Thursday, 12th December 2024

ಶಾಸ್ತ್ರಿಯವರ ಸಾವು ನಿಗೂಢವಾಗಿಯೇ ಉಳಿಯಲು ಕಾರಣವೇನು ?

ಇದೇ ಅಂತರಂಗ ಸುದ್ದಿ

vbhat@me.com

ಇಂದಿರಾ ಪ್ರಧಾನಿಯಾಗಿ ಆಯ್ಕೆಯಾದ ನಂತರ ಅವರು ಶಾಸ್ತ್ರಿ ನಿಧನದ ಸುತ್ತ ಕವಿದಿದ್ದ ವಿವಾದವನ್ನು ವ್ಯವಸ್ಥಿತವಾಗಿ ಸುಮ್ಮನಾಗಿಸಿದರು. ಆಗಾಗ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಆಡಳಿತ ಪಕ್ಷದ ಸದಸ್ಯರು ‘ಕರೇಂಗೆ, ದೇಖೇಂಗೆ’ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದರು. ಅವರ‍್ಯಾರಿಗೂ ಶಾಸ್ತ್ರಿಯವರ ನಿಧನದ ಸತ್ಯಾಸತ್ಯತೆಯನ್ನು ತಿಳಿಯುವ ಆಸಕ್ತಿಯಾಗಲಿ, ಹೊಣೆಗಾರಿಕೆಯಾಗಲಿ ಇರಲಿಲ್ಲ. ಶಾಸ್ತ್ರಿಯವರಂತೂ ನಿಧನರಾದರು, ಇನ್ನೂ ಅವರ ನೆನಪನ್ನೂ ಸಾಯಿಸದೇ ಬಿಡಬಾರದು ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದಂತಿತ್ತು.

ಲಾಲ್ ಬಹಾದೂರ್ ಶಾಸ್ತ್ರಿಯವರ ತಾಷ್ಕೆಂಟಿನ ಕೊನೆಯ ದಿನಗಳನ್ನು ಅವರ ಅಭಿಮಾನಿ ಶವಲಾಲ್ ಪರಾಂಡೆ ನೆನಪಿಸಿಕೊಂಡರು. ಶಾಸ್ತ್ರಿ ಅವರು ಹೇಗೆ ನಿಧನರಾದರು ಎಂಬುದನ್ನು ತಿಳಿಯಲು ಅವರ ಪಕ್ಷದವರಿಗೇ ಆಸಕ್ತಿ ಇರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಯಾರೂ ಸಹ ರಷ್ಯಾ ಸರಕಾರವನ್ನು ಆಗ್ರಹಿಸಲಿಲ್ಲ. ಈ ಸಂಬಂಧ ಭಾರತ ಸರಕಾರ ಕಾಟಾಚಾರಕ್ಕೂ ಒಂದು ಹೇಳಿಕೆ ಕೊಟ್ಟು ಒತ್ತಾಯ ಪಡಿಸಲಿಲ್ಲ. ಶಾಸ್ತ್ರಿಯವರ ನಿಧನದ ಕುರಿತು ರಷ್ಯಾ ಯಾವುದೇ ದಾಖಲೆಗಳನ್ನಾಗಲಿ, ವೈದ್ಯರ ಹೇಳಿಕೆಗಳನ್ನಾಗಲಿ ಬಿಡುಗಡೆ ಮಾಡಲಿಲ್ಲ.

ಶಾಸ್ತ್ರಿ ಅವರು ನಿಧನರಾಗಿ ಇನ್ನೂ ಐದಾರು ಗಂಟೆಯೂ ಆಗಿರಲಿಲ್ಲ. ಆಗಲೇ ಅವರೊಂದಿಗೆ ತಾಷ್ಕೆಂಟ್‌ಗೆ ತೆರಳಿದ್ದ ವಿದೇಶಾಂಗ ಖಾತೆ ಸಚಿವ ಸ್ವರಣ್ ಸಿಂಗ್ ಮುಂದಿನ ಪ್ರಧಾನಿ ಯಾರಾಗ ಬೇಕೆಂಬ ಬಗ್ಗೆ ಚರ್ಚೆ ಆರಂಭಿಸಿದ್ದರು. ಶಾಸ್ತ್ರಿ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಕುಲದೀಪ್ ನಯ್ಯರ್ ಜತೆ ಈ ವಿಷಯ ಪ್ರಸ್ತಾಪಿಸಿದರಂತೆ. ಅಷ್ಟಕ್ಕೇ ಸುಮ್ಮನಾಗದ ಸಿಂಗ್, ವೈ.ಬಿ.ಚೌಹಾಣ್ ಜತೆ ಈ ವಿಷಯವಾಗಿ ಗಹನ ಚರ್ಚೆಯಲ್ಲಿ
ತೊಡಗಿದ್ದರು.

