತಾಪಿ ಜನರಿಗೆ ಧರ್ಮ ಜಾಗೃತಿ ಮೂಡಿಸುವ ಇವರ ಕಾರ್ಯ ಅತ್ಯಂತ ಶ್ಲಾಘನೀಯ. ನಮ್ಮ ಪತ್ರಿಕೆಗಳು, ಟಿ.ವಿ. ವಾಹಿನಿಗಳು ಇಂಥವರ ಕಾರ್ಯಕ್ರಮಗಳನ್ನೂ ಪ್ರಚಾರ ಮಾಡಬೇಕು. ನಾನು ಬಾಲ್ಯ ದಲ್ಲಿ ಯೌವ್ವನದ ಆರಂಭಿಕ ದಿನಗಳಲ್ಲಿ ನಮ್ಮ ಗಂಗಾವತಿಯ ಕಲ್ಮಠ, ಮಲ್ಲಿಕಾರ್ಜುನ ಮಠ, ದೇವಾಂಗ ಮಠ, ಹಿರೇಜಂತ ಕಲ್ಲಿನ ಕಂಬಾಳಿ ಮಠ, ಮುಡ್ಡಾಣೇಶ್ವರ ಮಂಟಪಗಳ ಪುರಾಣಗಳಿಗೆ ತಪ್ಪದೇ ಹೋಗುತ್ತಿದ್ದೆ. ಅದು ಟಿ.ವಿ ಧಾರಾವಾಹಿಗಳಿಲ್ಲದ ಕಾಲ, ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು.

ಇಂದಿನಂತೆ ಹೆಣ್ಣು ಮಕ್ಕಳು ಸಂಜೆ ಮನೆ ಹಿಡಿಯುತ್ತಿರಲಿಲ್ಲ. ಪುರಾಣಗಳಿಗೆ ಗುಂಪುಗುಂಪಾಗಿ ಸೇರುತ್ತಿದ್ದರು. ಪುರಾಣ ಹೇಳುವ ಶಾಸಿಗೆ ಹಾಸ್ಯ ಪ್ರಜ್ಞೆ ಇರಲೇ ಬೇಕಾಗಿತ್ತು. ನಗೆಹನಿ, ಅಡ್ಡಕಥೆ, ಹಾರ್ಮೋನಿಯಂ ವಾದನ, ಸುಶ್ರಾವ್ಯ ಕಂಠದಿಂದ ಹಾಡು ಗಳನ್ನು ಹಾಡುವುದಲ್ಲದೇ ಸಿತಾರ್, ಸಾರಂಗಿ, ಬುಲ್ ಬುಲ್ ತರಂಗ್ ಎಂಬ ವಾದ್ಯಗಳನ್ನು ಶಾಸ್ತ್ರಿಗಳು ಬಾರಿಸುತ್ತಾ
ಪ್ರೇಕ್ಷಕರನ್ನು ಎರಡು – ಎರಡೂವರೆ ಗಂಟೆಗಳ ಕಾಲ ಹಿಡಿದಿಡುತ್ತಿದ್ದರು.

