Friday, 20th September 2024

kiran upadyay column: ಆಕೆ ತೊನೆಯದ ತೊಪ್ಪಲ ತೊಪ್ಪೆಯಾಗಿದ್ದಳು !

ವಿದೇಶವಾಸಿ

dhyapaa@gmail.com

ಕೊರಳಿಗೆ ಬಿಗಿದ ಸರಪಳಿ ಅರುಣಾಳ ಕತ್ತಿನ ಭಾಗದಲ್ಲಿರುವ ನರಗಳನ್ನು, ಬೆನ್ನುಹುರಿಯನ್ನು ಘಾಸಿಗೊಳಿಸಿತ್ತು. ಮಿದುಳಿಗೆ ಆಮ್ಲಜನಕ ಪೂರೈಕೆಯಾಗದ ಕಾರಣ ಆಕೆ ಕೋಮಾಗೆ ಹೋಗಿದ್ದಳು. ಮಿದುಳಿನ ಕಾಂಡ ಛಿದ್ರವಾಗಿತ್ತು. ಕಣ್ಣುಗಳು ನಿಷ್ಕ್ರಿಯಗೊಂಡಿದ್ದವು. ಮಾತು ನಿಂತುಹೋಗಿತ್ತು. ಕೋಮಾದಲ್ಲಿದ್ದರೂ ಅರುಣಾ ಕೊನೆಯ ತನಕ ಆಗಾಗ ಚೀರಿಕೊಳ್ಳುತ್ತಿದ್ದಳು.

ಕಳೆದ ವಾರದ ಅಂಕಣದಲ್ಲಿ ಕೋಲ್ಕತ್ತಾದ ಆರ್ .ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆದ ಹೀನಾಯ ಘಟನೆಯ ಬಗ್ಗೆ ಬರೆದಿದ್ದೆ. ಅದರಲ್ಲಿ, ಐದು ದಶಕದ ಹಿಂದೆ ಅರುಣಾ ಎಂಬ ದಾದಿಯ ಕುರಿತು ಕಿರಿದಾಗಿ ಪ್ರಸ್ತಾಪಿಸಿದ್ದೆ. ಅರುಣಾಳ ಮತ್ತು ಆಕೆಯ ಜತೆ ನಡೆದ ಘಟನೆಯ ಇನ್ನಷ್ಟು ಮಾಹಿತಿಯನ್ನು ಓದುಗರು ಅಪೇಕ್ಷಿಸಿದ್ದರು. ಅದಕ್ಕೆ ತಕ್ಕಾಗಿ ಈ ಅಂಕಣ, ಅರುಣಾಗೆ ಸಮರ್ಪಣ.

ಹಳದಿಪುರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮ. ಈಗ ಸುಮಾರು ಹತ್ತು ಸಾವಿರ ಜನಸಂಖ್ಯೆ ಇರುವ ಆ ಗ್ರಾಮದಲ್ಲಿ, ಒಂದು ಕಾಲದಲ್ಲಿ ರಾಮಚಂದ್ರ ಶಾನಭಾಗರ ಕುಟುಂಬವೂ ಒಂದಾಗಿತ್ತು. ರಾಮಚಂದ್ರ ಶಾನಭಾಗರಿಗೆ ೬ ಗಂಡು, ೩ ಹೆಣ್ಣು ಸೇರಿ ಒಟ್ಟು ೯ ಜನ ಮಕ್ಕಳು, ಅದರಲ್ಲಿ ಅರುಣಾ ಕೂಡ ಒಬ್ಬಳು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಒಂದು ವರ್ಷ ಆಗುತ್ತಿರುವಾಗಲೇ
ಅರುಣಾ ಜನನವಾಗಿತ್ತು. ಪ್ರೌಢಶಾಲೆಯವರೆಗಿನ ಓದನ್ನು ಊರಿನಲ್ಲಿಯೇ ಮುಗಿಸಿದ್ದಳು ಅರುಣಾ. ಅಲ್ಲಿಯವರೆಗೆ ಅವರ ಮನೆಯಲ್ಲಿ ಅವಳಷ್ಟು ಓದಿ ದವರು ಯಾರೂ ಇರಲಿಲ್ಲ. ಆಕೆ ಅಷ್ಟಕ್ಕೇ ನಿಲ್ಲಲಿಲ್ಲ.
ಅರುಣಾ ಎಂಬ ಬಾಲೆ ಮನದಲ್ಲಿ ಆಕಾಂಕ್ಷೆ, ಕಣ್ಣಿನಲ್ಲಿ ಕನಸು ತುಂಬಿಕೊಂಡಿದ್ದಳು. ದಾದಿ ಆಗಬೇಕು, ಜನರ ಸೇವೆ ಮಾಡಬೇಕು ಎಂಬ ಹಂಬಲದೊಂದಿಗೆ ನರ್ಸಿಂಗ್ ಓದುವುದಕ್ಕಾಗಿ ಮುಂಬೈಗೆ ಪ್ರಯಾಣ
ಮಾಡಿದ್ದಳು.