ಶಾಸ್ತ್ರಿ ಅವರ ನಿಧನದ ಸುದ್ದಿ ತಿಳಿಯುತ್ತಲೇ, ವಿಶೇಷ ವಿಮಾನದಲ್ಲಿ ಚೆನ್ನೈನಿಂದ ದೆಹಲಿಗೆ ದೌಡಾಯಿಸಿದ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ್ ವಿಮಾನದಲ್ಲಿ ತಮ್ಮೊಂದಿಗಿದ್ದ ನಾಯಕರ ಜತೆ ಇಂದಿರಾ ಗಾಂಽಯವರನ್ನು ಪ್ರಧಾನಿ ಮಾಡಿದರೆ ಹೇಗೆ ಎಂದು ಕೇಳಿದ್ದರು. ಅವರು ದೆಹಲಿಗೆ ಬರುವುದಕ್ಕಿಂತ ಮೊದಲೇ ಶಾಸ್ತ್ರಿ ಅವರ ಉತ್ತರಾಽಕಾರಿ ಯಾರಾಗಬೇಕೆಂಬ ಬಗ್ಗೆ ನಿರ್ಧಾರಕ್ಕೆ ಬಂದಿದ್ದರು. ಶ್ರೇಷ್ಠತೆ ಹಾಗೂ ಅರ್ಹತೆಯೇ
ಮಾನದಂಡವಾಗಿದ್ದರೆ ಮೊರಾರ್ಜಿ ದೇಸಾಯಿ ಪ್ರಧಾನಿ ಆಗಬೇಕಿತ್ತು. ಆದರೆ ಮೊರಾರ್ಜಿ ದೇಸಾಯಿ ಮಹಾ ಜಿಗುಟ ಹಾಗೂ ಯಾರ ಮಾತನ್ನೂ ಕೇಳದ ಮೊಂಡ ಎಂಬ ಕಾರಣಕ್ಕೆ ಇಂದಿರಾ ಗಾಂಧಿಯೇ ಆಗಲಿ ಎಂದು ಕಾಮರಾಜ್ ತೀರ್ಮಾನಿಸಿದ್ದರು.

ಶಾಸ್ತ್ರಿಯವರ ಪಾರ್ಥಿವ ಶರೀರ ದೆಹಲಿಗೆ ಬರುವುದಕ್ಕಿಂತ ಮುನ್ನವೇ ಉತ್ತರಾಧಿಕಾರಿ ಪ್ರಶ್ನೆ ಈ ಎಲ್ಲ ನಾಯಕರ ತಲೆಯೊಳಗೆ ಭೂತಾಕಾರ ಪಡೆದಿತ್ತು. ಕಾಟಾಚಾರಕ್ಕೆ ಎಲ್ಲರೂ ಶಾಸ್ತ್ರಿ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದರು. ನಂತರ ಕಾಮರಾಜ್, ಇಂದಿರಾ ಹಾಗೂ ಮೊರಾರ್ಜಿ
ಮನೆಯಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಿಕೊಳ್ಳುತ್ತಿದ್ದರು. ಶಾಸ್ತ್ರಿಯವರ ನಿಗೂಢ ಸಾವಿನ ಬಗ್ಗೆ ತಿಳಿದುಕೊಳ್ಳಲು ಯಾರಿಗೂ ಆಸಕ್ತಿಯಿರಲಿಲ್ಲ. ಶಾಸಿಯವರ ಅಂತ್ಯಕ್ರಿಯೆ ಮುಗಿದರೆ ಸಾಕು ಎಂಬುದು ಅವರ ಧೋರಣೆಯಿಂದ ಗೊತ್ತಾಗುತ್ತಿತ್ತು.