ಒಂದು ತಿಂಗಳ ಕಾಲ ಅವರಿಗೆ ಅವರನ್ನು ಕರೆಸಿದ ಮಠಗಳು ಅನ್ನ, ಆಶ್ರಯ, ವಸ, ಸಂಭಾವನೆಗಳನ್ನು ಕೊಟ್ಟು ಆದರಿಸು ತ್ತಿದ್ದರು. ಪುರಾಣ ಕೇಳಲು ಬರುವ ಮಹಿಳೆಯರೂ ಅವರನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆಯುತ್ತಿದ್ದರು. ಪುರಾಣದ ಮಧ್ಯೆ ಶಾಸಿಗಳು ತಮಾಷೆಯಾಗಿ ಈ ಊರಿಗೆ ಬಂದು ಎಂಟು ದಿನ ಆತು, ಮಠದಾಗಿನ ಸಂಗಟಿ ಸಾರು ಉಂಡು ಬ್ಯಾಸರ ಆಗಿತ್ತು. ಇವತ್ತು ಹಿರೇಮನಿ ಸೋಮಪ್ಪನವರ ಮನೆಗೆ ಊಟಕ್ಕೆ ಕರೆದಿದ್ರು, ಆ ನಮ್ಮ ತಂಗಿ ವಿಶಾಲಾಕ್ಷಮ್ಮ ಬಿಸಿಬಿಸಿದು ನೀಡಿದಂಗೆಲ್ಲ ಉಂಡು,
ನಾಲಿಗೆ ಜಡ್ಡು ಬಿಟ್ಟು ಸ್ವಚ್ಛ ಆಗೈತಿ ಎಂದು ನುಡಿದ ಕೂಡಲೇ ಇಡೀ ಸಭೆ ಆ ಸೋಮಪ್ಪ ವಿಶಾಲಾಕ್ಷಮ್ಮ ದಂಪತಿಗಳನ್ನು
ತಿರುತಿರುಗಿ ನೋಡುತ್ತಿತ್ತು. ಚಪ್ಪಾಳೆ ತಟ್ಟುತ್ತಿತ್ತು.

ಶಾಸ್ತ್ರಿಗಳ ಉಪಾಯ ಫಲಿಸಿ, ಮರುದಿನದಿಂದ ನಾಳೆ ನಮ್ಮನಿಗೆ ಬರ್ರಿ, ನಾಡಿದ್ದು ನಮ್ಮನಿಗೆ ಬರ್ರಿ’ ಎಂದು ‘ಬಿನ್ನಾ’ ಕೊಡು ತ್ತಿದ್ದರು. (ಅದು ಬಿನ್ನಹ, ಅಂದರೆ ಆಮಂತ್ರಣ) ಮಠದ ಸ್ವಾಮಿಗಳಿಗೂ ಶಾಸ್ತ್ರಿಗಳ ಊಟದ ಹೊರೆ ತಪ್ಪುತ್ತಿತ್ತು. ಶಾಸ್ತ್ರಿಗಳಿಗೆ ಸಂಗಟಿ ಸಾರಿನ ಕಾಟ ತಪ್ಪುತ್ತಿತ್ತು. ಹಗಲು ಕೆಲವರಿಗೆ ಈ ಅವಕಾಶ ಸಿಗದಾಗ ಶಾಸ್ತ್ರಿಗಳಿಗೆ ರಾತ್ರಿಯಲ್ಲಿಯೂ ‘ಬಿನ್ನಾ’ ಶುರುವಾ ದವು. ಹಗಲು ಒಂದು ಮನಿ, ರಾತ್ರಿ ಒಂದು ಮನಿ, ಊಟ, ಉಪಾಹಾರ ಸಿಕ್ಕ ಶಾಸ್ತ್ರಿಗಳಿಗೆ ತಿಂಗಳು ತುಂಬುವುದರೊಳಗೆ ಮೈ-ಕೈ ತುಂಬಿಕೊಂಡು, ಬಣ್ಣ ಬಂದುಬಿಡುತ್ತಿತ್ತು.

ಪುರಾಣ ನಡೆಯುವಾಗ ಸಭಿಕರಲ್ಲಿ ಬಹಳ ಜನ ತೂಕಡಿಸುತ್ತಿದ್ದಾರೆಂದು ಅರಿವಾದ ಕೂಡಲೇ ಶಾಸ್ತ್ರಿಗಳು ಗಟ್ಟಿಯಾಗಿ ಜೋರಾಗಿ ಜೈ ಮಂಗಳಂ, ಜಯ ನಮಃ ಶಿವ ಪಾರ್ವತೇ ಪತೇ ಹರ ಹರ ಮಹಾದೇವ ಎಂದು ಗರ್ಜಿಸುತ್ತಿದ್ದರು. ಹಾಗೆಯೇ ಸಾಂಬ ಜೈ ನಮಃ ಪಾರ್ವತೇ ಪತೆ ಹರ ಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ, ಸಿದ್ದಾರೂಢ ಮಹಾರಾಜಕೀ ಜೈ, ಎನ್ನುತ್ತಲೇ ತೂಕಡಿಸುವ ಮಹಾರಾಜರಿಗೆ ಜೈ, ಬ್ಯಾಸರ ಬಂದ ಬಸವಣ್ಣೆಪ್ಪ ಮಹಾರಾಜಕೀ ಜೈ ಎಂದು ನಗೆಗಡಲನ್ನು ಸೃಷ್ಟಿಸುತ್ತಿದ್ದರು.

