Saturday, 14th December 2024

ಗದಾಶೀರ್ಷ ಶಿಲೀಂಧ್ರ: ವಿಷವೂ, ಅಮೃತವೂ !

ಹಿಂದಿರುಗಿ ನೋಡಿದಾಗ

ಯೂರೋಪಿನ ಮಧ್ಯಯುಗ. ಕ್ಲಾವಿಸೆಪ್ಸ್ ಬೆಳೆದ ಕಿರುಗೋಧಿ ಬ್ರೆಡ್ ತಿಂದ ಬಡವರು ಅರ್ಗಟ್ ವಿಷಕ್ಕೆ ತುತ್ತಾಗಿ ಸಾವು ನೋವನ್ನು ಅನುಭವಿಸುತ್ತಿದ್ದ ಕಾಲ. ಕ್ಲಾವಿಸೆಪ್ಸ್ ಬೆಳೆದ ತೆನೆಯನ್ನು ತಿಂದ ಹಂದಿಗಳಲ್ಲಿ ಗರ್ಭಸ್ರಾವವಾಗುವುದನ್ನು ರೈತರು ಗಮನಿಸಿದರು.

ನಮ್ಮ ಭೂಮಿಯ ಮೇಲೆ ಇರುವ ಜೀವರಾಶಿಗಳು, ತಾವು ಬದುಕಲು ಮತ್ತೊಂದು ಜೀವಿಯನ್ನು ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಅವಲಂಬಿಸಬೇಕಾದದ್ದು ಅನಿವಾರ್ಯ. ಹಾಗಾಗಿ ಜೀವಿಗಳ ನಡುವೆ ಒಂದು ಬಗೆಯ ಅಸಹಜ ಸೌಹಾರ್ದ ಕಂಡುಬರುತ್ತದೆ. ಆದರೆ ಈ ಸೌಹಾರ್ದದ ಹಿಂದೆ ಅವುಗಳ ಅಸ್ತಿತ್ವವೇ ಮುಖ್ಯವಾಗಿರುತ್ತದೆ. ಈ ಸ್ಪರ್ಧೆಯಲ್ಲಿ ಬಲಶಾಲಿಯಾದದ್ದು ಬದುಕುತ್ತದೆ. ದುರ್ಬಲವಾದದ್ದು ಅಳಿಯುತ್ತದೆ. ಏಕೆಂದರೆ ಕೊಂದು ತಿನ್ನುವುದು ಈ ಭೂಮಿಯ ನ್ಯಾಯ. ಇದು ಅನಿವಾರ್ಯ. ಜೀವಿಗಳು ತಮ್ಮ ಅಸ್ತಿತ್ವವನ್ನೇ ನಿರ್ನಾಮಗೊಳಿಸಲು ಬಯಸುವ ಇತರ ಜೀವಿಗಳನ್ನು ನಿಗ್ರಹಿಸಲು ಹಲವು ರೀತಿಯ ಉಪಾಯಗಳನ್ನು ಹಾಗೂ ತಂತ್ರಗಳನ್ನು ಕೈಗೊಳ್ಳುವುದುಂಟು.

ಅಂತಹ ತಂತ್ರಗಳಲ್ಲಿ ವಿಷ ವಸ್ತುಗಳ ಉತ್ಪಾದನೆ ಹಾಗೂ ಸಂಗ್ರಹಣೆಯೂ ಒಂದು. ಇಂತಹ ವಿಷ ವಸ್ತುಗಳಿರುವ ಗಿಡಗಳನ್ನು ತಿಂದ ಜೀವಿಗಳು ಉದಾ: ದನಕರುಗಳು ಅಸ್ವಸ್ಥವಾಗುವುದುಂಟು, ಇಲ್ಲವೇ ಮರಣಿಸುವುದುಂಟು. ಹಾಗಾಗಿ ದನಕರುಗಳು ಇಂತಹ ಗಿಡಗಳ ತಂಟೆಗೆ ಹೋಗುವು ದಿಲ್ಲ. ವಿಷ ವಸ್ತುಗಳ ಉತ್ಪಾದನೆ ಹಾಗೂ ಆತ್ಮರಕ್ಷಣೆಯ ತಂತ್ರವು ಶಿಲೀಂಧ್ರ ಗಳಲ್ಲಿಯೂ ಕಂಡು ಬರುತ್ತದೆ. ಇಂತಹ ಶಿಲೀಂಧ್ರಗಳಲ್ಲಿ ‘ಗದಾಶೀರ್ಷ ಶಿಲೀಂಧ್ರ’ ಅಥವಾ ‘ಕ್ಲಾವಿಸೆಪ್ಸ್ ಪರ್ಪ್ಯೂರ’ ಸಹ ಒಂದು.