ಪ್ರಧಾನಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯಾಗಲಿ ಎಂದು ಕಾಂಗ್ರೆಸ್ ಪಕ್ಷ ಬಯಸಿತು. ಪಕ್ಷದ ಎಲ್ಲ ಲೋಕಸಭಾ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ, ನಿರ್ಧರಿಸುವ ಅಧಿಕಾರವನ್ನು ಕಾಮರಾಜ್ ಅವರಿಗೆ ನೀಡಲಾಯಿತು. ಬಹುತೇಕ ಸಂಸದರು ಇಂದಿರಾ ಪರವಾಗಿದ್ದಾರೆಂದು ಅವರು ತಿಳಿಸಿದರು. ಮೊರಾರ್ಜಿ ದೇಸಾಯಿ ಅದನ್ನು ಒಪ್ಪಲಿಲ್ಲ. ಆದರೆ ಕೊನೆಯಲ್ಲಿ ಅವರೇ ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆಯಾದರು.
ವಿಚಿತ್ರ ಅಂದ್ರೆ ಕಾಂಗ್ರೆಸ್ ಪಕ್ಷದ ಬಹುತೇಕ ಮುಖ್ಯಮಂತ್ರಿಗಳು ಮೊರಾರ್ಜಿ ಪರವಾಗಿದ್ದರು. ಇಂದಿರಾ ಪ್ರಧಾನಿಯಾಗಿ ಆಯ್ಕೆಯಾಗುವಲ್ಲಿ ಕಾಮರಾಜ್ ನಿರ್ಣಾಯಕ ಪಾತ್ರ ವಹಿಸಿದರೆಂಬುದು ಸರ್ವವಿಧಿತ.

ಇಂದಿರಾ ಪ್ರಧಾನಿಯಾಗಿ ಆಯ್ಕೆಯಾದ ನಂತರ ಅವರು ಶಾಸ್ತ್ರಿ ನಿಧನದ ಸುತ್ತ ಕವಿದಿದ್ದ ವಿವಾದವನ್ನು ವ್ಯವಸ್ಥಿತವಾಗಿ ಸುಮ್ಮನಾಗಿಸಿದರು. ಆಗಾಗ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಆಡಳಿತ ಪಕ್ಷದ ಸದಸ್ಯರು ‘ಕರೇಂಗೆ, ದೇಖೇಂಗೆ’ ಎಂಬ ಹಾರಿಕೆ ಉತ್ತರ ಕೊಡುತ್ತಿದ್ದರು. ಅವರ‍್ಯಾರಿಗೂ ಶಾಸ್ತ್ರಿಯವರ ನಿಧನದ ಸತ್ಯಾಸತ್ಯತೆಯನ್ನು ತಿಳಿಯುವ ಆಸಕ್ತಿಯಾಗಲಿ, ಹೊಣೆಗಾರಿಕೆಯಾಗಲಿ ಇರಲಿಲ್ಲ. ಶಾಸ್ತ್ರಿಯವರಂತೂ ನಿಧನರಾದರು, ಇನ್ನೂ ಅವರ ನೆನಪನ್ನೂ ಸಾಯಿಸದೇ ಬಿಡಬಾರದು ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದಂತಿತ್ತು. ಅದಾದ ಬಳಿಕ ಶಾಸಿಯವರ ಹೆಸರನ್ನಾಗಲಿ, ಫೋಟೊವನ್ನಾಗಲಿ ಕಾಂಗ್ರೆಸ್ ನಾಯಕರು ಬಳಸಲಿಲ್ಲ.