ಶಾನುಭಾಗರದ್ದು ಶ್ರೀಮಂತವೇನೂ ಅಲ್ಲದ ಸಾಧಾರಣ ಮಧ್ಯಮ ವರ್ಗದ ಕುಟುಂಬವಾಗಿತ್ತು. ಅರುಣಾ ಮುಂಬೈಗೆ ಹೋಗಿ ಅಕ್ಕನ ಮನೆಯಲ್ಲಿ ಇದ್ದು ಕಲಿಯುವುದಕ್ಕೆ ಅದೂ ಒಂದು ಕಾರಣ ಇದ್ದಿರಬಹುದು. ಅರುಣಾಳ ಅಕ್ಕ ಶಾಂತಾ ಮುಂಬೈನ ವರ್ಲಿ ಯ ಬಿಎಂಸಿ ಬಡಾವಣೆಯಲ್ಲಿ ನೆಲೆಸಿದ್ದರು. ಸ್ವಲ್ಪ ದಿನ ಅಕ್ಕನ ಮನೆಯಲ್ಲಿದ್ದ ನಂತರ ಅರುಣಾಗೆ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ದೊರಕಿತು. ಆದರೆ ಮನೆಯಿಂದ
ಕಾಲೇಜ್ ದೂರ ಇದ್ದ ಕಾರಣ ಹಾಸ್ಟೆಲ್‌ನಲ್ಲಿ ಉಳಿದು ಕಲಿಕೆ ಮುಗಿಸಿದ್ದಳು. ೧೯೬೬ರಲ್ಲಿ ಓದು ಮುಗಿಸಿದ ಅರುಣಾ, ಮುಂಬೈನ ಪರೇಲ್‌ನಲ್ಲಿರುವ ಕೆಇಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ) ಆಸ್ಪತ್ರೆಯಲ್ಲಿ
ದಾದಿಯಾಗಿ ಕೆಲಸಕ್ಕೆ ಸೇರಿಕೊಂಡಳು. ಕೆಲಸಕ್ಕೆ ಸೇರಿದ ಕೆಲವು ತಿಂಗಳ ತನ್ನ ನಿಷ್ಠೆ ಮತ್ತು ಬದ್ಧತೆಯಿಂದಾಗಿ ಅರುಣಾ ಆಸ್ಪತ್ರೆಯ ವೈದ್ಯರ ಪ್ರೀತಿಯ ದಾದಿಯಾದಳು. ಬೆಳಗಿನ ಜಾವವೇ ಆಗಲಿ, ಮಧ್ಯರಾತ್ರಿಯೇ ಆಗಲಿ, ಕೆಲಸಕ್ಕೆ ಎಂದೂ ಆಕೆ ‘ಇಲ್ಲ’ ಎನ್ನುತ್ತಿರಲಿಲ್ಲ.