ಕ್ಲಾವಿಸೆಪ್ಸ್ ಕಿರುಗೋಽಯ ತೆನೆಯ ಮೇಲೆ ಪರಾವಲಂಬೀ ಬದುಕನ್ನು ನಡೆಸುತ್ತದೆ. ಕ್ಲಾವಿಸೆಪ್ಸ್ ರೂಪಿಸುವ ಸ್ಕ್ಲೀರೋಶಿಯದಲ್ಲಿ ಅರ್ಗಟ್ ಆಲ್ಕಲಾಯ್ಡ್‌ಗಳಿರುತ್ತವೆ. ಈ ಕ್ಲಾವಿಸೆಪ್ಸ್ ಬೆಳೆದಿರುವ ಕಿರುಗೋಧಿಯಿಂದ ತಯಾರಿಸಿದ ಬ್ರೆಡ್ ತಿಂದಾಗ, ಅರ್ಗಾಟ್ ವಿಷವೇರುತ್ತದೆ. ತೀವ್ರ ಸ್ವರೂಪದ ವಿಷವೇರಿಕೆಯು ಮನುಷ್ಯನ ಕೇಂದ್ರ ನರಮಂಡಲದ ಮೇಲೆ ಪ್ರಭಾವ ಬೀರಿ ಮರಣಕ್ಕೆ ಕಾರಣವಾದರೆ, ನಿಧಾನ ಗತಿಯ
ವಿಷವೇರಿಕೆಯು ಅಂಗಗಳಿಗೆ ಪೂರೈಕೆಯಾಗುವ ರಕ್ತ ಸರಬರಾಜನ್ನು ನಿಲ್ಲಿಸಿ, ಅಂಗ ನಾಶವಾಗಿ, ಉದುರಿಬೀಳುವುದಕ್ಕೆ ಕಾರಣವಾಗುತ್ತದೆ.

ಎರಡು ವಿಚಾರಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು. ಮೊದಲನೆಯದು ಪುನರುತ್ಥಾನದ (ರಿನೇಸಾನ್ಸ್) ಅವಧಿ. ಮನುಕುಲವು ಮಧ್ಯಯುಗವನ್ನು ಕಳೆದು ಆಧುನಿಕ ಯುಗಕ್ಕೆ ಕಾಲಿಟ್ಟ ಅವಧಿಯಿದು. ಎರಡನೆಯದು ಒಂದು ರಾಸಾಯನಿಕವು ದರ ಸೇವನೆಯ ಪ್ರಮಾಣದ ಮೇಲೆ ಔಷಧವೇ
ಅಥವ ವಿಷವೇ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಹಾವಿನ ವಿಷವು ಅಧಿಕ ಪ್ರಮಾಣದಲ್ಲಿ ದೇಹವನ್ನು ಸೇರಿದರೆ, ಅದು ನಮ್ಮನ್ನು ಕೊಲ್ಲುತ್ತದೆ. ಅದೇ ಹಾವಿನ ವಿಷವನ್ನು ನಿಗದಿತ ಪ್ರಮಾಣದಲ್ಲಿ ನೀಡಿದರೆ, ಅದು ಹೃದಯದ ಮಕುಟಧಮನಿಯಲ್ಲಿ ಅಡಚಿರುವ ರಕ್ತಗರಣೆಯನ್ನು
ಕರಗಿಸುತ್ತದೆ. ಜೀವ ಉಳಿಸುತ್ತದೆ.

ಕ್ಲಾವಿಸೆಪ್ಸ್ ಪರ್ಪ್ಯೂರ, ಮನುಕುಲದ ಸಾವು-ನೋವಿಗೆ ಕಾರಣವಾದ ಪ್ರಮುಖ ಶಿಲೀಂಧ್ರ ಎನ್ನುವ ಕುಖ್ಯಾತಿ ಇತಿಹಾಸದಲ್ಲಿ ದಾಖಲಾಗಿದೆ. ಅಂತಹ ವಿಷವೂ ನಿಗದಿತ ಪ್ರಮಾಣದಲ್ಲಿ ನಿಖರ ವಿಧಾನದಲ್ಲಿ ಬಳಸಿದರೆ ಔಷಧವೂ ಆಗಬಲ್ಲುದು ಎನ್ನುವುದನ್ನು ಮೊದಲ ಬಾರಿಗೆ ಗ್ರೀಕರು ಗಮನಿಸಿದರು. ಹಿಪ್ಪೋಕ್ರೇಟ್ಸ್ (ಕ್ರಿ.ಪೂ.೪೬೦-ಕ್ರಿ.ಪೂ.೩೭೦) ಕ್ಲಾವಿಸೆಪ್ಸ್ ಶಿಲೀಂಧ್ರವನ್ನು ಬಳಸಿ ಉಗ್ರ ತಲೆನೋವನ್ನು ನಿಯಂತ್ರಿಸುತ್ತಿದ್ದ. ಹಾಗೆಯೇ ಕ್ಲಾವಿಸೆಪ್ಸ್ ಪುಡಿಯನ್ನು ಸಂಗ್ರಹಿಸಿ, ಪ್ರಸವೋತ್ತರ ರಕ್ತಸ್ರಾವವನ್ನು ನಿಗ್ರಹಿಸುತ್ತಿದ್ದ.