ಭಾರತ ಸರಕಾರದ ಈ ತಣ್ಣನೆಯ ಧೋರಣೆ ರಷ್ಯಾಕ್ಕೂ ಅರ್ಥವಾಗಿತ್ತು. ಶಾಸ್ತ್ರಿಯವರ ನಿಗೂಢ ಸಾವಿನ ಬಗ್ಗೆ ಯಾವ ಉತ್ತರವನ್ನೂ ನೀಡಲಿಲ್ಲ. ಕಾಂಗ್ರೆಸ್ ನಾಯಕರು ಈ ವಿಷಯ ವನ್ನು ಮರೆತೇ ಬಿಟ್ಟರು. ಶಾಸ್ತ್ರಿಯವರು ನಿಧನರಾಗದಿದ್ದರೆ, ತಮ್ಮ ನಾಯಕಿ ಇಂದಿರಾಗಾಂಧೀ  ಪ್ರಧಾನಿ ಯಾಗುತ್ತಿರಲಿಲ್ಲ. ಆದ್ದರಿಂದ ಈ ಬಗ್ಗೆ ಮಾತಾಡಿದರೆ, ತಮ್ಮ ನಾಯಕಿಗೆ ಮಾಡುವ ಅಪಚಾರವೆಂದು ಎಲ್ಲ ನಾಯಕರು ಸುಮ್ಮನಾಗಿಬಿಟ್ಟರು.
ಶಾಸಿಯವರ ಸಾವು ನಿಗೂಢವಾಗಿಯೇ ಉಳಿದುಬಿಟ್ಟಿತು. ತಾಷ್ಕೆಂಟ್‌ನ ಪರಾಂಡೆಯವರು ಅಂದಿನ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ವಿವರಿಸಿದರು.

ಶಾಸ್ತ್ರಿಯವರ ನಿಧನದ ನಂತರವೇ ದೇಶದ ರಾಜಕೀಯ ಕೆಟ್ಟು ಕಿಲುಸಾರೆದ್ದು ಹೋಯ್ತು. ಅವರು ಕೆಲ ವರ್ಷ ಬದುಕಿದ್ದಿದ್ದರೆ, ದೇಶದ ಗತಿಯನ್ನೇ ಬದಲಿಸುತ್ತಿದ್ದರು. ಅವರ ನಿಧನದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಯಿತು ಎಂದು ಗದ್ಗದಿತರಾದರು.

ಉಜ್ಬೆಕಿಸ್ತಾನದ ಎರಡು ಹಾಸ್ಯ ಪ್ರಸಂಗಗಳು

ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ಜೋಕುಗಳನ್ನು ಕೇಳುವ ಅಭ್ಯಾಸ. ನಮ್ಮ ಗೈಡ್ ಭಲೇ ವಿನೋದಪ್ರಿಯ. ಎರಡು ಹಾಸ್ಯ ಪ್ರಸಂಗಗಳನ್ನುಹೇಳುವಂತೆ ಕೋರಿದೆ. ಆತ ಹೇಳಿದ್ದು.

ಮೊದಲ ಪ್ರಸಂಗ: ಒಬ್ಬ ಅಮೆರಿಕನ್ ಹಾಗೂ ಉಜ್ಬೆಕ್ ತಾಷ್ಕೆಂಟ್‌ನ ಪಾರ್ಲಿಮೆಂಟ್ ಮುಂದೆ ಮಾತಾಡುತ್ತಾ ಹೋಗುತ್ತಿದ್ದರು. ಅಮೆರಿಕನ್ ಪ್ರಜೆ ತನ್ನ ದೇಶದ ಬಗ್ಗೆ ಕೊಚ್ಚಿಕೊಂಡ-‘ನಮ್ಮ ದೇಶದಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದು. ವೈಟ್ ಹೌಸ್ ಮುಂದೆ ನಿಂತುಕೊಂಡು ಅಧ್ಯಕ್ಷ
ಬರಾಕ್ ಒಬಾಮನನ್ನು ಹಿಗ್ಗಾಮುಗ್ಗಾ ಬೈಯಬಹುದು’. ಅದಕ್ಕೆ ಉಜ್ಬೆಕ್ ಪ್ರಜೆ ಹೇಳಿದ-‘ನಮ್ಮ ದೇಶದಲ್ಲೂ ವಾಕ್ ಸ್ವಾತಂತ್ರ್ಯವಿದೆ. ನಾವು ಎಲ್ಲಿ ನಿಂತು ಬೇಕಾದರೂ ಬರಾಕ್ ಒಬಾಮನನ್ನು ವಾಚಾಮಗೋಚರ ಬೈಯಬಹುದು’. ಎರಡನೆಯ ಪ್ರಸಂಗ: ಉಜ್ಬೆಕಿಸ್ತಾನದ ಅಧ್ಯಕ್ಷರಾಗಿದ್ದ ಇಸ್ಲಾಂ
ಕರಿಮೊವ್‌ಗೆ ಭಿಕ್ಷುಕರನ್ನು ಕಂಡರೆ ಆಗದು. ಭಿಕ್ಷಾಟನೆಯನ್ನು ಮೂಲೋಚ್ಚಾಟನೆ ಮಾಡುವುದೇ ತಮ್ಮ ಗುರಿ ಎಂದು ಭಾಷಣದಲ್ಲಿ ಹೇಳುತ್ತಿದ್ದರು. ಅವರು ಹಾಗೆ ಹೇಳಿದ ಮರುದಿನ ಪತ್ರಿಕೆಗಳು ಭಿಕ್ಷುಕರ ಫೋಟೊವನ್ನು ಪ್ರಕಟಿಸಿ ಅಧ್ಯಕ್ಷರಿಗೆ ಮುಜುಗರವನ್ನುಂಟು ಮಾಡುತ್ತಿದ್ದವು.