೨೪ ಗಂಟೆಯೂ ಕೆಲಸಕ್ಕೆ ಸಿದ್ಧಳಾಗಿರುತ್ತಿದ್ದ ಅವಳನ್ನು ವೈದ್ಯಕೀಯ ಲೋಕದಲ್ಲಿ ಕ್ಲಿಷ್ಟಕರವಾದ ನರಗಳ ಶಸ್ತ್ರಚಿಕಿತ್ಸೆಯ ವಿಭಾಗದಲ್ಲಿ ದಾದಿಯಾಗಿ ನೇಮಿಸಲಾಗಿತ್ತು. ಅಲ್ಲಿ ೩ ವರ್ಷ ಸತತ ಕೆಲಸ ಮಾಡಿದ
ನಂತರ, ಅದೇ ಆಸ್ಪತ್ರೆಯಲ್ಲಿ ಶ್ವಾನಗಳ ಚಿಕಿತ್ಸೆ ಮತ್ತು ಪ್ರಯೋಗ ಕೇಂದ್ರಕ್ಕೆ ಉಸ್ತುವಾರಿಯಾಗಿ ಭಡ್ತಿ ಪಡೆದಿದ್ದಳು. ಅದೇ ವಿಭಾಗದಲ್ಲಿ ಸೋಹನ್‌ಲಾಲ್ ಬರ್ತಾ ವಾಲ್ಮೀಕಿ ಎಂಬ ಹೆಸರಿನ ಉತ್ತರಪ್ರದೇಶ ಮೂಲದ
ವ್ಯಕ್ತಿಯೊಬ್ಬ ಸ್ವಚ್ಛತಾಕರ್ಮಿಯಾಗಿ ಕೆಲಸ ಮಾಡುತ್ತಿದ್ದ. ನಾಯಿಗಳಿಗೆ ಸ್ನಾನ ಮಾಡಿಸುವುದು, ಊಟ ಕೊಡುವುದು, ಬೋನನ್ನು, ಕೋಣೆಯನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಆತನ ಕೆಲಸವಾಗಿತ್ತು. ನಾಯಿಗಳಿಗೆ
ಹೆದರುತ್ತಿದ್ದ ಆತನಿಗೆ ಆ ಕೆಲಸ ಸುತರಾಂ ಇಷ್ಟವಿರಲಿಲ್ಲ. ತನ್ನನ್ನು ಬೇರೆ ಕಡೆ ವರ್ಗ ಮಾಡುವಂತೆ ಆತ ಆಸ್ಪತ್ರೆಯವರಲ್ಲಿ ಕೇಳಿಕೊಂಡಿದ್ದ. ನಾಯಿಗಳಿಗೆ ಕೊಡುವ ಆಹಾರವನ್ನು ಕದಿಯುವ ಆರೋಪವೂ ಆತನ ಮೇಲೆ ಇತ್ತು.

ಅದನ್ನು ಅರುಣಾಳೇ ಮೊದಲು ಪತ್ತೆಹಚ್ಚಿದ್ದಳು. ಸೋಹನ್‌ಲಾಲ್‌ಗೂ ಅರುಣಾಳಿಗೂ ಕೆಲಸದ ವಿಷಯದಲ್ಲಿ ಹೊಂದಾಣಿಕೆಯೇ ಇರಲಿಲ್ಲ. ಇಬ್ಬರೂ ಆಗಾಗ ಒಬ್ಬರನ್ನೊಬ್ಬರು ದೂರಿಕೊಳ್ಳುತ್ತಿದ್ದರು. ಕೆಲವೊಮ್ಮೆ ಮಾತಿನ ಚಕಮಕಿ ತಾರಕ ಮಟ್ಟವನ್ನು ತಲುಪುತ್ತಿತ್ತು. ಆದರೆ ಇದು ‘ಆ’ ಪರಿಯ ಅತಿರೇಕಕ್ಕೆ ಹೋಗುತ್ತದೆ ಎಂದು ಇಬ್ಬರೂ ಎಣಿಸಿರಲಿಲ್ಲ. ಅವು ೧೯೭೩ರ ಆರಂಭದ ದಿನಗಳು. ಆ ದಿನಗಳು ಅರುಣಾಳ ಜೀವನದ ಅತ್ಯಂತ ಮಧುರವಾದ ಕ್ಷಣ ಗಳು ಎಂದರೂ ತಪ್ಪಲ್ಲ. ಏಕೆಂದರೆ ಅದೇ ಸಂದರ್ಭ ದಲ್ಲಿ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರ ಜತೆ ಜೊತೆಯಾಗುವ ಅದೃಷ್ಟ(!) ಅರುಣಾಗೆ ಒದಗಿತ್ತು. ಆಗಷ್ಟೇ ರೆಸಿಡೆಂಟ್ ಡಾಕ್ಟರ್ ಆಗಿ ನೇಮಕವಾಗಿದ್ದ ವೈದ್ಯರ ಜತೆ ಪ್ರೇಮಾಂಕುರವಾಗಿತ್ತು.