ರೋಮನ್ ಇತಿಹಾಸಕಾರ ಹಿರಿಯ ಪ್ಲೀನಿ (ಕ್ರಿ.ಶ.೨೩-ಕ್ರಿ. ಶ.೭೯), ಕ್ಲಾವಿಸೆಪ್ಸ್‌ನನ್ನು ಯಾವ ಯಾವ ರೋಗಗಳಲ್ಲಿ ಬಳಸಬಹುದು ಎನ್ನುವುದನ್ನು ದಾಖಲಿಸಿದ. ಯೂರೋಪಿನ ಮಧ್ಯಯುಗ. ಕ್ಲಾವಿಸೆಪ್ಸ್ ಬೆಳೆದ ಕಿರುಗೋಧಿ ಬ್ರೆಡ್ ತಿಂದ ಬಡವರು ಅರ್ಗಟ್ ವಿಷಕ್ಕೆ ತುತ್ತಾಗಿ ಸಾವು ನೋವನ್ನು ಅನುಭವಿಸುತ್ತಿದ್ದ ಕಾಲ. ಕ್ಲಾವಿಸೆಪ್ಸ್ ಬೆಳೆದ ತೆನೆಯನ್ನು ತಿಂದ ಹಂದಿಗಳಲ್ಲಿ ಗರ್ಭಸ್ರಾವವಾಗುವುದನ್ನು ರೈತರು ಗಮನಿಸಿದರು. ಆಗ ಅಂದಿನ
ನಾಟಿವೈದ್ಯರ ಮನಸ್ಸಿನಲ್ಲಿ ಕುತೂಹಲ ಹುಟ್ಟಿತು. ೧೫೮೨. ಆಡಮ್ ಲೋನಿಸೆರ್ (೧೫೨೮-೧೫೮೬) ಎಂಬ ಜರ್ಮನ್ ಸಸ್ಯಶಾಸ್ತ್ರಜ್ಞನು, ಕ್ಲಾವಿಸೆಪ್ಸ್ ಸೋಂಕಿನ ಕಾರಣ, ಕಿರುಗೋಧಿಯ ತೆನೆಯಲ್ಲಿ ಮೂಡಿದ್ದ ಗಡಸು ಕಾಯ, ಅರ್ಗಟ್ ಆಲ್ಕಲಾಯ್ಡುಗಳಿರುವ ಸ್ಕ್ಲೀರೋಶಿಯವು, ಪ್ರಸವ ಪ್ರಗತಿಯನ್ನು ಉದ್ದೀಪಿಸುತ್ತದೆ ಎಂದು ಮೊದಲ ಬಾರಿಗೆ ದಾಖಲಿಸಿದ.

ಮೂರು ಸ್ಕ್ಲೀರೋಶಿಯವನ್ನು (ಸುಮಾರು ೦.೫ ಮಿಗ್ರಾಂ ಅರ್ಗಟ್) ಪ್ರಸವದಲ್ಲಿರುವ ತಾಯಿಗೆ ತಿನ್ನಲು ನೀಡಿದರೆ, ಪ್ರಸವವು ತ್ವರಿತವಾಗಿ ನಡೆಯುತ್ತದೆ ಎನ್ನುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಕೂಡಲೇ ಈ ಚಿಕಿತ್ಸಾ ವಿಧಾನವು ಜನಪ್ರಿಯವಾಯಿತು. ೧೭೫೦ರ ಹೊತ್ತಿಗೆ,
ಸ್ಕ್ಲೀರೋಶಿಯದ ಪುಡಿಯು ಫ್ರಾನ್ಸ್ ಮತ್ತು ಜರ್ಮನಿಯ ಔಷಧಾಲಯಗಳಲ್ಲಿ ಪಲ್ವಿಸ್ ಅಡ್ ಪಾರ್ಟಮ್, ಅಂದರೆ ‘ಜನ್ಮ ನೀಡುವ ಪುಡಿ’ ಎಂಬ ಹೆಸರಿನಲ್ಲಿ ಮಾರಾಟವಾಗಲಾರಂಭಿಸಿತು. ಆದರೆ ಇದನ್ನು ಕೇವಲ ನಾಟಿ ವೈದ್ಯರು ಮಾತ್ರ ಬಳಸುತ್ತಿದ್ದರೇ ಹೊರತು, ಕ್ರಮಬದ್ಧ ವೈದ್ಯಕೀಯ
ಶಿಕ್ಷಣವನ್ನು ಪಡೆದ ವೈದ್ಯರು ಬಳಸುತ್ತಿರಲಿಲ್ಲ.