ಒಂದು ವರ್ಷ ಕರಿಮೊವ್ ಭಿಕ್ಷಾಟನೆ ಮೂಲೋಚ್ಚಾಟನೆ ಮಾಡುವ ಬಗ್ಗೆ ಮಾತಾಡಿರಲಿಲ್ಲ. ಅದಾದ ಬಳಿಕ ಒಂದು ದಿನ ತಮ್ಮ ಭಾಷಣದಲ್ಲಿ ಪುನಃ ಭಿಕ್ಷಾಟನೆ ಬಗ್ಗೆ ಪ್ರಸ್ತಾಪಿಸಿದರು. ಮರುದಿನ ಪತ್ರಿಕೆಗಳಲ್ಲಿ ತಾಷ್ಕೆಂಟಿನ ಬೀದಿಗಳಲ್ಲಿ ಭಿಕ್ಷೆ ಬೇಡುವ ವರ ಚಿತ್ರ ಪ್ರಕಟವಾಯಿತು. ಇದಕ್ಕೆ ಅಧ್ಯಕ್ಷರು
ಹೇಳಿದರು-‘ನಮ್ಮ ದೇಶದಲ್ಲಿ ಭಿಕ್ಷುಕರು ಇಲ್ಲ. ಅವರೆಲ್ಲರನ್ನೂ ರಷ್ಯಾಕ್ಕೆ ಕಳಿಸಲಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ಫೋಟೊದಲ್ಲಿರುವವರು ಉಜ್ಬೆಕಿಗಳಲ್ಲ, ಅವರೆಲ್ಲ ರಷ್ಯಾದಭಿಕ್ಷುಕರು’.

ಫುಟ್ಬಾಲ್ ಮತ್ತು ಉಜ್ಬೆಕಿಗಳು 
ಉಜ್ಬೆಕಿಸ್ತಾನದಲ್ಲಿ ಫುಟ್ಬಾಲ್ ಬಹಳ ಜನಪ್ರಿಯ ಆಟ. ಯುದ್ಧ ನಡೆಯುವಾಗ ಬೇಕಾದರೆ ಉಜ್ಬೆಕಿಗಳು ನಿದ್ದೆ ಹೋಗಬಹುದು. ತಮ್ಮ ದೇಶ ಆಡುವ ಫುಟ್ಬಾಲ್ ಪಂದ್ಯವನ್ನು ಇಡೀ ದೇಶವೇ ವೀಕ್ಷಿಸುತ್ತೆ. ಅದರಲ್ಲೂ ಉಜ್ಬೆಕಿ ಫುಟ್ಬಾಲ್ ಪ್ರೇಕ್ಷಕರು ಮೈಮೇಲೆ ಭೂತ ಬಂದವರಂತೆ ವರ್ತಿಸುತ್ತಾರೆ.
ಫುಟ್ಬಾಲ್ ಪಂದ್ಯ ನಡೆಯುವಾಗ ಹೊಡೆದಾಟ, ಕೊಲೆಗಳಾಗುತ್ತವೆ. ಅಂಥ ಉನ್ಮಾದ! ಬೇರೆ ತಂಡವನ್ನು ಬೆಂಬಲಿಸಿದಳೆಂಬ ಕಾರಣಕ್ಕೆ ಹೆಂಡತಿ, ಗರ್ಲ್ ಫ್ರೆಂಡ್‌ಗಳನ್ನು ಸಾಯಿಸಿದ ಭೂಪರಿದ್ದಾರೆ. ಅಂಥ ಹುಚ್ಚರು ಉಜ್ಬೆಕಿ ಫುಟ್ಬಾಲ್ ಪ್ರೇಕ್ಷಕರು. ಅವರ ಬಗ್ಗೆ ಇರುವ ಕೆಲವು ಪ್ರಶ್ನೋತ್ತರಗಳನ್ನು
ಗಮನಿಸಿದರೆ, ಅವರ -ಟ್ಬಾಲ್ ಹುಚ್ಚುತನ ಗೊತ್ತಾದೀತು.