ಎಲ್ಲವೂ ಸರಿಯಾಗಿದ್ದರೆ ೧೯೭೪ರ ಫೆಬ್ರವರಿಯಲ್ಲಿ ಡಾ.ಪ್ರತಾಪ್ ದೇಸಾಯಿ ಮತ್ತು ಅರುಣಾ ಮದುವೆ ಆಗುವ ದಿನವೂ ನಿಗದಿಯಾಗಿತ್ತು. ಇಬ್ಬರೂ ಸೇರಿ ಮುಂಬೈನಲ್ಲಿ ಮನೆ ಖರೀದಿಸಬೇಕೆಂದು ಹಣವನ್ನೂ
ಜೋಡಿಸತೊಡಗಿದ್ದರು. ಆದರೆ ಕ್ರೂರವಿಧಿಯ ನಿರ್ಣಯ ಬೇರೆಯೇ ಆಗಿತ್ತು. ೨೭ ನವೆಂಬರ್ ೧೯೭೩. ಈ ದಿನ ಕೇವಲ ಅರುಣಾಳ ಜೀವನದಲ್ಲಷ್ಟೇ ಅಲ್ಲ, ಭಾರತದ ವೈದ್ಯಕೀಯ ಮತ್ತು ಕಾನೂನು ಇತಿಹಾಸದಲ್ಲೂ ನೆನಪಿನಲ್ಲಿರಬೇಕಾದ ದಿನವಾಗುತ್ತದೆಂದು ಆ ಕ್ಷಣದಲ್ಲಿ ಯಾರೂ ಎಣಿಸಿರಲಿಕ್ಕಿಲ್ಲ. ಅರುಣಾಳ ಜೀವನದಲ್ಲಂತೂ ಮುಂದಿನ ದಿನಗಳು ಎಷ್ಟು ಕ್ರೂರವಾಗಿತ್ತೆಂದರೆ, ಅಂದು ಏನು ನಡೆಯಿತು ಎಂದು ಹೇಳುವಷ್ಟು ಶಕ್ತಿಯೂ ಬುದ್ಧಿಯೂ ಆಕೆಯಲ್ಲಿ ಇರಲಿಲ್ಲ. ಅದುವರೆಗೆ ಬದುಕಿದ್ದಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚಿನ ದಿನಗಳನ್ನು ಜೀವ ಇದ್ದೂ ಇಲ್ಲದಂತೆ, ಬದುಕಿದ್ದೂ ಸತ್ತಂತೆ, ಅದೇ ಆಸ್ಪತ್ರೆಯ ಹಾಸಿಗೆಯ ಮೇಲೆ ಬಿದ್ದುಕೊಂಡಿರುವ ವಿಽಲಿಖಿತ ಆಕೆಯ ಪಾಲಿನದ್ದಾಗಿತ್ತು.

ನವೆಂಬರ್ ೨೭ರ ರಾತ್ರಿ ತನ್ನ ಕೆಲಸ ಮುಗಿಸಿದ ಅರುಣಾ, ಆಸ್ಪತ್ರೆಯ ನೆಲಮಹಡಿಯಲ್ಲಿರುವ ಕೋಣೆಯಲ್ಲಿ ಬಟ್ಟೆ ಬದಲಾಯಿಸುತ್ತಿದ್ದಳು. ಅಲ್ಲಿಗೆ ಬಂದ ಸೋಹನ್‌ಲಾಲ್, ಅರುಣಾಳೊಂದಿಗೆ ಮಾತಿಗೆ ಇಳಿದಿದ್ದ. ತನ್ನ ಅತ್ತೆಗೆ ಅನಾರೋಗ್ಯ ಇರುವ ಕಾರಣ ಹೆಂಡತಿಯನ್ನು ಕರೆದುಕೊಂಡು ಊರಿಗೆ ಹೋಗಬೇಕು, ಅದಕ್ಕಾಗಿ ರಜೆ ಬೇಕು ಎಂದು ಕೇಳಿಕೊಂಡ. ಆತನಿಗೆ ರಜೆ ಕೊಡುವ ನಿರ್ಣಯ ಅರುಣಾಳ ಕೈಯಲ್ಲಿತ್ತು. ಮೊದಲಿಂದಲೂ ಅವರ ನಡುವಿನ ಸಂಬಂಧ ಎಣ್ಣೇ-ಶೀಗೆಕಾಯಿಯಂತೆ ಇತ್ತು. ರಜೆ ಕೊಡಲು ನಿರಾಕರಿಸಿದ ಅರುಣಾ ಆತನ ವಿರುದ್ಧ ಆಡಳಿತ ಮಂಡಳಿಗೆ ದೂರು ನೀಡುವುದಾಗಿ ತಿಳಿಸಿದಳು. ಅವನ ವರ್ತನೆ,
ಕರ್ತವ್ಯಲೋಪಗಳ ಬಗ್ಗೆ ತಿಳಿಸುವುದಾಗಿ ಹೇಳಿದಳು.