೧೮೦೮ರಲ್ಲಿ ಅಮೆರಿಕದ ವೈದ್ಯ ಜಾನ್ ಸ್ಟೆರ್ನ್ಸ್ (೧೭೭೦-೧೮೪೮) ತನ್ನ ಗೆಳೆಯನೊಬ್ಬನಿಗೆ ‘ನನ್ನ ಬಳಿ ಜನ್ಮ ನೀಡುವ ಪುಡಿ ಇದೆ. ಒಬ್ಬ ಜರ್ಮನ್ ವಲಸೆಗಾರ ನನಗೆ ಈ ಪುಡಿಯನ್ನು ಪರಿಚಯಿಸಿದ. ಪ್ರಸವದಲ್ಲಿರುವ ಮಹಿಳೆಗೆ ಈ ಪುಡಿಯನ್ನು ನೀಡಿದರೆ, ಆ ಮಹಿಳೆಯು ಹೆಚ್ಚೆಂದರೆ
ಮೂರು ಗಂಟೆಗಳ ಒಳಗೆ ಪ್ರಸವಿಸುವುದು ಖಚಿತ. ಒಂದು ಎಚ್ಚರ. ಪ್ರಸವಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡ ಮೇಲೆಯೇ ಈ ಪುಡಿಯನ್ನು ಕೊಡಬೇಕು. ಏಕೆಂದರೆ ಈ ಪುಡಿಯನ್ನು ಸೇವಿಸಿದ ಮೇಲೆ ಯಾವ ಕ್ಷಣದಲ್ಲಾದರೂ ಸರಿ ಪ್ರಸವವಾಗಬಹುದು. ಅದಕ್ಕೆ ನಾವು ಸಿದ್ಧವಾಗಿರಬೇಕು.

ಹಾಗಾಗಿ ಇದನ್ನು ಬೇಕಾಬಿಟ್ಟಿಯಾಗಿ ಕೊಡಬಾರದು’ ಎಂಬ ಎಚ್ಚರಿಕೆಯನ್ನೂ ನೀಡಿದ. ಅವನು ಹೇಳಿದಂತೆ, ನಿಜಕ್ಕೂ ಈ ಪುಡಿಯು ಜನ್ಮ ನೀಡುವ ಪುಡಿಯೇ ಹೌದು ಎಂಬ ಅರ್ಥದ ಪತ್ರವನ್ನು ಬರೆದ. ಇದು ಕೊನೆಗೆ ಮೆಡಿಕಲ್ ರಿಪೋಸಿಟರಿ ಆಫ್ ನ್ಯೂಯಾರ್ಕ್‌ನಲ್ಲಿ ಪ್ರಕಟವಾಯಿತು. ಕೂಡಲೇ
ಎಲ್ಲರೂ ಈ ಪುಡಿಯನ್ನು ಬಳಸರಂಭಿಸಿದರು. ಆದರೆ ಜರ್ಮನ್ ವಲಸೆಯವನು ನೀಡಿದ್ದ ಎಚ್ಚರಿಕೆಯನ್ನು ಮರೆತು ಬೇಕಾಬಿಟ್ಟಿಯಾಗಿ
ಬಳಸಿದರು. ಹಾಗಾಗಿ ಅವಘಡಗಳು ಸಂಭವಿಸಿ, ಮೃತ ಶಿಶುಗಳು ಹುಟ್ಟುವುದು ಅಧಿಕವಾಯಿತು.