? ಉಜ್ಬೆಕಿಸ್ತಾನ ಫುಟ್ಬಾಲ್ ಟೀಮ್‌ಗೂ ಟೀ ಬ್ಯಾಗ್‌ಗೂ ಏನು ವ್ಯತ್ಯಾಸ?
-ಕನಿಷ್ಠ ಟೀ ಬ್ಯಾಗ್ ಕೊನೆತನಕ ಅಲ್ಲಿಯೇ ಇರುತ್ತದೆ!

? ಉಜ್ಬೆಕ್ ಫುಟ್ಬಾಲ್ ಪ್ರೇಮಿಗೂ, ಬಿಯರ್ ಬಾಟಲಿಗೂ ಏನು ಸಾಮ್ಯ?
-ಎರಡರ ಮೇಲ್ಭಾಗ ಮಾತ್ರ ಖಾಲಿ!

? ಉಜ್ಬೆಕ್ ಫುಟ್ಬಾಲ್ ಆಟಗಾರನ ದೃಷ್ಟಿ ಮಂದವಾದರೆ ಏನಾಗುತ್ತಾನೆ?
-ರೆಫರಿ

? ಆರೇಳು ತಿಂಗಳ ಮಗುವಿಗೂ, ಉಜ್ಬೆಕಿ ಫುಟ್ಬಾಲ್ ಪ್ರೇಮಿಗೂ ಏನು ವ್ಯತ್ಯಾಸ?

-ಹೊಟ್ಟೆ ತುಂಬಿದ ನಂತರ ಮಗು ಕುಡಿಯುವುದನ್ನು ನಿಲ್ಲಿಸುತ್ತದೆ.

? ಒಬ್ಬ ಉಜ್ಬೆಕಿ ಪ್ರೇಕ್ಷಕ ಎರಡು ಸೀಟುಗಳನ್ನು ಏಕೆ ಕಾಯ್ದಿರಿಸುತ್ತಾನೆ?
-ಒಂದು ತಾನು ಕುಳಿತುಕೊಳ್ಳಲು, ಮತ್ತೊಂದು, ಪಂದ್ಯ ಶುರುವಾಗುತ್ತಿದ್ದಂತೆ ಪಕ್ಕದಲ್ಲಿದ್ದವನನ್ನು ಎತ್ತಿ ಎಸೆಯಲು!

? ಕೈ ಹಾಗೂ ಕಾಲು ಇಲ್ಲದ ಉಜ್ಬೆಕಿ ಫುಟ್ಬಾಲ್ ಪ್ರೇಮಿಯನ್ನು ಏನೆನ್ನಬಹುದು?
-ಅತಿ ನಂಬುಗಸ್ಥ!

? ಉಜ್ಬೆಕಿ ಫುಟ್ಬಾಲ್ ಪ್ರೇಮಿಗೂ, ಹಂದಿಗೂ ಏನು ವ್ಯತ್ಯಾಸ?
-ಬೇಸರವಾದಾಗಲೆಲ್ಲ ಹಂದಿ ಎಲ್ಲೆಡೆ ಮೂತ್ರ ವಿಸರ್ಜಿಸುವುದಿಲ್ಲ ಹಾಗೂ ಕಚ್ಚುವುದಿಲ್ಲ!