ಅದರಿಂದ ರೊಚ್ಚಿಗೆದ್ದ ಸೋಹನ್ ಲಾಲ್ ತಾನೂ ಅರುಣಾ ಕುರಿತು ದೂರು ನೀಡುವುದಾಗಿ ಹೇಳಿದ. ಅಲ್ಲಿಗೆ ಇಬ್ಬರ ನಡುವೆ ಜೋರಾದ ಜಗಳವೇ ಶುರುವಾಗಿತ್ತು. ಅದು ಕೈ ಕೈ ಮಿಲಾಯಿಸುವ ಹಂತ ತಲುಪಿತು.
ವ್ಯಗ್ರನಾಗಿದ್ದ ಸೋಹನ್‌ಲಾಲ್ ಪಕ್ಕದಲ್ಲಿಯೇ ಇದ್ದ ನಾಯಿಯ ಕೊರಳಿಗೆ ಕಟ್ಟುವ ಸರಪಳಿಯನ್ನು ಕೈಗೆತ್ತಿಕೊಂಡು ಅರುಣಾಳ ಕೊರಳಿಗೆ ಸುತ್ತಿದ್ದ. ಒಬ್ಬರನ್ನೊಬ್ಬರು ಜೋರಾಗಿ ತಳ್ಳುತ್ತ-ನೂಕುತ್ತ ಇರುವ
ಸಂದರ್ಭದಲ್ಲಿ ಸರಪಳಿಯನ್ನು ಅರುಣಾಳ ಕುತ್ತಿಗೆಗೆ ಬಿಗಿಯಾಗಿ ಬಿಗಿದಿದ್ದ ಸೋಹನ್‌ಲಾಲ್, ಅರುಣಾಳ ಮೇಲೆ ಬಲಾತ್ಕಾರಕ್ಕೂ ಮುಂದಾಗಿದ್ದ. ಉಸಿರುಗಟ್ಟಿ ನಿಶ್ಚೇಷ್ಟಿತಳಾಗಿದ್ದ ಅರುಣಾ ನೆತ್ತರಿನಲ್ಲಿ ಒದ್ದೆಯಾಗಿ, ಮುದ್ದೆಯಾಗಿ ನೆಲಕ್ಕೆ ಬಿದ್ದಿದ್ದಳು.

ಅದನ್ನು ಕಂಡು ಭಯಗೊಂಡ ಸೋಹನ್‌ಲಾಲ್ ಅಲ್ಲಿಂದ ಓಡಿಹೋಗಿದ್ದ. ಹೋಗುವಾಗ ಅರುಣಾಳ ಕಿವಿಯಲ್ಲಿದ್ದ ಓಲೆ, ಕೊರಳಲ್ಲಿದ್ದ ಸರ ಮತ್ತು ಕೈಯಲ್ಲಿದ್ದ ಉಂಗುರವನ್ನು ತೆಗೆದುಕೊಂಡು ಹೋಗಿದ್ದ.
ಮಾರನೆಯ ದಿನ ಬೆಳಗ್ಗೆ ಬೇರೊಬ್ಬ ಕರ್ಮಚಾರಿ ಸ್ವಚ್ಛತೆಗೆಂದು ಕೋಣೆಗೆ ಬಂದಾಗ ಅರುಣಾ ತನ್ನದೇ ವಾಂತಿಯ, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ. ಅರುಣಾ ನಗ್ನಾವಸ್ಥೆಯಲ್ಲಿ, ಅರೆಪ್ರeವಸ್ಥೆ
ಯಲ್ಲಿ ಬಿದ್ದಿರುವುದನ್ನು ನೋಡಿ, ಆಸ್ಪತ್ರೆಯ ವೈದ್ಯರಿಗೆ ವಿಚಾರವನ್ನು ತಿಳಿಸಿದ. ಅರುಣಾಗೆ ಕೂಡಲೇ ತುರ್ತುಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಏಕೆಂದರೆ ಘಟನೆ ನಡೆದು ಆಗಲೇ ಸುಮಾರು ೧೧-೧೨ ತಾಸು ಕಳೆದುಹೋಗಿತ್ತು.