೧೮೨೪ರ ವೇಳೆಗೆ ‘ಪಲ್ವಿಸ್ ಅಡ್ ಪಾರ್ಟಮ್’ ಎನ್ನುವ ಅಭಿದಾನವು ‘ಪಲ್ವಿಸ್ ಅಡ್ ಮಾರ್ಟಮ್’ ಎಂದು, ಅಂದರೆ ಸಾವನ್ನು ತರುವ ಪುಡಿ ಎಂದು ಕುಖ್ಯಾತವಾಯಿತು. ನ್ಯೂಯಾರ್ಕ್ ನಗರದ ವೈದ್ಯರ ಒಕ್ಕೂಟವು ವಿಸ್ತೃತ ಅಧ್ಯಯನವನ್ನು ಕೈಗೊಂಡಿತು. ಕೊನೆಗೆ ಪುಡಿಯನ್ನು ಕೇವಲ ಪ್ರಸವೋತ್ತರ ರಕ್ತಸ್ರಾವವನ್ನು (ಪೋಸ್ಟ್ ಪಾರ್ಟಮ್ ಹೆಮೋರೇಜ್) ನಿಲ್ಲಿಸಲು ಮಾತ್ರ ಬಳಸಬೇಕೆಂದು, ಪ್ರಸವ ವೇಗೋತ್ಕರ್ಷಕ್ಕೆ ಬಳಸಬಾರ ದೆಂದು ಶಿಫಾರಸನ್ನು ಮಾಡಿತು. ಹೆನ್ರಿ ಈಟಿಯನ್ನೆ ಸೈಂಟ್ ಕ್ಲೇರ್ ಡೆವಿಲ್ (೧೮೧೮-೧೮೮೧) ಎಂಬ ಫ್ರೆಂಚ್ ರಸಾಯನಶಾಸ್ತ್ರಜ್ಞನು ಅರ್ಗಟ್ ಆಲ್ಕಲಾಯ್ಡುಗಳ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸಿ, ಅದರಲ್ಲಿ ಒಂದು ಪಟು ರಾಸಾಯನಿಕವನ್ನು ಪ್ರತ್ಯೇಕಿಸಿದ.

ಅದಕ್ಕೆ ‘ಅರ್ಗೋಟಿನ್’ ಎಂದು ನಾಮಕರಣವನ್ನು ಮಾಡಿದ. ವಾಸ್ತವದಲ್ಲಿ ಅರ್ಗೋಟಿನ್ ಒಳಗೆ ಒಂದಕ್ಕಿಂತ ಹಲವು ರಾಸಾಯನಿಕಗಳು ಅಡಕ ವಾಗಿದ್ದವು. ಅವುಗಳಲ್ಲಿ ಅರ್ಗೋಟಮಿನ್, ಅರ್ಗೋಕ್ರಿಸ್ಟಿನ್ ಮತ್ತು ಅರ್ಗೋಕ್ರಿಪ್ಟಿನ್ ಮುಖ್ಯವಾಗಿದ್ದವು. ತಲೆನೋವುಗಳಲ್ಲಿ ಮೈಗ್ರೇನ್ ಹೆಡ್‌ಏಕ್ ಅಥವ ಅರೆ ತಲೆಶೂಲೆ ಒಂದು ಉಗ್ರ ಸ್ವರೂಪದ ತಲೆನೋವು. ಒಂದು ಸಲ ಅರ್ಧ ತಲೆನೋವು ಬಂದರೆ, ಅದು ದಿನಗಟ್ಟಲೆ ವಾರಗಟ್ಟಲೇ ಕಾಡುವುದುಂಟು. ತಲೆನೋವು ಬಂದಾಗ ತೀವ್ರ ಸ್ವರೂಪದ ವಾಕರಿಕೆ ಅಥವ ವಾಂತಿಯಾಗಬಹುದು.

ಬೆಳಕನ್ನು ನೋಡಲಾಗದೆ, ಶಬ್ದವನ್ನು ಕೇಳಲಾಗದೆ, ತಲೆಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಂಡು ಕತ್ತಲೆ ಕೋಣೆಯಲ್ಲಿ ಮಲಗುವುದುಂಟು. ಅನೇಕ ಜನರು ನೋವನ್ನು ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಸಂಗಗಳಿವೆ. ಎರಡನೆಯದು ಆವರ್ತ ತಲೆನೋವು ಅಥವ ಕ್ಲಸ್ಟರ್ ಹೆಡ್ ಏಕ್. ತಲೆನೋವು ಎಷ್ಟು ಉಗ್ರವಾಗಿರುತ್ತದೆ ಎಂದರೆ, ಮಧ್ಯರಾತ್ರಿಯಲ್ಲಿ ಮಲಗಿರುವವರನ್ನು ಏಳಿಸುತ್ತದೆ. ನೋವು ವಾರಗಟ್ಟಲೆ, ತಿಂಗಳು ಗಟ್ಟಲೆ ಹೋಗುವುದೇ ಇಲ್ಲ. ತಲೆನೋವು ಯಾವುದೇ ಚಿಕಿತ್ಸೆಯಿಲ್ಲದೆ ಇದ್ದಕ್ಕಿದ್ದ ಹಾಗೆ ವರ್ಷಗಳವರೆಗೆ ಮಾಯವಾಗಬಹುದು. ಮತ್ತೆ ಯಾವಾಗ
ಈ ತಲೆನೋವು ಬಂದೆರಗುವುದೋ ಹೇಳಲಾಗದು. ಪ್ರತಿ ೧೦೦೦ ಜನರಲ್ಲಿ ಒಬ್ಬರಿಗೆ ಇಂತಹ ತಲೆನೋವು ಬರುತ್ತದೆ.