ಇದೆಲ್ಲವನ್ನೂ ೧೯೭೦-೮೦ ರ ದಶಕದಲ್ಲಿ ಕಣ್ಣಾರೆ ಕಂಡು ಹರ್ಷಿಸಿದ್ದೇನೆ. ಒಂದು ತಿಂಗಳ ನಂತರ ಪುರಾಣ ಮಂಗಳ ದಿನ. ಅಂದು ಸಂಜೆ ಶುರುವಾದ ಪುರಾಣ ಹತ್ತಕ್ಕೆ ಮುಗಿದು ಶಾಸ್ತ್ರಿಗಳಿಗೆ, ವಾದಕರಿಗೆ ಸನ್ಮಾನ, ಸಂಭಾವನೆಗಳು, ಅಂದು ಇಡೀ ಊರಿಗೆ ಮಠದಲ್ಲಿ ಊಟ, ರಾತ್ರಿ ಹತ್ತರ ಮೇಲೆ ಸಂಗೀತ ಕಾರ್ಯಕ್ರಮ. ರಘುನಾಥ ನಾಕೋಡ್, ವೆಂಕಟೇಶ ಕುಮಾರ, ಗಣಪತಿ ಭಟ್, ಜಾಲಿಬೆಂಚಿ ಗವಾಯಿಗಳು, ಮಹಿಳಾ ಗಾಯಕಿಯರು, ಸಿನಿಮಾ ನಟ ಕಂಪ್ಲಿ ಹನುಮಂತಾಚಾರ್ ಯುನಿವ್ಯಾಕ್ಸ್ ಎಂಬ ಒಂದು ವಾದ್ಯ ಬಾರಿಸುತ್ತಿದ್ದರು. ಅವರು ಅಂದಿನ ಪ್ರಮುಖ ಆಕರ್ಷಣೆ.

ಈ ಕಾರ್ಯಕ್ರಮಕ್ಕೆ ನಿರೂಪಣೆ ನನ್ನದೇ ಇರುತ್ತಿತ್ತು. ಇಡೀ ರಾತ್ರಿ ಇಂಥ ಗಾಯಕ ಹಾಡುತ್ತಾರೆ, ಇವರಿಗೆ ಇಂಥವರ ತಬಲಾ ಸಾಥ್, ರಾಗ ಇಂಥದು ಎಂದೆಲ್ಲ ಹೇಳುತ್ತಿದ್ದೆ. ಬೆಳಗಿನ ಜಾವ ಐದು, ಐದೂವರೆಗೆ ಪಂಡಿತ ಪುಟ್ಟರಾಜ ಗವಾಯಿಗಳ ಹಾರ್ಮೋನಿಯಂ ವಾದನ, ಕಣ್ಣಿಲ್ಲದ ಪುಟ್ಟರಾಜರು ಹಾರ್ಮೋನಿಯಂ ಅನ್ನು ಅದೆಷ್ಟು ವೇಗವಾಗಿ ಬಾರಿಸುತ್ತಿದ್ದರೆಂದರೆ ಅವರ ಕೈ ಬೆರಳುಗಳ ವೇಗಕ್ಕೆ ನಮ್ಮ ಕಣ್ಣುಗುಡ್ಡೆಗಳನ್ನು ಹೊರಳಿಸುವುದು ಸಾಧ್ಯವಾಗುತ್ತಿರಲಿಲ್ಲ.