ಆ ಕಾಲದಲ್ಲಿ, ಅಂದರೆ ಇಂದಿಗೆ ಐದು ದಶಕಗಳ ಹಿಂದೆ ತಂತ್ರಜ್ಞಾನವೂ ಅಷ್ಟೊಂದು ಮುಂದುವರಿದಿರಲಿಲ್ಲ. ನವೆಂಬರ್ ೨೮ರ ಬೆಳಗ್ಗೆ ಆಸ್ಪತ್ರೆಯಿಂದ ಡಾ. ದೇಸಾಯಿಗೆ ತುರ್ತಾಗಿ ಬರುವಂತೆ ಕರೆ ಬಂತು.
ಆಸ್ಪತ್ರೆಗೆ ದೌಡಾಯಿಸಿದ ದೇಸಾಯಿಯವರಿಗೆ ಕಾಲಕೆಳಗಿನ ಭೂಮಿಯೇ ಕುಸಿದುಹೋದಂತೆ ಭಾಸವಾಯಿತು. ಅವರ ಪ್ರೀತಿಯ ಕುಸುಮ ಕೋಮಲೆ ಅವರ ಕಣ್ಣ ಮುಂದೆಯೇ ತೊನೆಯದ ತೊಪ್ಪಲಿನ ತೊಪ್ಪೆ
ಯಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಬಿದ್ದಿತ್ತು. ಸ್ವತಃ ವೈದ್ಯರಾಗಿದ್ದ ಅವರಿಗೆ ಇದು ಹೇಗಾಯಿತು ಎಂಬ ಪ್ರಶ್ನೆ ಮಾತ್ರ ಉಳಿದಿತ್ತೇ ವಿನಾ ಇದರ ಪರಿಣಾಮ ಏನು ಎಂಬುದು ತಿಳಿದಿತ್ತು. ಮುಖದಲ್ಲಿ ಸದಾ ಮಂದಹಾಸ ವನ್ನೇ ಆಭರಣವಾಗಿ ತೊಟ್ಟಿದ್ದ ಅರುಣಾ ಇನ್ನೆಂದೂ ನಗುವುದಿಲ್ಲ, ಮಾತನ್ನೂ ಆಡುವುದಿಲ್ಲ ಎಂಬ ಅರಿವಾಗಿತ್ತು.

ಕೊರಳಿಗೆ ಬಿಗಿದ ಸರಪಳಿ ಅರುಣಾಳ ಕತ್ತಿನ ಭಾಗದಲ್ಲಿರುವ ನರಗಳನ್ನು, ಬೆನ್ನುಹುರಿಯನ್ನು ಘಾಸಿಗೊಳಿಸಿತ್ತು. ಮಿದುಳಿಗೆ ಆಮ್ಲಜನಕ ಪೂರೈಕೆಯಾಗದ ಕಾರಣ ಆಕೆ ಕೋಮಾಗೆ ಹೋಗಿದ್ದಳು. ಮಿದುಳಿನ ಕಾಂಡ ಛಿದ್ರವಾಗಿತ್ತು. ಎರಡೂ ಕಣ್ಣುಗಳು ನಿಷ್ಕ್ರಿಯಗೊಂಡಿದ್ದವು. ಮಾತು ನಿಂತುಹೋಗಿತ್ತು. ಕ್ರಮೇಣ ಆಕೆಯ ಮೂಳೆಗಳೂ ಸವೆತಕ್ಕೆ ಒಳಗಾಗುತ್ತವೆ, ಸ್ನಾಯುಗಳೂ ಕ್ಷೀಣಿಸುತ್ತವೆ ಎಂದು ವೈದ್ಯರಿಗೆ ತಿಳಿದಿತ್ತು. ಇನ್ನೂ ದುರದೃಷ್ಟ ಎಂಬಂತೆ, ಆಕೆಯ ಮಿದುಳಿಗೆ ನೋವಿನ ಸಂದೇಶ ಕಳಿಸುವ ನರ ಮಾತ್ರ ಕೆಲಸ ಮಾಡುತ್ತಿತ್ತು. ಅದರಿಂದ ಕೋಮಾದಲ್ಲಿದ್ದರೂ ಅರುಣಾ ಕೊನೆಯ ತನಕ ಆಗಾಗ ಚೀರಿಕೊಳ್ಳುತ್ತಿದ್ದಳು. ಎಲ್ಲ ತಿಳಿದೂ ಡಾ. ದೇಸಾಯಿ ಒಂದು ವರ್ಷಕ್ಕೂ ಹೆಚ್ಚಾಗಿ ಪ್ರತಿನಿತ್ಯ ಅರುಣಾಳ ಕೋಣೆಗೆ ಹೋಗಿ, ಪಕ್ಕದಲ್ಲಿ ಕುಳಿತು ಒಂದಷ್ಟು ಸಮಯ ಕಳೆಯುತ್ತಿದ್ದರು. ಅರುಣಾಳೊಂದಿಗೆ ಮಾತನಾಡುತ್ತಿದ್ದರು, ಆಕೆಯನ್ನೂ ಮಾತನಾಡಿಸುವ ಪ್ರಯತ್ನ ಮಾಡುತ್ತಿದ್ದರು. ಅದರಿಂದ ಯಾವ ಪ್ರಯೋಜನವೂ ಅಗುತ್ತಿರಲಿಲ್ಲ. ಅದು ಅವರಿಗೆ ಗೊತ್ತೂ ಇತ್ತು. ಪ್ರತಿನಿತ್ಯ ತನ್ನ ಪ್ರಿಯತಮೆಯ ಗೋಳನ್ನು ಕಾಣಲಾಗದೇ, ಒಂದು ವರ್ಷದ ನಂತರ ಅವರು ಆ ಆಸ್ಪತ್ರೆ ಯಲ್ಲಿ ಕೆಲಸಮಾಡುವುದನ್ನು ಬಿಟ್ಟು ಬೇರೆ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆದರೂ ೩ ವರ್ಷದವರೆಗೆ ಅವರು ಅರುಣಾಳ ಬಳಿ ಹೋಗಿ ಮೈದಡವಿ, ತಲೆ ನೇವರಿಸಿ ಬರುತ್ತಿದ್ದರು. ಕ್ರಮೇಣ ಅವರೂ ತಮ್ಮ ವೃತ್ತಿಯಲ್ಲಿ, ಖಾಸಗಿ ಜೀವನದಲ್ಲಿ ವ್ಯಸ್ತರಾದರು.