? ಉಜ್ಬೆಕಿ ಫುಟ್ಬಾಲ್ ಪ್ರೇಮಿ ಹಾಸಿಗೆಯಲ್ಲಿ ಮಲಗಿದ ಹೆಂಡತಿಯನ್ನು ಸಾಯಿಸಿದ್ದೇಕೆ?

-ಅವನಿಗೆ ಸಾಕರ್‌ಗೂ ಸೆಕ್ಸ್‌ಗೂ ವ್ಯತ್ಯಾಸ ಗೊತ್ತಿರಲಿಲ್ಲ.

ಬುಖಾರದಲ್ಲಿ ಕಳೆದುಹೋದ ಅನುಭವ
ತಾಷ್ಕೆಂಟ್‌ದಿಂದ ಸುಮಾರು ೪೩೦ ಕಿಮೀ ದೂರದಲ್ಲಿರುವ ಬುಖಾರ ಎಂಬ ಸುಮಾರು ಎರಡೂವರೆ ಲಕ್ಷ ಜನಸಂಖ್ಯೆಯಿರುವ ನಗರ ಅಷ್ಟೊಂದು ಅಚ್ಚರಿಗಳನ್ನು ಹುದುಗಿಸಿಕೊಂಡಿರಬಹುದೆಂದು ಊಹಿಸಿರಲಿಲ್ಲ. ಬುಖಾರವನ್ನು ನಗರ ಎಂದು ಹೇಳುವುದಕ್ಕಿಂತ ಇತಿಹಾಸದ ಪ್ರಯೋಗಶಾಲೆ ಎಂದು ಕರೆಯುವುದೇ ವಾಸಿ. ಇಡೀ  ರಿನಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚು ಸ್ಮಾರಕಗಳಿವೆ, ಐತಿಹಾಸಿಕ ತಾಣಗಳಿವೆ, ಎಲ್ಲಿಯೇ ನಡೆದಾಡಿ ಇತಿಹಾಸದ ಪುಟಗಳ ಮೇಲೆ ನಡೆದಾಡಿದ ಅನುಭವವಾಗುತ್ತದೆ.

ಯಾವುದೇ ಕಟ್ಟಡ ಮುಟ್ಟಿದರೂ ಇತಿಹಾಸದಲ್ಲಿ ಕೈಯನ್ನು ಅದ್ದಿದಂತೆ. ಎಲ್ಲ ಕಟ್ಟಡ, ಸ್ಮಾರಕಗಳೆಲ್ಲ ಸಾವಿರ, ಸಾವಿರದ ಐನೂರು, ಎರಡು ಸಾವಿರ ವರ್ಷ ಹಳೆಯವು. ಯುನೆಸ್ಕೋದಿಂದ ‘ವರ್ಲ್ಡ್ ಹೆರಿಟೇಜ್ ಸೆಂಟರ್’ ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಬುಖಾರವನ್ನು ಒಂದೆರಡು ದಿನಗಳಲ್ಲಿ ನೋಡಲು ಸಾಧ್ಯವೇ ಇಲ್ಲ. ನಮ್ಮ ಜತೆಗೆ ಇದ್ದ ಸೂಫಿ ಸಂತರೊಬ್ಬರು ‘ಕಳೆದ ಎಪ್ಪತ್ತು ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ಈ ನಗರದ ಬಗ್ಗೆ
ಅಧ್ಯಯನ ನಡೆಸುತ್ತಿದ್ದೇನೆ. ಆಕಾಶದಲ್ಲಿರುವ ಒಂದು ನಕ್ಷತ್ರದ ಬಗ್ಗೆ ತಿಳಿದು ಕೊಂಡು ಎಲ್ಲವೂ ಗೊತ್ತು ಎಂದು ಭಾವಿಸುವುದು ಎಂಥ ಮೂರ್ಖ ತನವೋ, ಬುಖಾರದ ಇತಿಹಾಸದ ಬಗ್ಗೆ ಮಾತಾಡುವುದು ಸಹ’ ಎಂದರು.