೨೦ನೆಯ ಶತಮಾನದ ಆರಂಭದಲ್ಲಿ ಅರ್ಗೋಟಿನ್ ಬಳಸಿ ಈ ಅರೆತಲೆನೋವು ಹಾಗೂ ಆವರ್ತ ತಲೆನೋವನ್ನು ನಿಗ್ರಹಿಸುವ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ದರು. ಈ ತಲೆನೋವಿಗೆ ಕಾರಣ, ಮಿದುಳು ಮತ್ತು ತಲೆಯಲ್ಲಿರುವ ರಕ್ತನಾಳಗಳ ವ್ಯಾಸ ವಿಸ್ತಾರವಾಗುವುದು.
ಅರ್ಗೋಟಿನ್ ರಕ್ತನಾಳಗಳ ವಿಸ್ತಾರವನ್ನು ಕುಗ್ಗಿಸುತ್ತದೆ. ಹಾಗಾಗಿ ನೋವು ಕಡಿಮೆಯಾಗುತ್ತದೆ. ಜೀವವನ್ನು ತೆಗೆಯುತ್ತಿದ್ದ ಅರ್ಗಟ್ ಆಲ್ಕಲಾಯ್ಡ್, ಅರ್ಗೋಟಿನ್ ರೂಪದಲ್ಲಿ ಜನರ ಬದುಕನ್ನು ಸಹನೀಯವಾಗಿಸಿತು.

ಅರ್ಗೋಟಮಿನ್ ರಾಸಾಯನಿಕದಿಂದ ಅರ್ಗನೋವಿನ್ ಎಂಬ ರಾಸಾಯನಿಕವನ್ನು ಸಂಶ್ಲೇಷಿಸಿದರು. ಈ ಅರ್ಗ ನೋವಿನ್ ರಾಸಾಯನಿಕವನ್ನು ನಾಲ್ಕು ಪ್ರಯೋಗಾಲಯಗಳಲ್ಲಿ ನಾಲ್ಕು ಸಂಶೋಧಕರ ತಂಡಗಳು ಸ್ವತಂತ್ರವಾಗಿ ಸಂಶ್ಲೇಷಿಸಿದ ಕಾರಣ, ನಾಲ್ಕೂ ತಂಡಗಳು ನಾಲ್ಕು ಭಿನ್ನ
ಹೆಸರನ್ನು ನೀಡಿದವು. ಅರ್ಗೋಮೆಟ್ರಿನ್, ಅರ್ಗೋಸಿನ್, ಅರ್ಗೋಸ್ಟೀರೈನ್ ಮತ್ತು ಅರ್ಗೋಬೇಸೈನ್. ಯೂರೋಪಿನವರು ಅರ್ಗೋಮೆಟ್ರಿನ್ ಎಂಬ ಹೆಸರನ್ನು ಉಳಿಸಿಕೊಂಡರೆ ಅಮೆರಿಕನ್ನರು ಅರ್ಗನೋವಿನ್ ಎನ್ನುವ ಹೆಸರನ್ನು ಪ್ರಚುರಪಡಿಸಿದರು.