ಅರುಣಾ ಇನ್ನೆಂದೂ ತನ್ನ ಲೋಕಕ್ಕೆ ಮರಳಿ ಬರುವುದಿಲ್ಲವೆಂದು ಅರಿತು, ಘಟನೆ ನಡೆದ ೪ ವರ್ಷದ ನಂತರ ಬೇರೆಯವರನ್ನು ಮದುವೆಯಾದರು. ಆದರೆ ಅರುಣಾಳ ಕುರಿತಾದ ಪ್ರತಿಯೊಂದು ಸುದ್ದಿಯನ್ನೂ ಓದುತ್ತಿದ್ದರು, ವಿವರವನ್ನು ತಿಳಿದುಕೊಳ್ಳುತ್ತಿದ್ದರು. ಅರುಣಾಳ ಸಂಬಂಧಿಗಳು ಕೆಲವು ದಿನಗಳವರೆಗೆ ಆಸ್ಪತ್ರೆಗೆ ಬಂದು ಹೋಗುತ್ತಿದ್ದರು. ಒಮ್ಮೆ ಅರುಣಾಳನ್ನು ತಮ್ಮ ಜತೆ ಕರೆದುಕೊಂಡು ಹೋಗುವುದಾಗಿಯೂ ಕೇಳಿಕೊಂಡರು. ಆದರೆ ಅದೇ ಆಸ್ಪತ್ರೆ ಯಲ್ಲಿ ಕೆಲಸ ಮಾಡುತ್ತಿದ್ದ ದಾದಿಯರು ಅರುಣಾಳನ್ನು ತಾವೇ ನೋಡಿಕೊಳ್ಳುವುದಾಗಿ ಪಟ್ಟುಹಿಡಿದರು. ಅದಕ್ಕೆ ಅಲ್ಲಿಯ ವೈದ್ಯರೂ, ಇತರೆ ಕೆಲಸಗಾರರೂ ದನಿಗೂಡಿಸಿದರು. ಅವರೆಲ್ಲ ಅರುಣಾಳನ್ನು ಚೆನ್ನಾಗಿ ನೋಡಿಕೊಂಡದ್ದೂ ಹೌದು. ಅದಾಗಿ ಏಳು ವರ್ಷ ಕಳೆದಿತ್ತು. ಆಸ್ಪತ್ರೆಯ ಆಡಳಿತ ನೋಡಿಕೊಳ್ಳುತ್ತಿದ್ದ ಮುಂಬೈನ ಮಹಾನಗರಪಾಲಿಕೆಯವರು ಅರುಣಾಳನ್ನು ಆಸ್ಪತ್ರೆಯಿಂದ ಹೊರಗೆ ಕಳಿಸುವ ವಿಚಾರ ಮಾಡಿದ್ದರು. ಏಳು ವರ್ಷದಿಂದ ಆಸ್ಪತ್ರೆಯ ಒಂದು ಹಾಸಿಗೆ ಮತ್ತು ಒಂದು ಕೋಣೆ ಅರುಣಾಳಿಗಾಗಿಯೇ ಮೀಸಲಾಗಿದೆ, ಅದನ್ನು ಬೇರೆ ರೋಗಿಗಳಿಗೆ ನೀಡಬಹುದು ಎಂಬುದು ಅವರ ವಾದವಾಗಿತ್ತು. ಆಗ ಪುನಃ ಅಲ್ಲಿಯ ದಾದಿಯರು ರೊಚ್ಚಿಗೆದ್ದು ಅರುಣಾಳನ್ನು ಅಲ್ಲಿಯೇ ಉಳಿಸಿಕೊಂಡರು.