ಹಿಂದಿನ ಸಂಜೆಯಿಂದ ಮರುದಿನ ಬೆಳಗಿನ ಎಂಟು ಗಂಟೆಯವರೆಗೆ ಅಹೋರಾತ್ರಿಯ ಈ ಕಾರ್ಯಕ್ರಮ ಮುಗಿದಾಗ ಏನೋ ಮೂಕವ್ಯಥೆ, ವಿರಹ, ‘ಜೀವದಲಿ ಜಾತ್ರೆ ಮುಗಿದಂತೆ’ ಎಂಬ ಅನುಭವ. ಮತ್ತೆ ಇಂಥ ದಿನಗಳು ಬಂದಾವೆಯೇ? ಏನು ಕೊಟ್ಟರೆ ಸಿಕ್ಕಾವು? ಎಂಬ ಹುರುಹುರು, ಹಳಹಳಿ ಇಂದಿಗೂ ನನ್ನನ್ನು ಇಳಿಸಂಜೆಯಲ್ಲಿ ಕಾಡುತ್ತವೆ. ದೊಡ್ಡ ಬಸವಾರ್ಯ ಜಾಲಿಬೆಂಚಿ ಎಂಬ ಹಿರಿಯ ಗಾಯಕರು ಹಾಡುತ್ತಿದ್ದ ‘ಬಸವ ಬಾರಯ್ಯ, ಮತ್ತಾರೂ ಇಲ್ಲವಯ್ಯ, ಬಸವ ಬಾರಯ್ಯ’ ಎಂಬ ಹಾಡು ಕೇಳಲು ಸಿಕ್ಕೀತೆ? ಎನಿಸುತ್ತದೆ. ನಾನೂ ಪ್ರತಿನಿತ್ಯ ವರ್ಣಮಯ ಸಂಜೆಗಳನ್ನು ಕಳೆಯುತ್ತಿದ್ದೇನೆ.

ಆದರೂ ಆ ಬಾಲ್ಯ, ಆ ಯೌವ್ವನದ ಆ ಜನಸಂದಣಿ ಹೋಗಿಬಿಟ್ಟಿತ್ತು ಎನಿಸುತ್ತದೆ. ಟಿ.ವಿ. ಗಳು ಬಂದು ಹಳೆ ಕಲಾವಿದರು,
ಪುರಾಣಿಕರು, ಶಾಸಿಗಳು ಕಣ್ಮರೆಯಾದರು. ಮಠಗಳು ರಾಜಕೀಯಕ್ಕೆ, ಬಿಜಿನೆಸ್‌ಗೆ ನಿಂತುಬಿಟ್ಟವು. ಕಲಾವಿದ, ಕವಿ, ಪಂಡಿತ, ಶಾಸ್ತ್ರಿಗಳಿಗಿಂತ ರಾಜಕೀಯ ನಾಯಕರುಗಳು ಮರಿ ಪುಡಾರಿಗಳನ್ನು ಗೌರವಿಸುವ, ಸನ್ಮಾನಿಸುವ ಅನಿವಾರ್ಯತೆ ಸಂಘ – ಸಂಸ್ಥೆಗಳಿಗೆ ಒದಗಿಬಂದುಬಿಟ್ಟಿದೆ.

ಎಲ್ಲದಕ್ಕೂ ಹಣ, ಹೆಂಡ ಕೊಟ್ಟೇ ಜನರನ್ನು ಸೇರಿಸಬೇಕಾಗಿದೆ. ಅಸಲಿ ವಜ್ರ, ಬಂಗಾರಗಳೆಲ್ಲ ನೆಲಸೇರಿವೆ, ನಕಲಿ ಬಂಗಾರ, ಖೊಟ್ಟಿ ವಜ್ರಗಳೆಲ್ಲ ಮೆರೆಯುತ್ತಿವೆ. ಇವನ್ನೆಲ್ಲ ನೋಡುವುದು ಸಜ್ಜನರಿಗೆ ಸಂಕಟಮಯ. ಆ ಟಿ.ವಿ. ಜೋತಿಷಿಗಳು, ಆ ನಿತ್ಯಾನಂದನ ತೊದಲು ನುಡಿಗಳು ಎನ್ನುವುದಕ್ಕಿಂತ ಅಪ್ರಬುದ್ಧ ಮಾತುಗಳನ್ನೇ ಟಿ.ವಿ, ಯೂಟ್ಯೂಬ್‌ಗಳು, ಮೊಬೈಲ್‌ಗಳು
ಬಾರಿಬಾರಿಗೆ ದೇಶದ ಮೂಲೆಮೂಲೆಗೆ ತಲುಪಿಸುವುದನ್ನು ನೋಡಿದರೆ ಸಂಕಟವಾಗುತ್ತದೆ.