ಪ್ರಸವ ಎನ್ನುವುದು ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಗರ್ಭಕೋಶವು ಭ್ರೂಣವನ್ನು ತನ್ನ ಒಡಲಿನಲ್ಲಿಟ್ಟುಕೊಂಡು ಬೆಳೆಸುತ್ತದೆ. ಶಿಶುವು ಗಾತ್ರದಲ್ಲಿ ದೊಡ್ಡದಾಗುತ್ತಿರುವ ಹಾಗೆ, ತಾನೂ ವಿಸ್ತರಿಸುತ್ತ ಹೋಗುತ್ತದೆ. ಪ್ರಸವದ ವೇಳೆಯಲ್ಲಿ ಅದುವರೆಗೂ ಅಕ್ಕರೆಯಿಂದ ಬೆಳೆಸಿದ ಶಿಶುವನ್ನು ಗರ್ಭ ಕೋಶವು ಹೊರದೂಡಬೇಕಾಗುತ್ತದೆ. ಮಾಸನ್ನು ವಿಸರ್ಜಿಸಬೇಕಾಗುತ್ತದೆ. ಪ್ರಸವವು ಪೂರ್ಣವಾಗುತ್ತಿರುವಂತೆಯೇ ಫುಟ್ ಬಾಲ್ ಗಾತ್ರಕ್ಕೆ ಹಿಗ್ಗಿರುವ ಗರ್ಭಕೋಶವು, ತಕ್ಷಣವೇ ಕುಗ್ಗಿ ಮುಷ್ಟಿಗಾತ್ರಕ್ಕೆ ಇಳಿಯಬೇಕಾಗುತ್ತದೆ. ಹಾಗೆ ಕುಗ್ಗದೇ ಹೋದರೆ, ರಕ್ತಸ್ರಾವವು ವಿಪರೀತವಾಗುತ್ತದೆ. ಕೆಲವು ಸಲ ರಕ್ತಸ್ರಾವವನ್ನು ತಡೆಯುವುದು ಅಸಾಧ್ಯವಾಗುತ್ತದೆ.

ಸಹಜ ಪ್ರಸವದಲ್ಲಿ ೫೦೦ ಎಂ.ಎಲ್‌ಗಿಂತ ಹೆಚ್ಚು ರಕ್ತವು ನಷ್ಟವಾದರೆ, ಸಿಸೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ೧೦೦೦ ಎಂ.ಎಲ್‌ಗಿಂತ ಹೆಚ್ಚು ರಕ್ತವು ನಷ್ಟವಾದರೆ, ತಾಯಿಯ ಜೀವಕ್ಕೆ ಅಪಾಯವಾಗುತ್ತದೆ. ಇದನ್ನು ಪ್ರಸವೋತ್ತರ ರಕ್ತಸ್ರಾವ (ಪಿಪಿಎಚ್=ಪೋಸ್ಟ್ ಪಾರ್ಟಮ್ ಹೆಮೋ ರೇಜ್) ಎಂದು ಕರೆಯುವರು. ಹೀಗೆ ಹೆರಿಗೆಯಲ್ಲಿ ವಿಪರೀತ ರಕ್ತಸ್ರಾವವಾಗಿ ತಾಯಂದಿರು ಮರಣಿಸುವುದು ಅಪರೂಪವೇನಲ್ಲ. ಇಂತಹ ಜೀವಹಾರಕ ರಕ್ತಸ್ರಾವ ವನ್ನು ಅರ್ಗನೋವಿನ್ ತಡೆಗಟ್ಟುತ್ತದೆ.

ಒಂದು ಸಲ ಅರ್ಗನೋವಿನ್ ಇಂಜಕ್ಷನ್ ಅನ್ನು ತಾಯಿಯ ಸೊಂಟಕ್ಕೆ ಚುಚ್ಚಿದರೆ, ಅದು ತನ್ನ ಪ್ರಭಾವವನ್ನು ಗಂಟೆಗಟ್ಟಲೆ ಬೀರುತ್ತದೆ. ನೋಡು ನೋಡುತ್ತಿರುವಂತೆಯೇ ಗರ್ಭಕೋಶವು ಕುಗ್ಗಿ, ರಕ್ತಸ್ರಾವವು ನಿಲ್ಲುತ್ತದೆ. ಪ್ರಸೂತಿ ತಂತ್ರಜ್ಞರು ಸಕಾಲದಲ್ಲಿ ನೀಡುವ ಈ ಔಷಧವು ಪವಾಡ ಸದೃಶ ವಾಗಿ ತಾಯಂದಿರ ಜೀವವನ್ನು ಉಳಿಸುತ್ತದೆ. ಅರ್ಗ ನೋವಿನ್ ಗರ್ಭಕೋಶದ ರಕ್ತನಾಳಗಳ ವ್ಯಾಸವನ್ನು ತಕ್ಷಣವೇ ಕುಗ್ಗಿಸಿ, ರಕ್ತ ಹರಿಯುವಿಕೆ ಯನ್ನು ನಿಲ್ಲಿಸುತ್ತದೆ. ಇದೇ ಅರ್ಗನೋವಿನ್, ನಿಧಾನ ವಿಷವಾಗಿ ಕೈಕಾಲುಗಳಿಗೆ ಪೂರೈಕೆಯಾಗುತ್ತಿದ್ದ ರಕ್ತಪೂರೈಕೆಯನ್ನು ನಿಲ್ಲಿಸಿ, ಬೆರಳುಗಳೆಲ್ಲ ಉದುರಿಹೋಗುವಂತೆ ಮಾಡುತ್ತಿತ್ತು ಎನ್ನುವ ಗತ ಇತಿಹಾಸವು ನೆನಪಿಗೆ ಬರುತ್ತಿರುವಂತೆಯೇ ನಮ್ಮನ್ನು ವಿಷಾಧವು ಆವರಿಸುತ್ತದೆ.
೧೯೫೦ ರ ದಶಕದಲ್ಲಿ ಅರ್ಗೋಲಿನ್ ಸಂಯುಕ್ತಗಳನ್ನು ಸಂಶ್ಲೇಷಿಸಿದರು.