ಬುಖಾರವನ್ನು ವಿಶ್ವ ನಾಗರಿಕತೆ ಉದಯದ ಹೆಬ್ಬಾಗಿಲು ಅಂತಾನೂ ಕರೆಯುತ್ತಾರೆ. ಇಲ್ಲಿನ ಪ್ರತಿ ಕಲ್ಲು, ಮಣ್ಣು, ಶಿಲೆ ಮಾನವ ಇತಿಹಾಸದ ಮೂಕ ಸಾಕ್ಷ್ಯದಾರರು ಎಂದು ಭಾವಿಸಲಾಗುತ್ತದೆ. ಈ ನಗರ ಕಲೆ, ಸಂಸ್ಕೃತಿ, ವಿದ್ಯಾಭ್ಯಾಸ, ಸಂಗೀತದ ನೆಲೆವೀಡಾಗಿತ್ತಂತೆ. ಬುಖಾರದಲ್ಲೊಂದೇ ಸುಮಾರು ಏಳು ಸಾವಿರ ಸೂಫಿ ಸಂತರು, ಸಂಗೀತಗಾರರು ನೆಲೆಸಿದ್ದರಂತೆ.

ಇಲ್ಲಿ ಈ ಸೂಫಿ ಸಂತರು, ವಿದ್ವಾಂಸರು ವಾಸಿಸಿದ ಮನೆಗಳಿವೆ. ಪ್ರತಿಯೊಂದು ಮನೆಗಳಿಗೆ ಭೇಟಿ ಕೊಡುವುದು ಅಸಾಧ್ಯ. ೧೯೨೦ರಲ್ಲಿ ರಷ್ಯಾ ಇಡೀ ನಗರವನ್ನು ಆಕ್ರಮಿಸಿಕೊಂಡು, ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯಿತು. ಆ ಸಂದರ್ಭದಲ್ಲಿ ಸುಮಾರು ಎರಡು ಕೋಟಿಗೂ ಅಽಕ ಪುಸ್ತಕ, ಅಪೂರ್ವ ಹಸ್ತಪ್ರತಿಗಳನ್ನು ಕದ್ದೊಯ್ದರು. ಅದರ ಸಾರವನ್ನು ಅರಿಯಲು ಸಾವಿರಾರು ವಿದ್ವಾಂಸರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡರು. ಆ ವಿದ್ವಾಂಸರು ಬಹಿರಂಗ ಪಡಿಸಿದ ರಹಸ್ಯದಿಂದ ೧೯೨೮ರಲ್ಲಿ ಬುಖಾರವನ್ನು ಮತ್ತೊಮ್ಮೆ ಕೊಳ್ಳೆ ಹೊಡೆಯಲಾಯಿತು.

‘ಹಣ ಕೊಳ್ಳೆ ಹೊಡೆದರೆ ದೊಡ್ಡದಲ್ಲ. ರಷಿಯನ್‌ರು ನಮ್ಮ ಜ್ಞಾನ, ವಿದ್ಯೆ, ಅಪೂರ್ವ ಸಂಸ್ಕೃತಿಯನ್ನು ಕೊಳ್ಳೆ ಹೊಡೆದರು. ರಷಿಯನ್‌ರಿಗೆ ಉಪಗ್ರಹ ಉಡಾವಣೆ ಹೇಳಿ ಕೊಟ್ಟಿದ್ದೇ ಬುಖಾರದ ವಿಜ್ಞಾನಿಗಳು. ಇಂದು ರಷ್ಯಾ ಜಾಗತಿಕ ಶಕ್ತಿಯಾಗಿದ್ದರೆ ಅದಕ್ಕೆ ಬುಖಾರ ಕಾರಣ’ ಎಂಬುದು ಸೂಫಿ
ಸಂತರ ಅಭಿಮತ. ಅದೇನೇ ಇರಲಿ, ಒಂದು ಊರಿನಲ್ಲಿ ಇಷ್ಟೊಂದು ಅಚ್ಚರಿಗಳು ಇರುವುದೇ ಅಚ್ಚರಿ. ಒಂದು ಊರಿಗೆ ಹೋಗಿ ಕಳೆದು ಹೋದೆ ಅಂತಾರಲ್ಲ, ಆ ಅನುಭವ ಬುಖಾರದಲ್ಲಿ ಆಗುವುದಂತೂ ಸತ್ಯ.