ಆ ಸಮಯದಲ್ಲೇ ನಾನು ಕೇಳುತ್ತಿದ್ದ ಪುರಾಣ, ಶಾಸ್ತ್ರಗಳ ಈ ಕೆಳಗಿನ ಕೆಲವು ಮಾತುಗಳು ಎಷ್ಟು ಮಾರ್ಮಿಕವಾಗಿವೆ. ಇವು ನಾವೆಲ್ಲ ಬುರುಡೆ ಪುರಾಣ ಎಂದು ಹಾಸ್ಯ ಮಾಡುವ ಧಾರ್ಮಿಕ ಗ್ರಂಥಗಳಲ್ಲಿರುವ ಅಂಶಗಳೆ. ೧. ಮುಖದ ಸೌಂದರ್ಯ ಸೌಂದರ್ಯವಲ್ಲ – ಸದ್ಗುಣ,  ವೈರಾಗ್ಯವೇ ಸೌಂದರ್ಯ. ೨. ಸುಖವೆಂದರೆ ವೈಭವೋಪೇತ ಜೀವನವಲ್ಲ – ಸುಖ, ದುಃಖಗಳನ್ನು ಸಮಾನವಾಗಿ ಸ್ವೀಕರಿಸುವುದೇ ಜೀವನ ೩.ಕಷ್ಟ, ರೋಗ-ರುಜಿನಗಳಿಂದ ಬರುವ ದುಃಖ, ದುಃಖವಲ್ಲ – ಕಂಡದ್ದು ಕೊಳ್ಳುವ ಬಯಕೆಯೇ ದುಃಖ ೪.ಅದ್ಯಾವಂತನೇ ಮೂರ್ಖನಲ್ಲ, – ಈ ದೇಹ ನಾನು, ನನ್ನದು ಎಂಬ ಸ್ವಾರ್ಥಿಯೇ ಮೂರ್ಖ. ೫.ನಿಜವಾದ ಬಂಧುವೆಂದರೆ ಪುತ್ರ, ಮಿತ್ರ, ಸಂಬಂಧಿಕರಲ್ಲ – ತತ್ವಾರ್ಥಗಳನ್ನು ಭೋದಿಸುವವನೇ ಬಂಧು ಮಿತ್ರ. ೬.ಹಣ ಕೊಟ್ಟವನು, ಆಸ್ತಿ ಮಾಡಿದವನು ಧನಿಕನಲ್ಲ – ಸದ್ಗುಣಿಯೇ ಧನಿಕನು. ೭.ನರಕವೆಂದರೆ ಎಲ್ಲೋ ಮೇಲಿರುವುದಲ್ಲ – ಪರರಿಗೆ ಕಾಯಾ, ವಾಚಾ, ಮನಸಾ ಂಸೆ ಕೊಡುವುದೇ ನರಕ. ೮.ಸ್ವರ್ಗವೆಂದರೆ ಎಲ್ಲೋ ಮೇಲಿರುವುದಲ್ಲ – ಸದ್ಗುಣ ಸಂಪನ್ನನಾಗುವುದೇ, ಜನಾನುರಾಗಿ ಯಾಗುವುದೇ ಸ್ವರ್ಗ. ೯.ನೇರ, ನಿಷ್ಠುರ ಇದ್ದಂತೆ ನುಡಿಯುವುದೇ ಸತ್ಯವಲ್ಲ – ಸುಮಧುರ ಮಾತುಗಳೇ ಸತ್ಯ. ೧೦.ದಕ್ಷಿಣೆ ಎಂದರೆ ಹಣವಲ್ಲ – ಜ್ಞಾನ ನೀಡುವ ಸದ್ಗುರುಗಳ ಸೇವೆಯೇ ನಿಜವಾದ ದಕ್ಷಿಣೆ. ೧೧.ಬಲವೆಂದರೆ ದೇಹಬಲವಲ್ಲ – ಪ್ರಾಣಾಯಾಮದ
ಅಭ್ಯಾಸವೇ ಶ್ರೇಷ್ಠ ಬಲ. ೧೨.ಕಳ್ಳಕಾಕರನ್ನು ಹತ್ತಿಕ್ಕುವುದೇ ದಮನವಲ್ಲ – ಇಂದ್ರೀಯ ನಿಗ್ರಹಗಳೇ ದಮನ. ೧೩.ಧೈರ್ಯ ವೆಂದರೆ – ನಾಲಿಗೆ, ಜನನೇಂದ್ರೀಯಗಳ ಚಾಪಲ್ಯದ ಜಯವೇ ಧ್ಯೆರ್ಯ ೧೪. ಶೌರ್ಯವೆಂದರೆ ಯುದ್ಧ, ಹೋರಾಟವಲ್ಲ –
ಸ್ವಭಾವ ಗಳನ್ನು ನಿಯಂತ್ರಿಸುವುದೇ ಶೌರ್ಯ. ೧೫.ಸತ್ಯವೆಂದರೆ ಬರಿ ನುಡಿಯುವುದಲ್ಲ – ಸಮಸ್ತ ವಸ್ತುಗಳಲ್ಲಿ ಪರಮಾತ್ಮ ನನ್ನು ಕಾಣುವುದೇ ಸತ್ಯ.