ಬರೋಬ್ಬರಿ ೪೨ ವರ್ಷ ಅರುಣಾಳನ್ನು ಪುಟ್ಟ ಮಗುವಿನಂತೆ ನೋಡಿಕೊಂಡರು. ತಮ್ಮ ಮನೆಯ ಮಗಳಂತೆ ಆರೈಕೆ ಮಾಡಿದರು. ಹೆಣ್ಣು ಕುಲದ ಬಗ್ಗೆ ಹೆಮ್ಮೆ ಇಮ್ಮಡಿಯಾಗುವುದಕ್ಕೆ ಇಂಥ ಒಂದು ಘಟನೆ ಸಾಕು.
ವೈದ್ಯಕೀಯ ವೃತ್ತಿಯ ಕುರಿತು, ಭಾರತದ ಸಂಸ್ಕೃತಿಯ ಕುರಿತು ಎದೆ ಬೀಗುವುದಕ್ಕೆ ಇಂಥ ಒಂದು ಕತೆ ಸಾಕು. ಈ ರೀತಿಯ ಒಂದು ಉದಾಹರಣೆ ಬಹುಶಃ ಜಗತ್ತಿನ ಬೇರೆ ಎದರೂ ಇದ್ದೀತೆ? ನಾನಂತೂ ಕೇಳಲಿಲ್ಲ!
ಈ ನಡುವೆ, ಘಟನೆಯ ನಂತರ ಆಸ್ಪತ್ರೆಯವರು ಸೋಹನ್‌ಲಾಲ್ ಮೇಲೆ ಕೇಸು ದಾಖಲಿಸಿದರು. ಆದರೆ ಆತನ ಮೇಲೆ ಕಳ್ಳತನ ಮತ್ತು ಅರುಣಾಳ ಮೇಲೆ ಹ ಮಾಡಿದ ಆರೋಪವನ್ನು ಮಾತ್ರ ಹೊರಿಸಿದ್ದರೇ ವಿನಾ ಬಲಾತ್ಕಾರ ಮಾಡಿದ ಅಪರಾಧವನ್ನು ಹೊರಿಸಿರಲಿಲ್ಲ. ಅದಕ್ಕೆ ಕಾರಣ, ಅಂದಿನ ದಿನಗಳಲ್ಲಿ ಒಬ್ಬ ಮಹಿಳೆಯ ಮೇಲೆ ಯಾರಾದರೂ ಅತ್ಯಾಚಾರ ಮಾಡಿದ್ದರೆ, ಸಮಾಜ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನೇ ವಿಚಿತ್ರವಾಗಿ ನೋಡುತ್ತಿತ್ತೇ ಶಿವಾಯ್ ಅತ್ಯಾಚಾರ ಮಾಡಿದವರನ್ನಲ್ಲ. ಆದ್ದರಿಂದ ಆಸ್ಪತ್ರೆಯವರು ಅತ್ಯಾಚಾರದ ವಿಷಯವನ್ನು ಮುಚ್ಚಿಟ್ಟು ಅರುಣಾಳಿಗೆ ಉಪಕಾರ ಮಾಡುತ್ತಿದ್ದೇವೆ ಎಂದೇ ತಿಳಿದಿದ್ದರು. ಮುಂದಿನ ಪರಿಣಾಮ, ಪ್ರತಿಕ್ರಿಯೆ ‘ಆ’ ರೀತಿ ಆಗಬಹುದೆಂದು ಅಂದು ಅವರು ಆಲೋಚಿಸಿರಲಿಲ್ಲ.

ಅಂದು ಓಡಿಹೋಗಿದ್ದ ಸೋಹನ್‌ಲಾಲ್‌ನನ್ನು ಪೋಲಿಸರು ಬಂಧಿಸಿ ತಂದು, ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿದರು. ಶೀಘ್ರಗತಿಯಲ್ಲಿ ವಿಚಾರಣೆ ನಡೆದು ತೀರ್ಪೂ ಬಂತು. ಆದರೆ…. ಈ ಘಟನೆಯಲ್ಲಿ ಕಾನೂನಿನ ಪ್ರಕಾರ ಯಾವ ತೀರ್ಪು ಬಂತು? ಅಪರಾಧಿಗೆ ಎಷ್ಟು ವರ್ಷ ಶಿಕ್ಷೆ ಆಯಿತು? ಅದಕ್ಕೂ ಮುಂದೆ ಏನಾಯಿತು? ದೇಶದ ಇತಿಹಾಸದಲ್ಲಿ ಈ ಘಟನೆ ಏಕೆ ಹೆಗ್ಗುರುತಾಗಿ ಉಳಿಯಿತು? ಉತ್ತರ ಮುಂದಿನ ಅಂಕಣದಲ್ಲಿ…