ಇವುಗಳಲ್ಲಿ ಬ್ರೋಮೋಕ್ರಿಪ್ಟಿನ್ ಮತ್ತು ಪರ್ಗೊಲೈಡ್ ಮುಖ್ಯವಾದವು. ಬ್ರೋಮೋಕ್ರಿಪ್ಟಿನ್ ಬಳಸಿ ಋತುಸ್ಥಗಿತವನ್ನು (ಅಮೆನೋರಿಯ) ಗುಣಪಡಿಸಬಹುದು. ಅಪರೂಪದ ಸಂದರ್ಭದಲ್ಲಿ ಪುರುಷರ ಸ್ತನವೃದ್ಧಿ ಯಾಗಿ ಹಾಲು ಉತ್ಪಾದನೆಯಾಗುತ್ತಿದ್ದರೆ, ಅದನ್ನು ಬ್ರೋಮೋಕ್ರಿಪ್ಟಿನ್ ನಿಲ್ಲಿಸುತ್ತದೆ. ಕೆಲವು ಸಲ ಮಗುವು ಮರಣಿಸಿ, ತಾಯಿಯಲ್ಲಿ ವಿಪರೀತ ಹಾಲು ಉತ್ಪಾದನೆಯಾಗುತ್ತಿದ್ದರೆ, ಅದನ್ನು ನಿಲ್ಲಿಸಲು ಇದೇ ಔಷಧವನ್ನು ಬಳಸಬಹುದು. ಸೀ-ಪುರುಷರ ಬಂಜೆತನವನ್ನು ನಿವಾರಿಸಲು ಉಪಯುಕ್ತ. ಪ್ರೊಲಾಕ್ಟಿನೋಮ ಎಂಬ ಪಿಟ್ಯೂಟರಿ ಗಂತಿಯ ಚಿಕಿತ್ಸೆಯಲ್ಲಿಯೂ ಬಳಸಬಹುದು. ಪಾರ್ಕಿನ್ಸನ್ ಕಾಯಿಲೆ ಮಾರಕವಾದದ್ದು.

ಲೆವೋಡೋಪ ಎನ್ನುವ ಔಷಧದ ಜೊತೆಯಲ್ಲಿ ಬ್ರೋಮೋಕ್ರಿಪ್ಟಿನ್ನನ್ನು ಸಹ ನೀಡಿ, ಪಾರ್ಕಿನ್ಸನ್ ಕಾಯಿಲೆಯನ್ನು ನಿಯಂತ್ರಿಸಬಹುದು. ಮಧುಮೇಹ ನಮೂನೆ-೨ರ ಚಿಕಿತ್ಸೆಯಲ್ಲೂ ಇದು ಉಪಯುಕ್ತ. ಬ್ರೋಮೋಕ್ರಿಪ್ಟಿನ್ ಔಷಧವನ್ನು ತಜ್ಞವೈದ್ಯರ ಉಸ್ತುವಾರಿಯಲ್ಲೇ ಸೇವಿಸಬೇಕು. ಗದಾಶೀರ್ಷ ಶಿಲೀಂಧ್ರ ಅಥವ ಕ್ಲಾವಿಸೆಪ್ಸ್ ಪರ್ಪ್ಯೂರ, ವಿಷವಾಗಿ ಮನುಕುಲವನ್ನು ಕಾಡಿದಂತೆ, ಅಮೃತವಾಗಿ ಮನುಕುಲವನ್ನು ರಕ್ಷಿಸುತ್ತಿರುವುದು ಒಂದು ವಿಪರ್ಯಾಸ ಎನಿಸಿದರು ಸಹ, ಅದರ ಅಧ್ಯಯನವು ರೋಚಕವಾಗಿದೆ ಎನ್ನುವ ವಿಚಾರವನ್ನು ಮರೆಯುವಂತಿಲ್ಲ.