ಇಂತಹ ಮಾತುಗಳನ್ನು ಹೇಳುತ್ತಿದ್ದ ಆ ಪುರಾಣಿಕರು ಎಷ್ಟೊಂದು ಓದುತ್ತಿರಬೇಡ. ಅವರ ಅಧ್ಯಯನ, ಪುರಾಣಕ್ಕೆ ಅವರ ತಯಾರಿ ಇವುಗಳನ್ನು ಕಂಡ ನಾನು ಬೆರಗಾಗುತ್ತಿದ್ದೆ. ವೇದಶಾಸ್ತ್ರಗಳೇ ವ್ಯಕ್ತಿಗಳ ನಿಜವಾದ ತಂದೆ. ಇವು ಜೀವನದಿಂದ ಮುಕ್ತರಾಗುವ ಮಾರ್ಗ ಸೂಚಿಸುತ್ತವೆಯೇ, ವಿನಾ ಫಲಾಪೇಕ್ಷಿತ ಕರ್ಮಗಳನ್ನಲ್ಲ. ಅದಕ್ಕೆ ಅಜ್ಞಾನಿಯಂತೆ ಇಹದ ತಂದೆಯ ಆಜ್ಞೆಯ ಪಾಲಿಸಿ, ಕಾಮ್ಯ ಕರ್ಮಗಳಲ್ಲಿ ನಿರತನಾಗಬಾರದು.

ಗೃಹದಲ್ಲಿ ವಾಸಿಸುವ ವ್ಯಕ್ತಿಯು ವಾಸ್ತವದಿಂದ ಗೃಹದಿಂದ ಭಿನ್ನವಾಗಿದ್ದರೂ ತಾನು ಗೃಹವೆಂದು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ಶರೀರದಿಂದ ಬೇರೆಯಾಗಿದ್ದರೂ ತಾನೇ ಶರೀರವೆಂದು ಭಾವಿಸುತ್ತಾನೆ. ಇಂತಹ ಮಾತುಗಳನ್ನು ಈಗ ಯಾರೂ ಹೇಳುವುದಿಲ್ಲ.
ಇಂದಿನ ಮಾತುಗಳು ಚಿಂತಿಸಲು ಹಚ್ಚುವುದಿಲ್ಲ. ಚಿಂತೆಯನ್ನು ಹೆಚ್ಚಿಸುತ್ತವೆ.